ಸೋಮವಾರ, ಆಗಸ್ಟ್ 8, 2022
21 °C

ಏನಾದ್ರೂ ಕೇಳ್ಬೋದು| ವಾಸ್ತು, ಜಾತಕದಂಥ ದ್ವಂದ್ವದಿಂದ ಹೊರ ಬರುವುದು ಹೇಗೆ?

ನಡಹಳ್ಳಿ ವಸಂತ್‌ Updated:

ಅಕ್ಷರ ಗಾತ್ರ : | |

ವಿವಾಹಿತೆ. ಕೆಲವು ವರ್ಷಗಳ ಹಿಂದೆ ನನ್ನ ಪತಿಗೆ ದೊಡ್ಡ ಅಪಘಾತವಾಗಿ 9 ತಿಂಗಳು ಬಹಳ ಕಷ್ಟವಾಗಿತ್ತು. ಪತಿ ಹುಷಾರಾದರೆ ಸಾಕು ಎಂದು ಹಿತೈಷಿಗಳು ಹೇಳಿದಂತೆ ಪೂಜೆ, ಹೋಮ, ವಾಸ್ತು, ಜಾತಕ ಎಲ್ಲದರ ಮೊರೆಹೋದೆ. ಈಗ ಪತಿ ಗುಣವಾಗಿದ್ದಾರೆ. ನನ್ನ ಭಯ, ಹತಾಶೆಯ ದಿನಗಳಲ್ಲಿ ಇತರರ ನಂಬಿಕೆಗಳು ಮೇಲುಗೈ ಸಾಧಿಸಲು ಸುಲಭವಾಯಿತು. ವಾಸ್ತು, ಜಾತಕ ಮತ್ತಿತರ ವಿಚಾರಗಳ ದ್ವಂದ್ವದಿಂದ ಹೊರಬರಲು ಇಚ್ಛಿಸುತ್ತೇನೆ. ಎಂತಹ ಹತಾಶೆಯ ಸ್ಥಿತಿಯಲ್ಲಿಯೂ ಇತರರ ನಂಬಿಕೆಗಳು ನನ್ನ ಮೇಲೆ ದಾಳಿ ಮಾಡದಂತೆ ಇರುವುದು ಹೇಗೆ?

ಹೆಸರು ತಿಳಿಸಿಲ್ಲ, ಬೆಂಗಳೂರು.

ಧಾರ್ಮಿಕ ನಂಬಿಕೆಗಳು ಜೀವನದ ಆದರ್ಶಗಳಾಗಲಿ, ಗುರಿಯಾಗಲಿ ಅಥವಾ ನಮ್ಮ ವ್ಯಕ್ತಿತ್ವದ ಗುರುತುಗಳಾಗಲಿ ಆಗಬೇಕಾಗಿಲ್ಲ. ಅವುಗಳು ಇರುವುದು ನಮ್ಮ ಅಂತರಂಗದ ಸಮಾಧಾನವನ್ನು ಕಂಡುಕೊಳ್ಳಲು ಮಾತ್ರ. ನಂಬಿಕೆಗಳು ವೈಯುಕ್ತಿಕವಾದದ್ದು. ನಮ್ಮ ನಂಬಿಕೆಗಳು ಅನ್ಯಾಯ, ಶೋಷಣೆ, ಅಸಮಾನತೆಗಳಿಗೆ ಕಾರಣವಾಗದಂತೆ ಎಚ್ಚರವಹಿಸಬೇಕು. ಬೇರೆಯವರ ಒತ್ತಡಕ್ಕೊಳಗಾಗಿ ನಿಮಗಿಷ್ಟವಿರದ ಸಂಪ್ರದಾಯಗಳನ್ನು ಆಚರಿಸುವ ಮೂಲಕ ನಿಮ್ಮ ಸ್ವಂತಿಕೆಯನ್ನು ಕಳೆದುಕೊಂಡ ನೋವಿರಬೇಕಲ್ಲವೇ? ನಿಮ್ಮದೇ ನಂಬಿಕೆಗಳಿಗೆ ಅಂಟಿಕೊಂಡರೆ ಸಂಬಂಧಗಳನ್ನು ಕಳೆದುಕೊಳ್ಳುವ ಭಯವೂ ಕಾಡುತ್ತಿರಬೇಕಲ್ಲವೇ? ನಿಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳುವುದು ಎಷ್ಟು ಅಗತ್ಯವೋ ಕೌಟುಂಬಿಕ ಸ್ನೇಹ ಸಂಬಂಧಗಳನ್ನು ಉಳಿಸಿಕೊಳ್ಳುವುದೂ ಅಷ್ಟೇ ಮುಖ್ಯ. ಈ ಎಲ್ಲಾ ವಿಚಾರಗಳಿಗೆ ನಿಮ್ಮ ಪತಿಯ ಸಹಕಾರವೂ ಅಗತ್ಯವಲ್ಲವೇ? ಹಾಗಾಗಿ ನಿಮ್ಮ ನಂಬಿಕೆಗಳು, ಹಿಂಜರಿಕೆಗಳು, ಸ್ವಂತಿಕೆಯನ್ನು ಕಳೆದುಕೊಳ್ಳುವ ಭಯ ಮುಂತಾದ ಎಲ್ಲಾ ವಿಚಾರಗಳನ್ನು ಪತಿಯ ಜೊತೆ ಮುಕ್ತವಾಗಿ ಚರ್ಚೆಮಾಡಿ. ಇತರರ ನಂಬಿಕೆಗಳನ್ನು ಗೌರವಿಸುತ್ತಲೇ ನಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳದೆ ಬದುಕುವ ದಾರಿಗಳನ್ನು ಇಬ್ಬರೂ ಒಟ್ಟಾಗಿ ಹುಡುಕಿಕೊಳ್ಳಲು ಸಾಧ್ಯವಿದೆ. ಇತರರ ನಂಬಿಕೆಗಳು ನಿಮ್ಮ ಮೇಲೆ ದಾಳಿ ಮಾಡಬಾರದೆಂದು ನಿರೀಕ್ಷಿಸುವುದಾದರೆ ನಿಮ್ಮ ಹತಾಶೆ, ನೋವುಗಳನ್ನು ನಿಮ್ಮೊಳಗೇ ನಿಭಾಯಿಸುವುದನ್ನು ಕಲಿಯಬೇಕು. ಇದೊಂದು ರೀತಿಯ ಆಧ್ಯಾತ್ಮಿಕ ಸಾಧನೆ. ಒಬ್ಬ ಗುರು ಅಥವಾ ಮನೋಚಿಕಿತ್ಸಕನ ಸಹಾಯವನ್ನು ಪಡೆಯಬೇಕಾಗುತ್ತದೆ.

25ರ ಯುವಕ. ತೊದಲಿನ ಸಮಸ್ಯೆಯಿದೆ. ಪರಿಚಿತರೊಡನೆ, ಮಕ್ಕಳೊಡನೆ ಮಾತನಾಡುವಾಗ ಆಗಾಗ ತೊದಲು ಕಾಣಿಸಿಕೊಂಡರೂ ನಿರಾತಂಕವಾಗಿ ಮಾತನಾಡುತ್ತೇನೆ. ಅಪರಿಚಿತರೊಡನೆ ಅಥವಾ ನನಗಿಂತ ದೊಡ್ಡಮಟ್ಟದಲ್ಲಿರುವವರೊಡನೆ ಮಾತನಾಡುವಾಗ ಭಯ, ಹಿಂಜರಿಕೆ ಕಾಡುತ್ತದೆ. ಇದರಿಂದಾಗಿ ಎಷ್ಟೋ ಅವಕಾಶಗಳು ಕಳೆದು ಹೋಗಿವೆ. ಇದಕ್ಕೆ ಪರಿಹಾರವಿದೆಯೇ?

ಹೆಸರು, ಊರು ತಿಳಿಸಿಲ್ಲ.

ತೊದಲಿನ ತೊಂದರೆಯ ಕುರಿತು ನಿಮಗಿರುವ ಸ್ಪಷ್ಟತೆಯು ನನಗೆ ಮೆಚ್ಚುಗೆಯಾಯಿತು. ನಿಮಗಿರುವುದು ತೊದಲಿನ ಸಮಸ್ಯೆಯಲ್ಲ. ನಿಮ್ಮನ್ನು ಕಾಡುತ್ತಿರುರವ ಭಯ, ಹಿಂಜರಿಕೆಗಳನ್ನು ಮುಚ್ಚಿಕೊಳ್ಳಲು ತೊದಲನ್ನು ರಕ್ಷಣಾಕವಚವಾಗಿ ಬಳಸುತ್ತಿದ್ದೀರಲ್ಲವೇ? ಹೀಗೆ ರಕ್ಷಿಸಿಕೊಳ್ಳುವ ಬದಲು ‘ನನ್ನ ಭಯ, ಹಿಂಜರಿಕೆಗಳು ನನ್ನ ಬಗೆಗೆ ಏನು ಹೇಳುತ್ತಿವೆ?’ ಎಂದು ಯೋಚಿಸಿ. ನಿನಗೆ ಯೋಗ್ಯತೆಯಿಲ್ಲ, ನೀನು ಜನರ ಜೊತೆ ಬೆರೆಯುವಾಗ ಅವಮಾನಿತನಾಗುತ್ತೀಯಾ, ನೀನು ಕೆಲವು ವಿಚಾರಗಳಲ್ಲಿ ದುರ್ಬಲ-ಹೀಗೆ ಬಾಲ್ಯದಿಂದ ಮನದಾಳದಲ್ಲಿ ಕೊರೆಯುತ್ತಿರುವ ಹಲವಾರು ಅಂಶಗಳು ನಿಮ್ಮ ಗಮನಕ್ಕೆ ಬರುತ್ತವೆ. ಅವುಗಳ ಹಿನ್ನೆಲೆ, ಸತ್ಯಾಸತ್ಯತೆಗಳನ್ನು ಪರೀಕ್ಷಿಸಿ. ನಿಮ್ಮ ಆತ್ಮಗೌರವ ಹೆಚ್ಚಿದರೆ ತೊದಲು ತನ್ನಿಂದತಾನೇ ಮಾಯವಾಗತ್ತದೆ. ಅಗತ್ಯವಿದ್ದರೆ ತಜ್ಞ ಮನೋಚಿಕಿತ್ಸಕರ ಸಹಾಯ ಪಡೆಯಿರಿ. 

ನೀವು ಕೊಡುವ ಸಲಹೆಗಳು ತುಂಬಾ ಚೆನ್ನಾಗಿವೆ. ಪ್ರತಿಯೊಬ್ಬರ ಮಾನಸಿಕ ಒತ್ತಡವನ್ನು ಸರಳವಾಗಿ ಬಗೆಹರಿಸುತ್ತೀರಿ. ತಾಳ್ಮೆ ಹಾಗೂ ಯೋಚನಾಶಕ್ತಿಯನ್ನು ಪಡೆಯುವ ಒಂದೆರೆಡು ಸಲಹೆಗಳನ್ನು ನೀಡುತ್ತೀರಾ?

ಪ್ರಸಾದ್‌, ಊರಿನ ಹೆಸರಿಲ್ಲ.

ನಿಮ್ಮ ಪ್ರಶಂಸೆಗೆ ಧನ್ಯವಾದಗಳು.  ಮಾನಸಿಕ ಸಮಸ್ಯೆಗಳು ದೈಹಿಕ ಸಮಸ್ಯೆಗಳಂತಲ್ಲ. ಹೊರಗೆ ಕಾಣಿಸುವ ಲಕ್ಷಣಗಳು ಒಂದೇ ರೀತಿಯಲ್ಲಿದ್ದರೂ ಮಾನಸಿಕ ಹೋರಾಟಗಳ ಮೂಲ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತದೆ. ತಾಳ್ಮೆ ಮತ್ತು ಯೋಚನಾಶಕ್ತಿ ಎಂದು ಹೇಳುವಾಗ ನಿಮ್ಮ ಮನದಾಳದಲ್ಲಿ ಕೆಲವು ವಿಚಾರಗಳಿರುತ್ತವೆ. ಅದೇನಿರಬಹುದು? ನೀವು ಯಾವ ವಿಚಾರಗಳಲ್ಲಿ ತಾಳ್ಮೆಯನ್ನು ಕಳೆದುಕೊಳ್ಳುತ್ತೀರಿ? ತಕ್ಷಣ ಕೋಪ ಬರುತ್ತದೆ ಎಂದೇ? ಇದರಿಂದ ಸ್ನೇಹ, ಸಂಬಂಧಗಳು ಹಾಳಾಗುತ್ತಿವೆಯೇ? ಯೋಚನೆ ಮಾಡದೆ ತಪ್ಪುನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ ಎಂದೇ? ಹೀಗೆ ನಿಮ್ಮ ಮಾನಸಿಕ ತೊಳಲಾಟಗಳ ಕುರಿತು ಸ್ಪಷ್ಟವಾಗಿ ಹೇಳಿದಾಗ ಮಾತ್ರ ಸಹಾಯ ಮಾಡುವುದು ಸಾಧ್ಯ.

* 22ರ ತರುಣ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ಬಹುದೊಡ್ಡ ಕ್ರಿಕೆಟಿಗ ಆಗಬೇಕೆನ್ನುವ ಕನಸಿತ್ತು. ಆದರೆ ನನ್ನವರಿಗಾಗಿ ಬೇರೆ ದಾರಿಯಲ್ಲಿ ಹೋಗುತ್ತಿದ್ದೇನೆ ಎನ್ನಿಸುತ್ತಿದೆ. ಒಂದು ಹುಡುಗಿಯ ಮೇಲೆ ಆಸಕ್ತಿ ಮೂಡಿದೆ. ಇದರಿಂದ ಓದಿಗೆ ತೊಂದರೆಯಾಗುತ್ತದೆಯೇ ಅನ್ನಿಸುತ್ತಿದೆ.. ಏನು ಮಾಡಬಹುದು?

ಗೂಗ್ಲಿ, ಊರಿನ ಹೆರಿಲ್ಲ.

ದೊಡ್ಡ ಕ್ರಿಕೆಟಿಗನಾಗಬೇಕೆನ್ನುವ ನಿಮ್ಮ ಹಂಬಲ ಮೆಚ್ಚುವಂತಹುದು. ಇದನ್ನು ಸಾಧಿಸಲು ಪ್ರತಿಭೆ, ಹಣಕಾಸಿನ ಬೆಂಬಲ, ಸೋಲುಗಳನ್ನು ಸಹಿಸಿಕೊಳ್ಳುವ ಗಟ್ಟಿತನ, ತಾಳ್ಮೆ ಎಲ್ಲವೂ ಅಗತ್ಯವಲ್ಲವೇ? ಈ ವಿಷಯಗಳಲ್ಲಿ ನಿಮಗೆ ಗೊಂದಲವಿರುವುದಕ್ಕಾಗಿಯೇ ಕ್ರಿಕೆಟ್‌ ಅನ್ನು ಬಿಟ್ಟು ಉದ್ಯೋಗದ ಕಡೆ ಮುಖ ಮಾಡಿರಬೇಕಲ್ಲವೇ? ಹಾಗಿದ್ದ ಮೇಲೆ ನಿಮ್ಮ ನಿರ್ಧಾರಕ್ಕೆ ಬೇರೆಯವರು ಹೇಗೆ ಹೊಣೆಯಾಗುತ್ತಾರೆ? ಹುಡುಗಿಯರ ಮೇಲೆ ಆಕರ್ಷಣೆ ಯೌವನದ ಸಹಜ ಪ್ರವೃತ್ತಿ. ಸ್ಪರ್ಧಾತ್ಮಕ ಪರೀಕ್ಷೆಗಳು ನಿಮ್ಮ ಆಳದ ಬಯಕೆಯಾದರೆ ಇತರ ಆಕರ್ಷಣೆಗಳು ಅಡ್ಡಿಯಾಗುವುದಕ್ಕೆ ಹೇಗೆ ಸಾಧ್ಯ? ಕ್ರಿಕೆಟಿಗನಾಗುವ ಕನಸುಗಳನ್ನು ಕಳೆದುಕೊಂಡಿರುವುದರ ಬಗ್ಗೆ ಕಹಿ, ಮುಂದಿನ ದಾರಿಯ ಅಸ್ಪಷ್ಟತೆ ನಿಮ್ಮ ಪತ್ರದಲ್ಲಿ ಕಾಣಿಸುತ್ತದೆ. ಈ ದೃಷ್ಟಿಕೋನದಿಂದ ಯೋಚಿಸಿದರೆ ಮುಂದಿನ ದಾರಿಗಳು ನಿಮಗೇ ಹೊಳೆಯುತ್ತದೆ.

* ಕೆಪಿಎಸ್‌ಸಿ ಪರೀಕ್ಷೆಗೆ ಓದುತ್ತಿದ್ದೇನೆ. ಈಗಾಗಲೇ 4-5 ಬಾರಿ ಬರೆದಿದ್ದು ಒಂದರೆಡು ಅಂಕಗಳಿಂದ ಆಯ್ಕೆಯಾಗುತ್ತಿಲ್ಲ. ಇದರಿಂದ ಆರ್ಥಿಕ ಸಮಸ್ಯೆ ಮತ್ತು ಸಂಬಂಧಿಕರ ಮಾತುಗಳಿಂದ ನೋವನ್ನು ಅನುಭವಿಸುತ್ತಿದ್ದೇನೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ನಿಮ್ಮ ಸಲಹೆ?

ಹೆಸರು, ಊರು ತಿಳಿಸಿಲ್ಲ.

ಯಶಸ್ಸನ್ನು ಬಹಳ ಹತ್ತಿರದಿಂದ ಕಳೆದುಕೊಂಡಾಗ ನೋವಾಗುವುದು ಸಹಜ. ಆರ್ಥಿಕ ಅವಲಂಬನೆ ಕೂಡ ನಿಮ್ಮ ಹಿಂಜರಿಕೆಯನ್ನು ಹೆಚ್ಚಿಸುತ್ತದೆ. ಎಲ್ಲಾ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವ ಒತ್ತಡದಿಂದ ಕಷ್ಟಗಳನ್ನು ಹೆಚ್ಚು ಮಾಡಿಕೊಳ್ಳುತ್ತೀರಿ. ಮೊದಲು ಆರ್ಥಿಕವಾಗಿ ಸ್ವಂತಂತ್ರರಾಗುವ ಮಾರ್ಗಗಳನ್ನು ಹುಡುಕಿ. ಹಾಗೆಯೇ ಸಿಗುವಷ್ಟು ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಓದನ್ನು ಮುಂದುವರೆಸಿ. ಆರ್ಥಿಕ ಸ್ವಾಂತಂತ್ರ್ಯದಿಂದ ಸಿಗುವ ಮನೋಬಲ ನಿಮ್ಮ ಓದಿಗೆ ಸಹಾಯ ಮಾಡುತ್ತದೆ.

* ಕೆಎಎಸ್‌ ಮಾಡುವ ಮಹತ್ವಾಕಾಂಕ್ಷೆಯಿದೆ. ಆದರೆ ಋಣಾತ್ಮಕ ಅಂಶಗಳನ್ನು ತಲೆಯಲ್ಲಿ ಹೊತ್ತು ಸಾಕಾಗಿದೆ. ಎಷ್ಟೇ ಪ್ರಯತ್ನಪಟ್ಟರೂ ಬಿಡುವುದಕ್ಕೆ ಆಗುತ್ತಿಲ್ಲ. ನನ್ನಲ್ಲಿ ಜ್ಞಾನವಿದೆ. ಆದರೆ ಋಣಾತ್ಮಕ ಚಿಂತನೆಗಳು ನನ್ನ ಕನಸಿಗೆ ಮುಳ್ಳಾಗುತ್ತದೆಯೋ ಎನ್ನುವ ಭಯ. ಪರಿಹಾರವೇನು?

ಹೆಸರು ತಿಳಿಸಿಲ್ಲ, ವಿಜಯಪುರ.

ಋಣಾತ್ಮಕ ಅಂಶಗಳು ಎಂದು ನೀವು ಯಾವುದಕ್ಕೆ ಹೇಳುತ್ತಿದ್ದೀರಿ? ಬೇಡವಾದ ಯೋಚನೆಗಳನ್ನು ತೆಗೆದುಹಾಕಿ ಬೇಕಾದುದನ್ನು ಮಾತ್ರ ಉಳಿಸಿಕೊಳ್ಳುವ ವ್ಯವಸ್ಥೆಯನ್ನು ಪ್ರಕೃತಿ ನಮ್ಮ ಮೆದುಳಿಗೆ ನೀಡಿಲ್ಲ. ಯಾವುದಾದರೂ ಪ್ರಯತ್ನ ಮಾಡುವಾಗ ಅದರಲ್ಲಿ ಯಶಸ್ವಿಯಾಗಬಹುದೇ ಎನ್ನುವ ಅನುಮಾನಗಳು ಮನುಷ್ಯ ಸಹಜ. ಅಂತಹ ಯೋಚನೆಗಳನ್ನು ಋಣಾತ್ಮಕವೆಂದುಕೊಂಡು ಹೊರಹಾಕಲು ಪ್ರಯತಿಸಿದಷ್ಟೂ ನೀವು ಸೋಲುವುದು ಖಂಡಿತ. ಕೊನೆಗೆ ಯೋಚನೆಗಳನ್ನು ಹೊರಹಾಕುವ ಕಷ್ಟವೇ ದೊಡ್ಡ ಮಾನಸಿಕ ಹೊರೆಯಾಗುತ್ತದೆ. ಭವಿಷ್ಯದ ಅನಿಶ್ಚಿತತೆ ಸಹಜವೆಂದು ಒಪ್ಪಿಕೊಳ್ಳಿ. ಇದನ್ನು ದೌರ್ಬಲ್ಯವೆಂದುಕೊಂಡು ಮೀರುವ ಪ್ರಯತ್ನ ಮಾಡದೆ ಇಂತಹ ಯೋಚನೆ ಬಂದಾಗ ದೀರ್ಘವಾಗಿ ಉಸಿರಾಡುತ್ತಾ ನಿಮ್ಮ ದೇಹ, ಮನಸ್ಸುಗಳನ್ನು ಶಾಂತಗೊಳಿಸುವುದನ್ನು ಕಲಿಯಿರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.