ಭಾನುವಾರ, ನವೆಂಬರ್ 29, 2020
25 °C
ಜನಜೀವನವನ್ನು ಭ್ರಷ್ಟಗೊಳಿಸಿರುವ, ಸಂವೇದನೆಯನ್ನು ನಷ್ಟಗೊಳಿಸಿರುವ ರಾಜಕಾರಣ

ರಘುನಾಥ ಚ.ಹ ಬರಹ: ಬೆರಳ ತುದಿಯಲ್ಲಿ ಅಳಿವ ದುಃಖವೇ...

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

ಉತ್ತರಪ್ರದೇಶದ ಹಾಥರಸ್ ಜಿಲ್ಲೆಯ ಹೆಣ್ಣುಮಗಳೊಬ್ಬಳು, ಕೈಕಾಲು ಹಾಗೂ ಬೆನ್ನುಮೂಳೆ ಮುರಿಸಿಕೊಂಡು ಆಸ್ಪತ್ರೆ ಸೇರಿ‌ ಹೆಣವಾದುದು ಹಲವರನ್ನು ಕಣ್ಣೀರಾಗಿಸಿತು. ಅದು, ನಾಗರಿಕ ಸಮಾಜದಲ್ಲಿ ವ್ಯಕ್ತವಾಗುವ ಸಹಜ ಸ್ಪಂದನ. ಮೃತಳ ತುಂಡಾದ ನಾಲಗೆಯ ತೊದಲುವಿಕೆಗಿಂತಲೂ ಅಧಿಕಾರಶಾಹಿಯ ವರ್ತನೆಯೇ ಕೆಲವರಿಗೆ ಹೆಚ್ಚು ವಿಶ್ವಾಸಾರ್ಹವಾಗಿ ಕಾಣಿಸಿತು. ಅದು, ಭಾರತೀಯ ಪರಂಪರೆಗೆ ಅಸಹಜವಾದ ನಡವಳಿಕೆ. ಹೆಣ್ಣೊಬ್ಬಳು ಅತ್ಯಾಚಾರಕ್ಕೊಳಗಾಗಿ ಘೋರ ಅಂತ್ಯ ಕಂಡ ಘಟನೆಗಳು ವರದಿಯಾದ ಸಂದರ್ಭದಲ್ಲಿ ನಮ್ಮ ಮೊದಲ ಸ್ಪಂದನ ಕಣ್ಣೀರು, ನಿಟ್ಟುಸಿರಿನ ಬದಲು ಅನುಮಾನದ ಪ್ರಶ್ನೆಯಾಗಿದ್ದರೆ, ನಮ್ಮ ಸಂವೇದನೆ ನಷ್ಟವಾಗಿದೆ, ಭ್ರಷ್ಟವಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಹಾಥರಸ್‌ನ ಯುವತಿಯ ಘಟನೆಯಲ್ಲಿ ಎದ್ದು ಕಾಣಿಸಿದ್ದು ಈ ಸಂವೇದನೆಯ ನಷ್ಟವೇ. ನಾವೇ ಬೆಳೆಸಿಕೊಂಡ ಸೈದ್ಧಾಂತಿಕ ಪೊರೆಗಳ ಕಾರಣದಿಂದಾಗಿ, ದಲಿತ ಯುವತಿ ಹಾಗೂ ಆ ಕುಟುಂಬದ ನೋವು ನಮ್ಮಲ್ಲಿ ದುಃಖ ಹುಟ್ಟಿಸುವ ಬದಲು ರಾಜಕೀಯ ಚರ್ಚೆಗೆ ವಸ್ತುವಾಗಿ ಪರಿಣಮಿಸಿತು. ಹೆಣ್ಣುಮಗಳೊಬ್ಬಳ ದುರಂತಕ್ಕೆ ಸ್ಪಂದಿಸಲು ಆಕೆಯ ಜಾತಿ, ಆರ್ಥಿಕ ಸ್ಥಿತಿ ಹಾಗೂ ವಾಸಸ್ಥಾನ ಮುಖ್ಯವಾಗುತ್ತಿರುವ ವಿಚಿತ್ರ ಸನ್ನಿವೇಶದಲ್ಲಿ ಭಾರತೀಯ ಸಮಾಜ ನಿಂತಿರುವುದಕ್ಕೆ ಹಾಥರಸ್‌ನ ದಲಿತ ಯುವತಿಯ ದುರಂತವು ಉದಾಹರಣೆಯಂತಿದೆ. 

ತನಿಷ್ಕ್‌ ಕಂಪನಿಯ ಜಾಹೀರಾತಿನ ಬಗ್ಗೆ ವ್ಯಕ್ತವಾದ ಟೀಕೆ ಹಾಗೂ ಪ್ರತಿಭಟನೆಯು ಸಂವೇದನೆಯ ನಷ್ಟ–ಭ್ರಷ್ಟತೆಯ ಮತ್ತೊಂದು ಉದಾಹರಣೆ. ಮುಸ್ಲಿಂ ಕುಟುಂಬದ ಹಿಂದೂ ಸೊಸೆಯ ಸೀಮಂತದ ಸಂಭ್ರಮವನ್ನು ಒಳಗೊಂಡ ಜಾಹೀರಾತು ಟೀಕೆಗೆ ಗುರಿಯಾಯಿತು. ಇಂದೋರ್‌ನ ತನಿಷ್ಕ್‌ ಆಭರಣ ಮಳಿಗೆಯ ಮುಂದೆ ಪ್ರತಿಭಟನೆಗಳು ನಡೆದು, ಸಂಸ್ಥೆಯ ಸಿಬ್ಬಂದಿಯಿಂದ ಬಲವಂತವಾಗಿ ಕ್ಷಮಾಪಣೆ ಪತ್ರ ಬರೆಸಿಕೊಂಡು, ಕೊನೆಗೆ ಸಂಸ್ಥೆಯು ಜಾಹೀರಾತನ್ನು ಹಿಂಪಡೆಯುವುದರೊಂದಿಗೆ ಘಟನೆ ತಣ್ಣಗಾಯಿತು. ವೈವಿಧ್ಯದಲ್ಲಿ ಏಕತೆಯನ್ನು ಸಂಭ್ರಮಿಸುವ ಜಾಹೀರಾತನ್ನು ಸಹಿಸಿಕೊಳ್ಳುವುದೇ ನಮಗೆ ಸಾಧ್ಯವಿಲ್ಲವೆಂದಾದರೆ, ಜೀವಂತ ಸಮಾಜದ ಬಹುತ್ವ ಹೇಗೆ ಸಹ್ಯವಾದೀತು? ಕೊರೊನಾ ಕಾರಣದಿಂದಾಗಿ ಸುತ್ತಮುತ್ತ ಸುಳಿದಾಡುತ್ತಿರುವ ಸಾವಿನ ನೆರಳು ನಮ್ಮನ್ನು ವಿಚಲಿತಗೊಳಿಸುವುದಿಲ್ಲ. ಆದರೆ, ಒಂದು ಜಾಹೀರಾತು ನಮ್ಮ ಆತಂಕಕ್ಕೆ ಕಾರಣವಾಗುತ್ತದೆ. ವೈಯಕ್ತಿಕ ಹಾಗೂ ಸಾಮುದಾಯಿಕ ಕಾಳಜಿಗಿಂತಲೂ ಆರೋಪಿತ ಹಿತಾಸಕ್ತಿಯೇ ನಮಗೆ ಮುಖ್ಯವೆನ್ನಿಸುತ್ತಿರುವುದರ ಹಿಂದೆ ಅನೈತಿಕ ರಾಜಕಾರಣದ ಒತ್ತಾಸೆಯಿರುವುದು ಈಗ ಗುಟ್ಟೇನಲ್ಲ. 

ರಾಜಕಾರಣಿಗಳ ಸಾಮಾಜಿಕ ಹಿನ್ನೆಲೆ ನಮಗೀಗ ಮುಖ್ಯವೆನ್ನಿಸುತ್ತಿಲ್ಲ. ಒಂದು ಪಕ್ಷದ ಒಲವು ನಿಲುವುಗಳನ್ನು ಮತದಾರರ ಮುಂದಿಟ್ಟು ಗೆದ್ದುಬರುವ ವ್ಯಕ್ತಿ, ತಾನು ವಿರೋಧಿಸಿದ ವ್ಯಕ್ತಿ–ಸಿದ್ಧಾಂತಗಳನ್ನು ಮುಂದಿನ ದಿನಗಳಲ್ಲಿ ಒಪ್ಪಿಕೊಂಡು ಪಕ್ಷಾಂತರ ಮಾಡಿದರೂ ಆ ಅನೈತಿಕತೆಯನ್ನು ಮತದಾರರೂ ಪುರಸ್ಕರಿಸುತ್ತಿರುವ ವರ್ತಮಾನ ಇಂದಿನದು. ಪ್ರಜಾತಂತ್ರದ ದುರದೃಷ್ಟವೆಂದರೆ, ಪಕ್ಷ ರಾಜಕಾರಣದಿಂದ ದೂರವಿದ್ದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿನಿಧಿಸಬೇಕಾದ ಗಣ್ಯ ಸ್ಥಾನದಲ್ಲಿರುವವರೂ ತಮ್ಮ ಜವಾಬ್ದಾರಿ ಮರೆತು ಮಾತನಾಡುತ್ತಿರುವುದು. ಕೊರೊನಾ ಸೋಂಕು ನಿಯಂತ್ರಿಸುವ ಉದ್ದೇಶದಿಂದ ದೇವಸ್ಥಾನಗಳ ಬಾಗಿಲು ತೆರೆಯುವುದಕ್ಕೆ ಹಿಂಜರಿಯುತ್ತಿರುವ ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನು ಉದ್ದೇಶಿಸಿ, ‘ನೀವೇನು ಜಾತ್ಯತೀತರಾಗಿ ಬದಲಾಗಲು ಹೊರಟಿದ್ದೀರಾ?’ ಎನ್ನುವ ಅರ್ಥದಲ್ಲಿ ರಾಜ್ಯಪಾಲರು ಪತ್ರ ಬರೆಯುತ್ತಾರೆಂದರೆ, ಅವರು ಜಾತೀಯತೆಯ ಪರವಾಗಿದ್ದಾರೆ ಎಂದೇ ಹೇಳಬೇಕಾಗುತ್ತದೆ.

ಸಮುದಾಯದ ಜೊತೆಗೆ, ವೈಯಕ್ತಿಕ ಬದುಕಿನ ಸಂದರ್ಭದಲ್ಲೂ ಸಂವೇದನೆ ಜಡವಾಗಿರುವುದನ್ನು ಸಾವಿನ ಕುರಿತಾದ ನಮ್ಮ ಸ್ಪಂದನಗಳ ಮೂಲಕ ಅರ್ಥ ಮಾಡಿಕೊಳ್ಳಬಹುದು. ಸಾಮಾಜಿಕ ಜಾಲತಾಣಗಳಲ್ಲಿನ ನಮ್ಮ ನಡವಳಿಕೆಯನ್ನು ಗಮನಿಸಿದರೆ ಈ ಬದಲಾವಣೆ ಸ್ಪಷ್ಟವಾಗಿ ಕಾಣಿಸುತ್ತದೆ. ಕೊರೊನಾ ವೈರಸ್‌ ಜೊತೆ ಹೆಣಗುತ್ತಿರುವ ಸಂದರ್ಭದಲ್ಲಿ, ಫೇಸ್‌ಬುಕ್‌ ಅಥವಾ ವಾಟ್ಸ್‌ಆ್ಯಪ್ ಪೋಸ್ಟ್‌ಗಳ ಮೇಲೆ ಓಡುವ ಬೆರಳಿನೊಂದಿಗೆ ಕಣ್ಣೂ ಕುಂಟತೊಡಗಿದರೆ, ಅಲ್ಲಿ ಸಾವಿನ ಸುದ್ದಿ ಇದೆಯೆಂದೇ ಅರ್ಥ. ಶ್ರದ್ಧಾಂಜಲಿ ಆಥವಾ ‘ಆರ್‌ಐಪಿ’ ಎಂದು ಸಂತಾಪ ಸೂಚಿಸಿ ಮನಸ್ಸು ಕಸಿವಿಸಿಗೊಳ್ಳುವಷ್ಟರಲ್ಲಿ ತಕ್ಷಣವೇ ಆ ದುಃಖವನ್ನು ತೊಡೆದುಹಾಕುವಂತೆ ಮುಂದೆ ಓಡುತ್ತದೆ ಬೆರಳು. ಸಾವನ್ನು ದಾಟಿ ಮುಂದೆ ಬಂದರೆ– ಚರ್ಚೆ, ಜಿಜ್ಞಾಸೆ, ಜಗಳ, ಸಂಭ್ರಮ! ಭಾವನೆಗಳ ಕಲಸುಮೇಲೋಗರದಲ್ಲಿ ಸಾವಿನ ಸಂಕಟ ಕಳೆದುಹೋಗುತ್ತದೆ; ಮತ್ತೊಂದು ಸಾವಿನ ಸುದ್ದಿ ಬೆರಳಿಗೆ ತಾಕುವವರೆಗೂ. 

ಸಾಹಿತ್ಯದಿಂದ ಸಂವೇದನೆ ಸೂಕ್ಷ್ಮಗೊಳ್ಳುತ್ತದೆ ಎನ್ನುವ ನಂಬಿಕೆಯಿದೆ. ಹಿರಿಯ ವಿಮರ್ಶಕರು ಸಾವಿಗೀಡಾದಾಗ ಲೇಖಕರೊಬ್ಬರು ತಮ್ಮ ಕೃತಿಗೆ ಬಂದ ಪ್ರಶಸ್ತಿಯ ಸಂಭ್ರಮವನ್ನು ಫೇಸ್‌ಬುಕ್‌ ಗೋಡೆಗೆ ಅಂಟಿಸುತ್ತಾರೆ. ಯಾವುದು ಸಂವೇದನೆ? ಎಲ್ಲಿದೆ ಸೂಕ್ಷ್ಮ ಮನಸ್ಸು? ಬಂಧುಮಿತ್ರರನ್ನು ಕಳೆದುಕೊಳ್ಳುವ ದುಃಖ ಒಂದು ಕ್ಷಣಕ್ಕೆ ಅಥವಾ ದಿನಕ್ಕೆ ಸೀಮಿತವಾದುದಲ್ಲ. ಅದು ಜೀವನಪೂರ್ತಿ ಉಳಿಯುವಂತಹದ್ದು. ಆದರೆ, ಸಾಮಾಜಿಕ ಜಾಲತಾಣಗಳ ಬಳಕೆಯ ಸಂದರ್ಭದಲ್ಲಿ ಸಾವಿನ ದುಃಖದ ಆಯಸ್ಸು ಕಡಿಮೆಯಾಗಿದೆ. ಮನಸ್ಸನ್ನು ಸಿಗೊಳಿಸಬೇಕಾದ ಸಂಗತಿ ಬೆರಳಿನ ತುದಿಯಲ್ಲೇ ಕರಗಿಹೋಗುತ್ತಿದೆ. ಕಣ್ಣೀರನ್ನು ಒರೆಸುತ್ತಿದ್ದ ಬೆರಳುಗಳೀಗ ದುಃಖವನ್ನೇ ಅಳಿಸುತ್ತಿವೆ. ಸಾವು ಇಷ್ಟೊಂದು ಅಗ್ಗವಾಯಿತೇ?

ಹಳ್ಳಿಗಳಲ್ಲಿ ಯಾರ ಮನೆಯಲ್ಲಾದರೂ ಸಾವು ಸಂಭವಿಸಿದರೆ, ಆ ಸೂತಕ ಎಲ್ಲರ ಮನಸ್ಸನ್ನೂ ಆವರಿಸುತ್ತಿತ್ತು. ಸಾವಿನ ಮನೆಯ ದುಃಖಕ್ಕೆ ಊರಿಗೂರೇ ಸ್ಪಂದಿಸುತ್ತಿತ್ತು. ಪ್ರಸ್ತುತ ಇಡೀ ಜಗತ್ತೇ ಒಂದು ಹಳ್ಳಿಯಾಗಿರುವ ಸಂದರ್ಭದಲ್ಲಿ, ಘನತೆ ಹಾಗೂ ಅಂತಃಕರಣದಿಂದ ಸಾವಿಗೆ ಮಿಡಿಯುತ್ತಿದ್ದ ಸಂಸ್ಕೃತಿ ಈಗಲೂ ಉಳಿದಿದೆಯೇ ಅಥವಾ ಸಾವಿಗೀಡಾಗಿದೆಯೇ ಎಂದು ಯೋಚಿಸಬೇಕಾಗಿದೆ. ಕೊರೊನಾದಿಂದ ಸಾವಿಗೀಡಾದವರ ಅಂತ್ಯಸಂಸ್ಕಾರಕ್ಕೆ ವ್ಯಕ್ತವಾದ ವಿರೋಧದ ಘಟನೆಗಳನ್ನು ನೋಡಿದರೆ, ಸಂವೇದನೆಯ ನಷ್ಟದಿಂದ ಗ್ರಾಮೀಣ ಪ್ರದೇಶಗಳೇನೂ ಹೊರತಾಗಿಲ್ಲ. 

ಸಾವಿಲ್ಲದ ಮನೆಯ ಸಾಸಿವೆ ದುರ್ಲಭ ಎನ್ನುವುದನ್ನು ಕಿಸಾಗೋತಮಿಗೆ ಮನದಟ್ಟು ಮಾಡಿಸಿದ್ದ ಬುದ್ಧ, ಇಂದಿನ ಸಂದರ್ಭದಲ್ಲಾಗಿದ್ದರೆ, ‘ಸಾವಿನ ಸುದ್ದಿಯಿಲ್ಲದ ಮಾಧ್ಯಮವನ್ನು ತೋರಿಸು’ ಎಂದು ಕೇಳುತ್ತಿದ್ದನೇನೊ? ಸಾವುನೋವಿನ ಸುದ್ದಿಗಳು ಮಾಧ್ಯಮಗಳ ತುಂಬೆಲ್ಲ ಆವರಿಸಿಕೊಂಡು, ಕೊರೊನಾ ಸೋಂಕಿನಿಂದ ಉಂಟಾಗುತ್ತಿರುವ ಸಾವುಗಳು ಸಂಖ್ಯೆಯ ರೂಪ ತಾಳಿರುವಾಗ, ಮನಸ್ಸು ಜಡ್ಡುಗಟ್ಟಿ ಸಾವಿನ ಬಗ್ಗೆ ಒರಟಾಗಿ ನಡೆದುಕೊಳ್ಳುವುದು ಸಹಜ. ಆದರೆ, ಕೊರೊನಾ ಪೂರ್ವದಲ್ಲೂ ಸಾವಿನ ಸಂದರ್ಭದಲ್ಲಿ ನಾವು ವಿವೇಚನಾಶೂನ್ಯರಾಗಿ ನಡೆದುಕೊಂಡಿರುವುದಕ್ಕೆ ಉದಾಹರಣೆಗಳಿವೆ. ಸಾವು ಅಥವಾ ಅಪರಾಧದ ವರದಿಗಳನ್ನು ಓದುತ್ತಾ ನೋಡುತ್ತಾ ಉಣ್ಣುವುದು ನಮಗೆ ಅಭ್ಯಾಸವಾಗಿಬಿಟ್ಟಿದೆ. ರಾಜಕೀಯ ಅಥವಾ ಸಾಂಸ್ಕೃತಿಕ ಕ್ಷೇತ್ರದ ನಾಯಕರು ತೀರಿಕೊಂಡಾಗ, ಅವರ ಸಾವನ್ನು ವೈಚಾರಿಕ ಭಿನ್ನಮತದ ಕಾರಣದಿಂದಾಗಿ ಸಂಭ್ರಮಿಸುವುದು ಸಹಜ ಎನ್ನುವಂತಾಗಿದೆ. ಗಾಂಧೀಜಿ ಕೊಲೆಯಿಂದ ಆರಂಭವಾದ ಈ ವಿಕೃತಿ, ಸಾವಿನ ಸಮ್ಮುಖದಲ್ಲಿ ನಮ್ಮನ್ನು ಸಹಜವಾಗಿ ಆವರಿಸಿಕೊಳ್ಳಬೇಕಾದ ಘನತೆ ಮತ್ತು ವಿನಯವನ್ನು ದೂರವಾಗಿಸಿದೆ.

ಪ್ರತೀ ಸಾವು ನಮ್ಮನ್ನು ವಿನೀತರನ್ನಾಗಿಸಬೇಕು. ಬದುಕಿನ ಕುರಿತ ನಮ್ಮ ನಂಬಿಕೆಗಳನ್ನು ಹೆಚ್ಚು ಮಾನವೀಯಗೊಳಿಸಬೇಕು. ಕೊರೊನಾ ಸಂದರ್ಭದಲ್ಲಂತೂ ಸಾವಿನ ಹೆಡೆಯಡಿ ಇರುವ ನಾವು ಸಹಮಾನವನ ಕುರಿತು ಮತ್ತಷ್ಟು ಆರ್ದ್ರವಾಗಬೇಕು. ಶಿವರಾಮ ಕಾರಂತರು ತಮ್ಮ ಆತ್ಮಕಥೆ, ‘ಹುಚ್ಚುಮನಸ್ಸಿನ ಹತ್ತು ಮುಖಗಳು’ ಕೃತಿಯಲ್ಲಿ ಹೇಳುತ್ತಾರೆ: ‘ನಾವು ಭೂಮಿಗೆ ಬಂದ ದಿನ ನಮ್ಮ ಸುತ್ತಣ ಬದುಕು ಇದಕ್ಕಿಂತ ಒಂದಿಷ್ಟು ಹೆಚ್ಚು ಚಂದವಾಗುವಂತೆ ಮಾಡಿ ಇಲ್ಲಿಂದ ಹೊರಡಬೇಕು ಎಂಬ ಭಾವನೆ ನನ್ನ ಬದುಕನ್ನು ನಡೆಸಿದ ಸೂತ್ರ. ಜಾತ್ರೆಗೆ ಬಂದವರು ಜಾತ್ರೆ ಮುಗಿಸಿ ಹೊರಡುವಂತೆ, ತಾವು ನಲಿದು, ಉಂಡು ಹೋದ ನೆಲದ ಮೇಲೆ ಎಲ್ಲೆಲ್ಲೂ ತಮ್ಮ ಉಚ್ಚಿಷ್ಟವನ್ನು ಚೆಲ್ಲಿ ಹೋದರೆ ಹೇಗಾದೀತು? ನಾವೇ ಅಲ್ಲಿಗೆ ತಿರುಗಿ ಬರದಿದ್ದರೇನಾಯಿತು? ಅಲ್ಲಿಗೆ ಬರುವ ನಮ್ಮ ಮಕ್ಕಳು ಏನೆಂದುಕೊಂಡಾರು? ಅಷ್ಟನ್ನಾದರೂ ಯೋಚಿಸುವ ಬುದ್ಧಿ ಈ ದೇಶವನ್ನು ನಡೆಸುವ ಹಿರಿಯರಿಗೆ ಇಲ್ಲದೆ ಹೋದರೆ ಹೇಗೆ?’– ಈ ವಿವೇಕ ಈಗ ನಮ್ಮೆಲ್ಲರದೂ ಆಗಬೇಕು.

ರಘುನಾಥ ಚ.ಹ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು