ಮಂಗಳವಾರ, ಮಾರ್ಚ್ 21, 2023
31 °C
ಹೆಣ್ಣುಮಕ್ಕಳ ವಿಚಾರದಲ್ಲಿ ಮಾಧ್ಯಮಗಳದು ಹಿಮ್ಮುಖ ಪ್ರಯಾಣ

ಗಂಡಾಳಿಕೆಯ ಬಾಯಿಗೆ ಹೆಣ್ಣೇ ಎಲೆಯಡಿಕೆ

ಎಂ.ಎಸ್.ಆಶಾದೇವಿ Updated:

ಅಕ್ಷರ ಗಾತ್ರ : | |

Prajavani

ನಾಲಗೆ ಕುಲವನ್ನ ಹೇಳುತ್ತದೆ ಎನ್ನುವುದು ಕೇವಲ ಶಿಷ್ಟಾಚಾರವನ್ನು ಕುರಿತ ನಂಬಿಕೆಯಲ್ಲ. ಅದು ನೈತಿಕ, ಸಾಮಾಜಿಕ ಮತ್ತು ರಾಜಕೀಯ ಪ್ರಶ್ನೆಯೂ ಹೌದು. ಎದುರಿಗಿರುವವರನ್ನು ನಾವು ಯಾವ ಕಣ್ಣಿನಿಂದ ನೋಡುತ್ತೇವೆ, ಯಾವ ಭಾಷೆಯಿಂದ ಮಾತನಾಡಿಸುತ್ತೇವೆ, ಯಾವ ಸ್ಥಾನದಲ್ಲಿಟ್ಟು ನೋಡುತ್ತೇವೆ ಎನ್ನುವುದನ್ನು ಸ್ಪಷ್ಟಪಡಿಸುತ್ತಾ ವರ್ತಮಾನದ, ಇತಿಹಾಸದ ಭಾಗವಾಗುತ್ತಲೇ ಭವಿಷ್ಯದ ನಡೆಯನ್ನೂ ಅದು ನಿರ್ದೇಶಿಸುತ್ತಿರುತ್ತದೆ.


ಆಶಾದೇವಿ

ಈ ಮಾತುಗಳನ್ನು ಹೆಣ್ಣನ್ನು ಕುರಿತ ಗಂಡಿನ ನಾಲಗೆ ಮತ್ತು ಗಂಡು ಕುಲದ ಬಗ್ಗೆ ಹೇಳುತ್ತಿದ್ದೇನೆ. ತೀರಾ ಹಿಂದಿನದಲ್ಲ, ಕೆಲವು ವರ್ಷಗಳ ಹಿಂದಿನ ಪ್ರಸಂಗಗಳನ್ನುನೋಡಿದರೆ ಸಾಕು, ಅವು ತಾವಾಗಿಯೇ ಇತಿಹಾಸದ ಜೊತೆ ಜೋಡಿಸಿಕೊಳ್ಳುತ್ತವೆ. ಹೆಣ್ಣಿನ ಮೇಲಿನ ಅತ್ಯಾಚಾರದ ಪ್ರಕರಣಗಳೇ ಇರಲಿ, ಯಾವುದೋ ಹಣಕಾಸಿನ ಅಥವಾ ರಾಜಕೀಯ ಅವ್ಯವಹಾರಗಳೇ ಇರಲಿ, ಗಂಡು– ಹೆಣ್ಣಿನ ಸಂಬಂಧದ ಸಂಗತಿಗಳೇ ಇರಲಿ, ಮಾಧ್ಯಮಗಳು ಅದರಲ್ಲೂ ಮುಖ್ಯವಾಗಿ ದೃಶ್ಯ ಮಾಧ್ಯಮಗಳು ಹೆಣ್ಣನ್ನು ಚಿತ್ರಿಸುವ ಬಗೆ ಸ್ತ್ರೀವಾದಿಗಳು, ಪ್ರಗತಿಪರರು ಇವರನ್ನೆಲ್ಲ ಬಿಡಿ, ಪಿತೃಸಂಸ್ಕೃತಿಗೂ ಅವಮಾನವಾಗುವಷ್ಟು ವಿಕೃತ.

ಒಂದು ಟಿ.ವಿ. ಚಾನೆಲ್ ಇನ್ನೊಂದರ ಮೇಲೆ ಪೈಪೋಟಿಗೆ ಬಿದ್ದಂತೆ ಹೆಣ್ಣುಮಕ್ಕಳನ್ನು ಅಸಹ್ಯಕರವಾದ ಪದಪುಂಜಗಳಲ್ಲಿ ಛಿದ್ರಗೊಳಿಸುತ್ತಲೇ ಹೋಗುತ್ತವೆ. ಹೇಳಲೇ ಅಸಹ್ಯವಾದರೂ ಒಂದು ಸಣ್ಣ ಉದಾಹರಣೆ, ಹೆಂಡತಿಯಲ್ಲದೆ ಇತರ ಹೆಣ್ಣು ಮಕ್ಕಳ ಜೊತೆ ಸಂಬಂಧ ಇರುವ ಗಂಡಿನ ಬಗ್ಗೆ ಬರೆಯುವಾಗ, ‘ಹಲವು ಹೆಂಡಿರ ಮುದ್ದಿನ ಗಂಡ’ ಎನ್ನುವ ವರ್ಣನೆ ಬಂದರೆ, ಅಂಥದ್ದೇ ಸಂದರ್ಭದಲ್ಲಿರುವ ಹೆಣ್ಣಿನ ಬಗ್ಗೆ ಬರೆಯುವಾಗ, ‘ಈ ಲಂಪಟೆಗೆ ಎಷ್ಟು ಜನವಾದರೂ ಸಾಲದು’ ಎನ್ನುವ ಅರ್ಥದ, ಅದು ಕಾಮಪಿಶಾಚಿ, ಮೋಹಿನಿ ಇನ್ನೂ ಎಂತೆಂತಹದೋ ಪದಗಳನ್ನು ಬಳಸಲಾಗುತ್ತದೆ.

ನಿರ್ಭಯಾ ಪ್ರಕರಣದಲ್ಲಿ ಮಾಧ್ಯಮಗಳು ಆಕೆಯ ಪರವಾಗಿದ್ದವು ಎನ್ನುವುದು ನಿಜ. ಆದರೆ, ಆಕೆಯ ವಿರುದ್ಧ ನೀಡಲಾದ ನಾಯಕಮಣಿಗಳ ಮೂರ್ಖ, ಅಮಾನವೀಯ ಹೇಳಿಕೆಗಳಿಗೆ ಅಷ್ಟೆಲ್ಲ ಪ್ರಚಾರ ಕೊಡುವ ಅಗತ್ಯವಿರಲಿಲ್ಲ. ಬದಲಿಗೆ, ಆ ಬಗೆಯ ಹೇಳಿಕೆಗಳನ್ನು ಬಳಸಿಕೊಂಡೇ ಹೆಣ್ಣಿನ ಪರವಾದ ಜನಾಂದೋಲನವನ್ನು ರೂಪಿಸಬೇಕಾದದ್ದು ಆ ಹೊತ್ತಿನ ತುರ್ತಾಗಿತ್ತು. ಅದನ್ನು ನಿಭಾಯಿಸಬೇಕಾದದ್ದು ಮಾಧ್ಯಮಗಳ ಆದ್ಯ ಕರ್ತವ್ಯವೂ ಆಗಿತ್ತು. ಇದು ಯಾವುದೂ ಆಗದೆ, ಹೆಣ್ಣಿನ ಪರವಾಗಿ ತಾತ್ಕಾಲಿಕವಾದ ಅನುಕಂಪದ ಅಲೆಯೊಂದು ಮಾತ್ರ ರೂಪುಗೊಂಡಿತು. ಇದು ಹೆಣ್ಣಿನ ಅಭದ್ರತೆಯನ್ನು ಇನ್ನೂ ಹೆಚ್ಚಿಸಿತು ಮತ್ತು ಹೆಣ್ಣನ್ನು ಲೈಂಗಿಕ ವಸ್ತು ವಿಶೇಷವಾಗಿ ಮಾತ್ರ ನೋಡಬಹುದಾದ ಮೃಗೀಯತೆಯನ್ನು ಬಲಪಡಿಸಿತು.

ಡಿ.ಕೆ. ರವಿ ಮತ್ತು ರೋಹಿಣಿ ಸಿಂಧೂರಿ ಅವರ ವಿಷಯದಲ್ಲಿಯೂ ಇದು ಮುಂದುವರಿಯಿತು. ಋಷಿಯೊಬ್ಬನ ತಪಸ್ಸನ್ನು ಹಾಳು ಮಾಡುತ್ತಿರುವ ಹೆಣ್ಣಿನಂತೆ ಆಕೆಯನ್ನು ಚಿತ್ರಿಸಿದ್ದಾಗಲೀ ಅವರಿಬ್ಬರ ನಡುವಿದ್ದ, ಅವರಿಬ್ಬರಿಗೆ ಮಾತ್ರ ಸಂಬಂಧಪಟ್ಟ ವಿಷಯವನ್ನು ಕನಿಷ್ಠ ಮನುಷ್ಯ ಘನತೆಯಲ್ಲಿ ಗೌರವಿಸುವ ಜವಾಬ್ದಾರಿಯನ್ನು ಮಾಧ್ಯಮಗಳು ತೋರಿಸಲಿಲ್ಲ.

‘ಮೀ ಟೂ’ ಪ್ರಕರಣವಾದರೂ ಹೀಗೆಯೇ ಗಂಡಾಳಿಕೆಯ ಬಾಯಿಗೆ ತುತ್ತಾಯಿತು. ಘನಮಹಿಮರೆಂದು ಹೆಸರಾದ ಕೆಲವರು ಮಾಡಿದ ಅನ್ಯಾಯಗಳು, ಶೋಷಣೆಗಳು ಬಂದಷ್ಟೇ ವೇಗದಲ್ಲಿ ಕಣ್ಮರೆಯಾದವು. ಸಿದ್ಧ ಪ್ರಸಿದ್ಧ ಹೆಣ್ಣು ಮಕ್ಕಳೂ ಸೇರಿ ಇದಕ್ಕೊಂದು ಗತಿ ಕಾಣಿಸಬಹುದಾದ ಸಾಧ್ಯತೆಯನ್ನು ಶಕ್ತವಾಗಿ ಮುಚ್ಚಿ ಹಾಕಲಾಯಿತು.

ಈಗ ನಡೆಯುತ್ತಿರುವ ಪ್ರಕರಣವಂತೂ ಇವೆಲ್ಲದರ ತುದಿ. ತಪ್ಪು ಮಾಡುವುದರಲ್ಲಿ ಗಂಡು– ಹೆಣ್ಣೆನ್ನುವ ಭೇದ ಮಾಡಬಾರದು ಎನ್ನುವಂತೆಯೇ ಆ ತಪ್ಪುಗಳನ್ನು ಚರ್ಚಿಸುವಲ್ಲಿಯೂ ನಿರೂಪಿಸುವಲ್ಲಿಯೂ ವ್ಯತ್ಯಾಸವನ್ನುಮಾಡಬಾರದು ಎನ್ನುವ ಕನಿಷ್ಠ ಜ್ಞಾನ ಈ ದೃಶ್ಯಮಾಧ್ಯಮಗಳಿಗಿಲ್ಲ. ಬಂಧಿಸಿರುವ ಇಬ್ಬರು ನಟಿಯರ ಬಗೆಗೆ ಇವರು ಬಳಸುತ್ತಿರುವುದು– ‘ನಶಾ ರಾಣಿ’, ‘ಮಾದಕ ನಟಿ’, ‘ನಶಾ ರಾಣಿಯ ನೌಟಂಕಿ’, ‘ಅಳುವ ಹೈಡ್ರಾಮಾ’, ‘ಮಾಯಾವಿ’, ‘ನಶೆ ಏರಿಸುತ್ತಿದ್ದವಳ ಇಳಿದ ನಶೆ’, ‘ಹೆಣ್ಣೋ ಹೆಮ್ಮಾರಿಯೋ’...

ಈ ಇಬ್ಬರೋ, ಇನ್ನೂ ಹಲವರು ನಟಿಯರಿದ್ದಾರೋ ಅವರೆಲ್ಲರೂ ತಪ್ಪಿತಸ್ಥರೇ ಎನ್ನುವುದಾದರೆ ಖಂಡಿತ ಅವರಿಗೆಲ್ಲ ಶಿಕ್ಷೆಯಾಗಲೇಬೇಕು. ಆದರೆ, ಈ ಇಬ್ಬರನ್ನು ಅಥವಾ ಹಲವರನ್ನು ಲೋಕನಾಶಕ್ಕಾಗೇ ಹುಟ್ಟಿರುವ ಪಾಪಿಗಳು ಎನ್ನುವಂತೆ ತೋರಿಸುತ್ತಾ, ಇವರನ್ನು ಮುಂದಿಟ್ಟುಕೊಂಡು ವ್ಯವಹಾರ ನಡೆಸುತ್ತಿರುವ ಅನೇಕರನ್ನು ನೇಪಥ್ಯದಲ್ಲಿಟ್ಟು ರಕ್ಷಿಸುವುದರ ಉದ್ದೇಶ ಏನು? ಈ ಹೆಣ್ಣು ಮಕ್ಕಳ ವಿವಿಧ ಭಂಗಿಗಳ ಚಿತ್ರಗಳನ್ನೇ ಮತ್ತೆ ಮತ್ತೆ ತೋರಿಸುವುದರ ಅವಶ್ಯಕತೆಯನ್ನು ಯಾರಾದರೂ ಸಮರ್ಥಿಸಿಕೊಳ್ಳಬಹುದೇ?

ಹೆಣ್ಣಿನ ಮೇಲೆ ಇಂತಹ ಪದಪ್ರಯೋಗಗಳು ಕೂಡ ಅತ್ಯಂತ ಹೀನವಾದ ಅತ್ಯಾಚಾರವೇ ಅಲ್ಲವೆ? ಕೊನೆಗೂ ಹೆಣ್ಣೆಂದರೆ ದೇಹ ಮಾತ್ರ ಎನ್ನುವ ಪಾಶವೀ ದೃಷ್ಟಿಕೋನದ ಭಂಡ ಸಮರ್ಥನೆಗಳಲ್ಲವೇ ಇವು? ಪುರುಷರಾದರೆ ಅವರ ಮೇಲೆ ಬಂದ ಎಂಥದ್ದೇ ಆರೋಪಗಳಾದರೂ ಅವುಗಳನ್ನು ನಿರೂಪಿಸುವ ಕ್ರಮವೇ ಯಾಕೆ ಬೇರೆ? ಲೋಕವೇ ಎದುರು ನಿಂತರೂ ಅವರು ಅದನ್ನೆಲ್ಲ ಎದುರಿಸಿ ನಿಲ್ಲಬಹುದಾದ ಪುರುಷ ಸಿಂಹಗಳು, ಕಲ್ಲು ಬಂಡೆಗಳು. ಇವರು ಮಾತ್ರ ವಿಷಪೂತನಿಯರು.

ಇಲ್ಲಿರುವುದು ಎರಡು ಪ್ರಶ್ನೆಗಳು. ಹೆಣ್ಣು ಮಕ್ಕಳು, ಯಾವುದೇ ಕಾರಣಕ್ಕಿರಲಿ ಸಾರ್ವಜನಿಕ ಚರ್ಚೆಯ ಪರಿಧಿಯೊಳಗೆ ಬಂದ ತಕ್ಷಣ, ಅವರನ್ನು, ಅವರ ವ್ಯಕ್ತಿತ್ವ ವನ್ನು (ಇಲ್ಲಿ ವ್ಯಕ್ತಿತ್ವ ಎಂದರೆ ಅವರ ಬುದ್ಧಿ, ಬೌದ್ಧಿಕ ನೆಲೆ, ಅವರ ರಾಜಕೀಯ, ಸಾಮಾಜಿಕ ನಿಲುವುಗಳನ್ನೆಲ್ಲ ಒಳಗೊಂಡದ್ದಲ್ಲ, ಕೇವಲ ಅವಳ ದೇಹ ಮಾತ್ರ) ಹೇಗೆ ರೋಚಕಗೊಳಿಸುವುದು ಎನ್ನುವುದರ ಕಡೆಗೆ ಮಾತ್ರ ಅವರ ಗಮನವೇ ಹೊರತು, ಆಕೆಯನ್ನು ಗೌರವಿಸುವುದಾಗಿರುವುದಿಲ್ಲ. ಎಂದರೆ, ಹೆಣ್ಣನ್ನು ಕುರಿತ ಈ ಚಿತ್ರವೇ ನಮ್ಮ ಬಹುತೇಕ ಮಾಧ್ಯಮದವರಲ್ಲಿ ರೂಪುಗೊಂಡಿಲ್ಲ. ಅವರಿಗೆ ಹೆಣ್ಣೆಂದರೆ, ಅವರ ಚಾನೆಲ್‌ಗೆ ಒಳ್ಳೆ ಟಿಆರ್‌ಪಿ ತಂದುಕೊಡಬಹುದಾದ ‘ಸುದ್ದಿ’ ಮಾತ್ರ. ರೋಚಕ
ಗೊಳಿಸುವುದು ಎಂದರೆ, ಅವಳು ಮತ್ತೆ ತಲೆಯೆತ್ತದಂತೆ ನಾಶಗೊಳಿಸುವುದು ಎಂದೇ ಅರ್ಥ. ಗಂಡಸರು ಮಾತ್ರ ಯಾವ ಪಾತಾಳದಿಂದಲೂ ಮತ್ತೆ ಹಿಮಾಲಯದ ಆರೋಹಣ ಮಾಡಬಹುದು, ಹೆಣ್ಣಿನ ಕತೆ ಮಾತ್ರ, ಅದೇ ಮಾಧ್ಯಮಗಳ ಭಾಷೆಯಲ್ಲೇ ಹೇಳುವುದಾದರೆ, ‘ಫಿನಿಷ್ಡ್’. ಇದು ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಎಲ್ಲ ಕಾಲಕ್ಕೂ ನಿಜವೇ.

ಎರಡನೆಯದು, ಈ ಎಲ್ಲವೂ ಹೆಣ್ಣಿನ ಹೋರಾಟಕ್ಕೆ, ಆ ಮೂಲಕ ಮಾನವೀಯವಾದ ಹೋರಾಟಕ್ಕೆ, ಮಾನವ ಘನತೆಯ ರಾಜಕೀಯ ಹೋರಾಟಕ್ಕೆ ಒದಗುವ ಹಿನ್ನಡೆ. ಸ್ವಾಮಿ, ಚಂದ್ರಯಾನ, ಮಂಗಳಯಾನಗಳಿರಲಿ ತುಸು ಮಾನವಯಾನದ ಕಡೆಗೆ ಗಮನ ಕೊಡಿ ಎಂದು ಅಸಹಾಯಕತೆಯಿಂದಲ್ಲ, ಹಕ್ಕೊತ್ತಾಯದಿಂದಲೇ ಮಹಿಳೆಯರು ಕೇಳುತ್ತಿರುವುದು. ಹೆಣ್ಣನ್ನು ಮಾಧ್ಯಮಗಳು ಎಲೆಯಡಿಕೆಯಂತೆ ಜಗಿದು ಬಾಯಿ ಕೆಂಪು ಮಾಡಿಕೊಳ್ಳುವುದನ್ನು ಇನ್ನಾದರೂ ಬಿಡಬೇಕು, ಅವರು ಬಿಡುವುದಿಲ್ಲ, ಬಿಡುವಂತೆ ಮಾಡಬೇಕು.

ನಾವು ಹೆಣ್ಣುಮಕ್ಕಳು ಕಲಿಯಲೇಬೇಕಾದ ಮೂಲ ಪಾಠವೂ ಇದೆ ಇಲ್ಲಿ. ಅಮಾಯಕರಂತೆ ನಟಿಸುವುದನ್ನು, ಸ್ವಾರ್ಥ–ದುರಾಸೆಗಾಗಿ ಮಾಡಬಾರದ ಕೆಲಸಗಳನ್ನು ಮಾಡಲೇಬಾರದು. ಅವರು ಒಡ್ಡುವ ಆಮಿಷಗಳಿಗೆ ಬಲಿಯಾಗಿ, ಅವರು ಉಂಡ ಎಲೆಯಂತೆ ಬಿಸಾಕುವಾಗ ಒರಲಿ ಯಾವ ಪ್ರಯೋಜನವೂ ಇಲ್ಲ. ಅವರು ಪಾರು ಮಾಡಿಯಾರು ಎಂದು ನಿರೀಕ್ಷಿಸಬಾರದು. ಏಕೆಂದರೆ, ಏನು ಮಾಡುತ್ತಿದ್ದೇವೆ ಎನ್ನುವುದನ್ನು ಅರಿಯದಷ್ಟು ಮುಗ್ಧರಾಗಿರುವುದು ಸಾಧ್ಯವಿಲ್ಲ. ಅನೇಕ ಬಾರಿ ಹೆಣ್ಣು ಮಕ್ಕಳಿಗೆ ತಮ್ಮ ಪಾತ್ರಗಳಲ್ಲ, ತಮ್ಮ ‘ದೇಹ’ಗಳು ಮಾತ್ರ ಪಾತ್ರಗಳಾಗಿರುತ್ತವೆ ಎನ್ನುವುದು ಗೊತ್ತಿದ್ದೂ ಅದನ್ನು ವೃತ್ತಿಯ ಹೆಸರಿನಲ್ಲಿ, ಆರ್ಥಿಕ ಸ್ವಾವಲಂಬನೆಯ ಹೆಸರಿನಲ್ಲಿ ಒಪ್ಪುತ್ತಾರೆ. ಇದು ಅಂತಿಮವಾಗಿ ತಮ್ಮ ಆತ್ಮಗೌರವದ ಮಾರಾಟ ಎನ್ನುವ ಸತ್ಯಕ್ಕೆ ಅವರು ಇನ್ನಾದರೂ ಮುಖಾಮುಖಿಯಾಗಬೇಕು. ಗಂಡು ಹೆಣ್ಣನ್ನು, ಹೆಣ್ಣು ಗಂಡನ್ನು ಗುರಾಣಿಯಾಗಿಸಿಕೊಳ್ಳುವ ಕೆಟ್ಟ ರಾಜಕೀಯ ನಿಲ್ಲಬೇಕಾದದ್ದು ಮೊದಲ ಹೆಜ್ಜೆ.

ಇದೊಂದು ಸುದೀರ್ಘ ಪ್ರಯಾಣ. ಈ ದಿಸೆಯಲ್ಲಿ ಎಲ್ಲರೂ ಆಲೋಚನೆ ಮಾಡುತ್ತಿದ್ದಾರೆ. ಆದರೆ, ಮಾಧ್ಯಮಗಳ ಈ ನಡೆ ಮಾತ್ರ ಬೇಜವಾಬ್ದಾರಿಯದ್ದು ಮಾತ್ರವಲ್ಲ ಹಿಮ್ಮುಖ ಪ್ರಯಾಣ. ಇದು ಅತ್ಯಂತ ಅಪಾಯಕಾರಿಯೂ ಹೌದು. ಈ ಪಿಡುಗನ್ನು ನಿವಾರಿಸಿಕೊಳ್ಳಬೇಕಾದದ್ದು ಅನಿವಾರ್ಯ ಮತ್ತು ಸಾಮೂಹಿಕ ಹೊಣೆಗಾರಿಕೆಯನ್ನು ಬೇಡುವಂಥದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು