ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತಿಬಿಂಬ: ಚಳವಳಿ ಮಣ್ಣಿನಲಿ ರೈತರ ಬಿತ್ತನೆ

ನಾನಾ ಕಾರಣಗಳಿಂದ ಕೊರಗುತ್ತಿದ್ದ ರೈತ ಸಂಕುಲ ಈಗ ಒಗ್ಗಟ್ಟಿನ ಮಾತನಾಡುತ್ತಿದೆ
Last Updated 15 ಮಾರ್ಚ್ 2021, 19:30 IST
ಅಕ್ಷರ ಗಾತ್ರ

‘ಕರಿಯರದೊ ಬಿಳಿಯರದೊ ಯಾರಾದರೆ ಏನು?/ ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ/ ವಿಜಯನಗರವೋ? ಮೊಗಲ್ವರಾಳಿಕೆಯೋ? ಇಂಗ್ಲೀಷರೋ/ ಎಲ್ಲರೂ ಜಿಗಣೆಗಳೆ ನನ್ನ ನೆತ್ತರಿಗೆ/ ಕತ್ತಿ ಪರದೇಶಿಯಾದರೆ ಮಾತ್ರ ನೋವೇ/ ನಮ್ಮವರೆ ಹದಹಾಕಿ ತಿವಿದರದು ಹೂವೆ?. . .’

ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಿದ ಆರೇಳು ವರ್ಷಗಳ ಆಸುಪಾಸಿನಲ್ಲಿ ಕುವೆಂಪು ಬರೆದ ‘ರೈತನ ದೃಷ್ಟಿ’ (ಕೋಗಿಲೆ ಮತ್ತು ಸೋವಿಯಟ್ ರಷ್ಯ–1954) ಕವಿತೆಯ ಸಾಲುಗಳಿವು. ಕವಿತೆ ಬರೆದು ದಶಕಗಳೇ ಸವೆದು ಹೋದರೂ ದೇಶಕ್ಕೆ ಅನ್ನ ಕೊಡುವವರಬದುಕಿನಲ್ಲಿ ಗಮನಾರ್ಹ ಬದಲಾವಣೆಗಳೇನೂ ಆಗಿಲ್ಲ. ‘ಬೇಸಾಯ–ನೀ ಸಾಯ, ಮನೆಮಂದಿಯೆಲ್ಲ ಸಾಯ’ ಎಂಬ ದೈನೇಸಿ ಸ್ಥಿತಿಯಲ್ಲೇ ರೈತರು ಏದುಸಿರು ಬಿಡುತ್ತಿದ್ದಾರೆ. ರೈತೋದ್ಧಾರಕ್ಕಾಗಿ ಆಧುನಿಕ ಕೃಷಿ ಪದ್ಧತಿ ಜಾರಿಗೆ ತರುವುದು ಸರ್ಕಾರದ ಕರ್ತವ್ಯ.ಉದ್ಯಮಿಗಳ ವಕಾಲತ್ತಿಗೆ ನಿಂತಂತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಮಣ್ಣು ಹಿಂಡಿದರೆ ಧಾನ್ಯ ಉದುರುವಂತಹ ಕೃಷಿಭೂಮಿಯನ್ನು ಉದ್ಯಮಿಗಳಿಗೆ ಧಾರೆ ಎರೆದು ರೈತರನ್ನು ಕಾಯಂ ಕೂಲಿಗಳಾಗಿಸುವತ್ತ ಮುಂದಡಿ ಇಟ್ಟಂತಿದೆ.

ಎಚ್ಚೆತ್ತುಕೊಂಡ ರೈತ ಸಮುದಾಯ ಬೀದಿಗೆ ಇಳಿದಿದ್ದು, ವಿಶ್ವದ ಗಮನ ಸೆಳೆಯುವಲ್ಲಿಯೂ ಯಶಸ್ವಿಯಾಗಿದೆ. ಉತ್ತರದ ನೆಲದಲ್ಲಿ ಚಳವಳಿ ಬಿರುಸುಗೊಳಿಸಿರುವ ರೈತರು ಈ ಹೋರಾಟದ ಕಾವನ್ನು ದಕ್ಷಿಣಕ್ಕೂ ಬಿತ್ತರಿಸುವ ಕಾಯಕಕ್ಕೆ ಮುಂದಾಗಿದ್ದಾರೆ.

ಹೋರಾಟದ ದಕ್ಷಿಣಾ ಪಥ ಸಂಚಲನಕ್ಕೆ ಶಿವಮೊಗ್ಗೆಯಲ್ಲಿ ಮುನ್ನುಡಿ ಬರೆಯಲು ರೈತರು ಅಣಿಯಾಗಿದ್ದಾರೆ. ಶಿವಮೊಗ್ಗ–ಭದ್ರಾವತಿ ಅವಳಿ ನಗರಗಳ ಮಗ್ಗುಲಿನಲ್ಲಿ ಹರಿವ ತುಂಗೆ–ಭದ್ರೆಗಳು ಕೂಡಲಿಯಲ್ಲಿ ಸಂಗಮವಾಗಿ ತುಂಗಭದ್ರಾ ನದಿಯಾಗಿ ಉತ್ತರಕ್ಕೆ ಹರಿಯುತ್ತವೆ. ಬೇರೆಯೇ ಆಗಿದ್ದ ತುಂಗೆ–ಭದ್ರೆ ಕೂಡಿಕೊಂಡಂತೆ ರೈತ ಹೋರಾಟವೂ ಹಲವು ತೊರೆಗಳಾಗಿ ಹರಿದು, ಮತ್ತೆ ಕೂಡಿ ಹರಿಯುವ ಜಾಯಮಾನಕ್ಕೆ ಒಗ್ಗಿಕೊಂಡಿದೆ. ರಾಜ್ಯ ರೈತ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ನಿಧನದ ಬಳಿಕ ಛಿದ್ರವಾಗಿದ್ದ ರೈತ ಸಂಘವು ತುಂಗ–ಭದ್ರೆಯ ಸಂಗಮದಂತೆ ಒಗ್ಗೂಡಿರುವುದು ಹೊಸ ಪರಿವರ್ತನೆ.

ನಾಡಿನಲ್ಲಿ ಅನೇಕ ಪರಿವರ್ತನೆಗಳನ್ನು ತಂದ ಹಲವು ಹೋರಾಟಗಳಿಗೆ ಶಿವಮೊಗ್ಗದ ನೆಲವೇ ಗರ್ಭಭೂಮಿ.

ವೈ.ಗ.ಜಗದೀಶ್‌
ವೈ.ಗ.ಜಗದೀಶ್‌

ಜಮೀನು ಹೊಂದಿದ್ದ ಭೂಮಾಲೀಕರು ತಾವು ಉಳುಮೆ ಮಾಡದೇ ಅದನ್ನು ಗೇಣಿ ರೂಪದಲ್ಲಿ ರೈತರಿಗೆ ಕೊಡುವ ಪದ್ಧತಿ ಚಾಲ್ತಿಯಲ್ಲಿದೆ. ಸರ್ಕಾರದ ಮಾಪನದಂತೆ ಭತ್ತ ಅಳೆಯಲು ಬಳಸುತ್ತಿದ್ದ ಕೊಳಗದಲ್ಲಿದ್ದ ವ್ಯತ್ಯಾಸ, ಗೇಣಿ ಪಾವತಿಸಿದ್ದಕ್ಕೆ ರಶೀದಿ ಕೊಡದೇ ಮೋಸ ಮಾಡುತ್ತಿದ್ದುದು, ಭೂಮಾಲೀಕರ ಜಮೀನಿನಲ್ಲಿ ಬಿಟ್ಟಿ ದುಡಿಮೆ... ಇವನ್ನೆಲ್ಲ ಪ್ರತಿರೋಧಿಸಿ 1951ರಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಕಾಗೋಡು ಎಂಬ ಹಳ್ಳಿಯಲ್ಲಿ ಶುರುವಾದ ಹೋರಾಟ ದೇಶದಲ್ಲೇ ಹೆಸರು ಮಾಡಿತು. ಸಮಾಜವಾದಿ ಚಳವಳಿ ನೇತಾರರಾದ ರಾಮಮನೋಹರ ಲೋಹಿಯಾ ಅವರು ಚಳವಳಿಯಲ್ಲಿ ಭಾಗಿಯಾಗಿದ್ದರಿಂದ ದೇಶದಲ್ಲೇ ಸಂಚಲನ ಉಂಟಾಯಿತು. ಉಳುವವನೇ ಭೂ ಒಡೆಯ ಆಶಯದ ಭೂಸುಧಾರಣೆ ಕಾಯ್ದೆ ಕರ್ನಾಟಕದಲ್ಲಿ ಮಾತ್ರವಲ್ಲದೆ, ದೇಶದಲ್ಲೇ ಜಾರಿಯಾಗಲು ಈ ಹೋರಾಟ ಪ್ರೇರಣೆ ನೀಡಿತು. ಭವಿಷ್ಯದಲ್ಲಿ ಕರ್ನಾಟಕವನ್ನು ರಾಜಕೀಯವಾಗಿ ಹಾಗೂ ಸಾಹಿತ್ಯಕವಾಗಿ ಆಳಿದ ಅನೇಕರು ಕಾಗೋಡು ಸತ್ಯಾಗ್ರಹ ಮತ್ತು ಈ ಹೋರಾಟಕ್ಕೆ ಸೈದ್ಧಾಂತಿಕ ಬೆನ್ನೆಲುಬು ಒದಗಿಸಿದ್ದ ಸಮಾಜವಾದಿ ಚಳವಳಿಯಲ್ಲೇ ಪಳಗಿದವರು ಎಂಬುದು ಇತಿಹಾಸ.

ತುಳಿತಕ್ಕೆ ಒಳಗಾದವರ ನೋವಿಗೆ ಧ್ವನಿಯಾಗಲು ಸಮರ್ಥ ಸಂಘಟನೆ ಇರಲಿಲ್ಲ. ಭದ್ರಾವತಿಯಲ್ಲಿ ಅಧ್ಯಾಪಕರಾಗಿದ್ದ ಪ್ರೊ.ಬಿ.ಕೃಷ್ಣಪ್ಪನವರು ಇದಕ್ಕೊಂದು ಸಂಘಟನೆಯ ಆಸರೆ ಕಲ್ಪಿಸಿದರು. ಹೀಗೆ ರೂಪುಗೊಂಡ ದಲಿತ ಸಂಘರ್ಷ ಸಮಿತಿಯು ಪರಿಶಿಷ್ಟ ಸಮುದಾಯದವರ ಸ್ವಾಭಿಮಾನ, ಅಸ್ಮಿತೆ ಮತ್ತು ಪ್ರತಿಭಟನೆಗೆ ಧ್ವನಿಯಾಯಿತು. ನೋವನ್ನೇ ಉಂಡು, ನೋವನ್ನೇ ಹೊದ್ದು ಮಲಗುತ್ತಿದ್ದ ಪರಿಶಿಷ್ಟ ಸಮುದಾಯದವರಲ್ಲಿ ಹೊಸ ಚೈತನ್ಯವನ್ನು ದಸಂಸ ಮೂಡಿಸಿತು. ದಲಿತ ಚಳವಳಿಗೆ ಮಾತ್ರವಲ್ಲದೇ, ಅಲ್ಲಿಯವರೆಗೆ ಸಾಹಿತ್ಯ ಕ್ಷೇತ್ರದಲ್ಲಿ ‘ಅಸ್ಪೃಶ್ಯ’ರಾಗಿಯೇ ಇದ್ದ, ಅಕ್ಷರಲೋಕವನ್ನೇ ಕಾಣದಿದ್ದ ಪರಿಶಿಷ್ಟ ಸಮುದಾಯದವರ ಸಾಹಿತ್ಯ ಸೃಷ್ಟಿಗೂ ಈ ಚಳವಳಿ ಕಾರಣವಾಯಿತು.

ಕಾಗೋಡು ಚಳವಳಿಯ ತವರಾದ ಶಿವಮೊಗ್ಗ, ಕರ್ನಾಟಕ ರಾಜ್ಯ ರೈತ ಸಂಘದ ಹುಟ್ಟಿನ ನೆಲೆ ಕೂಡ. 1980ರಲ್ಲಿ ನವಲಗುಂದ–ನರಗುಂದ ರೈತರ ಹೋರಾಟ ಆರಂಭವಾಗಿತ್ತು. ಈ ಹೋರಾಟಕ್ಕೆ ಬೆಂಬಲವಾಗಿ ಶಿವಮೊಗ್ಗದಲ್ಲಿ ಎಚ್.ಎಸ್.ರುದ್ರಪ್ಪ, ಎನ್.ಡಿ. ಸುಂದರೇಶ್ ಮತ್ತು ಎಂ.ಡಿ. ನಂಜುಂಡಸ್ವಾಮಿ ನೇತೃತ್ವದಲ್ಲಿ ನಡೆದ ಚಟುವಟಿಕೆಗಳು ರೈತ ಸಂಘಕ್ಕೆ ಸಂಘಟನಾತ್ಮಕ ಸ್ವರೂಪ ನೀಡಿದವು. ಈ ಸಮಾವೇಶದ ಫಲಿತವಾಗಿ ಭದ್ರಾವತಿಯಲ್ಲಿ ರೈತರು ಸರಣಿ ಹೋರಾಟ ನಡೆಸಿ, ಜೈಲ್‌ ಭರೋ ಶುರು ಮಾಡಿದರು. ಇದು ರಾಜ್ಯವ್ಯಾಪಿ ಹರಡಿಕೊಂಡು ರೈತ ಸಂಘಕ್ಕೆ ಭದ್ರ ನೆಲೆ ಸಿಕ್ಕಿತು.

‌ರೈತ ಸಂಘಕ್ಕೆ ತಾತ್ವಿಕ ತಳಹದಿ ಹಾಕಿಕೊಟ್ಟು, ಅದಕ್ಕೆ ರಾಷ್ಟ್ರ– ಅಂತರರಾಷ್ಟ್ರೀಯ ಮನ್ನಣೆ ತಂದುಕೊಟ್ಟವರು ನಂಜುಂಡಸ್ವಾಮಿ. ರೈತ ಸಂಘ ಚುನಾವಣಾ ರಾಜಕಾರಣ ಮಾಡಲು ಹೊರಟಾಗ ಅದಕ್ಕೆ ವಿರೋಧ ವ್ಯಕ್ತಪಡಿಸಿ ಒಂದು ಗುಂಪು ಹೊರಗುಳಿದಿದ್ದು ಬಿಟ್ಟರೆ, ಎಂಡಿಎನ್‌ ಇರುವವರೆಗೂ ರೈತ ಸಂಘವು ನಾಡಿನ ರೈತರ ಕೊರಳಧ್ವನಿಯಾಗಿಯೇ ಇತ್ತು.

ಹೀಗಾಗಿ, ವಿದೇಶಿ ಕಂಪನಿಗಳು ಕೃಷಿ ಕ್ಷೇತ್ರಕ್ಕೆ ಕಾಲಿಡತೊಡಗಿದಾಗ ರೈತ ಸಂಘ ತೀವ್ರ ರೀತಿಯ ಹೋರಾಟ ನಡೆಸಿತು. ಬಿತ್ತನೆ ಬೀಜದ ಮಾಫಿಯಾ, ಕೆಂಟುಕಿ ಚಿಕನ್, ಗೊಬ್ಬರ–ಕೀಟನಾಶಕಗಳಿಗೆ ದುಬಾರಿ ಬೆಲೆ ಹಾಗೂ ಕೃಷಿ ಉತ್ಪನ್ನಗಳಿಗೆ ಬೆಲೆ ಸಿಗದ ವಿಷಯಗಳಲ್ಲಿ ರೈತ ಸಂಘ ಹೋರಾಟದ ಮುಂಚೂಣಿಯಲ್ಲಿತ್ತು. ದಕ್ಷಿಣ–ಉತ್ತರ ಹೋರಾಟವನ್ನು ಏಕೀಭವಿಸಿ ರೈತರ ಐಕ್ಯ ಹೋರಾಟ ರೂಪಿಸಬೇಕೆಂಬ ಸಂಕಲ್ಪ ಮಾಡಿದವರು ಎಂಡಿಎನ್‌ ಮತ್ತು ಉತ್ತರದಲ್ಲಿ ಮಹೇಂದ್ರ ಸಿಂಗ್‌ ಟಿಕಾಯತ್‌.

ಈಗ ಮಹೇಂದ್ರ ಸಿಂಗ್ ಟಿಕಾಯತ್ ಮಗ, ರಾಕೇಶ್‌ ಹೋರಾಟದ ಮುಂಚೂಣಿಯಲ್ಲಿದ್ದಾರೆ. ಎಂಡಿಎನ್ ಪುತ್ರಿ ಚುಕ್ಕಿ ನಂಜುಂಡಸ್ವಾಮಿ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಕವಲುಗಳಾಗಿ ಹರಡಿದ್ದ ರೈತ ಸಂಘದ ಕೊಂಡಿಗಳು ಈಗ ನದಿಗಳೆಲ್ಲ ಸಮುದ್ರ ಸೇರುವಂತೆ ಮಹಾ ಪಂಚಾಯತ್ ಹೆಸರಿನಲ್ಲಿ ಒಂದಾಗುತ್ತಿವೆ. ಎಲ್ಲವೂ ಕೂಡಿಕೊಂಡು ದಕ್ಷಿಣದಲ್ಲಿ ರೈತ ಹೋರಾಟವನ್ನು ಮತ್ತೆ ಪ್ರಜ್ವಲಿಸುವಂತೆ ಮಾಡುವತ್ತ ಮುನ್ನಡೆಯುತ್ತಿವೆ.

ಸಂಘಟನೆಯ ಆಸರೆ, ಕೊರಳಿಗೆ ಧ್ವನಿಯಾಗುವವರಿಲ್ಲದೇ ಕೊರಗುತ್ತಿದ್ದ ರೈತ ಸಂಕುಲ ಒಗ್ಗಟ್ಟಿನ ಮಾತನಾಡುತ್ತಿದೆ. ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳನ್ನು ಸಂಘಟಿಸುವಲ್ಲಿ ತೊಡಗಿದ್ದ ಸಂಘಟನೆಗಳ ಪ್ರಮುಖರು ಈಗ ರೈತರಿಗೆ ಹೆಗಲು ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಹೊಸ ಮನ್ವಂತರದ ಹಾದಿಗಳ ಹೊಳಹು ಕಾಣುತ್ತಿದೆ. ಉತ್ತರದ ರೈತರ ಮನೋಬಲ ದಕ್ಷಿಣದ ರೈತರನ್ನು ಹುರಿದುಂಬಿಸಿದೆ. ರೈತರ ಏಳ್ಗೆಯನ್ನೇ ಮುಂದಿಟ್ಟು ನಡೆಯುತ್ತಿರುವ ಶಿವಮೊಗ್ಗೆಯ ಮಹಾಪಂಚಾಯತ್‌, ರೈತರ ಹೋರಾಟಕ್ಕೆ ಹೊಸ ಚೈತನ್ಯ ನೀಡಬೇಕು ಎಂಬ ಅಪೇಕ್ಷೆ ಸಂಘಟಕರದ್ದು. ಅದು ಕರ್ನಾಟಕಕ್ಕೆ ಸೀಮಿತವಾಗದೇ ನೆರೆಯ ರಾಜ್ಯಗಳಿಗೂ ಹರಡಿ ಅನ್ನದಾತರ ಅಳಲನ್ನು ಆಳುವವರ ಕೆಪ್ಪುಕಿವಿಗೆ ಮುಟ್ಟಿಸುವಂತಾದರೆ ಶಿವಮೊಗ್ಗೆಯ ಸಮಾವೇಶ ಸಾರ್ಥಕವಾದೀತು.

ಈ ಹೊತ್ತಿನೊಳಗೆ, ‘ಹೆಸರನು ಬಯಸದೆ ಅತಿಸುಖಕೆಳಸದೆ ದುಡಿವನು ಗೌರವಕಾಶಿಸದೆ’ ಎಂಬ ಕುವೆಂಪು ಅವರ ‘ನೇಗಿಲಯೋಗಿ’ಯ ಗೀತೆಯ ಸಾಲು ಅನುಕರಣೀಯವಾದರೆ ದೇಶಕ್ಕೆ ಒಳಿತಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT