ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಆತ್ಮವಿಕಾಸ ಕ್ರಮ

Last Updated 12 ಏಪ್ರಿಲ್ 2021, 20:26 IST
ಅಕ್ಷರ ಗಾತ್ರ

ನರನಾರಿಮೋಹದಿಂ ವಂಶವದಕಾಗಿ ಮನೆ |
ನೆರೆ ಹೊರೆಗಳೂರು ರಾಷ್ಟ್ರಗಳು ಸಂಘಗಳು ||
ಕೆರೆಯೊಂದು ಕೇಂದ್ರದಿಂದಲೆಯ ಬಳೆಗಳು ನೂರು |
ಹರಿವಂತೆ ಸಂಸಾರ – ಮಂಕುತಿಮ್ಮ || 406 ||

ಪದ-ಅರ್ಥ: ನರನಾರಿಮೋಹದಿಂ=ನರ+
ನಾರಿ+ಮೋಹದಿಂ, ವಂಶವದಕಾಗಿ=ವಂಶ+
ಅದಕಾಗಿ, ಹೊರೆಗಳೂರು=ಹೊರೆಗಳು+ಊರು, ಕೇಂದ್ರದಿಂದಲೆಯ=ಕೇಂದ್ರದಿಂದ+ಅಲೆಯ

ವಾಚ್ಯಾರ್ಥ: ಸ್ತ್ರೀ ಪುರುಷರ ಮೋಹದಿಂದ ವಂಶ, ಅದಕಾಗಿ ಮನೆ, ನೆರೆಹೊರೆ, ಊರು, ರಾಷ್ಟ್ರ, ಸಂಘಗಳು ಹುಟ್ಟಿಕೊಳ್ಳುತ್ತವೆ. ಕೆರೆ ಒಂದೇ ಆದರೂ ಅದರ ಮಧ್ಯದಿಂದ ಹುಟ್ಟಿದ ನೂರಾರು ಅಲೆಗಳು ಹರಿಯುವಂತೆ ಸಂಸಾರ.

ವಿವರಣೆ: ಈ ಕಗ್ಗದಲ್ಲಿ ಡಿ.ವಿ.ಜಿ ಹೇಳುವುದು ಆತ್ಮವಿಕಾಸದ ಕ್ರಮ. ಅದು ಪ್ರಾರಂಭವಾಗುವುದು ಒಬ್ಬ ವ್ಯಕ್ತಿಯಿಂದ. ಒಂದು ಸರೋವರದ ದಂಡೆಯ ಮೇಲೆ ನಿಂತು ನೀರಿನ ಮಧ್ಯಭಾಗದಲ್ಲಿ ಒಂದು ಕಲ್ಲನ್ನು ಎಸೆದಾಗ ಅಲ್ಲಿ ಒಂದು ಅಲೆ
ಹುಟ್ಟಿ, ಅದು ಅಲೆಅಲೆಯಾಗಿ ಎಲ್ಲ ದಿಕ್ಕಿಗೂ ಹರಡಿ ದಡವನ್ನು ತಲುಪುತ್ತದೆ. ಅದರಂತೆಯೇ ನಮ್ಮ ಆತ್ಮವೂ ಅಲೆಅಲೆಯಾಗಿ ಹರಡಿ ಇಡೀ ಪ್ರಪಂಚವನ್ನು ಆವರಿಸಬೇಕು. ಅದು ಆತ್ಮವಿಕಾಸ. ಡಿ.ವಿ.ಜಿ ತಮ್ಮ ‘ಬಾಳಿಗೊಂದು ನಂಬಿಕೆ’ ಗ್ರಂಥದಲ್ಲಿ ತಿಳಿಸಿದ ಆತ್ಮವಿಕಾಸದ ಕ್ರಮ, ಈ ಕಗ್ಗಕ್ಕೆ ವಿವರಣೆಯಂತೆ ಇದೆ. ಆತ್ಮವಿಕಾಸಕ್ಕೆ ಅವರು ಆರು ತರಂಗ ವಲಯಗಳನ್ನು ಗುರುತಿಸುತ್ತಾರೆ. ಮೊದಲನೆಯದು ವ್ಯಕ್ತಿ, ಅವನ ಪರಿವಾರದ ಜನ. ಎರಡನೆಯದು ನೆರೆಹೊರೆಯವರು, ಜೊತೆಗೆ ಕೆಲಸ ಮಾಡುವವರು. ಮೂರನೆಯದು ವ್ಯಕ್ತಿಯ ಊರು. ನಂತರ ನಾಲ್ಕನೆಯದು ರಾಜ್ಯ. ಐದನೆಯದು ನಮ್ಮ ದೇಶ. ಆರನೆಯದು ಪ್ರಪಂಚದಲ್ಲಿರುವ ಇಡೀ ಮಾನವ ವರ್ಗ. ಇದು ವಿಶ್ವಾತ್ಮಭಾವ. ಎಲ್ಲರೂ ನಮ್ಮವರೇ ಎಂಬ ವಿಶಾಲ ಮನೋಭಾವ. ಅದಕ್ಕೇ ‘ಉದಾರ ಚರಿತಾನಾಂ ತು ವಸುದೈವ ಕುಟುಂಬಕಂ’ ಎಂದು ಹಿರಿಯರು ಹೇಳಿದರು. ನಮ್ಮ ಆತ್ಮವೂ ಏಳುಸುತ್ತಿನ ಮಲ್ಲಿಗೆಯಂತೆ ಅರಳಬೇಕು. ಆದರೆ ಬಹಳಷ್ಟು ಜನರಿಗೆ ಈ ವಿಸ್ತಾರ ಕೇವಲ ತನ್ನ ಪರಿವಾರ, ತನ್ನ ಮನೆ, ಬಂಧುಬಳಗಕ್ಕೇ ನಿಂತು ಹೋಗುತ್ತದೆ. ಸ್ವಾರ್ಥತೆ ಕರಗಿ ಮುಂದೆ ಹರಿಯುವುದಿಲ್ಲ. ಆತ್ಮ ಅರಳದೆ ಮನೆಯ ಹೊಸ್ತಿಲ ಮೇಲೆ ಕರಡು ಕಟ್ಟುತ್ತದೆ. ಲೋಕದ ಚಿಂತೆ ಹಾಗಿರಲಿ, ನಮ್ಮ ಊರಿನ, ನಮ್ಮ ರಾಜ್ಯದ ಚಿಂತೆ ಕೂಡ ನಮಗೆ ಬರುವುದಿಲ್ಲ. ನಮ್ಮ ಬಾಯಿಯಲ್ಲಿ ಬರುವ ವೇದಾಂತ ದೊಡ್ಡದು. ಆದರೆನಡತೆಯಲ್ಲಿ ಅದು ಬಂದದ್ದು ಕಾಣುವುದಿಲ್ಲ. ಕಗ್ಗದಲ್ಲಿ ಹೇಳಿರುವ ಎಲ್ಲ ಅಲೆಗಳು ನಮ್ಮ ಮನಸ್ಸಿಗೆ ಸಂಸ್ಕಾರವನ್ನು ನೀಡುತ್ತವೆ. ಆತ್ಮ ವಿಸ್ತಾರವಾದಂತೆ ನಮ್ಮ ದೃಷ್ಟಿ ವಿಶಾಲವಾಗುತ್ತದೆ, ಸಣ್ಣತನ ಸವೆಯುತ್ತದೆ. ಬಿಡಿಯಾಗಿ ನೋಡಿದರೆ, ಸಣ್ಣವನೆಂದು ಕಾಣುವ ಮನುಷ್ಯನ ಜೀವನಕ್ಕೂ ವಿಶಾಲವಾದ ಲೋಕ ಜೀವನಕ್ಕೂ ಮೆಟ್ಟಿಲಿನಂತೆ ಇರುವ ಸಂಬಂಧ ತಪ್ಪದೆ ಇದೆ. ಆ ಸಂಬಂಧವನ್ನು ಗಮನಿಸಿ, ಸಕಲ ಜೀವಕೋಟಿಯನ್ನು ನಮ್ಮ ಸ್ನೇಹ ವಾತ್ಸಲ್ಯದ ಛತ್ರಛಾಯೆಯಲ್ಲಿ ತರಲು ಪ್ರಯತ್ನಿಸಿದರೆ ವ್ಯಕ್ತಿ ದೊಡ್ಡವನಾಗುತ್ತಾನೆ. ಇಲ್ಲವಾದರೆ ಅನಾಮಧೇಯನಾಗಿ, ಯಾವ ಹೆಜ್ಜೆಯ ಗುರುತೂ ಮೂಡಿಸದೆ ಕರಗಿ ಹೋಗುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT