ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ: ಮನೆ ಖರೀದಿ ಮುನ್ನ ಒಂದು ಲೆಕ್ಕಾಚಾರ

Last Updated 26 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಸ್ವಂತ ಮನೆ ಹೊಂದಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಆದರೆ ಯಾವ ಹಂತದಲ್ಲಿ ಮನೆ ಖರೀದಿ ತೀರ್ಮಾನ ಮಾಡಬೇಕು, ಮನೆ ಕೊಳ್ಳಲು ಎಷ್ಟು ಡೌನ್‌ಪೇಮೆಂಟ್ ಮಾಡಬೇಕು, ಎಷ್ಟು ಮೌಲ್ಯದ ಸೂರು ಖರೀದಿಸಬೇಕು, ಎಷ್ಟು ಸಾಲ ಮಾಡಬೇಕು... ಹೀಗೆ ಸಾಲು ಸಾಲು ಪ್ರಶ್ನೆಗಳು ನಮ್ಮ ಮುಂದೆ ಬರುತ್ತವೆ. ಮೊದಲ ಮನೆ ಖರೀದಿ ತೀರ್ಮಾನ ಯಾವಾಗ ಮತ್ತು ಹೇಗೆ ಮಾಡಬೇಕು ಎನ್ನುವ ಬಗ್ಗೆ ತಿಳಿಯೋಣ.

50–20-40 ನಿಯಮ: ಮನೆ ಖರೀದಿ ಮಾಡುವಾಗ ಪ್ರಮುಖವಾಗಿ ಅನುಸರಿಸಬೇಕಾದುದು 50–20–40 ಸೂತ್ರವನ್ನು. ನೀವು ಖರೀದಿ ಮಾಡುತ್ತಿರುವ ಮನೆಯ ಮೌಲ್ಯ ನಿಮ್ಮ ಕುಟುಂಬದ ವಾರ್ಷಿಕ ವರಮಾನದ ಐದು ಪಟ್ಟಿಗಿಂತ ಜಾಸ್ತಿ ಇರಬಾರದು. ಮನೆ ಖರೀದಿಗೆ ಪಡೆಯುವ ಸಾಲದ ಅವಧಿ 20 ವರ್ಷಗಳನ್ನು ಮೀರಬಾರದು. ನಿಮ್ಮ ಸಾಲದ ಮಾಸಿಕ ಕಂತು ಅಂದರೆ, ಇಎಂಐ ಮೊತ್ತ, ನಿಮ್ಮ ಕುಟುಂಬದ ಒಟ್ಟು ಆದಾಯದ ಶೇಕಡ 40ಕ್ಕಿಂತ ಹೆಚ್ಚಿಗೆ ಇರಬಾರದು (ಪಟ್ಟಿ ಗಮನಿಸಿ).

ಬಂಡವಾಳ ಮಾರುಕಟ್ಟೆ: ಮನೆ ಖರೀದಿ ಮುನ್ನ ಒಂದು ಲೆಕ್ಕಾಚಾರ

‘ಅ’ ಎಂಬ ಕುಟುಂಬದ ₹ 12 ಲಕ್ಷ ವಾರ್ಷಿಕ ಆದಾಯವನ್ನು ಗಣನೆಗೆ ತೆಗೆದುಕೊಂಡಾಗ ಮಾಸಿಕ ಆದಾಯ ₹ 1 ಲಕ್ಷ ಆಗುತ್ತದೆ. ವಾರ್ಷಿಕ ಆದಾಯದ ಐದು ಪಟ್ಟು ಮನೆಯ ಮೌಲ್ಯವಿರಬೇಕು ಎಂದಾದರೆ, ಮನೆಯ ಮೌಲ್ಯ ₹ 60 ಲಕ್ಷ ಆಗುತ್ತದೆ. ಸಾಮಾನ್ಯವಾಗಿ ಬ್ಯಾಂಕ್‌ಗಳು ಮನೆಯ ಮೌಲ್ಯದ ಶೇ 80ರಷ್ಟು ಮೊತ್ತವನ್ನು ಮಾತ್ರ ಸಾಲವಾಗಿ ಕೊಡುವುದರಿಂದ ₹ 12 ಲಕ್ಷ ಡೌನ್ ಪೇಮೆಂಟ್ ಮಾಡಿ ₹ 48 ಲಕ್ಷ ಸಾಲ ಪಡೆಯಬೇಕಾಗುತ್ತದೆ. ₹ 48 ಲಕ್ಷ ಸಾಲಕ್ಕೆ ಮಾಸಿಕ ಕಂತು ₹ 40,149 ಆಗುತ್ತದೆ, 20 ವರ್ಷ ಅದನ್ನು ಪಾವತಿಸಬೇಕಾಗುತ್ತದೆ.

‘ಬ’ ಎನ್ನುವ ಕುಟುಂಬದ ₹ 18 ಲಕ್ಷ ವಾರ್ಷಿಕ ಆದಾಯವನ್ನು ಗಣನೆಗೆ ತೆಗೆದುಕೊಂಡಾಗ ಮಾಸಿಕ ಆದಾಯ ₹ 1.5 ಲಕ್ಷ ಆಗುತ್ತದೆ. ವಾರ್ಷಿಕ ಆದಾಯದ ಐದು ಪಟ್ಟು ಮನೆಯ ಮೌಲ್ಯವಿರಬೇಕು ಎಂದರೆ, ಮನೆಯ ಮೌಲ್ಯ ₹ 90 ಲಕ್ಷ ಆಗುತ್ತದೆ. ₹ 18 ಲಕ್ಷ ಡೌನ್ ಪೇಮೆಂಟ್ ಮಾಡಿ ₹ 72 ಲಕ್ಷ ಸಾಲ ಪಡೆಯಬೇಕಾಗುತ್ತದೆ. ₹ 72 ಲಕ್ಷ ಸಾಲಕ್ಕೆ ಮಾಸಿಕ ಕಂತು ₹ 60,224 ಆಗಲಿದ್ದು, 20 ವರ್ಷಗಳ ಕಾಲ ಅದನ್ನು ಪಾವತಿಸಬೇಕಾಗುತ್ತದೆ.

‘ಕ’ ಎನ್ನುವ ಕುಟುಂಬದ ₹ 24 ಲಕ್ಷ ವಾರ್ಷಿಕ ಆದಾಯವನ್ನು ಗಣನೆಗೆ ತೆಗೆದುಕೊಂಡಾಗ ಮಾಸಿಕ ಆದಾಯ ₹ 2 ಲಕ್ಷ ಆಗುತ್ತದೆ. ವಾರ್ಷಿಕ ಆದಾಯದ ಐದು ಪಟ್ಟು ಮನೆಯ ಮೌಲ್ಯವಿರಬೇಕು ಎಂದರೆ, ಮನೆಯ ಮೌಲ್ಯ ₹ 1.20 ಕೋಟಿ ಆಗುತ್ತದೆ. ₹ 24 ಲಕ್ಷ ಡೌನ್ ಪೇಮೆಂಟ್ ಮಾಡಿ ₹ 96 ಲಕ್ಷ ಸಾಲ ಪಡೆದುಕೊಳ್ಳಬೇಕಾಗುತ್ತದೆ. ₹ 96 ಲಕ್ಷ ಸಾಲಕ್ಕೆ ಮಾಸಿಕ ಕಂತು ₹ 80,298, 20 ವರ್ಷಗಳ ಕಾಲ ಅದನ್ನು ಪಾವತಿಸಬೇಕಾಗುತ್ತದೆ.

ಸಾಲ ಬೇಗ ತೀರಿಸುವುದು ಹೇಗೆ?: ಮೇಲಿನ ‘ಅ’ ಉದಾಹರಣೆಯಲ್ಲಿ ₹ 48 ಲಕ್ಷ ತೀರಿಸಲು 20 ವರ್ಷಗಳ ಕಾಲ ಪ್ರತಿ ತಿಂಗಳು ₹ 40,149 ಪಾವತಿಸಬೇಕು. ಈ ಇಎಂಐ ಮೊತ್ತದಲ್ಲಿ ಶೇ 2ರಷ್ಟು ಹೆಚ್ಚಳ ಮಾಡಿದರೆ 20 ವರ್ಷಗಳ ಸಾಲವನ್ನು ಹದಿನೈದೂವರೆ ವರ್ಷಗಳಲ್ಲೇ ತೀರಿಸಬಹುದು. ಒಂದೊಮ್ಮೆ ತಿಂಗಳ ಕಂತಿನಲ್ಲಿ ಶೇ 5ರಷ್ಟು ಹೆಚ್ಚಳ ಪರಿಗಣಿಸಿದರೆ ಹನ್ನೆರಡೂವರೆ ವರ್ಷಗಳಲ್ಲಿ ಸಾಲ ಮರುಪಾವತಿ ಮಾಡಬಹುದು. ಪ್ರತಿ ವರ್ಷ ಸಂಬಳ/ಆದಾಯ ಒಂದಷ್ಟು ಹೆಚ್ಚಳ ಆಗೇ ಆಗುತ್ತದೆ. ಆ ಹೆಚ್ಚಳದ ಮೊತ್ತವನ್ನು ಸಾಲ ಮರುಪಾವತಿಗೆ ಬಳಸಿದರೆ ಬೇಗ ಸಾಲ ತೀರಿಸುವ ಕನಸು ನನಸಾಗುತ್ತದೆ.

ಮನೆ ಖರೀದಿಗೆ ಮುಂದಾಗುವ ಮುನ್ನ ಆರ್ಥಿಕವಾಗಿ ನೀವು ಎಷ್ಟು ಸುಸ್ಥಿತಿಯಲ್ಲಿದ್ದೀರಿ ಎನ್ನುವುದನ್ನು ಲೆಕ್ಕಾಚಾರ ಮಾಡುವುದು ಬಹಳ ಮುಖ್ಯ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮನೆ ಖರೀದಿಗೆ ಮುಂದಾಗುವುದು ಒಳಿತು. ವಯಸ್ಸು ಚಿಕ್ಕದಿದ್ದು, ಉತ್ತಮ ಆದಾಯವಿದ್ದಾಗ ಬ್ಯಾಂಕ್‌ಗಳು ಸುಲಭದಲ್ಲಿ ಸಾಲ ಕೊಡುತ್ತವೆ. 25ರಿಂದ 30ನೇ ವಯಸ್ಸಿನಲ್ಲಿ ಮನೆ ಖರೀದಿಗೆ ಯೋಜಿಸಬಹುದು. ಸಾಮಾನ್ಯವಾಗಿ ಗೃಹ ಸಾಲ ತೀರಿಸಲು 15ರಿಂದ 20 ವರ್ಷ ಬೇಕಾಗುವುದರಿಂದ ನಿವೃತ್ತಿ ಅಂಚಿನಲ್ಲಿರುವವರಿಗೆ ಬ್ಯಾಂಕ್‌ಗಳು ಸಾಲ ಕೊಡುವುದಿಲ್ಲ. ಆದ್ದರಿಂದ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದೀರಿ, ಮನೆ ಖರೀದಿಸುವ ಇರಾದೆ ಇದೆ ಎಂದಾದರೆ ಬೇಗ ಆ ಕೆಲಸ ಮಾಡುವುದು ಒಳಿತು.

(ಲೇಖಕ ಇಂಡಿಯನ್ ಮನಿ ಡಾಟ್‌ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

******

ಸತತ ಮೂರನೇ ವಾರ ಕುಸಿದ ಷೇರುಪೇಟೆ

ಷೇರುಪೇಟೆ ಸೂಚ್ಯಂಕಗಳು ಸತತ ಮೂರನೇ ವಾರ ಕುಸಿತ ದಾಖಲಿಸಿವೆ. ಮಾರ್ಚ್ 24ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತ ದಾಖಲಿಸಿವೆ. 57,527 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 0.79ರಷ್ಟು ಕುಸಿದಿದೆ. 16,945 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.90ರಷ್ಟು ತಗ್ಗಿದೆ. ಅಮೆರಿಕದ ಬ್ಯಾಂಕಿಂಗ್ ವಲಯದಲ್ಲಾಗಿರುವ ತಲ್ಲಣ, ಅಮೆರಿಕದ ಫೆಡರಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್‌ನಿಂದ ಬಡ್ಡಿ ಹೆಚ್ಚಳ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರುಗಳ ಮಾರಾಟ ಸೇರಿ ಹಲವು ಅಂಶಗಳು ಸೂಚ್ಯಂಕಗಳ ಕುಸಿತಕ್ಕೆ ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ಬಿಎಸ್ಇ ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 4.7ರಷ್ಟು, ಲೋಹ ಸೂಚ್ಯಂಕ ಶೇ 4ರಷ್ಟು, ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 3ರಷ್ಟು ಮತ್ತು ಕ್ಯಾಪಿಟಲ್ ಗೂಡ್ಸ್ ಸೂಚ್ಯಂಕ ಶೇ 2ರಷ್ಟು ಕುಸಿದಿವೆ. ಪವರ್ ಸೂಚ್ಯಂಕ ಶೇ 0.6ರಷ್ಚು ಗಳಿಸಿಕೊಂಡಿದೆ.

ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 6,654.23 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 9,430.59 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ಜೊಮಾಟೊ, ಅದಾನಿ ಎಂಟರ್‌ಪ್ರೈಸಸ್, ಕೋಲ್ ಇಂಡಿಯಾ, ಅದಾನಿ ಪೋರ್ಟ್ಸ್, ಗೇಲ್ ಇಂಡಿಯಾ, ಟಾಟಾ ಪವರ್ ಕಂಪನಿ, ಡಿಎಲ್‌ಎಫ್, ವೇದಾಂತ ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್ ಶೇ 8ರವರೆಗೆ ಕುಸಿತ ಕಂಡಿವೆ.

ಅದಾನಿ ಗ್ರೀನ್ ಎನರ್ಜಿ, ಅದಾನಿ ಟೋಟಲ್ ಗ್ಯಾಸ್, ಅದಾನಿ ಟ್ರಾನ್ಸ್‌ಮಿಷನ್ ಮತ್ತು ಪೇಟಿಎಂ ಶೇ 7ರಿಂದ ಶೇ 26ರವರೆಗೆ ಕುಸಿದಿವೆ.

ಮುನ್ನೋಟ: ಏಪ್ರಿಲ್ 3ರಿಂದ 5ರವರೆಗೆ ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆ ನಡೆಯಲಿದ್ದು ರೆಪೊ ದರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಬಡ್ಡಿ ದರ ಹೆಚ್ಚಳವು ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಲಿದೆ. ಇನ್ನು, ಮಾರ್ಚ್‌ ತ್ರೈಮಾಸಿಕ ಫಲಿತಾಂಶದ ಅವಧಿ ಸಮೀಪಿಸುತ್ತಿರುವುದರಿಂದ ಹೂಡಿಕೆದಾರರ ಚಿತ್ತ ಅದರತ್ತ ನೆಟ್ಟಿದ್ದು, ಸೂಚ್ಯಂಕಗಳ ಮೇಲೆ ಅದು ಕೂಡ ಪರಿಣಾಮ ಬೀರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT