ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ‘ಜೀವನ್ ಅಕ್ಷಯ್’ ಯೋಜನೆಯಲ್ಲಿ ತೆರಿಗೆ ವಿನಾಯಿತಿ ಇದೆಯೇ?

Last Updated 25 ಮೇ 2021, 20:50 IST
ಅಕ್ಷರ ಗಾತ್ರ

ನಾನು ಸರ್ಕಾರಿ ವೃತ್ತಿಯಿಂದ ವಿಆರ್‌ಎಸ್‌ ಪಡೆದಿದ್ದೇನೆ. ಈಗ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ತಿಂಗಳಿಗೆ ₹ 10 ಸಾವಿರ ಉಳಿಸಬಹುದು. ಈ ಹಣ ಆರ್‌.ಡಿ. ಅಥವಾ ಮ್ಯೂಚುವಲ್‌ ಫಂಡ್‌ ‘ಎಸ್‌ಐಪಿ’ಯಲ್ಲಿ ಇರಿಸಬೇಕೆಂದಿದ್ದೇನೆ. ಒಂದು ವೇಳೆ ‘ಎಸ್‌ಐಪಿ’ಯಲ್ಲಿ ಹಣ ಹೂಡುವುದಾದರೆ ಭದ್ರತೆ ಇರುವ ಯೋಜನೆ ಇದ್ದರೆ ತಿಳಿಸಿ. ನಾನು ನಿಮ್ಮ ಸಲಹೆಗಳಿಂದ ಪ್ರಭಾವಿತನಾಗಿದ್ದೇನೆ.
-ಚಂದ್ರಮೋಹನ್, ಊರುಬೇಡ

ಉತ್ತರ: ನೀವು ಮ್ಯೂಚುವಲ್ ಫಂಡ್‌ನ ‘ಎಸ್‌ಐಪಿ’ಯಲ್ಲಿ ₹ 10 ಸಾವಿರ ಹೂಡಲು ಬಯಸಿದ್ದೀರಿ. ‘ಎಲ್ಲಾ ಮೊಟ್ಟೆಗಳನ್ನೂ ಒಂದೇ ಬುಟ್ಟಿಯಲ್ಲಿ ಇಡಬೇಡಿ’ ಎನ್ನುವ ಗಾದೆ ನೆನಪಿಸಿಕೊಂಡು ₹ 5 ಸಾವಿರ ‘ಎಸ್‌ಐಪಿ’ಯಲ್ಲಿ ಹಾಗೂ ₹ 5 ಸಾವಿರ ಆರ್‌.ಡಿ.ಯಲ್ಲಿ ಹೂಡಿಕೆ ಮಾಡಿ. ‘ಎಸ್‌ಐಪಿ’ ಆರಿಸಿಕೊಳ್ಳುವಾಗ ಡೆಟ್‌ ಫಂಡ್‌ (ಸರ್ಕಾರಿ ಸಾಲಪತ್ರಗಳಲ್ಲಿ ಹಣ ತೊಡಗಿಸುವುದು) ಆರಿಸಿಕೊಳ್ಳಿ. ಇದರಲ್ಲಿ ನಷ್ಟ ಆಗುವ ಸಾಧ್ಯತೆ ಇರುವುದಿಲ್ಲ ಜೊತೆಗೆ ಉತ್ತಮ ವರಮಾನ ಬರುವ ಸಾಧ್ಯತೆಯೂ ಇದೆ. ಇನ್ನುಳಿದ ₹ 5 ಸಾವಿರವನ್ನು ಆರ್‌.ಡಿ. ಮಾಡಿ. ಇವೆರಡೂ ಪ್ರತಿ ತಿಂಗಳೂ ತುಂಬುವ ಯೋಜನೆ ಆಗಿದ್ದು, ಆರ್ಥಿಕ ಶಿಸ್ತು ಕಾಪಾಡಿಕೊಳ್ಳಲು ಬಹು ಉಪಯೋಗಿ ಆಗಿವೆ. ಹೀಗೆ ಆರ್‌.ಡಿ. ಮತ್ತು ‘ಎಸ್‌ಐಪಿ’ ಮಾಡುವಾಗ ತಿಂಗಳ ಕಂತು ಭರಿಸಲು ನಿಮ್ಮ ಉಳಿತಾಯ ಖಾತೆಯಿಂದ ಈ ಎರಡೂ ಯೋಜನೆಗಳಿಗೆ ಪ್ರತಿ ತಿಂಗಳೂ ಹಣ ವರ್ಗಾಯಿಸಲು ಬ್ಯಾಂಕ್‌ಗೆ ನಿರ್ದೇಶನ (ಸ್ಟ್ಯಾಂಡಿಂಗ್‌ ಇನ್‌ಸ್ಟ್ರಕ್ಷನ್‌) ಕೊಡಿ. ಈ ಸೇವೆ ಶುಲ್ಕ ರಹಿತವಾಗಿದೆ.

***

ಎಲ್‌.ಐ.ಸಿ.ಯವರ ‘ಜೀವನ್ ಅಕ್ಷಯ್‌’ ಪಾಲಿಸಿ ವಿಚಾರದಲ್ಲಿ ಸಂಪೂರ್ಣ ಮಾಹಿತಿ ಕೊಡಿ. ಈ ಯೋಜನೆಯಲ್ಲಿ ತೆರಿಗೆ ವಿನಾಯಿತಿ, ವಿಮೆ ಸವಲತ್ತುಗಳಿವೆಯೇ?
-ವಿಜಯೇಂದ್ರ, ಮೈಸೂರು

ಉತ್ತರ: ಈ ಯೋಜನೆಯಲ್ಲಿ ಕನಿಷ್ಠ ₹ 1 ಲಕ್ಷ (ಗರಿಷ್ಠ ಮಿತಿ ಇಲ್ಲ) ತೊಡಗಿಸಿ ಪ್ರತೀ ತಿಂಗಳೂ ಪಿಂಚಣಿ ರೂಪದಲ್ಲಿ ವರಮಾನ ಪಡೆಯಬಹುದು. ಇಲ್ಲಿ ಹಣ ಹೂಡಿಕೆ ಮಾಡಲು 30 ವರ್ಷ ವಯಸ್ಸಿನಿಂದ 100 ವರ್ಷ ವಯಸ್ಸಿನವರೆಗಿನ ವ್ಯಕ್ತಿಗಳು ಅರ್ಹರು. ಓರ್ವ ವ್ಯಕ್ತಿ ₹ 10 ಲಕ್ಷ ಹಣ ಹೂಡಿದರೆ ವಾರ್ಷಿಕ ₹ 65,850 (ಮಾಸಿಕ ₹ 5,487) ನಿರಂತರವಾಗಿ ಪಡೆಯಬಹುದು. ಪಿಂಚಣಿ ರೂಪದಲ್ಲಿ ಪಡೆಯುವ ಈ ಯೋಜನೆಯಲ್ಲಿ ಪ್ರಸ್ತುತ ಶೇ 6ಕ್ಕೂ ಹೆಚ್ಚಿನ ಬಡ್ಡಿ ಬಂದಂತಾಗುತ್ತದೆ. ಇದೊಂದು ಜೀವಿತಾವಧಿ ಹೂಡಿಕೆಯಾಗಿದ್ದು, ಮಾರಣಾಂತಿಕ ಕಾಯಿಲೆ ಹೊರತುಪಡಿಸಿ ಮಧ್ಯದಲ್ಲಿ ವಾಪಸು ಪಡೆಯುವಂತಿಲ್ಲ. ಜೀವನದ ಸಂಜೆಯಲ್ಲಿ ನಿಶ್ಚಿತ ವರಮಾನ ಪಡೆದು ಸುಖವಾಗಿ ಬಾಳಲು ಈ ಯೋಜನೆ ಉಪಯುಕ್ತ. ಹೆಚ್ಚಿನ ಮಾಹಿತಿಗೆ ಕರೆ ಮಾಡಿ.

***

ನಾನು ಖಾಸಗಿ ಬ್ಯಾಂಕ್‌ನಲ್ಲಿ ₹ 45 ಲಕ್ಷ ಗೃಹಸಾಲ ಪಡೆದಿದ್ದೇನೆ. ಗೃಹಸಾಲ ಪಡೆಯುವಾಗ ನನ್ನೊಡನಿರುವ ಎಲ್‌.ಐ.ಸಿ. ಮನಿ ಬ್ಯಾಕ್‌ ಪಾಲಿಸಿ ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದೇನೆ. ಇದರಿಂದಾಗಿ ಈ ಪಾಲಿಸಿಯಿಂದ ಕಾಲಕಾಲಕ್ಕೆ ಬರುವ ಹಣವು ನನಗೆ ಬರುತ್ತಿಲ್ಲ. ನಾನು ಈ ಹಣ ವಾಪಸು ಪಡೆಯುವ ಬಗೆ ಹೇಗೆ? ಸಾಲ ತೀರಿಸಿದ ನಂತರ ಹಿಂದಿರುಗಿಸುವರೇ?
-ರಾಮಚಂದ್ರ, ಬೆಳಗಾವಿ

ಉತ್ತರ: ಗೃಹ ಸಾಲ ಪಡೆಯುವಾಗ ನಿವೇಶನ ಅಡಮಾನ ಇರಿಸುವುದರಿಂದ ಬ್ಯಾಂಕ್‌ಗಳಲ್ಲಿ ಎಲ್‌.ಐ.ಸಿ ಅಥವಾ ಬೇರೆ ಆಧಾರ ಕೇಳುವುದಿಲ್ಲ. ಆದರೆ, ಗೃಹಸಾಲ ದೀರ್ಘಾವಧಿ ಸಾಲ ಆಗಿರುವುದರಿಂದ ಸಾಲಗಾರ ಮಧ್ಯದಲ್ಲಿ ಮರಣ ಹೊಂದಿದರೆ ಸಾಲದ ಹೊರೆ ಕುಟುಂಬದ ಮೇಲೆ ಬೀಳಬಾರದು ಎನ್ನುವ ಕಾರಣಕ್ಕೆ ಕೆಲವು ಬ್ಯಾಂಕ್‌ಗಳು ಅವಧಿ ವಿಮೆ ಮಾಡಿಸುತ್ತವೆ. ನೀವು ಈಗಾಗಲೇ ಬ್ಯಾಂಕ್‌ನಲ್ಲಿ ಅಡವಿಟ್ಟ ಎಲ್‌.ಐ.ಸಿ. ಪಾಲಿಸಿಯಿಂದ ಬರುವ ಹಣ (Money back) ನಿಮ್ಮ ಗೃಹಸಾಲಕ್ಕೆ ಜಮಾ ಆಗುತ್ತದೆ. ಈ ವಿಚಾರ ಬ್ಯಾಂಕ್‌ನಲ್ಲಿ ದೃಢಪಡಿಸಿಕೊಳ್ಳಿ ಹಾಗೂ ಮಾಸಿಕ ಸಮಾನ ಕಂತು (ಇಎಂಐ) ಕಡಿತ ಮಾಡುವಂತೆ ತಿಳಿಸಿ. ಗೃಹಸಾಲ ತೀರಿದ ನಂತರ ಎಲ್‌ಐಸಿ ಪಾಲಿಸಿಯನ್ನು ಬ್ಯಾಂಕ್‌ನಿಂದ ನಿಮ್ಮ ಹೆಸರಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಮರೆಯದಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT