ಭಾನುವಾರ, ಸೆಪ್ಟೆಂಬರ್ 20, 2020
22 °C
ಅಧಿಕಾರವು ಮನುಷ್ಯನನ್ನು ಭ್ರಷ್ಟಗೊಳಿಸುವುದಷ್ಟೇ ಅಲ್ಲ, ಮದ ಏರುವಂತೆಯೂ ಮಾಡುತ್ತದೆ

‘ಮಹಾ’ ಜಂಬೊ ಸರ್ಕಸ್ ಸುತ್ತ...

ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ Updated:

ಅಕ್ಷರ ಗಾತ್ರ : | |

ಮಹಾರಾಷ್ಟ್ರವು ಕೆಲವು ದಿನಗಳಿಂದ ನಿಜವಾದ ಜಂಬೊ ಸರ್ಕಸ್‌ಗೆ ಸಾಕ್ಷಿಯಾಯಿತು. ಹಲವಾರು ರಿಂಗ್‌ ಮಾಸ್ಟರ್‌ಗಳು ಶಾಸಕರನ್ನು ರಿಂಗಿನ ಒಳಗೆ ಹಾಕುತ್ತಿದ್ದರು. ಅದೊಂದು ಬಗೆಯ ದುರಂತಹಾಸ್ಯ. ಅತ್ಯಂತ ರೋಚಕ ಘಟ್ಟಕ್ಕೆ ಹೊರಳಿಕೊಳ್ಳುತ್ತಿದ್ದ ರಾಜಕೀಯ ನಾಟಕವು ಸುಪ್ರೀಂ ಕೋರ್ಟ್‌ನ ಮಧ್ಯಪ್ರವೇಶ, ಅಜಿತ್ ಪವಾರ್ ಹಾಗೂ ದೇವೇಂದ್ರ ಫಡಣವೀಸ್ ಅವರು ಕ್ರಮವಾಗಿ ಉಪ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಮೂಲಕ ಕೊನೆಗೊಂಡಿತು. ರಾಷ್ಟ್ರಪತಿಯಿಂದ ನೇಮಕ ಆಗುವ ರಾಜ್ಯಪಾಲರು, ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಆದರೆ, ಮಹಾರಾಷ್ಟ್ರದ ಈಗಿನ ರಾಜ್ಯಪಾಲರು ಆ ಕೆಲಸ ಮಾಡಿದರೇ?

ತುಸು ಹಿಂದಕ್ಕೆ ಹೋಗೋಣ. ಅರವಿಂದ ಕೇಜ್ರಿವಾಲ್ ಅವರು ಮೊದಲ ಬಾರಿಗೆ ದೆಹಲಿ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದಲ್ಲಿ ಯುಪಿಎ ಸರ್ಕಾರ ಇತ್ತು. ಆಗ, ತಮ್ಮ ಆಡಳಿತಕ್ಕೆ ಅಡ್ಡಿ ಉಂಟುಮಾಡಿದರು ಎಂದು ಕೇಜ್ರಿವಾಲ್ ಅವರು ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ಅವರನ್ನು, ‘ಕಾಂಗ್ರೆಸ್ಸಿನ ಏಜೆಂಟ್’ ಎಂದು ಕರೆದಿದ್ದರು. ಅವರ ಆರೋಪದಲ್ಲಿ ಒಂದಿಷ್ಟು ಹುರುಳಿತ್ತು. ರಾಜ್ಯಪಾಲರು ತಮ್ಮ ವಿವೇಚನಾಧಿಕಾರವನ್ನು ಸಂವಿಧಾನದ ಚೌಕಟ್ಟಿನೊಳಗೆ ಯಾವತ್ತೂ ಚಲಾಯಿಸಿ
ದವರಲ್ಲ ಎಂಬುದು ಸಾಮಾನ್ಯ ಜ್ಞಾನ. ಅಧಿಕಾರದಲ್ಲಿ ಇರುವ ಪಕ್ಷಕ್ಕೆ ಅಪಾರವಾದ ನಿಷ್ಠೆ ಅವರಲ್ಲಿರುತ್ತದೆ ಎಂಬುದೂ ಗೊತ್ತಿರುವ ಸಂಗತಿ. ನಮ್ಮ ಸಂವಿಧಾನ ರಚಿಸಿದವರು ಮೈತ್ರಿಕೂಟದ ಸರ್ಕಾರಗಳ ಆಲೋಚನೆ ಹೊಂದಿರಲಿಲ್ಲ, ಇಂದು ಕಾಣುತ್ತಿರುವ ಮಟ್ಟದ ಪಕ್ಷಾಂತರವನ್ನೂ ಅವರು ಕಲ್ಪಿಸಿಕೊಂಡಿರಲಿಲ್ಲ.

ಆಡಳಿತಾರೂಢ ಪಕ್ಷಗಳು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಬಹುದು, ಒಕ್ಕೂಟ ವ್ಯವಸ್ಥೆಯನ್ನು ಹಾಳುಮಾಡಬಹುದು ಎಂಬುದನ್ನು ಅವರು ಕನಸಿನಲ್ಲೂ ಕಂಡಿರಲಿಲ್ಲ. ಜವಾಹರಲಾಲ್‌ ನೆಹರೂ ಇರುವವರೆಗೆ ಸಂವಿಧಾನದ ಆಶಯಗಳ ಬಗ್ಗೆ ಗೌರವ ಇತ್ತು. ಚುನಾಯಿತ ಸರ್ಕಾರಗಳನ್ನು ಉರುಳಿಸಲು ಕೇಂದ್ರದ ಚಿತಾವಣೆಗೆ ಅನುಗುಣವಾಗಿ ಕೆಲಸ ಮಾಡು
ತ್ತಿದ್ದ ರಾಜ್ಯಪಾಲರು ಅಪರೂಪವಾಗಿದ್ದರು. ಆದರೆ, ಇಂದಿರಾ ಗಾಂಧಿ ಅವರ ಆಡಳಿತಾವಧಿಯಲ್ಲಿ ಕಾನೂನಿನ ಸಾರ್ವಭೌಮತ್ವಕ್ಕೆ ಗೌರವ ಕೊಡುವುದನ್ನು ಸಂಪೂರ್ಣವಾಗಿ ಕೈಬಿಡಲಾಯಿತು. ಇಂದಿರಾ ಗಾಂಧಿ ಮತ್ತು ಅವರ ಹಿಂಬಾಲಕರು ರಾಜ್ಯಪಾಲರ ಸ್ವಾಯತ್ತ ಕಾರ್ಯಗಳ ಬಗ್ಗೆ ಕನಿಷ್ಠ ಗೌರವ ಹೊಂದಿದ್ದರು. ಇಂದಿರಾ ನೇತೃತ್ವದ ಸರ್ಕಾರದ ಪರವಾಗಿ ಕೆಲಸ ಮಾಡಿಕೊಡಲು ಇರುವವರು ಎಂಬ ರೀತಿಯಲ್ಲಿ ರಾಜ್ಯಪಾಲರನ್ನು ನೋಡಲಾಯಿತು.

ಇಂದಿರಾ ಅವರು ತಮ್ಮ ಅಧಿಕಾರ ಗಟ್ಟಿಗೊಳಿಸಿಕೊಳ್ಳಲು, ಚುನಾಯಿತ ರಾಜ್ಯ ಸರ್ಕಾರಗಳನ್ನು ಅವಕಾಶ ಸಿಕ್ಕಾಗಲೆಲ್ಲ ವಜಾಗೊಳಿಸಿದರು. ತಮ್ಮ ಇಚ್ಛೆಗೆ ಅನುಗುಣವಾಗಿ ಕೆಲಸ ಮಾಡಲು ರಾಜ್ಯಪಾಲರು ಹಿಂಜರಿದಾಗ ಅವರನ್ನು ಹುದ್ದೆಯಿಂದ ಕೆಳಗಿಳಿಸಲೂ ಹಿಂಜರಿಯಲಿಲ್ಲ. ಇಂದಿರಾ ನಂತರ ಮೊರಾರ್ಜಿ ದೇಸಾಯಿ, ರಾಜೀವ್‌ ಗಾಂಧಿ, ವಿ.ಪಿ.ಸಿಂಗ್‌, ವಾಜಪೇಯಿ ಒಳಗೊಂಡಂತೆ ಯಾವ ಪ್ರಧಾನಿಯೂ ಈ ವಿಚಾರದಲ್ಲಿ ಇದಕ್ಕಿಂತ ಉತ್ತಮವಾಗಿಯೇನೂ ಕಾಣಿಸಲಿಲ್ಲ.

ಅಧಿಕಾರವು ಮನುಷ್ಯನನ್ನು ಭ್ರಷ್ಟಗೊಳಿಸುವುದಷ್ಟೇ ಅಲ್ಲ, ಮದ ಏರುವಂತೆಯೂ ಮಾಡುತ್ತದೆ. ಅನಿರ್ಬಂಧಿತ ಅಧಿಕಾರವು ಸಾಮ್ರಾಟರಲ್ಲಿ ಮಾತ್ರ ಭ್ರಾಂತಿ ಹುಟ್ಟಿಸುವುದಿಲ್ಲ, ಅದು ಅಧಿಕಾರಕ್ಕೆ ಬರುವ ಆಧುನಿಕ ಕಾಲದ ರಾಜಕಾರಣಿಗಳಲ್ಲೂ ಭ್ರಾಂತಿ ಸೃಷ್ಟಿಸುತ್ತದೆ. ತಾವು ದೇಶದಆಡಳಿತ ಚುಕ್ಕಾಣಿಯನ್ನು ಶಾಶ್ವತವಾಗಿ ಹಿಡಿದಿರುತ್ತೇವೆ ಎಂಬ ಭಾವನೆ ಕಾಂಗ್ರೆಸ್ಸಿಗರಲ್ಲಿ ಇತ್ತು. ಆದರೆ, ಸಾಮ್ರಾಜ್ಯಗಳೇ ಉರುಳಿಬಿದ್ದಿವೆ. ಅದೃಷ್ಟದ ಚಕ್ರ ಯಾವತ್ತಿಗೂ ಉರುಳುತ್ತಲೇ ಇರುತ್ತದೆ. ಸರ್ವಾಧಿಕಾರಿಗಳಂತೆ ಮೆರೆಯುತ್ತಿದ್ದ ಪ್ರಾದೇಶಿಕ ನಾಯಕರು, ರಾಜ್ಯಪಾಲರ ಮೂಲಕ ತಮಗೆ ಏಟುಬಿದ್ದಾಗ ಆಘಾತಕ್ಕೆ ಒಳಗಾಗಿದ್ದಾರೆ.

ಒಂದು ಕಾಲದಲ್ಲಿ ಬಲಾಢ್ಯವಾಗಿದ್ದ ಎನ್‌ಸಿಪಿ, ಕಾಂಗ್ರೆಸ್ ಪಕ್ಷಗಳು ಆಘಾತಕ್ಕೆ ಒಳಗಾಗುವುದನ್ನು, ತಮ್ಮ ಆಸರೆಗಾಗಿ ಶಿವಸೇನಾದ ಉದ್ಧವ್ ಠಾಕ್ರೆ ಅವರನ್ನು ನೆಚ್ಚಿಕೊಳ್ಳುವುದನ್ನು ಕಂಡಾಗ ಅಳಬೇಕೋ ನಗಬೇಕೋ ಗೊತ್ತಾಗುವುದಿಲ್ಲ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಸಾಂವಿಧಾನಿಕ ಪ್ರಕ್ರಿಯೆಯನ್ನು ಪಾಲಿಸಿಲ್ಲ ಎಂಬುದನ್ನು ಕಾಂಗ್ರೆಸ್ಸಿನ ವಕೀಲರು ಮಾಧ್ಯಮಗಳ ಎದುರು, ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದ್ದಾರೆ. ರಾಜ್ಯಪಾಲರು ಕೇಂದ್ರದ ಕೈಗೊಂಬೆ ಎಂದು ಅವರು ಆರೋಪಿಸಿದ್ದಾರೆ. ಆದರೆ, ಹಿಂದೆ ಈ ಕಲೆಯಲ್ಲಿ ಕಾಂಗ್ರೆಸ್ ಪರಿಣತಿ ಸಾಧಿಸಿದ್ದ ಕಾರಣ, ಅದು ಈಗ ಮಾಡುತ್ತಿರುವ ಆರೋಪ ಮೋಜಿನಂತೆ ಕಾಣುತ್ತದೆ!

ಇಷ್ಟೆಲ್ಲ ಹೇಳಿದ ನಂತರ, ಈ ವಿಚಾರದಲ್ಲಿ ಬಿಜೆಪಿಯನ್ನು ಪ್ರಶ್ನಿಸದೇ ಇರುವಂತಿಲ್ಲ. ಹಿಂದಿನ ಸರ್ಕಾರಗಳ ಪಾಪಕೃತ್ಯಗಳು ಈಗಿನ ಆಡಳಿತ ಪಕ್ಷಕ್ಕೆ ಪ್ರಶ್ನಾರ್ಹ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಸಮರ್ಥನೆ ಆಗಬಾರದು. ರಾಷ್ಟ್ರಪತಿ ಆಡಳಿತವನ್ನು ಬೆಳ್ಳಂಬೆಳಿಗ್ಗೆ ತೆರವುಗೊಳಿಸಿದ್ದು, ದೇವೇಂದ್ರ ಫಡಣವೀಸ್ ಮತ್ತು ಅಜಿತ್ ಪವಾರ್ ಅವರಿಗೆ ಬೆಳಿಗ್ಗೆ 7.50ಕ್ಕೆ ಪ್ರಮಾಣ ವಚನ ಬೋಧಿಸಿದ ಕ್ರಮವು ಮನೆಬಿಟ್ಟು ಓಡಿಬಂದ ಪ್ರೇಮಿಗಳಿಗೆ ದೂರದ ದೇವಸ್ಥಾನವೊಂದರಲ್ಲಿ ಪೂಜಾರಿಯೊಬ್ಬ ಆಶೀರ್ವಾದ ಮಾಡಿದಂತೆ ಇತ್ತು. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪತ್ರಕರ್ತರೂ ಇರಲಿಲ್ಲ, ಸಾರ್ವಜನಿಕರೂ ಇರಲಿಲ್ಲ. ಇಂತಹ ಕ್ರಮಗಳು ಸಾರ್ವಜನಿಕರಿಗೆ ಸರಿ ಎಂದು ಕಾಣಿಸಬಹುದೇ? ‘ವಿಭಿನ್ನ ಪಕ್ಷ’ ಎಂದು ಬಿಜೆಪಿ ಹೇಳಿಕೊಳ್ಳುವುದರ ಅರ್ಥ ಏನು?

ಮಹಾರಾಷ್ಟ್ರ ಕಂಡ ಬಿಕ್ಕಟ್ಟು ನಮ್ಮ ಪ್ರಜಾತಂತ್ರ ಕೆಲಸ ಮಾಡುತ್ತಿರುವ ಬಗೆಯ ಕುರಿತೂ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ರಾಜ್ಯಪಾಲರು ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ಬಿಟ್ಟುಬಿಡುವುದಾದರೆ, ತಮ್ಮ ಆತ್ಮವನ್ನು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಒತ್ತೆ ಇರಿಸುವುದಾದರೆ ನಮಗೆ ‘ರಾಜ್ಯಪಾಲ’ ಹುದ್ದೆ ಬೇಕೇ? ರಾಜ್ಯಪಾಲರನ್ನು ಬಳಸಿಕೊಳ್ಳುವ ವಿಚಾರದಲ್ಲಿ, ಅಧಿಕಾರಕ್ಕೆ ಬರುವ ಎಲ್ಲ ಪಕ್ಷಗಳೂ ಒಂದೇ ಎಂಬುದಾದರೆ ಆ ಹುದ್ದೆಯನ್ನು ಇಲ್ಲವಾಗಿಸಲು ಸಾಧ್ಯವಿಲ್ಲವೇ? ರಾಜ್ಯಪಾಲ ಎಂಬ ಹುದ್ದೆ ಬ್ರಿಟಿಷ್‌ ಕಾಲದ ಪಳೆಯುಳಿಕೆ, ಈ ಸಂದರ್ಭಕ್ಕೆ ಪ್ರಸ್ತುತವಲ್ಲದ್ದು, ಒಂದು ಬಿಳಿಯಾನೆ. ಈ ಹುದ್ದೆಯನ್ನು ಇಲ್ಲವಾಗಿಸಿದರೆ ಬೊಕ್ಕಸಕ್ಕೆ ದೊಡ್ಡ ಉಳಿತಾಯ ಆಗುತ್ತದೆ. ಕಿರಿಕಿರಿ ಮಾಡುವವರಿಗೆ, ಪಕ್ಷನಿಷ್ಠರಾಗಿದ್ದರೂ ‍ಪಕ್ಷಕ್ಕೆ ಹೆಚ್ಚಿನ ಅನುಕೂಲ ಇಲ್ಲದವರಿಗೆ, ಅಧಿಕಾರದಲ್ಲಿ ಇದ್ದಾಗ ಪಕ್ಷಕ್ಕಾಗಿ ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಪುನರ್ವಸತಿ ಕಲ್ಪಿಸುವುದನ್ನು ಹೊರತುಪಡಿಸಿದರೆ ಈ ಹುದ್ದೆಯಿಂದ ಹೆಚ್ಚಿನ ಪ್ರಯೋಜನವೇನೂ ಇಲ್ಲ.

ರಾಜ್ಯಪಾಲರ ಹುದ್ದೆಯನ್ನು ಮುಂದುವರಿಸಬೇಕು ಎಂದಾದರೆ, ಅವರು ಆಡಳಿತ ಪಕ್ಷದ ಹಿತ ಕಾಯುವುದಕ್ಕಿಂತಲೂ ಸಂವಿಧಾನವನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕು ಎಂದಾದರೆ, ಮೈತ್ರಿಕೂಟಗಳ ಸರ್ಕಾರ ಹೆಚ್ಚೆಚ್ಚು ಆಗುತ್ತಿರುವ ಈ ಹೊತ್ತಿನಲ್ಲಿ ರಾಜ್ಯಪಾಲರು ಹೇಗೆ ಕೆಲಸ ಮಾಡಬೇಕು ಎಂಬ ಬಗ್ಗೆ ಪರಿಶೀಲನೆ ನಡೆಸು
ವುದು ಸೂಕ್ತವಾದೀತು. ಇಂದಿನ ರಾಜಕೀಯ ಸ್ಥಿತಿಯಲ್ಲಿ ರಾಜ್ಯಪಾಲರ ಹುದ್ದೆ ಅಗತ್ಯ ಎಂದು ಕಂಡುಬಂದರೆ, ಅವರ ಆಯ್ಕೆ, ನೇಮಕ, ವರ್ಗಾವಣೆ ಮತ್ತು ಹುದ್ದೆಯಿಂದ ಕೆಳಗಿಳಿಸುವ ಪ್ರಕ್ರಿಯೆ ಪಾರದರ್ಶಕ ಆಗಬೇಕು. ಆಡಳಿತಾರೂಢ ಪಕ್ಷದ ಹಿಡಿತದಿಂದ ಅದನ್ನು ಹೊರ
ತರಬೇಕು, ಲೋಕಪಾಲ ವ್ಯವಸ್ಥೆಯಲ್ಲಿ ಇರುವ ಮಾದರಿಯನ್ನು ಅನುಸರಿಸಬಹುದು.

ಈಗ ನಡೆದಿರುವ ವಿದ್ಯಮಾನಗಳು ಬೇಸರ ತರಿಸುವಂತೆ ಇವೆ. ಈ ವಿದ್ಯಮಾನಗಳು ಅಮೆರಿಕದ ಅಧ್ಯಕ್ಷರಾಗಿದ್ದ ರೊನಾಲ್ಡ್‌ ರೇಗನ್ ಅವರ ಮಾತೊಂದನ್ನು ನೆನಪಿಸುತ್ತವೆ. ‘ರಾಜಕೀಯವು ಎರಡನೆಯ ಅತ್ಯಂತ ಹಳೆಯ ವೃತ್ತಿ ಎಂದು ಹೇಳಲಾಗುತ್ತದೆ. ಈ ವೃತ್ತಿಯು ಮೊದಲನೆಯ ಅತ್ಯಂತ ಹಳೆಯ ವೃತ್ತಿಯೊಂದಿಗೆ ಸಾಮ್ಯತೆ ಹೊಂದಿದೆ ಎಂಬುದನ್ನು ಕಂಡುಕೊಂಡಿದ್ದೇನೆ’ ಎಂದು ರೇಗನ್ ಹಿಂದೊಮ್ಮೆ ಚಟಾಕಿ ಹಾರಿಸಿದ್ದರು.

ಅಮೆರಿಕಕ್ಕೆ ಸ್ವಾತಂತ್ರ್ಯ ಬಂದು ಇನ್ನೂರಕ್ಕೂ ಹೆಚ್ಚು ವರ್ಷಗಳು ಸಂದಿವೆ, ಅಲ್ಲಿನ ಪ್ರಜಾತಂತ್ರ ವ್ಯವಸ್ಥೆ ಕೂಡ ಹಳೆಯದು. ಅಮೆರಿಕಕ್ಕೆ ಹೋಲಿಸಿದರೆ ನಮ್ಮದು ಎಳೆವಯಸ್ಸಿನ ಪ್ರಜಾತಂತ್ರ, ಈಗ ಆಗಿರುವುದು ನಾವು ಬೆಳೆಯುತ್ತಿರುವ ಪ್ರಕ್ರಿಯೆಯ ಭಾಗ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು