ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಪ್ರಾರಬ್ಧ ಕರ್ಮ

Last Updated 13 ಜನವರಿ 2022, 19:30 IST
ಅಕ್ಷರ ಗಾತ್ರ

ಪ್ರಾಕ್ತನದ ವಾಸನೆಯೆ ಮನಕೆ ಮೊದಲಿನ ಮಂತ್ರಿ |
ಯುಕ್ತಿಗಳ ತನಗೊಪ್ಪುವಂತೆ ತಿರುಗಿಪುದು ||
ಸೂಕ್ತವೆನಿಪುದು ಸಹಜರುಚಿ ತನ್ನ ತರ್ಕವನೆ |
ಗುಪ್ತದೊಳು ಕುಟಿಲವಿದು – ಮಂಕುತಿಮ್ಮ
⇒|| 541 ||

ಪದ-ಅರ್ಥ: ಪ್ರಾಕ್ತನದ=ಹಳೆಯ, ತನಗೊಪ್ಪುವಂತೆ=ತನಗೆ+ಒಪ್ಪುವಂತೆ, ಸೂಕ್ತವೆನಿಪುದು=ಸೂಕ್ತವು+ಎನಿಪುದು(ಎನ್ನಿಸುವುದು), ಸಹಜರುಚಿ=ಸಹಜವಾದಂತಹ ಅಭಿರುಚಿ, ಕುಟಿಲವಿದು=ಕುಟಿಲವು(ಮೋಸ)+ಇದು.

ವಾಚ್ಯಾರ್ಥ: ಪೂರ್ವಜನ್ಮದ ವಾಸನೆಯೆ ಮನಸ್ಸಿಗೆ ಮೊದಲ ಮಂತ್ರಿ. ಅದು ತನಗೆ ಬೇಕಾದ ಹಾಗೆ ಯುಕ್ತಿಗಳನ್ನು ಬಳಸಿಕೊಳ್ಳುತ್ತದೆ. ತರ್ಕದಿಂದ ತನಗೆ ಸಹಜವಾದಂಥ ಅಭಿರುಚಿಯೇ ಸೂಕ್ತವಾದದ್ದು ಎಂದು ವಾದ ಮಾಡುತ್ತದೆ. ಇದು ಗುಪ್ತವಾದ ಮೋಸ.

ವಿವರಣೆ: ‘ರಂಗನಾಥರಾಯರು ಹೋಗಿಬಿಟ್ಟರಂತೆ. ದೊಡ್ಡ ಹುದ್ದೆಯಲ್ಲಿದ್ದವರು. ಅವರಿಗೆ ಈ ಪರಿಯ ಸಾವು ಬರಬಾರದಿತ್ತು. ರಸ್ತೆಯಲ್ಲಿ ಅಪಘಾತವಾಗಿ ಹೆಣ ಅಲ್ಲಿಯೇ ಒಂದು ದಿನ ಅನಾಥವಾಗಿ ಬಿದ್ದಿತ್ತಂತೆ’ ಎಂದಾಗ ಮತ್ತೊಬ್ಬರು, ‘ಮಾಡಿದ ಕರ್ಮ ಎಲ್ಲಿಗೆ ಹೋಗುತ್ತದೆ? ಅದೆಷ್ಟು ಜನರಿಗೆ ಮೋಸ ಮಾಡಿದ್ದರೋ?’ ಎಂದರು.
‘ಮೊನ್ನೆ ಎರಡು ವರ್ಷದ ಪುಟ್ಟ ಮಗು ರಸ್ತೆಯ ಬದಿಯಲ್ಲಿ ಆಡುತ್ತಿದ್ದಾಗ ಒಬ್ಬ ಟ್ರಾಕ್ಟರ್‌ನ್ನು ಹಿಂದೆ ತೆಗೆದುಕೊಳ್ಳುವಾಗ ನೋಡಿಕೊಳ್ಳಲಿಲ್ಲ. ಪಾಪ! ಮಗುವಿನ ಮೇಲೆ ಅದು ಹರಿದು ಸತ್ತು ಹೋಯಿತು’ ಎಂದಾಗ ‘ಏನೋಪ್ಪ, ಯಾವ ಕರ್ಮವೋ? ಪುಟ್ಟ ಮಗು ಈ ಜನ್ಮದಲ್ಲಿ ಏನು ಪಾಪ ಮಾಡಿರಲು ಸಾಧ್ಯ? ಆದರೆ ಏನು ಮಾಡುವುದು ಪೂರ್ವಜನ್ಮದ ಕರ್ಮ ಇದೆಯಲ್ಲ, ಅದಕ್ಕೇನು ಮಾಡುವುದು’ ಎಂದರು ಇನ್ನೊಬ್ಬರು.

ಈ ತರಹದ ಮಾತುಗಳನ್ನು ನಾವು ಅನೇಕ ಬಾರಿ ಕೇಳಿದ್ದೇವೆ. ಉಪನಿಷತ್ಕಾಲದಲ್ಲಿ ಬಂದ ಒಂದು ಕಲ್ಪನೆ ಪುನರ್ಜನ್ಮ. ಆತ್ಮ ಒಂದು ಶರೀರವನ್ನು ತೊರೆದು ಮತ್ತೊಂದು ಶರೀರವನ್ನು ಪಡೆಯುವುದು, ಹುಟ್ಟು ಸಾವುಗಳ ಆವರ್ತನೆಯಲ್ಲಿ ಸಿಕ್ಕಿಹಾಕಿಕೊಳ್ಳುವುದು ಇದರ ರೂಪ. ಮರಣ ಜೀವನದ ಅಂತ್ಯವಲ್ಲ, ಅದೊಂದು ಅಂತರ ಅಷ್ಟೇ ಮತ್ತೊಂದು ಹೊಸಹುಟ್ಟಿಗೆ ಅದು ಕಾರಣವಾಗುತ್ತದೆ. ಶಂಕರಾಚಾರ್ಯರು ಹೇಳಿದರು, ‘ಪುನರಪಿ ಜನನಂ ಪುನರಪಿ ಮರಣಂ, ಪುನರಪಿ ಜನನೀ ಜಠರೇ ಶಯನಂ.....’. ಮನುಷ್ಯ ಪುನಃ ಪುನಃ ಹುಟ್ಟುತ್ತಾನೆ, ಸಾಯುತ್ತಾನೆ, ತಾಯಿಯ ಗರ್ಭದಲ್ಲಿ ನಿದ್ರಿಸುತ್ತಾನೆ. ಭಗವದ್ಗೀತೆಯೂ ಪುನರ್ಜನ್ಮದ ಬಗ್ಗೆ ಹೇಳುತ್ತದೆ. ನಾವು ಹಳೆಯ ಬಟ್ಟೆಯನ್ನು ಬಿಟ್ಟು ಹೊಸದಾದದ್ದನ್ನು ಧರಿಸುವಂತೆ ಆತ್ಮವೂ ಹಳೆಯ ಶರೀರವನ್ನು ತ್ಯಜಿಸಿ ಹೊಸ ಶರೀರವನ್ನು ಪಡೆಯುತ್ತದೆ. ಛಾಂದೋಗ್ಯ ಉಪನಿಷತ್ತಿನಲ್ಲಿ ಹೇಳುವಂತೆ ಈ ಜನ್ಮದಲ್ಲಿ ಮಾಡಿದ ಕಾರ್ಯಗಳು ಮುಂದಿನ ಜನ್ಮವನ್ನು ತೀರ್ಮಾನಿಸುತ್ತವೆ. ಒಳ್ಳೆಯ ಕರ್ಮದಿಂದ ಒಳ್ಳೆಯ ಫಲ. ಕೆಟ್ಟ ಕರ್ಮದಿಂದ ಕೆಟ್ಟ ಫಲ.

ಕಗ್ಗ ಈ ಮಾತನ್ನೇ ಪುಷ್ಠೀಕರಿಸುತ್ತದೆ. ನಾವು ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಗಳ ವಾಸನೆ ಮಂತ್ರಿಯಂತೆ ಬೋಧನೆ ಮಾಡಿ ನಮ್ಮ ಈ ಜನ್ಮವನ್ನು ನಿಯಂತ್ರಿಸುತ್ತದೆ. ಅದು ತನ್ನ ಗುರಿಯನ್ನು ಸಾಧಿಸಲು ಅನೇಕ ಯುಕ್ತಿಗಳನ್ನು ಮಾಡುತ್ತದೆ. ತನ್ನ ಮಾರ್ಗಕ್ಕೆ ಸರಿಯಾದದ್ದನ್ನೇ ಸಹಜವಾದದ್ದು ಎಂಬ ತರ್ಕವನ್ನು ಮಂಡಿಸುತ್ತದೆ. ಇದೊಂದು ಕುಟಿಲವೇ ಸರಿ. ಆದರೆ ಅದೊಂದು ಗುಪ್ತವಾದ ಕುಟಿಲ. ನಮಗೆ ಅದು ತಿಳಿಯದು. ತಿಳಿದರೂ ಬದಲಾಯಿಸುವುದು ಕಷ್ಟ. ಅದಕ್ಕೇ ಹಿಂದಿನ ಜನ್ಮದಲ್ಲಿ ಮಾಡಿದ ಪಾಪಕ್ಕೆ ಮರುಜನ್ಮದಲ್ಲಿ ಭೀಷ್ಮನಾಗಿ ಕರ್ಮ ಸವೆಸಬೇಕಾಯಿತು. ರಾಮಾಯಣದಲ್ಲಿ ರಾಮನಿಂದ ಹತನಾದ ವಾಲಿಮುಂದೆ ಕೃಷ್ಣಾವತಾರದಲ್ಲಿ ಜರಾ ಎಂಬ ಬೇಡನಾಗಿ ಕೃಷ್ಣನಿಗೇ ಬಾಣ ಹೊಡೆದು ಪ್ರಾಣ ಹೀರಿದ. ವೈಕುಂಠದ ಬಾಗಿಲಲ್ಲೇ ಇದ್ದ ಜಯವಿಜಯರು ಮಾಡಿದ ತಪ್ಪಿನಿಂದಾಗಿ ಮೂರು ಜನ್ಮ ಭಗವಂತನ ವೈರಿಗಳಾಗಿ ಹುಟ್ಟಿ ಅವನಿಂದ ಹತರಾದರು. ಸನಾತನ ನಂಬಿಕೆಯಂತೆ ಇಲ್ಲಿ ಯಾವ ನ್ಯಾಯಾಧಿಕರಣ, ಶಿಕ್ಷೆ, ತಪ್ಪೊಪ್ಪಿಗೆ, ಪಶ್ಚಾತ್ತಾಪ, ಕ್ಷಮಾದಾನ ಯಾವುದೂ ಇಲ್ಲ. ಇರುವುದೆಲ್ಲ ಈ ಪ್ರಾಕ್ತನ ಕರ್ಮದ ಅನ್ವಯ ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT