ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋದಂಡವೂ ದಂಡವಾದ ಕಾಲದಲ್ಲಿ

ರಾಮನ ಹೆಸರು ಸೌಹಾರ್ದ ಸೃಷ್ಟಿಸಬೇಕೇ ಹೊರತು ಭಯವನ್ನಲ್ಲ
Last Updated 30 ಜುಲೈ 2019, 20:00 IST
ಅಕ್ಷರ ಗಾತ್ರ

ವಾರಾಣಸಿಯಲ್ಲಿ ಓರ್ವ ಬಾಲಕನಿಗೆ ಬೆಂಕಿ. ಕೋಲ್ಕತ್ತದಲ್ಲಿ ರೈಲಿನಲ್ಲಿ ಹಲ್ಲೆಗೊಳಗಾಗಿ ಹೊರದಬ್ಬಿಸಿಕೊಂಡ ಶಿಕ್ಷಕ. ಅಸ್ಸಾಂನಲ್ಲಿ ಕಾರ್ಮಿಕರ ಮೇಲೆ ಹಲ್ಲೆ. ಜಾರ್ಖಂಡ್‌ನಲ್ಲಿ ಯುವಕನ ಕೊಲೆ– ಇವೆಲ್ಲ ದಾರುಣ ಘಟನೆಗಳಿಗೆ ಕಾರಣ, ‘ಜೈ ಶ್ರೀರಾಮ್‌’ ಎನ್ನುವ ಘೋಷಣೆ ಕೂಗಲು ಸಂತ್ರಸ್ತರು ಒಪ್ಪದಿರುವುದು. ಜನಸಾಮಾನ್ಯರ ಮಾತಿರಲಿ, ಮುಸ್ಲಿಂ ಶಾಸಕರೊಬ್ಬರನ್ನು ‘ಜೈ ಶ್ರೀರಾಮ್’ ಎಂದು ಕೂಗುವಂತೆ ಜಾರ್ಖಂಡ್‌ನಲ್ಲಿ ಸಚಿವರೊಬ್ಬರು ಒತ್ತಾಯಿಸುತ್ತಿರುವ ವಿಡಿಯೊ ವೈರಲ್‌ ಆಗಿದೆ. ‘ವಂದೇ ಮಾತರಂ ಘೋಷಣೆಯ ಸ್ಥಾನಕ್ಕೆ ಈಗ ಜೈ ಶ್ರೀರಾಮ್‌ ಬಂದಿದ್ದು, ಇದು ನಕಲಿ ರಾಷ್ಟ್ರೀಯವಾದಿಗಳಲ್ಲಿ ನಡುಕ ಹುಟ್ಟಿಸುತ್ತಿದೆ’ ಎಂದು ಪತ್ರಕರ್ತ ತರುಣ್‌ ವಿಜಯ್‌ ಹೇಳಿದ್ದಾರೆ. ‘ಶ್ರೀರಾಮ ಜಪ ಕೇಳಲು ಇಷ್ಟವಿಲ್ಲದಿದ್ದಲ್ಲಿ ಚಂದ್ರನಲ್ಲಿಗೆ ಹೋಗಿ’ ಎಂದು ಕೇರಳದ ಬಿಜೆಪಿ ವಕ್ತಾರರು ಸಿನಿಮಾನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಅವರಿಗೆ ಆದೇಶಿಸಿದ್ದಾರೆ. ‘ಜೈ ಶ್ರೀರಾಮ್‌ ಘೋಷಣೆಯನ್ನು ಭಾರತದಲ್ಲಿ ಕೂಗದೆ ಪಾಕಿಸ್ತಾನದಲ್ಲಿ ಕೂಗಲು ಸಾಧ್ಯವೇ?’ ಎನ್ನುವುದು ಗೃಹ ಸಚಿವ ಅಮಿತ್‌ ಶಾ ‍ಪ್ರಶ್ನೆ.

ರಾಮನ ಹೆಸರಿನಲ್ಲಿ ನಡೆಯುತ್ತಿರುವ ಇಷ್ಟೆಲ್ಲ ಗೊಂದಲ, ಗದ್ದಲಗಳೊಂದಿಗೆ ಎರಡು ಪತ್ರಗಳನ್ನು ನೆನಪಿಸಿಕೊಳ್ಳಬೇಕು. ಮೊದಲನೆಯದು, ‘ಜೈ ಶ್ರೀರಾಮ್‌’ ಘೋಷಣೆಯು ಯುದ್ಧದ ಕೂಗಿನಂತೆ ಬಳಕೆಯಾಗುತ್ತಿದೆ. ರಾಮನ ಹೆಸರನ್ನು ಅಪವಿತ್ರಗೊಳಿಸುವುದಕ್ಕೆ ಅಂತ್ಯ ಹಾಡಬೇಕು’ ಎಂದು 49 ಪ್ರಸಿದ್ಧರು ಪ್ರಧಾನಿಗೆ ಬರೆದಿರುವ ಪತ್ರ. ಇನ್ನೊಂದು, ‘49 ಪ್ರಸಿದ್ಧರ ಪತ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮಸಿ ಬಳಿಯುವ ಹಾಗೂ ಪ್ರಧಾನಿ ಮೋದಿ ಆಡಳಿತವನ್ನು ನಕಾರಾತ್ಮಕವಾಗಿ ಚಿತ್ರಿಸುವ ಪ್ರಯತ್ನ’ ಎಂದು 62 ಸೆಲೆಬ್ರಿಟಿಗಳು ಬಿಡುಗಡೆ ಮಾಡಿರುವ ಹೇಳಿಕೆ. ದೇಶದ ರಾಜಕಾರಣ ಸೃಷ್ಟಿಸಿರುವ ಈ ಹೇಳಿಕೆಗಳು ಹಾಗೂ ಹಲ್ಲೆ–ಗದ್ದಲಗಳು ಏನನ್ನು ಸೂಚಿಸುತ್ತವೆ?

ರಾಜಕಾರಣಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಈವರೆಗೆ ಜನಪ್ರಿಯವಾಗಿದ್ದುದು ‘ರಾಮರಾಜ್ಯ’ದ ಪರಿಕಲ್ಪನೆ. ಎಲ್ಲ ಪ್ರಜೆಗಳೂ ನೆಮ್ಮದಿಯಿಂದಿರುವುದು ಹಾಗೂ ಮಳೆ–ಬೆಳೆ ಸಮೃದ್ಧವಾಗಿರುವುದು ರಾಮರಾಜ್ಯದ ಲಕ್ಷಣ. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಶ್ರೀಸಾಮಾನ್ಯನ ಸಂಕಷ್ಟಗಳಲ್ಲಿ ಯಾವುದೇ ವ್ಯತ್ಯಾಸವಾಗದ ಕಾರಣ, ರಾಮರಾಜ್ಯ ಎನ್ನುವುದು ಜನಸಾಮಾನ್ಯರ ಪಾಲಿಗೆ ಮರೀಚಿಕೆಯಾಗಿಯೇ ಉಳಿದಿದೆ. ದುರಂತವೆಂದರೆ, ರಾಮರಾಜ್ಯವನ್ನು ಸಾಕಾರಗೊಳಿಸುವಲ್ಲಿ ವಿಫಲವಾಗಿರುವ ಸಮಕಾಲೀನ ರಾಜಕಾರಣ, ಅದಕ್ಕೆ ವಿರುದ್ಧವಾದ ಸಾಮಾಜಿಕ ಸಂದರ್ಭವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ದೇಶದ ವಿವಿಧೆಡೆ ನಡೆದಿರುವ ಸಂಘರ್ಷಗಳು ಭಾರತೀಯ ಸಂಸ್ಕೃತಿ ಈವರೆಗೆ ಜೀವಂತವಾಗಿ ಇರಿಸಿಕೊಂಡಿದ್ದ ರಾಮನ ಪ್ರತಿಮೆಯನ್ನು ಚೂರುಚೂರು ಮಾಡುವಂತಿವೆ. ರಾಮ, ಭಾರತದ ಪ್ರಜಾಪ್ರಭುತ್ವದ ಆಶಯಗಳ ತಾರಕರೂಪ. ಸಾಮಾನ್ಯ ವ್ಯಕ್ತಿಯೊಬ್ಬ ಸಾಮ್ರಾಟನನ್ನು ಪ್ರಶ್ನಿಸಲು, ಶಂಕಿಸಲು ಅವಕಾಶವಿದ್ದ ಸಾಮಾಜಿಕ ವ್ಯವಸ್ಥೆ ರಾಮನದು. ಆದರೆ, ಇವತ್ತಿನ ಪರಿಸ್ಥಿತಿ ರಾಮನ ಹೆಸರಿನಲ್ಲಿ ಅಭಿಪ್ರಾಯಗಳನ್ನು ಹತ್ತಿಕ್ಕುವಂತಹದ್ದು.

ಪ್ರೇಮ ಮತ್ತು ರಾಮ ಪರ್ಯಾಯರೂಪಗಳು. ಪುರಾಣಕಥನಗಳುದ್ದಕ್ಕೂ ರಾಮಮಂತ್ರ ಅಭಯದಾಯಕವಾಗಿ ಕಾಣಿಸಿಕೊಂಡಿದೆ. ಭಾರತೀಯರ ರಾಮ, ಭಕ್ತರ ಮನಸ್ಸಿನೊಳಗೆ ಪರಿಪೂರ್ಣತೆ ಪಡೆಯುವವನು. ಆತನಿಗೂ ವೈರುಧ್ಯಗಳಿವೆ. ಅವನು ಅಳಿಲನ್ನು ಹರಸಿದವನು, ಶಬರಿಯ ವಾತ್ಸಲ್ಯವನ್ನುಂಡವನು ಹಾಗೂ ಶಿಲೆಯನ್ನು ಅಹಲ್ಯೆಯನ್ನಾಗಿಸಿದವನು. ವಾಲಿಯನ್ನು ಶಂಭೂಕನನ್ನು ವಧಿಸಿದ್ದೂ ಇದೇ ರಾಮನೇ. ಅಳಿಲು ಮತ್ತು ಶಬರಿಯರ ರಾಮ ಪ್ರೇಮಮೂರ್ತಿಯಾಗಿ ಕಂಡರೆ, ವಾಲಿ–ಶಂಭೂಕರ ಹಿನ್ನೆಲೆಯ ಕೋದಂಡರಾಮ ನಿರ್ನಾಮಮೂರ್ತಿಯಾಗಿ ಕಾಣಿಸುತ್ತಾನೆ. ಪ್ರೇಮಮಯ ರೂಪವನ್ನು ಉಳಿಸಿಕೊಂಡಾಗಲಷ್ಟೇ ನಮಗೆ ರಾಮನ ಮತ್ತೊಂದು ಆಯಾಮವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ, ವರ್ತಮಾನದ ಘಟನೆಗಳು ಸೀತಾರಾಮನ ಪ್ರೇಮಮಯ ಸ್ವರೂಪವನ್ನು ಸಂಪೂರ್ಣವಾಗಿ ಭಗ್ನಗೊಳಿಸಿ ಕೋದಂಡರಾಮನನ್ನು ಮಾತ್ರವೇ ಉಳಿಸಿಕೊಳ್ಳಲು ಹವಣಿಸುತ್ತಿವೆ. ಇದು ಆತಂಕ ಹುಟ್ಟಿಸುವಂತಹದ್ದು. ಇಂಥ ಆತಂಕ ಹುಟ್ಟಿಸುವವರು ರಾಮಭಕ್ತರ ವೇಷದ ರಾಮವಿರೋಧಿಗಳೇ ಸರಿ.

ಭಕ್ತಿ ತನ್ನ ನಿಜರೂಪದಲ್ಲಿ ವ್ಯಕ್ತಿಯನ್ನು ವಿನೀತಗೊಳಿಸುತ್ತದೆ. ಅದೇ ಭಕ್ತಿಯು ಪ್ರದರ್ಶನಕ್ಕೆ ಕಾರಣವಾದಾಗ ವ್ಯಕ್ತಿ ಉನ್ಮಾದಕ್ಕೊಳಗಾಗುತ್ತಾನೆ. ಈಗ ಆಗಿರುವುದೂ ಅದೇ. ರಾಮನ ಹೆಸರಿನಲ್ಲಿ ಸಮಾಜದ ಒಂದು ವರ್ಗ ತನ್ನ ವಿಕಾರಗಳನ್ನು ಕಾರಿಕೊಳ್ಳುತ್ತಿದೆ. ಈ ವಿಕಾರಗಳು ಬಹುತ್ವ ಭಾರತದ ಪರಿಕಲ್ಪನೆಗೆ ವಿರೋಧವಾದವು. ಈ ಅಪಾಯವನ್ನು ಅರಿತ ಕಾರಣದಿಂದಲೇ ಗಾಂಧೀಜಿ, ‘ರಘುಪತಿ ರಾಘವ ರಾಜಾರಾಮ್‌’ ಪ್ರಾರ್ಥನೆಯ ಸಾಲುಗಳನ್ನು ಬದಲಿಸಿ, ‘ಈಶ್ವರ ಅಲ್ಲಾ ತೇರೋ ನಾಮ್‌’ ಎಂದು ಹಾಡಿದರು, ಆ ಮೂಲಕ ರಾಮನ ಸಾಧ್ಯತೆಯನ್ನು ಹೆಚ್ಚಿಸಿದರು. ರಾಮ ಮತ್ತು ರಹೀಮ ಬೇರೆಯಲ್ಲ ಎನ್ನುವ ತಾತ್ವಿಕತೆ ಗಾಂಧಿಯದು. ಆದರೆ, ‘ಜೈ ಶ್ರೀರಾಮ್‌’ ಘೋಷಣೆಯ ವಕ್ತಾರರು ರಾಮ ಮತ್ತು ರಹೀಮರನ್ನು ಪ್ರತ್ಯೇಕವಾಗಿ ಕಾಣುವ ಮೂಲಕ ಏಕಕಾಲಕ್ಕೆ ಗಾಂಧಿ ಮತ್ತು ರಾಮರ ಆದರ್ಶಗಳಿಗೆ ಮಸಿ ಹಚ್ಚಿದ್ದಾರೆ.

ಪ್ರಜಾಪ್ರಭುತ್ವದ ಆಶಯಗಳನ್ನು ಬಲಪಡಿಸಲಿಕ್ಕೆ ‘ರಾಮ’ ಒಂದು ಅದ್ಭುತ ಮಾದರಿ. ಆ ರಾಮಮಾರ್ಗ ವ್ಯರ್ಥವಾಗಿರುವ ಸಂದರ್ಭ ಇಂದಿನದು. ಈ ವಿರೋಧಾಭಾಸವನ್ನು ‘ಶ್ರೀರಾಮನವಮಿಯ ದಿವಸ’ ಕವಿತೆಯಲ್ಲಿ ಗೋಪಾಲಕೃಷ್ಣ ಅಡಿಗರು, ‘ವಿಜೃಂಭಿಸಿತು ರಾಮಬಾಣ; ನಿಜ. ಕತ್ತಲಿಗೆ / ಹತ್ತೆ ತಲೆ? ನೂರಾರೆ? ಅದು ಅಸಂಖ್ಯ:/ ಕತ್ತರಿಸಿದರೆ ಬೆಳೆವ, ಬೆಳೆದು ಕತ್ತಿಗೆ ಬರುವ / ಅನಾದಿ; ಕೋದಂಡ ದಂಡವೂ ಹೀಗೆ ದಂಡ’ ಎಂದು ವಿಶ್ಲೇಷಿಸುತ್ತಾರೆ. ಹೌದಲ್ಲವೇ, ಈ ಹೊತ್ತಿನ ‘ಜೈ ಶ್ರೀರಾಮ್‌’ ಘೋಷಣೆ ಪರಿಣಾಮ ಕೂಡ ಕೋದಂಡ ದಂಡವನ್ನು ವ್ಯರ್ಥವಾಗಿಸಿದ ಮತ್ತೊಂದು ಪ್ರಯತ್ನವಲ್ಲವೇ?

‘ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು/ ಪುರುಷೋತ್ತಮನ ಆ ಅಂಥ ರೂಪ – ರೇಖೆ?’ ಎನ್ನುವ ಅಡಿಗರ ಮಾತು, ರಾಮನನ್ನು ಮತ್ತೆ ದಕ್ಕಿಸಿಕೊಳ್ಳುವ ಅಗತ್ಯ ಮತ್ತು ಸವಾಲನ್ನು ಸೂಚಿಸುತ್ತದೆ. ಸಮಕಾಲೀನ ಸಂದರ್ಭ ಹೇಗಿದೆಯೆಂದರೆ, ನಮ್ಮ ರಾಮನನ್ನು ನಮಗೆ ಮತ್ತೆ ಕಾಣಿಸಲು, ಚಿತ್ತವನ್ನು ಹುತ್ತಗಟ್ಟಿಸಲು ಮತ್ತೆ ಆ ವಾಲ್ಮೀಕಿಯೇ ಬರಬೇಕೇನೋ? ವಾಲ್ಮೀಕಿ ನಮಗೆ ಕರುಣಿಸಿದ ರಾಮ, ಕುಟುಂಬ ವತ್ಸಲನೂ ಪ್ರಜಾವತ್ಸಲನೂ ಆಗಿದ್ದ ಅಪೂರ್ವ ಮಾನವತಾವಾದಿ. ಅಂಥ ಘನ ವ್ಯಕ್ತಿತ್ವವನ್ನೀಗ ಧರ್ಮ–ರಾಷ್ಟ್ರೀಯತೆಯ ರೂಪಕವಾಗಿ
ಬಿಂಬಿಸಲಾಗುತ್ತಿದೆ, ಭಯ ಹುಟ್ಟಿಸಲು ಬಳಸಲಾಗುತ್ತಿದೆ, ಆ ಮೂಲಕ ರಾಮನಿಗೆ ಅಪಚಾರ ಎಸಗಲಾಗುತ್ತಿದೆ.

ನಮಗೆ ಬೇಕಾಗಿರುವುದು ಎಂತಹ ರಾಮ ಎನ್ನುವುದನ್ನು ಅರ್ಥ ಮಾಡಿಕೊಳ್ಳಲಿಕ್ಕೆ ನಮ್ಮ ಪರಂಪರೆಯಲ್ಲೇ ಉದಾಹರಣೆಗಳಿವೆ. ತುಲಸೀದಾಸರಿಗೆ, ಕಬೀರರಿಗೆ ರಾಮ ಒದಗಿಬಂದುದು ಪ್ರೇಮ–ಸೌಹಾರ್ದದ ಮೂರ್ತಿಯಾಗಿ. ಈ ರಾಮಕಾರುಣ್ಯದ ಅಗತ್ಯವನ್ನು ಅರ್ಥ ಮಾಡಿಕೊಳ್ಳಲು ವಿ. ಸೀತಾರಾಮಯ್ಯನವರ ‘ಶಬರಿ’ ಕವಿತೆಯನ್ನು ಮತ್ತೆ ಮತ್ತೆ ಓದಬೇಕು. ತನ್ನ ಪೂಜೆಗೊಳಲು ಬರುವ ರಾಮನಿಗಾಗಿ ಕಾಯುವ ಶಬರಿಯ ಚಿತ್ರವನ್ನು ನೀಡುತ್ತ, ಆ ಕಾಯುವಿಕೆ ಜನರ ನಿರೀಕ್ಷೆಯೂ ಆಗುವುದನ್ನು ಕವಿ ಚಿತ್ರಿಸಿರುವುದು ಅರ್ಥಪೂರ್ಣವಾಗಿದೆ. ‘ಶಬರಿವೊಲು ಜನವು ದಿನವೂ/ ಯುಗಯುಗವು ಕರೆಯುತಿಹುದು/ ತವಕದಲಿ ತಪಿಸುತಿಹುದು’ ಎನ್ನುವ ಕವಿ, ‘ಬಂದಾನೊ ಬಾರನೋ ಕಂಡಾನೊ ಕಾಣನೋ’ ಎಂದು ಉದ್ಗರಿಸುತ್ತಾರೆ. ರಾಮ ಬರಬೇಕಾದುದಾದರೂ ಏಕೆ? ‘ಬಡವರನು ಕಾಯಿ ಬಾರ / ಕಂಗಾಣದಿವರ ಪ್ರೇಮ / ನುಡಿಸೋತ ಮೂಕ ಪ್ರೇಮ’ ಎನ್ನುವುದು ಕವಿಯ ಉತ್ತರ. ವಿ.ಸೀ. ಅವರ ಈ ದರ್ಶನ ಈಗ ನಮ್ಮೆಲ್ಲರಿಗೆ ಮಾರ್ಗವಾಗಬೇಕು. ನಮಗೆ ಬೇಕಾದುದು ಬಡವರನು ಕಾಯುವ, ನುಡಿಸೋತವರನು ಪ್ರೇಮಿಸುವ ರಾಮನೇ ಹೊರತು – ತನ್ನ ಹೆಸರಿನಿಂದಲೇ ಜೀವಭಯ ಉಂಟುಮಾಡುವ ರಾಮನಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT