ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಸಾಲೆ: ಪ್ರೀತಿ–ಕೃತಜ್ಞತೆಯ ಮರು ಸಂದಾಯ

ಸಿನಿಮಾಮಂದಿಗೆ ಇರಬೇಕಾದ ಸಾಮಾಜಿಕ ಜವಾಬ್ದಾರಿಗೆ ನಿದರ್ಶನದಂತಿದೆ ಪುನೀತ್‌ರ ‘ಗಂಧದಗುಡಿ’
Last Updated 4 ನವೆಂಬರ್ 2022, 19:45 IST
ಅಕ್ಷರ ಗಾತ್ರ

‘ಜಾತ್ರೆಗೆ ಬಂದವರು ಜಾತ್ರೆ ಮುಗಿಸಿ ಹೊರಡುವಾಗ, ತಾವು ನಲಿದು, ಉಂಡು ಹೋದ ನೆಲದ ಮೇಲೆ ಎಲ್ಲೆಲ್ಲೂ ತಮ್ಮ ಉಚ್ಛಿಷ್ಟವನ್ನು ಚೆಲ್ಲಿ ಹೋದರೆ ಹೇಗಾ ದೀತು? ನಾವೇ ಅಲ್ಲಿಗೆ ತಿರುಗಿ ಬಾರದಿದ್ದರೇನಾಯಿತು? ಅಲ್ಲಿಗೆ ಬರುವ ನಮ್ಮ ಮಕ್ಕಳು ಏನಂದುಕೊಂಡಾರು? ಅಷ್ಟನ್ನಾದರೂ ಯೋಚಿಸುವ ಬುದ್ಧಿ ಈ ದೇಶವನ್ನು ನಡೆಸುವ ಹಿರಿಯರಿಗೆ ಇಲ್ಲದೆ ಹೋದರೆ ಹೇಗೆ?’ – ಶಿವರಾಮ ಕಾರಂತರು ತಮ್ಮ ‘ಹುಚ್ಚು ಮನಸಿನ ಹತ್ತು ಮುಖಗಳು’ ಆತ್ಮಕಥೆಯ ಮುನ್ನುಡಿಯಲ್ಲಿ ಎತ್ತುವ ಪ್ರಶ್ನೆಗಳಿವು. ಈ ಪ್ರಶ್ನೆಗಳನ್ನು ತಮಗೆ ತಾವೇ ಕೇಳಿ ಕೊಂಡಂತೆ– ‘ನಾವು ಭೂಮಿಗೆ ಬಂದ ದಿನ ನಮ್ಮ ಸುತ್ತಣ ಬದುಕು ಇದ್ದುದಕ್ಕಿಂತ ಒಂದಿಷ್ಟು ಹೆಚ್ಚು ಚಂದ ವಾಗುವಂತೆ ಮಾಡಿ ಇಲ್ಲಿಂದ ಹೊರಡಬೇಕು ಎಂಬ ಭಾವನೆ ನನ್ನ ಬದುಕನ್ನು ನಡೆಸಿದ ಸೂತ್ರ’ ಎನ್ನುತ್ತಾರೆ. ಬದುಕಿನ ಕುರಿತ ಈ ಪ್ರಾಂಜಲ ತಿಳಿವಳಿಕೆಯೇ ಪುನೀತ್‌ ರಾಜ್‌ಕುಮಾರ್‌ ಅವರ ‘ಗಂಧದಗುಡಿ’ ಡಾಕ್ಯುಡ್ರಾಮಾವನ್ನೂ ರೂಪಿಸಿದಂತಿದೆ.

ಕಲಾವಿದನೊಬ್ಬ ತನ್ನನ್ನು ಜನ ಯಾವ ರೀತಿ ನೆನಪಿಸಿಕೊಳ್ಳಬೇಕು ಎಂದು ಯೋಚಿಸಿ, ತನಗೆ ತಾನೇ ರೂಪಿಸಿಕೊಂಡ ‘ದೃಶ್ಯ ಶ್ರದ್ಧಾಂಜಲಿ’ ರೂಪದಲ್ಲಿದೆ ಈ ‘ಗಂಧದಗುಡಿ’. ಪುನೀತ್‌ರ ಕೊನೆಯ ಸಿನಿಮಾ ಇದಕ್ಕಿಂತ ಅತ್ಯುತ್ತಮವಾದುದಾಗಿರಲು ಸಾಧ್ಯವಿಲ್ಲ ಎನ್ನುವಂತಿದೆ ಈ ಡಾಕ್ಯುಡ್ರಾಮಾ. ಸಿನಿಮಾ ಮತ್ತು ಸಾಕ್ಷ್ಯಚಿತ್ರದ ನಡುವಣ ವ್ಯತ್ಯಾಸ ತೆಳುವಾಗಿರುವ ದಿನ ಗಳಲ್ಲಿ ‘ಗಂಧದಗುಡಿ’ಯನ್ನು ಸಿನಿಮಾದಂತೆಯೇ ನೋಡಬಹುದು. ಈ ಸಿನಿಮಾಕ್ಕೆ ಪುನೀತ್‌ರ ಸಾವಿನ ಭಾವುಕ ಆವರಣ ಇರುವಂತೆಯೇ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮಹತ್ವವೂ ಇದೆ. ಕಥೆಯ ಶೀರ್ಷಿಕೆ ಮತ್ತು ಕಥನದಲ್ಲಿನ ಪರಿಮಳವನ್ನು ಕಥಾನಾಯಕನ
ವ್ಯಕ್ತಿತ್ವಕ್ಕೆ ಸಂಬಂಧಿಸಿದಂತೆಯೂ ಸಹೃದಯರ
ಅನುಭವಕ್ಕೆ ತರುವಲ್ಲಿ ‘ಗಂಧದಗುಡಿ’ಯ ಯಶಸ್ಸಿದೆ.

ನೆಲದ ಮೇಲೆ ತಮ್ಮ ಉಚ್ಛಿಷ್ಟವನ್ನು ಚೆಲ್ಲಿ ನಾಳೆಯ ಪೀಳಿಗೆಯ ಬದುಕನ್ನು ಹೈರಾಣಾಗಿಸಬಾರದೆನ್ನುವ ಜನಪದರ ತಿಳಿವಳಿಕೆಯನ್ನೇ ‘ಗಂಧದಗುಡಿ’ ಇಂದಿನ ತಲೆಮಾರಿಗೆ ಮನದಟ್ಟು ಮಾಡಿಸುವ ಪ್ರಯತ್ನದಂತಿದೆ. ವ್ಯಾಪಾರಿ ಚಿತ್ರಗಳ ನಾಯಕನೊಬ್ಬನ ಈ ನಡವಳಿಕೆ, ಸಿನಿಮಾಮಂದಿಗೆ ಇರಬೇಕಾದ ಸಾಮಾಜಿಕ ಜವಾಬ್ದಾರಿಗೆ ಉದಾಹರಣೆಯಂತಿದೆ.

ನಾಗರಹೊಳೆ, ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ, ನೇತ್ರಾಣಿ, ಕಾಳಿ ನದಿ, ಹಂಪಿಯ ಬೆಟ್ಟಸಾಲು ಮತ್ತು ತುಂಗಭದ್ರಾ, ಕರಡಿಧಾಮದ ಕುರುಚಲು ಕಾಡು– ಇವೆಲ್ಲವೂ ಪ್ರಾಕೃತಿಕ ವಾಗಿ ಕರ್ನಾಟಕದ ಬಹುತ್ವವನ್ನು ಸೂಚಿಸುತ್ತವೆ. ಆನೆ, ಹುಲಿ, ಕರಡಿ, ಕಪ್ಪೆ, ಮಂಗ, ಕಾಳಿಂಗ, ಜಲಚರಗಳನ್ನೊಳಗೊಂಡ ಜೀವವೈವಿಧ್ಯವೂ ಬಹುತ್ವದ ಸ್ವರೂಪವೇ ಆಗಿದೆ. ಸಾಮಾಜಿಕ ಬಹುತ್ವದ ಮತ್ತೊಂದು ಆಯಾಮವೂ ಸಿನಿಮಾದಲ್ಲಿದೆ. ಕಾಡಿನ ದೇವತೆ ಮಾಸ್ತಮ್ಮ, ಸೋಲಿಗ ಸಮುದಾಯದ ಅರಣ್ಯ ರಕ್ಷಕರು, ಕಾಡಿನ ನಡುವಿನ ಶಾಲಾ ಮಕ್ಕಳು, ತಾವು ಜತನಗೊಳಿಸಿದ ಕುರಿಗಳನ್ನು ಹೊತ್ತೊಯ್ಯುವ ತೋಳಗಳನ್ನು ಬಂಧುಗಳೆಂದು ಕಾಣುವ ಕುರಿಗಾಹಿಗಳು– ಇವರೆಲ್ಲ ಕನ್ನಡನಾಡಿನ ಬಹುತ್ವದ ಪ್ರತಿನಿಧಿಗಳಾಗಿ ಸಿನಿಮಾದ ಚೆಲುವು ಹೆಚ್ಚಿಸಿದ್ದಾರೆ. ಸಿನಿಮಾದ ಕೊನೆಯಲ್ಲಿ ಅನುರಣಗೊಳ್ಳುವ ‘ವಿಶ್ವಮಾನವ ತತ್ವ’ ಹೇರಿಕೆಯಾಗದೆ, ಹೇಳಿಕೆಯಾಗಿ ಉಳಿಯದೆ, ಚಿತ್ರದ ಆತ್ಮದ ಅಭಿವ್ಯಕ್ತಿಯಷ್ಟು ಸಹಜವಾಗಿದೆ.

ಪರಿಸರ ಹಾಗೂ ಪುನೀತ್‌ ಇಲ್ಲಿ ಬೇರೆ ಬೇರೆಯಾಗಿ ಕಾಣುವುದಿಲ್ಲ. ತಿಳಿಜಲದಂತೆಯೇ ಪುನೀತ್‌ ಕಾಣಿಸು ತ್ತಾರೆ. ಪರಿಸರದ ಬಗೆಗಿನ ಬೆರಗು ಹಾಗೂ ಕಾಳಜಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ತಂತ್ರವಾಗಿ ಕಾಣಿಸದೆ, ಹೃದಯ ಸಂವಾದವಾಗಿದೆ. ಶಾಲಾಮಕ್ಕಳೆದುರು ಹಾಡುವ ‘ಎಲ್ಲಾದರು ಇರು ಎಂತಾದರು ಇರು’ ಗೀತೆ ಎದೆಯಾಳದ ದನಿಯಾಗಿ ಕಾಣಿಸುತ್ತದೆ. ಆನೆಯನ್ನು ಮುಟ್ಟಿದ ಪುಳಕ ವನ್ನು ಅನುಭವಿಸುವಷ್ಟೇ ಸಹಜವಾಗಿ, ಆನೆಯನ್ನು ಪಳಗಿಸುವ ಪ್ರಕ್ರಿಯೆಯಲ್ಲಿನ ಹಿಂಸೆಗೆ ಮರುಗುವ ಜೀವ ಇಲ್ಲಿದೆ. ಕಪಟವಿಲ್ಲದ ನಗು ಎದೆಗೆ ತಾಕುತ್ತದೆ.

‘ಗಂಧದಗುಡಿ’ ಸಿನಿಮಾವೊಂದನ್ನು ಕಾಳಜಿ ಯೊಂದರ ಮುಂದುವರಿಕೆಯ ರೂಪದಲ್ಲೂ ಗುರ್ತಿಸ ಬಹುದು. ವಿಜಯ್‌ ನಿರ್ದೇಶನದ, ರಾಜ್‌ಕುಮಾರ್‌ ಕಥಾನಾಯಕನಾಗಿದ್ದ ‘ಗಂಧದಗುಡಿ’ ತೆರೆಕಂಡದ್ದು 1973ರಲ್ಲಿ. ಆ ಸಿನಿಮಾದ ಎರಡನೇ ಭಾಗ ‘ಗಂಧದ ಗುಡಿ – ಭಾಗ 2’, ವಿಜಯ್‌ ನಿರ್ದೇಶನದಲ್ಲೇ ಶಿವರಾಜ್‌ಕುಮಾರ್‌ ನಾಯಕತ್ವದಲ್ಲಿ 1994ರಲ್ಲಿ ತೆರೆ ಕಂಡಿತ್ತು. ಅಪ್ಪ–ಅಣ್ಣನ ಹಾದಿಯಲ್ಲಿ ಅಪ್ಪು ಕೂಡ ನಡೆದಿದ್ದಾರೆ. ಒಂದೇ ಶೀರ್ಷಿಕೆ ಹಾಗೂ ಕಥನದ ಮೂರು ಸಿನಿಮಾಗಳಲ್ಲಿ ಕುಟುಂಬವೊಂದರ ಮೂವರು ಕಲಾವಿದರು ಕಾಣಿಸಿಕೊಂಡಿರುವ ಏಕೈಕ ಉದಾಹರಣೆ ‘ಗಂಧದಗುಡಿ’. ರಾಜ್‌ ಅವರ ‘ಗಂಧದಗುಡಿ’ ಅರಣ್ಯ ಸಂರಕ್ಷಣೆಯ ಕಥೆಯನ್ನೊಳಗೊಂಡ ಭಾರತದ ಮೊದಲ ಸಿನಿಮಾ. ಅಪ್ಪನ ‘ಗಂಧದಗುಡಿ’ಗೆ ಐವತ್ತು ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ, ಮಗನ ‘ಗಂಧದಗುಡಿ’ ರೂಪುಗೊಂಡಿದೆ. ಕಾಲದ ಓಟದಲ್ಲಿ ಹಳೆಯ ಕಥೆ ತನ್ನ ನಾಟಕೀಯತೆಯನ್ನು ಬಿಟ್ಟುಕೊಟ್ಟು, ವಾಸ್ತವದ ರೂಪ ಪಡೆದುಕೊಂಡಿದೆ.

ಹಳೆಯ ಜನಪ್ರಿಯ ಸಿನಿಮಾಗಳ ಶೀರ್ಷಿಕೆಗಳನ್ನು ವರ್ತಮಾನದಲ್ಲಿ ಬಳಸಿ ರೂಪುಗೊಂಡ ಸಿನಿಮಾಗಳ ಅನೇಕ ಉದಾಹರಣೆಗಳನ್ನು ಕನ್ನಡ ಚಿತ್ರರಂಗ ಕಂಡಿದೆ. ಆದರೆ, ಮೂಲಕೃತಿಯ ಘನತೆಗೆ ಚ್ಯುತಿಬರದಂತೆ ರೂಪುಗೊಂಡ ಉದಾಹರಣೆ ‘ಗಂಧದಗುಡಿ’ ಒಂದೇ. ಅಷ್ಟೇ ಅಲ್ಲ, ಮೂಲಕೃತಿಯ ಘನತೆಯನ್ನು ಮತ್ತಷ್ಟು ಎತ್ತರಕ್ಕೆ ಒಯ್ಯುವ ಪ್ರಯತ್ನದಂತೆಯೂ ಈ ಕಲಾಕೃತಿ ಕಾಣಿಸುತ್ತದೆ. ಅಪ್ಪನನ್ನು ಮಗ ಮೀರಿಸಬೇಕೆಂದು ಭಾರತೀಯ ಕುಟುಂಬ ಪದ್ಧತಿ ಬಯಸುತ್ತದೆ. ‘ಗಂಧದ ಗುಡಿ’ಯ ಮಟ್ಟಿಗೆ ಪುನೀತ್‌ ಹದಿನಾರಾಣೆ ‘ಅಪ್ಪನ ಮಗ.’

‘ಗಂಧದಗುಡಿ’ ಚಿತ್ರವನ್ನು ಪುನೀತ್‌ ಆತ್ಮಕಥನದ ರೂಪದಲ್ಲೂ ನೋಡಬಹುದು. ಪುನೀತ್‌ ಸಿನಿಮಾಯಾನ, ಗಾಜನೂರು, ರಾಜ್‌ಕುಮಾರ್‌, ದೊಡ್ಡಾಲದ ಮರ– ಇವುಗಳೆಲ್ಲ ಆತ್ಮಕಥನದ ತುಣುಕುಗಳಂತೆಯೇ ಇವೆ.

ರಾಜ್‌ಕುಮಾರ್‌ ಅವರ ‘ಗಂಧದಗುಡಿ’ ತೆರೆಕಂಡ ನಂತರದ ಈ ಐವತ್ತು ವರ್ಷಗಳಲ್ಲಿ ಸಿನಿಮಾರಂಗ ಸಾಕಷ್ಟು ಬದಲಾವಣೆ ಕಂಡಿದೆ. ಅರಣ್ಯ ರಕ್ಷಣೆಯ ಕುರಿತ ಕಾಳಜಿಯ ಸಿನಿಮಾ ನಿರ್ಮಾತೃಗಳ ಜಾಗದಲ್ಲೀಗ ಕಾಡಿನ ಲೂಟಿಗಾರರನ್ನು ವೀರನ ಪೋಷಾಕಿನಲ್ಲಿ ಚಿತ್ರಿಸುವ ತಲೆಮಾರನ್ನು ಕಾಣುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ಮನುಷ್ಯನ ಒಳ್ಳೆಯತನದ ಬಗ್ಗೆ ನಂಬಿಕೆ ಮೂಡಿಸುವ ಪ್ರಯತ್ನದಂತೆ ‘ಗಂಧದಗುಡಿ’ ಕಾಣಿಸುತ್ತದೆ. ಇಂಥ ದೊಂದು ಒಳ್ಳೆಯ ಸಿನಿಮಾ ರೂಪುಗೊಳ್ಳುವಲ್ಲಿ ಪುನೀತ್‌ ಅವರಂತೆಯೇ ನಿರ್ದೇಶಕ ಅಮೋಘವರ್ಷ ಅವರಿಗೂ ಮೆಚ್ಚುಗೆ ಸಲ್ಲಬೇಕು. ಪ್ರಕೃತಿಯನ್ನು ಶೋಧಿಸಲು ಹೊರಟ ನಟನ ವ್ಯಕ್ತಿತ್ವದ ಶೋಧ ನಡೆಸುವ ಅವರ ಹಂಬಲ ಸಾಕಷ್ಟು ಪರಿಣಾಮಕಾರಿಯಾಗಿ ಸಿನಿಮಾದಲ್ಲಿ ಕಾಣಿಸುತ್ತದೆ. ಪುನೀತ್‌ ಅನುಪಸ್ಥಿತಿಯಲ್ಲಿ ‘ಗಂಧದಗುಡಿ’ಯನ್ನು ಆಸ್ಥೆಯಿಂದ ತೆರೆಗೆ ತಂದಿರುವ ಅಶ್ವಿನಿ ಅವರೂ ಅಭಿನಂದನಾರ್ಹರು. ಅತಿರೇಕಗಳಿಗೆ ಅವಕಾಶವಿದ್ದರೂ, ಸಿನಿಮಾದ ಘನತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅಶ್ವಿನಿ ಅವರು ಕಿಂಚಿತ್ತೂ ರಾಜಿಯಾಗಿಲ್ಲ.

‘ಗಂಧದಗುಡಿ’ಯ ಕೆಲವು ದೃಶ್ಯಗಳು ಮತ್ತಷ್ಟು ಸೂಕ್ಷ್ಮಗೊಳ್ಳುವ, ಮಾತುಗಳು ಮಾಗಬೇಕಾದ ಸಾಧ್ಯತೆಗಳು ಅಲ್ಲಲ್ಲಿ ಕಾಣಿಸುತ್ತವೆ. ಆದರೆ, ಅವುಗಳು ಸಾಧ್ಯತೆಗಳೇ ಹೊರತು, ಚಿತ್ರದ ಸೌಂದರ್ಯವನ್ನೇನೂ ಮಸುಕಾಗಿಸುವುದಿಲ್ಲ. ತೊಂಬತ್ತು ವರ್ಷಗಳ ಕನ್ನಡ ಸಿನಿಮಾ ಪರಂಪರೆಗೆ ‘ಗಂಧದಗುಡಿ’ ನಿಸ್ಸಂದೇಹವಾಗಿ ಒಂದು ಅಪೂರ್ವ ಸೇರ್ಪಡೆ. ಈ ಸಿನಿಮಾ ಕರ್ನಾಟಕದ ಪರಿಸರ ಹಾಗೂ ಜೀವವೈವಿಧ್ಯದ ಬಗ್ಗೆಯಷ್ಟೇ ಹೆಮ್ಮೆ ಮೂಡಿಸುವುದಿಲ್ಲ, ಕಥಾನಾಯಕನ ಕುರಿತೂ ಹೆಮ್ಮೆ ಮೂಡಿಸುತ್ತದೆ. ಮನುಷ್ಯನ ಒಳ್ಳೆಯತನದ ಬಗ್ಗೆ ಮಾತ ನಾಡುತ್ತದೆ. ಮನುಷ್ಯ ಪ್ರಕೃತಿಯ ಕೂಸೆನ್ನುವುದನ್ನು ಒತ್ತಿಹೇಳುತ್ತದೆ. ‘ಮರಳಿ ಮಣ್ಣಿಗೆ’ ಎನ್ನುವ ಶಾಶ್ವತಸತ್ಯವನ್ನು ನೆನಪಿಸುವ ಕೆಲಸ ಮಾಡುತ್ತದೆ.

ಕನ್ನಡಿಗರ ಪ್ರೀತಿ, ಕಣ್ಣೀರು ಮತ್ತು ಕೃತಜ್ಞತೆಗೆ ಪುನೀತ್‌ ಪಾತ್ರರಾದ ಪ್ರಮಾಣದಲ್ಲಿ, ಮತ್ತೊಬ್ಬ ಭಾಗ್ಯವಂತನನ್ನು ಕರ್ನಾಟಕ ಕಂಡಿರುವುದು ವಿರಳ. ಆ ಪ್ರೀತಿ, ಕಣ್ಣೀರು, ಕೃತಜ್ಞತೆಯನ್ನು ಕಿಂಚಿತ್ತಾದರೂ ಮರಳಿಸಲು ಪುನೀತ್‌ ಪ್ರಯತ್ನಿಸುತ್ತಿದ್ದಾರೇನೋ ಎನ್ನುವ ಭಾವವನ್ನು ‘ಗಂಧದಗುಡಿ’ ಉಂಟುಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT