ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಎರಡು ಪ್ರಪಂಚಗಳ ನಡುವಿನ ಸೇತುವೆಗಳು

Last Updated 28 ಜೂನ್ 2021, 19:30 IST
ಅಕ್ಷರ ಗಾತ್ರ

ಅಳುವೇನು? ನಗುವೇನು? ಹೃತ್ಕಪಾಟೋದ್ಘಾಟ |
ಶಿಲೆಯೆ ನೀಂ ಕರಗದಿರಲ್? ಅರಳದಿರೆಮರಳೇಂ? ||
ಒಳಜಗವ ಹೊರವಡಿಪ,ಹೊರಜಗವನೊಳಕೊಳುವ|
ಸುಳುದಾರಿಯಳುನಗುವು – ಮಂಕುತಿಮ್ಮ || 422||

ಪದ-ಅರ್ಥ: ಹೃತ್ಕಪಾಟೋದ್ಘಾಟ= (ಹೃತ್+ ಕಪಾಟ+ ಉದ್ಘಾಟ) ಹೃದಯದ ಬಾಗಿಲುಗಳನ್ನು ತೆರೆಯುವುದು, ಮರಳೇಂ= ಹುಚ್ಚೇ, ಹೊರವಡಿಪ= ಹೊರಗೆ ಹಾಕುವ, ಹೊರಜಗವನೊಳಕೊಳುವ= ಹೊರಜಗವ (ಹೊರಗಿನ ಜಗತ್ತನ್ನು)+ ಒಳಕೊಳುವ (ಒಳಗೆ ತರುವ), ಸುಳುದಾರಿಯಳು ನಗುವು= ಸುಳುದಾರಿ (ಸುಲಭದ ದಾರಿ)+ಅಳು +ನಗುವು.

ವಾಚ್ಯಾರ್ಥ: ಅಳು, ನಗುಗಳು ಹೃದಯ ಬಾಗಿಲುಗಳನ್ನು ತೆರೆಯುವ ಉಪಾಯಗಳು. ಕರಗದೆ ಇರಲು ನೀನೇನು ಕಲ್ಲೇ? ಉಲ್ಲಾಸಗೊಳ್ಳದಿರಲು ನೀನು ಮರುಳೇ? ಈ ಅಳು, ನಗುಗಳು ಆಂತರಿಕ ಜಗತ್ತನ್ನು ಹೊರತರುವ ಮತ್ತು ಹೊರಜಗತ್ತನ್ನು ಒಳಗೆಳೆದುಕೊಳ್ಳುವ ಸುಲಭದ ದಾರಿಗಳು.

ವಿವರಣೆ: ಪ್ರಪಂಚದಲ್ಲಿ ಅತ್ಯಂತ ಮಧುರವಾದ ಆದರೆ ಎಂದೂ ಪರಸ್ಪರ ಬೆಟ್ಟಿಯಾಗದ ಜೋಡಿಯೆಂದರೆ ನಗು-ಅಳು. ಅವು ನಾಣ್ಯದ ಎರಡು ಮುಖಗಳಿದ್ದಂತೆ. ಮನದ ಕೋಟೆಯೊಳಗೆ ನಡೆದ ವ್ಯವಹಾರವನ್ನು ಬಯಲು ಮಾಡುವ ಹೆಬ್ಬಾಗಿಲುಗಳು ಇವು. ಹೃದಯದಲ್ಲಿ ಸಂತಸದ ಬುಗ್ಗೆ ಚಿಮ್ಮಿದರೆ ತಕ್ಷಣ ಮುಖದ ಮೇಲೆ ನಗು ಮೂಡುತ್ತದೆ. ಮನದಲ್ಲಿ ದು:ಖ ಮೊಳೆತರೆ, ಕಣ್ಣಲ್ಲಿ ನೀರು ಜಿನುಗುತ್ತದೆ, ಮಂದಹಾಸ ಮಾಯವಾಗುತ್ತದೆ. ಅದಕ್ಕೆ ಈ ಕಗ್ಗ ಒಂದು ಸುಂದರ ಪದದ ಬಳಕೆ ಮಾಡುತ್ತದೆ -ಹೃತ್ಕಪಾಟೋದ್ಘಾಟ-ಹೃದಯವೆಂಬ ಕಪಾಟಿನ ಬಾಗಿಲುಗಳನ್ನು ತೆರೆಯುವುದು.

ಜೀವನದ ಪ್ರತಿಕ್ಷಣದಲ್ಲೂ ಪರೀಕ್ಷೆಗೆ ಮುಖಾಮುಖಿಯಾಗುವಾಗ ದುಃಖ, ಸುಖಗಳೆರಡೂ ದಕ್ಕುತ್ತವೆ. ದು:ಖಕ್ಕೆ ಕರಗದಿರಲು ನಾವು ನಿರ್ಜೀವವಾದ ಶಿಲೆಯೆ? ಸಂತೋಷಕ್ಕೆ ಮನಸ್ಸು ಅರಳದಿರಲು ಸಾಧ್ಯವೇ? ನಾವು ಏಕಕಾಲದಲ್ಲಿ ಎರಡು ಮನೆಗಳಲ್ಲಿ ವಾಸಿಸುತ್ತಿದ್ದೇವೆ. ಒಂದು ಅಂತರಂಗದ ಮನೆ, ಮತ್ತೊಂದು ಹೊರಗಿರುವ ಪ್ರಪಂಚದ ಮನೆ. ಅಂತರಂಗದಲ್ಲಿ ಒಂದು ಸವಿಯಾದ, ಹಿತವಾದ ಅನುಭವ ನಗುವಾಗಿ ಹೊಮ್ಮಿದ್ದು ಹೊರ ಪ್ರಪಂಚಕ್ಕೆ ಗೋಚರವಾಗುತ್ತದೆ. ಹೊರಗಿನ ಪ್ರಪಂಚದಲ್ಲಿ ಕಂಡ ದುಃಖ, ಒಳಪ್ರಪಂಚದಲ್ಲಿ ಕುದಿದು ಕಣ್ಣೀರು ಬರಿಸುತ್ತದೆ. ಹೀಗೆ ಈ ಅಳು-ನಗುಗಳು ನಮ್ಮ ಒಳಜಗತ್ತನ್ನು ಹೊರಗೆ ತೋರ್ಪಡಿಸುವ ಮತ್ತು ಹೊರಜಗತ್ತಿನ ಸನ್ನಿವೇಶಗಳು ಅಂತರಂಗದ ಭಾವನೆಗಳಿಗೆ ಪ್ರಚೋದನೆ ನೀಡುವುದಕ್ಕಾಗಿ ಇರುವ ಸುಲಭದ ದಾರಿಗಳು.

ಈ ದಾರಿಗಳನ್ನು ನಾವೇ ಕಂಡುಕೊಳ್ಳಬೇಕು. ಮನೆಯ ಮುಂದಿನ ತೋಟದಲ್ಲಿ ಹೂಗಳಿರಬೇಕೆಂದರೆ ಏನು ಮಾಡಬಹುದು? ರಾಶಿ ರಾಶಿ ಪ್ಲಾಸ್ಟಿಕ್ ಹೂಗಳನ್ನು ತಂದು ಜೋಡಿಸಿದರಾಗದೇ? ಅವು ಎಂದಿಗೂ ಸಂತೋಷಕೊಡಲಾರವು. ಆದರೆ ಮಣ್ಣು, ಗೊಬ್ಬರ, ನೀರು, ಬಿಸಿಲು ಸರಿಯಾಗಿ, ಹದವಾಗಿ ಇರುವಂತೆ ನೋಡಿ, ಉತ್ತಮ ಮಟ್ಟದ ಬೀಜಗಳನ್ನು ಹಾಕಿದರೆ ಹೂಗಳು ತಾನೇ ಅರಳಿ ಮುದಕೊಡುತ್ತವೆ. ಅಂತೆಯೇ ಮುಖದಲ್ಲಿ ಮಂದಹಾಸವೂ ಒಂದು ಪರಿಣಾಮ. ಸುಮ್ಮನೆ ನಗಲು ಹೊರಟರೆ ಪೆದ್ದರಂತೆ ಕಾಣುತ್ತೇವೆ. ಆನಂದ, ಸಂತೋಷಗಳು ಸಾಧನೆಗಳಲ್ಲ. ಅವು ಆಂತರ್ಯದ ಅನುಭವದ ಪರಿಣಾಮಗಳು. ಅದಕ್ಕಾಗಿಯೇ ಅಳು, ನಗುಗಳು ಆಂತರ್ಯದ ಹಾಗೂ ಹೊರಪ್ರಪಂಚದ ಸುಲಭವಾದ ಮತ್ತು ಖಚಿತವಾದ ಸೇತುವೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT