ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಗ್ಗದ ಸಿರಿ ಮತ್ತು ರಿಂಗ ರಿಂಗ ರಿಂಗ...

ಪಡಸಾಲೆ
Last Updated 1 ಸೆಪ್ಟೆಂಬರ್ 2018, 19:45 IST
ಅಕ್ಷರ ಗಾತ್ರ

ಕೆ.ಎಸ್‌. ನಿಸಾರ್‌ ಅಹಮದ್‌ರ ‘ಸಗ್ಗದ ಸಿರಿ ಬಂತು ನಮ್ಮೂರಿಗೆ’ ಕವಿತೆಯನ್ನು ಕನ್ನಡ ಮೇಷ್ಟ್ರು ಓದುತ್ತಿದ್ದಾರೆ. ತರಗತಿಯ ಹೊರಗಿನಿಂದ ತೆಲುಗಿನ ‘ರಿಂಗ ರಿಂಗ ರಿಂಗ’ ಹಾಡು. ಸಿನಿಮಾ ಹಾಡಿನ ವಾಲ್ಯೂಮ್‌ ಹೆಚ್ಚಾದಂತೆ ಸಗ್ಗದ ಸಿರಿ ಧ್ವನಿಯೂ ತಾರಕಕ್ಕೇರುತ್ತದೆ. ಕೊನೆಗೆ ಮೇಷ್ಟ್ರ ಕೊರಳು ಕಟ್ಟುತ್ತದೆ. ಇದು ‘ಪ್ರೆಸೆಂಟ್‌ ಸರ್‌’ ಕಿರುಚಿತ್ರದಲ್ಲಿನ ಕನ್ನಡ ಶಾಲೆಯ ಸ್ಥಿತಿಯನ್ನು ಕಟ್ಟಿಕೊಡುವ ಒಂದು ದೃಶ್ಯ.

‘ಸರ್ಕಾರಿ ಹಿ. ಪ್ರಾ. ಶಾಲೆ, ಕಾಸರಗೋಡು’ ಚಿತ್ರದಲ್ಲೂ ಮುಚ್ಚುವ ಆತಂಕದಲ್ಲಿರುವ ಕನ್ನಡ ಶಾಲೆಯ ಕಥೆಯಿದೆ. ಆದರೆ, ಈ ಸಿನಿಮಾದಲ್ಲಿನ ಶಾಲೆ ಮುಚ್ಚುವುದಿಲ್ಲ. ಹೋರಾಟಗಾರನೊಬ್ಬ ವಕೀಲನೂ ಆಗಿ ಶಾಲೆಯನ್ನು ಉಳಿಸುತ್ತಾನೆ. ಕಿರುಚಿತ್ರ
ನೋಡುಗರ ಮನಸ್ಸನ್ನು ಭಾರಗೊಳಿಸಿದರೆ, ತಮಾಷೆಯ ಸನ್ನಿವೇಶಗಳ ಮೂಲಕ ಗಂಭೀರ ಸಮಸ್ಯೆಯೊಂದನ್ನು ಚಿತ್ರಿಸಲು ಸಿನಿಮಾ ಪ್ರಯತ್ನಿಸುತ್ತದೆ.

‘ಕಿರಿಕ್‌ ಪಾರ್ಟಿ’ಯಂಥ ಹದಿನಾರಾಣೆ ವ್ಯಾಪಾರಿ ಚಿತ್ರ ಮಾಡಿದ್ದ ರಿಷಬ್‌ ಶೆಟ್ಟಿ ಅವರು ಗಂಭೀರ ಸಮಸ್ಯೆಯೊಂದನ್ನು ಕೈಗೆತ್ತಿಕೊಂಡು ಸಿನಿಮಾ ಮಾಡಿರುವುದಕ್ಕೆ ಅಭಿನಂದನಾರ್ಹರು. ಆದರೆ, ಈ ಸಿನಿಮಾವನ್ನು ಅವರು ನಿರ್ವಹಿಸಿರುವ ರೀತಿ ಪ್ರಶ್ನಾರ್ಹ. ಕನ್ನಡ ಶಾಲೆಯ ಸಮಸ್ಯೆಯನ್ನು ಕನ್ನಡ–ಮಲಯಾಳಿ ಸಂಘರ್ಷ ಹಾಗೂ ಭಾಷಾಂಧ ಅಧಿಕಾರಿಯೊಬ್ಬನ ಎಡವಟ್ಟಿನ ರೂಪದಲ್ಲಿ ರಿಷಬ್‌ ಚಿತ್ರಿಸಿದ್ದಾರೆ. ಕಾಸರಗೋಡಿನ ಹಿನ್ನೆಲೆಯಲ್ಲಿ ಈ ಭಾಷಾ ಸಂಘರ್ಷ ಅಸಹಜವೂ ಅಲ್ಲ. ಆದರೆ, ಕನ್ನಡ ಶಾಲೆಗಳು ಉಸಿರುಗಟ್ಟುತ್ತಿರುವುದು ಮಲೆಯಾಳಿಯೋ ತೆಲುಗಿನದೋ ಶಾಲೆಗಳಿಂದಲ್ಲ – ಕಾನ್ವೆಂಟ್‌ಗಳಿಂದ. ಕನ್ನಡದಂತೆಯೇ ತೆಲುಗು, ಮಲಯಾಳಿ, ತಮಿಳು ಶಾಲೆಗಳು ಕೂಡ ಕಾನ್ವೆಂಟ್‌ಗಳ ಠಾಕುಠೀಕಿನಲ್ಲಿ ಉಬ್ಬಸಕ್ಕೀಡಾಗಿರುವ ವಾಸ್ತವವನ್ನು ಗ್ರಹಿಸದೆ ಹೋಗಿರುವುದು ರಿಷಬ್‌ರ ಶಾಲೆಯ ಬಹುದೊಡ್ಡ ಮಿತಿ. ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಅವರು ಅನುಸರಿಸಿರುವ ಮಾರ್ಗವೂ ತೆಳುವಾಗಿದೆ. ಚಳವಳಿ, ಹೋರಾಟಗಳ ಬಗ್ಗೆ ಬದ್ಧತೆಯಿಲ್ಲದ ವ್ಯಕ್ತಿಯೊಬ್ಬ ಕನ್ನಡ ಶಾಲೆಯನ್ನು ತನ್ನ ಮಾತುಗಾರಿಕೆ
ಯಿಂದ ಉಳಿಸುತ್ತಾನೆ. ಬಡವನೊಬ್ಬನಿಗೆ ಕೋಟಿ ರೂಪಾಯಿ ಲಾಟರಿ ತಗುಲಿ, ‘ಬಡತನ ನಿರ್ಮೂಲನೆಯಾಯಿತು’ ಎಂದಂತಿದೆ ಸಿನಿಮಾ ಕಥನ. ಕಾಸರಗೋಡಿನ ಬಗ್ಗೆ ಮಾತನಾಡುವ ಸಿನಿಮಾದಲ್ಲಿ ಕಯ್ಯಾರರ ಉಲ್ಲೇಖವೂ ಇಲ್ಲ!

ರಿಷಬ್‌ರ ಕಾಸರಗೋಡಿನ ಶಾಲೆಯನ್ನು ಉಳಿಸುವ ‘ಮೈಸೂರು ಮೂಲದ ಹೋರಾಟಗಾರ’ನ ಪಾತ್ರದಲ್ಲಿ ನಟಿಸಿರುವ ಅನಂತನಾಗ್‌, ‘62 ವರ್ಷದಿಂದ ಯಾರೂ ಎತ್ತಿಕೊಳ್ಳದ ವಿಷಯವೊಂದನ್ನು ರಿಷಬ್ ಎತ್ತಿಕೊಂಡಿದ್ದಾರೆ’ ಎಂದು ತಮ್ಮ ನಿರ್ದೇಶಕ
ರನ್ನು ಮೆಚ್ಚಿಕೊಂಡಿದ್ದಾರೆ. ಅವರ ವಯಸ್ಸಿಗೆ ಮರೆವು ಸಹಜ. ಅರವತ್ತೆರಡು ವರ್ಷಗಳ ಮಾತಿರಲಿ, ಸುಮಾರು ಆರು ವರ್ಷಗಳ ಹಿಂದಷ್ಟೇ (2011ರಲ್ಲಿ) ತೆರೆಕಂಡಿದ್ದ ‘ಪ್ರಾರ್ಥನೆ’ ಚಿತ್ರಕಥೆಯೂ ಕನ್ನಡಶಾಲೆಗಳ ಕಥೆಯನ್ನು ಒಳಗೊಂ
ಡಿತ್ತು. ಆ ಚಿತ್ರದ ಮುಖ್ಯಪಾತ್ರದಲ್ಲಿ ಇದ್ದುದೂ ಅನಂತ್‌ನಾಗ್‌ ಅವರೇ. ವ್ಯತ್ಯಾಸ ಇಷ್ಟೇ: ‘ಪ್ರಾರ್ಥನೆ’ಯ ನಾಯಕನದು ಉದಾತ್ತ ವ್ಯಕ್ತಿತ್ವ, ಕಾಸರಗೋಡಿನಲ್ಲಿ ವಿದೂಷಕನ ವೈಖರಿ.

ರಿಷಬ್‌ರ ಕಾಸರಗೋಡು ಶಾಲೆಗೆ ಹೋಲಿಸಿದರೆ, ಸದಾಶಿವ ಶೆಣೈ ನಿರ್ದೇಶನದ ‘ಪ್ರಾರ್ಥನೆ’ ಕನ್ನಡ ಶಾಲೆಗಳ ಸಮಸ್ಯೆಯನ್ನು ಚಿತ್ರಿಸುವ ನಿಟ್ಟಿನಲ್ಲಿ ಹೆಚ್ಚು ಪ್ರಾಮಾಣಿಕವಾದ ಸಿನಿಮಾ. ‘ಪ್ರಾರ್ಥನೆ’ಯ ಪುರುಷೋತ್ತಮ ಮೇಷ್ಟರು ಕಾನ್ವೆಂಟ್‌ ಶಾಲೆಗಳ ಸವಾಲನ್ನಷ್ಟೇ ಎದುರಿಸುವುದಿಲ್ಲ. ಮೇಷ್ಟ್ರ ಪತ್ನಿಯೇ ಗಂಡನ ಆಶಯಗಳಿಗೆ ವಿರುದ್ಧವಾಗಿ ನಿಂತು ಮಗನನ್ನು ಇಂಗ್ಲಿಷ್‌ ಶಾಲೆಗೆ ಸೇರಿಸುತ್ತಾಳೆ. ಕನ್ನಡ ಶಾಲೆಗಳಿಗೆ ಉಳಿಯುವುದು ದೀನ ದಲಿತರ ಹಾಗೂ ಅಲೆಮಾರಿಗಳ ಮಕ್ಕಳು ಮಾತ್ರ ಎನ್ನುವ ವಾಸ್ತವಕ್ಕೂ ಸಿನಿಮಾ ಕನ್ನಡಿ ಹಿಡಿಯುತ್ತದೆ. ‘ಸರ್ಕಾರಿ ಮೇಷ್ಟ್ರ ಚಾಕರಿ ಬಿಟ್ಟು ನಮ್ಮ ಶಾಲೆಗೆ ಪ್ರಿನ್ಸಿಪಾಲನಾಗಿ ಬಾ’ ಎನ್ನುವ ಕರೆಯೂ ಕನ್ನಡ ಶಾಲೆ ಮೇಷ್ಟರಿಗೆ ಬರುತ್ತದೆ. ಚಿತ್ರದ ಕೊನೆಗೆ ಶಾಲೆ ಕುಸಿದುಬೀಳುತ್ತದೆ. ಒಂದು ಮೌಲ್ಯವೇ ಕುಸಿದುಬಿದ್ದಂತೆ ಕಾಣಿಸುವ ಕಟ್ಟಡದ ಎದುರು ನಿಲ್ಲುವ ಮೇಷ್ಟ್ರ ಜೊತೆಗೆ ನಿಲ್ಲುವವರು ಕೆಲವೇ ಕೆಲವರು. ಮೇಷ್ಟ್ರು ತಮ್ಮಷ್ಟಕ್ಕೆ ಹೇಳಿಕೊಳ್ಳುತ್ತಾರೆ – ‘ಮತ್ತೆ ಕಟ್ಟೋಣ’. ಕಾಸರಗೋಡು ಚಿತ್ರದಲ್ಲಿ ಶಾಲೆಯ ಕಟ್ಟಡದ ಸಾಮರ್ಥ್ಯ ನಿರ್ದೇಶಕರಿಗೆ ಭೌತಿಕವಾಗಿಯಷ್ಟೇ ಕಾಣಿಸುತ್ತದೆ.

ರಿಷಬ್‌ರ ಸಿನಿಮಾ ನೋಡಿದವರು ಆ ಸಿನಿಮಾದಲ್ಲಿನ ಹಾಸ್ಯ ಸನ್ನಿವೇಶಗಳನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಚಿತ್ರದುದ್ದಕ್ಕೂ ನಗಿಸುವ ನಿರ್ದೇಶಕರ ಪ್ರಯತ್ನದಿಂದಾಗಿ ‘ಕಾಸರಗೋಡು ಶಾಲೆ’ಯ ಸಿನಿಮಾ ಒಂದು ಹಾಸ್ಯಚಿತ್ರದ ರೂಪದಲ್ಲಿಯೇ ಮನಸ್ಸಿನಲ್ಲುಳಿಯುತ್ತದೆ. (ಕನ್ನಡ ಶಾಲೆಯಷ್ಟೇ ಪ್ರವೀಣನೆಂಬ ಹುಡುಗನ ಒಮ್ಮುಖ ಪ್ರೇಮಪ್ರಸಂಗವೂ ಚಿತ್ರದಲ್ಲಿ ಮುಖ್ಯವಾಗಿದೆ.) ವಿನೋದದ ಕೊನೆಗೆ ಉಳಿಯಬೇಕಾದುದು ವಿಷಾದವೇ ಹೊರತು, ನಗೆಯಲ್ಲ.

ಸರ್ಕಾರಿ ಶಾಲೆಯ ಜೊತೆಜೊತೆಗೆ ತೆರೆಕಂಡ ಸತ್ಯಪ್ರಕಾಶ್‌ ನಿರ್ದೇಶನದ ‘ಒಂದಲ್ಲಾ ಎರಡಲ್ಲಾ’ ಚಿತ್ರವನ್ನು ನೆನಪಿಸಿಕೊಳ್ಳಬೇಕು. ಈ ಸಿನಿಮಾ ಕೂಡ ಒಂದು ಬಗೆಯ ಶಾಲೆಯ ಕಥೆಯೇ. ಸಿನಿಮಾದಲ್ಲಿನ ಸಮೀರ ಎನ್ನುವ ಬಾಲಕ ‘ಬಯಲುಶಾಲೆ’ಯ ಮೂಲಕ ಜೀವನದ ಪಾಠಗಳನ್ನು ನಮಗೆ ಕಾಣಿಸುತ್ತಾನೆ. ತನ್ನ ಪ್ರೀತಿಪಾತ್ರ ಹಸು ಕಳೆದುಹೋದಾಗ ಅದನ್ನು ಹುಡುಕುತ್ತಾ ಸಮೀರ ಊರುಕೇರಿ ಅಲೆಯುತ್ತಾನೆ. ಈ ಪಯಣದಲ್ಲಿ ಬಾಲಕ ಎದುರಾಗುವ ವಿಭಿನ್ನ ಬಗೆಯ ವ್ಯಕ್ತಿಗಳ ಮೂಲಕ ವರ್ತಮಾನವನ್ನು ಕಟ್ಟಿಕೊಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಒಳ್ಳೆಯವರು, ಕೆಟ್ಟವರು, ಮುಖವಾಡಗಳನ್ನು ತೊಟ್ಟವರು –ಎಲ್ಲ ಬಗೆಯ ಜನ ಸಮೀರನ ಸಂಪರ್ಕಕ್ಕೆ ಬರುತ್ತಾರೆ. ಬಾಲಕನ ಸಂಪರ್ಕಕ್ಕೆ ಬರುವವರೆಲ್ಲರೂ ತಮ್ಮ ಕಿಲುಬುಗಳನ್ನು ಕಳೆದುಕೊಂಡು ಮನುಷ್ಯರಾಗಿ ಹೊಳೆಯುತ್ತಾರೆ. ಮಾನವೀಯತೆಯ ಹುಡುಕಾಟದಂತೆ ಕಾಣಿಸುವ ಸತ್ಯಪ್ರಕಾಶರ ಸಿನಿಮಾ ಬೊಳುವಾರರ ಕಥೆಗಳಂತೆ ಸುಂದರ ಕನಸುಗಳ ಅನಾವರಣಗೊಳಿಸುವ ಪ್ರಯತ್ನದಂತೆ ಕಾಣಿಸುತ್ತದೆ. ಈ ಚಿತ್ರದಲ್ಲೂ ವಿನೋದವಿದೆ. ಆದರೆ, ಈ ವಿನೋದದ ಆಳದಲ್ಲಿರುವುದು ಗಾಢ ವಿಷಾದ.

ಸತ್ಯಪ್ರಕಾಶ್‌ರ ಸಿನಿಮಾ ಕೆಲವರಿಗೆ ಸಂಘಪರಿವಾರದ ಗುಪ್ತ ಕಾರ್ಯಸೂಚಿಯಂತೆ ಕಾಣಿಸಿದೆ. ಇದಕ್ಕೆ ಕಾರಣ ಮುಸ್ಲಿಂ ಬಾಲಕನನ್ನು ಹಸುವಿನ ಜೊತೆ ನಿಲ್ಲಿಸಿರುವುದು ಮತ್ತು ‘ತಮ್ಮ ಚಿತ್ರಕಥೆಗೆ ಪುಣ್ಯಕೋಟಿಯ ಕಥೆ ಪ್ರೇರಣೆ’ ಎಂದು ಹೇಳುವ ಮೂಲಕ ಆಡುವವರ ಬಾಯಿಗೊಂದು ಮಾತನ್ನು ಸತ್ಯಪ್ರಕಾಶ್‌ ತಾವೇ ಕೊಟ್ಟಿರುವುದು. ಪಠ್ಯದಲ್ಲಿಲ್ಲದ ಸಂಗತಿಯನ್ನು ಆರೋಪಿಸುವುದು ಹಾಗೂ ವಿಶ್ಲೇಷಿಸುವುದು ಕಲಾಕೃತಿಯೊಂದಕ್ಕೆ ಮಾಡುವ ಅನ್ಯಾಯ. ಈ ಚಿತ್ರದಲ್ಲಿನ ‘ಹುಡುಕಿದ್ರೆ ದೇವ್ರೇ ಸಿಗ್ತಾನೆ, ಮಗು ಸಿಗಲ್ವಾ’ ಎನ್ನುವ ಸಂಭಾಷಣೆಯನ್ನು ನೆಚ್ಚಿದವರಂತೆ ಚಿತ್ರದಲ್ಲಿ ಯಾವಯಾವುದೋ ವಾಸನೆ ಹುಡುಕುವವರಿಗೆ ಉತ್ತರದಂತೆ, ಆ ಚಿತ್ರದ ಮತ್ತೊಂದು ಮಾತುಕತೆಯನ್ನು ನೆನಪಿಸಿಕೊಳ್ಳಬಹುದು. ‘ಅದು ನಮ್ಮ ಜನ ಅಲ್ಲ’ ಎನ್ನುವ ಮಾತಿಗೆ, ‘ಅದೆಲ್ಲಿ ಜನ ಆಗದೆ? ಅದಿನ್ನೂ ಮಗು’ ಎಂದು ತಾಯಿಯೊಬ್ಬಳು ಉದ್ಗರಿಸುತ್ತಾಳೆ. ಈ ಮಗುವಿನ ಕಣ್ಣು, ತಾಯಿಕರುಳು ಇಡೀ ಚಿತ್ರವನ್ನು ಪೊರೆದಿರುವುದು. ತಾಂತ್ರಿಕವಾಗಿ ಅಥವಾ ಕಥನದ ಕಟ್ಟುವಿಕೆಯಲ್ಲಿ ‘ಒಂದಲ್ಲಾ ಎರಡಲ್ಲಾ’ ಚಿತ್ರದ ಬಗ್ಗೆ ತಕರಾರುಗಳನ್ನು ವ್ಯಕ್ತಪಡಿಸಬಹುದು. ಆದರೆ, ಆಶಯದ ಬಗ್ಗೆ ಅನುಮಾನ ವ್ಯಕ್ತಪಡಿಸುವುದು ಪಠ್ಯದ ಅತಿ ಓದುವಿಕೆಯೇ ಸರಿ.

ಕಾಸರಗೋಡು ಶಾಲೆ ಹಾಗೂ ಸಮೀರನ ಕಥೆಯ ಚಿತ್ರಗಳನ್ನು ಒಟ್ಟಿಗೆ ನೋಡಲಿಕ್ಕೆ ಕಾರಣ – ಈ ಎರಡು ಸಿನಿಮಾಗಳು ಇಂದಿನ ನಮ್ಮ ಯೋಚನಾ ವಿಧಾನಗಳನ್ನೂ ಆದ್ಯತೆಗಳನ್ನೂ ಪ್ರತಿನಿಧಿಸುವಂತಿರುವುದು. ಎಡ–ಬಲಗಳಿಗೆ ಹೊರತಾದುದು ಯಾವುದೂ ಇಲ್ಲ ಎನ್ನುವ ಅತಿರೇಕಗಳಲ್ಲಿ ಅಪ್ಪಟ ಮಾನವೀಯ ಸನ್ನಿವೇಶಗಳು ಕೂಡ ನಮ್ಮ ಕಣ್ಣಿಗೆ ಯಾವುದೋ ಒಂದು ರಂಗು ಬಳಿದುಕೊಂಡು ಕಾಣಿಸುತ್ತಿವೆ. ಇನ್ನೊಂದು ಕಡೆ, ವಾಸ್ತವದ ಕಹಿಸತ್ಯಗಳಿಗಿಂತಲೂ ಕ್ಷಣಕ ವಿನೋದಗಳೇ ಮೇಲುಗೈ ಪಡೆಯುತ್ತಿವೆ. ಕನ್ನಡ ಶಾಲೆಯ ದುರಂತದ ಕಥೆಯನ್ನು ನಗುನಗುತ್ತಾ ನೋಡುತ್ತೇವೆ. ಮಾನವೀಯ ಅಂತಃಕರಣದ ಕಥನದಲ್ಲಿ ರಾಜಕಾರಣವನ್ನು ಕಾಣುತ್ತೇವೆ. ‘ಸಗ್ಗದ ಸಿರಿ’ಗಿಂತಲೂ ‘ರಿಂಗ ರಿಂಗ’ ಆಕರ್ಷಕವೆನ್ನಿಸುತ್ತದೆ.

ನಮ್ಮ ಸಿನಿಮಾ ಗೆದ್ದಿದೆ ಎಂದು ‘ಕಾಸರಗೋಡು ಶಾಲೆ’ಯ ಬಳಗ ಹೇಳಿಕೊಂಡಿದೆ. ‘ನಮ್ಮ ಸಿನಿಮಾವನ್ನು ಜನರಿಗೆ ತಲುಪಿಸಲು ಹೋರಾಡುತ್ತಿದ್ದೇವೆ’ ಎನ್ನುವ ಅರ್ಥದ ಸತ್ಯಪ್ರಕಾಶ್‌ರ ಮಾತಿನಲ್ಲಿ ಸಂಭ್ರಮ ಕಾಣಿಸುತ್ತಿಲ್ಲ. ಹೇಗಾದರೂ ಇರಲಿ, ಕನ್ನಡ ಚಿತ್ರವೊಂದು ಗೆಲುವು ಸಾಧಿಸಿತಲ್ಲ ಎಂದು ಸಮಾಧಾನಪಡುವಂತೆಯೂ ಇಲ್ಲ. ಗೆಲುವಿನ ಲಹರಿಯಲ್ಲಿರುವ ‘ಶಾಲೆ’ಯನ್ನು ‘ಕಮಾಂಡೊ’ ಚಿತ್ರದ ಜೊತೆಗಿಟ್ಟು ನೋಡಬೇಕು. ಚಿತ್ರಮಂದಿರಗಳನ್ನು ವಿದ್ಯಾರ್ಥಿಗಳೆಂದು ಭಾವಿಸುವುದಾದರೆ, ‘ಕಮಾಂಡೊ’ದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಣ್ಣಿಗೆ ಕುಕ್ಕುವಂತಿದ್ದರೆ, ‘ಶಾಲೆ’ಯಲ್ಲಿನ ಹಾಜರಾತಿ ವಿರಳವಾಗಿದೆ. ‘ಕಮಾಂಡೊ’ ತಮಿಳಿನಿಂದ ಕನ್ನಡಕ್ಕೆ ಬಂದಿರುವ ಡಬ್ಬಿಂಗ್‌ ಚಿತ್ರ. ಹೆಚ್ಚು ಚಿತ್ರಮಂದಿರಗಳಲ್ಲಿ ಅಬ್ಬರದ ಪ್ರಚಾರದೊಂದಿಗೆ ತೆರೆಕಂಡಿರುವ ಮೊದಲ ಡಬ್ಬಿಂಗ್‌ ಸಿನಿಮಾ ಇದು. ‘ಬೇಟೆಯ ಬೆನ್ನತ್ತಿ’ ಎನ್ನುವುದು ಸಿನಿಮಾ ಶೀರ್ಷಿಕೆಯ ಅಡಿಟಿಪ್ಪಣಿ. ಈ ಟಿಪ್ಪಣಿ ಕನ್ನಡ ಚಿತ್ರೋದ್ಯಮದ ನಾಳೆಗಳನ್ನು ಸೂಚಿಸುವಂತಿದೆಯೇ?

[object Object]

ಪ್ರಾರ್ಥನೆ’ ಚಿತ್ರದಲ್ಲಿ ಅನಂತನಾಗ್‌, ಸುಧಾ ಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT