ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ | ಶಾಸ್ತ್ರೀಯ ಕನ್ನಡ: ಬೇಕು ಬದ್ಧತೆ

ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ದೊರಕಿಸಿಕೊಡುವ ದಿಸೆಯಲ್ಲಿ ರಾಜ್ಯ ಸರ್ಕಾರವ
Last Updated 3 ಮಾರ್ಚ್ 2023, 22:45 IST
ಅಕ್ಷರ ಗಾತ್ರ

ಕನ್ನಡ ಶಾಸ್ತ್ರೀಯ ಭಾಷೆಗೆ ಸಂಬಂಧಿಸಿದಂತೆ ದಿವಂಗತ ಪ.ಮಲ್ಲೇಶ್‍ ಅವರಂತಹ ಕನ್ನಡಪರ ಚಿಂತಕರ ಕೊಡುಗೆಗಳನ್ನು ನಾವು ಸ್ಮರಿಸಬೇಕು ಎಂಬ ನಾ.ದಿವಾಕರ ಅವರ ಹೇಳಿಕೆಯ ಬಗ್ಗೆ (ಸಂಗತ, ಫೆ. 20) ಭಿನ್ನಾಭಿಪ್ರಾಯವಿಲ್ಲ. ಆದರೆ, ಅದಕ್ಕೆ ನಾಂದಿ ಹಾಡಿದವರು ನನ್ನ ಗುರುಗಳು ಮತ್ತು ಕನ್ನಡದ ಅತ್ಯುತ್ತಮ ಗದ್ಯ ಬರವಣಿಗೆಗಾರರೂ ಆಗಿದ್ದ ದಿವಂಗತ ದೇ.ಜವರೇಗೌಡರು ಎಂಬುದನ್ನು ಮರೆಯಲಾಗದು. ಅವರು ಕನ್ನಡಕ್ಕೆ ಆ ಸ್ಥಾನ ದಕ್ಕಬೇಕೆಂದು 2000ದ ಪ್ರಾರಂಭದಲ್ಲೇ ಮೈಸೂರಿನ ಕುವೆಂಪು ಟ್ರಸ್ಟ್‌ನ ಒಳಾಂಗಣದಲ್ಲಿ ಉಪವಾಸಸತ್ಯಾಗ್ರಹವನ್ನು ಹೂಡಿದ್ದರು. ಅವರ ಜೊತೆ ನಾನು ಮತ್ತು ನನಗೆ ಚೆನ್ನಾಗಿ ನೆನಪಿರುವ ಹಾಗೆ, ಚಿಂತಕ, ಸಾಹಿತಿ ಅರವಿಂದ ಮಾಲಗತ್ತಿ ಮತ್ತಿತರರು ಇದ್ದೆವು.

ಆಮೇಲೆ ಕನ್ನಡ ಕ್ರಿಯಾ ಸಮಿತಿಯೂ ಮಲ್ಲೇಶ್‍ ಅವರ ನೇತೃತ್ವದಲ್ಲಿ ತನ್ನ ಹೋರಾಟವನ್ನು ಮುಂದುವರಿಸಿತು. ಅದರಲ್ಲೂ ನಾವು ಕ್ರಿಯಾತ್ಮಕವಾಗಿ ತೊಡಗಿಕೊಂಡಿದ್ದೆವು. ಏನಿದ್ದರೂ ಈ ಕುರಿತು ಮೊದಲ ಗೌರವ ಸಲ್ಲಬೇಕಾದ್ದು ಜವರೇಗೌಡರಿಗೆ, ಆಮೇಲೆ ಉಳಿದವರಿಗೆ. ಎಂದೂ ಇತಿಹಾಸವನ್ನು ಬದಲಿಸಲಾಗದು, ಭಿನ್ನ ನೆಲೆಗಟ್ಟಿನಲ್ಲಿ ವ್ಯಾಖ್ಯಾನಿಸಬಹುದಷ್ಟೆ.

– ಹೊರೆಯಾಲ ದೊರೆಸ್ವಾಮಿ, ಮೈಸೂರು

****

ಅಘೋಷಿತ ಆದೇಶ?

ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ದೊರೆಯದಿರುವುದಕ್ಕೆ ಸಂಬಂಧಿಸಿ ನಾ. ದಿವಾಕರ ಅವರು ಬರೆದಿರುವುದನ್ನು ಗಮನಿಸಿದೆ. ನಾನು ಆಗ 2019ರ ಅವಧಿಯಲ್ಲಿ ಕೇಂದ್ರದಲ್ಲಿ ಎರಡೂವರೆ ವರ್ಷ ಯೋಜನಾ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಕೇಂದ್ರದ ಸ್ವಾಯತ್ತತೆ ಕುರಿತಾಗಿ ಹಿಂದೆ ನಡೆದ ಬೆಳವಣಿಗೆಗಳನ್ನು ಸಾರ್ವಜನಿಕರ ಗಮನಕ್ಕೆ ತರಲು ಇಚ್ಛಿಸುತ್ತೇನೆ.

ಕೇಂದ್ರದಿಂದ ಏನೇ ಕಾರ್ಯಕ್ರಮ ಮಾಡಲಿ ಅದರ ರೂಪುರೇಷೆ, ವಿಷಯ ಪರಿಣತರ ಪಟ್ಟಿ, ಅದಕ್ಕೆ ತಗಲುವ ಅಂದಾಜು ವೆಚ್ಚ, ಕಾರ್ಯಕ್ರಮ ನಡೆಯುವ ಸ್ಥಳ- ಇದಕ್ಕೆ ಭಾರತೀಯ ಭಾಷಾ ಸಂಸ್ಥೆಯ ನಿರ್ದೇಶಕರಿಂದ ಅನುಮತಿ ಪಡೆಯಬೇಕಿತ್ತು. ಆಗ ಪ್ರಭಾರಿ ನಿರ್ದೇಶಕರಾಗಿ ಡಾ. ಡಿ.ಜಿ.ರಾವ್ ಅವರಿದ್ದರು. ಅವರಿಗೆ ಭಾಷೆ, ಸಾಹಿತ್ಯ ಮತ್ತು ಸಂಶೋಧನೆಯ ಜ್ಞಾನ ಅಷ್ಟಕ್ಕಷ್ಟೇ. ಹೀಗಾಗಿ ಅವರ ಮರ್ಜಿಯ ಮೇಲೆ ಕೆಲಸಗಳು ನಡೆಯುತ್ತಿದ್ದವು. ಆಗ ಎರಡು ವರ್ಷಗಳಲ್ಲಿ ಕೇಂದ್ರದಿಂದ ಕರ್ನಾಟಕದ ಬೇರೆ ಬೇರೆ ಸ್ಥಳಗಳಲ್ಲಿ ಅಂದಾಜು 40- 45 ಕಾರ್ಯಾಗಾರ, ವಿಚಾರ ಸಂಕಿರಣಗಳು ನಡೆದವು. ಇದರಿಂದ ಯುವ ಸಂಶೋಧಕರಿಗೆ, ಕನ್ನಡ ಅಧ್ಯಾಪಕರಿಗೆ ಹೆಚ್ಚಿನ
ಪ್ರಯೋಜನವಾಯಿತು.

ಈ ನಡುವೆ 2020ರ ಆರಂಭದಲ್ಲಿ ಕರ್ನಾಟಕ ಸರ್ಕಾರಕ್ಕೆ ಶಾಸ್ತ್ರೀಯ ಕನ್ನಡ ಕೇಂದ್ರದ ಸ್ವಾಯತ್ತತೆಗೆ ಒತ್ತಾಯಿಸಿ ನಾಲ್ಕಾರು ಪತ್ರಗಳನ್ನು ಬರೆಯಲಾಯಿತು. ಆಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ಸಿ.ಟಿ.ರವಿ ಅವರು ಹೆಚ್ಚಿನ ಆಸಕ್ತಿ ತೋರಿ, ತಕ್ಷಣ ಸಭೆ ಕರೆದರು. ಶಾಸ್ತ್ರೀಯ ಕನ್ನಡ ಕೇಂದ್ರದ ವಾಸ್ತವ ಪರಿಸ್ಥಿತಿಯನ್ನು ಅರಿತು ಮೊದಲು ಕಟ್ಟಡ ಸಮೇತ ನಿವೇಶನವನ್ನು ಮೈಸೂರು ವಿಶ್ವವಿದ್ಯಾಲಯದಿಂದ ಮಂಜೂರು ಮಾಡಿಸಿದರು. ಮೊದಲಿಗೆ ಮಂಜೂರಾದ ನಿವೇಶನವು ಹುಣಸೂರು ರಸ್ತೆಯ ಪ್ರೀಮಿಯರ್ ಸ್ಟುಡಿಯೊದ ಮುಂಭಾಗದಲ್ಲಿತ್ತು.

ರಾಜ್ಯ ಸರ್ಕಾರದ ಈ ಬೆಂಬಲವನ್ನು ಕಂಡು ಭಾರತೀಯ ಭಾಷಾ ಸಂಸ್ಥೆಯ ನಿರ್ದೇಶಕರು ಕಕ್ಕಾಬಿಕ್ಕಿಯಾದರು. ಸ್ವಾಯತ್ತತೆಯ ಕುರಿತು ಪತ್ರ ಬರೆಯಲು ತಮ್ಮ ಒಪ್ಪಿಗೆ ಪಡೆದಿಲ್ಲವೆಂದು ಆರೋಪಿಸಿ ನನಗೆ ಎರಡು ಬಾರಿ ಎಚ್ಚರಿಕೆ ಪತ್ರವನ್ನು ಕೊಟ್ಟರು. ಕೇಂದ್ರಕ್ಕೆ ಮಂಜೂರಾದ ನಿವೇಶನವನ್ನು ಉನ್ನತ ಶಿಕ್ಷಣ ಇಲಾಖೆಯಿಂದ ವಾಪಸ್ ಪಡೆದು ಬದಲಿ ನಿವೇಶನ ಕೊಟ್ಟರು. ಇದು ಮೈಸೂರಿನ ವಿದ್ವಾಂಸರು ಮತ್ತು ಕನ್ನಡ ಹೋರಾಟಗಾರರ ಗಮನಕ್ಕೆ ಬಂದು ‘ಭಾಷಾ ಸಂಸ್ಥೆಯ ನಿರ್ದೇಶಕರು ಕನ್ನಡ ವಿರೋಧಿಯಾಗಿದ್ದಾರೆ. ತಕ್ಷಣ ಅವರನ್ನು ಬದಲಿಸಬೇಕು’ ಎಂದು ಹೋರಾಟ ಮಾಡಿದರು.

‘ಪ್ರಜಾವಾಣಿ’ ಪತ್ರಿಕೆ ಆ ದಿನಗಳಲ್ಲಿ ಶಾಸ್ತ್ರೀಯ ಕನ್ನಡ ಕೇಂದ್ರಕ್ಕೆ ಬೆಂಬಲವಾಗಿ ನಿಂತಿತು. ಅಷ್ಟರಲ್ಲಿ ಕೋವಿಡ್ ಬಂದು ಎಲ್ಲವನ್ನೂ ಸ್ತಬ್ಧಗೊಳಿಸಿತು. ನನ್ನ ಅಧಿಕಾರಾವಧಿ ಇನ್ನೂ ನಾಲ್ಕು ತಿಂಗಳಿದ್ದರೂ ಮುಂಚೆಯೇ ಸಂದರ್ಶನ ನಡೆಸಿ ಹೊಸಬರನ್ನು ತರಲಾಯಿತು. ಅವರು ಹೋದ ಮೇಲೆ ಈಗ ಮತ್ತೊಬ್ಬರು ಆ ಸ್ಥಾನಕ್ಕೆ ಬಂದಿದ್ದಾರೆ. ರಾಜ್ಯ ಸರ್ಕಾರವು ಕನ್ನಡ ಭಾಷೆಯ ಪ್ರಶ್ನೆ ಬಂದಾಗ ಉದಾರವಾಗಿ ಮಾತನಾಡುತ್ತದೆ. ಕೇಂದ್ರಕ್ಕೆ ಸ್ವಾಯತ್ತತೆ ದೊರಕಿಸಿಕೊಡುವ ದಿಸೆಯಲ್ಲಿ ಸರ್ಕಾರಕ್ಕೆ ಬದ್ಧತೆ ಇರುವಂತೆ ಕಾಣುವುದಿಲ್ಲ.

ಕೇಂದ್ರಕ್ಕೆ ಯಾರೇ ಬರಲಿ ಅಲುಗಾಡದಂತೆ ಇದ್ದರೆ ಕ್ಷೇಮ ಎಂಬ ಅಘೋಷಿತ ಆದೇಶ ಅಲ್ಲಿ ಚಾಲ್ತಿಯಲ್ಲಿದೆ.

– ಡಾ. ಕೆ.ಆರ್.ದುರ್ಗಾ ದಾಸ್, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT