ಬುಧವಾರ, ಫೆಬ್ರವರಿ 1, 2023
16 °C
ಇತ್ತೀಚಿನ ದಶಕಗಳಲ್ಲೇ ಚೀನಾ ಕಂಡ ಅತಿದೊಡ್ಡ ಪ್ರತಿಭಟನೆ

ವಿಶ್ಲೇಷಣೆ | ದಮನ, ಕಣ್ಗಾವಲಿನ ‘ಅಸ್ತ್ರ’ ಹಿಡಿದು...

ಕ್ರಿಸ್‌ ಬಕ್ಲಿ Updated:

ಅಕ್ಷರ ಗಾತ್ರ : | |

ಚೀನಾ, ಈಗ ತನ್ನಲ್ಲಿ ನಡೆದಿರುವಂತಹ ಬಲು ದಿಟ್ಟ ಹಾಗೂ ವ್ಯಾಪಕ ಪ್ರತಿಭಟನೆಗಳಿಗೆ ಇತ್ತೀಚಿನ ದಶಕಗಳಲ್ಲಿ ಒಮ್ಮೆಯೂ ಸಾಕ್ಷಿಯಾಗಿರಲಿಲ್ಲ. ಈ ಪ್ರತಿಭಟನೆ ಗಳನ್ನು ಹತ್ತಿಕ್ಕಲು ಅಧ್ಯಕ್ಷ, ಕಮ್ಯುನಿಸ್ಟ್‌ ಪಕ್ಷದ ನೇತಾರ ಷಿ ಜಿನ್‌ಪಿಂಗ್‌ ಹೊಸ ಭದ್ರತಾ ವ್ಯವಸ್ಥೆಯೊಂದನ್ನು ಸನ್ನದ್ಧ ಗೊಳಿಸಿದ್ದಾರೆ. ಆದರೆ, ದಶಕಗಳಷ್ಟು ಹಳೆಯದಾದ ದಮನ ಮತ್ತು ಕಣ್ಗಾವಲು ಎಂಬ ‘ಅಸ್ತ್ರ’ಗಳನ್ನೇ ಅವರು ಈ ಹೊಸ ವ್ಯವಸ್ಥೆಯಲ್ಲೂ ಗುರಾಣಿಗಳನ್ನಾಗಿ ಮಾಡಿ ಕೊಂಡಿದ್ದಾರೆ.


ಕ್ರಿಸ್‌ ಬಕ್ಲಿ

‘ಸಾಮಾಜಿಕ ಸುವ್ಯವಸ್ಥೆಗೆ ಧಕ್ಕೆ ತರುವ ಕಾನೂನು ಬಾಹಿರ ಮತ್ತು ಕ್ರಿಮಿನಲ್‌ ಕೃತ್ಯಗಳನ್ನು ನಿರ್ದಾಕ್ಷಿಣ್ಯ ವಾಗಿ ಹತ್ತಿಕ್ಕಬೇಕು’ ಎಂದು ಭದ್ರತಾ ಮುಖ್ಯಸ್ಥರ ಸಭೆಯಲ್ಲಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿರುವ ಕುರಿತು ಸರ್ಕಾರಿ ಮಾಧ್ಯಮದಲ್ಲಿ ಮಂಗಳವಾರ ವರದಿ ಯಾಯಿತು. ಮತ್ತು ಅದೇ ದಿನ ಸಂಜೆಯ ಹೊತ್ತಿಗೆ
ಪ್ರತಿಭಟನೆಗಳು ಗಾತ್ರದಲ್ಲಿ ಚಿಕ್ಕದಾಗಿರುವಂತೆ ಹಾಗೂ ಚದುರಿ ಹೋಗುತ್ತಿರುವಂತೆ ಗೋಚರಿಸಿದವು. ಪ್ರತಿಭಟನಾ ಸುದ್ದಿಗಳು ವ್ಯಾಪಕವಾಗಿ ಹರಡಲು ಕಾರಣವಾಗಿದ್ದ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಲಾಕ್‌ಡೌನ್‌ನಿಂದ ಬಾಧಿತವಾದ ನಿವಾಸಿಗಳ ಗುಂಪುಗಳು ತಮ್ಮನ್ನು ಮುಕ್ತಗೊಳಿಸುವಂತೆ ಆಗ್ರಹಿಸುತ್ತಿದ್ದವು.

ಅದೇ ಹೊತ್ತಿಗೆ, ಎಲ್ಲ ಹಿರಿಯ ವಯಸ್ಕರಿಗೆ ಲಸಿಕೆ ಹಾಕಲಾಗುವುದು ಎಂದೂ ಸರ್ಕಾರ ಘೋಷಣೆ ಮಾಡಿತು. ಜನರ ಆಕ್ರೋಶಕ್ಕೆ ಕಾರಣವಾಗಿರುವ ಅತ್ಯಂತ ಕಟ್ಟುನಿಟ್ಟಿನ ಕೋವಿಡ್‌–19 ನಿಯಂತ್ರಣ ನಿಯಮಾವಳಿಯನ್ನು ಸಡಿಲಗೊಳಿಸುವ ಸಂಕೇತವಾಗಿ ಈ ಘೋಷಣೆ ಕಂಡಿತು. ಭಿನ್ನ ಧ್ವನಿಯನ್ನು ಹತ್ತಿಕ್ಕುವ ಸ್ಪಷ್ಟ ಸಂದೇಶ ನೀಡುತ್ತಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಉತ್ಸುಕವಾಗಿದೆ ಎಂದೂ ಜನತೆಗೆ ಮನದಟ್ಟು ಮಾಡಲು ಯತ್ನಿಸಲಾಯಿತು.

ಭದ್ರತಾ ಸಿಬ್ಬಂದಿ ಮತ್ತು ಅವರ ವಾಹನಗಳು ಸಂಭಾವ್ಯ ಪ್ರತಿಭಟನಾ ಸ್ಥಳಗಳನ್ನು ಆವರಿಸಿದರೆ, ನಿಷೇಧಿತ ಆ್ಯಪ್‌ಗಳನ್ನು ಬಳಕೆ ಮಾಡಿದ ಗುಮಾನಿ ಮೇಲೆ ಪೊಲೀಸ್‌ ಅಧಿಕಾರಿಗಳು ಕೆಲವು ನಿವಾಸಿಗಳ ಫೋನ್‌ಗಳನ್ನು ತಡಕಾಡಲು ಆರಂಭಿಸಿದರು. ಪ್ರತಿಭಟನೆ ನಡೆಸಲು ಹೋಗಬಹುದು ಎಂಬ ಅನುಮಾನ ಇರುವ ವ್ಯಕ್ತಿಗಳ ಮನೆಗಳಿಗೆ ಅಧಿಕಾರಿಗಳು ಹೋಗಿ ಎಚ್ಚರಿಕೆ ನೀಡತೊಡಗಿದರು. ಕೆಲವರನ್ನು ವಿಚಾರಣೆಗಾಗಿ ಕರೆ ದೊಯ್ದರು. ಹಾಗೆಯೇ ಸಾಮಾಜಿಕ ಜಾಲತಾಣಗಳ ಲ್ಲಿದ್ದ ಪ್ರತಿಭಟನಾ ಸಂಕೇತಗಳು ಹಾಗೂ ಘೋಷಣೆಗಳ
ನ್ನೆಲ್ಲ ತೆಗೆದುಹಾಕಿದರು. ತಮ್ಮ ಪಾರಮ್ಯವನ್ನು ಇನ್ನಷ್ಟು ಗಟ್ಟಿಯಾಗಿ ಬೇರೂರಿಸಬೇಕು ಎಂಬ ಹಂಬಲದಲ್ಲಿ ಷಿ ಅವರೇ ರೂಪಿಸಿದ ತಂತ್ರಗಾರಿಕೆ ಇದಾಗಿದೆ. ಪೊಲೀಸ್‌ ಬಲ ಹೆಚ್ಚಿಸಿರುವ ಅವರು, ಆಯಕಟ್ಟಿನ ಜಾಗಗಳಲ್ಲಿ ನಂಬಿಕಸ್ಥರನ್ನೇ ತುಂಬಿದ್ದಾರೆ. ‘ರಾಜಕೀಯ ಭದ್ರತೆಯೇ– ತಮಗೆ ಮತ್ತು ತಮ್ಮ ಪಕ್ಷಕ್ಕೆ– ರಾಷ್ಟ್ರೀಯ ಭದ್ರತೆಗೆ ತಳಹದಿಯಾಗಿದೆ’ ಎಂದೂ ಘೋಷಿಸಿದ್ದಾರೆ.

ಬೀದಿಗಳಿಗೆ ಪೊಲೀಸರನ್ನು ನುಗ್ಗಿಸಲಾಗಿದ್ದರೂ ವ್ಯಾಪಾರ ವಹಿವಾಟು ಅಬಾಧಿತವಾಗಿ ನಡೆಯಲಿದೆ ಎಂದು ಷಿ ಲೆಕ್ಕಹಾಕಿದ್ದಾರೆ. ತಮ್ಮ ಆಡಳಿತಕ್ಕೆ ಬಲು ಅಪರೂಪ ಎನ್ನುವಂತಹ ಬಹಿರಂಗ ಸವಾಲು ಎದುರಾ ದರೂ– ಅಷ್ಟೇ ಅಲ್ಲ, ತಾವು ಅಧಿಕಾರದಿಂದಲೇ ಕೆಳ ಗಿಳಿಯಬೇಕು ಎನ್ನುವ ಒತ್ತಾಯ ಕೇಳಿಬಂದರೂ– ಏನೂ ಹೇಳದೆ ಮೌನವಾಗಿಯೇ ಇದ್ದಾರೆ. ಬಾಹ್ಯವಾಗಿ ಅವರು ಪ್ರತಿಭಟನಕಾರರನ್ನು ಸಂಪೂರ್ಣ ಅಲಕ್ಷಿಸಲು ಪಣ
ತೊಟ್ಟವರಂತೆ ಕಾಣುತ್ತಿದ್ದಾರೆ. ಭದ್ರತಾ ಪಡೆಗಳು ಪ್ರತಿಭಟನಕಾರರ ಮೇಲೆ ಮುಗಿಬಿದ್ದಿರುವುದು ಮತ್ತು ಪಕ್ಷದ ‘ಆನ್‌ಲೈನ್‌ ಸೇನೆ’ಯು ಪ್ರತಿಭಟನಕಾರರನ್ನು ಅಮೆರಿಕ ನೇತೃತ್ವದ ವಿಧ್ವಂಸಕ ಶಕ್ತಿಗಳ ಕೈಗೊಂಬೆಗಳು ಎಂದು ಮೂದಲಿಸುತ್ತಿರುವುದು ಷಿ ಅವರ ಆಕ್ರೋಶ ವನ್ನು ತಣಿಸಿರಬಹುದು.

‘ಅವರು ಎಷ್ಟು ಸಾಧ್ಯವೋ ಅಷ್ಟು ದೀರ್ಘ ಸಮಯದವರೆಗೆ, ಎಷ್ಟು ಸಾಧ್ಯವೋ ಅಷ್ಟು ಕಡಿಮೆ
ವಿಷಯವನ್ನಷ್ಟೇ ಹೇಳಲು ಯತ್ನಿಸುತ್ತಿರುತ್ತಾರೆ’ ಎಂದು ಚೀನಾದ ರಾಜಕೀಯ ಮತ್ತು ಪ್ರತಿಭಟನೆಗಳ ಇತಿಹಾಸದ ಕುರಿತು ಅಧ್ಯಯನ ನಡೆಸಿರುವ ಕೇಂಬ್ರಿಜ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿಲಿಯಂ ಹರ್ಸ್ಟ್‌ ಹೇಳುತ್ತಾರೆ. ‘ಅವರೊಂದು ವೇಳೆ ಮಾತನಾಡಿದರೆ ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತೆ ಆಗಬಹುದು. ಆದ್ದರಿಂದ ಏನೂ ಆಗಿಯೇ ಇಲ್ಲ ಎನ್ನುವಂತೆ ನಟಿಸುವುದೇ ಅವರಿಗೆ ಉತ್ತಮ ದಾರಿಯಾಗಿ ಕಂಡಿದೆ’ ಎಂದು ವಿಶ್ಲೇಷಿಸುತ್ತಾರೆ. ಕಮ್ಯುನಿಸ್ಟ್‌ ಪಕ್ಷದ ಮುಖವಾಣಿಯಾದ ‘ದಿ ಪೀಪಲ್ಸ್‌ ಡೇಲಿ’ ಪತ್ರಿಕೆಯು ಮಂಗೋಲಿಯಾ ಅಧ್ಯಕ್ಷ ಮತ್ತು ಷಿ ಅವರ ನಡುವಿನ ಮಾತುಕತೆ ವಿವರವನ್ನು ಮಂಗಳವಾರ ಮುಖಪುಟದಲ್ಲಿ ದೊಡ್ಡದಾಗಿ ಪ್ರಕಟಿ ಸಿದೆ. ಷಿ ಅವರು ಅಧಿಕಾರದ ಗದ್ದುಗೆಗೇರಿ ಹತ್ತು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ನಡೆದ ಸಂಭ್ರಮಾಚರಣೆ ಸುದ್ದಿಯೂ ಪ್ರಮುಖ ಸ್ಥಾನ ಪಡೆದಿದೆ. ಆದರೆ, ಪ್ರತಿಭಟನೆಯ ಕುರಿತು ಒಂದೇ ಒಂದು ಪದವನ್ನೂ ಬರೆಯಲಾಗಿಲ್ಲ. 1989ರಲ್ಲಿ ಟಿಯನಾನ್ಮೆನ್‌ ಸ್ಕ್ವೇರ್‌ನಲ್ಲಿ ಪ್ರಜಾಪ್ರಭುತ್ವ ಪರವಾಗಿ ನಡೆದಿದ್ದ ಪ್ರತಿಭಟನೆಯ ಬಳಿಕ ಚೀನಾ ಇಂತಹ ವ್ಯಾಪಕ ಪ್ರತಿಭಟನೆಗೆ
ಸಾಕ್ಷಿಯಾಗಿರಲಿಲ್ಲ.

ಬೀಜಿಂಗ್‌ನ ಸರ್ಪಗಾವಲಿನ ನಡುವಿರುವ ಪಕ್ಷದ ಕಚೇರಿಯಲ್ಲಿ ಕುಳಿತು ಷಿ ಮತ್ತು ಅವರ ಸಲಹೆಗಾರರೇ ಪ್ರತಿಭಟನೆಗಳನ್ನು ನಿಭಾಯಿಸುತ್ತಿರುವುದರಲ್ಲಿ ಯಾವ ಅನುಮಾನವೂ ಇಲ್ಲ. 1989ರ ಪ್ರತಿಭಟನೆಗಳ ಬಳಿಕ ಚೀನಿ ನಾಯಕರಿಗೆ ಆಡಳಿತವಿರೋಧಿ ಸಾಮಾಜಿಕ ಚಳವಳಿಗಳ ಅಪಾಯದ ಅರಿವು ಚೆನ್ನಾಗಿದೆ. ಹೀಗಾಗಿ ಮತ್ತೊಂದು ರಕ್ತಸಿಕ್ತ ದಮನಕ್ಕೆ ಮುಂದಾಗುವಂತಹ ಅಪಾಯ ತಂದುಕೊಳ್ಳುವ ಬದಲು ಮೊಗ್ಗಿನಲ್ಲೇ
ಪ್ರತಿಭಟನೆಯನ್ನು ಚಿವುಟಿ ಹಾಕಲು ನಿರ್ಧರಿಸಿದ್ದಾರೆ.

ಸಾರ್ವಜನಿಕರ ಆಕ್ರೋಶ ಹೀಗೆ ಸಂಘಟಿತವಾಗಿ ಮೊದಲು ವ್ಯಕ್ತವಾಗಿದ್ದು ಚೀನಾದ ಪಶ್ಚಿಮ ಭಾಗದಲ್ಲಿ ರುವ ಉರಮ್‌ಕಿ ಎಂಬ ನಗರದಲ್ಲಿ. ಆ ನಗರದ ಅಪಾರ್ಟ್‌ಮೆಂಟ್‌ ಒಂದರಲ್ಲಿ ಸಂಭವಿಸಿದ ಅಗ್ನಿ ಅವ ಘಡದಲ್ಲಿ ಹತ್ತು ಜನ ಸಾವನ್ನಪ್ಪಿದ ಮೇಲೆ ಈ ಆಕ್ರೋಶ ಭುಗಿಲೆದ್ದಿತ್ತು. ಸಾಂಕ್ರಾಮಿಕದ ಕಾರಣದಿಂದ ವಿಧಿಸಲಾದ ನಿರ್ಬಂಧಗಳಿಂದಾಗಿ ನಿವಾಸಿಗಳು ಅಪಾರ್ಟ್‌ಮೆಂಟ್‌ ನಲ್ಲೇ ಬಲವಂತವಾಗಿ ಉಳಿಯುವಂತಾಗಿ ಈ ಸಾವುಗಳು ಸಂಭವಿಸಿದವು ಎಂಬುದು ಜನರ ದೂರು. ಈ ಸಂಬಂಧದ ಪ್ರತಿಭಟನೆಗಳು ಬರುಬರುತ್ತಾ ಚೀನಾದ ಸಾಂಕ್ರಾಮಿಕ ತಡೆಗಟ್ಟುವ ನೀತಿಗಳನ್ನೇ ಖಂಡಿಸುವ ವೇದಿಕೆಗಳಾದವು. ಪ್ರಜಾಪ್ರಭುತ್ವಕ್ಕಾಗಿ ಆಗ್ರಹ ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಬೇಡಿಕೆ ಢಾಳಾಗಿ ಕೇಳಿಬಂದಿದ್ದು ದೇಶದ ಸರ್ವಾಧಿಕಾರಿಗಳಿಗೆ ಅಪಥ್ಯವಾಗುವಂತೆ ಆಯಿತು. ಹೀಗಾಗಿ ಈ ವಾರ, ಭದ್ರತಾ ಪಡೆಗಳ ಬಲ ಇನ್ನೂ ಹೆಚ್ಚಿದ್ದು, ಹೊಸದಾಗಿ ಪ್ರತಿಭಟನೆ ನಡೆಸುವುದು ಕಠಿಣ ಮತ್ತು ಅಪಾಯಕಾರಿ ಎನ್ನುವಂತಹ ಸನ್ನಿವೇಶ ನಿರ್ಮಾಣವಾಗಿದೆ.

ಕೋವಿಡ್‌–19 ತಡೆಗಟ್ಟಲು ಚೀನಾ ವಿಧಿಸಿರುವ 20 ಅಂಶಗಳ ನಿರ್ಬಂಧಗಳಿಗೆ ಸಂಬಂಧಿಸಿದ ಜನರ ಅಹವಾಲುಗಳನ್ನು (ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ, ಮಕ್ಕಳನ್ನು ಶಾಲೆಗೆ ಕಳಿಸಲು ಆಗುತ್ತಿಲ್ಲ, ನಿತ್ಯದ ಬದುಕು ದುಸ್ತರ...) ಅಧಿಕಾರಿಗಳು ಸಮಾಧಾನದಿಂದ ಆಲಿಸಿ, ಸಮಾಧಾನ ಹೇಳುವ ಯತ್ನವನ್ನೂ ಮಾಡುತ್ತಿ ದ್ದಾರೆ. ವಾರಾಂತ್ಯದಲ್ಲಿ ಪ್ರತಿಭಟನೆಗಳು ಹೆಚ್ಚುತ್ತಿರುವುದ ರಿಂದ ಚೀನಾದಾದ್ಯಂತ ಸ್ಥಳೀಯ ಆಡಳಿತಗಳು ನಿವಾಸಿ ಗಳನ್ನು ಮನೆಯಲ್ಲೇ ಕೂಡಿಹಾಕುವುದಿಲ್ಲ ಎಂದು ಭರವಸೆ ನೀಡಿವೆ. ಸರ್ಕಾರಿ ಮಾಧ್ಯಮದಲ್ಲಿ ಪ್ರಕಟಿಸಲಾದ ಲೇಖನವೊಂದರಲ್ಲಿ, ತೀವ್ರ ನಿರಾಸೆಯಲ್ಲಿರುವ ಜನರ ಕುರಿತು ಅಧಿಕಾರಿಗಳು ಸಹಾನುಭೂತಿ ತೋರಬೇಕು ಎಂದು ಅಭಿಪ್ರಾಯಪಡಲಾಗಿದೆ. ಜನರ ಆಕ್ರೋಶವನ್ನು ಹೀಗೂ ತಣಿಸುವ ಯತ್ನ ನಡೆದಿದೆ.

ಚೀನಾದಲ್ಲಿ ಇಂತಹ ಪ್ರತಿಭಟನೆಗಳು ಪ್ರಭುತ್ವ ವಿರೋಧಿ ಎಂದೇ ಪರಿಗಣಿತ. ಆದರೆ, ಅಧಿಕಾರಸ್ಥರು ಇವುಗಳನ್ನು ತೀವ್ರವಾಗಿ ದಮನಿಸುವ ಕಾರ್ಯಕ್ಕೆ ಇಳಿದಿಲ್ಲ. ಹಾಗೆಂದು ಪ್ರತಿಭಟನಕಾರರ ಬಗ್ಗೆ ಸರ್ಕಾರ ಮೃದು ಧೋರಣೆ ತಾಳಿದೆ ಎಂದಲ್ಲ. ನೇರವಾಗಿ ಮಾತನಾಡದೆ ತನ್ನ ಅನುಯಾಯಿಗಳನ್ನು ದಾಳ ಮಾಡಿಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಭಟನಕಾರರ ಮೇಲೆ ದಾಳಿ ಮಾಡುತ್ತಿದೆ. ಚೀನಾ ದಲ್ಲಿ 20 ಲಕ್ಷ ಪೊಲೀಸ್‌ ಅಧಿಕಾರಿಗಳಿದ್ದಾರೆ. ಆದರೆ, ಪ್ರತಿಭಟನೆಗಳನ್ನು ಹತ್ತಿಕ್ಕಲು ಇನ್ನೂ ಹತ್ತು ಲಕ್ಷ ಜನರಿಗೆ ಸಶಸ್ತ್ರ ತರಬೇತಿ ಕೊಟ್ಟು ‘ಹೆಚ್ಚುವರಿ ಸಿಬ್ಬಂದಿ’ಯನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಎಲ್ಲದಕ್ಕಿಂತ ದೊಡ್ಡದಾಗಿ ಚೀನಾ ಸೇನೆಯೂ ಪ್ರತಿಭಟನಕಾರರ ಧ್ವನಿ ಅಡಗಿಸಲು ಸಿದ್ಧವಾಗಿಯೇ ಇದೆ.

ದಿ ನ್ಯೂಯಾರ್ಕ್‌ ಟೈಮ್ಸ್‌

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು