ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜು ಮಾತಾದೊಡೆ ಕ್ಷಮೆಯುಂಟೇ? ರಘುನಾಥ ಚ.ಹ ಅವರ ಪಡಸಾಲೆ ಅಂಕಣ

ಶೋಷಿತ ಜನರ ಅವಮಾನಗಳ ಹಿಂದಿನ ಚಾರಿತ್ರಿಕ ಹೊರೆ ನೋಯದವರೇನು ಬಲ್ಲರು?
Published 21 ಆಗಸ್ಟ್ 2023, 19:45 IST
Last Updated 21 ಆಗಸ್ಟ್ 2023, 19:45 IST
ಅಕ್ಷರ ಗಾತ್ರ

ತಾನು ನಟಿಸುವ ಸಿನಿಮಾಗಳಿಂದ ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ ಎಂದು ನಟನೊಬ್ಬ ನಂಬಿದ್ದರೆ, ಅದರಿಂದ ಸಮಾಜಕ್ಕೆ ನಷ್ಟವೇನೂ ಇಲ್ಲ. ಆತನೊಬ್ಬ ನಟನಷ್ಟೇ, ಕಲಾವಿದನಲ್ಲ ಎಂದು ಸಮಾಧಾನಪಟ್ಟುಕೊಳ್ಳಬಹುದು. ಆದರೆ ನಟನೊಬ್ಬನ ಸಿನಿಮಾ, ಸಾಮಾಜಿಕ ಸೌಹಾರ್ದ ಕದಡುವಂತಿದ್ದರೆ ಅದು ಅಪಾಯಕಾರಿ. ಸಾರ್ವಜನಿಕ ಜೀವನದಲ್ಲಿ ಆತನ ನಡವಳಿಕೆಗಳು ಆಕ್ಷೇಪಕ್ಕೆ ಒಳಗಾಗುವಂತಿದ್ದರೆ ಅದು ಮತ್ತಷ್ಟು ಕಳವಳಕ್ಕೀಡು ಮಾಡುವಂತಹದ್ದು.

ದುರದೃಷ್ಟವಶಾತ್‌, ಇತ್ತೀಚಿನ ಕನ್ನಡ ಸಿನಿಮಾಗಳಲ್ಲಿ ಸಾಮಾಜಿಕ ಕಾಳಜಿ ಕನಿಷ್ಠ ಪ್ರಮಾಣದಲ್ಲಿದೆ ಹಾಗೂ ಆ ಸಿನಿಮಾಗಳಲ್ಲಿ ಅಭಿನಯಿಸುವ ತಾರಾ ವರ್ಚಸ್ಸಿನ ನಟರು ಸಾಮಾಜಿಕ ಜವಾಬ್ದಾರಿಯಿಂದ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ. ಈ ಅಂತರದ ರೂಪದಲ್ಲಿ ನೋಡಬಹುದಾದ ಹೊಸ ಉದಾಹರಣೆ, ಚಿತ್ರನಟ ಉಪೇಂದ್ರ ಗಾದೆ ಮಾತೊಂದನ್ನು ಬಳಸಿ ಜಾತಿನಿಂದನೆ ಪ್ರಕರಣ ಎದುರಿಸಬೇಕಾದ ಪರಿಸ್ಥಿತಿ ತಂದುಕೊಂಡಿರುವುದು. ಕಲಾವಿದನೊಬ್ಬನ ಸಾರ್ವಜನಿಕ ನಡವಳಿಕೆ ಹೇಗಿರಬಾರದು ಎನ್ನುವುದಕ್ಕೆ ಉದಾಹರಣೆಯ ರೂಪದಲ್ಲಿ ಈ ಪ್ರಕರಣ ಕರ್ನಾಟಕದ ಚರಿತ್ರೆಯಲ್ಲಿ ಉಳಿಯಲಿದೆ.

ಆಕ್ಷೇಪಾರ್ಹ ಗಾದೆ ಮಾತೊಂದನ್ನು ಬಳಸಿದ ಕಾರಣಕ್ಕೆ ಉಪೇಂದ್ರರಿಗೆ ಎದುರಾಗಿರುವ ಪ್ರತಿರೋಧಕ್ಕೂ ದಲಿತರ ಸ್ವಾಭಿಮಾನ ಗಾಸಿಗೊಂಡಿರುವುದಕ್ಕೂ ನೇರ ಸಂಬಂಧವಿದೆ. ಹಾಗೆಯೇ, ಉಪೇಂದ್ರ ಬಳಸಿರುವ ಮಾತಿಗೂ ಜಾತಿಪ್ರಜ್ಞೆಯ ವ್ಯಸನಕ್ಕೂ ಸಂಬಂಧವಿದೆ. ಮಾತಿನ ವರಸೆಯಲ್ಲಿ ಅಪ್ರಜ್ಞಾಪೂರ್ವಕವಾಗಿ ಆಕ್ಷೇಪಾರ್ಹ ಗಾದೆಮಾತು ಬಳಕೆಯಾಗಿದೆ ಎಂದು ಭಾವಿಸಬಹುದಾದರೂ, ಆ ಮಾತಿಗೆ ಪ್ರತಿಕ್ರಿಯೆಯ ರೂಪದಲ್ಲಿ ಎದುರಾದ ವಿರೋಧಕ್ಕೆ ಉಪೇಂದ್ರ ವ್ಯಕ್ತಪಡಿಸಿದ ಪ್ರತಿಕ್ರಿಯೆಯಲ್ಲಿ ಕಲಾವಿದನೊಬ್ಬನಿಗೆ ಇರಬೇಕಾದ ಹೊಣೆಗಾರಿಕೆ ಇರಲಿಲ್ಲ; ರಾಜಕಾರಣಿಗೆ ಇರಬೇಕಾದ ವಿವೇಕವೂ ಕಲೆಯಿಂದ ಕಲೆಗಾರನೊಬ್ಬ ರೂಢಿಸಿಕೊಂಡಿರಬೇಕಾದ ಅಂತಃಕರಣದ ಪಸೆಯೂ ಇರಲಿಲ್ಲ.

ತಮ್ಮ ಅಚಾತುರ್ಯದ ಮಾತಿಗೆ ಕ್ಷಮೆ ಕೋರಿದ ನಂತರವೂ ಪ್ರತಿರೋಧ ಮುಂದುವರಿದಾಗ ಉಪೇಂದ್ರ ಆಡಿದ ಮಾತುಗಳು, ನೋವುಂಡವರನ್ನು ಮತ್ತಷ್ಟು ಕೆರಳಿಸುವಂತಿದ್ದವು. ‘ಇಂದು ನನ್ನ ವಿರುದ್ಧ ಮಾತನಾಡುತ್ತಿರುವ ಹಲವರು ಅಂದು ಹುಟ್ಟೇ ಇರಲಿಲ್ಲ. 50 ವರ್ಷಗಳ ಹಿಂದೆ ನಾನು ಎಂತಹ ಪರಿಸರದಲ್ಲಿ ಬೆಳೆದೆ... ಆ ಬಾಲ್ಯದಲ್ಲಿ ನಾನು ಕಂಡ ಕ್ರೂರ ಬಡತನ, ನನ್ನ ಕಣ್ಣ ಮುಂದೆಯೇ ಬೆಂಕಿ ಹಚ್ಚಿಕೊಂಡು ಆದ ಆತ್ಮಹತ್ಯೆಗಳು, ಹಸಿವು, ಅಪಮಾನ, ತುಳಿತ... ಇದನ್ನು ಅನುಭವಿಸಿ ಬೆಳೆದ ನಾನು ಇಂದು ಒಂದು ವರ್ಗದ ಜನರ ಬಗ್ಗೆ ಅವಮಾನಕಾರಿಯಾಗಿ ಮಾತನಾಡುತ್ತೇನೆಯೇ? ನನಗೆ ಹುಚ್ಚೇ? ಅದಕ್ಕೆ ಕಾರಣವಾದರೂ ಏನು? ಅದರಿಂದ ನನಗೆ ಸಿಗುವ ಲಾಭವಾದರೂ ಏನು? ಇಷ್ಟಕ್ಕೂ ಕ್ಷಮೆಯನ್ನು ಸ್ವೀಕರಿಸುವ ದೊಡ್ಡತನವೂ ಇಲ್ಲವೇ? ಯಾಕೆ ಇಷ್ಟೊಂದು ದ್ವೇಷ’ ಎನ್ನುವ ಮಾತುಗಳಲ್ಲಿ ಪ್ರಾಂಜಲ ಪಶ್ಚಾತ್ತಾಪಕ್ಕಿಂತಲೂ, ತನ್ನ ಬಾಯಿತುರಿಕೆಗೆ ವಿರೋಧ ವ್ಯಕ್ತಪಡಿಸಿದವರನ್ನು ಸಣ್ಣವರೆಂದು ಜರಿಯುವ ಧ್ವನಿಯೂ ಇದೆ.

ಆರ್ಥಿಕ ಬಡತನದಿಂದ ಎದುರಿಸಬೇಕಾದ ಬಡತನ ಹಾಗೂ ಹಸಿವಿಗೂ ಜಾತಿಯ ಕಾರಣದಿಂದ ಅನುಭವಿಸುವ ನೋವಿಗೂ ಇರುವ ವ್ಯತ್ಯಾಸವನ್ನೇ ತಿಳಿಯದ ವ್ಯಕ್ತಿಯಷ್ಟೇ ಆಡಬಹುದಾದ ಮಾತುಗಳಿವು. ಪರದೆಯಾಚೆಗಿನ ನಟನೆಯನ್ನು ಕಲೆಯೆಂದು ಭಾವಿಸಲಾಗದು. ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳಿಗೆ ನ್ಯಾಯಾಲಯ ತಡೆ ನೀಡಿದಾಗಿನ ಆತ್ಮಪ್ರತ್ಯಯ ರೂಪದ ಅವರ ಪ್ರತಿಕ್ರಿಯೆಯಲ್ಲಿ ಅಹಂಭಾವವೂ ಇದೆ. 

ಆಡಿದ ಮಾತಿನಿಂದ ಯಾರಿಗಾದರೂ ನೋವುಂಟಾದಾಗ, ಕ್ಷಮೆ ಕೋರುವುದು ಸರಿಯಾದ ನಡವಳಿಕೆ. ಆದರೆ, ಆ ಕ್ಷಮೆಯನ್ನು ನೊಂದವರು ಒಪ್ಪಿಕೊಳ್ಳಬೇಕೆಂದೇನೂ ಇಲ್ಲ. ಕೆಲವು ಮಾತುಗಳು ತರುವ ನೋವು ಕ್ಷಮೆಯಿಂದ ಶಮನಗೊಳ್ಳುವಂತಹದ್ದಲ್ಲ. ಜಾತಿಯ ಮೇಲುಕೀಳನ್ನು ಯಾವುದೋ ರೂಪದಲ್ಲಿ ಎತ್ತಿ ಆಡಿ ನೋವುಂಟು ಮಾಡುವ ನಡವಳಿಕೆ ಎಲ್ಲ ಕಾಲದಲ್ಲೂ ಇರುವಂತಹದ್ದೇ. ಇಂಥ ಮಾತನ್ನು ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ವರ್ತಮಾನದಲ್ಲಿ ಆಡಿದಾಗ, ಅದಕ್ಕೆ ಎದುರಾಗುವ ಪ್ರತಿಕ್ರಿಯೆ ಈ ಹೊತ್ತಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಶತಮಾನಗಳ ನೋವಿನ ಕುದಿ ಸ್ಫೋಟಿಸಿದಾಗ, ಅದಕ್ಕೆ ಪ್ರಚೋದನೆ ನೀಡಿದವರು ತಮ್ಮ ಕ್ಷಮೆಯನ್ನು ನೊಂದವರು ಒಪ್ಪಿಕೊಳ್ಳಲೇಬೇಕೆಂದು ಅಪೇಕ್ಷಿಸಲಾಗದು. ‘ನೊಂದವರ ನೋವ ನೋಯದವರೇನು ಬಲ್ಲರಯ್ಯಾ’ ಎನ್ನುವ ಅಕ್ಕನ ಮಾತು ಅರ್ಥವಾಗುವುದೂ ನೊಂದವರಿಗಷ್ಟೇ. ಶೋಷಿತ ಸಮುದಾಯಗಳ ಅವಮಾನಗಳ ಹಿಂದಿನ ಚಾರಿತ್ರಿಕ ಹೊರೆ, ಉಳಿದ ಸಮುದಾಯಗಳು ಅನುಭವಿಸಬಹುದಾದ ಅವಮಾನಗಳಿಗೆ ಇರುವುದಿಲ್ಲ. 

ಜಾತಿನಿಂದನೆ ಪ್ರಕರಣ ದಾಖಲಿಸಿದವರು ತಮ್ಮನ್ನು ಕ್ಷಮಿಸಬೇಕೆಂದು ಉಪೇಂದ್ರ ನಿರೀಕ್ಷಿಸಿದ್ದು ಮಾನವಸಹಜ ನಡವಳಿಕೆ. ಕ್ಷಮೆ ದೊರಕದೇ ಹೋದಾಗ ಪ್ರತಿಕ್ರಿಯಿಸಿದ ರೀತಿ ಅವರ ಸ್ಥಾನಮಾನಕ್ಕೆ ತಕ್ಕುದಾಗಿರಲಿಲ್ಲ. ನೊಂದವರನ್ನು ಭೇಟಿಯಾಗಿ ತಮ್ಮ ಕ್ಷಮೆಯ ಪ್ರಾಮಾಣಿಕತೆಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಅವರು ಮಾಡಬಹುದಿತ್ತು. ಇಲ್ಲವೇ ಸಂವಿಧಾನಾತ್ಮಕ ಮಾರ್ಗದ ಮೂಲಕವೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಬಹುದಿತ್ತು. ಆಡಿದ ಮಾತಿಗೆ ಕೆಲವೊಮ್ಮೆಯಾದರೂ ‘ಬೆಲೆ’ಯಿರುತ್ತದೆ ಎನ್ನುವುದನ್ನು ಯಾರೂ ಮರೆಯಬಾರದು. ‘ಫಿಲ್ಟರ್‌ ಇಲ್ಲದ ಸಿನಿಮಾ’ಗಳ ನಟ–ನಿರ್ದೇಶಕನೆಂದೇ ಪ್ರಸಿದ್ಧನಾದ ವ್ಯಕ್ತಿ, ಆ ಫಿಲ್ಟರ್‌ ನಿಜಜೀವನದಲ್ಲಿ ಅಗತ್ಯ ಎನ್ನುವುದನ್ನು ತಿಳಿಯಬೇಕಾದ ಒತ್ತಡವನ್ನು ಕಾಲವೇ ಸೃಷ್ಟಿಸಿದೆ.

ಬರಹಗಾರ, ಕಲಾವಿದ ಮತ್ತು ರಾಜಕಾರಣಿ ತನ್ನ ಜಾತಿಯನ್ನು ಪ್ರದರ್ಶನದ ವಸ್ತುವನ್ನಾಗಿಸಿಕೊಳ್ಳುವುದು ಅಸಹ್ಯಕರ. ತನ್ನ ಜಾತಿಯ ರಾಜಕಾರಣಿಗಳ ಪರ ಚುನಾವಣೆಗಳಲ್ಲಿ ಕೆಲಸ ಮಾಡುವುದು, ಅವರ ಪದತಲಗಳಿಗೆ ಎರಗುವುದು, ಧರ್ಮದ ಸಂರಕ್ಷಕರಂತೆ ವರ್ತಿಸುವುದು ಅವರು ಗುರುತಿಸಿಕೊಂಡ ಕಲೆ, ಸಂಸ್ಕೃತಿ–ಸಾಹಿತ್ಯ, ರಾಜಕಾರಣಕ್ಕೆ ಎಸಗುವ ಅವಮಾನ. ಜಾತಿಯ ಮೇಲರಿಮೆಯನ್ನು ರಾಜಕಾರಣಿಗಳು ಹಾಗೂ ವಿವಿಧ ಕ್ಷೇತ್ರಗಳ ಪ್ರಸಿದ್ಧರು ಎಗ್ಗಿಲ್ಲದೆ ಪ್ರದರ್ಶಿಸುತ್ತಿರುವ ದಿನಗಳಿವು.

ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಕಸ್ತೂರಿ ರಂಗನ್‌ ವರದಿ ಜಾರಿಗೊಳಿಸುವುದನ್ನು ವಿರೋಧಿಸಿ ನಡೆದ ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ– ‘... ಆ ಭಾಗದವರು ಸುಟ್ಟು ಕರಕಲಾಗಿರುತ್ತಾರೆ. ಖರ್ಗೆ ಅವರನ್ನು ನೋಡಿದರೆ ಅಲ್ಲಿನವರ ಸ್ಥಿತಿ ಗೊತ್ತಾಗುತ್ತದೆ’ ಎಂದು ಹಗುರಾಗಿ ಮಾತನಾಡಿದ್ದರು. ವ್ಯಕ್ತಿಗತ ಟೀಕೆಯನ್ನು ದಾಟಿ, ಒಂದು ಪ್ರದೇಶ ಹಾಗೂ ಸಮುದಾಯದ ಕುರಿತ ಲೇವಡಿ ಅವರ ಮಾತುಗಳಲ್ಲಿತ್ತು. ಇಂಥ ಮಾತುಗಳನ್ನಾಡಿದ ನಂತರ, ‘ನೋವಾಗಿದ್ದರೆ ಕ್ಷಮಿಸಿ’ ಎಂದರೆ ಎಲ್ಲವೂ ಸರಿಹೋದೀತೆ? ನೋವು ಮಾಡಿದವರು ಕ್ಷಮೆ ಕೋರಿ ಮತ್ತೆ ಬಾಯಿಚಪಲಕ್ಕೆ ಹೊಸ ಕವಳ ಹುಡುಕುವುದು, ನೋವುಂಡವರು ವಿಷಕಂಠರಾಗಿ ನಗುವಿನ ಮುಖವಾಡ ತೊಡುವುದನ್ನೇ ಈ ನೆಲದ ಉದಾತ್ತ ಸಂಸ್ಕೃತಿಯೆಂದು ಕೆಲವರು ಭಾವಿಸಿರುವಂತಿದೆ.

ಕನಿಷ್ಠ ಲಜ್ಜೆಯನ್ನು ತೊರೆದಾಗಷ್ಟೇ‌ ಕೋಮುದ್ವೇಷವನ್ನೂ ಮನುಷ್ಯದ್ವೇಷವನ್ನೂ ತುಂಬಿಕೊಂಡಿರುವವರ ಮಾತಿನ ನಂಜಿನ ಝಳ ಹೊರಹೊಮ್ಮುವುದು. ಬಹುತೇಕ ಸಂದರ್ಭಗಳಲ್ಲಿ ಕೊಳಕು ಮಾತುಗಳನ್ನು, ಆಡುವವರ ಅಜ್ಞಾನ ಅಥವಾ ಅಹಂಕಾರದ ರೂಪದಲ್ಲಿ ಗುರುತಿಸುತ್ತೇವೆ. ಆದರೆ, ಬಹುತೇಕ ಸಂದರ್ಭಗಳಲ್ಲಿ ಇಂಥ ಮಾತುಗಳ ಹಿಂದಿರುವುದು ಅಮಾನುಷ ಮನಃಸ್ಥಿತಿಯ ಕ್ರೌರ್ಯ ಹಾಗೂ ಅಸಹನೀಯ ಮಾನಸಿಕ ಭ್ರಷ್ಟತೆ. ಅನ್ನ ತಿನ್ನುವ ಬಾಯಿಯಲ್ಲಿ ಬರಬಾರದ ಮಾತುಗಳವು. ಹೆಣ್ಣಿನ‌ ಬಗ್ಗೆಯೂ ಬಾಯಿಯನ್ನು ಮೋರಿಯಾಗಿಸಿಕೊಳ್ಳುವವರಿದ್ದಾರೆ.

ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲಾಗಿಸಿ ಮೆರವಣಿಗೆ ಮಾಡಿ ದೌರ್ಜನ್ಯವೆಸಗಿದ ಗುಂಪನ್ನು ನೋಡಿಯೂ, ಮನುಷ್ಯ ಅಷ್ಟು ಕೀಳುಮಟ್ಟಕ್ಕೆ ಇಳಿಯಬಹುದೇ ಎಂದು ಮನಸ್ಸು ವಿಷಣ್ಣಗೊಳ್ಳುವ ಬದಲು, ಆ ಪೈಶಾಚಿಕ ಕೃತ್ಯಕ್ಕೆ ಕಾರಣಗಳನ್ನು ಹುಡುಕುವವರಿಗೆ ಏನನ್ನಬೇಕು? ಅಂಥವರಿಗೂ ಲಂಪಟ ರಕ್ಕಸರಿಗೂ ಏನು ವ್ಯತ್ಯಾಸ? ನಮ್ಮ ವ್ಯವಸ್ಥೆ ತಾಯಿಕರುಳು ಕಳೆದುಕೊಂಡು ಬಹುಕಾಲವಾದಂತಿದೆ. ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಅಳಲು ತೋಡಿಕೊಂಡು, ನ್ಯಾಯವನ್ನು ಕೇಳಿ ಮಹಿಳಾ ಕುಸ್ತಿಪಟುಗಳು ಧರಣಿ ಕೂತರೆ, ಅವರ ಬಳಿಗೆ ಬಂದು ಸಂಕಟಕ್ಕೆ ಕಿವಿಯಾಗುವ ನಾಯಕನಿಲ್ಲ. ಮಣಿಪುರದ ಹೆಣ್ಣುಮಕ್ಕಳ ಮಾನ ಸೂರೆಹೋದರೆ, ಜನಸಾಮಾನ್ಯರ ಜೀವ ಅಗ್ಗವಾದರೆ, ಅವರ ಬಳಿ ಧಾವಿಸಿ ಸಾಂತ್ವನ ಹೇಳಲು ಆಡಳಿತಗಾರರಿಗೆ ಬಿಡುವಿಲ್ಲ. ಈ ಘನಘೋರಗಳ ಎದುರು ನಟನೊಬ್ಬನ ಜಾತಿಪ್ರಜ್ಞೆಯ ಮಾತುಗಳು ಯಾವ ಲೆಕ್ಕ?

ಚರ್ಮದ ಬಣ್ಣ ಯಾವುದಾದರೂ ಪರವಾಗಿಲ್ಲ, ಹೃದಯ ಕಾರ್ಕೋಟಕವಾಗಬಾರದು. ಹೊಲಸು ಊರಲ್ಲಿದ್ದರೆ ಬಳಿಯಬಹುದು, ತಲೆಯಲ್ಲಿ ತುಂಬಿಕೊಂಡಿದ್ದರೆ ಹೇಗೆ ಬಳಿಯುವುದು? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT