ಶುಕ್ರವಾರ, ಡಿಸೆಂಬರ್ 4, 2020
22 °C
ಶತಮಾನ ದಾಟಿದ ಶಾಲೆಗಳು ಮಾದರಿ ಶಾಲೆಗಳಾಗಿ ಪರಿವರ್ತನೆ ಆಗುವವೇ?

ಶತಮಾನದ ಶಾಲೆಗಳಿಗೆ ಶಕ್ತಿ ತುಂಬೋಣ

ಜಿ.ಎಸ್. ಜಯದೇವ | ಕೃಷ್ಣಮೂರ್ತಿ ಹನೂರು Updated:

ಅಕ್ಷರ ಗಾತ್ರ : | |

ಕುವೆಂಪು ಅವರು ನಿವೃತ್ತಿಯ ನಂತರ ಎಷ್ಟೋ ವರ್ಷಗಳ ಕಾಲ, ತಾವು ನಾಮಕರಣ ಮಾಡಿ ಬೆಳೆಸಿದ ಮಾನಸ ಗಂಗೋತ್ರಿಯ ಗಿಡ ಮರಗಳ ನಡುವಣ ಬಯಲಲ್ಲಿ ವಾಯುವಿಹಾರ ಮಾಡುತ್ತಿದ್ದರು. ಒಂದು ದಿನ ಗಂಗೋತ್ರಿಯ ಒಂದು ಮರದ ಕಾಂಡಕ್ಕೆ ಹಬ್ಬಿದ್ದ ಗೆದ್ದಲನ್ನು ತಾವು ಕೈಯಲ್ಲಿ ಹಿಡಿದಿದ್ದ ಕೋಲಿನಿಂದ ಕೆರೆದು ಉದುರಿಸುತ್ತಿರುವಲ್ಲಿ ಎದುರು ಬಂದ ಶಿಷ್ಯ ಪ್ರೊ.ಎಲ್.ಬಸವರಾಜು ಅವರನ್ನು ಕೇಳಿದ ಪ್ರಶ್ನೆ, ‘ಈ ಮರದ ಪೊಟರೆಯಲ್ಲಿ ಬಹಳ ಕಾಲದಿಂದ ವಾಸ ಮಾಡಿಕೊಂಡಿದ್ದ ಗಿಳಿಗಳು ಎಲ್ಲಿ ಹೋದವು’ ಎಂದು. ಬಸವರಾಜು ಅವರಿಗೆ ಬೇಗ ಉತ್ತರಿಸಲು ಗೊತ್ತಾಗದೆ ‘ಮರ ಒಣಗಿದ ನಿಮಿತ್ತ ಎಲ್ಲೋ ಹೋಗಿರಬೇಕು ಸಾರ್’ ಎಂದರು.


ಜಿ.ಎಸ್. ಜಯದೇವ

ಒಮ್ಮೆ ಮಾತುಕತೆ ಮಧ್ಯೆ ಪ್ರೊ. ಬಸವರಾಜು ಅವರು ತಮ್ಮ ಗುರುಗಳ ಕುರಿತಾದ ಈ ಘಟನೆ ಹೇಳಿದರು. ಇದು ನಡೆದು ನಲವತ್ತು ವರ್ಷಗಳ ಮೇಲೆಯೇ ಆಗಿರಬೇಕು. ಕುವೆಂಪು ಅವರು ಹುಟ್ಟಿ ಬೆಳೆದ ಸಹ್ಯಾದ್ರಿ ಶ್ರೇಣಿಯ ಅರಣ್ಯ ಭಾಗದಲ್ಲಿ ಆ ಕಾಲಕ್ಕೆ ಶಾಲೆಗಳು ಆರಂಭವಾಗಿರಲು ಸಾಧ್ಯವೇ ಇರಲಿಲ್ಲ. ಎಲ್ಲಿಂದಲೋ ಬಂದು ಕುಪ್ಪಳಿಯಲ್ಲಿ ನೆಲೆಸಿದ್ದ ಅಯ್ಯಗಳ ಕೈಯಲ್ಲಿ ವಿದ್ಯಾಭ್ಯಾಸ ಆರಂಭಿಸಿ, ತದನಂತರ ಬಂದು, ಅದಾಗಲೇ ಆರಂಭವಾಗಿ ಅರ್ಧ ಶತಮಾನ ಕಳೆದಿದ್ದ ವೆಸ್ಲಿಯನ್ ಮಿಷನ್ ಶಾಲೆಗೆ ಸೇರಿದ್ದರು. ಆ ಕಾಲಕ್ಕೆ ಬೆಂಗಳೂರು, ಮೈಸೂರು ನಗರಗಳಲ್ಲಿ ಇಂಥವು ಹತ್ತಾರು ಶಾಲೆಗಳು ಇದ್ದಿರಬಹುದೇನೋ?

1920-30ರ ಹೊತ್ತಿಗೆ ನಿಧಾನಗತಿಯಲ್ಲಿ ಕರ್ನಾಟಕ ಗ್ರಾಮ ಪ್ರದೇಶಗಳಲ್ಲಿ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಗಳು ಆರಂಭವಾಗತೊಡಗಿದವು. ಈ ಹಿನ್ನೆಲೆಯಲ್ಲಿ ದಟ್ಟ ಅರಣ್ಯದ ನಡುವೆ ಕುವೆಂಪು ಅಕ್ಷರ ಕಲಿತು ಮೈಸೂರು ಸೇರಿ ಶಾಲೆ ಮುಟ್ಟಿದ್ದೇ ಸಾಹಸ. ಅಂಥ ಪ್ರಾಜ್ಞರು ಓದಿದ ಜಾಗ ಇಂದು ಹಾರ್ಡ್ವಿಕ್‌ ಶಾಲೆ ಎಂಬ ಹೆಸರಿನಲ್ಲಿ ಉಳಿದುಕೊಂಡಿದೆ. ಈ ಸಂಗತಿಯನ್ನು ಯಾಕೆ ಇಲ್ಲಿ ನೆನಪಿಸಿಕೊಳ್ಳಬೇಕೆಂದರೆ, ಆ ಹೊತ್ತಿಗೆ ಆರಂಭವಾಗಿ ಇದೀಗ 2020ರ ವೇಳೆಗೆ ಶತಮಾನ ತುಂಬಿದ ಇಂಥ ಎಷ್ಟೋ ಶಾಲೆಗಳು ಕರ್ನಾಟಕದಲ್ಲಿವೆ.


ಕೃಷ್ಣಮೂರ್ತಿ ಹನೂರು

ಚಾಮರಾಜನಗರದ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರು ಅದೇ ಜಿಲ್ಲೆಯಲ್ಲಿ ಶತಮಾನ ತುಂಬಿದ 36 ಶಾಲೆಗಳನ್ನು ಗುರುತಿಸಿ ಅವುಗಳ ಕಾಯಕಲ್ಪಕ್ಕೆ ಏನು ಚಿಕಿತ್ಸೆ ನೀಡಬೇಕೆಂದು ಯೋಚಿಸಿದ್ದಾರೆ. ಕರ್ನಾಟಕದಾದ್ಯಂತ ಶತಮಾನ ತುಂಬಿದ ಸರ್ಕಾರಿ ಶಾಲೆಗಳನ್ನು ಗುರುತಿಸಿ ಅವಕ್ಕೆ ಜೀವ ತುಂಬುವುದಾದರೆ ಅದೇ ಒಂದು ಐತಿಹಾಸಿಕ ಸಂಗತಿ ಆಗಬಹುದು. ಅಂಥ ಶಾಲೆಗಳಲ್ಲಿ ಓದಿದ ಅಸಂಖ್ಯಾತರು ಈ ಶತಮಾನದ ದೀರ್ಘಾವಧಿಯಲ್ಲಿ ಇತಿಹಾಸಪ್ರಸಿದ್ಧ ಪುರುಷರಾಗಿ ಆಗಿಹೋಗಿದ್ದಾರೆ.

ಹುಟ್ಟಿ ಬೆಳೆದ ಗ್ರಾಮಗಳ ಕುರಿತಾದ ಅಂತರಂಗಪೂರ್ವಕ ನೆನಪೆಂದರೆ ಅವರವರು ಓದಿದ ಶಾಲೆಗಳು. ಕಳೆದ ವರ್ಷಗಳಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ
ನವರು ಆಗಾಗ ಭಾಷಣಗಳಲ್ಲಿ ತಮ್ಮ ಗ್ರಾಮದ ಶಾಲೆಯನ್ನು, ಅಧ್ಯಾಪಕರನ್ನು ನೆನೆಯುತ್ತಲೇ ಇರುತ್ತಾರೆ. ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆಯ ಪ್ರಾಥಮಿಕ ಶಾಲೆಯಲ್ಲಿ ಓದಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರು ಆ ಶಾಲೆಯ ಜೀರ್ಣ ಸ್ಥಿತಿಯನ್ನು ಮನಗಂಡು ಅದನ್ನು ಪುನರ್ ನವೀಕರಿಸುವ ಕೆಲಸ ಮಾಡಿದ್ದಾರೆ.

ಶತಮಾನ ಕಂಡ ಸರ್ಕಾರಿ ಪ್ರಾಥಮಿಕ ಶಾಲೆಗಳು ದುಃಸ್ಥಿತಿಯಲ್ಲಿ ಇರುವುದು ಹಾಗಿರಲಿ, ಅರ್ಧ- ಕಾಲು ಶತಮಾನದ ಶಾಲೆಗಳೇ ಅವನತಿಯ ಹಾದಿ ಹಿಡಿದಿರುವುದಕ್ಕೆ ಕಾರಣ ಕಟ್ಟಿದ ಕಟ್ಟಡ ಮಾತ್ರವಲ್ಲ, ಅದಕ್ಕೆ ಬೇರೆ ಬೇರೆಯ ಕಾರಣಗಳೂ ಇವೆ. ಈ ಶಾಲೆಗಳ ಆಂತರಿಕ ಶಕ್ತಿಯನ್ನು ಅಲ್ಲಿಯ ಅಧ್ಯಾಪಕರೇ ಹೆಚ್ಚಿಸಬೇಕಿದೆ. ಇದಕ್ಕೆ ಸರ್ಕಾರ ಪ್ರೋತ್ಸಾಹ ನೀಡಬೇಕು. ಈ ಬಗೆಯ ಪ್ರಯತ್ನ ನಡೆಯದ, ನಡೆಯುತ್ತಿರುವ ದಾಖಲೆಗಳೂ ಇವೆ. ಪ್ರಾಥಮಿಕ ಶಾಲೆಯ ಅಧ್ಯಾಪಕ, ಅಧ್ಯಾಪಕಿಯರೇ ಗ್ರಾಮೀಣ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಗ್ರಾಮಸ್ಥರಲ್ಲಿ ವಿನಂತಿಸುವುದು, ತಪ್ಪಿಸಿಕೊಳ್ಳುವ ಮಕ್ಕಳನ್ನು ಶಾಲೆಗೆ ಕರೆತರುವಂತಹ ಅಪರೂಪದ ಕೆಲಸಗಳು ನಡೆಯುತ್ತಿವೆ. ಇದರ ಯಶಸ್ಸು ಆಯಾ ಶಾಲೆಯವರ ಮನಃಸ್ಥಿತಿ, ಸರ್ಕಾರಿ ಸೇವೆ ಮತ್ತು ನಿಷ್ಠೆಯನ್ನು ಹೇಳುವಂಥದ್ದು. ಅದೇ ವೇಳೆ ಮುಚ್ಚುತ್ತಿರುವ ಶಾಲೆಗಳೂ ಇವೆ.

ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕನ್ನಡವನ್ನು, ಇಂಗ್ಲಿಷನ್ನು ಸಮರ್ಥವಾಗಿ ಬೋಧಿಸುವುದಾದರೆ, ಮಕ್ಕಳು ಯಾವ ಮಾಧ್ಯಮದಲ್ಲಿ ಓದಬೇಕು ಎಂಬ ಸಮಸ್ಯೆಯೇ ಹುಟ್ಟುವುದಿಲ್ಲ. ಕಳೆದ ದಶಕಗಳಲ್ಲಿ ಇದ್ದದ್ದು ಇದೇ ಕ್ರಮ. ಇದು ನಿವಾರಣೆಯಾಗದೆ, ಅಧ್ಯಾಪಕರು ಸಮರ್ಥರಾಗದೆ, ಭಾಷೆಗಳನ್ನು ಕಲಿಸಲಾಗದೆ ಕೇವಲ ಇಂಗ್ಲಿಷ್‌  ಭಾಷೆಯನ್ನು ಪ್ರದರ್ಶನಕ್ಕೆ ಇಟ್ಟು ಲಕ್ಷಗಟ್ಟಲೆ ವಂತಿಗೆ ವಸೂಲು ಮಾಡುವ ಶಾಲೆಗಳಿಂದ ಏನೂ ಪ್ರಯೋಜನವಾಗುವುದಿಲ್ಲ. ಹಣ ಕೊಟ್ಟು ಓದಿದ ವಿದ್ಯಾರ್ಥಿ, ಹಣ ಕೊಟ್ಟು ಉದ್ಯೋಗ ಪಡೆದ ಅಭ್ಯರ್ಥಿಗೆ ಸಾಮಾಜಿಕ ಚಿಂತನೆಗಳು ಹುಟ್ಟುವುದು ಕಷ್ಟ. ನಿಜಕ್ಕೂ ಸಮಸ್ಯೆ ಇರುವುದು ಯಾವ ಭಾಷೆ ಮಾಧ್ಯಮವಾಗಬೇಕು ಎಂಬುದರಲ್ಲಿ ಅಲ್ಲ. ಮಾತೃಭಾಷೆಯಿಂದ ಮೊದಲಾಗಿ ಉಳಿದೆಲ್ಲ ವಿಷಯಗಳನ್ನು ಮಕ್ಕಳಿಗೆ ಹೇಗೆಲ್ಲಾ ಕಲಿಸಬೇಕೆಂಬುದರಲ್ಲಿ.

2013ರಲ್ಲಿ ಮುಖ್ಯಮಂತ್ರಿಯಾಗಲು ಹೊರಟ ಹಿಂದಿನ ದಿನಗಳಲ್ಲಿ ಸಿದ್ದರಾಮಯ್ಯನವರು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಮನೆಗೆ ಭೇಟಿ ಕೊಟ್ಟರು. ಆಗ ಜಿ.ಎಸ್.ಎಸ್. ಅವರು ಸಂಭವನೀಯ ಮುಖ್ಯಮಂತ್ರಿಯವರ ಕೈಗೆ ಕೊಟ್ಟ ಮನವಿ ಪತ್ರದ ಶೀರ್ಷಿಕೆ ‘ಶತಮಾನ ದಾಟಿದ ಸರ್ಕಾರಿ ಪ್ರಾಥಮಿಕ ಶಾಲೆಗಳ ಪುನರ್ ನವೀಕರಣ ಹಾಗೂ ಗುಣಮಟ್ಟ ಹೆಚ್ಚಿಸುವ ವಿಶೇಷ ಕಾರ್ಯಕ್ರಮಕ್ಕೆ ಸಲಹೆ’ ಎಂದಿದೆ. ಈ ಪತ್ರದ ಪ್ರಾರಂಭಿಕ ವಾಕ್ಯಗಳಲ್ಲಿ, ‘ತಮ್ಮ ಗಮನಕ್ಕೆ ಬಂದಿರುವಂತೆ ಕರ್ನಾಟಕದಾದ್ಯಂತ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳ ಗುಣಮಟ್ಟ ಕುಸಿದಿರುವುದರಿಂದ ಪೋಷಕರ ನಂಬುಗೆಯನ್ನು ಕಳೆದುಕೊಂಡಿವೆ. ಪರ್ಯಾಯವಾಗಿ ಆಂಗ್ಲಮಾಧ್ಯಮ ಶಾಲೆಗಳಿಗೆ ಬೇಡಿಕೆ ಹೆಚ್ಚಿದೆ’ ಎನ್ನುತ್ತಾರೆ.

ಇದೀಗ ಗ್ರಾಮ ಸುತ್ತಿನಲ್ಲಿ ಭವ್ಯವಾಗಿ ತಲೆ ಎತ್ತಿರುವ ಶಾಲೆಗೆ ಹಳ್ಳಿಯವರೆಲ್ಲ ತಮ್ಮ ಮಕ್ಕಳನ್ನು ಬಸ್ಸು ಹತ್ತಿಸುವಲ್ಲಿ ಹೇಳುವುದೆಂದರೆ– ‘ಈ ಕಾನ್ವೆಂಟಿಗೆ ಅಷ್ಟೊಂದು ಶುಲ್ಕ ಕೊಡುವುದು ಇಷ್ಟವಿಲ್ಲ, ಅತ್ತ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುವುದಕ್ಕೂ ಇಷ್ಟವಿಲ್ಲ’.

ಅತ್ಯುತ್ತಮ ಅಧ್ಯಾಪಕರ ತಂಡವನ್ನು ಆಯ್ಕೆ ಮಾಡಿ ಶಾಲೆಗೆ ನೇಮಿಸಿದರೆ, ಶತಮಾನ ದಾಟಿದ ಶಾಲೆಗಳು ಪ್ರತೀ ತಾಲ್ಲೂಕಿನ ಮಾದರಿ ಶಾಲೆಗಳಾಗಿ ಪರಿಣಮಿಸುತ್ತವೆ
ಎಂದು ಆರು ಅಂಶಗಳನ್ನು ಜಿ.ಎಸ್.ಎಸ್. ಉಲ್ಲೇಖಿಸಿದ್ದಾರೆ. ನೂರು ವರ್ಷಗಳು ತುಂಬಿದ ಶಾಲೆಯ ದುರಸ್ತಿಯಲ್ಲಿ ಪಾರಂಪರಿಕ ಅಭಿರುಚಿಯನ್ನು ಉಳಿಸಿಕೊಳ್ಳಬೇಕು, ಮಕ್ಕಳ ಮನಸ್ಸಿಗೆ ಹೊಂದಿಕೊಳ್ಳುವ ಪ್ರಯೋಗಾಲಯ, ಗ್ರಂಥಾಲಯ, ಅವರಿರುವ ಪ್ರದೇಶದ ಆಗಿಹೋದ ಮಹನೀಯರ ಚಿತ್ರಗಳು, ಗಣಕಯಂತ್ರದ ಅನುಕೂಲ ಇವೆಲ್ಲ ಮಕ್ಕಳ ಕೈಗೆ, ಕಣ್ಣಿಗೆ ಸಿಗುವಂತಿರಬೇಕು ಎಂದಿದ್ದಾರೆ.

ಸಮರ್ಪಣಾ ಭಾವದಿಂದ ಕೆಲಸ ಮಾಡುವ ಅಧ್ಯಾಪಕರು ಈಗಲೂ ಇದ್ದಾರೆ. ಸರ್ಕಾರ ಅವರನ್ನು ಪ್ರೋತ್ಸಾಹಿಸಬೇಕು. ಶಿಕ್ಷಕರನ್ನು ರಾಜಕಾರಣಿಗಳು ತಮ್ಮ ಅಥವಾ ಸರ್ಕಾರಿ ಕಾರ್ಯಕರ್ತರು ಎಂದು ಭಾವಿಸಬಾರದು. ಇತ್ತೀಚೆಗೆ ಶಿಕ್ಷಕರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ನಿಂತ, ಶಿಕ್ಷಕ ಹುದ್ದೆಯಲ್ಲೇ ಇದ್ದ ಮಿತ್ರರು ಗ್ರಾಮೀಣ ಪರಿಸರದ ಚುನಾವಣೆಯಷ್ಟೇ ಶಿಕ್ಷಕರ ಕ್ಷೇತ್ರದ ಚುನಾವಣೆಯೂ ಕೆಟ್ಟಿದೆ ಎಂದರು. ಜಾತಿ ಮತ್ತು ಹಣವನ್ನು ಮುಂದಿಟ್ಟು ಮಾತನಾಡುವ ಶಿಕ್ಷಕರು ತರಗತಿಯಲ್ಲಿ ಮಕ್ಕಳಿಗೆ ಏನನ್ನು ತಾನೇ ಬೋಧಿಸಲು ಸಾಧ್ಯ? ಪ್ರಾಥಮಿಕ ಶಿಕ್ಷಣ ಕೆಟ್ಟರೆ ಅದೇ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೂ ಪ್ರವೇಶಿಸುತ್ತಾರೆ. ಪ್ರಾಥಮಿಕ ಹಂತದ ಬುಡಕ್ಕೂ ಉನ್ನತ ಶಿಕ್ಷಣದ ತುದಿಗೂ ಹತ್ತಿರುವ ಜಾತಿ, ಮತ, ಧರ್ಮ ಮತ್ತು ಹಣದ ಗೆದ್ದಲನ್ನು ಉದುರಿಸುವವರು ಯಾರು?

ಸರಳ ಮನಃಸ್ಥಿತಿಯ ಸುರೇಶ್ ಕುಮಾರ್ ಅವರು ಅತೀ ಮುಖ್ಯ ಮತ್ತು ಸಮಸ್ಯಾತ್ಮಕ ಇಲಾಖೆ ಎನಿಸುವ ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದು, ಮಾತುಕತೆ ಮತ್ತು ಕಾರ್ಯಕ್ಷಮತೆಯಲ್ಲಿ ಉತ್ಸಾಹ ತುಂಬಿದವರಾಗಿ ಕಾಣಿಸುತ್ತಿರುವುದರಿಂದ ಅವರು ಶತಮಾನ ತುಂಬಿದ ಶಾಲೆಗಳತ್ತ ಗಮನಹರಿಸಿ ಅವನ್ನು ಪುನರ್‌ನವೀಕರಿಸಿ ಒಂದು ಐತಿಹಾಸಿಕ ದಾಖಲೆ ನಿರ್ಮಿಸುವರೆಂಬ ಭರವಸೆ ತಾಳಬಹುದೇ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು