ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಪ್ರತಿಜ್ಞೆಯ ಪರೀಕ್ಷೆ

Last Updated 9 ಜೂನ್ 2021, 19:30 IST
ಅಕ್ಷರ ಗಾತ್ರ

ಬೋಧಿಸತ್ವನ ಪತ್ನಿ ಮಾದ್ರಿದೇವಿ ಗಂಡುಮಗುವಿಗೆ ಜನ್ಮವಿತ್ತಳು. ಜನನಕಾಲದಲ್ಲಿ ಮಗುವನ್ನು ಕಂಚಿನ ಜಾಲದಲ್ಲಿ ಗ್ರಹಿಸಿದರು. ಆದ್ದರಿಂದ ಅವನಿಗೆ ಜಾಲಿಕುಮಾರ ಎಂದು ಹೆಸರಿಟ್ಟರು. ಮುಂದೆ ಎರಡು ವರ್ಷದಲ್ಲಿ ಒಬ್ಬ ಮಗಳು ಹುಟ್ಟಿದಳು. ಜನನವಾಗುವಾಗ ಅವಳನ್ನು ಕೃಷ್ಣಾಜಿನದಲ್ಲಿ ಗ್ರಹಿಸಿದ್ದರಿಂದ ಆಕೆಗೆ ಕೃಷ್ಣಾಜಿನ ಎಂಬ ಹೆಸರೇ ಉಳಿಯಿತು.

ಬೋಧಿಸತ್ವದ ಆಳ್ವಿಕೆಯಲ್ಲಿ ದೇಶ ಅತ್ಯಂತ ಸಮೃದ್ಧವಾಗಿತ್ತು. ಮಳೆ, ಬೆಳೆ ಕಾಲಕಾಲಕ್ಕೆ ಆಗುತ್ತ, ಜನರು ತುಂಬ ತೃಪ್ತಿಯಿಂದಿದ್ದರು. ಬೋಧಿಸತ್ವ ಪ್ರತಿ ತಿಂಗಳಿಗೆ ಆರು ಬಾರಿ ಅಲಂಕೃತವಾದ ಮಾಂಗಲೀಕ ಆನೆಯ ಮೇಲೆ ಕುಳಿತು ದಾನಶಾಲೆಗಳನ್ನು ನೋಡಲು ಹೋಗುತ್ತಿದ್ದ. ಅವನ ಮೇಲ್ವಿಚಾರಣೆಯಿಂದ ಎಲ್ಲ ಕೆಲಸಗಾರರು ಕಾರ್ಯಗಳನ್ನು ಸರಿಯಾಗಿ, ಸರಿಯಾದ ಕಾಲದಲ್ಲಿ ಮಾಡುತ್ತಿದ್ದರು.

ಈ ಸಮಯದಲ್ಲಿ ಪಕ್ಕದ ಕಲಿಂಗ ರಾಷ್ಟ್ರದಲ್ಲಿ ಬರಗಾಲ ಬಂದಿತು. ಯಾವ ಹೊಲದಲ್ಲೂ ಬೆಳೆಯಿಲ್ಲ. ಕುಡಿಯಲು ನೀರಿಲ್ಲ. ಎಲ್ಲೆಲ್ಲಿಯೂ ಹಾಹಾಕಾರ ಉಂಟಾಯಿತು. ಬದುಕುವುದಕ್ಕಾಗಿ ಜನ ಕಳ್ಳತನ ಮಾಡತೊಡಗಿದರು. ಪ್ರಜೆಗಳೆಲ್ಲ ರಾಜಾಂಗಣಕ್ಕೆ ಬಂದು ಕೂಗಾಡಿ ರಾಜನನ್ನು ತೆಗಳತೊಡಗಿದರು. ಆಗ ಕಲಿಂಗರಾಜ ಹೇಳಿದ, ‘ನನಗೆ ಪರಿಸ್ಥಿತಿಯ ಅರಿವಿದೆ. ದೇವತೆಗಳು ನಮ್ಮ ದೇಶದ ಮೇಲೆ ಕೋಪ ಮಾಡಿಕೊಂಡಂತಿದೆ. ಆದ್ದರಿಂದ ನಾನು ಶೀಲಗ್ರಹಣ ಮಾಡಿ, ಉಪೋಸಥ ವೃತವನ್ನು ಕೈಗೊಂಡು ದೇವತೆಗಳ ತೃಪ್ತಿಮಾಡಿ ಮಳೆ ಸುರಿಸುವಂತೆ ಬೇಡುತ್ತೇನೆ’. ಆತ ಹೇಳಿದಂತೆ ವೃತಗಳನ್ನು ಮಾಡಿದರೂ ಮಳೆಯಾಗಲಿಲ್ಲ. ರಾಜ ಚಿಂತಿತನಾಗಿ ಪುರಪ್ರಮುಖರನ್ನು, ಮಂತ್ರಿಗಳನ್ನು ಉಪಾಯಕ್ಕಾಗಿ ಕೇಳಿದ. ಮಂತ್ರಿಗಳು ಹೇಳಿದರು, ‘ಸ್ವಾಮಿ, ಸಿವಿರಾಜ್ಯದ ಜೆತುತ್ತರ ನಗರದಲ್ಲಿ ವೆಸ್ಸಂತರನೆಂಬ ರಾಜಕುಮಾರನಿದ್ದಾನೆ. ಅವನಿರುವ ಸ್ಥಳದಲ್ಲಿ ಬರಗಾಲವಿಲ್ಲ, ಅವನ ಬಳಿ ದೇವತೆಗಳು ಕೊಟ್ಟ ಅಚ್ಚ ಬಿಳೀ ಬಣ್ಣದ ಮಾಂಗಲೀಕ ಆನೆಯಿದೆ. ಅದು ಸರ್ವಲಕ್ಷಣ ಶೋಭಿತವಾದದ್ದು. ರಾಜಕುಮಾರನನ್ನಾಗಲೀ, ಆನೆಯನ್ನಾಗಲೀ ಇಲ್ಲಿಗೆ ಕರೆತಂದರೆ ಖಂಡಿತವಾಗಿ ಸಮೃದ್ಧಿಯಾಗುತ್ತದೆ’. ರಾಜ ಯೋಚಿಸಿದ, ಬೇರೆ ದೇಶದ ರಾಜಕುಮಾರನನ್ನು ಕರೆ ತರುವುದು ಅನುಚಿತ. ಬೇಕಾದರೆ ಆನೆಯನ್ನು ಕೇಳಬಹುದು. ನಂತರ ನಗರ ಪ್ರಮುಖರನ್ನು, ಬ್ರಾಹ್ಮಣರನ್ನು ಆರಿಸಿ ಅವರಿಗೆ ಖರ್ಚಿಗೆ ಹಣ ಕೊಟ್ಟು, ‘ಸಿವಿರಾಜ್ಯಕ್ಕೆ ಹೋಗಿ ಮಾಂಗಲಿಕ ಆನೆಯನ್ನು ಬೇಡಿ ತನ್ನಿ’ ಎಂದು ಕಳುಹಿಸಿದ.

ಅವರೆಲ್ಲ ಜೆತುತ್ತರ ನಗರಕ್ಕೆ ಬಂದು ದಾನಶಾಲೆಯಲ್ಲಿ ಊಟ ಮಾಡಿದರು. ಮರುದಿನ ಬೋಧಿಸತ್ವ ವೆಸ್ಸಂತರ ತನ್ನ ಮಾಂಗಲೀಕ ಆನೆಯ ಮೇಲೆ ಕುಳಿತು ದಾನಶಾಲೆಗೆ ಬರುವಾಗ ದಾರಿಯಲ್ಲಿ ನಿಂತುಕೊಂಡರು. ಆತ ಅಲಂಕೃತನಾಗಿ ಸಕಲ ವೈಭವದಲ್ಲಿ ಬರುತ್ತಿರುವಾಗ ಈ ಜನರು ಅವನಿಗೆ ಕಾಣುವಂತೆ ಎತ್ತರದ ಸ್ಥಳದಲ್ಲಿ ನಿಂತು, ಅವನು ಕಂಡೊಡನೆ, ‘ರಾಜಕುಮಾರ ವೆಸ್ಸಂತರನಿಗೆ ಜಯವಾಗಲಿ, ಮಹಾದಾನಿ ರಾಜಕುಮಾರನಿಗೆ ಜಯವಾಗಲಿ’ ಎಂದು ಘೋಷಣೆ ಮಾಡತೊಡಗಿದರು. ಅವರನ್ನು ಕಂಡು ಅವರಿರುವ ಜಾಗಕ್ಕೇ ಆನೆಯನ್ನು ತೆಗೆದುಕೊಂಡು ಹೋಗಿ, ‘ಸ್ವಾಮಿ, ತಾವು ನಮ್ಮ ದೇಶದ ಹೊರಗಿನವರು ಎಂದು ಕಾಣುತ್ತದೆ. ತಮ್ಮ ಅಪೇಕ್ಷೆ ಏನಾದರೂ ಇದ್ದರೆ ತಿಳಿಸಿ’ ಎಂದ. ಈಗ ನಿಜವಾಗಿಯೂ ವೆಸ್ಸಂತರನ ದಾನದ ಮಹಾಪ್ರತಿಜ್ಞೆಯ ಪರೀಕ್ಷೆಯ ಕಾಲ ಹತ್ತಿರ ಬಂದಿತು. ಅವರು ಕೇಳಿದ್ದನ್ನು ಕೊಡುವುದು ಸುಲಭವಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT