ಭಾನುವಾರ, ಜನವರಿ 19, 2020
28 °C
ಜನಪ್ರಿಯತೆ–ಜನಪರತೆ: ಕಲಬುರ್ಗಿ ಸಮ್ಮೇಳನದ ಆಯ್ಕೆ ಯಾವುದು?

ಕನ್ನಡ ವಿವೇಕಕ್ಕೆ ಸಮ್ಮೇಳನಗಳ ಸಾಣೆ

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

Kannada

ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ, ಸುಪ್ರೀಂ ಕೋರ್ಟ್‌ನ ಇತ್ತೀಚಿನ ಮಹತ್ವದ ತೀರ್ಪುಗಳು, ಧರ್ಮಾಧಾರಿತ ರಾಜಕಾರಣ, ಶಾಸಕಾಂಗ ಸಭೆಗಳಲ್ಲಿ ಬಹುಮತದ ಸೊಕ್ಕು ತಂದೊಡ್ಡುವ ಅಪಾಯಗಳು, ಸರಕುಗಳ ರೂಪದ ಪ್ರಜಾಪ್ರತಿನಿಧಿಗಳು- ವಿರೋಧಾಭಾಸದಂತೆಯೂ ಪರಸ್ಪರ ಪೂರಕ ಎನಿಸುವಂತೆಯೂ ಕಾಣಿಸುವ ಈ ಘಟನಾವಳಿಗಳು ಭಾರತದ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಬೇರು ಸಡಿಲಿಸುತ್ತಿವೆಯೇ ಎನ್ನುವ ಚರ್ಚೆ– ಆತಂಕಕ್ಕೆ ಕಾರಣವಾಗಿವೆ. ಇಂಥ ಆತಂಕಕ್ಕೆ ಸಾಹಿತ್ಯಕ್ಷೇತ್ರ ಸ್ಪಂದಿಸುವುದು ಹೇಗೆ? ಕಲಬುರ್ಗಿಯಲ್ಲಿ ನಿಯೋಜನೆಗೊಂಡಿರುವ 85ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ನಮ್ಮ ಸಮ್ಮೇಳನ ಪರಂಪರೆಯು ಕನ್ನಡ ವಿವೇಕವನ್ನು ಒಳಗೊಂಡಿರುವ ಬಗೆ ಯಾವುದೆನ್ನುವುದನ್ನು ಗಮನಿಸಬಹುದು.

ಬೊಂಬಾಯಿಯಲ್ಲಿ ನಡೆದ (1935ರಲ್ಲಿ) 21ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ, ಎಸ್.ಎನ್. ಸುಬ್ಬರಾಯರು, ‘ಪ್ರಜಾಮತವೇ ರಾಜ್ಯ, ರಾಷ್ಟ್ರಗಳ ಬುನಾದಿ; ಅದೇ ಅದರ ಬೆಂಬಲವೂ. ಅದು ತನ್ನ ಗುಣದಂತೆ ರಾಜ್ಯಗಳನ್ನು ಬೆಳೆಸಲೂ ಬಲ್ಲದು, ಅಳಿಸಲೂ ಬಲ್ಲದು. ನೈಜವು ಹೀಗಿರುವಾಗ ಮತವನ್ನು ಕೊಡುವವರ ವಿಚಾರಗಳು ಶುದ್ಧವೇ ಆಗಿರಬೇಕಲ್ಲವೆ? ಅವುಗಳಲ್ಲಿ ಸಂಕುಚಿತ ದೇಶಾಭಿಮಾನ, ತಿರುಳಿಲ್ಲದ ವರ್ಣಾಭಿಮಾನ, ಅರ್ಥವಿಲ್ಲದ ಕುಲಾಭಿಮಾನ ಮುಂತಾದ ಅಂಧಶ್ರದ್ಧಾ ಪರಂಪರೆ ಸೇರಿಕೊಂಡುಬಿಟ್ಟರೆ, ಆ ರಾಜ್ಯದ ಗತಿಯೇನು? ಅದಿಷ್ಟೇ; ಹೀನ ವೇಷಾವೇಶಗಳನ್ನು ಪೂಜಿಸುವ ಹಿಟ್ಲರ್, ಮುಸೊಲಿನಿಗಳು ಮಾಡಿಟ್ಟಿದ್ದೇ!’ ಎಂದಿದ್ದರು. ಇದನ್ನು ಇವತ್ತಿನ ರಾಜಕಾರಣದ ಸಂದರ್ಭದಲ್ಲಿ ಓದಿಕೊಂಡರೆ, ಸುಬ್ಬರಾಯರಿಗೆ ದಿವ್ಯದೃಷ್ಟಿ ಇತ್ತೆನ್ನಿಸುತ್ತದೆ.

‘ಸಾಹಿತ್ಯವು ಸತ್ಯ ಸೂರ್ಯೋಪಾಸನೆಯನ್ನೇ ಮಾಡಬೇಕು. ಆದರೆ ಅದು ಅಷ್ಟು ಸುಲಭವಲ್ಲ ಎಂಬುದನ್ನೂ ವಿಶದಪಡಿಸಬೇಕಾಗಿದೆ. ನಮ್ಮ ಸಾಮಾಜಿಕ ರಾಜಕೀಯ ಬಾಳುವೆಯೇ ಅಸತ್ಯ ಪ್ರತಿಷ್ಠಿತವಾಗಿದೆ. ಅದಕ್ಕೆ ಧರ್ಮಶಾಸ್ತ್ರದ, ಕಾಯ್ದೆ ಕಾನೂನಿನ ನ್ಯಾಯದ ಮುದ್ರೆ ಬಿದ್ದಿದೆ. ಸತ್ಯದ ಪ್ರಶ್ನೆ ನ್ಯಾಯಕ್ಕೆ ಗೌಣವೆನ್ನಿಸು
ತ್ತದೆ. ಮಡಿವಂತರಿಗೆ ಸತ್ಯವು ಭಯಾನಕವಾಗಿ ಕಾಣುತ್ತಿದೆ. ಸಾಹಿತ್ಯವು ಇದೆಲ್ಲವನ್ನೂ ಧ್ವನಿಯಿಂದ, ವ್ಯಂಗ್ಯದಿಂದ ಹೇಳುತ್ತಲೇ ಬಂದಿದೆ; ಕಾಂತಾ ಸಂಮಿತಿಯಾದುದು ಹೆಚ್ಚೇನು ಮಾಡೀತು?’- ಶಿವಮೊಗ್ಗ
ದಲ್ಲಿ (1943ರಲ್ಲಿ) ನಡೆದ 27ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ದ.ರಾ. ಬೇಂದ್ರೆ ತಮ್ಮ ಅಧ್ಯಕ್ಷ ಭಾಷಣದಲ್ಲಿ ಆಡಿದ ಈ ಮಾತುಗಳನ್ನು ಕವಿಯ ಹೆಸರು ತೆಗೆದುನೋಡಿದರೆ, ಪ್ರಸಕ್ತ ಸಂದರ್ಭಕ್ಕೆ ಸಮಕಾಲೀನ ಲೇಖಕನೊಬ್ಬನ ಪ್ರತಿಕ್ರಿಯೆಯಂತೆ ಕಾಣಿಸುತ್ತದೆ.

ದೇಶದ್ರೋಹದ ಪರಿಕಲ್ಪನೆ ಬದಲಾಗಿ, ಅಪ್ರಿಯ ಸತ್ಯ ಹೇಳುವವರಿಗೆಲ್ಲ ದೇಶದ್ರೋಹದ ಹಣೆಪಟ್ಟಿ ಕಟ್ಟುತ್ತಿರುವ ದಿನಗಳಿವು. ಇಂಥ ಅಭ್ಯಾಸ ‘ಕರ್ನಾಟಕ ಏಕೀಕರಣ ಚಳವಳಿ’ ಸಂದರ್ಭದಲ್ಲೂ ಚಾಲ್ತಿಯಲ್ಲಿತ್ತು ಎನ್ನುವುದಕ್ಕೆ ಉದಾಹರಣೆಯಾಗಿ ಶಿವರಾಮ ಕಾರಂತರ ಮಾತುಗಳನ್ನು ನೋಡಬಹುದು. ಮೈಸೂರಿನಲ್ಲಿ ನಡೆದ (1954ರಲ್ಲಿ) 37ನೇ ಸಮ್ಮೇಳನದಲ್ಲಿ– ‘ಅದು ಭಾರತಕ್ಕೆಸಗುವ ದ್ರೋಹ ಎನ್ನುವುದಾದರೆ, ಅಂಥ ‘ದ್ರೋಹ’ ಪವಿತ್ರವಸ್ತುವೆಂದು ತಿಳಿಯುತ್ತೇನೆ’ ಎನ್ನುವ ಮೂಲಕ ಏಕೀಕರಣ ಪ್ರಯತ್ನಗಳನ್ನು ದೇಶದ್ರೋಹ ಎಂದವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಷ್ಟು ಮಾತ್ರವಲ್ಲ- ನಮ್ಮ ರಾಜಕಾರಣಿಗಳು ಗಳಿಗೆಗೊಂದು ತೆರನಾಗಿ ಮಾತನಾಡುತ್ತಿದ್ದಾರೆ, ಗಾಳಿಗೆ ತಕ್ಕಂತೆ ಹಾಯಿ ತೂರಿಸುತ್ತಿದ್ದಾರೆ... ಏಕೀಕರಣದ ವಿಚಾರ ಬಂದಾಗಲೆಲ್ಲ ‘ಆಡಳಿತೆಯ ಸೌಕರ್ಯದ ಮಾತು ಹೇಳುತ್ತಾರೆ. ‘ಹಣಕಾಸಿನ ಭಯ’ ತೋರಿಸುತ್ತಾರೆ; ಜಾತಿ ಕೋಮುಗಳ ಭೂತ ದೆವ್ವಗಳನ್ನು ಎತ್ತಿಹಿಡಿಯುತ್ತಾರೆ’ ಎಂದು ಹೇಳಿ
ದ್ದರು. ಆರೂವರೆ ದಶಕಗಳ ನಂತರವೂ ಕಾರಂತರ ಮಾತುಗಳು ಪ್ರಸ್ತುತವಾಗಿರುವುದಕ್ಕಾಗಿ ನಾವು ವಿಷಾದಿಸ
ಬೇಕೋ ರಾಜಕಾರಣಿಗಳಿಗೆ ಕೃತಜ್ಞರಾಗಿರಬೇಕೋ?

ಕುವೆಂಪು ತಮ್ಮ ಅಧ್ಯಕ್ಷ ಭಾಷಣದಲ್ಲಿ (39ನೇ ಸಮ್ಮೇಳನ, 1957, ಧಾರವಾಡ) ಸಮನ್ವಯ- ಸಮರಸದ ಅಗತ್ಯವನ್ನು ಪ್ರತಿಪಾದಿಸಿರುವುದು ಹೀಗೆ: ‘ಭಾರತವನ್ನು ನಮ್ಮ ರಾಜ್ಯಾಂಗವು ಸಮನ್ವಯ ರಾಷ್ಟ್ರವೆಂದು ಘೋಷಿಸಿದೆ. ಸೆಕ್ಯುಲರ್ ಎಂದರೆ ಧರ್ಮರಹಿತ, ಮತರಹಿತ, ಚಾರ್ವಾಕ ಅಥವಾ ನಾಸ್ತಿಕ ಎಂದೇನೂ ಅರ್ಥವಲ್ಲ. ಇಲ್ಲಿ ಎಲ್ಲ ಧರ್ಮಗಳೂ ಎಲ್ಲ ದೃಷ್ಟಿಗಳೂ ಎಲ್ಲ ಆಚಾರ ಆರಾಧನೆಗಳೂ ಪರಸ್ಪರ ಗೌರವದಿಂದ, ವಿಶ್ವಾಸದಿಂದ, ದಾರಿಗಳು ಬೇರೆ ಬೇರೆಯಾದರೂ ಸರ್ವರಿಗೂ ಏಕೈಕ ಗುರಿಯಾಗಿರುವ ಭಗವತ್‌ತತ್ವದ ಕಡೆಗೆ ಸಾಗಬಹುದು. ರಾಮಕೃಷ್ಣ ಪರಮಹಂಸರಿಂದ ಪುನಃ ಪ್ರಣೀತವಾಗಿ, ಗಾಂಧಿ, ಶ್ರೀ ಅರವಿಂದರೇ ಮೊದಲಾದವರಿಂದ ಭಾವಪುಷ್ಟವೂ ಬುದ್ಧಿಪೋಷಿತವೂ ಆಗಿ ಆಧುನಿಕ ವೈಜ್ಞಾನಿಕ ದೃಷ್ಟಿಗೂ ಅವಿರುದ್ಧವಾಗಿ, ಅನ್ಯದೇಶ ಅನ್ಯಮತಗಳ ಮೇಧಾವಿಗಳಿಂದಲೂ ಸ್ವೀಕೃತವಾಗಿರುವ ಈ ಸಮನ್ವಯ ದೃಷ್ಟಿ, ನಮ್ಮ ಜನತೆಯ ನಿತ್ಯಜೀವನದ ಸಾಧಾರಣ ತತ್ವವಾಗುವಂತೆ ಲೇಖಕರೆಲ್ಲ ಶ್ರಮಿಸಬೇಕಾಗಿದೆ’.

ಇದರ ಮುಂದುವರಿದ ಭಾಗವಾಗಿ ಕುವೆಂಪು ಅವರು ಹೇಳಿದ ಮಾತುಗಳು, ‘ನಮ್ಮ ರಾಜ್ಯಾಂಗ ಎಂತಹ ವಿಶಾಲ ಹೃದಯದಿಂದ ಏನೇ ಕಾನೂನುಗಳನ್ನು ಮಾಡಿದ್ದರೂ ಜನತೆಯ ಬುದ್ಧಿ ಆ ತತ್ವಗಳನ್ನು ಒಪ್ಪಿಕೊಳ್ಳದಿದ್ದರೆ, ಜನತೆಯ ಹೃದಯ ಪರಿವರ್ತಿತವಾಗಿ ಆ ಭಾವಗಳನ್ನು ಒಲಿದು ಒಪ್ಪಿಕೊಳ್ಳದಿದ್ದರೆ ನಾವು ಹೀಗೆಯೇ ಮುಂದುವರಿಯಬೇಕಾಗುತ್ತದೆ. ನಮ್ಮ ರಾಜಕೀಯ ಜೀವನ, ಪ್ರಜಾಪ್ರಭುತ್ವ, ಮಹಾಚುನಾವಣೆಗಳು ನಮ್ಮನ್ನು ಹೇಗಾದರೂ ಸುಧಾರಿಸುತ್ತವೆ ಎಂಬ ನಂಬುಗೆಯೂ ನಡುಗು ವಂತಾಗುತ್ತದೆ. ಐದು ವರ್ಷಕ್ಕೊಮ್ಮೆ ನಡೆಯುವ ಹಾಗೂ ಜನಹೃದಯಸಾಗರವನ್ನು ಕಡೆಯುವ ಮಹಾಚುನಾವಣೆ ನಮ್ಮಲ್ಲಿ ಪ್ರಜಾಪ್ರಭುತ್ವದ ತತ್ವವನ್ನು ಬಿತ್ತಿ, ಸಮನ್ವಯ
ದೃಷ್ಟಿಯನ್ನು ವಿಸ್ತರಿಸುವುದಕ್ಕೆ ಬದಲಾಗಿ, ನಾಲ್ಕು ವರ್ಷದ ಅವಧಿಯಲ್ಲಿ ಕೊಂಚ ಸಮಾಧಾನ ಹೊಂದಿ ತಣ್ಣಗಾಗಿ ಕಡಲ ತಳಕ್ಕೆ ಇಳಿದು ಕುಳಿದ ಕ್ರೋಧ, ಅಸೂಯೆ, ಸ್ಪರ್ಧೆ, ವೈರ, ಜಾತಿಮಾತ್ಸರ್ಯ, ದ್ವೇಷ ಇತ್ಯಾದಿ ಭಾವೋನ್ಮಾದ ಬುದ್ಧಿ ಭ್ರಾಂತಿಗಳನ್ನೆಲ್ಲ ಕಡೆದೆಬ್ಬಿಸಿ ಎಂತಹ ಅನಾಹುತವಾಗುತ್ತಿದೆ ಎನ್ನುವುದನ್ನು ತಿಳಿದವರೆಲ್ಲ ಬಲ್ಲರು. ಸಾಹಿತ್ಯ ಈ ವಿಷವನ್ನೆಲ್ಲ ಈಂಟುವ ನೀಲಕಂಠನಾಗಬೇಕು’ ಎನ್ನುವ ಕುವೆಂಪು ಕಾಣ್ಕೆ, ನಾವು ಸಾಗಬೇಕಾದ ದಾರಿಗೆ ಬೆಳಕು ಚೆಲ್ಲುವಂತಿದೆ. 

ಕವಿರಾಜಮಾರ್ಗಕಾರನಿಂದ ಇಂದಿನವರೆಗೆ ಕನ್ನಡ ಸಾಹಿತ್ಯ ಪರಂಪರೆಯ ಪ್ರಮುಖ ಬರಹಗಾರರೆಲ್ಲ, ಕೋಮುವಾದಕ್ಕೆ ವಿರೋಧದ ರೂಪದಲ್ಲಿಯೇ ಸಾಹಿತ್ಯವನ್ನು ನೆಚ್ಚಿಕೊಂಡು ಬಂದವರು. ಹಾಗಾದರೆ, ಸಾಹಿತ್ಯದಲ್ಲಿ ಕೋಮುವಾದ ಇಲ್ಲವೇ? ಈ ಪ್ರಶ್ನೆಗೆ ಉತ್ತರದ ರೂಪದಲ್ಲಿ, 1960ರಲ್ಲಿ ಮಣಿಪಾಲದಲ್ಲಿ ನಡೆದ 42ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿನ ಅ.ನ. ಕೃಷ್ಣರಾಯರ ಮಾತುಗಳನ್ನು ನೆನಪಿಸಿಕೊಳ್ಳಬೇಕು: ‘ಸಾಹಿತ್ಯರಂಗದಲ್ಲಿ ಕೋಮುವಾರು ಭಾವನೆ ಬೆಳೆದಿಲ್ಲವೆಂದು ಭಾವಿಸಿ ಸುಮ್ಮನಿರುವುದು ಅಪಾಯಕಾರಿ. ಇಲ್ಲಿಯೂ ಕೋಮುವಾರು ವಿಷ ಬೆಳೆ ಬಿತ್ತಿರುವ ದೈತ್ಯಶಕ್ತಿಗಳನ್ನು ನಾವು ನಿರ್ಭಯದಿಂದ, ನಿರ್ದಾಕ್ಷಿಣ್ಯದಿಂದ ಎದುರಿಸಬೇಕು. ಕೋಮುವಾದ ಭಾವನೆಯಿಂದ ನಮ್ಮ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ರಂಗಗಳು ಕಲುಷಿತವಾಗಿರುವಾಗ ಅವುಗಳಿಗೆ ಬೆಳಕನ್ನು ನೀಡುವುದು ಸಾಹಿತ್ಯ ಒಂದೇ! ಸಾಹಿತ್ಯರಂಗವೂ ರಾಜಕೀಯರಂಗದ ಮಟ್ಟಕ್ಕಿಳಿದರೆ ನಾಡಿಗೆ ಕೇಡುಂಟಾಗುತ್ತದೆ’.

ಅ.ನ.ಕೃ. ಅವರ ಕೇಡಿನ ಆತಂಕ ಹೆಚ್ಚು ನಿಜವಾಗಿರುವ ಸನ್ನಿವೇಶದಲ್ಲಿ ಕಲಬುರ್ಗಿ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ನಡೆಯುತ್ತಿದೆ. ಈವರೆಗಿನ ಸಮ್ಮೇಳನಗಳು ಪ್ರತಿನಿಧಿಸುತ್ತಾ ಬಂದಿರುವ ಸಾಮಾಜಿಕ ವಿವೇಕ ಹಾಗೂ ಬದ್ಧತೆಯ ವಾರಸುದಾರಿಕೆಯನ್ನು ಸಾಬೀತುಪಡಿಸಬೇಕಾಗಿರುವುದು ಈಗಿನ ಸಮ್ಮೇಳನ ಕ್ಕಿರುವ ಸವಾಲು. ಕಲಬುರ್ಗಿ ಸಮ್ಮೇಳನಕ್ಕೆ ಎರಡು ಸಾಧ್ಯತೆಗಳಿವೆ: ಕಾರಂತರು ಹೇಳಿದಂತೆ ‘ಬರಿಯ ಶಬ್ದ, ವಾಕ್ಯ, ಪುಟಗಳ’ ಭಾವಾವೇಶದ ಜನಪ್ರಿಯ ಮೇಳವಾಗುವುದು. ಇಲ್ಲವೇ, ಜನರ ನೋವಿಗೆ ಮಿಡಿವ ಪ್ರಾಣಮಿತ್ರನ ಪಾತ್ರವನ್ನು ನಿರ್ವಹಿಸುವ ಮೂಲಕ ಸಮುದಾಯದ ಬುದ್ಧಿ-ಭಾವಗಳಿಗೆ ಸಾಣೆ ಹಿಡಿಯುವ ಜನಪರ ಅನುಭವಮಂಟಪವಾಗುವುದು.

ಪ್ರತಿಕ್ರಿಯಿಸಿ (+)