ಗುರುವಾರ , ಆಗಸ್ಟ್ 6, 2020
28 °C
ಏಕೋಪಾಧ್ಯಾಯ ಶಾಲೆಯ ಮುಖ್ಯ ಶಿಕ್ಷಕ ಎಂಬ ಹೆಮ್ಮೆ ಯಡಿಯೂರಪ್ಪನವರಿಗೆ ದಕ್ಕಿದೆ!

ಏಕಾಧಿಪತ್ಯವೂ ಪ್ರಜಾತಂತ್ರದ ‍ಪರಿಹಾಸ್ಯವೂ

ವೈ.ಗ.ಜಗದೀಶ್‌ Updated:

ಅಕ್ಷರ ಗಾತ್ರ : | |

Prajavani

‘ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವರು ವೀರರೂ ಅಲ್ಲ ಧೀರರೂ
ಅಲ್ಲ...’

ಅಲ್ಲಮಪ್ರಭು ಅವರ ಈ ವಚನವನ್ನು ಬಾಯಿಪಾಠ ಮಾಡಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು, ಹಿಂದೆಲ್ಲ ಈ ಸಾಲನ್ನು ಉದ್ಧರಿಸಿ ‘ವೀರ–ಧೀರತನ’ವನ್ನು ಆವಾಹಿಸಿಕೊಂಡಿದ್ದುಂಟು.

ಸರ್ಕಾರವೆಂಬ ಕುದುರೆಯೇರಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಕೆಳಗೆ ಕುಕ್ಕಿದ ಯಡಿಯೂರಪ್ಪ, ಆ ಕುದುರೆ ಏರುವ ಉಮೇದಿನಲ್ಲಿದ್ದರು. ಕುದುರೆಯ ಲಗಾಮು ಹಿಡಿದುಕೊಂಡಿದ್ದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಅದನ್ನು ಏರಲು ಅಷ್ಟು ಸುಲಭಕ್ಕೆ ಬಿಡಲಿಲ್ಲ. ಯಡಿಯೂರಪ್ಪನವರೇ ರಚ್ಚೆ ಹಿಡಿದ ಮೇಲೆ, ಕುದುರೆಯ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿ, ಕಾಲಿಗೆ ಸರಪಳಿ ಬಿಗಿದ ಶಾ, ಕುದುರೆ ಹತ್ತಿಸಿದರು. ‘ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ! ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ!’ ಎಂದು ಹಾಡಿ, ಯಡಿಯೂರಪ್ಪನವರಿಗೆ ಆಡಲು ಬಿಟ್ಟು ಕುಳಿತಿದ್ದಾರೆ. 

ಮುಖ್ಯಮಂತ್ರಿ ಪಟ್ಟಕ್ಕೇರಿದರೂ ಸರ್ಕಾರ ಆಡಿಸುವ–ಕುಣಿಸುವ ಶಕ್ತಿ ಯಡಿಯೂರಪ್ಪನವರಿಗೆ ದಕ್ಕಲೇ ಇಲ್ಲ. ಸಂಪುಟ ವಿಸ್ತರಣೆಗೆ ಶಾ ಅಂಕಿತ ಹಾಕಲೇ ಇಲ್ಲ. ಭಾನುವಾರ ಬೆಳಗಾವಿಯಲ್ಲಿ ಇಬ್ಬರೂ ಮೂರುಗಂಟೆ ಜತೆಗೆ ಕಳೆದರೂ ಈ ವಿಷಯ ಇತ್ಯರ್ಥವಾಗಿಲ್ಲ. 17 ದಿನ ಕಳೆದರೂ ಏಕೋಪಾಧ್ಯಾಯ ಶಾಲೆಯ ‘ಮುಖ್ಯ ಶಿಕ್ಷಕ’ ಎಂಬ ಹೆಮ್ಮೆಯಷ್ಟೇ ಅವರದ್ದಾಗಿದೆ. ಹೀಗಾಗಿ, ರಾಜ್ಯದಲ್ಲಿ ಸರ್ಕಾರ ಇದ್ದೂ ಇಲ್ಲದಂತಾಗಿದೆ. 

ಸಾಮಾನ್ಯ ಸಂದರ್ಭಗಳಲ್ಲಿ ಮುಖ್ಯಮಂತ್ರಿ ಒಬ್ಬರೇ ಎಲ್ಲವನ್ನೂ ನಿಭಾಯಿಸಬಹುದು. ಆದರೆ, ದಶಕದ ಹಿಂದೆ ನಾಡನ್ನು ಕಂಗೆಡಿಸಿದ್ದ ಮಹಾ ನೆರೆ ಈಗ ಮತ್ತೆ ಅವತರಿಸಿ ಅರ್ಧರಾಜ್ಯವನ್ನು ದಿಕ್ಕೆಡಿಸಿದೆ. ಇಡೀ ಆಡಳಿತ ಯಂತ್ರಾಂಗ ಯುದ್ಧಕಾಲದಂತೆ ಅಹೋರಾತ್ರಿ ದುಡಿಯಬೇಕಾಗಿದೆ. ಸೇನೆ, ಸೇನಾಧಿಪತಿ ಇಲ್ಲದೆ ಅರಸನೊಬ್ಬನೇ ‘ಜಲಯುದ್ಧ’ವನ್ನು ಎದುರಿಸಬೇಕಾದ ಸಂಕಷ್ಟದಲ್ಲಿ ಯಡಿಯೂರಪ್ಪ ಸಿಕ್ಕಿಕೊಂಡಿದ್ದಾರೆ. 

‘ಕೊಟ್ಟ ಕುದುರೆಯ ಓಡಿಸಿಯೇ ತೀರುವೆ’ ಎಂಬ ಹಟಕ್ಕೆಬಿದ್ದಂತಿರುವ ಯಡಿಯೂರಪ್ಪ ತಮ್ಮ 77ರ ಏರುವಯಸ್ಸಿನಲ್ಲೂ ದಣಿವು ಲೆಕ್ಕಿಸದೆ ಪ್ರವಾಹ ಪೀಡಿತ ಪ್ರದೇಶಗಳ ಜನರ ನೋವು ಆಲಿಸಿ, ಪರಿಹಾರ ಕ್ರಮಗಳ ಮೇಲೆ ನಿಗಾ ವಹಿಸುವಲ್ಲಿ ಕಾರ್ಯಮಗ್ನರಾಗಿದ್ದಾರೆ. ಅದಕ್ಕೆ ಸರ್ವರೂ ಸೈ ಎನ್ನಲೇಬೇಕು. ಇಂತಹ ವಿಷಮ ಸ್ಥಿತಿಯಲ್ಲಿ ಸಚಿವ ಸಂಪುಟ ಇರದೇ ಇರುವುದು ಕೊರತೆ.

ಬಿಜೆಪಿ ಇನ್ನೂ ರಾಜ್ಯ–ರಾಷ್ಟ್ರದಲ್ಲಿ ಅಧಿಕಾರ ಹಿಡಿಯದ ಹೊತ್ತಿನಲ್ಲಿ ‘ಕಾಂಗ್ರೆಸ್‌ನ ಹೈಕಮಾಂಡ್ ಸರ್ವಾಧಿಕಾರ’ವನ್ನು ಚುಚ್ಚು ಮಾತುಗಳಿಂದ ತಿವಿಯುವ ಪರಿಪಾಟ ಇತ್ತು. ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಗಳಿಗೆಯಲ್ಲಿ ಬಿ ಫಾರಂ ಬರುತ್ತಿದ್ದುದು, ಕೊಟ್ಟದ್ದನ್ನು ರದ್ದುಪಡಿಸಿ ಮತ್ತೊಬ್ಬರಿಗೆ ಬಿ ಫಾರಂ ಕೊಡುವುದೂ ನಡೆದಿತ್ತು. ವಿಧಾನಸಭೆಗೆ ಎಷ್ಟೇ ಸ್ಥಾನಗಳನ್ನು ಗೆಲ್ಲಿಸಿಕೊಂಡು ಬಂದರೂ ಮುಖ್ಯಮಂತ್ರಿಯಾಗುತ್ತೇನೆ ಎಂಬ ಭರವಸೆ ಆಗ ಯಾರಲ್ಲೂ ಇರುತ್ತಿರಲಿಲ್ಲ. ದೆಹಲಿಯಿಂದ ಬರುತ್ತಿದ್ದ ‘ಕವರ್‌’ನಲ್ಲಿ ಯಾರ ಹೆಸರು ಇರುತ್ತದೋ ಅವರಷ್ಟೇ ಮುಖ್ಯಮಂತ್ರಿಯಾಗಲು ಸಾಧ್ಯವಿತ್ತು. ವಿರೋಧ ಪಕ್ಷದ ನಾಯಕನಾಗಬೇಕಾದರೂ ದೆಹಲಿ ‘ಠಸ್ಸೆ’ ಬೀಳಬೇಕು ಎಂಬ ಪದ್ಧತಿ 2014ರವರೆಗೂ ಚಾಲ್ತಿಯಲ್ಲಿತ್ತು. 

ರಾಜ್ಯದ ಜನರು ಬಹುಮತ ಕೊಟ್ಟಿದ್ದಕ್ಕೆ ಸಂಬಂಧವೇ ಇಲ್ಲ, ದೆಹಲಿಯ ಮೂಲಕವೇ ರಾಜ್ಯಾಡಳಿತ ನಿಶ್ಚಯವಾಗುತ್ತದೆ ಎಂಬ ಟೀಕೆಗಳಿದ್ದವು. 1990ರಲ್ಲಿ ಬೆಂಗಳೂರಿಗೆ ಬಂದಿದ್ದ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಆಗ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರನ್ನು ಇಳಿಸಿ, ಎಸ್.ಬಂಗಾರಪ್ಪನವರನ್ನು ಮುಖ್ಯಮಂತ್ರಿಯಾಗಿಸಿದ್ದರು. ರಾಜೀವ್ ನಿಧನರಾಗುತ್ತಿದ್ದಂತೆ ಅಧಿಕಾರಕ್ಕೆ ಬಂದ ಪ್ರಧಾನಿ ಪಿ.ವಿ. ನರಸಿಂಹರಾವ್ ಹಾಗೂ ಕಾಂಗ್ರೆಸ್ ಅಧ್ಯಕ್ಷ ಸೀತಾರಾಂ ಕೇಸರಿಯವರು ಬಂಗಾರಪ್ಪನವರನ್ನು ಪದಚ್ಯುತಗೊಳಿಸಿ ಎಂ.ವೀರಪ್ಪ ಮೊಯಿಲಿ ಅವರನ್ನು ಅಧಿಕಾರಕ್ಕೇರಿಸಿದ ‘ದೆಹಲಿ ಕಮಾಂಡ್’ ನಡೆಯನ್ನೂ ರಾಜ್ಯ ಕಂಡಿದೆ.

ಈ ರೀತಿಯ ‘ದೆಹಲಿ ಕಮಾಂಡ್‌’ನಿಂದ ಸಿಟ್ಟಿಗೆದ್ದ ಕನ್ನಡಿಗರು, ನಾಡಿನವರದ್ದೇ ಆಡಳಿತ ಬೇಕು ಎಂದು ಬಯಸಿದ್ದು ನಂತರದ ಬೆಳವಣಿಗೆ. ಈ ಕಾರಣಕ್ಕೆ ಪೂರ್ಣಾವಧಿ ಅಧಿಕಾರವನ್ನು ಜನತಾದಳಕ್ಕೆ ಕೊಟ್ಟಿದ್ದೂ ಉಂಟು. ಅದು ಕೊನೆಗೆ ‘ಪದ್ಮನಾಭನಗರದ ಹೈಕಮಾಂಡ್‌’ ಆಗಿಬಿಟ್ಟಿತು.

ಅಂದು ಬಲಿಷ್ಠವಾಗಿದ್ದ ಕಾಂಗ್ರೆಸ್ ಹೈಕಮಾಂಡ್‌ ಈಗ ನಿಶ್ಶಕ್ತವಾಗಿದೆ. ಪಕ್ಷವೆಂಬ ‘ಟೈಟಾನಿಕ್’ ನೌಕೆಯನ್ನು ನಡುನೀರಿನಲ್ಲೇ ಬಿಟ್ಟ ಕಫ್ತಾನ ರಾಹುಲ್ ಗಾಂಧಿ, ರಾಜಕೀಯದ ಬಗ್ಗೆ ‘ಅಭಾವ ವೈರಾಗ್ಯ’ ತಾಳಿದ್ದಾರೆ. 

ಕಾಂಗ್ರೆಸ್‌ ಹೈಕಮಾಂಡ್‌ನ ಹಿಂದಿನ ನಡೆಯನ್ನು ಈಗ ಬಿಜೆಪಿ ಅನುಸರಿಸುವಂತೆ ತೋರುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ‘ಒಂದು ಮತ ಎರಡು ಸರ್ಕಾರ’ ಎಂದು ಕರೆ ಕೊಟ್ಟಿದ್ದ ನಾಯಕರು, ಕರ್ನಾಟಕದಲ್ಲಿ ಪೂರ್ಣ ಪ್ರಮಾಣದ ಸರ್ಕಾರ ರಚಿಸುವ ಉಸಾಬರಿಯೇ ಬೇಡ ಎಂಬ ನಿರ್ಧಾರಕ್ಕೆ ಬಂದಂತಿದ್ದಾರೆ. ಮೈತ್ರಿ ಸರ್ಕಾರ ಬಿದ್ದ ಕೂಡಲೇ, ಆಗ ಇದ್ದ ‘ಆಷಾಢದ ಶಾಸ್ತ್ರ’ವನ್ನೂ ಲೆಕ್ಕಿಸದೆ 20 ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸುವ ಅವಸರದಲ್ಲಿ ಯಡಿಯೂರಪ್ಪ ಇದ್ದರು. ಆದರೆ, ಕಾದುನೋಡುವ ತಂತ್ರವನ್ನು ಶಾ ಅನುಸರಿಸಿದರು. ಸೂಚನೆ ನೀಡುವವರೆಗೂ ದೆಹಲಿಗೆ ಬರುವುದು ಬೇಡ ಎಂದು ಫರ್ಮಾನು ಹೊರಡಿಸಿದರು. 

ಪಟ್ಟ ಕೈತಪ್ಪಲಿದೆ ಎಂಬ ಭೀತಿಗೆ ಈಡಾದ ಯಡಿಯೂರಪ್ಪ, ತಮ್ಮ ಆಪ್ತರನ್ನು ದೆಹಲಿಗೆ ಕಳುಹಿಸಿ ಶಾ ಅವರ ಮೇಲೆ ಒತ್ತಡ ಹೇರಲು ಯತ್ನಿಸಿದರು. ಆದರೆ, ಶಾ ಬಗ್ಗಲೇ ಇಲ್ಲ. ‘ಮುಂಬೈನಲ್ಲಿದ್ದ ‘ಅತೃಪ್ತ’ ಶಾಸಕರು ಬೆಂಗಳೂರಿಗೆ ಹೋದರೆ ಕಾಂಗ್ರೆಸ್ ತೆಕ್ಕೆಗೆ ಹೋಗಬಹುದು, ಸರ್ಕಾರ ರಚಿಸುವ ಅವಕಾಶವೂ ಕೈ ತಪ್ಪಲಿದೆ’ ಎಂದು ಕೆಲವು ಹಿರಿಯರಿಂದ ಶಾಗೆ ಹೇಳಿಸಿದರು. ಆಗ ಶಾ, ಮುಖ್ಯಮಂತ್ರಿ ಪಟ್ಟಕ್ಕೆ ಏರಲಷ್ಟೇ ‘ಅಪ್ಪಣೆ’ ಕೊಟ್ಟರು. ‘ಕವರ್‌’ ಕಳುಹಿಸುವ ಪರಂಪರೆ ಕಾಂಗ್ರೆಸ್‌ನಲ್ಲಿತ್ತು. ಆದರೆ, ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಲು ವರಿಷ್ಠರ ಮುಂದೆ ಬಾಗಿ ನಿಲ್ಲಬೇಕಾದ ಸ್ಥಿತಿ ಉಂಟಾಗಿತ್ತು. ಈಗ ಅಂಗಲಾಚಿದರೂ ಸಂಪುಟ ವಿಸ್ತರಣೆಗೆ ಒಪ್ಪಿಗೆಯನ್ನೇ ನೀಡುತ್ತಿಲ್ಲ.

ಲೋಕಸಭೆಯಲ್ಲಿ ಕಾಶ್ಮೀರದ ಚರ್ಚೆ–ಮಸೂದೆ ಮಂಡನೆ ಇದೆ ಎಂದು ಕೆಲ ಕಾಲ ತಳ್ಳಲಾಯಿತು. ಬಳಿಕ ಸುಷ್ಮಾ ಸ್ವರಾಜ್ ನಿಧನರಾದ ಕಾರಣ ಒಡ್ಡಲಾಯಿತು. ಶಾ ಅವರಿಗೆ ದೊಡ್ಡ ಜವಾಬ್ದಾರಿ ಇರುವುದು ಹೌದು. ಆದರೆ, ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳ
ಬೇಕು ಎಂಬ ಬಗ್ಗೆ 10 ನಿಮಿಷ ಚರ್ಚೆ ಮಾಡಿ ಇತ್ಯರ್ಥಪಡಿಸುವ ವ್ಯವಧಾನ ಇಲ್ಲವೆಂದರೆ ನಂಬುವುದು ಕಷ್ಟ. ತಮ್ಮದೇ ನಡೆಯಬೇಕೆಂದಿದ್ದರೆ, ತಮಗೆ ಸೂಕ್ತವೆನಿಸಿದ 10 ಜನರ ಹೆಸರನ್ನು ಒಳಗೊಂಡ ಪಟ್ಟಿಯನ್ನು ಫ್ಯಾಕ್ಸ್ ಮೂಲಕ ಕಳುಹಿಸುವುದೇನೂ ಕಷ್ಟವಲ್ಲ. ಆದರೆ, ಅದನ್ನು ಮಾಡದಿರುವ ‘ವರಿಷ್ಠ’ರ ನಡೆ ನೋಡಿದರೆ ಪೂರ್ಣಾಧಿಕಾರ ಇರುವ ಸರ್ಕಾರ ರಚನೆ ಬಗ್ಗೆಯೇ ಅವರಿಗೆ ಆಸಕ್ತಿ ಇದ್ದಂತಿಲ್ಲ ಎಂಬ ಸಂಶಯ ಮೂಡುತ್ತದೆ. 

‘ಬಹುಮತ ಪಡೆದ ಪಕ್ಷದ ಶಾಸಕರು ಕೂಡಿ ತಮ್ಮ ನಾಯಕ ಅಥವಾ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದ ಬಳಿಕ, ನಾಯಕರಾದವರು ರಾಜ್ಯಪಾಲರ ಬಳಿ ಸರ್ಕಾರ ರಚನೆಯ ಹಕ್ಕು ಮಂಡಿಸುತ್ತಾರೆ. ಯಾರು ಸಚಿವರಾಗಬೇಕು ಎಂದು ನಿಯೋಜಿತ ಮುಖ್ಯಮಂತ್ರಿ ನಿರ್ಧರಿಸಿ ಒಟ್ಟಿಗೆ ಅಥವಾ ಪ್ರತ್ಯೇಕವಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂಬುದು ರಾಜ್ಯಶಾಸ್ತ್ರದ ಪಾಠ. ಆದರೆ, ಈ ಪಾಠವನ್ನು ಬದಲು ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಬಿಜೆಪಿ ನಡೆ ಇಂಬುಕೊಟ್ಟಿದೆ.

‘ಹೆಳವನ ಹೆಗಲ ಮೇಲೆ ಕುರುಡ ಕುಳಿತಿದ್ದಾನೆ; ದಾರಿ ಸಾಗುವುದೆಂತೊ ನೋಡಬೇಕು’ ಎಂಬ ಕವಿ ಗೋಪಾಲಕೃಷ್ಣ ಅಡಿಗರ ಕವಿತೆ ಈ ಕಾಲದ ವಿದ್ಯಮಾನಕ್ಕೆ ರೂಪಕದಂತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು