ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಪಂಜರದ ಜಗಳಗಂಟ ಗಿಳಿಗಳು

ಸಿಬಿಐ ‘ಸರ್ಜರಿ’, ಸ್ವಚ್ಛಗೊಳಿಸಿದ್ದೋ ಅಥವಾ ಮುಚ್ಚಿಹಾಕಿದ್ದೋ ಎಂಬುದನ್ನು ಕಾಲವೇ ತಿಳಿಸಲಿದೆ
Last Updated 28 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಅರವತ್ತು ವರ್ಷಗಳ ಕಾಂಗ್ರೆಸ್ ಆಡಳಿತದ ‘ಕಗ್ಗತ್ತಲ’ನ್ನು ಹಗಲು– ರಾತ್ರಿ ದೂರುವ ಬದಲು ಹಣತೆಯೊಂದನ್ನು ಬೆಳಗಿಸಿ ಇಡುವ, ಪಂಜರಗಳು- ಬೋನುಗಳ ಬಾಗಿಲು ತೆರೆಯುವ ಪ್ರಾಮಾಣಿಕತೆಯನ್ನು ಪ್ರಧಾನಿಯವರು ತೋರಬೇಕಿತ್ತು. ಇಂತಹ ಕೆಲಸ ಶುರು ಮಾಡಲು ಸಿಬಿಐನಂತಹ ‘ಪ್ರತಿಷ್ಠಿತ’ ಸರ್ಕಾರಿ ಬಾಲಬಡುಕ ಪಂಜರಕ್ಕಿಂತ ಹೆಚ್ಚು ಪ್ರಶಸ್ತವಾದ ಪಂಜರ ಮತ್ತೊಂದು ಇರಲಿಲ್ಲ. ಇಲ್ಲಿಯೇ ಮಾಡದಿದ್ದ ಕೆಲಸವನ್ನು ಅವರು ಬೇರೆ ಇನ್ನೆಲ್ಲಿ ಮಾಡಿಯಾರು ಎಂಬ ಪ್ರಶ್ನೆ ಎದ್ದರೆ ಅದು ಸಹಜ- ಸ್ವಾಭಾವಿಕ.

ಸುಪ್ರೀಂ ಕೋರ್ಟಿನ ಮುಂದೆ ಹೋಗಬಹುದಾದ ಮಾನವನ್ನು ಕಾಪಾಡಿಕೊಳ್ಳಲು ಮೋದಿ ನೇತೃತ್ವದ ಸರ್ಕಾರದ ಮುಂದೆ ಹೆದ್ದಾರಿಯೊಂದಿದೆ. ಅದೆಂದರೆ ಸಿಬಿಐ ಗಿಳಿಯನ್ನು ತನ್ನ ಪಂಜರದಿಂದ ಬಿಡುಗಡೆ ಮಾಡುವುದು. ಸಂಪೂರ್ಣ ಸ್ವಾಯತ್ತತೆ ದಯಪಾಲಿಸಿ ರಾಜಕಾರಣಿಗಳ ಮುಲಾಜಿಲ್ಲದೆ, ‘ಕರಿನೀರಿನ ಶಿಕ್ಷೆ’ ಅಥವಾ ಉದ್ಯೋಗ ಕಳೆದುಕೊಳ್ಳುವ ಭೀತಿಯಿಲ್ಲದೆ ನಿಷ್ಪಕ್ಷಪಾತವಾಗಿ ಕೆಲಸ ಮಾಡುವ ಅವಕಾಶ ಕಲ್ಪಿಸುವುದು ರಾಜಮಾರ್ಗ. ಕಾಂಗ್ರೆಸ್ ಹಿಡಿದ ಸಿಬಿಐ ದುರುಪಯೋಗದ ಸುತ್ತುಬಳಸಿನ ಕಳ್ಳ ಹಾದಿಯನ್ನು ತಾವೂ ತುಳಿದರೆ ಐವತ್ತಾರು ಅಂಗುಲದ ಎದೆಗಾರಿಕೆಯ ಮಾತು ಡೋಂಗಿಯದಾದೀತು. ಮಾತೆತ್ತಿದರೆ ನೆಹರೂ- ಗಾಂಧಿ ಮನೆತನವನ್ನು ಜಾಲಾಡುವುದು ಆಷಾಢಭೂತಿತನ ಎನಿಸೀತು.

ಚಕ್ರವರ್ತಿಗಳು- ಸಾಮ್ರಾಟರು ತಮ್ಮನ್ನು ಧರೆಯ ಮೇಲಿನ ದೇವರುಗಳು ಎಂದೇ ಕರೆದುಕೊಳ್ಳುತ್ತಿದ್ದ ಇತಿಹಾಸವಿತ್ತು. ಚರಿತ್ರೆ ಮರುಕಳಿಸುತ್ತದೆ ಎಂಬ ಮಾತು ನಿಜ. ಮತ್ತೆ ಮತ್ತೆ ಸಂಭವಿಸುವ ಚಂಡಪ್ರಚಂಡ ನಾಯಕರು ಕೂಡ ತಮ್ಮನ್ನು ಸರ್ವಶಕ್ತರೆಂದೇ ಭಾವಿಸಿ ಪ್ರವರ್ತಿಸುತ್ತಾರೆ.

‘power corrupts; absolute power corrupts absolutely’ ಎನ್ನುತ್ತದೆ ನೀತಿ ಮಾತು. Corrupt ಪದವನ್ನು ನಾವು ಕೇವಲ ಭ್ರಷ್ಟಾಚಾರ- ಲಂಚಗುಳಿತನಕ್ಕೆ ಸಂವಾದಿಯಾಗಿ ಬಳಸುತ್ತೇವೆ. ಆದರೆ ಇಂಗ್ಲಿಷಿನ ಈ ಪದಕ್ಕೆ ನಡತೆಗೆಡು, ಹೊಲಬುಗೆಡು, ಅಡನಾಡಿ, ಕೊಳೆಯುವಿಕೆ, ಕೆಡುಕು ಎಂಬ ಅರ್ಥಗಳೂ ಉಂಟು. ಭ್ರಷ್ಟ ಎಂಬುದು ಹಣಕ್ಕೆ ಸೀಮಿತವಲ್ಲ. ಗುಣ, ನಡತೆ ವ್ಯವಹಾರಗಳಿಗೂ ಚಾಚುತ್ತದೆ. ಅಧಿಕಾರ ಎಂಬುದು ಭ್ರಷ್ಟತೆಗೆ ಹಾದಿ ಮಾಡಿಕೊಡುತ್ತದೆ. ನಿರಂಕುಶ ಅಧಿಕಾರ ಎಷ್ಟೆಷ್ಟು ಹಿಗ್ಗುತ್ತದೆಯೋ ಅದರ ನೈತಿಕ ಪ್ರಜ್ಞೆ ಅಷ್ಟಷ್ಟೇ ಕುಗ್ಗುತ್ತದೆ ಎಂಬುದಾಗಿ ಈ ನೀತಿ ಮಾತಿನ ಅರ್ಥ ಬಿಡಿಸಬಹುದು.

ಅಧಿಕಾರಕ್ಕೆ ಬಂದವರು ವಿರೋಧ ಪಕ್ಷದಲ್ಲಿದ್ದಾಗ ಆಡಿದ ಮಾತುಗಳನ್ನು ಮರೆತುಬಿಡುತ್ತಾರೆ. ಸೋತು, ವಿರೋಧ ಪಕ್ಷದಲ್ಲಿ ವಿರಮಿಸುವವರು ಅಧಿಕಾರದಲ್ಲಿದ್ದಾಗ ಮಾಡಿದ ಅನಾಹುತಗಳನ್ನು ನೆನಪಿಸಿಕೊಳ್ಳುವುದೇ ಇಲ್ಲ. ಇಬ್ಬರ ಜ್ಞಾಪಕಶಕ್ತಿಯೂ ಅದೆಷ್ಟು ದುರ್ಬಲ! ಸರ್ಕಾರಗಳು ಅದಲು ಬದಲಾದಾಗಲೆಲ್ಲ ಈ ಪ್ರಖರ ಸತ್ಯ ಮತದಾರರ ಮುಖಕ್ಕೆ ಮರಳಿ ಮರಳಿ ರಾಚುತ್ತದೆ. ಆದರೆ ನಿಜವಾಗಿಯೂ ರಾಚಬೇಕಾದ ಬಹುತೇಕ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳ ಮುಖಗಳು ಭಂಡತನದ ಹಿಂದೆ ಅವಿತುಕೊಳ್ಳುತ್ತವೆ. ಐವತ್ತಾರು ಅಂಗುಲ ಎದೆಯಳತೆಯ ಅಸಾಮಾನ್ಯರೂ ಹೀಗೆ ಅಳ್ಳೆದೆಯವರಂತೆ ಅವಿತುಕೊಳ್ಳುವುದು ತರವಲ್ಲ.

ಸಿಬಿಐಯನ್ನು ‘ಕಾಂಗ್ರೆಸ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್’ ಎಂದು ಪ್ರಧಾನಿಯವರು ತಾವು ಪ್ರತಿಪಕ್ಷದಲ್ಲಿದ್ದಾಗ ಟೀಕಿಸಿದ್ದು ಸಮರ್ಥನೀಯವಾಗಿತ್ತು. ಅಂತೆಯೇ ಇತ್ತು ಕಾಂಗ್ರೆಸ್ ವರ್ತನೆ. ಆದರೆ ಟೀಕಿಸಿದವರು ಈಗ ಆಡಳಿತ ಪಕ್ಷದಲ್ಲಿದ್ದಾರೆ. ಚಿಟಿಕೆ ಹೊಡೆಯುವುದರ ಒಳಗಾಗಿ ದೊಡ್ಡ ನೋಟುಗಳ ರದ್ದು ಮಾಡಿ ಇಷ್ಟು ದೊಡ್ಡ ದೇಶವನ್ನು ಲಕ್ಷ ಲಕ್ಷ ಸರದಿಯ ಸಾಲುಗಳಲ್ಲಿ ನಿಲ್ಲಿಸುತ್ತಾರೆ! ತಮ್ಮ ಈ ಕ್ರಾಂತಿಕಾರಿ ನಡೆಯು ಕಪ್ಪುಹಣ, ನಕ್ಸಲೀಯ ಸಮಸ್ಯೆ, ನಕಲಿ ನೋಟು ಮುಂತಾದ ಹಲವಾರು ರೋಗಗಳಿಗೆ ರಾಮಬಾಣ ಎಂದು ಅಮಾಯಕ ಜನಸಮೂಹಗಳನ್ನು ನಂಬಿಸಿಬಿಡುತ್ತಾರೆ.

ಅಂತಹ ಸರ್ವಶಕ್ತ ನಾಯಕನಿಗೆ ಪುಟ್ಟ ಪಂಜರದ ಬಾಗಿಲು ತೆರೆದು ಯಃಕಶ್ಚಿತ್ ಗಿಳಿಯೊಂದನ್ನು ಹಾರಿ ಬಿಡುವುದು ಚಿಟಿಕೆ ಹೊಡೆಯುವುದಕ್ಕಿಂತ ಸುರಳೀತ. ನಾಲ್ಕೂವರೆ ವರ್ಷ ಕಳೆದರೂ ಅವರು ಹಾಗೆ ಮಾಡುವುದಿಲ್ಲ. ಅಂದಿನ ‘ಕಾಂಗ್ರೆಸ್ ಇನ್ವೆಸ್ಟಿಗೇಷನ್ ಬ್ಯೂರೊ’ ಇಂದಿನ ‘ಮೋದಿ-ಶಾ ಇನ್ವೆಸ್ಟಿಗೇಷನ್ ಬ್ಯೂರೊ’ ಎಂಬ ಬಿರುದು-ಬಾವಲಿಯಿಂದ ಪಾರಾಗಬೇಕಿತ್ತು. ಪಂಜರದ ಒಡೆಯರಿಗೆ ಬೇಕಾದವರ ಪ್ರಕರಣಗಳ ತೀರ್ಪುಗಳ ವಿರುದ್ಧ ಮೇಲ್ಮನವಿ ಹೂಡುವ ಪ್ರಶ್ನೆಯೇ ಇಲ್ಲ. ಒಡೆಯರಿಗೆ ಬೇಡವಾದ ರಾಜಕೀಯ ವಿರೋಧಿಗಳ ಬೆನ್ನು ಹತ್ತಿ ಸದೆಬಡಿಯುವುದು ಬಿಡುವುದೇ ಇಲ್ಲ!

ಪಂಜರದ ಬಾಗಿಲು ತೆರೆಯುವುದು ಒತ್ತಟ್ಟಿಗಿರಲಿ, ಕೈಯಾರೆ ಕಾಳು ತಿನ್ನಿಸಿ ಬೆಳೆಸಿ, ತಾವು ಹೇಳಿಕೊಟ್ಟ ಮಾತುಗಳನ್ನೇ ಉಲಿಯುವ ಗಿಳಿಗಳನ್ನು ಆರಿಸಿ ತಂದು ಪಂಜರದೊಳಗೆ ಬಿಡಬಾರದಿತ್ತು. ಈ ಗಿಳಿಗಳು ಎಂಜಲು ಕಾಸಿಗೆ ನಾಲಗೆ ಚಾಚಿದರೂ ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡ ಮೂರು ಮಂಗಗಳಂತೆ ಕುಳಿತುಕೊಳ್ಳ ಬಾರದಿತ್ತು. ಈ ಗಿಳಿಗಳ ಕಚ್ಚಾಟ ಹದ್ದು ಮೀರಿ ಹಾದಿ ಬೀದಿಗೆ ಬಿದ್ದ ನಂತರವಾದರೂ ಎಚ್ಚೆತ್ತುಕೊಂಡದ್ದು ಸರಿ. ಆದರೆ ಇಂದಿರಾ ಗಾಂಧಿ ಕಾಲದ ತುರ್ತು ಪರಿಸ್ಥಿತಿಯಲ್ಲಿ ಜರುಗಿದ ಮಧ್ಯರಾತ್ರಿ ಕಾರ್ಯಾಚರಣೆಗಳನ್ನು ಅನುಸರಿಸಬಾರದಿತ್ತು.

ನಂಬರ್ ಒಂದು ಮತ್ತು ನಂಬರ್ ಎರಡನೆಯ ಗಿಳಿಗಳನ್ನು ರಜೆಯ ಮೇಲೆ ಕಳಿಸಿ ಮೂರನೆಯ ಗಿಳಿಯನ್ನು ಕುರ್ಚಿಯ ಮೇಲೆ ಕೂರಿಸಲು ರಾತ್ರಿ ಎರಡು ಗಂಟೆಗೆ ಸಭೆ ನಡೆಸಿದ್ದು ಸಲ್ಲದು. ಶಾಸನಬದ್ಧ ಸಮಿತಿಯನ್ನು (ಪ್ರಧಾನಿ- ಮುಖ್ಯ ನ್ಯಾಯಮೂರ್ತಿ ಹಾಗೂ ಪ್ರತಿಪಕ್ಷದ ನಾಯಕ) ಪಕ್ಕಕ್ಕೆ ತಳ್ಳಿ ಇಂತಹ ತೀರ್ಮಾನ ತೆಗೆದುಕೊಂಡದ್ದು ಇನ್ನಷ್ಟು ಅನುಚಿತ. ಒಂದನೆಯ ಜಾಗಕ್ಕೆ ತರಲಾಗಿರುವ ಮೂರನೆಯ ಗಿಳಿಯೂ ಭ್ರಷ್ಟಾಚಾರದ ಆಪಾದನೆಗಳಿಂದ ಮುಕ್ತವಲ್ಲ ಎಂಬುದು ಮತ್ತಷ್ಟು ವ್ಯಥೆಯ ವಿಷಯ. ಒಂದನೆಯ ಮತ್ತು ಎರಡನೆಯ ಗಿಳಿ ಅಕ್ಕಪಕ್ಕದ ಕಚೇರಿಯಲ್ಲಿದ್ದರೂ ಮಾತಿಲ್ಲ. ಪರಸ್ಪರರ ವಿರುದ್ಧ ಸಂಚು ರೂಪಿಸುತ್ತವೆ.

ಭ್ರಷ್ಟಾಚಾರದ ಆರೋಪ ಹೊರಿಸುತ್ತವೆ. ಸಿಬಿಐ ಸಹಾಯಕ ಅಧಿಕಾರಿಯನ್ನು ಸಿಬಿಐ ಬಂಧಿಸುತ್ತದೆ. ಒಂದು ಮತ್ತು ಎರಡನೆಯ ಗಿಳಿಯ ಮೇಲೆ ಕ್ರಮ ಜರುಗಿಸಿದ ನಂತರ ಅವರ ಕಚೇರಿಗಳನ್ನು ಮುಚ್ಚಿ ‘ಮೊಹರು’ ಮಾಡಲಾಗುತ್ತದೆ. ಒಂದನೆಯ ಗಿಳಿಯ ಸರ್ಕಾರಿ ನಿವಾಸದ ಮೇಲೆ ನಿಗಾ ಇರಿಸುವ ಸರ್ಕಾರಿ ಬೇಹುಗಾರರನ್ನು ಕೊರಳುಪಟ್ಟಿ ಹಿಡಿದು ರಸ್ತೆಯಲ್ಲಿ ದರದರನೆ ಎಳೆಯುತ್ತಾರೆ ನಿವಾಸದ ಕಾವಲಿಗಿದ್ದ ದೆಹಲಿ ಪೊಲೀಸರು. ಈ ನಾಟಕೀಯ ದೃಶ್ಯಗಳನ್ನು ಬಹುತೇಕ ಸುದ್ದಿವಾಹಿನಿಗಳು ದಿನವಿಡೀ ಬಿತ್ತರಿಸಿದವು. ಈ ಮುಜುಗರ ತಡೆಯಲು ಸುದ್ದಿವಾಹಿನಿಗಳ ಗಮನವನ್ನು ಬೇರೆಡೆಗೆ ಸೆಳೆವ ಸರ್ಕಾರಿ ಮೆದುಳುಗಳ ಉಪಾಯ ಫಲಿಸಲಿಲ್ಲ.

ಕೇಂದ್ರದ ಮಾಜಿ ಮಂತ್ರಿ ಮತ್ತು ಕಾಂಗ್ರೆಸ್ ತಲೆಯಾಳು ಪಿ. ಚಿದಂಬರಂ ಅವರನ್ನು ಏರ್ಸೆಲ್- ಮ್ಯಾಕ್ಸಿಸ್ ಅವ್ಯವಹಾರ ಆರೋಪಪಟ್ಟಿಯಲ್ಲಿ ಮೊದಲ ಆರೋಪಿಯ ಸ್ಥಾನದಲ್ಲಿ ನಿಲ್ಲಿಸಿದ ‘ಬಿಸಿ’ ಸುದ್ದಿಯನ್ನು ಬಿಡುಗಡೆ ಮಾಡಲಾಯಿತು. ಆದರೂ ಲಾಭವಾಗಲಿಲ್ಲ. ಸುಶಾಸನ (Good Governance) ಎಂಬುದು ಪ್ರಧಾನಮಂತ್ರಿ ಮತ್ತು ಅವರ ಸಂಗಾತಿಗಳ ಅಚ್ಚುಮೆಚ್ಚಿನ ಪರಿಕಲ್ಪನೆ. ದೇಶದ ಮುಂಚೂಣಿಯ ತನಿಖಾ ಸಂಸ್ಥೆಯ ಈ ವಿದ್ಯಮಾನಗಳು ಯಾವ ಕೋನದಿಂದ ಸುಶಾಸನದ ಅರ್ಥ ಹೊಮ್ಮಿಸುತ್ತವೆ ಎಂಬ ಕುರಿತು ಗಂಭೀರ ಸಂಶೋಧನೆಯೇ ನಡೆಯಬೇಕಾದೀತು.

ಅಲೋಕ್‌ ವರ್ಮಾ ವಿರುದ್ಧದ ಆರೋಪಗಳ ತನಿಖೆಗೆ ಸುಪ್ರೀಂ ಕೋರ್ಟ್ ಎರಡು ವಾರಗಳ ಗಡುವು ವಿಧಿಸಿದೆ.ತನಿಖೆಯನ್ನು ಅನಿರ್ದಿಷ್ಟ ಕಾಲ ಎಳೆದಾಡಿ ಹಾಲಿ ಸಿಬಿಐ ನಿರ್ದೇಶಕರನ್ನು ಬೇಕೆಂದೇ ಅವರ ಹುದ್ದೆಯಿಂದ ದೂರವಿಡುವ ಉದ್ದೇಶ ಒಂದು ವೇಳೆ ಕೇಂದ್ರ ಸರ್ಕಾರಕ್ಕೆ ಇದ್ದಲ್ಲಿ, ಅದು ಸಫಲವಾಗುವುದಿಲ್ಲ. ಅಷ್ಟೇ ಅಲ್ಲ, ಕೇಂದ್ರೀಯ ಜಾಗೃತ ಆಯೋಗದ (ಸಿ.ವಿ.ಸಿ) ನಡೆಯನ್ನೂ ನ್ಯಾಯಾಲಯ ನಂಬಿಲ್ಲ. ವರ್ಮಾ ವಿರುದ್ಧ ಆಯೋಗ ನಡೆಸುವ ತನಿಖೆಯ ಉಸ್ತುವಾರಿಗೆಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಪಟ್ನಾಯಕ್ ಅವರನ್ನು ನೇಮಕ ಮಾಡಿದೆ. ಸಿಬಿಐ ಕಾರ್ಯನಿರ್ವಹಣೆಯ ಉಸ್ತುವಾರಿ ಅಧಿಕಾರ ಸಿ.ವಿ.ಸಿ.ಯದು. ಆದರೆ ವರ್ಮಾ- ಅಸ್ತಾನಾ ನಡುವಣ ಕಚ್ಚಾಟ ಇತ್ಯರ್ಥಪಡಿಸುವಲ್ಲಿ ತನ್ನ ಉಸ್ತುವಾರಿ ಅಧಿಕಾರವನ್ನು ನಿಷ್ಪಕ್ಷಪಾತದಿಂದ ನಿರ್ವಹಿಸಿಲ್ಲ. ಇಲ್ಲವಾದರೆ ನಿವೃತ್ತ ನ್ಯಾಯಮೂರ್ತಿಯ ಉಸ್ತುವಾರಿಯಲ್ಲಿ ತನಿಖೆ ನಡೆಸುವ ಗತಿ ಈ ಸಂಸ್ಥೆಗೆ ಬರುತ್ತಿರಲಿಲ್ಲ.

ಸಿಬಿಐ ನಿರ್ದೇಶಕ ಹುದ್ದೆಗೆ ಕಾಯ್ದೆ ಪ್ರಕಾರ ಎರಡು ವರ್ಷಗಳ ಅವಧಿಯನ್ನು ನಿಗದಿ ಮಾಡಲಾಗಿದೆ. ಈ ಕಾಯ್ದೆ ನೆನ್ನೆ ಮೊನ್ನೆಯದಲ್ಲ. ಎರಡು ದಶಕಗಳಷ್ಟು ಹಳೆಯದು. ಅವಧಿಗೆ ಮುನ್ನ ಅಧಿಕಾರವನ್ನು ಮೊಟಕು ಮಾಡುವ ಯಾವುದೇ ನಡೆಯು ಒಪ್ಪಿತವಲ್ಲ. ಹಾಗೆ ಮಾಡಬೇಕಿದ್ದರೆ ನಿರ್ದೇಶಕನ ಆಯ್ಕೆ ಸಮಿತಿಯ ಸಮ್ಮತಿ ಪಡೆಯತಕ್ಕದ್ದು. ಪ್ರಧಾನಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಪ್ರತಿಪಕ್ಷದ ನಾಯಕನನ್ನು ಈ ಸಮಿತಿ ಒಳಗೊಂಡಿರುತ್ತದೆ. ನಿರ್ದೇಶಕನನ್ನು ಬಲವಂತದ ‘ರಜೆ’ ನೆಪದಲ್ಲಿ ಹುದ್ದೆಯಿಂದ ದೂರ ಇರಿಸುವುದು ಮೋದಿ ನೇತೃತ್ವದ ಸರ್ಕಾರ ಹಿಡಿದ ಅಡ್ಡದಾರಿ. ವರ್ಮಾ ಸುಪ್ರೀಂ ಕೋರ್ಟ್ ಕದ ಬಡಿಯುವ ಅವಕಾಶ ಕಲ್ಪಿಸಿದ ದಾರಿ.

ತಮ್ಮ ಮನೆಯಲ್ಲಿ ಉಂಡು ಬೆಳೆದು, ಇವರ ಮಾತನ್ನೇ ಕಲಿತು ಉಲಿಯುವ ಅದೇ ಗಿಳಿಯನ್ನು ಸಿಬಿಐ ಪಂಜರಕ್ಕೆ ಮುಖ್ಯ ಗಿಳಿಯ ಸ್ಥಾನಕ್ಕೆ ತರುವುದು ಕಾಂಗ್ರೆಸ್ ಪರಿಪಾಟ. ಅದೇ ಪರಿಪಾಟ ಮುಂದುವರೆಸಿದರೆ ಇವರು ಅವರಿಗಿಂತ ಹೇಗೆ ಬೇರೆ ಎನಿಸುವರು? ಭಾರತೀಯ ಪೊಲೀಸ್ ಸೇವೆಯ (ಐಪಿಎಸ್) ಗುಜರಾತ್‘ಕೇಡರ್’ಗೆ ಸೇರಿದ ಅಧಿಕಾರಿ ರಾಕೇಶ್ ಅಸ್ತಾನಾ ಅವರನ್ನು ಸಿಬಿಐ ಮುಖ್ಯಸ್ಥರ ಹುದ್ದೆಯಲ್ಲಿ ಕಾಣಬಯಸಿತ್ತು ಕೇಂದ್ರ ಸರ್ಕಾರ. ಮೋದಿಯವರು ಗುಜರಾತ್ ಮುಖ್ಯಮಂತ್ರಿ ಆದದ್ದು 2001ರ ಅಕ್ಟೋಬರ್‌ 3ರಂದು. 1995ರಿಂದ ಸಿಬಿಐ ಸೇವೆಗೆಂದು ಬಿಹಾರಕ್ಕೆ ತೆರಳಿದ್ದ ಅಸ್ತಾನಾ, ಗುಜರಾತ್ ಸರ್ಕಾರದ ಸೇವೆಗೆ ಮರಳಿದ್ದು 2002ರಲ್ಲಿ. ಆ ಹೊತ್ತಿಗಾಗಲೇ ಲಾಲೂ ಪ್ರಸಾದ್ ಅವರಂತಹ ಮಹಾರಥಿಯನ್ನು ಮೇವು ಹಗರಣದಲ್ಲಿ ‘ಮಟ್ಟ’ಹಾಕಿದ ದಕ್ಷ ಅಧಿಕಾರಿ ಎಂಬ ಭುಜಕೀರ್ತಿ ಧರಿಸಿದ್ದರು ಅಸ್ತಾನಾ.

ಗೋಧ್ರಾ ರೈಲು ಮಾರಣಹೋಮ ಜರುಗಿದ್ದು ಇವೇ ದಿನಗಳಲ್ಲಿ. ತನಿಖೆ ನಡೆಸಿದ ಅಸ್ತಾನಾ, ರೈಲಿಗೆ ಬೆಂಕಿ ಬಿದ್ದದ್ದು ಪೂರ್ವನಿಯೋಜಿತ ಸಂಚು ಎಂದು ವರದಿ ನೀಡಿದ್ದರು. ಮೋದಿಯವರ ‘ಕಣ್ಮಣಿ’ ಎಂದು ಅಸ್ತಾನಾ ಅವರನ್ನು ಬಣ್ಣಿಸಲಾಗಿತ್ತು. ಆಸಾರಾಂ ಬಾಪುವಿನ ಮಗ ನಾರಾಯಣ ಸಾಯಿ ಮೇಲಿದ್ದ ಅತ್ಯಾಚಾರ ಆರೋಪದ ಪ್ರಕರಣ, ಮೋದಿ ವಿರೋಧಿ ಹಾರ್ದಿಕ್ ಪಟೇಲ್ ಮೇಲಿನ ದೇಶದ್ರೋಹದ ಆಪಾದನೆಯಂತಹ ರಾಜಕೀಯ ಸೂಕ್ಷ್ಮದ ಬಹುಮುಖ್ಯ ಪ್ರಕರಣಗಳ ತನಿಖೆ ನಡೆಸಿದವರು ಅಸ್ತಾನಾ.

2016ರಲ್ಲಿ ಇವರನ್ನು ದೆಹಲಿಯ ಸಿಬಿಐ ಕೇಂದ್ರ ಕಚೇರಿಯ ಕುರ್ಚಿಗೆ ತರಲಾಯಿತು. ಕೆಲಕಾಲ ಸಿಬಿಐನ ಪ್ರಭಾರಿ ಮುಖ್ಯಸ್ಥರಾಗಿದ್ದರು. ಅದೇ ಹುದ್ದೆಯಲ್ಲಿ ಅವರನ್ನು ಕಾಯಂ ಮಾಡುವ ಸರ್ಕಾರದ ಪ್ರಯತ್ನಗಳು ಫಲಿಸಲಿಲ್ಲ. ನ್ಯಾಯಾಲಯದ ಆದೇಶದ ಮೇರೆಗೆ ದೆಹಲಿ ಪೊಲೀಸ್ ಮುಖ್ಯಸ್ಥ ಅಲೋಕ್ ವರ್ಮಾ ಅವರಿಗೆ ಕುರ್ಚಿ ಬಿಟ್ಟುಕೊಡಬೇಕಾಯಿತು. ಇಲ್ಲವಾಗಿದ್ದರೆ ಸಿಬಿಐನ ಭ್ರಷ್ಟಾಚಾರ-ಒಳಜಗಳದ ಗೆದ್ದಲು ಇಷ್ಟು ಬೇಗ ಬಯಲಿಗೆ ಬರುತ್ತಿರಲಿಲ್ಲ. ಕಾಂಗ್ರೆಸ್ ಕಾಲದಲ್ಲೇ ಹತ್ತಿದ ಗೆದ್ದಲು ಇದು. ಅನುಮಾನವೇ ಇಲ್ಲ. ಆದರೆ ‘ಅತ್ಯಂತ
ದಕ್ಷ ಮತ್ತು ದೇಶಭಕ್ತ ಪ್ರಧಾನಿ’ ಮತ್ತು ಅತ್ಯಂತ ಭಿನ್ನ ರಾಜಕೀಯ ಪಕ್ಷದ (Party with a Difference) ಆಡಳಿತದಲ್ಲಿ ಕೀಟನಾಶಕದ ಚಿಕಿತ್ಸೆಯೇ ಸಿಗದೆ ಮತ್ತಷ್ಟು ಲಡ್ಡಾಗಿ ಹಾದಿ ಬೀದಿಯಲ್ಲಿ ಮಾನ ಹರಾಜು ಹಾಕುವಂತಾಗಿದ್ದು ವಿಪರೀತ ವಿಪರ್ಯಾಸ. ಈ ಗೆದ್ದಲು ದೇಶದ ಬೇಹುಗಾರಿಕೆ ಜಾಲದ ಅಂಗಗಳಾದ ಇಂಟೆಲಿಜೆನ್ಸ್ ಬ್ಯೂರೊ (IB) ಮತ್ತು ರೀಸರ್ಚ್ ಅಂಡ್ ಅನಲಿಸಿಸ್ ವಿಂಗ್(RAW) ಹಾಗೂ ಆರ್ಥಿಕ ಅಪರಾಧಗಳ ತನಿಖಾ ಸಂಸ್ಥೆಯಾದ ಜಾರಿ ನಿರ್ದೇಶನಾಲಯ (Enforcement Directorate) ಹಾಗೂ ಕೇಂದ್ರೀಯ ಜಾಗೃತ ಆಯೋಗಕ್ಕೂ (CVC) ಹಬ್ಬಿರುವುದು ಕಳವಳಕಾರಿ.

ಇಷ್ಟಕ್ಕೂ ಅಕ್ಟೋಬರ್‌ 23ರ ಮಧ್ಯರಾತ್ರಿಯ ನಂತರ ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಕ್ರಿಯೆಯನ್ನು ‘ಸ್ವಚ್ಛಗೊಳಿಸಿದ್ದು’ ಎಂದು ಬಣ್ಣಿಸಲಾಗಿದೆ. ಸ್ವಚ್ಛಗೊಳಿಸಿದ್ದೋ ಅಥವಾ ಮುಚ್ಚಿ ಹಾಕಿದ್ದೋ ಎಂಬುದನ್ನು ಕಾಲವೇ ತಿಳಿಸಿ ಹೇಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT