ಶನಿವಾರ, ಜೂನ್ 6, 2020
27 °C
ಶತಮಾನಗಳಿಂದಲೂ ಸಾವು ಮನುಷ್ಯನ ಪಕ್ಕದಲ್ಲೇ ಹೆಜ್ಜೆ ಹಾಕುತ್ತಾ ಬಂದಿದೆ

ಪ್ರತಿಯೊಬ್ಬರಲ್ಲೂ ಒಂದು ಕೊರೊನಾ!

ಬಿ.ಎಂ.ಹನೀಫ್‌ Updated:

ಅಕ್ಷರ ಗಾತ್ರ : | |

Prajavani

ಆಸ್ಪತ್ರೆಯಲ್ಲಿ ಆಪರೇಷನ್‌ ಮುಗಿಸಿ ಹೊರಬರುವಾಗ ಡಾಕ್ಟರ್ ಬರ್ನಾರ್ಡ್‌ ರೀವ್‌ಗೆ ತನ್ನ ಕಾಲ ಕೆಳಗೆ ಮೃದುವಾದದ್ದು ಏನೋ ತಾಕಿದಂತಾಯಿತು. ನೋಡಿದರೆ, ಸತ್ತುಬಿದ್ದಿದ್ದ ಇಲಿ! ನರ್ಸ್‌ ಕಡೆಗೆ ತಿರುಗಿದರೆ ‘ಆ ಬಿಲದಿಂದ ಹೊರಬೀಳುತ್ತಿವೆ ನೋಡಿ’ ಎಂದಳು. ಹೌದು, ಇಲಿಗಳು ಹೊರಬೀಳುತ್ತಿವೆ! ನಗರದ ರಸ್ತೆಯಲ್ಲೂ ಸತ್ತು ಬಿದ್ದ ಇಲಿ. ಬಾಯಿಯಿಂದ ರಕ್ತ ಕಾರಿತ್ತು. ಒಂದಿದ್ದದ್ದು ಮರುದಿನ ಹತ್ತಾಯಿತು, ಹತ್ತಿದ್ದದ್ದು ನೂರು, ನೂರಿದ್ದದ್ದು ಸಾವಿರ! ಎಲ್ಲ ಇಲಿಗಳ ಬಾಯಲ್ಲೂ ರಕ್ತ. ನಗರವಿಡೀ ಹಾಹಾಕಾರ. ಅಧಿಕಾರಿಗಳನ್ನು ಜನ ದೂರಿದರು. ಆರಂಭದಲ್ಲಿ, ‘ಇಲಿ ಸಾಯೋದೇನೂ ದೊಡ್ಡ ಸುದ್ದಿಯಲ್ಲ...’ ಎಂದುಕೊಂಡಿದ್ದ ಅಧಿಕಾರಿಗಳು ಚುರುಕಾದರು. ಸ್ವಚ್ಛತೆಗೆ ಸಮರೋಪಾದಿ ಕ್ರಮಗಳನ್ನು ಕೈಗೊಂಡರು. ಎಲ್ಲ ಇಲಿಗಳನ್ನೂ ಖಾಲಿ ಮಾಡಲಾಯಿತು. ಕೊನೆಗೊಂದು ದಿನ ಎಲ್ಲೂ ಇಲಿಗಳು ಕಾಣಿಸಲಿಲ್ಲ. ನಗರ ಸ್ವಚ್ಛವಾಯಿತೆಂದು ಜನ ನಿಟ್ಟುಸಿರುಬಿಟ್ಟರು. ಖುಷಿಯಿಂದ ಬೀದಿಗಿಳಿದು ಸಂಭ್ರಮಿಸಿದರು.

ಡಾಕ್ಟರ್‌ ರೀವ್‌ಗೆ ಅನುಮಾನವಿತ್ತು– ಇದು ಸಂಭ್ರಮಿಸುವ ಕಾಲವಲ್ಲ, ಇಲ್ಲಿಗೇ ನಿಲ್ಲುವುದಿಲ್ಲ! ಇಲಿಯಿಂದ ಸೋಂಕು ಮನುಷ್ಯನಿಗೆ ತಗಲುತ್ತದೆ ಎನ್ನುವ ಆತನ ಭಯ ನಿಜವಾಯಿತು. ಸೋಂಕು ಮನುಷ್ಯನಿಂದ ಮನುಷ್ಯನಿಗೆ ಹಬ್ಬತೊಡಗಿತು. ಒಂದೊಂದೇ ಹೆಣ ಬೀಳತೊಡಗಿದವು. ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿಯ ಓಡಾಟ. ಬೀದಿಗಳಲ್ಲಿ ಆಂಬುಲೆನ್ಸ್‌ಗಳ ಸೈರನ್‌. ನೋಡನೋಡುತ್ತಿದ್ದಂತೆಯೇ ನೂರಾರು ಜನರ ಸಾವು, ಆಕ್ರಂದನ, ಆಕ್ರೋಶ, ಕೆಲವೆಡೆ ದೊಂಬಿ. ಇಡೀ ನಗರವನ್ನು ಸೀಲ್‌ ಮಾಡಲಾಯಿತು. ಮಿಲಿಟರಿ ಬೀದಿಗಿಳಿಯಿತು. ಯಾರೂ ನಗರದಿಂದ ಹೊರ ಹೋಗುವಂತಿಲ್ಲ. ಧರ್ಮಗುರು ಪನಲೂ ಹೇಳುತ್ತಾನೆ– ‘ನೀವು ದೇವರನ್ನು ನಿರಾಕರಿಸಿದ್ದೀರಿ, ಅದಕ್ಕೇ ಈ ಶಿಕ್ಷೆ!’ ಆದರೆ ನಿಯಂತ್ರಣವು ಧರ್ಮಗುರುವಿನ ಕೈಯಲ್ಲೂ ಇರಲಿಲ್ಲ. ಆತನೂ ವೈದ್ಯರೊಡನೆ ಕೈಜೋಡಿಸುತ್ತಾನೆ. ಯಾರು ಯಾವತ್ತು ಸಾಯುತ್ತಾರೆಂದು ಯಾರಿಗೂ ಗೊತ್ತಿಲ್ಲ. ಇಡೀ ಒರಾನ್‌ ನಗರವನ್ನು ಅನೂಹ್ಯ ಭಯವೊಂದು ಆವರಿಸುತ್ತದೆ. ಅದು ಸಾವಿನ ಭಯ.

ಒರಾನ್‌ ಆಧುನಿಕ ನಗರ. ಅಲ್ಲಿ ಪತ್ರಿಕೆ, ಫೋನ್‌ಗಳಿದ್ದವು. ಟ್ರಾಮ್, ಏರೋಪ್ಲೇನ್‌ಗಳಿದ್ದವು. ಬಡವರಂತೆಯೇ ಶ್ರೀಮಂತರೂ ಇದ್ದರು. ಆದರೆ ಸಾವು ಯಾವ ಭೇದಭಾವವನ್ನೂ ಮಾಡಲಿಲ್ಲ.

ಡಾಕ್ಟರ್‌ ರೀವ್‌ ಹೇಳುತ್ತಾನೆ– ‘ಯಾವ ಶಿಕ್ಷೆಯೂ ಅಲ್ಲ. ಎಳೆಯರೂ ಸಾಯುತ್ತಾರೆ, ಅತಿ ವೃದ್ಧರೂ. ದುಃಖದ ಸಮಾನ ಹಂಚಿಕೆ. ಸಾವು ನಿಜಕ್ಕೂ ಕರುಣಾಮಯಿ’. ಆತ ವೈರಾಣು ಮಹಾಮಾರಿಗಳ ಬಗ್ಗೆ ಅಧ್ಯಯನ ಮಾಡುತ್ತಾನೆ. 14ನೇ ಶತಮಾನದಲ್ಲಿ ಯುರೋಪ್‌ನಲ್ಲಿ 5 ಕೋಟಿ ಜನರನ್ನು ಸಾಯಿಸಿದ ಬ್ಲ್ಯಾಕ್‌ ಡೆತ್‌. 1629ರಲ್ಲಿ ಇಟಲಿಯಲ್ಲಿ 2.80 ಲಕ್ಷ ಜನರನ್ನು ಗುಡಿಸಿಹಾಕಿದ ಪ್ಲೇಗ್‌. 1665ರಲ್ಲಿ ಲಂಡನ್ನಿನಲ್ಲಿ  ಕಂಡ ಪ್ಲೇಗ್‌. 18–19ನೇ ಶತಮಾನದಲ್ಲಿ ಚೀನಾದ ಪೂರ್ವ ತೀರದಲ್ಲಿದ್ದ ಮಹಾಮಾರಿ.

–ಇದು ಆಲ್ಬರ್ಟ್‌ ಕಮು 28ರ ಹರೆಯದಲ್ಲಿ ಬರೆದ ಕಾದಂಬರಿ ‘ಲ ಪೆಸ್ಟ್‌’ (ದಿ ಪ್ಲೇಗ್‌). 20ನೇ ಶತಮಾನದ ಉತ್ತರಾರ್ಧದ ಅತ್ಯುತ್ತಮ ಕಾದಂಬರಿ. ಇದೀಗ, ಕೊರೊನಾ ವೈರಸ್‌ ಹರಡಿದ ನಂತರ, ಕಳೆದ ವರ್ಷಕ್ಕಿಂತ ದುಪ್ಪಟ್ಟು ಮಾರಾಟ ಕಂಡಿದೆ ಈ ಕೃತಿ! ಬದುಕಿನ ಅಸಂಗತತೆಯ ಬಗ್ಗೆ, ಬದುಕು ಚಿರಾಯು ಎನ್ನುವ ಭ್ರಮೆಯಲ್ಲಿ ಉಕ್ಕುವ ಸಂತೋಷದ ಬಗ್ಗೆ ಕಮು ಬರೆಯುತ್ತಾರೆ.  

ಯುದ್ಧ ಮತ್ತು ಪ್ಲೇಗ್‌ ಎರಡೂ ಅನಿರೀಕ್ಷಿತವಾಗಿಯೇ ಶುರುವಾಗುತ್ತವೆ. ಯುದ್ಧ ಶುರುವಾದಾಗ ಜನ ‘ಇದೇನೂ ಹೆಚ್ಚು ದಿನ ನಡೆಯಲ್ಲ ಬಿಡಿ’ ಅನ್ನುತ್ತಾರೆ. ಏಕೆಂದರೆ ಜನರಲ್ಲಿ, ನಮಗೆ ಎಲ್ಲವೂ ಸಾಧ್ಯ ಎಂಬ ಅಸಾಧ್ಯ ನಂಬಿಕೆಯೊಂದಿರುತ್ತದೆ. ಆದರೆ ಪ್ಲೇಗ್‌ ಇರಲಿ, ಇಲ್ಲದಿರಲಿ, ಆಳದಲ್ಲಿ ಸಾವು ಕಾಯುತ್ತಿದೆ. ಸಾವು ಕೂಡಾ ಅರ್ಥಹೀನ ಎನ್ನುವುದು ಕಮುಗೆ ಗೊತ್ತಿತ್ತು.

ಈ ಕಾದಂಬರಿಯನ್ನು ನಿರ್ದೇಶಕ ಲೂಯಿಸ್‌ ಫ್ಲುಯೆಂಜೊ 1992ರಲ್ಲಿ ಸಿನಿಮಾ ಮಾಡುತ್ತಾರೆ. ಡಾಕ್ಟರ್‌ ರೀವ್‌ನ ಪಾತ್ರದಲ್ಲಿ ವಿಲಿಯಂ ಹರ್ಟ್‌ ಮನಮುಟ್ಟುವಂತೆ ನಟಿಸುತ್ತಾರೆ. ಚಿತ್ರ ಜನಮೆಚ್ಚುಗೆಯನ್ನೇನೂ ಪಡೆಯುವುದಿಲ್ಲ. ವಿಮರ್ಶಕರು ‘ಚಿತ್ರವನ್ನು ಪೂರ್ತಿ ನೋಡುವುದರೊಳಗೆ ನಾವೂ ಇಂಜೆಕ್ಷನ್‌ ತೆಗೆದುಕೊಳ್ಳಬೇಕು’ ಎಂದು ಬರೆಯುತ್ತಾರೆ. 49ನೇ ವೆನಿಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡರೂ ಪ್ರಶಸ್ತಿ ಸಿಗುವುದಿಲ್ಲ. ಆದರೆ ಸಾವಿನ ಕುರಿತಾದ ಕಮು ಅವರ ವ್ಯಾಖ್ಯಾನದ ಚರ್ಚೆ ಈಗಲೂ ಮುಂದುವರಿದಿದೆ. ಸಿನಿಮಾದಲ್ಲಿ ಒಂದು ಪಾತ್ರ ಹೇಳುತ್ತದೆ– ಪ್ರತಿಯೊಬ್ಬನ ಒಳಗೂ ಒಂದು ಪ್ಲೇಗ್‌ ಇದೆ. ಜಗತ್ತಿನಲ್ಲಿ ಯಾರೊಬ್ಬರೂ ಯಾವತ್ತೂ ರೋಗನಿರೋಧಿ ಆಗಿರಲು ಸಾಧ್ಯವಿಲ್ಲ.

ಇದಕ್ಕೂ ಮುನ್ನ 1957ರಲ್ಲಿ ಬದುಕಿನ ಅಸಂಗತ ಮತ್ತು ಸಾವಿನ ನಿರರ್ಥಕತೆಯ ಬಗ್ಗೆ ಸ್ವೀಡನ್ನಿನ ವಿಶ್ವಖ್ಯಾತಿಯ ನಿರ್ದೇಶಕ ಇಂಗ್ಮರ್‌ ಬರ್ಗ್‌ಮನ್‌ ‘ದಿ ಸೆವೆಂಥ್‌ ಸೀಲ್‌’ ಎನ್ನುವ ಸಿನಿಮಾವೊಂದನ್ನು ಮಾಡಿದ್ದರು. ಅದು ಆತನ ‘ಮಾಸ್ಟರ್‌ಪೀಸ್‌’. ಅದರಲ್ಲಿ ಆರಂಭದಲ್ಲೇ ಒಂದು ದೃಶ್ಯ ಬರುತ್ತದೆ. ಯುದ್ಧ ಗೆದ್ದು ಕುದುರೆಯೇರಿ ಬಂದ ವೀರಯೋಧನೊಬ್ಬ ಸಾವಿನ ಜೊತೆಗೆ ನಡೆಸುವ ಮುಖಾಮುಖಿ.

ಜಗದೇಕವೀರ ರಾತ್ರಿಯಿಡೀ ಸಮುದ್ರತೀರದಲ್ಲಿ ಇನ್ನೊಬ್ಬ ಸೈನಿಕನೊಡನೆ ಚೆಸ್‌ ಆಡಿ ನಿದ್ದೆ ಹೋಗಿದ್ದ. ಬೆಳಿಗ್ಗೆ ಎದ್ದು ಮುಖ ತೊಳೆದು ಹೊರಡಲು ಸಿದ್ಧನಾಗುತ್ತಾನೆ. ಚೀಲದೊಳಕ್ಕೆ ಎಲ್ಲ ತುಂಬಿಸಿ ಕುದುರೆಯತ್ತ ನೋಡಿದರೆ, ಎದುರಿಗೇ ಒಂದು ನೀಳಕಾಯ! ಅಡಿಯಿಂದ ಮುಡಿಯವರೆಗೂ ಕಪ್ಪು ನಿಲುವಂಗಿ. ವೀರಸೇನಾನಿ ಪ್ರಶ್ನಿಸುತ್ತಾನೆ– ಯಾರು ನೀನು?

‘ನಾನು ಸಾವು’. ‌

‘ನನ್ನನ್ನು ಕರೆದೊಯ್ಯಲು ಬಂದಿದ್ದೀಯಾ?’

‘ಎಷ್ಟೋ ದೂರದಿಂದ ನಿನ್ನ ಪಕ್ಕದಲ್ಲೇ ನಡೆದು ಬಂದಿದ್ದೇನೆ’.

‘ಅದು ನನಗೂ ಗೊತ್ತಿದೆ’.

‘ಸಿದ್ಧನಾಗಿದ್ದೀಯಾ?’

‘ನನ್ನ ದೇಹ ಸಿದ್ಧವಿದೆ, ನಾನಲ್ಲ...’

ಸಾವು ವಿಶಾಲ ಬಲಗೈಯನ್ನು ಚಾಚುತ್ತದೆ. ‘ಒಂದು ಕ್ಷಣ ನಿಲ್ಲು’ ಎನ್ನುತ್ತಾನೆ ವೀರಯೋಧ. ‘ಬಿಡುವು ಕೊಡಲಾರೆ’ ಎನ್ನುತ್ತದೆ ಸಾವು. ‘ನೀನು ಚೆಸ್‌ ಆಡುತ್ತೀ ಅಲ್ವಾ’ ಎಂದು ಪ್ರಶ್ನಿಸುತ್ತಾನೆ ಸೈನಿಕ.

‘ನಿನಗೆ ಹೇಗೆ ಗೊತ್ತಾಯ್ತು?’

‘ಚಿತ್ರಕಲೆಗಳಲ್ಲಿ, ಜನಪದ ಕಥೆಗಳಲ್ಲಿ ಓದಿದ್ದೆ. ನಾನು ಅತ್ಯಂತ ಸಮರ್ಥ ಚೆಸ್‌ ಆಟಗಾರ...’ ಎಂದ ಸೈನಿಕ. ‘ನನಗಿಂತ ಸಮರ್ಥ ಅಲ್ಲ’ ಎಂದಿತು ಸಾವು. ‘ನನ್ನ ಜೊತೆ ಚೆಸ್‌ ಆಡ್ತೀಯಾ...’ ಸವಾಲೆಸೆದ ಸೈನಿಕ. 

‘ಸರಿ, ಕುಳಿತುಕೋ’. ಸೈನಿಕನೂ ರೆಡಿ. ‘ಆದರೆ ಒಂದು ಷರತ್ತು. ಎಲ್ಲಿಯವರೆಗೆ ಆಟದಲ್ಲಿ ನಿನ್ನನ್ನು ತಡೆದು ನಿಲ್ಲಿಸುತ್ತೇನೋ... ಅಲ್ಲಿಯವರೆಗೆ ನೀನು ನನ್ನನ್ನು ಮುಟ್ಟುವಂತಿಲ್ಲ. ಆಟದಲ್ಲಿ ನಾನು ಗೆದ್ದರೆ ನನ್ನನ್ನು ಬಿಟ್ಟುಬಿಡಬೇಕು...’ ಎನ್ನುತ್ತಾನೆ ಸೈನಿಕ.

ಎಂದೋ ಶುರುವಾದ ಸಾವಿನ ಚದುರಂಗದ ಆಟ ಇಂದೂ ನಿಂತಿಲ್ಲ. ಸಾಂಕ್ರಾಮಿಕ ಮಹಾಮಾರಿ ಸದ್ದಿಲ್ಲದೆ ಮನುಕುಲದ ಜೊತೆಜೊತೆಗೇ ಹೆಜ್ಜೆ ಹಾಕಿಕೊಂಡು ಬಂದಿದೆ. ಒಮ್ಮೆ ಪ್ಲೇಗ್‌, ಇನ್ನೊಮ್ಮೆ ಕ್ಷಯ, ಮತ್ತೊಮ್ಮೆ ಸಾರ್ಸ್‌, ಮಗದೊಮ್ಮೆ ಕೊರೊನಾ. ಮನುಷ್ಯರು ಪರಸ್ಪರ ಕೈಕುಲುಕಲೂ ಸಿದ್ಧವಿಲ್ಲದ ಈ ಸಮಯ. ಒಂದೆಡೆ, ನಿಸ್ಪೃಹ ವೈದ್ಯಲೋಕ, ದಾದಿಯರು ಮತ್ತು ಸಫಾಯಿ ಕರ್ಮಚಾರಿಗಳು ಮಹಾಮಾರಿಯ ವಿರುದ್ಧ ಬೀದಿಗಿಳಿದು ಸೆಣಸುತ್ತಿದ್ದಾರೆ. ಇನ್ನೊಂದೆಡೆ, ರಾಜಕಾರಣಿಗಳು ಜಾತಿ, ಧರ್ಮಗಳ ಹೆಸರೆತ್ತಿ ಕೆಸರೆರಚಾಟದಲ್ಲಿ ಮುಳುಗಿದ್ದಾರೆ. ‘ಅವರಿಗೆ ಗುಂಡಿಕ್ಕಿ, ಇವರನ್ನು ಕೊಲ್ಲಿ’ ಎಂದು ಅಬ್ಬರಿಸುತ್ತಿದ್ದಾರೆ.

ಕಮು ಹೇಳಿದ್ದು ಎಷ್ಟೊಂದು ಸತ್ಯ! ‘ಪ್ರತಿಯೊಬ್ಬನ ಒಳಗೂ ಒಂದು ಕೊರೊನಾ ಇದೆ!’

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು