ಶುಕ್ರವಾರ, ಮೇ 29, 2020
27 °C

ಏನಿರಬೇಕು ಈ ಬಾರಿಯ ಚುನಾವಣಾ ವಿಚಾರ?

ಆಕಾರ್ ಪಟೇಲ್ Updated:

ಅಕ್ಷರ ಗಾತ್ರ : | |

ಎರಡನೆಯ ವಿಶ್ವಯುದ್ಧದ ನಂತರದ ಅತಿ ದೀರ್ಘ ಅವಧಿಯ ಆರ್ಥಿಕ ಬೆಳವಣಿಗೆಯ ಕಾರಣದಿಂದಾಗಿ ಡೊನಾಲ್ಡ್‌ ಟ್ರಂಪ್ ಅವರು ಅಮೆರಿಕದಲ್ಲಿ ಒಂದಿಷ್ಟು ಜನಪ್ರಿಯತೆ ಕಂಡಿದ್ದಾರೆ. ಕಳೆದ ತ್ರೈಮಾಸಿಕದಲ್ಲಿ ಅಮೆರಿಕದ ಅರ್ಥ ವ್ಯವಸ್ಥೆಯು ಶೇಕಡ 4ರಷ್ಟಕ್ಕಿಂತ ಹೆಚ್ಚಿನ ಬೆಳವಣಿಗೆ ಸಾಧಿಸಿತು. ಈ ಅಂಕಿಯನ್ನು ಕಂಡು ಭಾರತದವರಿಗೆ ಏನೂ ಅನಿಸದಿರಬಹುದು. ಆದರೆ, ಅಮೆರಿಕದ ಅರ್ಥ ವ್ಯವಸ್ಥೆಯು ಭಾರತದ ಅರ್ಥ ವ್ಯವಸ್ಥೆಗಿಂತ ಹತ್ತು ಪಟ್ಟು ಹೆಚ್ಚು ದೊಡ್ಡದು, ಅಲ್ಲಿನ ಜನಸಂಖ್ಯೆ ನಮ್ಮಲ್ಲಿಯ ನಾಲ್ಕನೆಯ ಒಂದರಷ್ಟು ಮಾತ್ರ ಎಂಬುದನ್ನು ತಿಳಿದುಕೊಳ್ಳಬೇಕು. ಇದರ ಅರ್ಥ, ಅಮೆರಿಕದ ಒಬ್ಬ ವ್ಯಕ್ತಿಯ ಸರಾಸರಿ ಉತ್ಪಾದನೆ ಭಾರತದಲ್ಲಿನ ಒಬ್ಬ ವ್ಯಕ್ತಿಯ ಸರಾಸರಿ ಉತ್ಪಾದನೆಗಿಂತ 40 ಪಟ್ಟು ಹೆಚ್ಚು.

ಅಲ್ಲಿನ ವಿರೋಧ ಪಕ್ಷವು ಟ್ರಂಪ್‌ ಅವರ ವೈಯಕ್ತಿಕ ದುರ್ನಡತೆ ಅಥವಾ ಸ್ಥಿರ ನೀತಿಗಳು ಇಲ್ಲದಿರುವಿಕೆಯ ಬಗ್ಗೆ ದೂರಿದಾಗಲೆಲ್ಲ, ಟ್ರಂಪ್ ಅವರು ಅರ್ಥ ವ್ಯವಸ್ಥೆಯ ಸಾಧನೆ ಮತ್ತು ಉದ್ಯೋಗ ಪಡೆದುಕೊಂಡ ಜನರ ಸಂಖ್ಯೆಯನ್ನು ಉಲ್ಲೇಖಿಸುತ್ತಾರೆ. ಇನ್ನು ಮೂರು ವಾರಗಳಲ್ಲಿ ಅಮೆರಿಕದಲ್ಲಿ ಮಧ್ಯಂತರ ಚುನಾವಣೆಗಳು ನಡೆಯಲಿವೆ. ಆ ಸಂದರ್ಭದಲ್ಲಿ, ಟ್ರಂಪ್ ಅವರು ಅಪಾಯಕಾರಿ ಹುಚ್ಚ ಎಂದು ವಿರೋಧ ಪಕ್ಷ ಹೇಳಲಿದೆ. ಇದಕ್ಕೆ ಉತ್ತರವಾಗಿ ಟ್ರಂಪ್ ಅವರು ತಮ್ಮ ಸಾಧನೆಯನ್ನು ಉಲ್ಲೇಖಿಸಲಿದ್ದಾರೆ. ಟ್ರಂಪ್ ಅವರ ವರ್ತನೆಯ ವಿಚಾರವಾಗಿ ಕೆಲವು ಗಂಭೀರ ಸಮಸ್ಯೆಗಳು ಇವೆ ಎಂಬುದು ನಿಜ. ಅವರ ಪಕ್ಷದಲ್ಲೂ ಕೆಲವರು ಟ್ರಂಪ್ ಅವರನ್ನು ತರ್ಕ ಇರುವ ಮನುಷ್ಯ ಎಂದು ಕಾಣುವುದಿಲ್ಲ. ಆದರೆ, ವಿರೋಧ ಪಕ್ಷದ ವಾದಗಳನ್ನು ಮೀರಬಲ್ಲ ಬೆಂಬಲಿಗರ ಪಡೆ ಟ್ರಂಪ್ ಅವರಿಗೆ ಇದೆ. ಟ್ರಂಪ್ ಅವರು ದೇಶವನ್ನು ಉದ್ದೇಶಿಸಿ ಆಡುತ್ತಿರುವ ಮಾತುಗಳಿಗೆ ಪುಷ್ಟಿ ಸಿಗುತ್ತಿರುವ ಕಾರಣ ಅವರ ಜನಪ್ರಿಯತೆಯ ಮಟ್ಟ ಕೂಡ ಹೆಚ್ಚುತ್ತಿದೆ.

2017ನೆಯ ಇಸವಿಯ ಬಹುಪಾಲು ಅವಧಿಯಲ್ಲಿ ಮತ್ತು ಈ ವರ್ಷದ ಆರಂಭದಲ್ಲಿ ವಿರೋಧ ಪಕ್ಷ ಭಾರಿ ಜಯ ಗಳಿಸುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ಈಗಿನ ಸಂದರ್ಭದಲ್ಲಿ, ಮುಂದೇನು ಆಗುತ್ತದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿಲ್ಲ. ಟ್ರಂಪ್ ಅವರ ಪಕ್ಷ ನಿರೀಕ್ಷೆಗಿಂತ ಉತ್ತಮ ಸಾಧನೆ ತೋರುವ ಸಾಧ್ಯತೆ ಇದೆ. ಚುನಾವಣೆಯಲ್ಲಿ ನಿಯಂತ್ರಣ ಸಾಧಿಸಬೇಕು ಎಂದಾದರೆ, ವಿರೋಧ ಪಕ್ಷವು ತನ್ನ ದೃಷ್ಟಿಕೋನವನ್ನು ಮುಂದಕ್ಕೆ ತರಬೇಕು.

ಭಾರತದಲ್ಲಿ, ಚುನಾವಣೆಯಲ್ಲಿ ಚರ್ಚೆಯಾಗಬೇಕಿರುವ ವಿಚಾರಗಳು ಯಾವುವು ಎಂಬುದನ್ನು ಬಹುತೇಕ ಸಂದರ್ಭಗಳಲ್ಲಿ ನಿರ್ಧರಿಸುವುದು ವಿರೋಧ ಪಕ್ಷಗಳು. ಮೂವತ್ತು ವರ್ಷಗಳ ಹಿಂದೆ ವಿರೋಧ ಪಕ್ಷಗಳು ಬೊಫೋರ್ಸ್‌ ಹಗರಣದ ನೆಪದಲ್ಲಿ ಕಾಂಗ್ರೆಸ್ಸಿನ ವಿರುದ್ಧ ಒಗ್ಗೂಡಿದವು. 21ನೆಯ ಶತಮಾನದ ಭಾರತ ಎನ್ನುವ ವಿಚಾರದ ಬಗ್ಗೆ ಮಾತನಾಡಿದ ರಾಜೀವ್ ಗಾಂಧಿ ಅವರು, ತಮ್ಮ ಪಕ್ಷದ ಪರ ಜನಾಭಿಪ್ರಾಯ ರೂಪಿಸಲು ಯತ್ನಿಸಿ ವಿಫಲರಾದರು. ವಾಸ್ತವ ಏನೆಂದರೆ, ಭಾರತದಲ್ಲಿ ಸಕಾರಾತ್ಮಕ ವಿಚಾರಗಳಿಗಿಂತಲೂ ನಕಾರಾತ್ಮಕ ವಿಚಾರಗಳೇ ಹೆಚ್ಚು ಕೆಲಸ ಮಾಡುತ್ತವೆ.

2011ರಿಂದ 2013ರ ನಡುವೆ ವರದಿಯಾದ ಹಗರಣಗಳು ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವನ್ನು ಉರುಳಿಸಿದವು. ಆ ಸರ್ಕಾರ ಅಸಮರ್ಥ, ದುರ್ಬಲ ಹಾಗೂ ತನ್ನ ವಿರುದ್ಧ ಕೇಳಿಬಂದ ಆರೋಪಗಳಿಗೆ ಸರಿಯಾದ ಸಮರ್ಥನೆ ನೀಡಲಾಗದ್ದು ಎಂಬಂತೆ ಕಾಣಲಾಯಿತು.

ಆದರೆ, ‘ಅಸಮರ್ಥ’ ಎಂಬಂತಹ ಆರೋಪಗಳನ್ನು ಈಗಿನ ಸರ್ಕಾರದ ವಿರುದ್ಧವೂ ಮಾಡಬಹುದು. ನಕಾರಾತ್ಮಕ ಕಾರಣಗಳಿಂದಾಗಿ ಸುದ್ದಿಯಾದ ಕೆಲವು ವಿಚಾರಗಳನ್ನು ನಾವು ನೋಡೋಣ. ನಾನು ಇಂತಹ ಕನಿಷ್ಠ ಹತ್ತು ವಿಷಯಗಳನ್ನು ನೆನಪಿಸಿಕೊಳ್ಳಬಲ್ಲೆ. ನೋಟು ರದ್ದತಿ, ಜನರನ್ನು ಗುಂಪುಗೂಡಿ ಸಾಯಹೊಡೆದ ಪ್ರಕರಣಗಳು, ಡಾಲರ್‌ ವಿರುದ್ಧ ರೂಪಾಯಿ ಮೌಲ್ಯ ಕುಸಿದಿದ್ದು, ರಫೇಲ್‌ ವಿಚಾರ, ಕೃಷಿ ಕ್ಷೇತ್ರದಲ್ಲಿನ ಬಿಕ್ಕಟ್ಟು, ಪ್ರತಿ ಭಾರತೀಯನಿಗೆ ₹ 15 ಲಕ್ಷ ತಂದುಕೊಡಲಾಗುವುದು ಎಂಬ ಭರವಸೆ ಪೊಳ್ಳಾಗಿದ್ದು, ಹಣದುಬ್ಬರ, ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆಯಲ್ಲಿ ಹೆಚ್ಚಳ, ಲೈಂಗಿಕ ಕಿರುಕುಳ ನೀಡಿದ ಆರೋಪ ಕೆಲವು ಸಚಿವರ ವಿರುದ್ಧ ಕೇಳಿಬಂದಿದ್ದು, ಸಂಘಟಿತ ವಲಯದಲ್ಲಿ ಉದ್ಯೋಗ ಕಡಿಮೆ ಆಗಿದ್ದು...

ಇವಲ್ಲದೆ ಇನ್ನೂ ಕೆಲವು ವಿಚಾರಗಳೂ ಇವೆ. ಸಾಮಾನ್ಯವಾಗಿ ಚುನಾವಣೆಗಳಲ್ಲಿ ಚರ್ಚೆಯಾಗದ ವಿಚಾರಗಳನ್ನು ಇಲ್ಲಿ ಸೇರಿಸಿಲ್ಲ. ನಾವು ನೋಡಿರುವಂತೆ, ಒಂದು ಅಭಿಯಾನ ಆರಂಭಿಸಲು ವಿರೋಧ ಪಕ್ಷಗಳಿಗೆ ವಿಚಾರಗಳ ಕೊರತೆ ಇಲ್ಲ. ಆದರೆ ಅಂಥದ್ದೊಂದು ಅಭಿಯಾನ ಇದೆ ಎಂಬಂತೆ ನಮಗೆ ಕಾಣಿಸುತ್ತಿದೆಯೇ? ನನಗೆ ಅಂಥದ್ದೇನೂ ಕಾಣಿಸುತ್ತಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಅಲ್ಲದೆ, ಸರ್ಕಾರ ಕೂಡ ತನ್ನ ಕಡೆಯಿಂದ ಅಭಿಯಾನ ಆರಂಭಿಸಿಲ್ಲ ಎಂಬುದು ನೆನಪಿನಲ್ಲಿ ಇರಲಿ. ಮುಂದಿನ ಕೆಲವು ವಾರಗಳಲ್ಲಿ ಸರ್ಕಾರವು ಬಲವಾದ ಅಭಿಯಾನವನ್ನು ಆರಂಭಿಸಲಿದೆ (ಏಕೆಂದರೆ ಮಹತ್ವದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಡ ವಿಧಾನಸಭಾ ಚುನಾವಣೆಗಳು ನಡೆಯಲಿವೆ) ಎಂಬುದನ್ನು ನಿರೀಕ್ಷಿಸಬಹುದು. ಬಹಹುಶಃ, ಸರ್ದಾರ್ ‍‍ಪಟೇಲರ ಪ್ರತಿಮೆಯ ಅನಾವರಣದ ಮೂಲಕ ಆ ಅಭಿಯಾನ ಆರಂಭವಾಗಬಹುದು.

ಬಹುಪಾಲು ವಿವರಣೆಗಳು ‘ಪ್ರತಿಪಾದನೆ’ಗಳನ್ನು ಅವಲಂಬಿಸುತ್ತವೆಯೇ ವಿನಾ ‘ಅಂಕಿ–ಅಂಶ’ಗಳನ್ನು ಅಲ್ಲ. ಅಮೆರಿಕದಲ್ಲಿ ಉದ್ಯೋಗಕ್ಕೆ ಸಂಬಂಧಿಸಿದ ಅಂಕಿ–ಅಂಶಗಳು ಚೆನ್ನಾಗಿ ಸಿಗುತ್ತವೆ. ಏಕೆಂದರೆ ಅದನ್ನು ಪಡೆಯಲು ಅಲ್ಲಿ ಹಲವು ಮೂಲಗಳು ಇವೆ. ಆದರೆ, ಭಾರತದಲ್ಲಿ ಅರ್ಥ ವ್ಯವಸ್ಥೆಯ ಸಂಘಟಿತ ವಲಯ ದೊಡ್ಡದೇನೂ ಅಲ್ಲವಾದ ಕಾರಣ, ಅಂಕಿ–ಅಂಶಗಳು ಅಷ್ಟೇನೂ ಉತ್ತಮವಾಗಿ ಸಿಗುವುದಿಲ್ಲ. ಅರ್ಥ ವ್ಯವಸ್ಥೆಯ ಹಲವು ಕಡೆಗಳಲ್ಲಿ ವಾಸ್ತವದಲ್ಲಿ ಏನಾಗುತ್ತಿರುತ್ತದೆ ಎಂಬುದು ನಮಗೆ ನಿಜಕ್ಕೂ ಗೊತ್ತಿರುವುದಿಲ್ಲ. ಅವೆಲ್ಲ ತೀರಾ ಸಣ್ಣವಾದ ಕಾರಣ, ಅವುಗಳ ಮೇಲೆ ಯಾರೂ ನಿಗಾ ಇಟ್ಟಿರುವುದೂ ಇಲ್ಲ.

ಪರಿಸ್ಥಿತಿಯು 2014ರಲ್ಲಿ ಇದ್ದಿದ್ದಕ್ಕಿಂತ ಇಂದು ಬಹಳ ಚೆನ್ನಾಗಿದೆ ಎಂದು ಸರ್ಕಾರ ಜನಸಾಮಾನ್ಯರನ್ನು ನಂಬಿಸಬೇಕು. ಇದು ಸುಲಭದ ಕೆಲಸ ಅಲ್ಲ. ನಾನು ಮೇಲೆ ಉಲ್ಲೇಖಿಸಿದ ಹತ್ತು ವಿಚಾರಗಳಿಗೆ ಸಂಬಂಧಿಸಿದಂತೆ ಬಹುತೇಕ ಅಂಕಿ–ಅಂಶಗಳು ವಿರೋಧ ಪಕ್ಷಗಳಿಗೆ ಅನುಕೂಲಕರ ಆಗುವಂತೆ ಇವೆ.

ಹಾಗಾಗಿ, ಚುನಾವಣೆಯ ವಿಷಯಗಳು ಏನಿರಬೇಕು ಎಂಬುದನ್ನು ತೀರ್ಮಾನಿಸುವುದು ಅವಕ್ಕೇ ಬಿಟ್ಟ ವಿಚಾರ. ಅವುಗಳಿಗೆ ಇದಕ್ಕಿಂತ ಹೆಚ್ಚು ಉತ್ತಮವಾದ ಸ್ಥಿತಿ ಸಿಗುವುದಿಲ್ಲ.

 (ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.