ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಸಾಲೆ ಅಂಕಣ: ‘ಪ್ರೊಕ್ರೂಸ್ಟೆಸ್ ಮಂಚ’ ನಮಗೆ ಬೇಕೆ?

Published 26 ಅಕ್ಟೋಬರ್ 2023, 23:53 IST
Last Updated 26 ಅಕ್ಟೋಬರ್ 2023, 23:53 IST
ಅಕ್ಷರ ಗಾತ್ರ

ಪ್ರೊಕ್ರೂಸ್ಟೆಸ್ ಎನ್ನುವವನು ಗ್ರೀಕರ ದಂತಕಥೆಯಲ್ಲಿನ ದರೋಡೆಕೋರ. ಕಥೆಯ ಸಾರಾಂಶ ಇಷ್ಟು: ವಶಕ್ಕೆ ಸಿಕ್ಕವರನ್ನು, ತನ್ನ ಬಳಿಯಿದ್ದ ಕಬ್ಬಿಣದ ಮಂಚದ ಮೇಲೆ ಮಲಗಿಸುತ್ತಿದ್ದ ಪ್ರೊಕ್ರೂಸ್ಟೆಸ್, ಉದ್ದವಿದ್ದವರ ದೇಹವನ್ನು ಮಂಚದ ಅಳತೆಗೆ ತಕ್ಕಂತೆ ಕತ್ತರಿಸುತ್ತಿದ್ದ; ಉದ್ದವಿಲ್ಲದವರನ್ನು ಮಂಚದ ಉದ್ದಕ್ಕೆ ಸರಿಯಾಗಿ ಎಳೆದೆಳೆದು ಹಿಗ್ಗಿಸುತ್ತಿದ್ದ. ಎರಡರ ಪರಿಣಾಮವೂ ಒಂದೇ–ಸಾವು! ಈ ಕಥೆಯನ್ನು ‘ಪ್ರೊಕ್ರೂಸ್ಟೆಸ್ ಮಂಚ’ ಹೆಸರಿನ ಈ ಕವಿತೆ (ಎಸ್. ದಿವಾಕರ್‌, ‘ವಿಧಾನಸಭೆಯಲ್ಲೊಂದು ಹಕ್ಕಿ’ ಸಂಕಲನ), ‘ಜನನಾಯಕರಿಗೆಲ್ಲ ಅವನೇ ಮಾದರಿ’ ಎನ್ನುತ್ತ, ‘ಎಲ್ಲರನ್ನೂ ಒಂದೇ ವಿಚಾರಕ್ಕೆ ಒಗ್ಗಿಸುವ/ ಬಡಿದು ಕಡಿದು ಒಂದೇ ಪ್ರಮಾಣಕ್ಕೆ ಬಗ್ಗಿಸುವ/ ಪ್ರೊಕ್ರೂಸ್ಟೆಸ್ ಮಂಚ, ಎಂಥ ಸತ್ಪರಿಮಾಣ/ ಮನುಷ್ಯನಾಗುವುದಕ್ಕೆ ಪರಿಪೂರ್ಣ’ ಎಂದು ವ್ಯಂಗ್ಯವಾಡುತ್ತ, ‘ಇದ್ದರೆಷ್ಟು ಚೆನ್ನ ಎಲ್ಲರೂ ಒಂದೇ ರೀತಿ/ ಅದಕ್ಕೆ ಬೇಕೇಬೇಕು ಹಲವರ ಆಹುತಿ’ ಎಂದು ಕೊನೆಗೊಳ್ಳುತ್ತದೆ.

ಇಡೀ ಸಮಾಜವನ್ನು ಏಕರೂಪದ ಅಚ್ಚಿನಲ್ಲಿ ಕಾಣಬಯಸುವ ರಾಜಕಾರಣಿಗಳ ಮನಃಸ್ಥಿತಿ ‘ಪ್ರೊಕ್ರೂಸ್ಟೆಸ್ ಮಂಚ’ಕ್ಕೆ ತಕ್ಕಂತೆಯೇ ಇದೆ. ‘ಸಮಾಜಕ್ಕೆ ಅಂಟಿಕೊಂಡಿರುವ ಜಾತೀಯತೆ ಮತ್ತು ಪ್ರಾದೇಶಿಕತೆಯನ್ನು ಬೇರು ಸಮೇತ ಕಿತ್ತೆಸೆಯಿರಿ’ ಎಂದು ದಸರೆಯ ಸಂದರ್ಭದಲ್ಲಿ ದೇಶವಾಸಿಗಳಿಗೆ ಪ್ರಧಾನಮಂತ್ರಿ ನೀಡಿರುವ ಕರೆ ‘ಪ್ರೊಕ್ರೂಸ್ಟೆಸ್ ಮಂಚ’ದ ಕಥೆಯನ್ನು ನೆನಪಿಸುವಂತಿದೆ ಎಂದು ಹೇಳುವುದು ಒರಟಾದರೂ ಅತಿರೇಕವಾದರೂ, ಅಂಥ ಮಾತುಗಳನ್ನು ಕಾರ್ಯರೂಪಕ್ಕೆ ತರಲು ಹೊರಟ ಚರಿತ್ರೆಯಲ್ಲಿನ ಪ್ರಯತ್ನ
ಗಳೆಲ್ಲ ತಲುಪಿರುವುದು ಮರಣಮಂಚವನ್ನೇ.

ಭಾರತವನ್ನು ವಿಭಜಿಸುತ್ತಿರುವ ದುಷ್ಟಶಕ್ತಿಗಳ ರೂಪದಲ್ಲಿ ಈ ಎರಡನ್ನೂ ಗುರುತಿಸಿರುವ ಪ್ರಧಾನಿ, ದೇಶದ ಹಿತಕ್ಕಾಗಿ ಅವುಗಳ ನಾಶ ಅಗತ್ಯವೆಂದು ಹೇಳಿದ್ದಾರೆ. ಜಾತೀಯತೆ ದೇಶದ ಹಿತಕ್ಕೆ ಮಾರಕ ಎನ್ನುವುದರಲ್ಲಿ ಅನುಮಾನ ಇರಬೇಕಿಲ್ಲ. ಸಮಸ್ಯೆ ಇರುವುದು, ಪ್ರಾದೇಶಿಕತೆಯನ್ನು ದೇಶದ ವಿಭಜಕವನ್ನಾಗಿ ಭಾವಿಸುವುದರಲ್ಲಿ. ಪ್ರಾದೇಶಿಕತೆಯನ್ನು ಮಾರಕ ಎನ್ನುವುದಾದರೆ, ಗಣತಂತ್ರ ವ್ಯವಸ್ಥೆ ಹಾಗೂ ಗಣರಾಜ್ಯೋತ್ಸವ ಅರ್ಥಹೀನವಾಗುತ್ತವೆ; ‘ಪ್ರಜಾಪ್ರಭುತ್ವ ಭಾರತ’ದ ಚೆಲುವು ಹಾಗೂ ಶಕ್ತಿ ಇರುವುದೇ ಅದರ ಬಹುತ್ವದಲ್ಲಿ ಎನ್ನುವ ನಂಬಿಕೆ ಬುಡಮೇಲಾಗುತ್ತದೆ. ಬಹುತ್ವ ಮತ್ತು ಪ್ರಾದೇಶಿಕತೆ ಬೇರೆಯಲ್ಲವಷ್ಟೆ. ಈ ಪ್ರಾದೇಶಿಕ ವೈವಿಧ್ಯವನ್ನು ಗೌರವಿಸುತ್ತ, ಬಹುತ್ವವನ್ನು ಸಾಧಿಸುವುದು ಸಂವಿಧಾನದ ಆಶಯ. ವಾಸ್ತವ ಹೀಗಿರುವಾಗ, ಪ್ರಾದೇಶಿಕತೆಯನ್ನು ನಿರಾಕರಿಸುವುದು ಸಂವಿಧಾನದ ನಿರಾಕರಣೆಯಲ್ಲವೆಂದು ಹೇಳಲಾದೀತೆ?

ಪ್ರಾದೇಶಿಕತೆಯನ್ನು ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಬಿಂಬಿಸುವ ಪ್ರಯತ್ನವು ಇದು ಮೊದಲೇನೂ ಅಲ್ಲ.
ಪ್ರಾದೇಶಿಕತೆಯನ್ನು ದೇಶದ ಅಭಿವೃದ್ಧಿಗೆ ಮಾರಕವೆಂದು ಬಿಂಬಿಸುವವರು, ಪರ್ಯಾಯವಾಗಿ ‘ರಾಷ್ಟ್ರೀಯತೆ’ ಪರಿಕಲ್ಪನೆಯನ್ನು ಮುಂದಿಡುತ್ತಾರೆ. ‘ನಾವೆಲ್ಲ ಒಂದು’ ಎನ್ನುವ ಭಾವನೆ ಹಾಗೂ ‘ದೇಶದ ಹಿತಾಸಕ್ತಿಯೇ ಎಲ್ಲಕ್ಕೂ ಮೊದಲು’ ಎನ್ನುವುದು ಈ ರಾಷ್ಟ್ರೀಯತೆಯ ತಿರುಳು. ಹೀಗೆ, ದೇಶಭಕ್ತಿಯ ರೂಪದಲ್ಲಿ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವವರು ಉದ್ದೇಶಪೂರ್ವಕವಾಗಿ ಮರೆಯುವುದು, ಪ್ರಾದೇಶಿಕತೆ ದೇಶದ ಹಿತಾಸಕ್ತಿಗೆ ವಿರುದ್ಧವಾಗಿಲ್ಲ ಎನ್ನುವುದನ್ನು. ಪ್ರಾದೇಶಿಕ ಹಿತಾಸಕ್ತಿಯ ಕಾಳಜಿ ದೇಶದ ಹಿತಕ್ಕೆ ಅಪಾಯಕಾರಿ ಎಂದು ಭಾವಿಸುವುದು ವಿತಂಡವಾದವೇ ಹೊರತು, ಜನಪರವೂ ಅಲ್ಲ, ಮಾನವೀಯತೆಯೂ ಅಲ್ಲ. ಜನಸಮೂಹವೇ ದೇಶವಾಗಿರುವಾಗ ಹಾಗೂ ಆ ಸಮೂಹವು ವೈವಿಧ್ಯದಿಂದ ಕೂಡಿರುವಾಗ, ಅವರೆಲ್ಲರ ಹಿತಾಸಕ್ತಿ ದೇಶದ ಹಿತಾಸಕ್ತಿಯೂ ಆಗಿರುತ್ತದೆ. ಪ್ರಾದೇಶಿಕತೆಯನ್ನು ಒಳಗೊಳ್ಳದ ರಾಷ್ಟ್ರೀಯತೆ ಸರ್ವಾಧಿಕಾರಕ್ಕೆ ಎಡೆ ಮಾಡಿಕೊಡುತ್ತದೆ; ವೈವಿಧ್ಯಕ್ಕೆ ಕುರುಡಾದ ರಾಷ್ಟ್ರೀಯತೆ ಜಡವಾಗುತ್ತದೆ, ಕೆಲವೊಮ್ಮೆ ಜೀವವಿರೋಧಿಯೂ ಆಗುತ್ತದೆ ಎನ್ನುವುದಕ್ಕೆ ಚರಿತ್ರೆಯಲ್ಲಿರುವ ಉದಾಹರಣೆಗಳಿಗೆ ಕುರುಡಾಗಬಾರದು.

ಪ್ರಾದೇಶಿಕತೆಯ ಬಗ್ಗೆ ಕಿಸುರುಗಣ್ಣಾಗಿರುವ ರಾಜಕೀಯ ಪಕ್ಷಗಳು ಪ್ರತಿಪಾದಿಸುತ್ತಿರುವ ರಾಷ್ಟ್ರೀಯತೆಯ ಚಹರೆಗಳನ್ನು ಗಮನಿಸಿದರೆ, ಅವರ ವಾದದ ಹಿಂದಿನ ಅಸಲಿಯತ್ತು ಸ್ಪಷ್ಟವಾಗುತ್ತದೆ. ಒಂದು ದೇಶ, ಒಂದು ಧರ್ಮ, ಒಂದು ಭಾಷೆ ಎನ್ನುವುದು ಈಗಿನ ‘ರಾಷ್ಟ್ರೀಯತೆ’ಯ ಹೂರಣ. ಕರ್ನಾಟಕದಲ್ಲಿನ ರಾಷ್ಟ್ರೀಯತೆಯ ವಕ್ತಾರರ ನಡವಳಿಕೆಯನ್ನೇ ಗಮನಿಸಿ. ಇನ್ನೊಂದು ಧರ್ಮವನ್ನು ವಿರೋಧಿಸುವುದರಲ್ಲಿ ತಮ್ಮ ರಾಜಕೀಯ ಅಸ್ತಿತ್ವವಿದೆಯೆಂದು ಅವರು ನಂಬಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ‘ಹಿಂದಿಪುಂಗಿ’ ಊದುತ್ತಾರೆ. ಧರ್ಮದ ವಿಷಯ ಬಂದಾಗ ನರ ಹರಿದುಹೋಗುವ ರೀತಿಯಲ್ಲಿ ಬೊಬ್ಬಿರಿಯುವವರು, ನೆಲ–ಜಲದ ಸಂಕಟಗಳು
ಎದುರಾದ ಸಂದರ್ಭಗಳಲ್ಲಿ, ತಮ್ಮ ‘ಜೀ’ಗಳಿಗೆ ಇರುಸುಮುರುಸಾದೀತೆಂಬ ಕಾಳಜಿಯಿಂದ ನಾಲಿಗೆ ಬಿದ್ದು
ಹೋದವರಂತೆ ವರ್ತಿಸುತ್ತಾರೆ. ಇದೇನಾ ರಾಷ್ಟ್ರೀಯತೆ?

ಪ್ರಾದೇಶಿಕತೆಯನ್ನು ಅಪಾಯಕಾರಿಯೆಂದು ಬಿಂಬಿಸುತ್ತ, ‘ರಾಷ್ಟ್ರೀಯತೆ’ಯನ್ನು ಮುಂದಿಡುತ್ತಿರುವ
ವರಿಗೆ ಎರಡು ಅನುಕೂಲಗಳಿವೆ. ವರ್ತಮಾನದ ಸಂಕಟಗಳನ್ನು ಮರೆಮಾಚುವುದು ಅಥವಾ ಆ ಸಂಕಟಗಳು ಅಷ್ಟೇನೂ ತೀವ್ರವಾದವುಗಳಲ್ಲ ಎಂದು ಜನರನ್ನು ನಂಬಿಸುವುದಕ್ಕೆ ರಾಷ್ಟ್ರೀಯತೆಯನ್ನು ಬಳಸುವುದು ಮೊದಲಅನುಕೂಲ. ಉದಾಹರಣೆಯ ಮೂಲಕ ಹೇಳುವುದಾದರೆ, ಜಾಗತಿಕ ಹಸಿವಿನ ಸೂಚ್ಯಂಕ ಬೆಟ್ಟು ಮಾಡಿ ತೋರಿಸುತ್ತಿರುವ ಹಸಿವೆ ಹಾಗೂ ಅಪೌಷ್ಟಿಕತೆ ಈ ನೆಲದ ವಾಸ್ತವಗಳಾದರೆ, ಅವುಗಳನ್ನು ನಿರಾಕರಿಸುವುದು ಈ ಹೊತ್ತಿನ ರಾಷ್ಟ್ರೀಯತೆಯ ಲಕ್ಷಣ. ಸಮುದಾಯಗಳ ನಡುವಿನ ತಿಕ್ಕಾಟದಿಂದ ಮಣಿಪುರ ಗಾಯಗೊಂಡಿರುವುದು ಪ್ರಾದೇಶಿಕ ಕಟುವಾಸ್ತವವಾದರೆ, ರಾಷ್ಟ್ರೀಯತೆಯ ಪ್ರತಿಪಾದಕರಿಗೆ ಈ ಬಿಕ್ಕಟ್ಟು ನಗಣ್ಯವಾಗುತ್ತದೆ ಹಾಗೂ ಇಸ್ರೇಲ್ ಸಮಸ್ಯೆ ಅವರಿಗೆ ಸಂಕಟ ತರುತ್ತದೆ. ಇಸ್ರೇಲ್‌ನಿಂದ ತತ್ತರಿಸಿದ ಪ್ಯಾಲೆಸ್ಟೀನಿಯನ್ನರ ಸಂಕಟ ಅರಣ್ಯರೋದನವಾಗಿಯಷ್ಟೇ ಕಾಣಿಸುತ್ತದೆ.

ಚುನಾವಣಾ ಲಾಭ ರಾಷ್ಟ್ರೀಯತೆಯ ಪ್ರತಿಪಾದಕರಿಗಿರುವ ಎರಡನೇ ಅನುಕೂಲ. ಪ್ರಾದೇಶಿಕ ಆಗು
ಹೋಗು ಚುನಾವಣೆ ವಿಷಯವಾಗುವುದನ್ನು ತಪ್ಪಿಸಲುರಾಷ್ಟ್ರೀಯತೆಯನ್ನು ಬಳಸಿಕೊಳ್ಳಲಾಗುತ್ತಿದೆ. ಈ ಅನುಕೂಲಗಳ ಸಾಧ್ಯತೆಗಳನ್ನು ಪಕ್ಕಕ್ಕಿಟ್ಟು, ‘ಪ್ರಾದೇಶಿಕತೆಯನ್ನು ನಾಶ ಮಾಡಿ’ ಎನ್ನುವ ಪ್ರಧಾನಿಯವರ ಮಾತಿನ ಪ್ರಾಮಾಣಿಕತೆಯನ್ನು ಪರಿಶೀಲಿಸಿದರೆ, ಅಲ್ಲಿ ಮಾತಿಗೂ ಕೃತಿಗೂ ತಾಳಮೇಳಕ್ಕಿಂತಲೂಬೂಟಾ
ಟಿಕೆಯೇ ಎದ್ದುಕಾಣಿಸುತ್ತದೆ. ದೇಶದ ಹಿತಾಸಕ್ತಿಗೆ ಕುತ್ತೆಂದು ಪ್ರಧಾನಿ ಪ್ರತಿಪಾದಿಸಿರುವ ವಂಶ
ಪಾರಂಪರ್ಯ, ಜಾತೀಯತೆ, ಪ್ರಾದೇಶಿಕತೆಯ ಮೂರ್ತರೂಪವಾದ ಪಕ್ಷದೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಕೈಕುಲುಕಲು ರಾಷ್ಟ್ರೀಯತೆ ಪ್ರತಿಪಾದನೆಯ ಪಕ್ಷ ಸಿದ್ಧವಾಗಿರುವುದು ಏನನ್ನು ಸೂಚಿಸುತ್ತದೆ? ಧರ್ಮವನ್ನೇ ಒಂದು ಜಾತಿಯನ್ನಾಗಿ ಬಳಸಿಕೊಳ್ಳುತ್ತಿರುವವರು, ಜಾತಿ
ನಿರ್ಮೂಲನದ ಮಾತನಾಡುವುದು ದೊಡ್ಡ ಚೋದ್ಯ.

ಜನಪರವಾಗಿರುವ ಯಾವುದೇ ರಾಜಕೀಯ ಸಂಘಟನೆ ತನ್ನನ್ನು ‘ರಾಷ್ಟ್ರೀಯ ಪಕ್ಷ’ವೆಂದು ಗುರುತಿಸಿ
ಕೊಳ್ಳುವುದು ತಪ್ಪಲ್ಲವಾದರೂ, ಪ್ರಾದೇಶಿಕವಾಗಿ ಸ್ಥಳೀಯ ಆವೃತ್ತಿಗಳನ್ನು ಹೊಂದದೇ ಹೋದರೆ, ಅದರ ಸಾಮಾಜಿಕ ಕಾಳಜಿ ಪ್ರಶ್ನಾರ್ಹ. ರಾಷ್ಟ್ರೀಯತೆ ಹಾಗೂ ಪ್ರಾದೇಶಿಕತೆ ವಿರೋಧಿಗಳಲ್ಲ ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆ, ಕರ್ನಾಟಕದ ನಾಡಗೀತೆ. ಕುವೆಂಪು ಅವರ ‘ಜಯಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಎನ್ನುವ ನುಡಿವಿವೇಕದಲ್ಲಿ ನಾಡಿನ ಹಿತವೂ ದೇಶದ ಹಿರಿಮೆಯೂ ಇದೆ.

ಜನಪರತೆಯ ಚೌಕಟ್ಟಿನಲ್ಲಿ ಇರುವವರೆಗೂ ಯಾವುದೇ ಸಿದ್ಧಾಂತ ಸಮಾಜಮುಖಿಯಾಗಿರುತ್ತದೆ.
ಅದು, ಸ್ವಾರ್ಥ ರಾಜಕಾರಣದ ಭಾಗವಾದಾಗ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಇದಕ್ಕೆ ಪ್ರಾದೇಶಿಕತೆಯೂ ಹೊರತಲ್ಲ. ಹಾಗೆಂದು, ಪ್ರಾದೇಶಿಕತೆಯ ಅತಿರೇಕಗಳಿಗೆ ಪ್ರಧಾನಿಯೂ ಸೇರಿದಂತೆ ಈಗಿನ ರಾಜಕಾರಣಿಗಳು ಪ್ರತಿಪಾದಿಸುವ ರಾಷ್ಟ್ರೀಯತೆ ಉತ್ತರವಲ್ಲ.

ಕನ್ನಡನಾಡಿಗೆ ಕರ್ನಾಟಕವೆಂದು ನಾಮಕರಣವಾದ ಸಂದರ್ಭಕ್ಕೆ ಐವತ್ತು ವರ್ಷಗಳು ತುಂಬಲು ವಾರವಷ್ಟೇ ಉಳಿದಿರುವ ಸಂದರ್ಭದಲ್ಲಿ, ಪ್ರಧಾನಮಂತ್ರಿ ಪ್ರಾದೇಶಿಕತೆಯನ್ನು ದುಷ್ಟಶಕ್ತಿ ಎಂದಿದ್ದಾರೆ. ಪ್ರಾದೇಶಿಕ ಅಸ್ಮಿತೆಯ ಚಾರಿತ್ರಿಕ ಸಂಭ್ರಮವನ್ನು ಆಚರಿಸಲು ನಾಡು ಸಜ್ಜಾಗಿರುವ ಹೊತ್ತಿನಲ್ಲಿ, ನಾಡಿಗರಿಗೆ ನೀಡಿರುವ ಸಂದೇಶದ ರೂಪದಲ್ಲಿ ಪ್ರಧಾನಿಯ ಮಾತನ್ನು ನೋಡಬೇಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT