ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಚಣಿ ಸಮಸ್ಯೆಗೆ ಎಫ್‌ಡಿಐ ಮದ್ದು

ಪಿಂಚಣಿ ಯೋಜನೆಗಳ ವ್ಯಾಪ್ತಿಗೆ ಹೆಚ್ಚು ಜನ ಬರುವುದು, ದೇಶದ ಪಾಲಿಗೆ ಬಹುದೊಡ್ಡ ವರ
Last Updated 22 ಏಪ್ರಿಲ್ 2021, 21:49 IST
ಅಕ್ಷರ ಗಾತ್ರ

ದೇಶದ ಪಿಂಚಣಿ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಪ್ರಮಾಣವನ್ನು ಕೇಂದ್ರ ಸರ್ಕಾರವು ಶೇಕಡ 74ಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ. ಈಗಿರುವ ನಿಯಮಗಳ ಪ್ರಕಾರ ವಿದೇಶಿ ಕಂಪನಿಗಳು ದೇಶದ ಪಿಂಚಣಿ ನಿಧಿಗಳಲ್ಲಿ ಗರಿಷ್ಠ ಶೇ 49ರಷ್ಟು ಮಾತ್ರ ಹೂಡಿಕೆ ಮಾಡಲು ಅವಕಾಶವಿದೆ. ಹೂಡಿಕೆ ಹೆಚ್ಚಿಸಲು ಅವಕಾಶ ಕಲ್ಪಿಸುವ ಮಸೂದೆಯನ್ನು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ. ವಿಮಾ ಕ್ಷೇತ್ರದಲ್ಲಿ ಎಫ್‌ಡಿಐ ಪ್ರಮಾಣವನ್ನು ಶೇ 74ಕ್ಕೆ ಹೆಚ್ಚಿಸುವ ಮಸೂದೆಗೆ ಸಂಸತ್ತು ಈಚೆಗೆ ಅನುಮೋದನೆ ನೀಡಿದೆ. ಪಿಂಚಣಿ ನಿಧಿಗಳಲ್ಲಿ ಎಫ್‌ಡಿಐ ಪ್ರಮಾಣ ಹೆಚ್ಚಿಸುವುದರ ಪರಿಣಾಮ ಅರ್ಥ ಮಾಡಿಕೊಳ್ಳಬೇಕು ಎಂದಾದರೆ ನಾವು ದೇಶದ ಪಿಂಚಣಿ ನಿಧಿಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಬೇಕು.

ಅನುಪಮ್ ಮಣೂರ್
ಅನುಪಮ್ ಮಣೂರ್

ದೇಶದ ಜನಸಂಖ್ಯೆಯಲ್ಲಿ ಈಗ ಯುವಕರು, ದುಡಿಯುವ ವಯಸ್ಸಿನವರ ಪ್ರಮಾಣ ಹೆಚ್ಚಿದೆ. ಇದರ ಪ್ರಯೋಜನವನ್ನು ದೇಶ ಪಡೆಯುತ್ತಿದೆ. ಆದರೆ ಕಾಲ ಸರಿದಂತೆಲ್ಲ ಈ ಪರಿಸ್ಥಿತಿ ಬದಲಾಗುತ್ತದೆ. 2030ರ ವೇಳೆಗೆ ದೇಶದಲ್ಲಿ 20 ಕೋಟಿ ಜನ 60 ವರ್ಷಕ್ಕಿಂತ ಹೆಚ್ಚು ವಯಸ್ಸಾದವರಾಗಿರುತ್ತಾರೆ ಎಂದು ಅಂದಾಜಿಸಲಾಗಿದೆ. ದೇಶದಲ್ಲಿ ಹಿರಿಯ ನಾಗರಿಕರಿಗೆಲ್ಲರಿಗೂ ಅನ್ವಯವಾಗುವ, ಸರ್ಕಾರದ ಬೆಂಬಲ ಇರುವ ಸಾಮಾಜಿಕ ಭದ್ರತಾ ಯೋಜನೆ ಇಲ್ಲ. ಹಾಗಾಗಿ, ಜನ ನಿವೃತ್ತಿ ನಂತರದ ಜೀವನಕ್ಕಾಗಿ ಪಿಂಚಣಿ ನಿಧಿಗಳಲ್ಲಿ ಉಳಿತಾಯ ಮಾಡಬೇಕಿರುವುದು ಅನಿವಾರ್ಯ. ಅಲ್ಲದೆ, ಅನಿರೀಕ್ಷಿತವಾಗಿ ಎದುರಾಗುವ ಕೆಲವು ವೆಚ್ಚಗಳನ್ನು ನಿಭಾಯಿಸಲು ವಿಮೆಗಳಲ್ಲಿ ಹೂಡಿಕೆ ಕೂಡ ಮಾಡಬೇಕು.

2000ನೆಯ ಇಸವಿಯಿಂದ ದೇಶದ ಪಿಂಚಣಿ ವಲಯ ಹಂತ ಹಂತವಾಗಿ ವಿಕಾಸ ಹೊಂದುತ್ತ ಬಂದಿದೆ. ಆ ಕಾಲಘಟ್ಟಕ್ಕೂ ಮೊದಲು ದೇಶದಲ್ಲಿ ನಿವೃತ್ತಿ ನಂತರದ ಜೀವನಕ್ಕೆ ಉಳಿತಾಯ ಮಾಡಬಯಸು
ವವರಿಗೆ ಹೆಚ್ಚು ಆಯ್ಕೆಗಳು ಇರಲಿಲ್ಲ. ಆರಂಭದಲ್ಲಿ ಪಿಂಚಣಿ ಇದ್ದಿದ್ದು ಸರ್ಕಾರಿ ನೌಕರರಿಗೆ ಮಾತ್ರವೇ ಎನ್ನಬಹುದು. ನಂತರದಲ್ಲಿ ಕೆಲವು ದೊಡ್ಡ ಕಂಪನಿಗಳ ನೌಕರರಿಗೂ ಪಿಂಚಣಿಯನ್ನು ಕಡ್ಡಾಯಗೊಳಿಸ
ಲಾಯಿತು. ನೌಕರರು ಐಚ್ಛಿಕವಾಗಿ ಕೊಡುಗೆ ನೀಡಬಹುದಾದ ಎನ್‌ಪಿಎಸ್‌ (ರಾಷ್ಟ್ರೀಯ ಪಿಂಚಣಿ ಯೋಜನೆ) ವ್ಯವಸ್ಥೆಯನ್ನು 2004ರಲ್ಲಿ ಮೊದಲಿಗೆ ಸರ್ಕಾರಿ ನೌಕರರಿಗೆ ಜಾರಿಗೆ ತರಲಾಯಿತು. ನಂತರ 2009ರಲ್ಲಿ ಭಾರತದ ಎಲ್ಲರಿಗೂ ಇದನ್ನು ಹಂತ ಹಂತವಾಗಿ ಮುಕ್ತಗೊಳಿಸಲಾಯಿತು. ಅಲ್ಲಿಂದ ನಂತರ ಈ ಯೋಜನೆಯು ಸ್ಥಿರ ಬೆಳವಣಿಗೆ ಕಾಣುತ್ತಿದೆ.

ಇಷ್ಟೆಲ್ಲ ಆದ ನಂತರದಲ್ಲಿಯೂ ಭಾರತದಲ್ಲಿ ಪಿಂಚಣಿ ಯೋಜನೆಗಳ ವ್ಯಾಪ್ತಿಗೆ ಬಂದ ಜನರ ಸಂಖ್ಯೆ ತೀರಾ ಸೀಮಿತ. ಒಂದಲ್ಲ ಒಂದು ಪಿಂಚಣಿ ಯೋಜನೆಯ ವ್ಯಾಪ್ತಿಗೆ ಬಂದಿರುವ ಭಾರತೀಯರ ಪ್ರಮಾಣ ಗರಿಷ್ಠ ಶೇಕಡ 25ರಷ್ಟು ಮಾತ್ರ. ಜಪಾನ್‌ನಲ್ಲಿ ಇದು ಶೇ 80ರಷ್ಟಿದೆ, ದಕ್ಷಿಣ ಕೊರಿಯಾದಲ್ಲಿ ಶೇ 78ರಷ್ಟಿದೆ, ಚೀನಾದಲ್ಲಿ ಶೇ 74ರಷ್ಟಿದೆ. ಈ ವಿಚಾರದಲ್ಲಿ ಬಾಂಗ್ಲಾದೇಶದ ಸ್ಥಿತಿ ಕೂಡ ಭಾರತಕ್ಕಿಂತ ಉತ್ತಮವಾಗಿದೆ. ಭಾರತದಲ್ಲಿ ಪಿಂಚಣಿ ವ್ಯವಸ್ಥೆಯಡಿ ಬಂದವರಲ್ಲಿ ಹೆಚ್ಚಿನವರು ಸರ್ಕಾರಿ ನೌಕರರು ಹಾಗೂ ಸಂಘಟಿತ ವಲಯದಲ್ಲಿ ಕೆಲಸ ಮಾಡಿದವರು. ಅಸಂಘಟಿತ ವಲಯದ ಬಹುತೇಕ ಮಂದಿ ಯಾವ ಪಿಂಚಣಿ ಯೋಜನೆಯ ಪ್ರಯೋಜನವನ್ನೂ ಪಡೆದವರಲ್ಲ. ಎನ್‌ಪಿಎಸ್‌ ಎಲ್ಲರಿಗೂ ಮುಕ್ತವಾಗಿದೆಯಾದರೂ, ಪಿಂಚಣಿ ಪ್ರಯೋಜನ ಹೆಚ್ಚಿನವರಿಗೆ ಸಿಗಬೇಕು ಎಂದಾದರೆ ಎಲ್ಲರಿಗೂ ಲಭ್ಯವಾಗುವ ಹಾಗೂ ಹೆಚ್ಚು ಜನರಿಗೆ ತಲುಪುವ ಯೋಜನೆಯೊಂದು ಬೇಕು.

ಎಫ್‌ಡಿಐ ಮೂಲಕ ಹೊಸ ಕಂಪನಿಗಳ ಪ್ರವೇಶ ಆದರೆ ಇದು ಸಾಧ್ಯವಾಗಬಹುದು. ವಿದೇಶಿ ಕಂಪನಿಗಳು ನಮ್ಮ ದೇಶಕ್ಕೆ ಪಿಂಚಣಿ ನಿಧಿ ನಿರ್ವಹಣೆ ವಿಚಾರದಲ್ಲಿ ಪರಿಣತಿಯನ್ನೂ, ಸಮಾಜದ ಬೇರೆ ಬೇರೆ ವರ್ಗಗಳಿಗೆ ಆಕರ್ಷಕವಾಗುವ ಹೊಸ ಪಿಂಚಣಿ ಉತ್ಪನ್ನಗಳನ್ನೂ ತರಬಲ್ಲವು. ಎಫ್‌ಡಿಐ ಪ್ರಮಾಣ ಜಾಸ್ತಿ ಮಾಡುವುದರಿಂದ ಪಿಂಚಣಿ ಯೋಜನೆಗಳ ಚಂದಾದಾರರಿಗೆ ತಮ್ಮ ಹಣಕ್ಕೆ ಹೆಚ್ಚಿನ ಲಾಭ ಸಿಗುವ ಸಾಧ್ಯತೆಯೂ ಇದೆ. ನೌಕರರ ಭವಿಷ್ಯನಿಧಿ (ಇಪಿಎಫ್‌) ಹಾಗೂ ಸಾರ್ವಜನಿಕ ಭವಿಷ್ಯನಿಧಿ (ಪಿಪಿಎಫ್) ಯೋಜನೆಗಳಲ್ಲಿ ಸಿಗುವ ಬಡ್ಡಿ ತೀರಾ ಕಡಿಮೆ. ಎನ್‌ಪಿಎಸ್‌ನಲ್ಲಿ ಸಿಗುವ ಲಾಭದ ಪ್ರಮಾಣ ಉತ್ತಮ
ವಾಗಿದೆಯಾದರೂ ಇದು ಬೇರೆ ದೇಶಗಳಲ್ಲಿನ ಪಿಂಚಣಿ ನಿಧಿಗಳ ಜೊತೆ ಹೋಲಿಸಿದರೆ ಕಡಿಮೆಯೇ. ಬಡ್ಡಿ, ಲಾಭಕಡಿಮೆಯಾಗಿರಲು ಮುಖ್ಯ ಕಾರಣ ಈ ನಿಧಿಗಳಲ್ಲಿನ ಹಣದಲ್ಲಿ ಹೆಚ್ಚಿನ ಪಾಲನ್ನು ಸಾಲಪತ್ರಗಳ ಮೇಲೆ ಹೂಡಿಕೆ ಮಾಡುತ್ತಿರುವುದು. ವೃತ್ತಿಪರವಾಗಿ ನಿಭಾಯಿಸಲಾಗುವ ಪಿಂಚಣಿ ನಿಧಿಗಳಲ್ಲಿನ ಹಣವನ್ನು ಈಕ್ವಿಟಿ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ತಂದುಕೊಡಬಹುದು. 30ರ ಹರೆಯದಲ್ಲಿನ ವ್ಯಕ್ತಿಯೊಬ್ಬ 50ರ ವಯಸ್ಸಿನ ವ್ಯಕ್ತಿಗಿಂತಲೂ ಹೆಚ್ಚು ರಿಸ್ಕ್‌ ತೆಗೆದುಕೊಳ್ಳಲು ಸಿದ್ಧನಿರುತ್ತಾನೆ. ಹಾಗಾಗಿ, ಪಿಂಚಣಿ ವಲಯವನ್ನು ಹೆಚ್ಚಿನ ಸ್ಪರ್ಧೆಗೆ ತೆರೆಯುವುದರಿಂದ ಬೇರೆ ಬೇರೆ ವಯೋಮಾನ, ಹಿನ್ನೆಲೆಗಳ ಜನರಿಗೆ ಹೆಚ್ಚಿನ ಆಯ್ಕೆಗಳು ಸಿಗುವಂತೆ ಆಗುತ್ತದೆ.

ದೇಶದಲ್ಲಿ ಈಗ ಇರುವ ಪಿಂಚಣಿ ಯೋಜನೆಗಳಲ್ಲಿ ನಿರ್ಬಂಧಗಳೇ ಹೆಚ್ಚು. ನಿವೃತ್ತಿಯ ವಯಸ್ಸಿನಲ್ಲಿ ಪಿಂಚಣಿ ನಿಧಿಯಲ್ಲಿರುವ ಶೇಕಡ 60ರಷ್ಟು ಹಣವನ್ನು ಏಕಕಂತಿನಲ್ಲಿ ಹಿಂದಕ್ಕೆ ಪಡೆಯಬಹುದು. ಇನ್ನುಳಿದ
ಶೇ 40ರಷ್ಟು ಮೊತ್ತವನ್ನು ಕಾಲಕಾಲಕ್ಕೆ ಆದಾಯ ನೀಡುವ ಯೋಜನೆಗಳಲ್ಲಿ ಕಡ್ಡಾಯವಾಗಿ ವಿನಿಯೋಗಿಸಬೇಕು. ಅಲ್ಲದೆ, ನಿವೃತ್ತಿಗೆ ಮೊದಲೇ ಹಣ ಹಿಂ‍ಪಡೆಯಬೇಕು ಎಂದಾದರೆ ದಂಡ ವಿಧಿಸಲಾಗು
ತ್ತದೆ. ಇಂತಹ ನಿಯಮಗಳನ್ನು ಸಡಿಲಿಸಿದರೆ ಹೆಚ್ಚು ಜನ ಪಿಂಚಣಿ ಯೋಜನೆಗಳ ಚಂದಾದಾರರಾಗಬಹುದು.

ದೇಶದಲ್ಲಿ ಈಗ ಮೂರು ಸರ್ಕಾರಿ ಪಿಂಚಣಿ ನಿಧಿಗಳು, ಐದು ಖಾಸಗಿ ಪಿಂಚಣಿ ನಿಧಿಗಳು ಇವೆ. ಈ ನಿಧಿಗಳು ಎನ್‌ಪಿಎಸ್‌ ಯೋಜನೆಯ ಅಡಿಯಲ್ಲಿ ಸಂಗ್ರಹವಾಗುವ ಮೊತ್ತವನ್ನು ನಿಭಾಯಿಸುತ್ತಿವೆ. ಇವಲ್ಲದೆ, ಮ್ಯೂಚುವಲ್‌ ಫಂಡ್‌ ಕಂಪನಿಗಳು, ವಿಮಾ ಕಂಪನಿಗಳು ರೂಪಿಸಿರುವ ಪಿಂಚಣಿ ಯೋಜನೆಗಳೂ ಇವೆ. ದೇಶದ ವಿಮಾ ವಲಯದಲ್ಲಿ ಸುಮಾರು 60 ಕಂಪನಿಗಳು ಇವೆ. ವಿಮಾ ವಲಯಕ್ಕೆ ಹೋಲಿಸಿದರೆ ಪಿಂಚಣಿ ವಲಯದಲ್ಲಿರುವ ಕಂಪನಿಗಳ ಸಂಖ್ಯೆ ಕಡಿಮೆ. ಪಿಂಚಣಿ ವಲಯದಲ್ಲಿ ಎಫ್‌ಡಿಐ ಪ್ರಮಾಣ ಹೆಚ್ಚಿಸುವುದಕ್ಕೆ ಅವಕಾಶ ಕೊಡುವುದರಿಂದ ಎರಡು ಪರಿಣಾಮಗಳು ಆಗಲಿವೆ. ವಿದೇಶಿ ಕಂಪನಿಗಳು ದೇಶಿ ಮಾರುಕಟ್ಟೆ ಪ್ರವೇಶಿಸುತ್ತವೆ. ದೇಶಿ ಕಂಪನಿಗಳು ವಿದೇಶಿ ಬಂಡವಾಳದ ನೆರವು ಪಡೆದು ತಮ್ಮ ಬೆಳವಣಿಗೆಗೆ ಅದನ್ನು ಬಳಸಿಕೊಳ್ಳುತ್ತವೆ. ಪಿಂಚಣಿ ವಲಯವು ದೊಡ್ಡ ಪ್ರಮಾಣದ ಬಂಡವಾಳ ಕೇಳುತ್ತದೆ, ಹೂಡಿಕೆ ಕಾಲಾವಧಿ ಇಲ್ಲಿ ಬಹಳ ದೀರ್ಘ. ಈ ವಲಯ ದೇಶದಲ್ಲಿ ವಿಸ್ತಾರಗೊಳ್ಳಬೇಕು ಎಂದಾದರೆ ಇಲ್ಲಿ ಬಂಡವಾಳದ ಖಚಿತ ಹರಿವು ಇರಬೇಕು. ಎಫ್‌ಡಿಐ ಹೆಚ್ಚಳದಿಂದ ಪಿಂಚಣಿ ವಲಯದ ಕಂಪನಿಗಳ ಭಾರತದ ಕೆಲವು ಪ್ರವರ್ತಕರಿಗೆ ತಮ್ಮ ಷೇರು ಮಾರಾಟ ಮಾಡುವ ಅವಕಾಶವೂ ಸಿಗಲಿದೆ.

ಭಾರತದಲ್ಲಿ ಪಿಂಚಣಿ ಯೋಜನೆಗಳ ವ್ಯಾಪ್ತಿಗೆ ಹೆಚ್ಚು ಜನ ಬರುವಂತೆ ಮಾಡಲು ವಿದೇಶಿ ಕಂಪನಿಗಳಿಗೆ ಸಾಧ್ಯವಾದರೆ ಅದು ದೇಶದ ಪಾಲಿಗೆ ಬಹುದೊಡ್ಡ ವರವಾಗಲಿದೆ. ಕಳೆದ ಒಂದು ದಶಕದಿಂದ ದೇಶದಲ್ಲಿ ಉಳಿತಾಯದ ಒಟ್ಟು ಪ್ರಮಾಣವು ಕಡಿಮೆ ಆಗುತ್ತಿದೆ. ಈಗ ಅದು ಒಟ್ಟು ಜಿಡಿಪಿಯ ಶೇ 31ರಷ್ಟಿದೆ. ಸಮಸ್ಯೆಯೆಂದರೆ ಉಳಿತಾಯದಲ್ಲಿ ದೊಡ್ಡ ‍ಪ್ರಮಾಣವು ರಿಯಲ್ ಎಸ್ಟೇಟ್ ಹಾಗೂ ಚಿನ್ನದ ರೂಪದಲ್ಲಿದೆ. ಈ ಹಣ ಅರ್ಥವ್ಯವಸ್ಥೆಯಲ್ಲಿ ಉತ್ಪಾದಕ ಹೂಡಿಕೆಯ ರೀತಿಯಲ್ಲಿ ಬಳಕೆಯಾಗುತ್ತಿಲ್ಲ. ಆದರೆ ಪಿಂಚಣಿ, ವಿಮೆ ಮತ್ತು ಮ್ಯೂಚುವಲ್‌ ಫಂಡ್‌ ನಿಧಿಗಳು ಕೌಟುಂಬಿಕ ಉಳಿತಾಯವನ್ನು ದೊಡ್ಡ ಮಟ್ಟದಲ್ಲಿ ಮೂಲಸೌಕರ್ಯದಂತಹ ವಲಯಗಳಲ್ಲಿ ಹೂಡಿಕೆ ಮಾಡಬಲ್ಲವು.

ಪಿಂಚಣಿ ವಲಯವು ಬಲಿಷ್ಠವಾಗಿ ಬೆಳೆದರೆ ಸರ್ಕಾರದ ಮೇಲಿನ ಹಣಕಾಸಿನ ಹೊರೆ ತಗ್ಗುತ್ತದೆ. ಈಗ ಸರ್ಕಾರವು ದೊಡ್ಡ ಮೊತ್ತವನ್ನು ಪಿಂಚಣಿಗಳಿಗಾಗಿ ವಿನಿಯೋಗಿಸುತ್ತಿದೆ. ಸೂಕ್ತ ಕಾನೂನು ಇರುವ, ವಿದೇಶಗಳಿಂದ ಬಂಡವಾಳ ಆಕರ್ಷಿಸಬಲ್ಲ ಪಿಂಚಣಿ ವಲಯವು ಸಾರ್ವಜನಿಕರಿಗೆ, ಪಿಂಚಣಿ ಕಂಪನಿಗಳಿಗೆ ಹಾಗೂ ಇಡೀ ಅರ್ಥ ವ್ಯವಸ್ಥೆಗೆ ಪ್ರಯೋಜನಕಾರಿ ಆಗಬಲ್ಲದು.

ಲೇಖಕ: ಬೆಂಗಳೂರಿನ ತಕ್ಷಶಿಲಾ ಇನ್‌ಸ್ಟಿಟ್ಯೂಷನ್‌ನಲ್ಲಿ ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT