ಬುಧವಾರ, ಜೂನ್ 3, 2020
27 °C

ಜನರೇ ಜನತಂತ್ರದ ನಿಜ ಕಾವಲುಗಾರರು

ಡಿ. ಉಮಾಪತಿ Updated:

ಅಕ್ಷರ ಗಾತ್ರ : | |

‘ನಿಮ್ಮ (ಜನರ) ಕಾವಲುಗಾರನಾಗಿ ದೇಶವನ್ನು ಮತ್ತು ಅದರ ಸಂಪತ್ತನ್ನು ಕಾಯುತ್ತೇನೆ’ ಎಂಬುದು ನರೇಂದ್ರ ಮೋದಿಯವರ ಐದು ವರ್ಷಗಳಷ್ಟು ಹಳೆಯ ಮಾತು. ಅವರು ಪ್ರಸ್ತಾಪಿಸಿರುವ ಈ ಸಂಪತ್ತಿನಲ್ಲಿ ಅರಣ್ಯ ಮತ್ತು ಖನಿಜ ಸಂಪತ್ತು ಸೇರಿಲ್ಲ ಎಂಬುದು ವಿಷಾದದ ಸಂಗತಿ. ಅದೇನೇ ಇರಲಿ, ಅಂದಿನ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಈ ಹೊಸ ನುಡಿಗಟ್ಟು ಜನಮನ ನಾಟಿದ್ದು ಹೌದು. ಅವರು ಜತನದಿಂದ ಕಟ್ಟಿಕೊಂಡಿದ್ದ ಈ ಹಾಲುಬೆಳಕಿನ ಪ್ರಭಾವಳಿಗೆ ಅಲ್ಲಲ್ಲಿ ಮಸಿ ಮೆತ್ತಿಕೊಂಡ ಪ್ರಕರಣಗಳು ದಿನಗಳೆದಂತೆ ಘಟಿಸಿದವು. ವಿಶೇಷವಾಗಿ, ರಫೇಲ್ ಯುದ್ಧವಿಮಾನ ಖರೀದಿ ವ್ಯವಹಾರ ಏನೋ ಯಡವಟ್ಟಾಗಿದೆ ಎಂಬ ಗುಮಾನಿಯನ್ನು ಉಳಿಸಿಬಿಟ್ಟಿತು. ಚೌಕೀದಾರನೇ ಚೋರ (ಕಾವಲುಗಾರನೇಕಳ್ಳ) ಎಂಬುದಾಗಿ ಕಾಂಗ್ರೆಸ್ ಪಕ್ಷ ಮಾಡಿದ ಟೀಕೆಯನ್ನು ಇತರೆ ವಿರೋಧ ಪಕ್ಷಗಳಿರಲಿ, ಬಿಜೆಪಿಯ ಮಿತ್ರಪಕ್ಷ ಶಿವಸೇನೆ ಕೂಡ ಪ್ರತಿಧ್ವನಿಸಿತು.

‘ಚೌಕೀದಾರ್ ಚೋರ್ ಹೈ’ ಘೋಷಣೆಯನ್ನು ರಾಹುಲ್ ಗಾಂಧಿ ಜನಸಮುದಾಯಗಳ ನಡುವೆ ಒಯ್ದರು. ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಪಾಕಿಸ್ತಾನಿ ಜಿಹಾದಿ ನೆಲೆಯ ಮೇಲೆ ಭಾರತದ ವಾಯುಸೇನೆಯ ದಾಳಿ, ಆನಂತರ ಕಟ್ಟಲಾದ ಹುಸಿ ದೇಶಭಕ್ತಿ- ಯುದ್ಧೋನ್ಮಾದದ ಕಥನವು ‘ಕಾವಲುಗಾರನೇ ಕಳ್ಳ’ ಎಂಬ ಕಥನಕ್ಕೆ ಗ್ರಹಣ ಹಿಡಿಸಿತ್ತು. ಗ್ರಹಣ ಸರಿದ ನಂತರ ಮತ್ತೆ ಅದೇ ಘೋಷಣೆ. ಚುನಾವಣೆ ಪ್ರಚಾರ ಸಮರದ ನಡುವೆ ಈ ಮುಜುಗರದಿಂದ ಮೋದಿ ತಪ್ಪಿಸಿಕೊಳ್ಳಬೇಕಿತ್ತು. ಈ ಅಗತ್ಯದಲ್ಲಿ ಹುಟ್ಟಿದ ಮತ್ತೊಂದು ಘೋಷಣಾ ಅಸ್ತ್ರ ಮೋದಿಯವರ ಚುನಾವಣಾ ಬತ್ತಳಿಕೆಯನ್ನು ಸೇರಿದೆ. ಅದು ಅವರ ಎಲ್ಲ ಬೆಂಬಲಿಗರಿಗೂ ಚೌಕೀದಾರರ ಸಮವಸ್ತ್ರ ತೊಡಿಸಿ, ಕೈಗೊಂದು ಬಡಿಗೆ ನೀಡುವುದು. ‘ನಾನೂ ಕಾವಲುಗಾರನೇ’ (ಮೈ ಭೀ ಚೌಕೀದಾರ್ ಹೂಂ) ಎಂಬ ಘೋಷಣೆ ಹುಟ್ಟಿಕೊಂಡ ಪರಿಯಿದು. ಅವರ ಸಂಪುಟದ ಎಲ್ಲ ಮಂತ್ರಿಗಳು, ಸಾಮಾಜಿಕ ಜಾಲತಾಣಗಳ ಸಮರವೀರರು, ಅಭಿಮಾನಿಗಳು, ಭಕ್ತರು, ಅಮಾ
ಯಕರು ತಮ್ಮ ಹೆಸರುಗಳ ಹಿಂದೆ ಚೌಕೀದಾರ್ ಪದ ಸೇರಿಸಿಕೊಂಡಿದ್ದಾರೆ.

ಬೆಟ್ಟದಂತೆ ಬೆಳೆದಿರುವ ನಿರುದ್ಯೋಗ ಸೇರಿದಂತೆ ದೇಶವನ್ನು ಬಾಧಿಸಿರುವ ಅಸಲಿ ಸಮಸ್ಯೆಗಳನ್ನು ಮೂಲೆಗುಂಪು ಮಾಡಿ ಜಾಣ ಮಾತುಗಳ ಜಾಲ ಹೆಣೆಯಲಾಗುತ್ತಿದೆ ಎಂಬುದು ವಿರೋಧ ಪಕ್ಷಗಳ ಆರೋಪ.

ಉತ್ತರಭಾರತದ ‘ಚೌಕೀದಾರ’ರು ದಕ್ಷಿಣದಲ್ಲಿ ‘ಸೆಕ್ಯೂರಿಟಿ ಗಾರ್ಡ್’ಗಳು. ನಾಲ್ಕೂವರೆ ಸಾವಿರ ರೂಪಾಯಿಯಿಂದ ಆರಂಭ ಆಗುವ ಅವರ ಮಾಸಿಕ ಸಂಬಳ ಹೆಚ್ಚೆಂದರೆ ಹನ್ನೆರಡು ಸಾವಿರ ರೂಪಾಯಿ ತನಕ ಹಿಗ್ಗೀತು. ಇದರಲ್ಲೇ ಹೆಂಡತಿ-ಮಕ್ಕಳು- ವಸತಿ– ಅನ್ನ- ಅಕ್ಷರ- ಆರೋಗ್ಯ- ಹಬ್ಬಹುಣ್ಣಿಮೆ- ಹುಟ್ಟು–ಸಾವು ಎಲ್ಲವೂ ನಡೆಯುವುದೊಂದು ಪವಾಡ! ಪವಾಡ ಕಾಣದ ಕುಟುಂಬಗಳು ಹೇಗೆಲ್ಲ ಕಾಣೆಯಾಗುತ್ತವೋ ಬಲ್ಲವರಾರು? ಅದನ್ನು ತಿಳಿಯುವ ವ್ಯವಧಾನವಾದರೂ ಯಾರಿಗುಂಟು?  ಹಗಲು- ರಾತ್ರಿಯ ಪರಿವೆ ಇಲ್ಲದೆ ಗೇಟು ಕಾಯುವವರ ವ್ಯಸನ- ದುಮ್ಮಾನಗಳನ್ನು ಹಂಚಿಕೊಳ್ಳುವುದು ಒತ್ತಟ್ಟಿಗಿರಲಿ, ವಸತಿ ಸಮುಚ್ಚಯಗಳು- ಕಚೇರಿಗಳ ಹೊರಗೆ ನಿತ್ಯ ಕಾಣುವ ಇವರ ಪೈಕಿ ಕೆಲವರ ಹೆಸರುಗಳನ್ನಾದರೂ ಬಲ್ಲ ನಿವಾಸಿಗಳು- ಉದ್ಯೋಗಿಗಳು ಎಷ್ಟು ಮಂದಿ ಇದ್ದಾರೆ? ಎದೆಮುಟ್ಟಿಕೊಂಡು ಉತ್ತರಿಸಲಿ. ‘ತಮ್ಮನ್ನು ಚೌಕೀದಾರನೆಂದು ಕರೆದುಕೊಳ್ಳುವಲ್ಲಿ ಮೋದಿಯವರಿಗೆ ಹೆಮ್ಮೆ ಎನಿಸಬಹುದು. ಆದರೆ ಈ ಚೌಕೀದಾರ ಬದುಕು ನನಗೆ ಬೇಕಿಲ್ಲ’ ಎಂಬ ನಿಜ ಚೌಕೀದಾರ ದನಿಗಳು ದೇಶದ ಮೂಲೆ ಮೂಲೆಗಳಿಂದ ಪ್ರತಿಧ್ವನಿಸಿವೆ.

ಚೌಕೀದಾರ ಪದವನ್ನು ಭ್ರಷ್ಟಾಚಾರದ ವಿರುದ್ಧದ ವಿಶಾಲಾರ್ಥದಲ್ಲೇ ಮೋದಿ ಬಳಸಿರಬಹುದು. ಆದರೆ ಇದು ಕೂಡ ಮತ ಗಳಿಕೆಗಷ್ಟೇ ಸೀಮಿತವಾಗುವ ಮತ್ತೊಂದು ತಂತ್ರವೆಂದು ಅನುಮಾನಿಸಲು ಕಾರಣಗಳಿವೆ. ಐದು ವರ್ಷಗಳಲ್ಲಿ ಅವರು ಚೌಕೀದಾರನ ಪಾತ್ರವನ್ನು ನಿರ್ವಹಿಸಿರುವ ವೈಖರಿಯನ್ನು ವಿಮರ್ಶಿಸಿದವರು ಈ ಅನುಮಾನಗಳಿಗೆ ಕನ್ನಡಿ ಹಿಡಿದಿದ್ದಾರೆ.

ನಮ್ಮ ಚುನಾವಣಾ ಜನತಂತ್ರವೇ ಒಂದು ಅಪೂರ್ಣ ವ್ಯವಸ್ಥೆ. ಐದು ವರ್ಷಕ್ಕೊಮ್ಮೆ ಮತದಾರನೇ ಮಹಾಪ್ರಭು. ಯಾವುದಾದರೊಂದು ಬಗೆಯಲ್ಲಿ ಅವನನ್ನು ಆ ಒಂದು ಸಲ ಯಾಮಾರಿಸಿಬಿಟ್ಟರೆ ಸಾಕು. ಐದು ವರ್ಷಗಳ ಕಾಲ ಅವನು ಅಸಹಾಯಕ ಮೂಕ. ಕಿಂದರಿಜೋಗಿಯ ಹಿಂದೆ ಓಡುವ ಮೂಷಿಕ ಸಮೂಹದ ಜನತಂತ್ರವನ್ನು ಈ ದೇಶ ಈ ಹಿಂದೆಯೂ ಕಂಡಿದೆ. ಇಂದಿರಾ ಗಾಂಧಿ ಅವರು ‘ಗರೀಬಿ ಹಠಾವೋ’ ಎಂಬ ಘೋಷಣೆಯ ಮಂಕುಬೂದಿ ಎರಚಿದ್ದು ಉಂಟು. ದೇಶವೆಂಬ ಮನೆಯ ಬೀಗದ ಕೈಯನ್ನು ವ್ಯಕ್ತಿಯೊಬ್ಬನ ಕೈಗಿಟ್ಟು, ಆತನನ್ನೇ ಅಥವಾ ಆಕೆಯನ್ನೇ ನಂಬಿ ನೆಚ್ಚಿ ಕಾವಲಿಗೆ ಇಟ್ಟು, ಇನ್ನು ನಮ್ಮ ಜವಾಬ್ದಾರಿ ತೀರಿತೆಂದು ಹಾಸಿ ಹೊದ್ದು ಮಲಗಿಬಿಡುವುದು ವ್ಯಾಧಿಗ್ರಸ್ತ ಜನತಂತ್ರದ ಲಕ್ಷಣ. ಅಭಿವೃದ್ಧಿಯ ಮುಖವಾಡ ತೊಟ್ಟ ಬಹುಸಂಖ್ಯಾತವಾದದ ಆರಾಧನೆ ಒಂದು ಸಮೂಹ ಸನ್ನಿ. ಈ ಸನ್ನಿಯಿಂದ ಜನಸಮೂಹಗಳನ್ನು ಎಚ್ಚರಿಸುವ ಚೈತನ್ಯವಾಗಲೀ- ಪರ್ಯಾಯ ಕಥನವಾಗಲೀ, ಏಕತೆಯ ಕಾರ್ಯಸೂಚಿಯಾಗಲೀ ವಿರೋಧ ಪಕ್ಷಗಳ ಬಳಿ ಇಲ್ಲ. ವಿರೋಧ ಪಕ್ಷಗಳಲ್ಲಿ ಅಂತಹ ಮಿಂಚಿನ ಸಂಚಾರ ಮೂಡಿಸುವ ಜಯಪ್ರಕಾಶ ನಾರಾಯಣ ಅವರಂತಹ ಧೀಮಂತರೂ ನಮ್ಮ ನಡುವೆ ಬದುಕಿಲ್ಲ.

ಜನತಂತ್ರ ಎಂಬ ಸಾವಯವ ಮೌಲ್ಯಯಂತ್ರವು ಕೆಡದಂತೆ ಜತನ ಮಾಡಬೇಕಿದ್ದರೆ ಪ್ರಜೆಗಳು ತಮ್ಮ ಸ್ವಾತಂತ್ರ್ಯವನ್ನು ಯಾವುದೇ ಮಹಾಪುರುಷನ ಪದತಲದಲ್ಲೂ ಇರಿಸಕೂಡದು... ಎಂಬುದು ಜಾನ್ ಸ್ಟೂವರ್ಟ್ ಮಿಲ್‌ನ ವಿವೇಕದ ಮಾತುಗಳು. ಬಿ.ಆರ್‌. ಅಂಬೇಡ್ಕರ್ ಈ ಮಾತುಗಳನ್ನು ಉಲ್ಲೇಖಿಸಿದ್ದಾರೆ. 1949ರ ನ. 25ರಂದು ಸಂವಿಧಾನ ರಚನಾ ಸಭೆಯಲ್ಲಿ ಮಾಡಿದ ಕಟ್ಟಕಡೆಯ ಭಾಷಣದಲ್ಲಿ ಅವರು ವ್ಯಕ್ತಿಪೂಜೆಯ ಅಪಾಯ ಮತ್ತು ಸಾಮಾಜಿಕ ಜನತಂತ್ರದ ಗುರಿಯೆಡೆಗೆ ಸಾಗಬೇಕಾದ ಅಗತ್ಯದ ಕುರಿತು ಆಡಿರುವ ಎಚ್ಚರದ ಮಾತುಗಳನ್ನು ಮತ್ತೆ ಮತ್ತೆ ನೆನೆಯಬೇಕಿದೆ.

‘...ದೇಶಕ್ಕಾಗಿ ಬದುಕನ್ನೇ ಸಮರ್ಪಿಸಿರುವ ಮಹಾಪುರುಷರಿಗೆ ಆಭಾರ ಸಲ್ಲಿಸುವುದು ತಪ್ಪಲ್ಲ. ಆದರೆ ಕೃತಜ್ಞತೆಗೂ ಒಂದು ಮಿತಿ ಇರುತ್ತದೆ... ಇತರೆಲ್ಲ ದೇಶಗಳಿಗಿಂತ ಇಂಡಿಯಾಕ್ಕೆ ಈ ಮಾತು ಹೆಚ್ಚು ಅನ್ವಯಿಸುತ್ತದೆ. ಭಕ್ತಿ ಅಥವಾ ವ್ಯಕ್ತಿಪೂಜೆ ಬೇರೆ ಯಾವುದೇ ದೇಶದ ರಾಜಕಾರಣಕ್ಕಿಂತ ಹೆಚ್ಚಾಗಿ ಇಂಡಿಯಾದ ರಾಜಕಾರಣದಲ್ಲಿ ಅಗಾಧ ಪಾತ್ರ ವಹಿಸುತ್ತದೆ. ಭಕ್ತಿ ಎಂಬುದು ಧರ್ಮದ ಸಂದರ್ಭದಲ್ಲಿ ಆತ್ಮವಿಮುಕ್ತಿಯ ಮಾರ್ಗ ಇದ್ದೀತು. ಆದರೆ ರಾಜಕಾರಣದಲ್ಲಿ ಭಕ್ತಿ ಅಥವಾ ವ್ಯಕ್ತಿಪೂಜೆಯು ಪತನ ಮತ್ತು ಕಾಲಕ್ರಮೇಣ ಸರ್ವಾಧಿಕಾರಕ್ಕೆ ನಿಶ್ಚಿತ ಹಾದಿ ಮಾಡಿಕೊಡುತ್ತದೆ’ ಎಂದು ಅವರು ಎಚ್ಚರಿಸಿದ್ದಾರೆ.

ಬಹುತೇಕ ಚುನಾವಣೆಗಳ ಸಂದರ್ಭಕ್ಕೆ ಹೊಂದುವ ಒಂದು ಕಾಕತಾಳೀಯ ಆಫ್ರಿಕನ್ ಕವಿತೆಯ ಕೆಲ ಸಾಲುಗಳು.

‘ಹೊಳೆಹೊಳೆಯುವ ಪಂಜರದಲಿ

ಗರುಡಪಕ್ಷಿ ಇಟ್ಟುಕೊಂಡು, ಗಿಫ್ಟು ಫಫ್ಟು ಕೊಟ್ಟುಕೊಂಡು

ಮಂತ್ರವಾದಿಯೊಬ್ಬ ನಿಮ್ಮ ಊರಕಡೆಗೆ ಬಂದರೆ

ಎಚ್ಚರ ಕಟ್ಟೆಚ್ಚರ ಬದಲಾವಣೆ ಬಂದಿದೆ.

ಅವನು ತನ್ನ ಮುಷ್ಟಿಯಲ್ಲಿ ಬೂದಿಬ್ರೆಡ್ಡು ತೆಗೆದುಕೊಂಡು

ಅದನೆ ಜೇನುಕೇಕು ಎಂದು ಮಂಕುಬೂದಿ ಹಾಕುತಾನೆ

ಮುಗುಳುನಗೆಯೇ ಮಂತ್ರದಂಡ, ಮಾತಿನಿಂದ ಇಂದ್ರಜಾಲ,

ಒಂದನೊಂಬತ್ತು ಎನಿಸಿ, ಸೊನ್ನೆಯಿಂದ ಸ್ವರ್ಗ ಕಟ್ಟಿ

ನಿಮ್ಮದೆಲ್ಲ ಕಿತ್ತುಕೊಂಡು, ನಾಮ ಹಾಕಿ ಸುಖಿಸುತಾನೆ,

ಹಣದುಬ್ಬರ ಎನ್ನುತಾನೆ, ನಾನೆ ಬಡವ ಎನ್ನುತಾನೆ,

ಹೊಳೆ ಹೊಳೆವ ಪಂಜರದಲಿ

ಗರುಡಪಕ್ಷಿ ಇಟ್ಟುಕೊಂಡು ಗಿಫ್ಟು ಫಫ್ಟು ಕೊಟ್ಟುಕೊಂಡು...’ (‘ಕಪ್ಪು ಕವಿತೆ’ ಸಂಕಲನ. ಅಭಿನವ ಪ್ರಕಾಶನ. ಅನುವಾದ- ಎಚ್.ಎಸ್.ರಾಘವೇಂದ್ರರಾವ್)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.