ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನ ಹೊತ್ತು ಸಂಸ್ಕೃತಿಯ ಪ್ರಶ್ನೆಗಳು

ಸಾಂಸ್ಕೃತಿಕ ಮಾದರಿಗಳನ್ನು ಗುರುತಿಸುವ ವಿವೇಕವನ್ನೂ ಕಳೆದುಕೊಳ್ಳುವುದು ಆತಂಕಕಾರಿ
Last Updated 30 ನವೆಂಬರ್ 2018, 19:46 IST
ಅಕ್ಷರ ಗಾತ್ರ

ಅಂಬರೀಷ್‌ ಅವರ ಸಾವಿನ ಸಂದರ್ಭದಲ್ಲಿ ಸರ್ಕಾರಹಾಗೂ ಮಾಧ್ಯಮಗಳಿಂದ ವ್ಯಕ್ತವಾದ ಪ್ರತಿಕ್ರಿಯೆಗಳು, ನಮ್ಮ ಸಾಂಸ್ಕೃತಿಕ ಪರಿಕಲ್ಪನೆಗಳಲ್ಲಿ ಬದಲಾವಣೆ ಉಂಟಾಗಿದೆಯೇ ಎನ್ನುವ ಅನುಮಾನವನ್ನು ಉಂಟುಮಾಡುವಂತಿವೆ.

ಜನಪ್ರಿಯ ಕಲಾವಿದನೊಬ್ಬ ನಿಧನ ಹೊಂದಿದಾಗ ಜನರ ಭಾವನೆಗಳಿಗೆ ಸರ್ಕಾರ ಸ್ಪಂದಿಸಬೇಕು ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಅಂಬರೀಷ್‌ ಅವರ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಪ್ರತಿಕ್ರಿಯೆ ಅತ್ಯುತ್ಸಾಹದ್ದು. ಅಂಬರೀಷ್‌ ಅಂತಿಮಸಂಸ್ಕಾರಕ್ಕೆ ಸಂಬಂಧಿಸಿದಂತೆ ಸುಮಾರು ಎರಡು ದಿನಗಳ ಕಾಲ ನಡೆದ ಚಟುವಟಿಕೆಗಳಲ್ಲಿ ಸ್ವತಃ ಮುಖ್ಯಮಂತ್ರಿಯವರೇ ಸಕ್ರಿಯರಾಗಿ ಭಾಗವಹಿಸಿ ತೀರ್ಮಾನಗಳನ್ನು ಕೈಗೊಂಡಿದ್ದು ಹಾಗೂ ಕಂಠೀರವ ಸ್ಟುಡಿಯೊದಲ್ಲಿ ಅಂತಿಮಸಂಸ್ಕಾರಕ್ಕೆ ಅವಕಾಶ ಕಲ್ಪಿಸಿದ್ದು ಈ ಅತ್ಯುತ್ಸಾಹಕ್ಕೆ ಉದಾಹರಣೆ.

ರಾಜ್‌ಕುಮಾರ್‌ ಅವರ ಸ್ಮಾರಕ ಕಂಠೀರವ ಸ್ಟುಡಿಯೊದಲ್ಲಿ ಈಗಾಗಲೇ ಇರುವುದು, ಅಲ್ಲಿ ಅಂಬರೀಷ್‌ ನೆನಪುಗಳಿಗೂ ನೆಲೆ ಕಲ್ಪಿಸುವ ಲೆಕ್ಕಾಚಾರಕ್ಕೆ ಪೂರಕವಾಗಿದೆ. ವಿಷ್ಣುವರ್ಧನ್‌ ಅವರ ಸ್ಮಾರಕವನ್ನೂ ಅಲ್ಲಿಯೇ ನಿರ್ಮಿಸಬೇಕು ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಆದರೆ, ಈ ಸ್ಮಾರಕಗಳ ಮೂಲಕ ಸರ್ಕಾರ ಏನನ್ನು ಹೇಳಬಯಸುತ್ತಿದೆ? ಈ ನಟರು ಕನ್ನಡ ಸಂಸ್ಕೃತಿಯ ವಕ್ತಾರರು ಎನ್ನುವುದು ಸರ್ಕಾರದ ಉದ್ದೇಶವೇ? ಹಾಗಿದ್ದಲ್ಲಿ ರಾಜ್‌ಕುಮಾರ್‌ ಅವರನ್ನು ಹೊರತುಪಡಿಸಿದರೆ ಉಳಿದವರನ್ನು ಸಂಸ್ಕೃತಿಯ ಹಿನ್ನೆಲೆಯಲ್ಲಿ ಹೇಗೆ ಅರ್ಥೈಸುವುದು? ಸ್ಮಾರಕಗಳನ್ನು ನಿರ್ಮಿಸಹೊರಟವರೇ ಈ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಬೇಕಾಗಿದೆ.

‘ಸಂಸ್ಕೃತಿ’ ಹೆಸರಿನ ಸಚಿವಾಲಯವಿದ್ದರೂ ತರ್ಕಕ್ಕಾಗಿಸಂಸ್ಕೃತಿಯ ವಿಷಯ ಸರ್ಕಾರಕ್ಕೆ ಅರ್ಥವಾಗುವುದಿಲ್ಲ ಎಂದು ಭಾವಿಸೋಣ. ಇದೇ ತರ್ಕದ ಹಿನ್ನೆಲೆಯಲ್ಲಿ – ‘ಸ್ಮಾರಕಗಳನ್ನು ರೂಪಿಸುವುದು ಸರ್ಕಾರದ ಕೆಲಸವಲ್ಲ’ ಎನ್ನುವ ಸಾಮಾನ್ಯಜ್ಞಾನವೂ ನಮ್ಮ ಪ್ರತಿನಿಧಿಗಳಿಗಿಲ್ಲ ಎಂದು ಭಾವಿಸುವುದು ಕಷ್ಟ. ಅಂಬರೀಷ್‌ ಅವರಿಗೆ ಗೌರವ ಸಲ್ಲಿಸಬೇಕು ಎನ್ನುವುದು ಸರ್ಕಾರದ ಬಯಕೆಯಾಗಿದ್ದಲ್ಲಿ, ಮೃತರ ಹೆಸರಿನಲ್ಲಿ ಸಿನಿಮಾ ಸಾಧಕರಿಗೆ ಪ್ರಶಸ್ತಿಯೊಂದನ್ನು ನೀಡುವುದು ಅರ್ಥಪೂರ್ಣ ಗೌರವವಾಗಬಹುದಿತ್ತು. ಆದರೆ, ಸರ್ಕಾರದ ಕಣ್ಣಿಗೆ ಪ್ರಶಸ್ತಿಯೊಂದನ್ನು ನೀಡುವುದಕ್ಕಿಂತಲೂ ಸ್ಮಾರಕವನ್ನು ರೂಪಿಸುವುದು ಸಾಧನೆಯೆನ್ನಿಸಿಕೊಳ್ಳುತ್ತದೆ. ಜನಸಾಮಾನ್ಯರ ಹಿತಾಸಕ್ತಿಗೆ ಪೂರಕವಾದ ಕಾರ್ಯಕ್ರಮಗಳನ್ನು ಸಾಧನೆಯನ್ನಾಗಿ ಮಾಡಿಕೊಳ್ಳಬೇಕಾದ ಸರ್ಕಾರಗಳು, ಸ್ಮಾರಕ–ಪ್ರತಿಮೆಗಳ ಮೂಲಕ ಬೀಗುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕವಲ್ಲದೆ ಬೇರೇನೂ ಅಲ್ಲ.

ಕಂಠೀರವ ಸ್ಟುಡಿಯೊ ‘ಸ್ಮಾರಕಗಳ ಚಿತ್ರಶಾಲೆ’ ಆಗುತ್ತಿರುವ ಸಂದರ್ಭದಲ್ಲೇ, ನಗರದಲ್ಲಿರುವ ಸಾಂಸ್ಕೃತಿಕ ರೂಪಕಗಳನ್ನು ಕಳಾಹೀನಗೊಳಿಸುವ ಕೆಲಸ ಇನ್ನೊಂದೆಡೆ ನಡೆಯುತ್ತಿದೆ. ‘ವೆಂಕಟಪ್ಪ ಆರ್ಟ್‌ ಗ್ಯಾಲರಿ’ ಇತ್ತೀಚಿನ ವರ್ಷಗಳಲ್ಲಿ ಸುದ್ದಿಯಲ್ಲಿರುವುದನ್ನು ಗಮನಿಸಿದರೆ, ಅಲ್ಲಿ ಕಲೆಗೆಸಂಬಂಧಿಸಿದ ಸಂಗತಿಗಳಿಗಿಂತಲೂ ವ್ಯಾಪಾರಿ ಉದ್ದೇಶಗಳೇ ಎದ್ದುಕಾಣುತ್ತವೆ. ಗ್ಯಾಲರಿಯನ್ನು ಖಾಸಗಿಯವರಿಗೆ ವಹಿಸಿಕೊಡುವ ಪ್ರಯತ್ನಗಳು ಮೊದಲಿಗೆ ನಡೆದವು. ಈಗ ಕಟ್ಟಡವನ್ನು ಹೊಸದಾಗಿ ನಿರ್ಮಿಸುವ ಪ್ರಯತ್ನಗಳು ನಡೆದಿವೆ. ವೆಂಕಟಪ್ಪ ಗ್ಯಾಲರಿಯಿಂದ ಚಿತ್ರಕಲಾ ಪರಿಷತ್ತಿಗೆ ಬಂದರೆ – ‘ಡೀಮ್ಡ್‌ ಯೂನಿವರ್ಸಿಟಿ’ ಹೆಸರಿನಲ್ಲಿ ಪರಿಷತ್ತಿನ ಒಂದು ಭಾಗವಾದ ಕಾಲೇಜನ್ನು ನಗರದಿಂದ ಹೊರಗಟ್ಟುವ ಪ್ರಯತ್ನಗಳು ಚುರುಕಾಗಿವೆ. ಈ ಮೂಲಕ ಪರಿಷತ್ತಿನ ಆವರಣ ವಾಣಿಜ್ಯ ಚಟುವಟಿಕೆಗಳಿಗೆ ತನ್ನನ್ನು ಪೂರ್ಣವಾಗಿ ತೆರೆದುಕೊಳ್ಳುವ ಸಾಧ್ಯತೆಗಳು ಮುಕ್ತವಾಗಿವೆ.

ಸರ್ಕಾರ ಇದ್ದಕ್ಕಿದ್ದಂತೆ ಸಾಂಸ್ಕೃತಿಕವಾಗಿ ಜಾಗೃತವಾಗಿ ಯಾವುದಾದರೊಂದು ಯೋಜನೆಗೆ ಕೈಹಾಕಿದರೆ, ಆ ಯೋಜನೆಯ ಹಿಂದೆ ವಾಣಿಜ್ಯ ಹಿತಾಸಕ್ತಿಗಳು ಇರುವ ಸಾಧ್ಯತೆಯನ್ನು ನಮ್ಮ ‘ಸಾಂಸ್ಕೃತಿಕ ಚರಿತ್ರೆ’ ಮತ್ತೆ ಮತ್ತೆ ಮನದಟ್ಟು ಮಾಡಿಸಿದೆ. ನಗರದ ಹೃದಯಭಾಗದಲ್ಲಿರುವ ವೆಂಕಟಪ್ಪ ಗ್ಯಾಲರಿ ಹಾಗೂ ಚಿತ್ರಕಲಾ ಪರಿಷತ್ತುಗಳಂತಹ ಸಂಸ್ಥೆಗಳು ನಗರದ ಹೊರಭಾಗದಲ್ಲಿರಬೇಕೆಂದು ಅಪೇಕ್ಷಿಸುವುದು ಒಂದುಬಗೆಯ ಅಸ್ಪೃಶ್ಯತೆಯೇ.

ಇಂಥ ಸಾಂಸ್ಕೃತಿಕ ಅಸ್ಪೃಶ್ಯತೆಗೆ ಇಂಬುಕೊಡುವ ಸರ್ಕಾರ ಇನ್ನೊಂದೆಡೆ ಜನಪ್ರಿಯ ಸಿನಿಮಾ ನಟರ ಸ್ಮಾರಕಗಳನ್ನು ತುಂಬುವ ಮೂಲಕ ‘ಕಂಠೀರವ ಸ್ಟುಡಿಯೊ’ದ ಮೂಲ ಆಶಯಕ್ಕೆ ವ್ಯತಿರಿಕ್ತವಾಗಿ ನಡೆಯುತ್ತಿದೆ. ಸ್ಟುಡಿಯೊವೊಂದರ ವ್ಯಾಪ್ತಿಯನ್ನು ಕುಗ್ಗಿಸುತ್ತಿರುವುದಕ್ಕಿಂತಲೂ ಹೆಚ್ಚಿನ ನೋವಿನ ಸಂಗತಿ, ಇಂಥ ಚಟುವಟಿಕೆಗಳನ್ನು ವಿರೋಧಿಸಬೇಕಾಗಿದ್ದ ಚಿತ್ರೋದ್ಯಮ ಯಾವುದಕ್ಕಾದರೂ ಸ್ಪಂದಿಸುವ ವಿವೇಚನಾಶಕ್ತಿಯನ್ನೇ ಕಳೆದುಕೊಂಡಿರುವುದು.

ಸಾಂಸ್ಕೃತಿಕ ಪರಿಕಲ್ಪನೆಗಳ ಬದಲಾವಣೆಗೆ ಸಂಬಂಧಿಸಿದಂತೆ, ಅಂಬರೀಷ್‌ ಸಾವಿನ ಸಂದರ್ಭದಲ್ಲಿನ ಮಾಧ್ಯಮಗಳ ಪ್ರತಿಕ್ರಿಯೆಯನ್ನು ಗಮನಿಸೋಣ. ಅಂಬರೀಷ್‌ ಕುರಿತಂತೆ ಪ್ರಕಟಗೊಂಡ ವ್ಯಕ್ತಿಚಿತ್ರಗಳಲ್ಲಿ – ಧೂಮಪಾನ, ಮದ್ಯಪಾನದ ಖಾಸಗಿ ಸಂಗತಿಗಳ ವೈಭವೀಕರಣವನ್ನು ವ್ಯಕ್ತಿಯ ಗುಣದ ರೂಪದಲ್ಲಿ ಬಿಂಬಿಸುವ ಪ್ರಯತ್ನಗಳಿದ್ದವು. ಅಂಬರೀಷ್‌ರ ಒರಟುತನದ ಬಗ್ಗೆ ಮಾತನಾಡುತ್ತ, ಅವರಿಂದ ಬೈಸಿಕೊಳ್ಳುವ ಸುಖಾನುಭವದ ಕುರಿತು ಅನೇಕರು ಹೇಳಿಕೊಂಡರು. ಇವೆಲ್ಲವೂ ನಿಜವೇ ಇರಬಹುದು.

ಆದರೆ, ಸಾವಿನ ಸಂದರ್ಭದಲ್ಲಿ ಚರ್ಚೆಯಾಗಬೇಕಾದುದು ಅಂಬರೀಷ್‌ ನಿಧನ ಚಿತ್ರೋದ್ಯಮದ ಮೇಲೆ ಉಂಟುಮಾಡುವ ಪರಿಣಾಮ ಏನನ್ನುವುದು ಅಲ್ಲವೇ? ‘ಕಲಿಯುಗ ಕರ್ಣ’, ‘ದಿಲ್ದಾರ್‌ ಮನುಷ್ಯ’ ಎನ್ನುವ ಬಣ್ಣನೆಗಳೇ ಮುನ್ನೆಲೆಗೆ ಬಂದು, ರಾಜ್‌ಕುಮಾರ್‌–ವಿಷ್ಣುವರ್ಧನ್‌ ನಂತರ ಕನ್ನಡ ಚಿತ್ರರಂಗದಲ್ಲಿ ಉಳಿದಿದ್ದ ಹಳೆಯ ಮರವೊಂದು ನೆಲಕ್ಕೊರಗಿದ್ದರ ಚರ್ಚೆ ಹಿನ್ನೆಲೆಗೆ ಸರಿಯಿತು. ಇಡೀ ಚಿತ್ರೋದ್ಯಮ ಒಂದು ಕುಟುಂಬ ಎನ್ನುವ ಭಾವನೆ ಮೂಡಿಸುವಲ್ಲಿ ಅಂಬರೀಷ್‌ ಪಾತ್ರ ಯಾವ ಬಗೆಯದಾಗಿತ್ತು ಎನ್ನುವ ವಿಶ್ಲೇಷಣೆ ಕೂಡ ತೆರೆಮರೆಗೆ ಸರಿಯಿತು. ಇದನ್ನು ಸಮಾಜದ ಹೊಣೆಗೇಡಿತನ ಅನ್ನುವುದೋ ಅಥವಾ ಅಂಬರೀಷ್‌ ಅವರಿಗಾದ ಅನ್ಯಾಯ ಎನ್ನುವುದೋ?

ಸಾಹಿತ್ಯ ವಿಮರ್ಶಕ ಕಿ.ರಂ. ನಾಗರಾಜ್‌ ಹಾಗೂ ಪತ್ರಕರ್ತ ವೈಎನ್‌ಕೆ ವಿಷಯದಲ್ಲೂ ಹೀಗೇ ಆಗಿತ್ತು. ಕಿ.ರಂ. ಅವರನ್ನು ಕುರಿತು ಬಹುತೇಕ ಶ್ರದ್ಧಾಂಜಲಿ ಬರಹಗಳಲ್ಲಿ ಅವರ ಸಿಗರೇಟ್‌–ಕುಡಿತದ ವಿಶೇಷಣಗಳು ಮುಖ್ಯಪಾತ್ರ ವಹಿಸಿದ್ದವು. ‘ನಮ್ಮ ಕಿ.ರಂ. ಗುಂಡು ಹಾಕಿದಾಗಲೂ ಪಂಪನ ಬಗ್ಗೆ ಮಾತನಾಡುತ್ತಿದ್ದರು. ಸಾಹಿತ್ಯದ ಪಾಠ ಮಾಡುತ್ತಿದ್ದರು. ಛೇ, ಅಂತಹ ಗೆಳೆಯ–ಗುರು ಮತ್ತೆ ಸಿಗೊಲ್ಲ’– ಇದು ಲೇಖಕರೊಬ್ಬರು ಕಿ.ರಂ. ನಾಗರಾಜ್‌ ಅವರನ್ನು ನೆನಪಿಸಿಕೊಂಡಿರುವ ಪರಿ. ‘ಕಿ.ರಂ.ಗೆ ಒಳ್ಳೆಯ ಸಿಹಿ ತಿನಿಸು ಹಾಗೂ ನಾನ್‌ ವೆಜ್‌ ಊಟ ಎಲ್ಲಿ ಸಿಗುತ್ತದೆ ಎನ್ನುವುದು ಚೆನ್ನಾಗಿ ಗೊತ್ತಿತ್ತು’ ಎನ್ನುವುದು ಮತ್ತೊಬ್ಬ ಲೇಖಕರ ನೆನಪು.

ವೈಎನ್‌ಕೆ ಕೂಡ ಈ ತಲೆಮಾರಿನ ಓದುಗರಿಗೆ ಹೆಚ್ಚು ಪರಿಚಯವಾಗಿರುವುದು ‘ಗುಂಡು’ ನೆನಪುಗಳಿಂದಲೇ. ಅವರು ನೆನಪಾಗಬೇಕಾದುದು ಅವರ ಅಪಾರ ಓದು, ವಿನೋದವನ್ನೊಳಗೊಂಡ ಸಮಯಪ್ರಜ್ಞೆ, ಒಂದು ತಲೆಮಾರಿನ ಬರಹಗಾರರಿಗೆ – ವಿಶೇಷವಾಗಿ ನವ್ಯದ ಗೆಳೆಯರಿಗೆ – ನೀಡುತ್ತಿದ್ದ ಮಾರ್ಗದರ್ಶನ ಹಾಗೂ ಪತ್ರಿಕೋದ್ಯಮಕ್ಕೆ ತಂದ ಜೀವಸ್ಪರ್ಶದ ಮೂಲಕವಲ್ಲವೇ?

ಅಂಬರೀಷ್‌ ಅವರಾಗಲೀ, ಕಿ.ರಂ.–ವೈಎನ್‌ಕೆ ಅವರಾಗಲೀ ಮುಖ್ಯವೆನ್ನಿಸುವುದು ತಮ್ಮ ಚಟುವಟಿಕೆಗಳ ಮೂಲಕ ತಮ್ಮ ಕಾಲದ ಸಾಂಸ್ಕೃತಿಕ ವಾತಾವರಣವನ್ನು ಜೀವಂತವಾಗಿ ಇಟ್ಟಿದ್ದುದರಲ್ಲಿ. ರಾಜ್‌ ಅವರಂಥ ಧೀಮಂತ ತಾರೆ ಹೊಳೆಯುತ್ತಿದ್ದಾಗಲೂ ಅಂಬರೀಷ್‌ ತಮ್ಮದೇ ಆದ ಅಭಿಮಾನಿಗಳ ವಲಯವೊಂದನ್ನು ಸೃಷ್ಟಿಸಿಕೊಂಡಿದ್ದು ಹಾಗೂ ದಶಕಗಳ ಕಾಲ ಅಪಾರ ಬೇಡಿಕೆಯ ನಟನಾಗಿ ಉಳಿದದ್ದು ಸಾಮಾನ್ಯ ಸಾಧನೆಯಲ್ಲ. ಅದೇರೀತಿ ಕಿ.ರಂ. ಹಾಗೂ ವೈಎನ್‌ಕೆ ತಮ್ಮ ಓದು ಮತ್ತು ಒಳನೋಟಗಳಿಂದ ತಮ್ಮ ಓರಗೆಯ ಸೃಜನಶೀಲರ ಅಭಿವ್ಯಕ್ತಿಗೆ ಹೊಳಪು ನೀಡಬಲ್ಲ ಶಕ್ತಿ ಹೊಂದಿದ್ದರು. ಆದರೆ, ಈ ಜೀವಸ್ಪರ್ಶದ ಕಥನಗಳಿಗೆ ಬದಲಾಗಿ ಅವರ ವ್ಯಸನಗಳೇ ನಮಗೆ ಮುಖ್ಯವೆನ್ನಿಸುತ್ತಿವೆ. ಒಂದು ತಲೆಮಾರು ಸಾಂಸ್ಕೃತಿಕ ಐಕಾನ್‌ಗಳನ್ನು ರೂಪಿಸುವ ಶಕ್ತಿಯನ್ನು ಕಳೆದುಕೊಳ್ಳುವುದು ಆತಂಕಕಾರಿ. ಅದಕ್ಕೂ ಹೆಚ್ಚು ದಿಗಿಲು ಹುಟ್ಟಿಸುವಂತಹದ್ದು, ಸಾಂಸ್ಕೃತಿಕ ಮಾದರಿಗಳನ್ನು ಗುರುತಿಸುವ ವಿವೇಕವನ್ನೂ ಕಳೆದುಕೊಳ್ಳುವುದು.

ರಘುನಾಥ ಚ.ಹ.
ರಘುನಾಥ ಚ.ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT