ಭಾನುವಾರ, ಜುಲೈ 3, 2022
27 °C

ಬೆರಗಿನ ಬೆಳಕು: ಹಳೆ ತತ್ವ - ಹೊಸ ಯುಕ್ತಿ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹೊಸ ಚಿಗುರು ಹಳೆಬೇರು ಕೂಡಿರಲು ಮರಸೊಬಗು |

ಹೊಸಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ ||

ಋಷಿವಾಕ್ಯದೊಡನೆ ವಿಜ್ಞಾನಕಲೆ ಮೇಳವಿಸೆ |

ಜಸವು ಜನಜೀವನಕೆ – ಮಂಕುತಿಮ್ಮ || 522 ||

ಪದ-ಅರ್ಥ: ಹಳೆತತ್ತ್ವದೊಡಗೂಡೆ=ಹಳೆ ತತ್ವದ+ಒಡಗೂಡೆ(ಜೊತೆಯಾಗಿರೆ), ಮೇಳವಿಸೆ=ಸಮನ್ವಯಗೊಳಿಸೆ, ಜಸ=ಯಶಸ್ಸು.

ವಾಚ್ಯಾರ್ಥ: ಹಳೆಯ ಬೇರು ಮತ್ತು ಹೊಸ ಚಿಗುರು ಸೇರಿದಾಗ ಮರಕ್ಕೆ ಸೊಬಗು. ಹಳೆಯ ತತ್ವದ ಆಧಾರದ ಮೇಲೆ ನವೀನ ಯುಕ್ತಿಗಳನ್ನು ಬಳಸುವುದು ಧರ್ಮ. ಆರ್ಷೇಯ ನುಡಿಗಳೊಂದಿಗೆ ಹೊಸ ವಿಜ್ಞಾನದ ಕಲೆ ಸೇರಿದರೆ ಜನಜೀವನಕ್ಕೆ ಯಶ.

ವಿವರಣೆ: ಇದೊಂದು ಅತ್ಯಂತ ಜನಪ್ರಿಯವಾದ ಚೌಪದಿ. ಬಹುಶಃ ಇಂದಿನ ಪ್ರಪಂಚದಲ್ಲಿ ಎಲ್ಲರೂ ಸಂತೋಷದಲ್ಲಿರುವುದಕ್ಕೆ ಇದೊಂದರ ಸಂದೇಶವೇ ಸಾಕು ಎನ್ನಿಸುತ್ತದೆ. ಹಳೆಯ ಹೊಸತುಗಳ ಸಮನ್ವಯದ ದೃಷ್ಟಿ ಇದರಲ್ಲಿದೆ.

ನೂರಾರು ವರ್ಷಗಳ ಕಾಲ ಪಾಶ್ಚಾತ್ಯ ಪ್ರಪಂಚದೊಂದಿಗೆ ಬೆರೆತು ನಮ್ಮ ಜೀವನಕ್ರಮವೆಲ್ಲ ಬದಲಾಗಿದೆ. ವಿಜ್ಞಾನ ತಂದ ಅವಿಷ್ಕಾರಗಳಿಂದ ಮನಸ್ಸು ಆ ಕಡೆಗೆ ವಾಲಿದೆ. ಅದರ ಬೆರಗು ನಮ್ಮನ್ನು ಹೆಚ್ಚಾಗಿ ಸೆಳೆದಿದ್ದರಿಂದ ಆ ಜೀವನಕ್ರಮವೇ ಹೆಚ್ಚು ಶ್ರೇಷ್ಠವೆಂಬ ಭಾವನೆ ಬಲಿಯಿತು. ಅದರಲ್ಲೇನೂ ತಪ್ಪಿಲ್ಲ. ಆದರೆ ಅದಕ್ಕೆ ಹೆಚ್ಚು ಮರ್ಯಾದೆ ಕೊಡುವ ಆತುರದಲ್ಲಿ ನಮ್ಮ ಜೀವನಶೈಲಿ ಅರ್ಥಹೀನ, ಪ್ರಯೋಜನಕಾರಿಯಲ್ಲ ಎಂದು ಚಿಂತಿಸುತ್ತ ಅದನ್ನು ಮರೆಯತೊಡಗಿದೆವು. ನಮ್ಮ ಹಿಂದಿನ ಸಂಪ್ರದಾಯಗಳು ನಂಬಿಕೆಗಳು ಹುಸಿ ಎನ್ನಿಸತೊಡಗಿದವು.

ಪಾಶ್ಚಾತ್ಯ ನಾಗರಿಕತೆಯಲ್ಲಿ ಸಾಕಷ್ಟು ಒಳ್ಳೆಯ ಗುಣಗಳಿವೆ. ಅವರಲ್ಲಿ ಕಾಣುವ ಸಮಯ ಪ್ರಜ್ಞೆ, ಗೊತ್ತಿಲ್ಲದ್ದನ್ನು ಗೊತ್ತಿಲ್ಲವೆಂದು ಹೇಳುವ ನೇರಗುಣ, ಪರಿಶ್ರಮದ ಜೀವನ, ಪ್ರತಿಯೊಂದು ಜೀವಕ್ಕೂ ಅವರು ಕೊಡುವ ಮಹತ್ವ, ವಿಜ್ಞಾನಕ್ಕೆ, ಹೊಸ ಚಿಂತನೆಗಳಿಗೆ ತೆರೆದ ಮನ, ಯಾವುದೇ ಕಾರ್ಯದಲ್ಲಿ ಅವರು ತೋರುವ ನಿಷ್ಠೆ, ಕಾಯಿದೆಯನ್ನು ಮೀರದೆ ಇರುವ ಬುದ್ಧಿ, ಇವುಗಳನ್ನು ನಾವು ಮೆಚ್ಚುವುದು ಮಾತ್ರವಲ್ಲ, ಅನುಸರಿಸುವುದೂ ಕ್ಷೇಮ. ಹಾಗಾದರೆ ನಮ್ಮ ಸಂಸ್ಕೃತಿಯಲ್ಲಿ ಒಳ್ಳೆಯ ಅಂಶಗಳಿಲ್ಲವೆ? ಖಂಡಿತವಾಗಿಯೂ ಬೇಕಾದಷ್ಟಿವೆ. ನಮ್ಮ ಕುಟುಂಬ ವ್ಯವಸ್ಥೆ, ಅಂತಃಕರಣದ ನೆಲೆಯಲ್ಲಿ ಸಾಮಾಜಿಕ ಜೀವನ, ಧಾರ್ಮಿಕತೆ, ಪುರಾತನವಾದ ಹಿನ್ನೆಲೆ, ಪ್ರಪಂಚಕ್ಕೆ ಮಾದರಿಯಾಗಬಲ್ಲ ಮಹಾನ್ ಕಾವ್ಯಗಳಾದ ರಾಮಾಯಣ, ಮಹಾಭಾರತಗಳ ನೆಲೆ, ಸಂಪ್ರದಾಯಗಳ ಸೊಗಸು, ಇವೆಲ್ಲ ನಮ್ಮವಲ್ಲವೆ? ದೇಹ ಭೋಗಕ್ಕಿಂತ ಆತ್ಮಸಮಾಧಾನ ದೊಡ್ಡದು, ದೇಹಕ್ಕಿಂತ ಆತ್ಮ ಮುಖ್ಯ, ಮಮತೆಗಿಂತ ನಿರ್ಮಮತೆ ದೊಡ್ಡದು, ಸಂಪಾದನೆಗಿಂತ ದಾನ ದೊಡ್ಡದು, ಬಲಕ್ಕಿಂತ ಧರ್ಮ ದೊಡ್ಡದು, ಇದು ಭಾರತೀಯ ಸಂಸ್ಕೃತಿ.

ಹೀಗೆ ಎರಡೂ ಸಂಸ್ಕೃತಿಗಳಲ್ಲಿ ಮೆಚ್ಚಿಕೊಳ್ಳಬೇಕಾದ ಅಂಶಗಳು ಇದ್ದಂತೆ ತ್ಯಾಜ್ಯ ಮಾಡಬೇಕಾದ ಅಂಶಗಳೂ ಇಲ್ಲದಿಲ್ಲ. ಈ ಕೊರತೆಯನ್ನು ನೀಗಿಸಿಕೊಳ್ಳಲು ಪಾಶ್ಚಾತ್ಯರಿಂದ ನಾವು ಕಲಿಯಬೇಕು, ನಮ್ಮಿಂದ ಅವರೂ ಕಲಿಯಬೇಕು. ಈ ಅನ್ಯೋನ್ಯ ಶಿಕ್ಷಣವೇ ಲೋಕಕ್ಕೆ ಶುಭದ ಮಾರ್ಗ. ಇದನ್ನು ಕಗ್ಗ ಸೂಕ್ಷ್ಮವಾಗಿ ತಿಳಿಸುತ್ತದೆ. ಹಳೆಯ ಬೇರು, ಸಾರವನ್ನು ಗಿಡಕ್ಕೆಲ್ಲ ಹರಿಸಿ ಚಿಗುರನ್ನು ಕೊನರಿಸುತ್ತದೆ. ಹೊಸ ಬೇರಿಗೆ ಆ ಶಕ್ತಿ ಇಲ್ಲ. ತತ್ವ ಹಳೆಯದಿರಲಿ ಆದರೆ ಯುಕ್ತಿ ಆ ಕಾಲಕ್ಕೆ ತಕ್ಕಂತಿರಲಿ. ಹಿಂದಿನ ಆರ್ಷೇಯ ವಾಣಿಗೆ ವಿಜ್ಞಾನದ ಕಸಿ ಮಾಡಬೇಕು. ಆಗ ಜನಜೀವನಕ್ಕೆ ಸೌಖ್ಯ ಮತ್ತು ಕ್ಷೇಮ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು