ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ‘ಕಗ್ಗ’ ಸೃಷ್ಟಿ

Published 26 ಜುಲೈ 2023, 18:39 IST
Last Updated 26 ಜುಲೈ 2023, 18:39 IST
ಅಕ್ಷರ ಗಾತ್ರ

ವಿಶದಮಾದೊಂದು ಜೀವನಧರ್ಮ ದರ್ಶನವ |
ನುಸುರಿಕೊಳೆ ತನ್ನ ಮನಸಿಗೆ ತಾನೆ ಬಗೆದು ||
ನಿಸದವಂ ಗ್ರಂಥಾನುಭವಗಳಿಂದಾರಿಸುತ |
ಹೊಸೆದ ನೀ ಕಗ್ಗವನು – ಮಂಕುತಿಮ್ಮ || 936 ||

ಪದ-ಅರ್ಥ: ವಿಶದಮ್ (ಸ್ಪಷ್ಟವಾದ)+ಆದ+ಒಂದು, ದರ್ಶನವನುಸುರಿಕೊಳೆ=ದರ್ಶನವನು+ಉಸುರಿಕೊಳೆ, ನಿಸದವಂ(ನಿಶ್ಚಯವಾದದ್ದು), ಗ್ರಂಥಾನುಭವಗಳಿಂದಾರಿಸುತ=ಗ್ರಂಥ+ಅನುಭವಗಳಿಂದ+ಆರಿಸುತ, ಹೊಸೆದನೀ=ಹೊಸೆದನು+ಈ.

ವಾಚ್ಯಾರ್ಥ: ಸ್ಪಷ್ಟವಾದ ಒಂದು ಜೀವನ ಧರ್ಮದರ್ಶನವನ್ನುತನ್ನಷ್ಟಕ್ಕೆ ತಾನೇ ಉಸುರಿಕೊಳ್ಳಲು, ನಿಶ್ಚಿತವಾದ ಗ್ರಂಥ ಮತ್ತು ಅನುಭವಗಳಿಂದ ಆರಿಸುತ್ತ ಹೊಸೆದನು, ಈ ಹಗ್ಗವನ್ನು.

ವಿವರಣೆ: ನಮ್ಮೆಲ್ಲರ ಬದುಕಿನಲ್ಲಿ ಚಿಂತೆ, ಸಂತಾಪಗಳು ಅನೇಕ ಬಾರಿ ಬರುತ್ತವೆ. ಜೀವನದ ಯಾವುದೋ ಹಂತದಲ್ಲಿ ಪ್ರತಿಯೊಬ್ಬ ಮನುಷ್ಯನನ್ನು ಕೆಲವು ಪ್ರಶ್ನೆಗಳು ಕಾಡುತ್ತವೆ. ನಾನುಯಾರು? ಎಲ್ಲಿಂದ ಬಂದೆ? ಏಕೆ ಬಂದೆ? ಈ ಬದುಕಿಗೊಂದು ಏನಾದರೂ ಉದ್ದೇಶವಿದೆಯೆ? ಈ ಪ್ರಪಂಚವನ್ನು ನಿರ್ವಹಿಸುವ ಶಕ್ತಿಯೊಂದು ನಿಜವಾಗಿಯೂ ಇದೆಯೆ? ಅದು ಕಾಣುವುದಿಲ್ಲವೇಕೆ? ಇಂಥ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲು ತಡಕಾಡುತ್ತೇವೆ. ಡಿ.ವಿ.ಜಿ, ಕಗ್ಗ ನಿರ್ಮಾಣವಾದ ಬಗೆಯನ್ನು ಈ ಕಗ್ಗದಲ್ಲಿ ಹೇಳುತ್ತಾರೆ. ನನಗೆ ಸ್ಪಷ್ಟವಾದ ಒಂದು ಜೀವನಧರ್ಮದ ದರ್ಶನ ಬೇಕಾಗಿತ್ತು. ಅದು ಮತ್ತೊಬ್ಬರಿಗೆ ಬೋಧನೆಯ ಸಲುವಾಗಿ ಅಲ್ಲ, ನನ್ನ ಮನಸ್ಸಿಗೇ ಹೇಳಿಕೊಳ್ಳುವದಕ್ಕೆ, ಅದಕ್ಕೆ ಸಮಧಾನ ಕೊಡುವುದಕ್ಕೆ. ಅದನ್ನು ಪಡೆಯುವುದು ಎಲ್ಲಿಂದ? ಅದಕ್ಕಾಗಿ ನಿಶ್ಚಿತವಾದ ಗ್ರಂಥಗಳಿಂದ ಮತ್ತು ನನ್ನ ಬದುಕಿನ ಅನುಭವಗಳಿಂದ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದಿದ್ದಾರೆ. ಅವೆಲ್ಲ ಚಿಂತನೆ, ಅನುಭವಗಳ ಸಾರವೇ ಅವರ ಜೀವನಧರ್ಮ ದರ್ಶನ. ಇದೇ ಸರ್ವಜ್ಞತೆಯ ದಾರಿ. “ಸರ್ವಜ್ಞನೆಂಬುವನು ಗರ್ವದಿಂದಾದವನೆ ? ಸರ್ವರೊಳಗೊಂದೊಂದು ನುಡಿಗಲಿತು, ವಿದ್ಯೆಯ ಪರ್ವತವೇ ಆದ ಸರ್ವಜ್ಞ”, ಹಾಗೆ ಕಂಡುಕೊಂಡ ದರ್ಶನವನ್ನು ನಮಗೆ ಕಗ್ಗದ ರೂಪದಲ್ಲಿ ನೀಡಿದ್ದಾರೆ. ಕಗ್ಗಕ್ಕೆ ಪೀಠಿಕಾ ರೂಪದಲ್ಲಿ ಬಂದಿರುವ ‘ಕಗ್ಗದ ಕಥೆ’ ಯಲ್ಲಿ ‘ಮಂಕುತಿಮ್ಮನ ಕಂತೆ’ ಯಲ್ಲಿ ಏನಿದೆ ಎಂಬುದನ್ನು ಹೇಳುತ್ತಾರೆ.

“ಕಂಡನದರೊಳಿನಿತು ಬಾಳ್ಗೆ ಸಲುವ ತತ್ತ್ವ ಮಥಿತವ.
ಸಖರ ತೃಪ್ತಿಗೆಂದು ಸೋಮಿಯಾಯ್ದು ಹಲವು
ಬಂತಿಯ
ಲಿಖಿಸಿದ ಪಡಿಯೊತ್ತಗೆಯಿದು ಮಂಕುತಿಮ್ಮ ಕಂತೆಯ”.

ಕಗ್ಗ ಬಾಳಿಗೆ ಸಲ್ಲುವ ತತ್ವದಸಾರ. ಈ ದರ್ಶನವನ್ನು ಡಿ.ವಿ.ಜಿ ‘ಕಗ್ಗ’ ಎಂದು ಕರೆದಿದ್ದಾರೆ. ಇಂದು ‘ಕಗ್ಗ’ ಎಂದರೆ ಪ್ರಯೋಜನವಿಲ್ಲದ್ದು, ಸತ್ವಹೀನವಾದದ್ದು. ಇದು ಅವರ ವಿನಯವಂತಿಕೆ. ಕಗ್ಗ ಪದಕ್ಕೆ ಕಥನ, ಗೀತೆ, ಹಾಡು ಎಂಬ ಅರ್ಥಗಳೂ ಇವೆ. ಡಿ.ವಿ.ಜಿಯವರು ಅದನ್ನು ‘ಕಗ್ಗ’ ಎಂದರೂ ಲೌಕಿಕರಿಗೆ, ಚಿಂತಕರಿಗೆ ಇದು ‘ಸಗ್ಗ’ ವೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT