ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನನಾಯಕರ ಕಾಲ ಮುಗಿಯಿತು, ಈಗ ಧನನಾಯಕರ ಕಾಲ: ಪಕ್ಷಾಂತರ ಸೋಲಲಿ, ಜನತಂತ್ರ ಗೆಲ್ಲಲಿ

Last Updated 19 ನವೆಂಬರ್ 2019, 4:57 IST
ಅಕ್ಷರ ಗಾತ್ರ

ಸೈದ್ಧಾಂತಿಕ ರಾಜಕಾರಣ, ಹೋರಾಟದ ಹಿನ್ನೆಲೆಯ ಸಂಸದೀಯಪಟುತ್ವ, ಜನಪರ ಕಾಳಜಿಯ ವ್ಯಕ್ತಿತ್ವ ಎಂಬ ಪದಗಳು ರಾಜಕೀಯ ವ್ಯವಸ್ಥೆಯೊಳಗೆ ಹಳಸಿಹೋಗಿವೆ. ನೈತಿಕತೆ– ಅನೈತಿಕತೆಯ ಮಧ್ಯೆ ಢಾಳಾಗಿ ಕಾಣಿಸುವಂತೆ ಇದ್ದ ದೊಡ್ಡ ಅಂತರ ಮರೆಯಾಗಿದ್ದು, ತೆಳುವಾದ ನಾಟಕೀಯ ಪರದೆಯೊಂದು ಇಳಿಬಿಟ್ಟುಕೊಂಡಿದೆ. ಹಣ– ಅಂತಸ್ತಿನ ಸುಡುಗಾಳಿಗೆ ಈ ಪರದೆ ಅತ್ತಿಂದಿತ್ತ ಸರಿದಾಡುತ್ತಲೇ ಇದ್ದು, ಅಲ್ಲಿರುವವರು ಇಲ್ಲಿ, ಇಲ್ಲಿರುವವರು ಅಲ್ಲಿ ವೇಷ ಬದಲಿಸಿಕೊಂಡು ಕೂರುವ ಪರಿಪಾಟ– ದೊಡ್ಡಾಟಗಳು ದಿನನಿತ್ಯದ ವಿದ್ಯಮಾನಗಳಾಗಿವೆ. ಪಕ್ಷಾಂತರ ಎಂಬುದು ವರ್ಜ್ಯ ಹಾಗೂ ಅವಮಾನದ ಸಂಗತಿಯಾಗುವ ಬದಲು, ಅದೊಂದು ದೇಶಭಕ್ತಿಯ, ತ್ಯಾಗ– ಬಲಿದಾನದ ಸಂಕೇತದಂತೆ ಗೌರವಪ್ರಾಪ್ತಿಗೆ ಕಾರಣವಾಗಿರುವುದು
ಪ್ರಜಾತಂತ್ರಕ್ಕೆ ಮಾರಕವಾದ ಬೆಳವಣಿಗೆ.

ವೈ.ಗ.ಜಗದೀಶ್
ವೈ.ಗ.ಜಗದೀಶ್

ಸರಿಸುಮಾರು ಒಂದೂವರೆ ವರ್ಷದಿಂದ ಕರ್ನಾಟಕದ ಏರಿಳಿತದ ರಾಜಕಾರಣ, ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ನಾಯಕರ ಅಪ್ರಜಾತಾಂತ್ರಿಕ ನಡೆಗಳು ಅಸಹ್ಯ ಹುಟ್ಟಿಸುವಂತಿವೆ. ನಾಯಕರ ಪ್ರವೃತ್ತಿ ಮತ್ತು ನಡಾವಳಿಗಳು ಸಂವಿಧಾನದ ಆಶಯ, ಬಹುಪಕ್ಷೀಯ ಪದ್ಧತಿ, ನೈಜ ಪ್ರಜಾತಂತ್ರದ ಬೇರುಗಳನ್ನೇ ಬುಡಮೇಲಾಗಿಸುವ ದಿಕ್ಕಿನಲ್ಲಿ ಸಾಗುತ್ತಿರುವುದರ ದ್ಯೋತಕದಂತಿವೆ. ಅಧಿಕಾರಸ್ಥರು ಹಾಗೂ ಗದ್ದುಗೆಯ ಆಕಾಂಕ್ಷಿಗಳಲ್ಲಿ ತಾಯಿಬೇರಿನಂತಿರುವ ಸ್ವಾರ್ಥ, ಅಧಿಕಾರಲಾಲಸೆ ಹಾಗೂ ಕಾಲಕ್ಕೆ ತಕ್ಕಂತೆ ಬಣ್ಣ ಬದಲಿಸುವ ಗೋಸುಂಬೆ ಗುಣಗಳು ಪ್ರಜಾತಂತ್ರವೆಂಬ ಭವ್ಯ ವೃಕ್ಷದ ಒಂದೊಂದೇ ರೆಂಬೆ– ಕೊಂಬೆಯನ್ನು ಕಡಿಯುವುದಕ್ಕೆ ಪ್ರೇರಣೆಯೊದಗಿಸಿವೆ.

ಅಧಕಾರ– ಹಣದ ಅಮಲು, ಅವಕಾಶವಾದಿತನವು ಪ್ರಜಾತಂತ್ರ ವ್ಯವಸ್ಥೆಯ ಕೆನೆಪದರದಂತಿರುವ
ರಾಜಕಾರಣಿಗಳನ್ನು ನಖಶಿಖಾಂತ ಮುಳುಗಿಸಿಬಿಟ್ಟಿವೆ. ಹೀಗಾಗಿ, ಪಕ್ಷಾಂತರ ಹಾಗೂ ಸೈದ್ಧಾಂತಿಕ ವಿಸ್ಮೃತಿ ಎಂಬುದು ಸಹಜ ಎನ್ನುವಂತಾಗಿದೆ. ಈ ವಿಷಯದೊಳಗೆ ಪಕ್ಷಭೇದವಿಲ್ಲ.

2018ರ ಮೇ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಸರಳ ಬಹುಮತ ಸಿಗಲಿಲ್ಲ. ಆದರೆ, ಅತಿಹೆಚ್ಚು ಸಂಖ್ಯಾಬಲ ಹೊಂದಿದ ಪಕ್ಷವಾಗಿ ಅದು ಹೊರಹೊಮ್ಮಿತು. ಹೇಗಾದರೂ ಬಹುಮತ ಗಳಿಸುವ ಅಪರಿಮಿತ ವಿಶ್ವಾಸದಲ್ಲಿದ್ದ ಬಿ.ಎಸ್‌. ಯಡಿಯೂರಪ್ಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆ ಹೊತ್ತಿನಲ್ಲೇ ನಡೆಸಿದ್ದ ‘ಆಪರೇಷನ್ ಕಮಲ’ಕ್ಕೆ ಯಶಸ್ಸು ದಕ್ಕಲಿಲ್ಲ; ‘ಉತ್ತರ ಕುಮಾರ’ನಂತೆ ಯಡಿಯೂರಪ್ಪ ಓಡಿಹೋದರು.

ಚುನಾವಣೆಯಲ್ಲಿ ಎದಿರುಬದಿರು ನಿಂತು, ಪರಸ್ಪರ ಹೀಯಾಳಿಸಿಕೊಂಡು ಚುನಾವಣೆ ಎದುರಿಸಿದ್ದ ಜೆಡಿಎಸ್‌– ಕಾಂಗ್ರೆಸ್ ನಾಯಕರು ಅವಕಾಶವಾದಿ ಮೈತ್ರಿ ಮಾಡಿಕೊಂಡು ಸರ್ಕಾರವನ್ನು ರಚಿಸಿಬಿಟ್ಟರು. ಒಲ್ಲದ ಮದುವೆಯ ಸಂಸಾರ ಬಹುಕಾಲ ಬಾಳಲಿಲ್ಲ; ಬಾಳಲು ಅತ್ತ ಬಿಜೆಪಿಯವರು, ಇತ್ತ ಸಿದ್ದರಾಮಯ್ಯ ಬಿಡಲಿಲ್ಲ. ಮೈತ್ರಿ ಸರ್ಕಾರ ಸರಿಯಿಲ್ಲ; ಅಭಿವೃದ್ಧಿ ವಿಷಯದಲ್ಲಿ ವಂಚನೆ ಮಾಡಲಾಯಿತು ಎಂದೆಲ್ಲ ಪುಕಾರು– ತಕರಾರು ತೆಗೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರ ಬಂದು ಈಗ ಬಿಜೆಪಿ ತೋಳತೆಕ್ಕೆಯಲ್ಲಿರುವವರು, ಒಂದೂವರೆ ವರ್ಷದ ಹಿಂದೆ ಆ ಕೆಲಸ ಮಾಡಿದ್ದಿದ್ದರೆ ಅವರ ಮಾತಿಗೆ ತೂಕ ಇರುತ್ತಿತ್ತು. ಕಮಲದ ವಾಸನೆಗೆ ಸೆರೆಯಾಗಿ ಅಂದೇ ಪಕ್ಷ ತೊರೆದಿದ್ದರೆ ರಾಜ್ಯ ರಾಜಕಾರಣ ಸುದೀರ್ಘ ಅವಧಿಗೆ ಅರಾಜಕತೆಯ ನೆಲೆವೀಡೂ ಆಗುತ್ತಿರಲಿಲ್ಲ. ಆದರೆ, ಅಧಿಕಾರದ ಆಸೆ– ಆಮಿಷಕ್ಕೆ ಬಲಿಯಾಗಿ ಪಕ್ಷಾಂತರ ಮಾಡಿದ್ದು ಈಗಿನ ಚರ್ಚೆಯ ವಸ್ತುವಾಗಿದೆ.

ಹಾಗಂತ ಪಕ್ಷಾಂತರ ಎಂಬುದು ಇಂದು ನಿನ್ನೆಯ ಕಥೆಯಲ್ಲ; ಕರ್ನಾಟಕದಲ್ಲಿ ದೊಡ್ಡಮಟ್ಟದ ಪಕ್ಷಾಂತರ ಪ್ರವೃತ್ತಿಯನ್ನು ಹುಟ್ಟುಹಾಕಿದ ಅಪಕೀರ್ತಿ ಎಸ್.ಎಂ. ಕೃಷ್ಣ ಅವರಿಗೆ ಸಲ್ಲಬೇಕು. ಎಂಟು ಬಿಜೆಪಿ ಶಾಸಕರು ಅಂದು ಕಾಂಗ್ರೆಸ್ ಸೇರಿದ್ದರು. ಆದರೆ, ಅದು ಚುನಾವಣೆ ಹೊತ್ತಿಗೆ ನಡೆದಿತ್ತು. ಆ ವೇಳೆ ಪಕ್ಷಾಂತರಿಗೆ ಮಣೆ ಹಾಕಬೇಕೇ ಬೇಡವೇ? ಅವರ ಒಲವು–ನಿಲುವೇನು ಎಂದು ನಿಷ್ಕರ್ಷೆ ಮಾಡಿ ತೀರ್ಪು ನೀಡುವ ಅಧಿಕಾರ ಮತದಾರನಿಗೆ ಇರುತ್ತದೆ. ನಂತರದ ಸರದಿ ಸಿದ್ದರಾಮಯ್ಯ ಅವರದ್ದಾಗಿತ್ತು. ಅವರೊಬ್ಬರೇ ಮೊದಲು ಕಾಂಗ್ರೆಸ್ ಸೇರಿದರು. ಬಳಿಕ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು 2008ರಲ್ಲಿ ನಡೆದ ಮಧ್ಯಂತರ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಪಾಳಯ ಸೇರಿದ್ದರು.

‘ಆಪರೇಷನ್‌’ ಎಂಬ ಪಕ್ಷಾಂತರದ ಪೆಡಂಭೂತವನ್ನು ಧರೆಗಿಳಿಸಿದವರು ಯಡಿಯೂರಪ್ಪ. ದಶಕದ ಹಿಂದೆ ಬಿಜೆಪಿ ಇಂತಹುದೇ ಸಂದಿಗ್ಧ ಸ್ಥಿತಿಯಲ್ಲಿತ್ತು. 110 ಶಾಸಕರು ಗೆದ್ದಿದ್ದರೂ ಪಕ್ಷೇತರರಾಗಿ ಗೆದ್ದವರನ್ನೇ ಸರ್ಕಾರ ರಚಿಸಲು ಅಂದು ನೆಚ್ಚಿಕೊಳ್ಳಲಾಗಿತ್ತು. ಆ ಹೊತ್ತಿನಲ್ಲಿ ಸಚಿವ ಸ್ಥಾನದ ಆಮಿಷ ತೋರಿ 14 ಶಾಸಕರನ್ನು ಜೆಡಿಎಸ್‌– ಕಾಂಗ್ರೆಸ್‌ನಿಂದ ಕರೆತರಲಾಯಿತು. ‘ಅನೈತಿಕ’ ರಾಜಕಾರಣದ ನಿಜಪರ್ವ ಆರಂಭವಾಗಿದ್ದು ಆಗಲೇ.

ಚುನಾವಣೆ ಹೊತ್ತಿಗೆ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುವುದು ಸಾಮಾನ್ಯ. ಅದಕ್ಕೆ ಮತದಾರ ಮಾನ್ಯ– ಅಮಾನ್ಯದ ಮುದ್ರೆ ಒತ್ತಿಬಿಡುತ್ತಾನೆ. ಒಂದು ಪಕ್ಷದ ಹೆಸರು, ಚಿಹ್ನೆ ಹಾಗೂ ಆ ಪಕ್ಷ ಪ್ರತಿಪಾದಿಸುವ ಸಿದ್ಧಾಂತವನ್ನು ಹೇಳಿಕೊಂಡು ಚುನಾವಣೆಯಲ್ಲಿ ಗೆದ್ದವರು ಆರೇಳು ತಿಂಗಳಲ್ಲಿ–ವರ್ಷದೊಪ್ಪತ್ತಿನಲ್ಲಿ ವಿರುದ್ಧ ದಡಕ್ಕೆ ನೆಗೆಯುವುದು ಸರಿಯಾದ ಕ್ರಮವಲ್ಲ. ರಾಜಕಾರಣವೇ ಬೇಡವೆಂದು, ಕಾಯಿಲೆ ಕಸಾಲೆಯಿಂದ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲಾಗುತ್ತಿಲ್ಲವೆಂದು ರಾಜೀನಾಮೆ ಕೊಟ್ಟು ಹೊರನಡೆಯುವುದು ಸತ್ಯದ ಮಾರ್ಗ. ಸಚಿವ ಸ್ಥಾನಕ್ಕಾಗಿಯೋ ನಿಗಮ–ಮಂಡಳಿಯ ಅಧ್ಯಕ್ಷಗಿರಿ
ಯಂತಹ ಲಾಭಕಟ್ಟಿನ ಹುದ್ದೆಗಾಗಿಯೋ ಜಿಗಿಯುವುದು ಗೆಲ್ಲಿಸಿದ ಮತದಾರನ ನಂಬಿಕೆಗೆ ವಿರುದ್ಧವಾದ ನಡೆ.

ಹೋರಾಟದ ಭೂಮಿಕೆಯಿಂದ ರಾಜಕಾರಣಕ್ಕೆ ಬರುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಕ್ಷೀಣಿಸುತ್ತಿದೆ. ಜನ
ನಾಯಕರ ಬದಲಿಗೆ ಧನನಾಯಕರ ಕಾಲ ಬಂದು ವರ್ಷಗಳೇ ಸಂದಿವೆ. ಪಕ್ಷಾಂತರ ಎಂಬುದು ಈಗ ಅಪಸವ್ಯವಾಗಿ ಉಳಿದಿಲ್ಲ. ಹುಲ್ಲುಗಾವಲು ಇರುವ ಕಡೆ ದನಗಳು ಹೋಗುವಂತೆ, ಅಧಿಕಾರ ಇರುವ ಕಡೆ ವಲಸೆ ಹೋಗುವುದು ರಾಜಕಾರಣಿಗಳ ಜಾಯಮಾನವೇ ಆಗಿಬಿಟ್ಟಿದೆ.

‘ಕಾಂಗ್ರೆಸ್‌ಮುಕ್ತ ಭಾರತ’ದ ಸಂಕಲ್ಪ ಮಾಡಿಕೊಂಡು ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಕೂಡ ಇಂತಹ ನಡೆಗಳಿಗೆ ಪರೋಕ್ಷ ಬೆಂಬಲ ನೀಡುತ್ತಿದೆ. ಲೋಕಸಭೆ ಚುನಾವಣೆ ವೇಳೆ ಪಶ್ಚಿಮ ಬಂಗಾಳದಲ್ಲಿ ಪ್ರಚಾರ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ತೃಣಮೂಲ ಕಾಂಗ್ರೆಸ್‌ನ 40 ಶಾಸಕರು ಚುನಾವಣೆ ಬಳಿಕ ಆ ಪಕ್ಷ ತೊರೆಯಲಿದ್ದಾರೆ ಎಂದಿದ್ದರು. ಜನರು ಮತ ಹಾಕುತ್ತಿದ್ದುದು ಲೋಕಸಭೆಗೆ ಎಂದು ಗೊತ್ತಿದ್ದರೂ ‘ಒಂದು ಮತ ಎರಡು ಸರ್ಕಾರ’ ಎಂಬ ಘೋಷಣೆಯನ್ನು ಕರ್ನಾಟಕದಲ್ಲಿ ಬಿಜೆಪಿ ನಾಯಕರು ಕೊಟ್ಟಿದ್ದರು. ಇಲ್ಲಿದ್ದ ಮೈತ್ರಿ ಸರ್ಕಾರವನ್ನು ಕೆಡಹುವ ತಂತ್ರ ಲೋಕಸಭೆ ಚುನಾವಣೆಗೆ ಮುನ್ನವೇ ಸಿದ್ಧವಾಗಿತ್ತು ಎಂಬುದಕ್ಕೆ ಇದು ಸಾಕ್ಷ್ಯವಾಗುತ್ತದೆ.

ಪಕ್ಷಾಂತರವೆಂಬ ಹುತ್ತದೊಳಗೆ ಸೇರಿಕೊಳ್ಳುವ ಹಾವುಗಳನ್ನು ಬಡಿಯಬಹುದಾಗಿದ್ದ ಸುಪ್ರೀಂ ಕೋರ್ಟ್‌, ಹುತ್ತವನ್ನಷ್ಟೇ ಬಡಿದು ಸುಮ್ಮನಾಯಿತು. ಪಕ್ಷಾಂತರವೆಂಬ ಪ್ರಜಾಸತ್ತಾತ್ಮಕವಲ್ಲದ ನಡೆಯನ್ನು ತಡೆಯಬೇಕಾದ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಪೀಠವು ಕೇಂದ್ರಕ್ಕೆ ಸಲಹೆ ನೀಡಿ ಸುಮ್ಮನಾಯಿತು. ಪಕ್ಷಾಂತರ ಎಂಬ ದೊಡ್ಡರೋಗಕ್ಕೆ ಶಸ್ತ್ರಚಿಕಿತ್ಸೆ ಮಾಡುವ ಅಧಿಕಾರ ಇದ್ದ ನ್ಯಾಯಮೂರ್ತಿಗಳು, ಕಠಿಣ ಕಾನೂನು ರೂಪಿಸಬೇಕು ಎಂದು ನಿರ್ದೇಶನ ಕೊಟ್ಟಿದ್ದರೆ ಜಿಗಿತವೀರರಿಗೆ ಭಯ ಇರುತ್ತಿತ್ತು. ಚುನಾಯಿತ ಸರ್ಕಾರವನ್ನು ಯಾವುದೇ ಹೊತ್ತಿನಲ್ಲಿ ಏನಾದರೂ ಸಬೂಬು ಹೇಳಿ ಬೀಳಿಸಬಹುದಾದ ಆಸೆಬುರುಕರ ಧೈರ್ಯವೂ ಉಡುಗಿಹೋಗಿರುತ್ತಿತ್ತು. ಕರ್ನಾಟಕದ ಅನರ್ಹರ ಪ್ರಕರಣದಲ್ಲಿ ಆಗಿದ್ದು ಆಗಿಹೋಯಿತು; ಮುಂದೆ ‘ಅನರ್ಹ’ ಪ್ರಕರಣಗಳು ವಿಚಾರಣೆಗೆ ಬಂದಾಗ ಕೇಂದ್ರವನ್ನು ಅಥವಾ ಅನರ್ಹ ಶಾಸಕರನ್ನು ಪ್ರಶ್ನಿಸಿ ತಪರಾಕಿ ಕೊಡುವ ಅಧಿಕಾರವೂ ಇರುತ್ತಿತ್ತು. ಆದರೆ, ವಿಧಾಯಕ ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಕಾರ್ಯ
ನಿರ್ವಹಿಸಲಿಲ್ಲ. ಹೀಗಾಗಿ, ನ್ಯಾಯಾಂಗದ ಕೋಲು ಮುರಿಯಿತೇ ವಿನಾ ಹಾವು ಸಾಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT