ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಸಂಕಟ: ವಿಶೇಷ ಅಧಿವೇಶನ ಯಾಕಿಲ್ಲ?

ಉಳುವವರ ಸಂಕಟಕ್ಕೆ ಬಾಯಿ ಆಗುವ ಅವಕಾಶವ ಕಳೆದುಕೊಳ್ಳದಿರಲಿ ಕೇಂದ್ರ ಸರ್ಕಾರ
Last Updated 25 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಸಂಸತ್‌ ಭವನದಲ್ಲಿ ಕಳೆದ ವಾರ ಸಭೆ ಸೇರಿದ್ದ ಸಂಸದೀಯ ಹಣಕಾಸು ಸ್ಥಾಯಿ ಸಮಿತಿಗೆ ಕೇಂದ್ರ ಕೃಷಿ ಸಚಿವಾಲಯ ಟಿಪ್ಪಣಿಯೊಂದ ಸಲ್ಲಿಸಿತು. ಎರಡು ವರ್ಷಗಳ ಹಿಂದಿನ ನೋಟು ರದ್ದತಿ ಕ್ರಮವು ದೇಶದ ಸಣ್ಣ ಮತ್ತು ಮಧ್ಯಮ ರೈತರಿಗೆ ಭಾರಿ ಹೊಡೆತ ನೀಡಿತು. ನಗದು ಸಿಗದ ಕಾರಣ ಹತ್ತಾರು ಲಕ್ಷ ರೈತರು ಹಿಂಗಾರು ಹಂಗಾಮಿಗೆ ಬೇಕಾದ ಬಿತ್ತನೆ ಬೀಜ, ಗೊಬ್ಬರ ಖರೀದಿಸದೆ ಹೋದರು. ನಗದು ಕೊರತೆಯ ಕಾರಣ ರಾಷ್ಟ್ರೀಯ ಬಿತ್ತನೆ ಬೀಜ ನಿಗಮದ 1.38 ಕ್ವಿಂಟಲ್‌ಗಳಷ್ಟು ಗೋಧಿ ಬಿತ್ತನೆ ಬೀಜ ಕೂಡ ಮಾರಾಟ ಆಗದೆ ಉಳಿಯಿತು. ಉತ್ತರಭಾರತದಲ್ಲಿ ಹಿಂಗಾರು ಹಂಗಾಮಿನ ಮುಖ್ಯ ಬೆಳೆ ಗೋಧಿ. ಸುಮಾರು 300 ಲಕ್ಷ ಹೆಕ್ಟೇರುಗಳಲ್ಲಿ ಈ ಬೆಳೆಯ ಬಿತ್ತನೆ ನಡೆಯುತ್ತದೆ. ಕೆಲ ದಿನಗಳ ನಂತರ ಬೀಜ ಖರೀದಿಗೆ ಹಳೆಯ ನೋಟುಗಳನ್ನೇ ಬಳಸಲು ಅವಕಾಶ ನೀಡಿದರೂ ಪರಿಸ್ಥಿತಿ ಸುಧಾರಿಸಲಿಲ್ಲ. ನೋಟು ರದ್ದತಿ ಜಾರಿಯಾದ ದಿನಗಳಲ್ಲಿ ರೈತರು ತಮ್ಮ ಮುಂಗಾರು ಇಳುವರಿಯನ್ನು ಮಾರುತ್ತಿದ್ದರು ಇಲ್ಲವೇ ಹಿಂಗಾರು ಬಿತ್ತನೆಗೆ ಮುಂದಾಗಿದ್ದರು. ಮಾರಾಟ ಮತ್ತು ಖರೀದಿ ಎರಡಕ್ಕೂ ದೊಡ್ಡ ಪ್ರಮಾಣದ ನಗದು ಅತ್ಯಗತ್ಯವಿತ್ತು. ನೋಟು ರದ್ದತಿ ಕಾರಣ ಮಾರುಕಟ್ಟೆಯಲ್ಲಿ ನಗದು ಕಾಣೆಯಾಗಿತ್ತು. ದೇಶದ 26.3 ಕೋಟಿ ರೈತರು ನಗದನ್ನೇ ಆಧರಿಸಿರುವವರು. ಅಂದು ಅವರ ಕೈಲಿದ್ದ ನಗದು ಕೆಲಸಕ್ಕೆ ಬರಲಿಲ್ಲ ಎಂಬುದು ಈ ಟಿಪ್ಪಣಿಯ ಸಾರಾಂಶ.

ಎಂ. ವೀರಪ್ಪ ಮೊಯಿಲಿ ಅಧ್ಯಕ್ಷತೆಯ 31 ಮಂದಿ ಸಂಸದರ ಸ್ಥಾಯಿ ಸಮಿತಿಯಲ್ಲಿ ಆಳುವ ಪಕ್ಷ ಮತ್ತು ವಿರೋಧ ಪಕ್ಷಗಳ ಸದಸ್ಯರು ಇದ್ದಾರೆ. ಸಮಿತಿಯ ಸಭೆಯ ಮುಂದೆ ಹಾಜರಾಗಿದ್ದ ಕೃಷಿ ಸಚಿವಾಲಯದ ಅಧಿಕಾರಿಗಳಿಗೆ ಸಮಿತಿಯು ಹರಿತ ಪ್ರಶ್ನೆಗಳನ್ನು ಕೇಳಿದೆ. ಕೃಷಿ ಕಾರ್ಯದರ್ಶಿ ಈ ಸಭೆಗೆ ಬಂದಿರಲಿಲ್ಲ.

ತಮ್ಮದೇ ಸರ್ಕಾರದ ಕೃಷಿ ಸಚಿವಾಲಯವು ನೋಟು ರದ್ದತಿ ಕ್ರಮದ ಅನಾಹುತವನ್ನು ಅಧಿಕೃತವಾಗಿ ಒಪ್ಪಿಕೊಂಡ ಅದೇ ದಿನ ಅತ್ತ ಮಧ್ಯಪ್ರದೇಶದಲ್ಲಿ ಪ್ರಧಾನಿ ಮೋದಿಯವರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಭ್ರಷ್ಟಾಚಾರ ಮತ್ತು ಕಪ್ಪು ಹಣದ ವ್ಯಾಧಿಯ ಚಿಕಿತ್ಸೆಗೆ ತಾವು ನೋಟು ರದ್ದತಿಯಂತಹ ಕಹಿ ಮದ್ದನ್ನು ನೀಡಿದ್ದಾಗಿ ಸಮರ್ಥಿಸಿಕೊಳ್ಳತೊಡಗಿದ್ದರು.

ಪ್ರಧಾನಮಂತ್ರಿ ಎದೆ ತಟ್ಟಿ ವೈಭವೀಕರಿಸಿರುವ ನೋಟು ರದ್ದತಿ ಕ್ರಮವನ್ನು ಅವರದೇ ಸರ್ಕಾರದ ಕೃಷಿ ಸಚಿವಾಲಯ ಟೀಕಿಸುವುದು ಎಂದರೇನು? ಸಮೂಹ ಮಾಧ್ಯಮಗಳಲ್ಲಿ ಈ ಟಿಪ್ಪಣಿ ಕುರಿತ ವರದಿಗಳು ದೊಡ್ಡ ರೀತಿಯಲ್ಲಿ ಬೆಳಕು ಕಂಡಿದ್ದವು. ಈ ‘ಆಚಾತುರ್ಯ’ದ ಹಾನಿ ಸರಿಪಡಿಸಲು ಮರುದಿನ ಖುದ್ದು ಕೃಷಿ ಸಚಿವರೇ ಕಾರ್ಯಪ್ರವೃತ್ತರಾದರು. ಟಿಪ್ಪಣಿ ವರದಿಗಳು ಸತ್ಯದೂರವೆಂದು ತಳ್ಳಿಹಾಕಲಾಯಿತು. ನೋಟು ರದ್ದತಿಯು ಕೃಷಿಯ ಮೇಲೆ ಯಾವುದೇ ದುಷ್ಪರಿಣಾಮ ಬೀರಿಲ್ಲ ಎಂಬ ಪರಿಷ್ಕೃತ ವರದಿ ತಯಾರಾಗತೊಡಗಿದೆ. ಆದರೆ ನೋಟು ರದ್ದತಿ ತರುವಾಯ ಬಹುತೇಕ ಎಲ್ಲ ಬೆಳೆಗಳ ಧಾರಣೆಗಳು ಮತ್ತು ಕೃಷಿ ಕೂಲಿದರ ಕುಸಿದದ್ದು ಬೆಳಕಿನಷ್ಟೇ ವಾಸ್ತವ. 2,953 ಕೃಷಿ ಉತ್ಪನ್ನ ಮಾರುಕಟ್ಟೆಗಳು ನೋಟು ರದ್ದತಿಯ ಆಘಾತಕ್ಕೆ ತಿಂಗಳುಗಟ್ಟಲೆ ಮರಗಟ್ಟಿ ಹೋದವು. ಹಲವಾರು ರಾಜ್ಯಗಳಲ್ಲಿ ರೈತರು ತರಕಾರಿಯನ್ನು ಬೀದಿಗೆ ಸುರಿದು ಪ್ರತಿಭಟಿಸಿದರು. ಉತ್ತರಪ್ರದೇಶದಲ್ಲಿ ಆಲೂಗೆಡ್ಡೆಯ ಧಾರಣೆ
ಶೇ 41ರಷ್ಟು ಕುಸಿತ ಕಂಡಿತು. ಬೇಡಿಕೆ ಕುಸಿದು ದಾಸ್ತಾನು ಬೆಟ್ಟಗಳಾಗಿ ಬೆಳೆದವು. 2017ರ ಮಾರ್ಚ್ ಹೊತ್ತಿಗೆ ದರಗಳು ಉತ್ಪಾದನೆ ವೆಚ್ಚಕ್ಕಿಂತ ಕೆಳಗೆ ಕುಸಿದವು. ವರ್ಷ ಉರುಳಿದರೂ ಸುಧಾರಣೆ ಕಾಣಲಿಲ್ಲ.

ವರ್ತಕರ ಕೈಯಲ್ಲೂ ನಗದು ಉಳಿಯಲಿಲ್ಲ. ಅಗ್ಗದ ದರಕ್ಕೆ ಮಾರಾಟ ಮಾಡುವಂತೆ ರೈತರ ಮೇಲೆ ಒತ್ತಡ ಹೇರತೊಡಗಿದರು. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬೆಳ್ಳುಳ್ಳಿ ಧಾರಣೆ ಕೆ.ಜಿಗೆ ₹ 130 ಇದ್ದದ್ದು ₹ 20ಕ್ಕೆ ಕುಸಿಯಿತು. ರಾಜಸ್ಥಾನದ ಕೋಟಾ ಸುತ್ತಮುತ್ತ ಬೆಳ್ಳುಳ್ಳಿ ರೈತರ ಆತ್ಮಹತ್ಯೆಯ ಪ್ರಕರಣಗಳು ಜರುಗಿದವು. ಮಧ್ಯಪ್ರದೇಶದ ಮಂದಸೌರಿನಲ್ಲಿ ಸಿಡಿದೆದ್ದ ರೈತರ ಮೇಲೆ ಪೊಲೀಸರು ಗುಂಡು ಹಾರಿಸಿ ಆರು ಮಂದಿ ಬಲಿಯಾದರು.

ಸಂಸದೀಯ ಸಮಿತಿಯ ಕಲಾಪದ ಈ ವಿವರಗಳನ್ನು (ವಿಶೇಷವಾಗಿ ಕೃಷಿ ಸಚಿವಾಲಯದ ಟಿಪ್ಪಣಿ) ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆಂದು ಆಪಾದಿಸಿ ಸಮಿತಿಯ ಅಧ್ಯಕ್ಷ ವೀರಪ್ಪ ಮೊಯಿಲಿ ವಿರುದ್ಧ ಲೋಕಸಭಾ ಸ್ಪೀಕರ್‌ಗೆ ಬಿಜೆಪಿ ಹಕ್ಕುಚ್ಯುತಿ ಸೂಚನೆ ಕಳಿಸಿದೆ.

ನೋಟು ರದ್ದತಿ ಕ್ರಮದ ಸಾಫಲ್ಯ-ವೈಫಲ್ಯಗಳ ವಿಮರ್ಶೆ- ಪರಾಮರ್ಶೆಗೆ ಕೇಂದ್ರ ಸರ್ಕಾರ ತಯಾರಿಲ್ಲ. ಅಂತಹ ಯಾವುದೇ ಕ್ರಮಗಳನ್ನು ಅದು ಪ್ರೋತ್ಸಾಹಿಸಿಲ್ಲ. ದೇಶದ ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಯಾದ ಸಿಎಜಿ ಕೂಡ ಹಿಂಜರಿದಿರುವ ನಿಚ್ಚಳ ಸೂಚನೆಗಳಿವೆ.

ರಫೇಲ್ ಒಪ್ಪಂದಕ್ಕೆ ಸಹಿ ಬಿದ್ದದ್ದು ಮತ್ತು ನೋಟು ರದ್ದತಿ ಕ್ರಮ ಜರುಗಿದ್ದು ಅನುಕ್ರಮವಾಗಿ 2015ರ ಏಪ್ರಿಲ್ ಮತ್ತು 2016ರ ನವೆಂಬರ್‌ನಲ್ಲಿ. ಈ ಸಂಬಂಧದ ವರದಿಗಳನ್ನು ಹೊರತರುವಲ್ಲಿ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್‌ ಸಂಸ್ಥೆ (ಸಿಎಜಿ) ಅನಗತ್ಯ ವಿಳಂಬ ತೋರಿದೆ ಎಂಬ ಆಪಾದನೆಯಿದೆ. 60 ಮಂದಿ ಹಿರಿಯ ನಿವೃತ್ತ ಅಧಿಕಾರಿಗಳು ಮತ್ತು ರಾಯಭಾರಿಗಳು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಈ ಕುರಿತು ಬಹಿರಂಗ ಪತ್ರವನ್ನೇ ಬರೆದಿದ್ದಾರೆ. ಹಾಲಿ ಕೇಂದ್ರ ಸರ್ಕಾರಕ್ಕೆ ಮುಜುಗರ ತಪ್ಪಿಸಲು ಈ ವರದಿಗಳನ್ನು 2019ರ ಮೇ ಲೋಕಸಭಾ ಚುನಾವಣೆಗಳವರೆಗೆ ಉದ್ದೇಶಪೂರ್ವಕವಾಗಿ ತಡೆ ಹಿಡಿಯಲಾಗಿದೆ ಎಂಬ ಭಾವನೆಗೆ ಆಸ್ಪದ ಆಗಿದೆ ಎಂದು ದೂರಿದ್ದಾರೆ. ನೋಟು ರದ್ದತಿ ಮತ್ತು ರಫೇಲ್ ಒಪ್ಪಂದ ಕುರಿತು ಆಳುವ ಮತ್ತು ವಿರೋಧಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳು, ಕೆಸರೆರಚಾಟ, ಗದ್ದಲ ನಡೆದಿದೆ. ಆದರೆ ವಾಸ್ತವಾಂಶ ಏನೆಂದು ನಾಗರಿಕರಿಗೆ ತಿಳಿದಿಲ್ಲ. ಮತದಾನದ ಹೊತ್ತಿಗೆ ಅವರು ಮಾಹಿತಿಪೂರ್ವಕ ಆಯ್ಕೆ ಮಾಡುವಂತಾಗಲು ಸಿಎಜಿ ವರದಿಗಳು ಸಕಾಲದಲ್ಲಿ ಸಲ್ಲುವಂತೆ ಒತ್ತಾಯಿಸುವುದು ನಾಗರಿಕರ ಹಕ್ಕು ಎಂದು ಬಹಿರಂಗ ಪತ್ರ ಹೇಳಿದೆ.

ದೇಶದ ಕೃಷಿ ಬಿಕ್ಕಟ್ಟು ದಶಕಗಳಷ್ಟು ಹಳೆಯದು. ಉಲ್ಬಣಿಸಿ ಪ್ರಜ್ಞೆ ತಪ್ಪಿ ಹಾಸಿಗೆ ಹಿಡಿದಿದೆ. ಆತ್ಮಹತ್ಯೆಗಳು ಲಕ್ಷಗಳ ಸಂಖ್ಯೆಯನ್ನು ದಾಟತೊಡಗಿವೆ. ಒಕ್ಕಲು ಮಕ್ಕಳ ಹೊಟ್ಟೆ ಮೇಲೆ ಹೊಡೆಯತೊಡಗಿರುವ ಬೆಳೆ ವಿಮೆ ಯೋಜನೆಗಳು ಖಾಸಗಿ ವಿಮಾ ಕಂಪನಿಗಳ ಬೊಕ್ಕಸ ತುಂಬತೊಡಗಿವೆ. ಯುವಪೀಳಿಗೆ ಒಕ್ಕಲುತನಕ್ಕೆ ಬೆನ್ನು ತೋರಿಸಿರುವ ಕಳವಳಕಾರಿ ವರದಿಗಳಿವೆ.ಪರಿಹಾರ ಸೂಚಿಸುವ ಎಂ.ಎಸ್.ಸ್ವಾಮಿನಾಥನ್ ಆಯೋಗದ ಮೊದಲ ವರದಿ ಸಲ್ಲಿಸಿ 14 ವರ್ಷಗಳೇ ಉರುಳಿವೆ. ಯುಪಿಎ ಸರ್ಕಾರವೂ ಈ ವರದಿಯನ್ನು ಸಂಸತ್ತಿನಲ್ಲಿ ಚರ್ಚೆಗೆ ಇಡಲಿಲ್ಲ. ಆನಂತರ ಅಧಿಕಾರಕ್ಕೆ ಬಂದ ಎನ್‌ಡಿಎ ಸರ್ಕಾರವೂ ಈವರೆಗೆ ತಲೆಕೆಡಿಸಿಕೊಂಡಿಲ್ಲ. ಮಧ್ಯರಾತ್ರಿಯ ಜಂಟಿ ಅಧಿವೇಶನ ಕರೆದು ಜಿಎಸ್‌ಟಿ ಮಸೂದೆ ಅಂಗೀಕರಿಸುವ ಸರ್ಕಾರ ರೈತರನ್ನು ಜೀವಂತ ಸುಡತೊಡಗಿರುವ ಸಮಸ್ಯೆಗಳ ಕುರಿತು ವಿಶೇಷ ಅಧಿವೇಶನ ಕರೆದು ಚರ್ಚಿಸುವ ಪ್ರಾಮಾಣಿಕತೆ ತೋರಬೇಕಿದೆ.

21 ದಿನಗಳ ವಿಶೇಷ ಜಂಟಿ ಸಂಸತ್ ಅಧಿವೇಶನದ ಆಗ್ರಹವನ್ನು ಮುಂದಿಟ್ಟು ದೇಶದ ನಾನಾ ಭಾಗಗಳಿಂದ ರೈತ ಪ್ರತಿನಿಧಿಗಳು ಇದೇ ತಿಂಗಳ 29-30ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಸಮಾವೇಶಗೊಳ್ಳಲಿದ್ದಾರೆ. ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯ ಅಡಿಯಲ್ಲಿ 200ಕ್ಕೂ ಹೆಚ್ಚು ರೈತ ಸಂಘಟನೆಗಳು ಪಾಲ್ಗೊಳ್ಳಲಿವೆ. ಬಾಯಿ ತೆರೆದರೆ ತಾವು ರೈತರ ಮಕ್ಕಳು ಎಂದು ಹೇಳಿಕೊಳ್ಳುತ್ತಾರೆ ಸಂಸದರು. ಈ ಮಾತು ನಿಜವೇ ಆಗಿದ್ದರೆ ತಮಗೆ ಜನ್ಮ ಕೊಟ್ಟವರ ಹೊಟ್ಟೆ ಸಂಕಟಕ್ಕೆ ಬಾಯಿ ಆಗುವ ಬಂಗಾರದ ಅವಕಾಶವನ್ನು ಮೋದಿ ನೇತೃತ್ವದ ಸರ್ಕಾರ ಕಳೆದುಕೊಳ್ಳಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT