ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರವಿಂದ ಚೊಕ್ಕಾಡಿ ಅಂಕಣ| ಕಲಿಕೆಯಲ್ಲಿ ಪರಿಸರ ಚಿಂತನೆ

ಮಕ್ಕಳಲ್ಲಿ ಪರಿಸರ ಪ್ರಜ್ಞೆ ರೂಢಿಸಬೇಕಾದ ಸವಾಲು ನಮ್ಮ ಮುಂದಿದೆ
Last Updated 21 ಜೂನ್ 2022, 19:31 IST
ಅಕ್ಷರ ಗಾತ್ರ

ದಶಕಗಳಿಂದ ಪ್ರತಿವರ್ಷ ಗುರುವಾಯನಕೆರೆಯ ‘ನಾಗರಿಕ ಸೇವಾ ಟ್ರಸ್ಟ್‌’ನವರು ಶಾಲೆಗೆ ಬಂದು ಮಕ್ಕಳಿಗೆ ಪರಿಸರ ವಿಚಾರಗಳಿಗೆ ಸಂಬಂಧಿಸಿದಂತೆ ಸ್ಪರ್ಧೆ ಏರ್ಪಡಿಸುತ್ತಿದ್ದುದು ನನ್ನ ಶೈಕ್ಷಣಿಕ ಅನುಭವವಾಗಿತ್ತು. ಈ ರೀತಿಯ ಪರಿಸರ ಸಂಬಂಧಿ ಚಟುವಟಿಕೆಗಳು ಎಲ್ಲ ಕಡೆ ನಡೆಯುತ್ತಿದ್ದವು; ಈಗ ನಡೆಯುತ್ತಲೇ ಇಲ್ಲ ಎಂದೇನಲ್ಲ. ಆದರೆ ಅವು ಸುದ್ದಿಯಾಗುವುದು ಕಡಿಮೆ. ಸುದ್ದಿಯಾದಾಗಲೂ ಅವು ಸಾರ್ವಜನಿಕರು ಪರಿಗಣನೆಗೆ ತೆಗೆದುಕೊಳ್ಳಬೇಕಾದ ಸಂಗತಿಯಾಗಿ ಉಳಿದಿಲ್ಲ. ಎಡ- ಬಲ, ಕೋಮುವಾದ ಇವಿಷ್ಟರ ನಡುವಿನ ಒಂದಷ್ಟು ಸಂಗತಿಗಳನ್ನು ಬಿಟ್ಟರೆ, ಇಡೀ ದೇಶದಲ್ಲಿ ಬೇರೆ ಏನೂ ಇಲ್ಲವೇ ಇಲ್ಲವೇನೋ ಎನ್ನುವಷ್ಟು ಸಾರ್ವಜನಿಕ ಚರ್ಚೆಗಳು ಕೇಂದ್ರೀಕೃತವಾಗಿವೆ.

ಅರವಿಂದ ಚೊಕ್ಕಾಡಿ
ಅರವಿಂದ ಚೊಕ್ಕಾಡಿ

ಆದರೆ ಇರುವುದೊಂದೇ ಭೂಮಿ.‌ ಭೂಮಿಯ ಸಂರಕ್ಷಣೆ ಎಲ್ಲರ ಹೊಣೆ. ಭೂಮಿಯನ್ನೇ ಉಳಿಸಿಕೊಳ್ಳುವ ಚಿಂತನೆ ಇಲ್ಲದಿದ್ದರೆ ಎಡ-ಬಲ, ಧರ್ಮ ಯಾವುದೂ ಇರುವುದಿಲ್ಲ.‌ ಗಮನಾರ್ಹ ಸಂಗತಿಯೆಂದರೆ, ಧರ್ಮಗಳು ಪರಿಸರವನ್ನು ಗಂಭೀರವಾಗಿ ಪರಿಗಣಿಸಿವೆ. ಮಹಾಭಾರತದಲ್ಲಿ ಪಾಂಡವರು ವನವಾಸಿಗಳಾದಾಗ ನಕುಲ ಕಟ್ಟಿಗೆಯನ್ನು ಕಡಿದು ಕಡಿದು ರಾಶಿ ಹಾಕುವಲ್ಲಿಗೆ ಯುಧಿಷ್ಠಿರನು ಹೋಗಿ, ‘ಹಾಗೆ ಕಟ್ಟಿಗೆಯನ್ನು ಕಡಿಯಬೇಡ. ಅಗತ್ಯಕ್ಕಿಂತ ಜಾಸ್ತಿ ಒಂದು ತುಂಡು ಕಟ್ಟಿಗೆಯನ್ನು ಕಡಿಯುವುದೂ ಅಧರ್ಮ’ ಎಂದು ತಿಳಿಹೇಳುವ ಪ್ರಸಂಗವಿದೆ. ಇಸ್ಲಾಂನಲ್ಲಿ, ‘ನೀರನ್ನು ನಾವು ನಿಮಗಾಗಿ ಸೃಷ್ಟಿಸಿದ್ದೇವೆ. ಒಂದು ಹನಿಯನ್ನೂ ಪೋಲು ಮಾಡಬೇಡಿ’ ಎಂಬ ಬೋಧನೆಯೂ ಬರುತ್ತದೆ.

ಸಾರ್ವಜನಿಕ ಚರ್ಚೆಗಳು ಧರ್ಮಗಳ ಸುತ್ತಲೇ ಸುತ್ತುತ್ತಿದ್ದರೂ ಧರ್ಮಗಳು ಬೋಧಿಸುವ ಇಂತಹ ವಿಷಯಗಳ ಬಗ್ಗೆ ಚರ್ಚೆಯೇ ಇಲ್ಲ. ನಾನಾ ರೀತಿಯ ಅಭಿವೃದ್ಧಿ ಕಾರ್ಯಗಳಿಗಾಗಿ ಮರಗಳನ್ನು ಕಡಿಯುವ, ಕೆರೆಯನ್ನು ಮುಚ್ಚಿಸುವ, ಬಂಡೆಗಳನ್ನು ಒಡೆಯುವ ಮತ್ತಿತರೆ ಕ್ರಿಯೆಗಳಲ್ಲಿ ಪರಿಸರವನ್ನು ಸಂರಕ್ಷಿಸಿಕೊಂಡೇ ಹೇಗೆ ಅಭಿವೃದ್ಧಿ ಕಾರ್ಯಗಳನ್ನು ಸಾಧಿಸಬಹುದು ಎಂಬ ಎಚ್ಚರ ಕಾಣಿಸುತ್ತಿಲ್ಲ. ಎಡ-ಬಲ-ಕೋಮುವಾದ
ಗಳಿಗೇ ಸಾರ್ವಜನಿಕ ಚರ್ಚೆ ಕೇಂದ್ರಿತವಾಗಿರುವಾಗ, ಪ್ರಕೃತಿಯ ಸಂಪನ್ಮೂಲಗಳನ್ನು ಎಗ್ಗಿಲ್ಲದೇ ದೋಚಲು ಅನುಕೂಲವಾಗಿದೆ ಎಂಬ ಮಾತೂ ಇದೆ. ಏಕೆಂದರೆ ಇಂತಹ ವಿಚಾರಗಳ ಬಗ್ಗೆ ಜನರ ಗಮನವೇ ಇಲ್ಲ.

ಪ್ರಜಾಪ್ರಭುತ್ವದ ಯಶಸ್ಸು ಸಾರ್ವಜನಿಕರ ನಿರಂತರ ಎಚ್ಚರವನ್ನು ಅವಲಂಬಿಸಿದೆ. ಆ ಎಚ್ಚರ ಇಲ್ಲವಾದಾಗ ಸಂಪನ್ಮೂಲಗಳು ಲೂಟಿಯಾಗುತ್ತವೆ. ಹೀಗೆ ಆಗುವ ಲೂಟಿಯು ‘ಯಾರೋ ಹಣ ಮಾಡಿಕೊಂಡರು, ಭ್ರಷ್ಟಾಚಾರ ನಡೆಯಿತು’ ಎನ್ನುವಷ್ಟಕ್ಕೇ ಸೀಮಿತವಾದ ಸಂಗತಿಯಾಗಿಲ್ಲ. ಬದಲು ಅದು ಇಡೀ ಪೃಥ್ವಿಯ ಅಸ್ತಿತ್ವದ ಪ್ರಶ್ನೆಯೂ ಆಗಿದೆ. ಭೂಮಿ ಕೇವಲ ತನಗೆ ಮಾತ್ರ ಸೇರಿದ್ದಲ್ಲ, ಎಲ್ಲ ಜೀವಿಗಳಿಗೂ ಸೇರಿದ್ದು ಎನ್ನುವುದು, ಭೂಮಿಯನ್ನು ಮುಂದಿನ ಪೀಳಿಗೆಗೂ ಉಳಿಸಿಕೊಡಬೇಕಾದುದು ನಮ್ಮ‌ ಜವಾಬ್ದಾರಿ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇರಬೇಕಾದ ಸಾಮಾನ್ಯ ಪ್ರಜ್ಞೆ. ಈ ಪ್ರಜ್ಞೆ ಇದ್ದಮಾತ್ರಕ್ಕೆ ಪರಿಸರ ನಾಶದ ಎಲ್ಲ ಪ್ರಕ್ರಿಯೆಗಳನ್ನೂ
ತಡೆಯಲು ಸಾಧ್ಯವಿಲ್ಲ. ಆದರೆ ಪರಿಸರದ ಕುರಿತ ಸಾರ್ವಜನಿಕ ಎಚ್ಚರ ಇರುತ್ತದೆ. ಒಂದಷ್ಟು ಮಟ್ಟಿಗೆ ಅದು ನಾಶವನ್ನು ತಡೆಯುತ್ತದೆ.‌ ಈ ಎಚ್ಚರವನ್ನು ಉಳಿಸಿಕೊಳ್ಳು
ವುದು ಬಹಳ ಅಗತ್ಯ.

ಪರಿಸರ ಸಂರಕ್ಷಣೆ ಕುರಿತ ಎಚ್ಚರವನ್ನು ಉಳಿಸಿಕೊಳ್ಳುವ ಆಶಯವನ್ನು ಎಲ್ಲ ಶಿಕ್ಷಣ ನೀತಿಗಳೂ ಹೊಂದಿವೆ. ಆದರೆ ಆ ಆಶಯವನ್ನು ಸಾಧಿಸುವ ಕಾರ್ಯಗಳು ಸಾಂಕೇತಿಕವಾಗಿಬಿಟ್ಟಿವೆ.‌ ವಾಸ್ತವಿಕವಾಗಿ ಜಾತಿ ಪ್ರತಿನಿಧಿತ್ವದ ಆಧಾರದಲ್ಲಿ ನಡೆಸಲಾಗುವ ಜನ್ಮದಿನಾಚರಣೆಗಳು ಮತ್ತು ಇದುವರೆಗೆ ಹೆಚ್ಚು ಚರ್ಚೆಗೆ ಬಾರದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಿಗೆ ನ್ಯಾಯ ಸಲ್ಲಿಸುವ ಆಚರಣೆಗಳ ಅಬ್ಬರದಲ್ಲಿ ವನ‌
ಮಹೋತ್ಸವದಂತಹ ಹಳೆಯ ಮೌಲಿಕ ಆಚರಣೆಗಳು ಕಳಾಹೀನವಾಗಿವೆ. ಇಷ್ಟಿದ್ದರೂ ವನಮಹೋತ್ಸವ, ಪರಿಸರ ದಿನ ಎಂಬ ಹೆಸರಿನಲ್ಲಿ ಚಟುವಟಿಕೆಗಳು ಸಾಂಕೇತಿಕವಾಗಿ ನಡೆಯುತ್ತಿವೆ. ಆದರೆ ಅಂತಹ ಚಟುವಟಿಕೆಗಳು ಪರಿಸರದ ಪ್ರಜ್ಞೆಯನ್ನು ಬೆಳೆಸಲು ಸೋಲುತ್ತಿವೆ. ಅಂದರೆ ಪರಿಸರದ ತಿಳಿವಳಿಕೆಗಳು ನಿಷ್ಕ್ರಿಯ ತಿಳಿವಳಿಕೆಗಳಾಗಿವೆ. ಜನರು ಸಾಮಾನ್ಯವಾಗಿ ಅವರವರ ಮತಧರ್ಮಗಳ ಆಚರಣೆಗಳಲ್ಲಿ ಕೆಲವನ್ನಾದರೂ ಮಕ್ಕಳಿಗೆ ಕಲಿಸುತ್ತಾರೆ. ಆದರೆ ದೇವರಿಗೆ ಕೈ ಮುಗಿಯಬೇಕು, ನಮಾಜ್ ಮಾಡಬೇಕು ಎನ್ನುವುದನ್ನು ಮಕ್ಕಳಲ್ಲಿ ರೂಢಿ ಮಾಡಿದ ಹಾಗೆ ನಲ್ಲಿಯಲ್ಲಿ ನೀರು ಹರಿದು ಪೋಲಾಗುತ್ತಿದ್ದರೆ ಅದನ್ನು ತಡೆಯಬೇಕು ಎನ್ನುವುದನ್ನು ರೂಢಿ ಮಾಡುವುದಿಲ್ಲ.

ಇದರ ಹಿಂದೆ ಧರ್ಮವನ್ನು ಸಾಂಸ್ಥಿಕ ರೂಪದಲ್ಲಿ ಮರು ನಿರೂಪಿಸಿಕೊಂಡು ಸ್ಥಿರೀಕರಿಸಿಕೊಳ್ಳುವ ಹಿಂದೂಗಳ ವಿಶೇಷ ಆಸಕ್ತಿಯ ಪಾತ್ರವಿದೆ.‌ ಅದು ಸಂಸ್ಕೃತಿಯ ಮಹತ್ವವನ್ನು ಕಡೆಗಣಿಸುವಂತೆ ಮಾಡುತ್ತದೆ. ಉದಾಹರಣೆಗೆ ಹೇಳುವುದಾದರೆ, ಕೃಷಿ ಭೂಮಿಯ ಒಂದು ಭಾಗವನ್ನು ನಾಗಬನವಾಗಿ ಬಿಡುವ ಪದ್ಧತಿ ಒಂದು ಕಾಲದಲ್ಲಿ ಇತ್ತು. ನಾಗಬನದಲ್ಲಿ ನಾಗಾರಾಧನೆ ಧಾರ್ಮಿಕ ಆಚರಣೆ. ಅಲ್ಲಿ ಯಾವ ಮರವನ್ನೂ ಕಡಿಯುತ್ತಿರಲಿಲ್ಲ. ಆದ್ದರಿಂದ ದೊಡ್ಡ ಕಾಡಿನ ರೀತಿಯಲ್ಲಿ ಆ ಭಾಗ ಬೆಳೆಯುತ್ತಿತ್ತು. ಬೇಸಿಗೆಯಲ್ಲಿ ಜಾಗವನ್ನು ತಂಪಾಗಿ ಇಡುತ್ತಿತ್ತು. ಏಪ್ರಿಲ್ ತಿಂಗಳಿನಲ್ಲಿಯೂ ನಾಗಬನದಿಂದ ನೀರು ಹರಿದುಬರುತ್ತಿತ್ತು. ನಾಗಾರಾಧನೆಯ ಒಂದು ಸಾಂಸ್ಥಿಕ ಆಲೋಚನೆಯು ಪರಿಸರವನ್ನು ಪೋಷಿಸುವ ಒಂದು ಸಂಸ್ಕೃತಿಯನ್ನು ರೂಪಿಸಿತ್ತು. ಹಿಂದೂಗಳಲ್ಲಿ ಸಂಸ್ಕೃತಿಯ ಆಸಕ್ತಿ ಕಡಿಮೆಯಾಗಿ ತಮ್ಮ ಧರ್ಮವನ್ನೂ ಸಂಸ್ಥಾರೂಪಿಯಾಗಿಸುವ ಚಿಂತನೆ ಪ್ರಬಲವಾಗುತ್ತಿದ್ದ ಹಾಗೆ ಪರಿಸರ ಕಾಳಜಿಗಳನ್ನು ಮಕ್ಕಳಲ್ಲಿ ರೂಢಿಸುವ ಪದ್ಧತಿ ಕಡಿಮೆಯಾಗಿದೆ. ನಗರೀಕರಣ ಕೂಡ ಈ ಪರಿಸರ ಪ್ರಜ್ಞೆಯನ್ನು ತೊಡೆದುಹಾಕುವುದರಲ್ಲಿ ಬಹಳ ಪರಿಣಾಮವನ್ನು ಉಂಟುಮಾಡಿದೆ.

ಪರಿಸರಕ್ಕೆ ಪೂರಕವಾಗಿದ್ದ ಒಂದು ಸಂಸ್ಕೃತಿ ಹೊರಟುಹೋಗಿರುವ ಕಾಲಘಟ್ಟದಲ್ಲಿ ಪರಿಸರ ಪ್ರಜ್ಞೆಯನ್ನು ರೂಢಿಸಿಕೊಳ್ಳುವುದು ಹೇಗೆ ಎನ್ನುವುದು ದೊಡ್ಡ ಸವಾಲಾಗಿದೆ. ತಾಂತ್ರಿಕ ತಿಳಿವಳಿಕೆಗಳನ್ನು
ನೀಡುವುದರಿಂದ ಉಪಯೋಗವಾಗುವುದಿಲ್ಲ. ಮೊದಲು ಈ ವಿಷಯದಲ್ಲಿ ಮಕ್ಕಳ ಪೋಷಕರು ಮತ್ತು ಶಿಕ್ಷಕರನ್ನು ಸುಶಿಕ್ಷಿತರನ್ನಾಗಿಸಬೇಕು. ಸಣ್ಣ ಮಕ್ಕಳಲ್ಲಿ ಕಲಿಕೆಯು ಬೋಧನೆಗಿಂತ ಹೆಚ್ಚಾಗಿ ಅನುಕರಣೆಯಿಂದ ರೂಢಿಯಾಗುತ್ತದೆ.‌ ಮಕ್ಕಳು ಸ್ವಾಭಾವಿಕವಾಗಿ ಕುಟುಂಬದ ಹಿರಿಯರನ್ನು, ನಂತರ ಶಿಕ್ಷಕರನ್ನು ಅನುಕರಿಸುತ್ತಾರೆ.‌ ತಾಯಿಯು ದೀಪ ಹಚ್ಚುವಾಗ ಮಗು ಜೊತೆಯಲ್ಲಿರುವುದರಿಂದ ದೇವರಿಗೆ ದೀಪ ಹಚ್ಚುವುದನ್ನು ಒಂದು ಕಲಿಕೆಯಾಗಿ ರೂಢಿಸಿಕೊಳ್ಳುತ್ತದೆ. ಗ್ರಾಮ ಜೀವನ ವ್ಯವಸ್ಥೆಯಲ್ಲಿ ಕುಟುಂಬದ ಹಿರಿಯರ ಜೊತೆಯಲ್ಲಿದ್ದೇ ಮರಗಿಡಗಳ ಹೆಸರುಗಳನ್ನು, ಅವುಗಳ ಪೋಷಣೆಯ ಮಹತ್ವವನ್ನು, ನೀರನ್ನು ಹೇಗೆ ಬಳಸಬೇಕು ಎಂಬುದನ್ನೆಲ್ಲ ಕಲಿಯುತ್ತಿತ್ತು. ಪ್ರಕೃತಿಯನ್ನು ತನ್ನ ಜೀವನದ ಒಡನಾಡಿಯಾಗಿ ಮಾಡಿಕೊಳ್ಳುತ್ತಿತ್ತು. ಇವತ್ತು ಗ್ರಾಮ ಜೀವನವೂ ನಗರ ಸಂಸ್ಕೃತಿಯಾಗಿ ಪರಿವರ್ತನೆಯಾಗಿದೆ. ಹಾಗಿರುವಾಗ, ಸಹಜವಾಗಿ ಪರಿಸರ ಕಲಿಕೆಯು ಮಗುವಿಗೆ ಅನುಕರಣೆಯಿಂದ ಬರುವುದಿಲ್ಲ.‌ ಶಿಕ್ಷಕರೂ ನಗರ ಸಂಸ್ಕೃತಿಯವರೇ. ಆದ್ದರಿಂದ ಮಗುವಿಗೆ ಪರಿಸರ ಕಲಿಕೆ ಅನುಕರಣೆಯಾಗಿ ಅಲ್ಲಿಯೂ ಬರುವುದಿಲ್ಲ.

ಈ ಹಿನ್ನೆಲೆಯಲ್ಲಿ ಬಹುಶಃ ವಾರ್ಷಿಕ ಶಾಲಾ ಕಲಿಕೆಯಲ್ಲಿ ಪ್ರಕೃತಿಯೊಂದಿಗೆ ಮಕ್ಕಳ ಒಡನಾಟವನ್ನು ಎನ್ಎಸ್ಎಸ್ ಶಿಬಿರದ ರೀತಿಯಲ್ಲಿ ಹತ್ತು ದಿನಗಳ ಅವಶ್ಯಕ ತರಬೇತಿಯಾಗಿ ಮಾಡುವುದು ಅಗತ್ಯವೆಂದು ಅನಿಸುತ್ತದೆ. ಹೀಗೆ ತರಬೇತಿಯನ್ನು ಆಯೋಜಿಸುವಾಗ, ಸ್ವಚ್ಛತೆ- ಪರಿಸರ- ಆರೋಗ್ಯ ಈ ಮೂರು ಅಂಶಗಳನ್ನು ಪರಸ್ಪರ ಸಂಯೋಜನೆ ಮಾಡಿಕೊಳ್ಳಬೇಕು. ತನ್ನ ಆರೋಗ್ಯದ ಕಾಳಜಿ ಎಲ್ಲ ಮನುಷ್ಯರಿಗೂ ಇರುತ್ತದೆ. ಆಗ ತನ್ನ ಅಸ್ತಿತ್ವವು ಪರಿಸರದೊಂದಿಗೆ ಇದೆ ಎನ್ನುವ ಅರಿವು ಹುಟ್ಟಿದರೆ ಅದು ಮಗುವಿನ ರೂಢಿಯ ನಡವಳಿಕೆಯಲ್ಲಿ ಕಂಡುಬರಲು ಅವಕಾಶವಿದೆ. ಉದಾಹರಣೆಗೆ, ಸಸ್ಯಗಳು ಬದುಕಲು ಪ್ರಾಣಿಗಳು ವಿಸರ್ಜಿಸುವ ಇಂಗಾಲದ ಡೈ ಆಕ್ಸೈಡ್ ಬೇಕು.‌ ಸಸ್ಯಗಳು ವಿಸರ್ಜಿಸುವ ಆಮ್ಲಜನಕವು ಪ್ರಾಣಿಗಳು ಬದುಕಲು ಬೇಕು. ಈ ಅರಿವು ಮಗುವಿನಲ್ಲಿ ಬೆಳೆಯಬೇಕು. ಆಗ ಭೂಮಿಯನ್ನು ಉಳಿಸಿಕೊಳ್ಳುವ ಪ್ರಜ್ಞೆ ಜಾಗೃತವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT