ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಆತ್ಮಶಕ್ತಿಯ ವೃದ್ಧಿ

ಗುರುರಾಜ ಕರಜಗಿ ಅಂಕಣ
Last Updated 3 ಮಾರ್ಚ್ 2022, 23:15 IST
ಅಕ್ಷರ ಗಾತ್ರ

ಕಿಡಿ ಸಣ್ಣದನು ಮೇಲೆ ಬಿದ್ದ ಕೊರಡಾರಿಪುದು |
ಸುಡುವುದಾ ಕಿಡಿಯುರಿಯೆ ನೂರು ಕೊರಡುಗಳು ||
ಉಡುಗಿ ನಿನ್ನಾತ್ಮವಿರೆ ಬಿಡು ಹೆಗ್ಗಲಸಗಳನು |
ತೊಡಗಾತ್ಮ ಬಲಿತಂದು – ಮಂಕುತಿಮ್ಮ || 577 ||

ಪದ-ಅರ್ಥ: ಕೊರಡಾರಿಪುದು=ಕೊರಡು+ಆರಿಪುದು (ಆರಿಸುವುದು), ಕಿಡಿಯುರಿಯೆ=ಕಿಡಿ+ಉರಿಯೆ, ಉಡುಗಿ=ಕುಗ್ಗಿ, ಕುಸಿದು, ನಿನ್ನಾತ್ಮವಿರೆ=ನಿನ್ನ+ಆತ್ಮವಿರೆ (ಆತ್ಮವಿದ್ದರೆ), ಹೆಗ್ಗಲಸಗಳನು=ದೊಡ್ಡ ಕಾರ್ಯಗಳನ್ನು, ತೊಡಗಾತ್ಮ ಬಲಿತಂದು=ತೊಡಗು+ಆತ್ಮ+ಬಲಿತಂದು (ಬಲಿತಾಗ, ಧೃಡವಾದಾಗ).

ವಾಚ್ಯಾರ್ಥ: ಕಿಡಿ ಸಣ್ಣದಾಗಿದ್ದಾಗ ಅದರ ಮೇಲೆ ಕೊರಡು ಬಿದ್ದರೆ ಆರಿಹೋಗುತ್ತದೆ. ಆದರೆ ಅದೇ ಕಿಡಿ ಉರಿಯಾದಾಗ ನೂರು ಕೊರಡುಗಳನ್ನು ಸುಡುತ್ತದೆ. ನಿನ್ನ ಚೈತನ್ಯ ಕುಸಿದಾಗ, ಸ್ಥೈರ್ಯವನ್ನು ಕಳೆದುಕೊಂಡಾಗ ದೊಡ್ಡ ಕಾರ್ಯಗಳನ್ನು ಮಾಡಬೇಡ. ಮತ್ತೆ ಚೈತನ್ಯ ಉಕ್ಕಿದಾಗ ಕೆಲಸಕ್ಕೆ ತೊಡಗು.

ವಿವರಣೆ: ಜುಲೈ 2014ರಲ್ಲಿ ಅಮೆರಿಕದ ವಾಷಿಂಗ್‌ಟನ್ ಹತ್ತಿರ ಒಂದು ಭಯಂಕರವಾದ ಅಗ್ನಿ ಅಪಘಾತವಾಯಿತು. ಅದನ್ನು ಕಾರ್ಲಟನ್ ಕಾಂಪ್ಲೆಕ್ಸ್ ಅನಾಹುತ ಎಂದು ಕರೆಯುತ್ತಾರೆ. ಆ ಅನಾಹುತದಲ್ಲಿ 2,56,000 ಎಕರೆಯಷ್ಟು ಕಾಡು ಸುಟ್ಟು ಭಸ್ಮವಾಯಿತು. ಅದರಲ್ಲಿ ಎಷ್ಟು ನಿರುಪದ್ರವಿ ಪ್ರಾಣಿ, ಪಕ್ಷಿಗಳು ದಹಿಸಿ ಹೋದವೋ ತಿಳಿಯದು. ಮತ್ತೆ ಅಂತಹ ದಟ್ಟವಾದ ಕಾಡು ಬೆಳೆಯಲು ದಶಕಗಳೇ ಬೇಕು. ಆ ಬೆಂಕಿ ಹತ್ತಿದ್ದು ಹೇಗೆ ಎಂದು ಅರಣ್ಯಾಧಿಕಾರಿಗಳು ತನಿಖೆ ಮಾಡಿದಾಗ ಅವರಿಗೆ ತಿಳಿದದ್ದು ಆಶ್ಚರ್ಯವನ್ನು ತಂದಿತ್ತು. ಇಬ್ಬರು ಗೆಳೆಯರು ಮನರಂಜನೆಗಾಗಿ ಕಾರು ಓಡಿಸುತ್ತ ಅರಣ್ಯದ ಹತ್ತಿರ ಬಂದಿದ್ದರಂತೆ. ಅಲ್ಲಿ ಕಾರಿನಿಂದ ಹೊರಗೆ ಬಂದು ಕುಡಿದು, ತಿಂದು ಮಜಾ ಮಾಡಿದರು. ನಂತರ ಮೈಯನ್ನು ಬೆಚ್ಚಗಾಗಿಸಲು ಸುತ್ತಮುತ್ತಲಿದ್ದ ಪುರಳೆಯನ್ನು ಕೂಡಿ ಹಾಕಿ ಬೆಂಕಿ ಮಾಡಲು ಪ್ರಯತ್ನಿಸಿದರಂತೆ. ಗಾಳಿ ಬಹಳ ಜೋರಾಗಿದ್ದುದರಿಂದ ಬೆಂಕಿಯ ಜ್ವಾಲೆ ಪ್ರಜ್ವಲಿಸಲಿಲ್ಲ. ಅವರು ಬೇಜಾರು ಮಾಡಿಕೊಂಡು ಅಲ್ಲಿಂದ ಹೊರಟರಂತೆ. ಆದರೆ ಅವರು ಬೆಂಕಿ ಮಾಡಲು ಹೊರಟ ಸ್ಥಳದಲ್ಲಿ ಒಂದೆರಡು ಕಿಡಿಗಳು ಇದ್ದುವಲ್ಲ, ಅವು ಗಾಳಿಗೆ ಹಾರಿ ಅರಣ್ಯದಲ್ಲಿ ಬಿದ್ದಿದ್ದ ಒಣಗಿದ ಎಲೆಗಳಿಗೆ ತಾಗಿರಬೇಕು. ಬೆಂಕಿಯಾಗದ ಒಂದು ಕಿಡಿ ತರಗೆಲೆಗಳಿಗೆ ಅಂಟಿಕೊಂಡಿತು. ಬೀಸಿದ ಗಾಳಿ ಸಹಾಯಕವಾಯಿತು. ಅಲ್ಲಿ ಬೆಂಕಿ ಎದ್ದು ಹರಡಿತು. ಅಪಾರ ಹಾನಿಯನ್ನುಂಟು ಮಾಡಿತು.

ಕಗ್ಗ ಅದನ್ನೇ ಹೇಳುತ್ತದೆ. ಒಂದು ಕಿಡಿಯ ಮೇಲೆ ಒಂದು ದಪ್ಪನಾದ ಕೊರಡು ಬಿದ್ದರೆ ಕಿಡಿ ನಂದಿಹೋಗುತ್ತದೆ. ಆದರೆ ಆ ಪುಟ್ಟ ಕಿಡಿಗೆ ತಂಗಾಳಿಯ ಸಹಕಾರ ದೊರೆತರೆ ಅದು ನೂರಾರು ಕೊರಡುಗಳನ್ನು ಭಸ್ಮ ಮಾಡಬಲ್ಲದು. ಒಂದೇ ಕಿಡಿ ಅಶಕ್ತವಾದದ್ದು ಅದಕ್ಕೇ ಒಂದು ಕೊರಡು ಅದನ್ನು ಆರಿಸಿ ಬಿಡುತ್ತದೆ. ಅದರಂತೆಯೇ ಮನುಷ್ಯನ ಚೈತನ್ಯ ಅಶಕ್ತವಾಗಿದ್ದಾಗ, ಅವನು ಅಸಹಾಯಕನೆನ್ನಿಸಿದಾಗ, ಮಹಾನ್ ಕಾರ್ಯಗಳಿಗೆ ಕೈ ಹಾಕುವುದು ಉಚಿತವಲ್ಲ. ಇರುವಷ್ಟು ಶಕ್ತಿಯೂ ಅಳಿದುಹೋದೀತು. ಹಾಗಾದರೆ ಯಾವ ಪ್ರಯತ್ನವನ್ನೂ ಮಾಡಬಾರದೆ? ಹಾಗಲ್ಲ. ಮೊದಲು ಮಾಡಬೇಕಾದದ್ದು ಆತ್ಮದ ಶಕ್ತಿಯ ವರ್ಧನೆ. ಅದು ಆಗುವುದು ಪುಟ್ಟ ಸಾಧನೆಗಳು ತರುವ ಆತ್ಮವಿಶ್ವಾಸದಿಂದ. ನಂತರ ಸರಿಯಾದ ಚಿಂತನೆ, ಸಮಾನ ಮನಸ್ಕರೊಡನೆ ಸಹಕಾರ ಭಾವ ಮತ್ತು ಎಡೆಬಿಡದ ಪ್ರಯತ್ನ ಇವುಗಳು ಆತ್ಮಶಕ್ತಿಯನ್ನು ಬಲಪಡಿಸುತ್ತವೆ. ಒಂದು ಸಲ ಆತ್ಮಬಲ ಹೆಚ್ಚಿತೋ ಆಗ ಅದು ಪುಟ್ಟ ಕಿಡಿಯಲ್ಲ, ಅದೊಂದು ಪ್ರಜ್ವಲಿಸುವ ಬೆಂಕಿ. ಎಂಥ ಕಾರ್ಯವನ್ನೂ ಸಾಧಿಸಿಬಿಡುತ್ತದೆ. ಕಿಡಿಯಂತಿದ್ದ ಆತ್ಮಶಕ್ತಿಯನ್ನು ಧಗಧಗಿಸುವ ಬೆಂಕಿಯನ್ನಾಗಿಸುವುದು ಸ್ವಪ್ರಯತ್ನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT