ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ| ಕೈಲಾಸದಲ್ಲಿ ಶಿವ-ಗೌರಿ ಉತ್ಸವ

Last Updated 28 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಪಾರ್ವತಿಯನ್ನು ಶಿವನೊಂದಿಗೆ ಕಳುಹಿಸಿಕೊಡುವ ಸಂದರ್ಭದಲ್ಲಿ ದುಃಖಭಾವದಲ್ಲಿದ್ದ ಮೇನಾದೇವಿಗೆ ಸಮಾಧಾನದ ಮಾತನಾಡುವ ಶಿವ, ತನ್ನ ನಂಬಿ ಬರುವ ಪಾರ್ವತಿಗೆ ಯಾವ ಕಷ್ಟವೂ ಬಾರದಂತೆ ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡುತ್ತಾನೆ. ಪತ್ನಿಯಾದವಳು ಗಂಡನ ಮೇಲೆ ಇಟ್ಟ ನಿಷ್ಠೆಗೆ ಚ್ಯುತಿ ಬಾರದಂತೆ ಉತ್ತಮವಾಗಿ ನಡೆದುಕೊಳ್ಳುವುದು ಪತಿಯ ಧರ್ಮ. ತಾನು ಸರ್ವೇಶ್ವರನಾದರೂ ಪತಿಧರ್ಮವನ್ನು ಚಾಚು ತಪ್ಪದೇ ಪಾಲಿಸುತ್ತೇನೆ. ನಾನು ಪತ್ನಿಗೆ ದ್ರೋಹ ಬಗೆದರೆ ಅದರ ಪ್ರಾಯಶ್ಚಿತ್ತ ಶಿಕ್ಷೆ ಅನುಭವಿಸುತ್ತೇನೆ. ನಾನು ಸ್ತ್ರೀಧರ್ಮ ಮತ್ತು ಪುರುಷಧರ್ಮವನ್ನು ಸರಿಸಮನಾಗಿ ನೋಡುತ್ತೇನೆ. ಸ್ತ್ರೀಮೌಲ್ಯಕ್ಕೆ ಚ್ಯುತಿ ಬಾರದಂತೆ ಧರ್ಮಪಾಲನೆ ಮಾಡುತ್ತೇನೆ. ಹೂವಿನಂತೆ ಸಾಕಿದ ನಿಮ್ಮ ಮಗಳನ್ನು ನಾನು ಹೃದಯದಲ್ಲಿಟ್ಟು ಸಲಹುತ್ತೇನೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಶಿವನು ಹಿಮವಂತದಂಪತಿಗೆ ಅಭಯ ನೀಡುತ್ತಾನೆ.

ಮೇನಾದೇವಿ ತನ್ನ ಮನದಲ್ಲಿ ದುಗುಡ ತುಂಬಿದ್ದರೂ, ಮಗಳನ್ನು ಗಂಡನ ಮನೆಗೆ ಕಳುಹಿಸಲು ಸಿದ್ಧಳಾಗುತ್ತಾಳೆ. ಮೇನಾದೇವಿಯ ದುಃಖ ಉಮ್ಮಳಿಸುತ್ತದೆ. ತವರನ್ನು ತೊರೆವ ಸಂಕಟವನ್ನು ತಾಳಲಾರದೆ ತಾಯಿಯನ್ನು ತಬ್ಬಿಪಾರ್ವತಿಯೂ ಅಳುತ್ತಾಳೆ. ದೇವಪತ್ನಿಯರ ಕಣ್ಣಂಚಿನಲ್ಲಿ ನೀರು ಧಾರೆಯಾಗಿ ಹರಿಯುತ್ತದೆ.

ಇಂಥ ದುಃಖಮಯ ಸನ್ನಿವೇಶದಿಂದ ಸಾಕ್ಷಾತ್ ಪರಮೇಶ್ವರ ಸಹ ಜನಸಾಮಾನ್ಯರಂತೆ ದುಃಖಭಾವದಿಂದ ಕಣ್ಣೀರಿಡುತ್ತಾನೆ. ಮಗಳನ್ನು ತನ್ನ ಎದೆಗೊರಗಿಸಿಕೊಂಡ ಹಿಮವಂತ ಗಟ್ಟಿಯಾಗಿ ಅಳುತ್ತಾನೆ. ಪಾರ್ವತಿ ಭಕ್ತಿಯಿಂದ ತಾಯಿ–ತಂದೆ ಗುರುಗಳು ಮತ್ತು ಹಿರಿಯರಿಗೆ ನಮಸ್ಕರಿಸಿದಳು. ಪಾರ್ವತಿಯ ತಾಯಿ ಮೇನಾದೇವಿ, ಮತ್ತವಳ ಸಹೋದರರು ಬಹಳ ರೋದಿಸಿದರು. ಹಿಮವಂತ ಮತ್ತು ಮೇನಾದೇವಿ ಹೇಗೋ ಧೈರ್ಯವನ್ನು ತಂದುಕೊಂಡು, ಪ್ರಯಾಣಕ್ಕೆ ಅನುಕೂಲವಾದ ಪಲ್ಲಕ್ಕಿಯಲ್ಲಿ ಪಾರ್ವತಿಯನ್ನು ಕುಳ್ಳಿರಿಸಿದರು. ಆಗ ಅಲ್ಲಿದ್ದವರೆಲ್ಲರೂ ಪಾರ್ವತಿಯನ್ನು ಆಶೀರ್ವದಿಸಿದರು.

ಪಾರ್ವತಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿಕೊಂಡು ದೇವತೆಗಳ ಬಿಡಾರದಲ್ಲಿದ್ದ ಶಿವನ ಬಳಿಗೆ ಹಿಮವಂತ ಕರೆತಂದ. ನಂತರ ಶಿವ ತನ್ನ ನಂದಿವಾಹನದಲ್ಲಿ ಪಾರ್ವತಿಯೊಂದಿಗೆ ಕೈಲಾಸಕ್ಕೆ ಹೊರಟ. ಶಿವನನ್ನು ಬ್ರಹ್ಮ, ವಿಷ್ಣು ಮತ್ತಿತರ ದೇವತೆಗಳು ಹಿಂಬಾಲಿಸಿದರು. ನೂತನ ದಂಪತಿಗಳಾದ ಶಿವ-ಪಾರ್ವತಿಯರು ಕೈಲಾಸಕ್ಕೆ ಬಂದಾಗ ದೊಡ್ಡ ಉತ್ಸವ ನಡೆಯಿತು.

ಏಕಾಂತದಲ್ಲಿ ಕುಳಿತ ಪರಮೇಶ್ವರ ಮತ್ತು ಪಾರ್ವತಿ ಪರಸ್ಪರ ಪ್ರಿಯವಾದ ಮಾತುಗಳನ್ನಾಡುತ್ತಾ ಸಂತೋಷಪಟ್ಟರು. ‘ನೀನು ಯಾವಾಗಲೂ ನನಗೆ ಪ್ರಾಣಪ್ರಿಯಳಾಗಿರು’ ಎಂದು ಶಿವ ಹೇಳಿದರೆ, ಪಾರ್ವತಿ ಮುಗುಳುನಗುತ್ತಾ, ‘ಪ್ರಾಣನಾಥ ನೀನು ನನ್ನ ಪ್ರಾಣಪ್ರಿಯ’ ಎಂದಳು. ಹೀಗೆ ಶಿವ-ಪಾರ್ವತಿಯರ ದಾಂಪತ್ಯಜೀವನ ಸುಖಮಯವಾಗಿ ಸಾಗುತ್ತದೆ.

ಶ್ರೀಶಿವಮಹಾಪುರಾಣದಲ್ಲಿ ಪಾರ್ವತೀಖಂಡದ ಅಂತಿಮ ಅಧ್ಯಾಯ ಮುಗಿಯಿತು.

ವಿಷಾದ

ಸೋಮವಾರದ ಸಂಚಿಕೆಯಲ್ಲಿ ಪ್ರಕಟವಾದ ಲೇಖನಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದನ್ನು ಗಮನಿಸಿದ್ದೇವೆ. ಪಾರ್ವತಿಗೆ ಅಜ್ಜಿಯೊಬ್ಬಳು ಉಪದೇಶ ಮಾಡುವುದನ್ನು ಶಿವಪುರಾಣದಲ್ಲಿ ಬರೆಯಲಾಗಿತ್ತೇ ವಿನಾ ಯಾವ ಮಹಿಳೆಯರಿಗೂ ನೋವನ್ನುಂಟು ಮಾಡುವ ಉದ್ದೇಶವಾಗಿರಲಿಲ್ಲ. ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇವೆ.

- ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT