ಮಂಗಳವಾರ, ನವೆಂಬರ್ 29, 2022
21 °C

ಪ್ರಶ್ನೋತ್ತರ: ಅಂಗವಿಕಲ ಎಂದು ಪರಿಗಣಿಸಿದರೆ ತೆರಿಗೆಯಲ್ಲಿ ವಿನಾಯಿತಿ ಸಿಗಬಹುದೇ?

ಪ್ರಮೋದ ಶ್ರೀಕಾಂತ ದೈತೋಟ Updated:

ಅಕ್ಷರ ಗಾತ್ರ : | |

ಪ್ರಶ್ನೆ: ನಾನು ಒಂದು ಸಂಸ್ಥೆಯಿಂದ ನನ್ನ 58ನೇ ವಯಸ್ಸಿಗೆ ನಿವೃತ್ತನಾಗಿದ್ದೇನೆ. ನನಗೆ ಪ್ರತಿ ತಿಂಗಳು ₹ 55,000 ಪಿಂಚಣಿ ಬರುತ್ತಿದೆ. ನನಗೆ ಬರುವ ಪಿಂಚಣಿಯಿಂದ ಪ್ರತಿ ವರ್ಷ ₹ 25,000 ತೆರಿಗೆ ಮುರಿದು ಸಂಸ್ಥೆಯವರು ತೆರಿಗೆ ಇಲಾಖೆಗೆ ಜಮಾ ಮಾಡುತ್ತಾರೆ. ನನ್ನ ಸಮಸ್ಯೆ ಏನೆಂದರೆ, ಮಂಡಿ ನೋವಿನಿಂದ ನನಗೆ ನಡೆಯುವುದಕ್ಕೂ ಆಗುತ್ತಿಲ್ಲ. ನನ್ನನ್ನು ಅಂಗವಿಕಲ ಎಂದು ಪರಿಗಣಿಸಿ ತೆರಿಗೆಯಲ್ಲಿ ವಿನಾಯಿತಿ ಕೊಡಬಹುದೇ? ಒಂದು ವೇಳೆ ವಿನಾಯಿತಿ ಇದ್ದರೆ, ಪ್ರಮಾಣಪತ್ರ ತೆಗೆದುಕೊಳ್ಳಬೇಕೇ? ನನಗೆ ಅಂಗವಿಕಲ ಎಂಬ ಪ್ರಮಾಣಪತ್ರ ಸಿಕ್ಕರೆ ಉಪಕಾರವಾಗುತ್ತದೆ.
–ಊರು ಬೇಡ, ಹೆಸರು ಬೇಡ

ಉತ್ತರ: ಆದಾಯ ತೆರಿಗೆಯ ಸೆಕ್ಷನ್ 80 ಯು ಅಂಗವಿಕಲ ವ್ಯಕ್ತಿಗಳಿಗೆ ಸಿಗುವ ತೆರಿಗೆ ವಿನಾಯಿತಿಗಳನ್ನು ಉಲ್ಲೇಖಿಸುತ್ತದೆ. ಅಂಗವೈಕಲ್ಯದ ತೀವ್ರತೆಯ ಆಧಾರದ ಮೇಲೆ ₹ 75,000 ಅಥವಾ ₹ 1.25 ಲಕ್ಷದ ನಿಶ್ಚಿತ ವಿನಾಯಿತಿ ಸಿಗುತ್ತದೆ. ಇದಕ್ಕೆ ತೆರಿಗೆ ಪಾವತಿದಾರನು ನಿವಾಸಿ ಭಾರತೀಯನಾಗಿದ್ದು, ಅಂಗವೈಕಲ್ಯದಿಂದ ಬಳಲುತ್ತಿರಬೇಕು. ಅಲ್ಲದೆ, ಹಿಂದಿನ ವರ್ಷದ ಯಾವುದೇ ಸಮಯದಲ್ಲಿ ಅಂತಹ ವ್ಯಕ್ತಿ ಪ್ರಮಾಣೀಕೃತ ವೈದ್ಯಕೀಯ ಸಂಸ್ಥೆಗಳಿಂದ ‘ಅಂಗವಿಕಲ’ ಎಂದು ದಾಖಲಿಸಿರುವ ‘ಫಾರಂ 10 ಐಎ’ ಪ್ರಮಾಣಪತ್ರ ಹೊಂದಿರಬೇಕು. ಜೀವನ ಪರ್ಯಂತ ಇರುವ ಕಾಯಿಲೆ ಎಂದು ದಾಖಲಿಸಿದ್ದರೆ ಪ್ರತಿ ವರ್ಷ ನವೀಕರಣ ಮಾಡುವ ಅಗತ್ಯವಿಲ್ಲ. ನಿರ್ದಿಷ್ಟ ಸಮಯಮಿತಿ ಹಾಕಿ ಪ್ರಮಾಣಪತ್ರ ಕೊಟ್ಟಿದ್ದರೆ ಆ ಸಮಯ ಮಿತಿ ಕಳೆದ ನಂತರ ಮತ್ತೆ ವೈದ್ಯಕೀಯ ಪ್ರಮಾಣ ಪತ್ರ ಪಡೆಯುವ ಅಗತ್ಯವಿರುತ್ತದೆ.

ನೀವು ನಿಮ್ಮ ಬಳಿ ಇರುವ ಪ್ರಮಾಣ ಪತ್ರವನ್ನು, ಮಾನ್ಯತೆ ಪಡೆದ ವೈದ್ಯರಿಗೆ ತೋರಿಸಿ ನಿಮ್ಮ ಸಂದೇಹವನ್ನು ಬಗೆಹರಿಸಿಕೊಳ್ಳಿ. ನೀವು ನೀಡಿರುವ ಮಾಹಿತಿ ಅನ್ವಯ, ಮೇಲ್ನೋಟಕ್ಕೆ ನಿಮ್ಮ ಸಮಸ್ಯೆ ವಯೋಸಹಜ ಕಾಯಿಲೆಯಾಗಿದ್ದು ಪ್ರಮಾಣೀಕರಿಸಲು ಅರ್ಹವಾಗಿರುವ ಯಾವುದೇ ನಿರ್ದಿಷ್ಟ ಅಂಗವೈಕಲ್ಯದ ವರ್ಗದಲ್ಲಿ ಬರುವಂತೆ ಕಾಣುತ್ತಿಲ್ಲ. ಅಂದರೆ ಕುರುಡುತನ, ಕಡಿಮೆ ದೃಷ್ಟಿ, ಗುಣಪಡಿಸಲಾಗದ ಕುಷ್ಠರೋಗ, ಶ್ರವಣ ದೋಷ, ಲೊಕೊಮೊಟರ್ ಅಸಾಮರ್ಥ್ಯ, ಬುದ್ಧಿಮಾಂದ್ಯತೆ, ಮಾನಸಿಕ ಅಸ್ವಾಸ್ಥ್ಯ ಹಾಗೂ ಆಟಿಸಂ, ಸೆರೆಬ್ರಲ್ ಪಾಲ್ಸಿ ಮತ್ತು ಬಹು ಅಂಗಾಂಗ ಅಸಾಮರ್ಥ್ಯ ಇವುಗಳನ್ನಷ್ಟೇ ಅಂಗವಿಕಲರಿಗಿರುವ ವಿವಿಧ ಕಾನೂನುಗಳಲ್ಲಿ ಪರಿಗಣಿಸಲಾಗಿದೆ.

**

ಪ್ರಶ್ನೆ: ನಾನು ಈಗಾಗಲೇ ಹೊಂದಿರುವ ವ್ಯವಸಾಯದ ಜಮೀನನ್ನು ವ್ಯವಸಾಯೇತರ ಜಮೀನನ್ನಾಗಿ ಪರಿವರ್ತಿಸಿ ಮೈಸೂರಿನ ಹತ್ತಿರ ಬಡಾವಣೆ ನಿರ್ಮಾಣ ಮಾಡಿ, ಇನ್ನೇನು ಎರಡು ತಿಂಗಳಲ್ಲಿ ಅದು ಪೂರ್ಣಗೊಂಡು ನಿವೇಶನಗಳನ್ನು ಮಾರಾಟ ಮಾಡುವ ಹಂತದಲ್ಲಿದ್ದೇವೆ. ಆದರೆ ಮೈಸೂರಿನ ಒಬ್ಬರು ಲೆಕ್ಕಪರಿಶೋಧಕರು ನಿವೇಶನಗಳನ್ನು ಮಾರುವ ಮೊದಲೇ, ನಿವೇಶನದ ಈಗಿನ ಬೆಲೆಯ ಶೇಕಡ 10ರಷ್ಟನ್ನು ಆದಾಯ ತೆರಿಗೆ ರೂಪದಲ್ಲಿ ಪಾವತಿ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಸುಮಾರು ಐದೂವರೆ ಎಕರೆ ಜಮೀನು ಬಡಾವಣೆ ಆಗಿ ಪರಿವರ್ತನೆ ಆಗಿದೆ. ಅದೂ, ಡೆವಲಪರ್ ಜೊತೆ ಸೇರಿ ಈ ವ್ಯವಹಾರ ನಡೆದಿದೆ. ಆದಾಯ ತೆರಿಗೆ ಪಾವತಿ ಮಾಡುವ ಅಥವಾ ಅದರ ಅಗತ್ಯ ಇಲ್ಲದಿರುವ ಬಗ್ಗೆ ಸೂಕ್ತ ಸಲಹೆ ನೀಡಿ. ನಿವೇಶನಗಳನ್ನು ಮಾರುವ ಮೊದಲೇ ತೆರಿಗೆ ಕಟ್ಟಲು ಹಣದ ಕೊರತೆ ಇದೆ ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ.
–ಪುಟ್ಟಮ್ಮ, ಮೈಸೂರು

ಉತ್ತರ: ನೀವು ಪ್ರಶ್ನೆಯಲ್ಲಿ ಉಲ್ಲೇಖಿಸಿರುವಂತೆ, ನಿಮ್ಮ ಹೆಸರಲ್ಲಿರುವ ಜಮೀನನ್ನು ನಿವೇಶನಗಳನ್ನಾಗಿ ಅಭಿವೃದ್ಧಿಪಡಿಸಿ ಮಾರಾಟ ಮಾಡುವ ಉದ್ದೇಶಕ್ಕಾಗಿ ಡೆವಲಪರ್ ಜೊತೆ ಸೇರಿರುತ್ತೀರಿ. ಇದಕ್ಕೆ ಅಗತ್ಯವಾದ ಪ್ರತ್ಯೇಕ ಒಡಂಬಡಿಕೆಯೊಂದನ್ನು ಹೊಂದಿದ್ದೀರಿ ಎಂದು ಭಾವಿಸಿ ಉತ್ತರಿಸುತ್ತಿದ್ದೇನೆ. ಅವರು ತಮ್ಮ ಬಂಡವಾಳದಲ್ಲಿ ನಿಮ್ಮ ಜಮೀನು ಅಭಿವೃದ್ಧಿ ಮಾಡಿ, ಮಾರಾಟ ಯೋಗ್ಯ ನಿವೇಶನಗಳನ್ನಾಗಿ ಮಾಡುವುದಕ್ಕೋಸ್ಕರ ಅವರೂ ನಿವೇಶನದ ಒಂದಿಷ್ಟು ಸ್ವಾಮ್ಯತ್ವ ಪಡೆಯುತ್ತಾರೆ. ಅದೇ ರೀತಿ ನೀವು, ನಿಮ್ಮ ಹಾಗೂ ಡೆವಲಪರ್ ನಡುವಿನ ಮಾತುಕತೆಯಂತೆ ಒಂದು ಒಪ್ಪಿತ ಮೌಲ್ಯದ ಆಧಾರದಲ್ಲಿ ಅವರ ಕಡೆಯಿಂದ ಒಂದಿಷ್ಟು ಅಭಿವೃದ್ದಿಪಡಿಸಿದ ನಿವೇಶನಗಳನ್ನು ಪಡೆಯಲು ಅರ್ಹರಾಗಿರುತ್ತೀರಿ.

ಇಲ್ಲಿ ನಿಮ್ಮ ಅವರ ನಿವೇಶನ ಹಂಚಿಕೆ ವ್ಯವಹಾರ, ವಿನಿಮಯ ಮೌಲ್ಯಕ್ಕೆ ಸರಿಸಮಾನವಾಗಿ ನಿವೇಶನ ರೂಪದಲ್ಲೇ ಹಂಚಿಕೆಯಾಗಿ ಮುಗಿದರೆ ತೊಂದರೆ ಇಲ್ಲ. ಆದರೆ ನೀವು ಹೆಚ್ಚುವರಿ ಹಣವನ್ನು ಡೆವಲಪರ್ ಕಡೆಯಿಂದ ಪಡೆಯುವುದಿದ್ದರೆ, ಅಂತಹ ಮೊತ್ತಕ್ಕೆ ಸೆಕ್ಷನ್ 194-ಐಸಿ ಪ್ರಕಾರ, ಜಂಟಿ ಅಭಿವೃದ್ಧಿ ಒಪ್ಪಂದದ ಅಡಿಯಲ್ಲಿ ಯಾವುದೇ ಡೆವಲಪರ್ ಜಮೀನು ಅಭಿವೃದ್ಧಿ ಯೋಜನೆಯಲ್ಲಿನ ಪಾಲುದಾರಿಕೆಯ ಜೊತೆಗೆ ಜಮೀನು ಮಾಲೀಕರಿಗೆ ಹೆಚ್ಚುವರಿ ಮೊತ್ತವನ್ನು ಹಣದ ರೂಪದಲ್ಲಿ ಪಾವತಿಸಿದರೆ, ಡೆವಲಪರ್ ಅಂತಹ ಪಾವತಿಯ ಮೇಲೆ ಶೇಕಡ 10ರಷ್ಟು ಟಿಡಿಎಸ್ (ಮೂಲದಲ್ಲೇ ತೆರಿಗೆ ಕಡಿತ) ಮಾಡಬೇಕಾಗಿರುತ್ತದೆ. ಆದಾಯ ತೆರಿಗೆ ಕಾಯ್ದೆ, 1961ರ ನಿಯಮ 45(5ಎ) ವಿವರಣೆ (2)ರಂತೆ ಜಂಟಿ ಅಭಿವೃದ್ಧಿಯ ನಿರ್ದಿಷ್ಟ ಒಪ್ಪಂದದಂತೆ ಸ್ವತ್ತುಗಳ ವರ್ಗಾವಣೆಯಾದಲ್ಲಿ ಹಣದ ರೂಪದಲ್ಲಿ ಕೊಡುವ ಮೊತ್ತದ ಮೇಲೆ ಮಾತ್ರ ಈ ಟಿಡಿಎಸ್ ನಿಯಮ ಅನ್ವಯವಾಗುತ್ತದೆ. ಇಲ್ಲಿ ಟಿಡಿಎಸ್ ಕಡಿತಗೊಳಿಸುವ ಜವಾಬ್ದಾರಿ ಡೆವಲಪರ್‌ಗಳದ್ದು.

ಮೇಲೆ ತಿಳಿಸಿರುವ ಮಾಹಿತಿಯು ಮೊದಲ ಹಂತ. ನಿಮಗೆ ನಿಜವಾದ ತೆರಿಗೆ ಜವಾಬ್ದಾರಿ ನಿಮ್ಮ ಪಾಲಿನ ನಿವೇಶನ ಆದಾಯ ತೆರಿಗೆಯ ಸೆಕ್ಷನ್ 45(5ಎ) ಇದರ ಪ್ರಕಾರ ಆಸ್ತಿ ವರ್ಗಾವಣೆಯಾದಾಗ ಬರುವ ‘ಬಂಡವಾಳ ವೃದ್ಧಿ’ ತೆರಿಗೆ ಶೇ 20ರಷ್ಟು ಇರುತ್ತದೆ. ಅದರ ಮೇಲೆ ಶೇ 4ರಷ್ಟು ಸೆಸ್ ಇದೆ. ಮೇಲೆ ನಿಮ್ಮ ಹೆಸರಲ್ಲಿ ಕಡಿತವಾದ ಶೇ 10ರ ಮೊತ್ತವನ್ನು ನೀವು ಕೊಡಬೇಕಾಗುವ ತೆರಿಗೆಯೊಡನೆ ವಜಾ ಮಾಡಬಹುದು. ನಿಮ್ಮ ನಿಖರ ತೆರಿಗೆ ಜವಾಬ್ದಾರಿ ತಿಳಿಯಲು ಹೆಚ್ಚಿನ ಮಾಹಿತಿಯೊಂದಿಗೆ ಸಮೀಪದ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ
ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.

ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001. ಇ–ಮೇಲ್‌: businessdesk@prajavani.co.in

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು