ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವರ ಜಿಮ್ ಅಕೋಸ್ಟ-, ನಮ್ಮ ಸೆಲ್ಫಿ ಮಾಧ್ಯಮ

ಅಲ್ಲಿ ಆಡಿದ ಮಾತುಗಳಿದ್ದರೆ, ಇಲ್ಲಿ ಒಡಲಲ್ಲೇ ಅವಿತಿರಿಸಿಕೊಂಡ ಹಗೆಯ ಹೊಗೆಯಿದೆ
Last Updated 18 ನವೆಂಬರ್ 2018, 20:08 IST
ಅಕ್ಷರ ಗಾತ್ರ

ಭುವನದ ದೊಡ್ಡಣ್ಣ ತಾನು ಎಂದು ಭ್ರಮಿಸಿ ಬೀಗುವ ಅಮೆರಿಕೆಯ ಅಧ್ಯಕ್ಷರ ಕಚೇರಿ ಮತ್ತು ಸರ್ಕಾರಿ ನಿವಾಸದ ಹೆಸರು ಶ್ವೇತಭವನ. ರಾಜಧಾನಿ ವಾಷಿಂಗ್ಟನ್‌ನಲ್ಲಿರುವ ಶ್ವೇತಭವನದಲ್ಲಿ ನಡೆಯುವ ಶಕ್ತಿ ರಾಜಕಾರಣದ ನಿತ್ಯ ವ್ಯವಹಾರಗಳನ್ನು ವರದಿ ಮಾಡುವ ಹಿರಿಯ ಪತ್ರಕರ್ತರ ದೊಡ್ಡ ದಂಡೇ ಇರುತ್ತದೆ. ಶ್ವೇತಭವನ ಕೆಲ ದಿನಗಳ ಹಿಂದೆ ಸಿ.ಎನ್.ಎನ್. ಸುದ್ದಿವಾಹಿನಿಯ ಹಿರಿಯ ಬಾತ್ಮೀದಾರ ಜಿಮ್ ಅಕೋಸ್ಟ ಅವರ ಮಾಧ್ಯಮ ಮಾನ್ಯತಾ ಪತ್ರವನ್ನು ರದ್ದು ಮಾಡಿತು. ಶ್ವೇತಭವನದ ವ್ಯವಹಾರಗಳನ್ನು ವರದಿ ಮಾಡುವ ಹಿರಿಯ ಪತ್ರಕರ್ತರ ದೊಡ್ಡ ದಂಡೇ ಉಂಟು. ಶ್ವೇತಭವನ ಬಾತ್ಮೀದಾರರ ಸಂಘ ನೂರು ವರ್ಷಗಳಷ್ಟು ಹಳೆಯದು. ಅಮೆರಿಕೆಯ ಅಧ್ಯಕ್ಷರೂ ಸೇರಿದಂತೆ ಪ್ರಬಲ ಅಧಿಕಾರಿಗಳಿಂದ ಸಮಜಾಯಿಷಿಗಳು- ಉತ್ತರಗಳನ್ನು ಪಡೆಯಲು ಅನುವು ಮಾಡಿಕೊಡುವುದು ಈ ಸಂಘದ ಉದ್ದೇಶ.

ಶ್ವೇತಭವನದಲ್ಲಿ ಇತ್ತೀಚೆಗೆ ಅಮೆರಿಕೆಯ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪತ್ರಿಕಾಗೋಷ್ಠಿ ನಡೆಯಿತು. ಜಿಮ್ ಅಕೋಸ್ಟ ಕೆಲ ನೇರ ನಿಷ್ಠುರ ಪ್ರಶ್ನೆಗಳನ್ನು ಜಿಗುಟಿನಿಂದ ಕೇಳಿದರು. ನುಣುಚಿಕೊಳ್ಳುವ ಅಥವಾ ಬಾಯಿ ಬಡಿಯುವ ಟ್ರಂಪ್ ಪ್ರಯತ್ನಗಳನ್ನು ಜಿಮ್ ಲೆಕ್ಕಿಸಲಿಲ್ಲ. ನೂರಾರು ಮೈಲಿ ದೂರದಲ್ಲಿರುವ ಮೆಕ್ಸಿಕೋದ ಅಸಹಾಯಕ ವಲಸೆಗಾರರ ‘ಕಾರವಾನ್’ ಅನ್ನು ದಾಳಿಕೋ
ರರು ಎಂದು ತಾವು ಕರೆದದ್ದು ಸರಿ ಎಂದು ಟ್ರಂಪ್ ಸಮರ್ಥಿಸಿಕೊಳ್ಳುತ್ತಾರೆ.

‘ನೀವೊಬ್ಬ ಕೆಟ್ಟ, ಅಸಭ್ಯ, ಒರಟು ವ್ಯಕ್ತಿ. ನಿಮ್ಮನ್ನು ಕೆಲಸಕ್ಕೆ ಇಟ್ಟುಕೊಂಡಿರುವ ಸಿ.ಎನ್.ಎನ್.ಗೆನಾಚಿಕೆಯಾಗಬೇಕು. ಸಿ.ಎನ್.ಎನ್.ಗೆ ನೀವು ಕೆಲಸ ಮಾಡಕೂಡದು, ಸಾಕು ಕುಳಿತುಕೊಳ್ಳಿ’ ಎನ್ನುತ್ತಾರೆ. ಸರ್ಕಾರಿ ಸಹಾಯಕಿ ಜಿಮ್ ಕೈಯಿನ ಧ್ವನಿವರ್ಧಕವನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಾರೆ.

ಇನ್ನೂ ಕೆಲ ಪ್ರಶ್ನೆಗಳು ಟ್ರಂಪ್ ಅವರಿಗೆ ಎದುರಾಗುತ್ತವೆ. ‘ಅತ್ಯಂತ ಹಗೆತನದ ಪ್ರತಿಕೂಲ (ಸುದ್ದಿ) ಮಾಧ್ಯಮಗಳು ನೀವು, ಅತ್ಯಂತ ದುಃಖದ ಸಂಗತಿಯಿದು’ಎಂದು ಪತ್ರಿಕಾಗೋಷ್ಠಿಯಲ್ಲಿನ ಪತ್ರಕರ್ತರ ಕುರಿತು ಟ್ರಂಪ್ ಅಸಮಾಧಾನ ಕಾರುತ್ತಾರೆ.

‘ನಿಮ್ಮ ವಾಗಾಡಂಬರದ ಕಾರಣ, ನಿಮ್ಮ ರಿಪಬ್ಲಿಕನ್ ಪಕ್ಷವು ಬಿಳಿಯರ ರಾಷ್ಟ್ರವಾದವನ್ನು ಸಮರ್ಥಿಸುವ ಪಕ್ಷ ಎಂದು ಹೇಳುವವರಿದ್ದಾರೆ. ಏನಂತೀರಿ’ ಎಂಬುದು ಮತ್ತೊಬ್ಬ ವರದಿಗಾರನ ಪ್ರಶ್ನೆ. ಈ ಪ್ರಶ್ನೆಯೇ ವರ್ಣಭೇದದಿಂದ ಕೂಡಿದ್ದು ಎಂದು ಟ್ರಂಪ್ ಖಂಡಿಸುತ್ತಾರೆ. ಅತಿ ಹೆಚ್ಚು ಆಫ್ರಿಕನ್- ಅಮೆರಿಕನ್(ಕಪ್ಪು ವರ್ಣೀಯ ಅಮೆರಿಕನ್) ಪ್ರತಿನಿಧಿಗಳನ್ನು ಹೊಂದಿರುವ ಪಕ್ಷ ನಮ್ಮದು ಎಂದು ಪದೇ ಪದೇ ಹೇಳುತ್ತಾರೆ.

ಮರುದಿನ ಜಿಮ್ ಅಕೋಸ್ಟ ಅವರ ಶ್ವೇತಭವನದ ಮಾಧ್ಯಮ ಮಾನ್ಯತಾ ಪತ್ರವನ್ನು ಸರ್ಕಾರ ರದ್ದುಪಡಿಸುತ್ತದೆ. ವಿಶ್ವದ ಅತ್ಯಂತ ಶಕ್ತಿಶಾಲಿ ಎಂದು ಬಗೆಯಲಾಗುವ ಅಮೆರಿಕೆಯ ಅಧ್ಯಕ್ಷನ ಈ ಸರ್ವಾಧಿಕಾರಿ ನಡವಳಿಕೆಯ ಮುಂದೆ ಸಿ.ಎನ್.ಎನ್. ಆಡಳಿತವರ್ಗ ಮಂಡಿ ಊರುವುದಿರಲಿ, ತಲೆಯನ್ನೂ ಬಾಗಿಸುವುದಿಲ್ಲ. ಬದಲಾಗಿ ನ್ಯಾಯಾಲಯದ ಮೆಟ್ಟಿಲೇರುತ್ತದೆ.

ಟ್ರಂಪ್ ಅವರನ್ನು ಬಲವಾಗಿ ಬೆಂಬಲಿಸುವ ಫಾಕ್ಸ್ ನ್ಯೂಸ್ ಸುದ್ದಿವಾಹಿನಿಯೂ ಸೇರಿದಂತೆ ಬಹುಸಂಖ್ಯೆಯ ಸುದ್ದಿವಾಹಿನಿಗಳು ಜಿಮ್ ಜೊತೆ ನಿಲ್ಲುತ್ತವೆ. ಮಾನ್ಯತಾ ಪತ್ರವನ್ನು ರದ್ದುಪಡಿಸಿದ ಕ್ರಮವು ಜನತಂತ್ರ ವಿರೋಧಿ ಎಂದು 300ಕ್ಕೂ ಹೆಚ್ಚು ಅಮೆರಿಕನ್ ಪತ್ರಿಕೆಗಳು ಸಂಪಾದಕೀಯ ಬರೆದು ಖಂಡಿಸುತ್ತವೆ. ಟ್ರಂಪ್ ಸರ್ಕಾರದಿಂದಲೇ ನೇಮಕಗೊಂಡ ಜಿಲ್ಲಾ ನ್ಯಾಯಾಧೀಶರೊಬ್ಬರು ಜಿಮ್ ಅಕೋಸ್ಟ ಅವರ ಮಾನ್ಯತಾ ಪತ್ರ ರದ್ದನ್ನು ತಕ್ಷಣವೇ ಹಿಂದಕ್ಕೆ ಪಡೆಯುವಂತೆ ಹಂಗಾಮಿ ತೀರ್ಪು ನೀಡುತ್ತಾರೆ.

ಟ್ರಂಪ್ ಅವರು ವರದಿಗಾರರನ್ನು ‘ಕಸ, ಕೊಳೆ, ಲೋಳೆ, ರೋಗಗ್ರಸ್ತರು, ದೇಶಭಕ್ತಿ ಇಲ್ಲದವರು, ನಮ್ಮ
ದೇಶವನ್ನು ಇಷ್ಟಪಡದವರು, ನಮ್ಮ ಇತಿಹಾಸ ಮತ್ತು ಪರಂಪರೆಯ ಕುರಿತು ಗೌರವ ಇಲ್ಲದವರು’ ಎಂದು ಬಹುತೇಕ ದಿನ ಬೆಳಗಾದರೆ ಜರೆಯುತ್ತಾರೆ. ಅಮೆರಿಕೆಯ ಮುಂಚೂಣಿ ಸುದ್ದಿ ಸಂಸ್ಥೆಗಳಿಗೆ ‘ಫೇಕ್ ನ್ಯೂಸ್’ (ನಕಲಿ ಸುದ್ದಿ) ಎಂದು ಮಸಿ ಬಳಿದಿದ್ದಾರೆ. ಮಾನಹಾನಿ ಕೇಸುಗಳನ್ನು ಜಡಿಯುವ, ಪ್ರಸಾರ ಪರವಾನಗಿಗಳನ್ನು ರದ್ದು ಮಾಡುವ, ಅಪನಿಂದೆ-ಮಾನಹಾನಿ ಕಾನೂನುಗಳನ್ನು ಬದಲಾಯಿಸುವ ಬೆದರಿಕೆಗಳನ್ನು ಹಾಕುತ್ತಿರುತ್ತಾರೆ. ಪತ್ರಿಕೆಗಳನ್ನು ಶತ್ರುಗಳು ಎಂದು ಕರೆಯುವ ವಿಶ್ವದ ನಾನಾ ಸರ್ವಾಧಿಕಾರಿಗಳ ಪೈಕಿ ಟ್ರಂಪ್ ಮೊದಲನೆಯವರೂ ಅಲ್ಲ ಕೊನೆಯವರೂ ಆಗುವುದಿಲ್ಲ.

ಅವರ ದಾಳಿ ಕೇವಲ ಪತ್ರಿಕಾ ಮಾಧ್ಯಮಗಳಿಗೆ ಸೀಮಿತ ಅಲ್ಲ. ವಲಸೆ ಬಂದವರು, ಆಫ್ರಿಕನ್- ಅಮೆರಿಕನ್ನರು, ಲ್ಯಾಟಿನೋಗಳು, ಮಹಿಳೆಯರು, ಮುಸಲ್ಮಾನರು, ನ್ಯಾಯಾಧೀಶರು, ಪರಿಸರವಾದಿಗಳು ಹೀಗೆ ತಮ್ಮನ್ನು ಪ್ರಶ್ನಿಸುವ ಯಾರೇ ಆದರೂ ಅವರ ಮೇಲೆ ಎರಗಿದ್ದಾರೆ. ಸಮೂಹ ಮಾಧ್ಯಮಗಳೆಂಬ ಶತ್ರುಗಳನ್ನು ಎಂದೆಂದಿಗೂ ಕೊಲ್ಲಲಾರೆ. ದ್ವೇಷಿಸುತ್ತೇನೆ ಎಂದು ಸಾರ್ವಜನಿಕ ಸಭೆಗಳಲ್ಲಿ ಅಬ್ಬರಿಸುತ್ತಾರೆ. ಅವರ ಅಂಧ ಬೆಂಬಲಿಗರು ಅದೇ ಸಾರ್ವಜನಿಕ ಸಭೆಗಳಲ್ಲಿ ಪತ್ರಕರ್ತರ ವಿರುದ್ಧ ಕ್ರೋಧತಪ್ತರಾಗಿ ಮುಷ್ಟಿ ಬಿಗಿಯುತ್ತಾರೆ, ಬೈಗಳನ್ನು ಕಿರುಚುತ್ತಾರೆ, ಬೆದರಿಕೆ ಹಾಕುತ್ತಾರೆ.

ಅಮೆರಿಕೆ ಇಂದು ಒಡೆದ ಸಮಾಜ. ಬಿಳಿಯರು, ಕಪ್ಪು ವರ್ಣೀಯರು, ಲ್ಯಾಟಿನೋಗಳು, ಏಷಿಯನ್ನರು, ಪುರುಷರು, ಮಹಿಳೆಯರು, ಕ್ರೈಸ್ತರು, ಯಹೂದಿಗಳು, ಮುಸಲ್ಮಾನರು, ತೃತೀಯ ಲಿಂಗಿಗಳು, ಉದಾರವಾದಿಗಳು, ಸಂಪ್ರದಾಯವಾದಿಗಳು, ಎಡ-ಬಲ ಪಂಥೀಯರು ಎಲ್ಲರೂ ತಮ್ಮ ಮೇಲೆ ದಾಳಿ- ಕಿರುಕುಳ ನಡೆದಿದೆ, ತಮ್ಮನ್ನು ತರತಮದಿಂದ ನಡೆಸಿಕೊಳ್ಳಲಾಗುತ್ತಿದೆ ಎಂದು ಭಾವಿಸಿರುವ ಸಮಾಜ.

ಮೇಲಿನ ಈ ಎಲ್ಲ ಕಥನ ಸಮಕಾಲೀನ ಭಾರತೀಯ ಸಂದರ್ಭಕ್ಕೆ ಪರಿಚಿತ ಎನಿಸಿದ್ದರೆ ಆಶ್ಚರ್ಯವಿಲ್ಲ. ವ್ಯತ್ಯಾಸ ಇಷ್ಟೇ- ಅಲ್ಲಿ ಪತ್ರಿಕಾ ಸ್ವಾತಂತ್ರ್ಯ ಸಂವಿಧಾನದತ್ತ. ಇಲ್ಲಿ ವಾಕ್ ಸ್ವಾತಂತ್ರ್ಯದ ಮರೆಯಲ್ಲಿ ಅಡಕ. ಅಲ್ಲಿನ ನಿರ್ಭೀತ ಮಾಧ್ಯಮಗಳು ಮಂಡಿ ಊರುವುದಿಲ್ಲ. ಇಲ್ಲಿ ಭಟ್ಟಂಗಿತನದ ರಸ ತೊಟ್ಟಿಕ್ಕಿಸುತ್ತವೆ. ಅಲ್ಲಿ ಬಾಯಿ ತೆರೆದು ಆಡಿದ ಮಾತುಗಳಿವೆ, ಇಲ್ಲಿ ಒಡಲಲ್ಲೇ ಇರಿಸಿಕೊಂಡ ಹಗೆಯ ಹೊಗೆಯಿದೆ. ಕಳೆದ ಹಲವು ವರ್ಷಗಳಿಂದ ಬಿತ್ತಿ ಬೆಳೆಸಿದ ಅಸಹನೆಯ ನಂಜಿನ ಫಸಲು ಗೌರಿ ಲಂಕೇಶ್ ಅಂತಹ ಪತ್ರಕರ್ತರ ಪ್ರಾಣಬಲಿ ಪಡೆದಿದೆ. ಬಹುತ್ವದ ಸಮಾಜವನ್ನು ಬಯಸುವ ಸಾವಿರಾರು ಪತ್ರಕರ್ತರನ್ನು ಭೀತಿ ಮತ್ತು ಚಾರಿತ್ರ್ಯವಧೆಯ ಕರಿನೆರಳಿಗೆ ನೂಕಿದೆ.

ನಮ್ಮಲ್ಲಿ ಪತ್ರಿಕಾಸ್ವಾತಂತ್ರ್ಯಕ್ಕೆ ಬದ್ಧ ಎಂದು ಬಹಿರಂಗವಾಗಿ ಸಾರುವ ಸರ್ಕಾರವಿದೆ. ತನ್ನ ತಪ್ಪು ನಡೆಗಳನ್ನು, ಅಪದ್ಧ ಆತ್ಮರತಿಯನ್ನು ಪ್ರಶ್ನೆ ಮಾಡುವ ಮಾಧ್ಯಮ ಸಂಸ್ಥೆಗಳನ್ನು ‘ದಾರಿಗೆ ತರಲು’ ಸರ್ಕಾರ ದಂಡಪ್ರಯೋಗದ ತನ್ನದೇ ವಿನೂತನ ವಿಧಾನಗಳನ್ನು ಹೊಂದಿದೆ.

ವಸ್ತುನಿಷ್ಠತೆಯು ಹಿಂದೆಂದಿಗಿಂತ ಹೆಚ್ಚು ಹತ್ಯೆಯಾಗತೊಡಗಿದೆ. ಇಂದಿರಾ, ರಾಜೀವ್, ನರಸಿಂಹ ರಾವ್ ಕಾಲದಲ್ಲೂ ಸಮೂಹ ಮಾಧ್ಯಮಗಳನ್ನು ನಿಯಂತ್ರಿಸುವ ಪ್ರಯತ್ನ ಸತತವಾಗಿ ನಡೆದುಕೊಂಡು ಬಂದಿದೆ.

ಬಹುತೇಕ ಮೀಡಿಯಾ ಇಂದು ಲಾಭಬಡುಕ ಕಾರ್ಪೊರೇಟ್‌ ಸಂಸ್ಥೆಗಳ ಮತ್ತು ಅಧಿಕಾರದ ಹಪಾಹಪಿಯ ರಾಜಕೀಯ ಹಿತಾಸಕ್ತ ಶಕ್ತಿಗಳ ಕೈಯಲ್ಲಿನ ಅಸ್ತ್ರವಾಗತೊಡಗಿದೆ. ಅಧಿಕಾರಸ್ಥರನ್ನು ಬಲಿಪಶುವಿನಂತೆ ಚಿತ್ರಿಸಲಾಗುತ್ತಿದೆ. ಮುಖ್ಯಧಾರೆಯ ಹಲವು ಸುದ್ದಿವಾಹಿನಿಗಳು ದೇಶದ ಬಹುದೊಡ್ಡ ಕಾರ್ಪೊರೇಟ್ ಕಂಪನಿಗಳಿಂದ, ಇಲ್ಲವೇ ಅವುಗಳ ಪಾಲುದಾರರಿಂದ ಸಾಲರೂಪದ ಆರ್ಥಿಕ ನೆರವು ಪಡೆದಿರುವ ವರದಿಗಳಿವೆ. ಬಹುತೇಕ ಸಮೂಹ ಮಾಧ್ಯಮಗಳು ಸರ್ಕಾರ ಮತ್ತು ಆಡಳಿತಪಕ್ಷವನ್ನು ಪ್ರಶ್ನಿಸುವ ಬದಲು ಪ್ರತಿಪಕ್ಷಗಳ ಬೇಟೆಯಾಡುವ ವಿಪರ್ಯಾಸ ಜರುಗಿದೆ.

ಪತ್ರಿಕಾಗೋಷ್ಠಿಯನ್ನೇ ನಡೆಸದ ಪ್ರಧಾನಿಯವರು ದೀಪಾವಳಿ ಮಂಗಳ ಮಿಲನಕ್ಕೆ ಪತ್ರಕರ್ತರನ್ನು ಕರೆಯುತ್ತಾರೆ. ಪ್ರಶ್ನೆ ಕೇಳುವ ತಮ್ಮ ಕಸುಬನ್ನು ಮರೆತಿರುವ ಪತ್ರಕರ್ತರು ಪ್ರಧಾನಿ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಒಬ್ಬರ ಮೈಮೇಲೆ ಮತ್ತೊಬ್ಬರು ಬಿದ್ದು ತಹತಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT