ಬುಧವಾರ, ಏಪ್ರಿಲ್ 8, 2020
19 °C

ರಸಜೀವನಕ್ಕಿಂತ ಮಿಗಿಲಾದ ತಪಸ್ಸಿದೆಯೆ?

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Deccan Herald

‘ಕೌಸಲ್ಯೆಯ ಸುಪುತ್ರ’ ಎಂದು ವಿಶ್ವಾಮಿತ್ರಮಹರ್ಷಿಯು ಮಲಗಿದ್ದ ರಾಮನಿಗೆ ಸುಪ್ರಭಾತ ಹೇಳಿ ಎಬ್ಬಿಸಿದನಲ್ಲವೆ? ಅದು ಸರಿ, ರಾಮ ರಾತ್ರಿ ಮಲಗುವಾಗ ಜೋಗುಳ ಹಾಡಿದ್ದವರು ಯಾರು? ಕುವೆಂಪು ಅವರಿಗೆ ಈ ಪ್ರಶ್ನೆ ಬಂದಿತ್ತೆನಿಸುತ್ತದೆ. ಆದುದರಿಂದಲೇ ಅವರು ‘ಜಲದ ಜೋಗುಳ’ ಎಂದು ಹೇಳಿ, ಸರಯೂನದಿಯ ಜುಳುಜುಳು ನಾದವೇ ರಾಜಕುಮಾರರಿಗೆ ಜೋಗುಳವಾಯಿತು ಎಂದಿದ್ದಾರೆ.

ನಿತ್ಯಕರ್ಮಗಳನ್ನು ಆಚರಿಸುವಂತೆ ತಾನೆ ರಾಮನನ್ನು ಎಬ್ಬಿಸಿದ್ದು? ‘ಮಹರ್ಷಿಗಳ ಮಾತನ್ನು ಕೇಳಿ ರಾಜಕುಮಾರರು ಎದ್ದರು. ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯವನ್ನು ಕೊಟ್ಟು ಗಾಯತ್ರಿಯನ್ನು ಜಪಿಸಿದರು’ ಎಂದಷ್ಟೆ ವಾಲ್ಮೀಕಿ ಈ ಪ್ರಸಂಗದ ಬಗ್ಗೆ ಹೇಳಿರುವುದು. ಆದರೆ ಸೂರ್ಯನಿಗೆ ರಾಮ–ಲಕ್ಷ್ಮಣರು ಅರ್ಪಿಸಿದ ದಿಟವಾದ ಅರ್ಘ್ಯದ ಸೊಗಸು ಹೇಗಿತ್ತು ಎಂಬುದನ್ನು ಕುವೆಂಪು ‘ಶ್ರೀರಾಮಾಯಣದರ್ಶನಂ’ನಲ್ಲಿ ಸೊಗಸಾಗಿ ವರ್ಣಿಸಿದ್ದಾರೆ, ಹೀಗೆ:

ಪ್ರಾಚೀ ದಿಗಂಗನೆಯ ಕಣ್ದೆರಹಿನೊಳ್ಬೆಳಗೊ,

ಕನಕ ಮೇರುವನೇರಿಬಹ ತೇರನೆಳೆಯುತಿಹ

ತಪನ ಹಯ ಖುರಪುಟದಿನೆದ್ದ ಹೊಂದೂಳಿಯೋ,

ಕತ್ತಲೆಯನಟ್ಟಿ ಬರ್ಪಿನನ ನಾರಾಚದಿಂ

ಗಾಯಗೊಂಡಿರ್ಪಿರುಳ್‌ ಕಾರ್ದ ನೆತ್ತರ್‌ ಸೋರ್ವ

ಸೋನೆ ತುಂತುರ್‌ ಮಳೆಯೊ ಪೇಳೆನಲ್‌, ಮರುದಿನಂ

ಬೆಳಗಾದುದಿಂದ್ರ ದಿಕ್ತಟದಿ. ತುಂಬಿತ್ತೊಡನೆ

ವನದೇಶಮಂ ಲಕ್ಷಪಕ್ಷಿಯುಲಿ. ರಾಜಿಸಿತು

ಸರಯೂನದಿಯ ವಕ್ಷಮೋಕುಳಿಯ ಕಾಂತಿಯಿಂ

ತಳಿಸಿ. ಋಷಿಯೊಡನೆ ಮಿಂದರು ರಾಮಲಕ್ಷ್ಮಣರ್‌,

ಶೀತ ಸುಂದರ ಸುಖದ ಸಲಿಲದಲಿ! ಕುವರರಿಗೆ

ತಮ್ಮರಮನೆಯ ಸಿರಿಯೆ ಬಡತನಂ ತಾನಾಯ್ತಲಾ

ಕಾಡಿನ ಸೊಗದ ಪರಿಸರದಲಿ! ಬಂಡೆಯಿಂ ದುಮುಕಿ

ನೀರ್ಗೆ, ಮೇಣೊಬ್ಬರೊಬ್ಬರ ಮೊಗಕೆ ನೀರೆರಚಿ

ನಲಿದಾಡಿದರ್‌ ಸ್ಪರ್ಧೆಯಿಂದೀಸಿ. ‘‘ಗುರುದೇವ,

ನಿಮ್ಮ ಕರುಣೆಯಿನೆಮಗೆ ಲಭಿಸಿತೀ ವನಸುಖಂ.

ದಾರಿದ್ರ್ಯಮಲ್ತೆ ಆ ನಾಗರಿಕ ಜೀವನಂ

ಈ ವನ್ಯ ಸಂಸ್ಕೃತಿಯ ಮುಂದೆ?’’ ಎಂದ ರಾಮನಂ

ಕುರಿತಾ ಮಹರ್ಷಿ ಮಂತ್ರಿಸಿದನಿಂತು:

‘‘ದಿಟವೊರೆದೆ,

ಹೇ ವತ್ಸ, ಗಿರಿವನಪ್ರೀತಿ ತಾಂ ದೈವಕೃಪೆ ದಲ್‌.

ಜಗದೀಶ್ವರನ ಮಹಿಮೆ ಸಂವೇದ್ಯವಹುದಿಲ್ಲಿ

ಭವ್ಯ ಸೌಂದರ್ಯ ಶೀಲದ ವನ್ಯ ಶಾಂತಿಯಲಿ.

ಉಪನಿಷತ್ತಿನ ಮಹಾಮಂತ್ರಾನುಭವಗಳುಂ

ಹೃದ್ಗಮ್ಯವಿಲ್ಲಿ, ಚಿತ್ತಕೆ ಸಮಾಧಿಯನಿತ್ತು

ಹರಿದಂತ ವಿಶ್ರಾಂತ ಹರಿತ ಕಾನನಮಯಂ ತಾಂ

ಪರ್ವತಶ್ರೇಣಿ ಪರ್ವಿದೆ ನೋಡು ಶಿವನಂತೆವೋಲ್‌,

ಧ್ಯಾನ ಮಾಳ್ಪಗೆ ಹೃಷ್ಟರೋಮತೆಯನಿತ್ತು. ಅದೊ,

ಬಣ್ಣದ ಮುಗಿಲ್‌ ಗಗನಪಟದಲ್ಲಿ ತೇಲುತಿದೆ

ದೇವರೆ ಪೆಸರ್‌ ಬರೆದ ಮುದ್ರೆಯೋಲ್‌. ಕರೆಯುತಿದೆ ಕಾಣ್‌

ನಮ್ಮಾತ್ಮಮಂ ಕಲೋಪಾಸನೆಗೆ. ರಾಮ, ಕೇಳ್‌,

ಸೃಷ್ಟಿ ಸೌಂದರ್ಯದೊಲ್ಮೆಯೆ ಸೃಷ್ಟಿಕರ್ತಂಗೆ

ಪೂಜೆಯೆಯ್‌. ರಸಜೀವಕೆ ಮಿಗಿಲ್‌ ತಪಮಿಹುದೆ?

ರಸಸಿದ್ಧಿಗಿಂ ಮಿಗಿಲೆ ಸಿದ್ಧಿ? ಪೊಣ್ಮಿದೆ ಸೃಷ್ಟಿ

ರಸದಿಂದೆ; ಬಾಳುತಿದೆ ರಸದಲ್ಲಿ; ರಸದೆಡೆಗೆ ತಾಂ

ಪರಿಯುತಿದೆ; ಪೊಂದುವುದು ರಸದೊಳೈಕ್ಯತೆವೆತ್ತು

ತುದಿಗೆ. ರಸಸಾಧನಂಗೆಯ್ಯದಿರುವುದೆ ಮೃತ್ಯು.

ಆನಂದರೂಪಮಮೃತಂ ರಸಂ!’’

ಋಷಿಮಂತ್ರಮಂ 

ಕೇಳ್ದು ಬಾಲಕರಾತ್ಮಭಾವನೋಜ್ವಲರಾಗಿ

ರವಿಗರ್ಘ್ಯಮೆತ್ತಿದರ್‌, ಗಾಯತ್ರಿಘೋಷದಿಂ

ಜೇಂಕರಿಸಲಡವಿ.

ಕುವೆಂಪು ಅವರ ವರ್ಣನೆಗಳು ಹಲವು ದೃಷ್ಟಿಗಳಿಂದ ವಿಚಾರಾರ್ಹವಾಗಿವೆ. ಮೊದಲಿಗೆ ಅವರು ಸೂರ್ಯೋದಯವನ್ನು ಮೂರು ವಿಧದಲ್ಲಿ ವರ್ಣಿಸಿದ್ದಾರೆ. ಪೂರ್ವದಿಕ್ಕನ್ನೇ ಸ್ತ್ರೀಯಂತೆ ಕಂಡು, ಅವಳು ಕಣ್ತೆರದದ್ದೇ ಸೂರ್ಯೋದಯ ಎನಿಸಿಕೊಂಡಿತಂತೆ. ಸುವರ್ಣಮಯವಾಗಿರುವ ಮೇರುಶಿಖರ ಎಂಬ ರಥವನ್ನು ಕುದುರೆಗಳು ಎಳೆಯುತ್ತಿವೆ; ಆಗ ಅವುಗಳ ಓಟ ಎಬ್ಬಿಸಿದ ಬಂಗಾರದ ದೂಳೋ ಎನ್ನುವಂತೆ ಅರುಣೋದಯ ಕಾಣುತ್ತಿದೆಯಂತೆ. ಕತ್ತಲೆಗೆ ನಾಟಿದ ಬಾಣದ ದೆಸೆಯಿಂದ ಸುರಿಯುತ್ತಿರುವ ರಕ್ತದ ಸೋನೆಮಳೆಯಂತೆ ಸೂರ್ಯೋದಯದ ಪೂರ್ವದಿಕ್ಕು ತೋರುತ್ತಿದೆಯಂತೆ. ಇಂಥ ಆಹ್ಲಾದಕರವಾದ ಪ್ರಭಾತದಲ್ಲಿ ಎದ್ದ ರಾಮ–ಲಕ್ಷ್ಮಣರು ವಿಶ್ವಾಮಿತ್ರನೊಡನೆ ಸರಯೂನದಿಯಲ್ಲಿ ಇಳಿದಿದ್ದಾರೆ. ಕುವೆಂಪು ಅವರು ಈ ಸಂದರ್ಭವನ್ನು ವರ್ಣಿಸಿರುವುದು ಮನೋಜ್ಞವಾಗಿದೆ, ಧ್ವನಿಪೂರ್ಣವಾಗಿದೆ:

‘ಅವರು (ರಾಮ–ಲಕ್ಷ್ಮಣರು) ಋಷಿಯೊಡನೆ, ಓಕುಳಿಯ ಕಾಂತಿಯಂತಿದ್ದ ಸರಯೂನದಿಯ ನೀರಿನಲ್ಲಿ ಮಿಂದರು. ಅರಣ್ಯದ ರಮಣೀಯತೆಯ ಮುಂದೆ ತಮ್ಮ ಅರಮನೆಯ ಸಂಪತ್ತು ಅವರಿಗೆ ತೃಣವಾಗಿ ಕಂಡಿತು. ಬಂಡೆಯಿಂದ ನೀರಿಗೆ ಧುಮುಕಿ, ಒಬ್ಬೊಬ್ಬರ ಮುಖಕ್ಕೆ ನೀರನ್ನು ಎರಚಿ, ಸ್ಪರ್ಧೆಯಿಂದ ಈಜಿ ನೀರಾಟವಾಡಿದರು. ‘ಗುರುದೇವ, ನಿಮ್ಮ ಕರುಣೆಯಿಂದ ನಮಗೆ ಈ ವನಸುಖ ಲಭಿಸಿತು. ಈ ವನ್ಯಸಂಸ್ಕೃತಿಯ ಮುಂದೆ ಆ ನಾಗರಿಕ ಸಂಸ್ಕೃತಿ ನಿಸ್ಸಾರವಾಗಿ ಕಾಣುತ್ತದೆ’ ಎಂದು ಶ್ರೀರಾಮ ಉತ್ಸಾಹದಿಂದ ಮಹರ್ಷಿಯನ್ನು ಕುರಿತು ಹೇಳಿದನು. ಆಗ ವಿಶ್ವಾಮಿತ್ರನು ‘ಎಲೈ ವತ್ಸನೇ, ದಿಟವನ್ನು ಹೇಳಿದೆ. ಗಿರಿವನಪ್ರೀತಿ ನಿಜವಾಗಿಯೂ ದೈವಕೃಪದಿಂದ ಲಭಿಸುತ್ತದೆ. ಹಾಗೆಯೇ ದೈವಕೃಪೆಯಿಲ್ಲದವರಿಗೆ ಗಿರಿವನಪ್ರೀತಿ ಅಸಾಧ್ಯವಾಗುತ್ತದೆ. ಅರಣ್ಯಶ್ರೀಯ ಭವ್ಯಸೌಂದರ್ಯದಲ್ಲಿ ಗಂಭೀರಶಾಂತಿಯಲ್ಲಿ ಭಗವಂತನ ಮಹಿಮೆ ವ್ಯಕ್ತವಾಗುತ್ತದೆ; ಉಪನಿಷತ್ತಿನ ಮಹಾಮಂತ್ರಗಳ ಅನುಭವವಾಗುತ್ತದೆ.

ಇದೋ ನೋಡು, ಚೇತೋಹಾರಿಯಾದ ಕಾನನಮಯ ಪರ್ವತಶ್ರೇಣಿ ಶಿವನಂತೆ ಹಬ್ಬಿದೆ. ಧ್ಯಾನಿಗೆ ರೋಮಾಂಚವುಂಟುಮಾಡುತ್ತಿದೆ. ಅದೋ, ಅಲ್ಲಿ ಗಗನಪಟದಲ್ಲಿ ದೇವರೆ ಬರೆದಂತೆ ಬಣ್ಣಬಣ್ಣದ ಮುಗಿಲು ತೇಲುತ್ತಿದೆ. ನಮ್ಮ ಆತ್ಮವನ್ನು ಉಪಾಸನೆಗಾಗಿ ಕರೆಯುತ್ತಿದೆ. ಸೃಷ್ಟಿಸೌಂದರ್ಯವನ್ನು ಪ್ರೀತಿಸುವುದೇ ಸೃಷ್ಟಿಕರ್ತನ ಪೂಜೆಯೆಂದು ತಿಳಿ. ರಸಜೀವನಕ್ಕಿಂತ ಮಿಗಿಲಾದ ತಪಸ್ಸಿದೆಯೆ? ರಸಸಿದ್ಧಿಯನ್ನು ಮೀರಿಸಿದ ಸಿದ್ಧಿಯಿದೆಯೆ? ಸೃಷ್ಟಿ ರಸದಿಂದ ಆಗಿದೆ; ರಸದಲ್ಲಿ ಬಾಳುತ್ತಿದೆ; ರಸದೆಡೆಗೆ ಹರಿಯುತ್ತಿದೆ; ಕೊನೆಗೆ ರಸದಲ್ಲಿ ಐಕ್ಯವಾಗುತ್ತದೆ. ರಸಸಾಧನೆಯನ್ನು ಮಾಡದಿರುವುದೆ ಮೃತ್ಯು. ರಸ ಆನಂದರೂಪವಾದುದು, ಅಮೃತಪ್ರಾಯವಾದುದು’ ಎಂದು ಸೃಷ್ಟಿಯ ರಹಸ್ಯವನ್ನು ಬೋಧಿಸಿದನು. ಋಷಿಮಂತ್ರದಿಂದ ಆತ್ಮೋದ್ದೀಪ್ತರಾದ ಬಾಲಕರು. ಸೂರ್ಯದೇವನಿಗೆ ಅರ್ಘ್ಯವೆತ್ತಿ ಗಾಯತ್ರಿಯನ್ನು ಜಪಿಸಿದರು.’

(ಗದ್ಯಾನುವಾದ: ದೇಜಗೌ)

ಕುವೆಂಪು ಅವರು ವರ್ಣನೆಗೆ ಆರಿಸಿಕೊಂಡಿರುವ ಸಂದರ್ಭವೂ ವಿಚಾರಪ್ರದವಾದುದೇ ಹೌದು. ಅದು ಸಂಧ್ಯಾವಂದನೆಯ ಸಮಯ; ಗಾಯತ್ರೀಮಂತ್ರದ ಮೂಲಕ ಸೂರ್ಯನನ್ನು ಆರಾಧಿಸುವ ಸಮಯ. ಸಂಧ್ಯಾವಂದನೆಗೆ ಇರುವ ಇನ್ನೊಂದು ಆಯಾಮವನ್ನೇ ಅವರು ಇಲ್ಲಿ ಅನಾವರಣಗೊಳಿಸಿದ್ದಾರೆ. ಕಣ್ಣನ್ನು ಮುಚ್ಚಿ, ಒಳಗಿನ ಬೆಳಕಿನ ಮೂಲಕ ಚೈತನ್ಯವನ್ನು ಕಾಣುವುದು ಸಂಧ್ಯೋಪಾಸನೆಯ ಒಂದು ವಿಧಾನ. ಆದರೆ ಕುವೆಂಪು ಇಲ್ಲಿ ಇನ್ನೊಂದು ರೀತಿಯ ಧ್ಯಾನಕ್ರಮವನ್ನು ಹೇಳಿದ್ದಾರೆ: ಕಣ್ಣನ್ನು ತೆರೆದು ನೋಡಿದಾಗ ಹೊರಗಿನ ಬೆಳಕಿನಲ್ಲಿ ಕಾಣುವ ಚೈತನ್ಯದ ಶರೀರವನ್ನು ಅವರು ಇಲ್ಲಿ ಕಂಡರಿಸಿದ್ದಾರೆ. ‘ಧೀಶಕ್ತಿಯನ್ನು ಪ್ರಚೋದಿಸಿ ನಮ್ಮನ್ನು ಅನುಗ್ರಹಿಸು’ ಎನ್ನುವುದು ತಾನೆ ಗಾಯತ್ರೀಮಂತ್ರದ ತಾತ್ಪರ್ಯ.

ಸೃಷ್ಟಿಸೌಂದರ್ಯವೂ ನಮ್ಮ ಬುದ್ಧಿಶಕ್ತಿಯನ್ನು ಪ್ರಚೋದಿಸುವ ಪ್ರತಿಭಾಗಾಯತ್ರಿಯೇ ಹೌದು ಎನ್ನುವುದನ್ನು ಅವರು ನಿರೂಪಿಸಿದ್ದಾರೆ. ಸೃಷ್ಟಿಯ ಸೊಬಗನ್ನು ಸವಿಯುವುದಕ್ಕೆ ಎಲ್ಲರಿಂದಲೂ ಸಾಧ್ಯವಿಲ್ಲ; ಅದು ದೈವಕೃಪೆಯಿಂದಲೇ ಲಭಿಸುವ ಶಕ್ತಿ ಎಂಬ ಅವರ ಮಾತು ಮನನೀಯ. ಪರ್ವತಶ್ರೇಣಿಯನ್ನೇ ಅವರು ಶಿವನಾಗಿ ಕಂಡಿದ್ದಾರೆ. ಹೀಗೆ ಪರ್ವತಶ್ರೇಣಿಯಲ್ಲಿ ಕಂಡ ಶಿವತತ್ತ್ವದ ಪ್ರತೀಕವಾಗಿ ನಮ್ಮ ಪೂರ್ವಸೂರಿಗಳಿಗೆ ಶಿವನು ಲಿಂಗರೂಪದಲ್ಲಿ ಒದಗಿದ್ದಿರಬಹುದೆ? ‘ಸ್ಥಾಣು’ ಎಂದರೆ ಶಿವನೇ ತಾನೆ?  ‘ವಸ್ತುತಃ ಶಿವಮಯೇ ಹೃದಿ ಸ್ಫುಟೇ | ಸರ್ವತಃ ಶಿವಮಯಂ ವಿರಾಜತೇ ||’ ಎಂದಿದ್ದಾನೆ, ಅಭಿನವಗುಪ್ತ.

‘ದಿಟವಾಗಿ ಹೃದಯ ಶಿವಮಯವಾಗಲು, ಎತ್ತಲೂ ಶಿವಮಯವೇ ಹೊಳೆಹೊಳೆಯುವುದಂತೆ’.  ಅಚೇತನವಾಗಿರುವ ಪರ್ವತವೇ ಶಿವನಾಗಿ ಕಂಡ ಕಣ್ಣಿಗೆ ಚೇತನವೆಲ್ಲ ಹೇಗೆ ಕಂಡೀತು? ಆನಂದವಾಗಿಯೇ ಅನುಭವಕ್ಕೆ ದಕ್ಕುವುದು ಖಂಡಿತವಷ್ಟೆ. ಅಚೇತನವಾದುದರಲ್ಲಿಯೂ ಚೈತನ್ಯವನ್ನು ಕಾಣಿಸಬಲ್ಲದ್ದೇ ಧೀಶಕ್ತಿ ಅಲ್ಲವೆ? ಪ್ರೀತಿ ಇಲ್ಲದಿದ್ದರೆ ಇಂಥ ಧೀಶಕ್ತಿ ಒದಗದು. ಹೀಗೆ ಇಡಿಯ ಸೃಷ್ಟಿಯನ್ನು ಪ್ರೀತಿಯಿಂದ ನೋಡಬಲ್ಲ ಭಾವವೇ ಸೃಷ್ಟಿಕರ್ತನ, ಎಂದರೆ ದೇವರ ಪೂಜೆ ಎನ್ನುವುದು ಕವಿಮಂತ್ರದ ಅರ್ಥ. ಪ್ರೀತಿಯ ಇಂಥ ಸಾಧಾರಣೀಕರಣವೇ ರಸಸಿದ್ಧಿ. ಅದೇ ಮಹಾಸಿದ್ಧಿ. ರಸಜೀವನಕ್ಕಿಂತಲೂ ಮಿಗಿಲಾದ ತಪಸ್ಸು ಇದೆಯೆ – ಎಂದು ಪ್ರಶ್ನಿಸುತ್ತಲೇ ಕವಿಯು, ‘ಸೃಷ್ಟಿಯ ಮೂಲವೇ ರಸ; ರಸದ ದೆಸೆಯಿಂದಾಗಿಯೇ ಸೃಷ್ಟಿ ಉಸಿರಾಡುತ್ತಿರುವುದು; ಇಡಿಯ ಸೃಷ್ಟಿಯೇ ರಸದ ಕಡೆಗೆ ಪಯಣಿಸಿ, ಕೊನೆಗೆ ಅದರಲ್ಲಿಯೇ ಲೀನವಾಗುತ್ತಿದೆ’ ಎಂದಿರುವ ರಸಸೂತ್ರ ಕೂಡ ಮನನೀಯ.

‘ಸೃಷ್ಟಿಯ ವೈಭವವೆಲ್ಲವೂ ಉಪನಿಷತ್ತಿನ ಮಹಾಮಂತ್ರಗಳೇ ಹೌದು’ ಎನ್ನಲಾಗಿದೆಯಲ್ಲವೆ? ‘ರಸೋ ವೈ ಸಃ’ (ಪರಮಾತ್ಮನು ರಸಮೂರ್ತಿ) ಎನ್ನುವುದು ಉಪನಿಷತ್ತಿನ ಮಹಾವಾಕ್ಯವೇ ಹೌದು. ರಸಸಾಧನೆಯನ್ನು ಮಾಡದಿರುವುದೇ ಮರಣ – ಎಂಬ ಕವಿಸಂದೇಶ ಅದು ಋಷಿಮಂತ್ರಕ್ಕೆ ಸಮಾನವಾದುದು. ಈ ಮಂತ್ರದಿಂದ ಭಾವದೀಪ್ತಿಯನ್ನು ಪಡೆದ ರಾಮ–ಲಕ್ಷ್ಮಣರು ಸೂರ್ಯನಿಗೆ ಅರ್ಘ್ಯವನ್ನು ನೀಡಿ, ಗಾಯತ್ರಿಯನ್ನು ಜಪಿಸಿದರು. ಎಂದರೆ ಅವರ ಸೂರ್ಯೋಪಾಸನೆಯು ಅಂತರಂಗ–ಬಹಿರಂಗಗಳು ಸತ್ಯ–ಶಿವ–ಸುಂದರದ ರಸಮಯತೆಯಿಂದ ಪ್ರಚೋದಿತವಾಯಿತು ಎಂದೇ ಹೌದು.

ವನ್ಯಸಂಸ್ಕೃತಿಯ ಎದುರು ನಾಗರಿಕಸಂಸ್ಕೃತಿ ನಿಸ್ಸಾರವಾಗಿ ಕಾಣುತ್ತದೆ – ಎಂದ ರಾಮನ ಮಾತು ನಮ್ಮ ಇಂದಿನ ಸಂವೇದನೆಯಿಂದ ಮೂಡಿದ ಹಂಬಲ ಎಂದು ನಮಗೆ ಕಂಡೀತು. ಆದರೆ ವಾಲ್ಮೀಕಿ ರಾಮಾಯಣದಲ್ಲಿಯೇ ಈ ಆಶಯ ದಟ್ಟವಾಗಿದೆಯೆನ್ನಿ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)