ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ | ಸ್ಥಿರ ಆಸ್ತಿ ಹೊಂದಲು ಹೇಗೆ ಉಯಿಲು ಮಾಡಬೇಕು?

Last Updated 23 ನವೆಂಬರ್ 2021, 20:30 IST
ಅಕ್ಷರ ಗಾತ್ರ

ಚಂದ್ರೇಗೌಡ (ಹೆಸರು ಬದಲಾಯಿಸಿದೆ), ಹಾಸನ

lಪ್ರಶ್ನೆ: ನಾನು ನಿವೃತ್ತ ನೌಕರ. ವಯಸ್ಸು 67 ವರ್ಷ. ನನಗೆ ಇಬ್ಬರು ಹೆಣ್ಣುಮಕ್ಕಳು. ನಾನು, ನನ್ನ ಹೆಂಡತಿ ಒಂದು ಮನೆಯಲ್ಲಿ ವಾಸವಾಗಿದ್ದೇವೆ. ನಮ್ಮ ಮನೆ ಮೇಲೆ ಎರಡು ಸಣ್ಣ ಮನೆಗಳು ಹಾಗೂ ಅದಕ್ಕೂ ಮೇಲೆ ಒಂದು ರೂಮ್ ಇದೆ. ನಮ್ಮ ನಂತರ ಇಬ್ಬರು ಹೆಣ್ಣುಮಕ್ಕಳಿಗೆ ಈ ಸ್ಥಿರ ಆಸ್ತಿ ಹೊಂದಲು ಹೇಗೆ ಉಯಿಲು ಮಾಡಬೇಕು ತಿಳಿಸಿ. ಮೇಲಿನ ಎರಡೂ ಮನೆಗಳನ್ನು ನಿಮ್ಮ ಅಂಕಣ ಓದಿ ಉಳಿತಾಯ ಮಾಡಿ ಕಟ್ಟಿಸಿದ್ದೇವೆ.

ಉತ್ತರ: ಒಂದೇ ನಿವೇಶನದಲ್ಲಿ ಕೆಳಗೆ ಒಂದು, ಮೇಲೆ ಎರಡು ಮನೆಗಳಿದ್ದು, ಇವುಗಳನ್ನು ಹೇಗೆ ವಿಂಗಡಿಸಿ ಮಕ್ಕಳಿಗೆ ಉಯಿಲು ಬರೆಯುವುದು ಎನ್ನುವುದು ನಿಮ್ಮಲ್ಲಿರುವ ಗೊಂದಲ. ನೀವು ಮತ್ತು ನಿಮ್ಮ ಹೆಂಡತಿ ಒಂದು ತೀರ್ಮಾನಕ್ಕೆ ಬಂದು, ಕೆಳಗಿನ ಮನೆ ಒಬ್ಬಳಿಗೆ ಮೇಲಿನ ಮನೆಗಳನ್ನು ಇನ್ನೊಬ್ಬಳಿಗೆ ಸಿಗುವಂತೆ ಉಯಿಲು ಬರೆಯಬಹುದು. ಉಯಿಲು ಬರೆಯುವಾಗ ನಿವೇಶನದಲ್ಲಿ (ಮನೆ ಕಟ್ಟಿದ ಸ್ಥಳ) ಇಬ್ಬರಿಗೂ ಸಮಾನ ಹಕ್ಕು ಇದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು. ನೀವು ಈ ಸ್ಥಿರ ಆಸ್ತಿಯನ್ನು ನಿಮ್ಮ ಹೆಂಡತಿ ಹೆಸರಿಗೆ ಉಯಿಲು ಬರೆದು, ನಿಮ್ಮ ಹೆಂಡತಿಯ ಕಾಲಾನಂತರ ಇಲ್ಲಿ ತಿಳಿಸಿದಂತೆ ಇಬ್ಬರು ಹೆಣ್ಣು ಮಕ್ಕಳಿಗೆ ಸೇರುವಂತೆ ಮಾಡಿರಿ. ಇದರಿಂದ ನಿಮ್ಮ ಹೆಂಡತಿಗೆ ಹೆಚ್ಚಿನ ಭದ್ರತೆ ಸಿಕ್ಕಿದಂತಾಗುತ್ತದೆ.

*****

ಮಹಂತೇಶಪ್ಪ, ಇಳಕಲ್

lಪ್ರಶ್ನೆ: ನಾನು ಸರ್ಕಾರಿ ಶಾಲೆಯ ನಿವೃತ್ತ ಶಿಕ್ಷಕ. ನನ್ನ ತಿಂಗಳ ಪಿಂಚಣಿ ₹ 21,500. ಬ್ಯಾಂಕ್‌ನಲ್ಲಿ ₹ 21 ಲಕ್ಷ ಠೇವಣಿ ಇದೆ. ಠೇವಣಿಯ ಬಡ್ಡಿ ಮೂಲದಲ್ಲಿ ₹ 10,600 ಕಡಿತ ಮಾಡಿರುತ್ತಾರೆ. ನಾನು 15ಎಚ್‌ ಫಾರಂ ಸಲ್ಲಿಸಿರಲಿಲ್ಲ. 15ಎಚ್‌–15ಜಿ ಇವುಗಳ ವ್ಯತ್ಯಾಸ ಏನು? ಮುರಿದ ಬಡ್ಡಿ ವಾಪಸ್‌ ಪಡೆಯುವ ಮಾರ್ಗ ತಿಳಿಸಿ. ನಿಮ್ಮ ಅಂಕಣ ಹಲವು ವರ್ಷಗಳಿಂದ ಓದುತ್ತಿದ್ದೇವೆ. ನಿಜವಾಗಿ ದಿನಪತ್ರಿಕೆ ಎಂದರೆ ‘ಪ್ರಜಾವಾಣಿ’. ಪೇಪರ್‌ಗಾಗಿ ಬೆಳಗ್ಗೆ ಕಾಯುತ್ತಿರುತ್ತೇವೆ.

ಉತ್ತರ: 15ಎಚ್‌–15ಜಿ ಇವೆರಡರಲ್ಲಿ ಬಹಳ ವ್ಯತ್ಯಾಸ ಇಲ್ಲ. ಹಿರಿಯ ನಾಗರಿಕರನ್ನು ಪ್ರತ್ಯೇಕವಾಗಿ ಗುರುತಿಸಲು 15ಎಚ್‌ ನೀಡಲಾಗಿದೆ. ಹಿರಿಯ ನಾಗರಿಕರು ವಾರ್ಷಿಕ₹ 50 ಸಾವಿರಕ್ಕೂ ಮಿಗಿಲಾದ ಬಡ್ಡಿ ವರಮಾನ ಪಡೆಯುತ್ತಿದ್ದರೆ 15ಎಚ್‌, 60 ವರ್ಷದೊಳಗಿನವರು ₹ 40 ಸಾವಿರಕ್ಕೂ ಮಿಗಿಲಾದ ಬಡ್ಡಿ ವರಮಾನ ಪಡೆಯುತ್ತಿದ್ದರೆ 15ಜಿ ಫಾರಂ ಸಲ್ಲಿಸಿದರೆ ಮೂಲದಲ್ಲಿ ತೆರಿಗೆ ಮುರಿಯುವುದಿಲ್ಲ. ಠೇವಣಿದಾರರು ಪ್ರತಿ ವರ್ಷ ಏಪ್ರಿಲ್‌ 15ರೊಳಗೆ ಬ್ಯಾಂಕ್‌ಗೆ ಈ ಫಾರಂ ಸಲ್ಲಿಸಬೇಕು. ಹಿರಿಯ ನಾಗರಿಕರಿಗೆ ಸೆಕ್ಷನ್‌ 80ಟಿಟಿಬಿ ಆಧಾರದ ಮೇಲೆ, ಬ್ಯಾಂಕ್‌ ಹಾಗೂ ಅಂಚೆ ಕಚೇರಿ ಠೇವಣಿಗಳಲ್ಲಿ ಬರುವ ಬಡ್ಡಿ ವರಮಾನದಲ್ಲಿ ಗರಿಷ್ಠ ₹ 50 ಸಾವಿರ ವಿನಾಯಿತಿ ಇದೆ. ಬ್ಯಾಂಕ್‌ ಈಗಾಗಲೇ ಮುರಿದಿರುವ ಬಡ್ಡಿಯ ವಿಚಾರದಲ್ಲಿ ಫಾರಂ ಸಂಖ್ಯೆ 16 (ಎ) ಬ್ಯಾಂಕ್‌ನಿಂದ ಪಡೆದು ಐ.ಟಿ. ವಿವರ ತುಂಬುವಾಗ ವಿವರಣೆ ನೀಡಿ ರೀಫಂಡ್ ಪಡೆಯಿರಿ. ನೀವು ಪತ್ರಿಕೆಯ ಮೇಲೆ ಇಟ್ಟಿರುವ ಗೌರವಕ್ಕೆ ಧನ್ಯವಾದಗಳು.

****

ಚಿಕ್ಕಹೊನ್ನಯ್ಯ, ಬಿಡದಿ

lಪ್ರಶ್ನೆ: ನಾನು ನಿವೃತ್ತ ಸರ್ಕಾರಿ ಉದ್ಯೋಗಿ. ತಿಂಗಳ ಪಿಂಚಣಿ ₹ 23,650. ನನಗೆ ಸ್ವಂತ ಮನೆ ಹಾಗೂ 30X40 ಅಳತೆಯ ನಿವೇಶನ ಇದೆ. ಬ್ಯಾಂಕ್‌ನಿಂದ ಸಾಲ ಪಡೆದು ಈ ನಿವೇಶನದಲ್ಲಿ ಒಂದು ಮನೆ ಕಟ್ಟಿಸಿ ಬಾಡಿಗೆಗೆ ಕೊಡುವ ಆಲೋಚನೆ ಇದೆ. ಈ ಮಾರ್ಗ ಸರಿ ಇದೆಯೇ ಅಥವಾ ನಿವೇಶನ ಮಾರಾಟ ಮಾಡಿ ಬರುವ ಮೊತ್ತದಿಂದ ಪ್ರತಿ ತಿಂಗಳು ಬಡ್ಡಿ ಪಡೆಯುವುದು ಒಳಿತೇ ತಿಳಿಸಿರಿ.

ಉತ್ತರ: ನಿಮ್ಮ ಕುಟುಂಬದ ಸದಸ್ಯರ ವಿಚಾರದಲ್ಲಿ ನೀವು ತಿಳಿಸಿಲ್ಲ. ಗೃಹ ಸಾಲ ದೀರ್ಘಾವಧಿಯದಾದ್ದರಿಂದ ಹಿರಿಯ ನಾಗರಿಕರಿಗೆ ಸಾಮಾನ್ಯವಾಗಿ ಬ್ಯಾಂಕ್‌ಗಳಲ್ಲಿ ಗೃಹ ಸಾಲ ನೀಡುವುದಿಲ್ಲ. ನಿಮ್ಮ ಮಕ್ಕಳು ಉತ್ತಮ ಕೆಲಸದಲ್ಲಿದ್ದು, ಗೃಹ ಸಾಲ ಮರುಪಾವತಿಸುವ ಜವಾಬ್ದಾರಿ ಹೊರುವಲ್ಲಿ ನಿಮ್ಮ ಮಗನನ್ನು ಸಹ ಸಾಲಗಾರ ಆಗಿ ಮಾಡಿ ಸಾಲ ಪಡೆಯಬಹುದು. ನಿಮಗೆ ಬರುವ ಮಾಸಿಕ ಪಿಂಚಣಿ ಆದಾಯ ಖರ್ಚಿಗೆ ಸರಿಹೋಗುವಲ್ಲಿ, ಈ ವಯಸ್ಸಿನಲ್ಲಿ ಸಾಲ ಪಡೆದು ಮನೆ ಕಟ್ಟಿಸುವುದು ಸೂಕ್ತವಲ್ಲ. ಬಾಡಿಗೆಯಿಂದ ಬರುವ ವರಮಾನ ಗೃಹ ಸಾಲದ ಕಂತು ಕೊಡಲು ಸಾಕಾಗಲಾರದು. ಇನ್ನು ನಿವೇಶನ ಮಾರಾಟ ಮಾಡುವ ವಿಚಾರ. ಸ್ಥಿರ ಆಸ್ತಿಗೆ ಮಿಗಿಲಾದ ಹೂಡಿಕೆ ಬೇರೊಂದಿಲ್ಲ. ಇಂದಿನ ನಿವೇಶನದ ಮಾರುಕಟ್ಟೆ ಬೆಲೆ ಚೆನ್ನಾಗಿ ಕಂಡರೂ ಮುಂದೆ ಇದೇ ನಿವೇಶನದ ಬೆಲೆ ಎಷ್ಟಾಗಬಹುದು ಎನ್ನುವುದನ್ನು ಎಂದಿಗೂ ತಿಳಿಯಲು ಸಾಧ್ಯವಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಗೃಹ ಸಾಲ ಪ‍ಡೆಯುವುದಾಗಲಿ, ನಿವೇಶನ ಮಾರಾಟ ಮಾಡುವುದಾಗಲಿ ಸರಿಯಲ್ಲ. ಬರುವ ಪಿಂಚಣಿಯಿಂದ ನಿಮ್ಮ ನಿವೃತ್ತಿ ಜೀವನವನ್ನು ಸುಖವಾಗಿ ಕಳೆಯಿರಿ ಹಾಗೂ ಇರುವ ಮನೆ ಮತ್ತು ನಿವೇಶನ ಮಾರಾಟ ಮಾಡುವ ವಿಚಾರ ಕೈಬಿಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT