ಭಾನುವಾರ, ಮೇ 22, 2022
21 °C
ಹುಡುಗನಿಗೆ ಅಂತರ್ಜಾತಿ, ಹುಡುಗಿಗೆ ಮಾತ್ರ ಸ್ವಜಾತಿ ಎಂಬ ಜಾತಿಮೋಹದ ಕಟ್ಟಲೆ

ಡಾ. ಸಬಿತಾ ಬನ್ನಾಡಿ ಅಂಕಣ| ಕುಲದ ನೆಲೆಯನೇನಾದರು ಬಲ್ಲಿರಾ?

ಡಾ. ಸಬಿತಾ ಬನ್ನಾಡಿ Updated:

ಅಕ್ಷರ ಗಾತ್ರ : | |

‘ನೀನು ಬೇಕಿದ್ದರೆ ಅವಳೊಂದಿಗೆ ಸಂಬಂಧ ಇಟ್ಟುಕೋ, ಮದುವೆ ಮಾತ್ರ ನಮ್ಮ ಜಾತಿಯವಳನ್ನೇ ಆಗು’ ಎಂದು ‘ಮೇಲ್ಜಾತಿ’ಗೆ ಸೇರಿದ ಅಜ್ಜ, ಅಂತರ್ಜಾತಿ ಮದುವೆಯಾಗ ಹೊರಟ ಮೊಮ್ಮಗನಿಗೆ ಮೂವತ್ತು ವರ್ಷದ ಹಿಂದೆ ಕೊಟ್ಟಿದ್ದ ಸಲಹೆ ಇನ್ನೂ ನನ್ನ ಕಿವಿಯಲ್ಲಿ ಅನುರಣಿಸುತ್ತಿದೆ. ಕಾಲ ಬದಲಾಗಿದೆ. ಮನಃಸ್ಥಿತಿ ಬದಲಾಗಿದೆಯೇ? ಜಾತಿ ಶ್ರೇಷ್ಠತೆಯ ಅಹಂ ಮತ್ತು ನಂಬಿಕೆಯನ್ನು ಹೇಗೆಲ್ಲಾ ಉಳಿಸಲು ಪ್ರಯತ್ನಿಸಲಾಗುತ್ತಿದೆಯಲ್ಲವೇ? ಮತ್ತೆ ಮತ್ತೆ ಹಿಂದಕ್ಕೆ ಹೊರಳಿಸುವ ಚಿಂತನೆಗಳು ಮುಂದಕ್ಕೆ ಬರತೊಡಗಿದ್ದು, ಕೆಲವು ವರ್ಷಗಳ ಹಿಂದೆ ಪ್ರೈವೇಟ್ ಆಗಿ ವ್ಯಕ್ತವಾಗುತ್ತಿದ್ದ ಅಭಿಪ್ರಾಯಗಳು ಈಗ ಪಬ್ಲಿಕ್ ಆಗಿ ಪ್ರಕಟವಾಗತೊಡಗಿವೆ.

* * *


ಡಾ.ಸಬಿತಾ ಬನ್ನಾಡಿ

ಈಚಿನ ದಿನಗಳಲ್ಲಿ ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಆಧಿಕ್ಯದಲ್ಲಿ ಬಸವಳಿದಿವೆ. ಯಾವುದೋ ಒಂದು ಹೇಳಿಕೆ, ಘಟನೆಗೆ ಹೆಚ್ಚಾಗಿ ಸಾಮಾಜಿಕ ಮಾಧ್ಯಮ
ಗಳಲ್ಲಿ ಒಂದೇ ಬಾರಿಗೆ ವಿಪರೀತ ಪ್ರತಿಕ್ರಿಯೆಗಳು ಬರುತ್ತವೆ. ಅದರಲ್ಲಿ ಕೆಲವು ಗಂಭೀರವಾದವೂ ಇರುತ್ತವೆ. ಆದರೆ, ಆ ವಿಷಯದ ಬಗ್ಗೆ ಆಳವಾದ ಕ್ರಿಯೆಯೊಂದು ಜಾರಿಗೆ ಬರುವ ಮೊದಲೇ ಇನ್ಯಾವುದೋ ವಿಚಾರ ಮುನ್ನೆಲೆಗೆ ಬರುತ್ತದೆ. ಅಲ್ಲಿಗೆ ಹಿಂದಿನ ವಿಷಯ ಸಂಪೂರ್ಣ ಮೂಲೆಗುಂಪಾಗುತ್ತದೆ. ಹೀಗೆ ‘ಮುಟ್ಟಿ ಓಡುವ’ ಈ ಪರಿ ಎಷ್ಟೋ ಬಾರಿ ಪೂರ್ವಯೋಜಿತವೂ ಆಗಿದ್ದಿರಬಹುದು.

ಮೇಲ್ನೋಟಕ್ಕೆ ಸಾರಾಸಗಟು ಎಂಬಂತೆ ಕಾಣುವ ಕೆಲವು ಹೇಳಿಕೆಗಳು ಒಟ್ಟು ಸಮೂಹದ ಪ್ರತಿಕ್ರಿಯೆಯ ಮೂಲಕ ಮುಂದಿನ ಹೆಜ್ಜೆ ಇಡಲು ಒಂದು ತಯಾರಿಯೋ ಇಲ್ಲವೇ ಹೆಜ್ಜೆಯ ಜಾಡು ಬದಲಿಸಲು ಬೇಕಾದ ಸಿದ್ಧತೆಯೋ ಆಗಿರುವ ಸಂಭವವೇ ಹೆಚ್ಚು. ಸಮಾಜದಲ್ಲಿ ಕ್ರಿಯಾಶೀಲರಾಗಿರುವ ವ್ಯಕ್ತಿಗಳು ಕ್ರಿಯೆಯೆಡೆಗೆ ಗಮನ ಹರಿಸುವುದಕ್ಕಿಂತ, ಪ್ರತಿಕ್ರಿಯೆಯಲ್ಲೇ ಮುಳುಗಿರುವಂತೆ ಮಾಡುವ ಒಂದು ತಂತ್ರವೂ ಇದಾಗಿರಬಹುದು.

ಕೆಲವು ವಾರಗಳ ಹಿಂದೆ, ಮಠಾಧೀಶರೊಬ್ಬರ ‘ಬ್ರಾಹ್ಮಣ ಸಮಾಜದ ಹೆಣ್ಣುಮಕ್ಕಳು ಇತರೆ ಜಾತಿಯವರನ್ನು ವಿವಾಹ ಆಗುವುದನ್ನು ತಡೆಯಲು ಮಾತೃಮಂಡಳಿ ರಚಿಸಬೇಕು’ ಎಂಬ ಹೇಳಿಕೆ ಸದ್ದು ಮಾಡಿತು. ಬಳಿಕ, ತಾವು ಹಾಗೆ ಹೇಳಿಲ್ಲ ಎಂದು ಅವರು ಸ್ಪಷ್ಟನೆಯನ್ನೂ ಕೊಟ್ಟರು. ಇದಕ್ಕೆ ಹಲವು ಪ್ರತಿಕ್ರಿಯೆಗಳು ಬಂದು ಈಗದು ‘ಹಳೆಯ’ ವಿಷಯವಾಗಿದೆ. ಭಾರತದ ರಾಷ್ಟ್ರೀಯ ಚಳವಳಿಯ ಸಂದರ್ಭದಲ್ಲೇ ಹುಟ್ಟಿಕೊಂಡ ಸಾಮಾಜಿಕ ಸುಧಾರಣೆಯ ಸಂದರ್ಭದಲ್ಲಿ ಮುನ್ನೆಲೆಗೆ ಬಂದ ಹಲವು ವಿಷಯಗಳಲ್ಲಿ ಜಾತಿ ವಿನಾಶ ಕೂಡಾ ಪ್ರಮುಖ ಕಾಳಜಿಯಾಗಿತ್ತು. ಮೊದ ಮೊದಲು ಜಾತಿಯ ಬಗೆಗೆ ಸಾಂಪ್ರದಾಯಿಕ ನಂಬಿಕೆ ಇದ್ದ ಗಾಂಧಿಯವರು ಕೊನೆ ಕೊನೆಗೆ ಅಂತರ್ಜಾತಿ ಮದುವೆಗಳಿಗೆ ಮಾತ್ರ ಹೋಗುವುದಾಗಿ ಹೇಳುವಷ್ಟು ಬದಲಾದರು. ಅಂಬೇಡ್ಕರ್, ಲೋಹಿಯಾ ಅವರು ಹೇಳಿದ ಜಾತಿವಿನಾಶದ ಬಗೆಗಿನ ಚಿಂತನೆಗಳು ಬಹುಜನರನ್ನು ಪ್ರಭಾವಿಸಿದವು. ಹಿಂದೂ ಎಂಬ ಧರ್ಮವು ಸಂಘಟಿತವಾಗಬೇಕೆಂದರೆ, ಇದರೊಳಗಿನ ಜಾತಿಭೇದಗಳು ಅಳಿದು ಹೋಗಬೇಕು ಎಂಬ ನಿಲುವೂ ವ್ಯಕ್ತವಾದದ್ದಿದೆ.

‘ಹಿಂದೂ ನಾವೆಲ್ಲಾ ಒಂದು’ ಎಂಬುದು ಹಿಂದೂ ಸಂಘಟನೆಗಳ ಜನಪ್ರಿಯ ತೋರಿಕೆಯ ಸ್ಲೋಗನ್. ಆದರೆ ವಾಸ್ತವದಲ್ಲಿ ಆಧುನಿಕ ಭಾರತದಲ್ಲಿ ಆಗಿದ್ದೇನು? ಜಾತಿಗಳ ಧ್ರುವೀಕರಣವೇ ಮುನ್ನೆಲೆಗೆ ಬಂದಿತು. ನಮ್ಮೆಲ್ಲಾ ಆಧುನಿಕತೆಗಳು ಕೇವಲ ಬಾಹ್ಯದ ವೇಷಭೂಷಣ, ನುಡಿಯ ಒನಪು, ನಡವಳಿಕೆಯ ಒಯ್ಯಾರ, ತಾಂತ್ರಿಕ ಸಲಕರಣೆಗಳ ಬಳಕೆ ಮೊದಲಾದವುಗಳಿಗೆ ಸೀಮಿತವಾದವೇ ಹೊರತು ಚಿಂತನೆ, ವಿಚಾರಗಳ ಆಳವಾಗಲೀ ಔನ್ನತ್ಯವಾಗಲೀ ಆದರ್ಶವಾಗಿ ಮುಂದಕ್ಕೆ ಬರಲಿಲ್ಲ. ಜಾತಿಯ ಜೊತೆಗೇ ಜಾತಿಯೊಳಗಿನ ಆಚರಣೆಗಳಲ್ಲಿ ಗಂಡುಪ್ರಧಾನ ಆಲೋಚನೆಗಳು ಹಾಸುಹೊಕ್ಕಾಗಿ ಮುಂದುವರಿದುಕೊಂಡು ಬಂದವು.

ತಂತ್ರಜ್ಞಾನದ ಬಳಕೆಯ ದುರುಪಯೋಗದ ಪರಿಣಾಮವಾಗಿ ಪಂಜಾಬ್, ಹರಿಯಾಣದಂತಹ ರಾಜ್ಯಗಳಲ್ಲಿ ಸ್ತ್ರೀಭ್ರೂಣ ಹತ್ಯೆಗಳು ಅವ್ಯಾಹತವಾಗಿ ನಡೆದು ಮದುವೆಗೆ ಹುಡುಗಿ ಸಿಗದ ಸ್ಥಿತಿ ಇದೆ. ಇನ್ನೊಂದೆಡೆ ಕೆಲವು ನಿರ್ದಿಷ್ಟ ಜಾತಿಗಳಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾದದ್ದರಿಂದಾಗಿ, ಆ ಹೆಣ್ಣು
ಮಕ್ಕಳಿಗೆ ವಿವಾಹದಲ್ಲಿ ಆಯ್ಕೆ ದೊರಕಿತು. ಆ ಸಂದರ್ಭ ದಲ್ಲಿ ಕೆಲವು ವೃತ್ತಿಗಳನ್ನು ಆಯ್ದುಕೊಂಡ ಹುಡುಗರಿಗೆ ಆರ್ಥಿಕ ಸುಸ್ಥಿತಿ ಇದ್ದಾಗಲೂ ವಧು ಸಿಗುವುದು
ಕಷ್ಟವಾಗತೊಡಗಿತು. ಕರ್ನಾಟಕದಲ್ಲಿ ಕೆಲವು ಬ್ರಾಹ್ಮಣ ಉಪಪಂಗಡಗಳು ಇಂತಹ ಸಮಸ್ಯೆ ಎದುರಿಸಿದವು. ಒಂದು ಕಾಲದಲ್ಲಿ ಇವರಲ್ಲಿ ಎಷ್ಟೋ ಬಡ ಕುಟುಂಬದ ಹೆಣ್ಣುಮಕ್ಕಳಿಗೆ ವರದಕ್ಷಿಣೆ ಕೊಡಲಾಗದೆ ಮದುವೆಯೇ ಇಲ್ಲದೆ ಉಳಿದಿದ್ದೂ ಇದೆ. ಇನ್ನು ವಿಧವೆಯರಿಗಂತೂ ಮರು ಮದುವೆಯ ಅವಕಾಶವೇ ಇದ್ದಿರಲಿಲ್ಲ.

ಬದಲಾದ ಕಾಲದಲ್ಲಿ ಎಲ್ಲವೂ ಏರುಪೇರಾಗಿವೆ. ವಿಧವೆ, ವಿಚ್ಛೇದಿತೆಯರಿಗೆ ಈಗ ಮದುವೆ ಸಮಸ್ಯೆ ಇಲ್ಲ. ಆದರೆ ಹುಡುಗರಿಗೆ ಮಾತ್ರ ಹುಡುಗಿ ಸಿಕ್ಕರೆ ಸಾಕು ಎಂಬ ಪರಿಸ್ಥಿತಿ ಉದ್ಭವಿಸಿದೆ. ಇಲ್ಲೇ ಇರುವುದು ಕುತೂಹಲದ ತಿರುವು! ಮೊದಮೊದಲು ಸಸ್ಯಾಹಾರಿಗಳಾದ ಬೇರೆ ಜಾತಿಯ ಬಡಹುಡುಗಿಯರನ್ನು, ಜಾತಿಯೇ ಗೊತ್ತಿಲ್ಲದ ಅನಾಥಾಶ್ರಮದವರನ್ನು ಮದುವೆಯಾಗ ತೊಡಗಿದರು. ಆ ನಂತರದಲ್ಲಿ ಯಾವುದೇ ಜಾತಿಯ ಹುಡುಗಿಯಾದರೂ ಪರವಾಗಿಲ್ಲ ಎಂಬ ರಾಜಿಗೆ ತಯಾರಾದರು. ಕೆಲವೆಡೆ, ಮಾಂಸಾಹಾರಿಗಳಾದರೂ, ಹೆಣ್ಣುಕೊಡಲೊಪ್ಪಿದರೆ ಹುಡುಗಿಯ ತವರಿನವರಿಗೆ ಮನೆ ಕಟ್ಟಿಸಿಕೊಡುವ, ಧನಸಹಾಯ ಮಾಡುವ ಹೆಜ್ಜೆಗಳನ್ನೂ ಇಡಲಾಗಿದೆ.

ಹೀಗೆ ಹೆಣ್ಣುಕೊಟ್ಟು ಉಪಕರಿಸಿದ್ದರೂ, ಈ ಹುಡುಗಿಯರನ್ನು ಶುದ್ಧೀಕರಿಸಿ ತಂದುಕೊಳ್ಳಲಾಗುವುದಂತೆ ಹಾಗೂ ಅವರು ಗಂಡನ ಮನೆಯಿಂದ ಹೊರಗೆ ಮಾತ್ರ ಮಾಂಸಾಹಾರ ಸೇವಿಸಬಹುದಂತೆ. ಮತ್ತಿಲ್ಲಿ ಜಾತಿ ಎಂಬ ಅಹಮ್ಮನ್ನು ಮೀರಲಾರದ ಸಣ್ಣತನವಿದೆ. ಅಂದರೆ, ಇದ್ಯಾವುದೂ ಜಾತಿಯಲ್ಲಿ ನಂಬಿಕೆ ಇಲ್ಲದೇ ಮಾಡಿದ್ದಲ್ಲ. ಇದೆಲ್ಲವೂ ಅನುಕೂಲ ಶಾಸ್ತ್ರ ಅಷ್ಟೇ.

ಇದರ ಹಿಂದೆ ಕೆಲಸ ಮಾಡುವುದು ಬೀಜ ಕ್ಷೇತ್ರ ನ್ಯಾಯ. ಆ ಪ್ರಕಾರ, ಹೆಣ್ಣು ಕ್ಷೇತ್ರವಾಗಿದ್ದು ಅವಳು ಸ್ವೀಕರಿಸುವ ನೆಲೆಯಲ್ಲಿರುವವಳು. ಬಿತ್ತಿ ಬೆಳೆಯುವ ಗಂಡು ವಂಶದ ಮೇಲೆ ಹಕ್ಕು ಸಾಧಿಸುತ್ತಾನೆ. ಅವನೇ ಶ್ರೇಷ್ಠ ಎಂಬ ಗಂಡುಪ್ರಧಾನ ನೆಲೆಯ ಮನಃಸ್ಥಿತಿ ಇಲ್ಲಿ ಕೆಲಸ ಮಾಡುತ್ತದೆ. ಹೀಗೆ ಭಾವಿಸುವುದರ ಮೂಲಕ ಬೀಜ ಮತ್ತು ಕ್ಷೇತ್ರಕ್ಕೆ ಇರುವ ಸಮಾನ ಅಸ್ತಿತ್ವವನ್ನು ನಿರಾಕರಿಸಲಾಗುತ್ತದೆ. ಆದರೆ, ‘ಮೇಲ್ಜಾತಿ’ಯ ಮನಃಸ್ಥಿತಿಯಲ್ಲಿ ಇನ್ನೂ ಒಂದು ವಿಪರ್ಯಾಸ ಇದೆ. ಅದೆಂದರೆ, ಇದೇ ನ್ಯಾಯವನ್ನು ಎಲ್ಲಾ ಸಂದರ್ಭದಲ್ಲೂ ಪುರಸ್ಕರಿಸುವುದಿಲ್ಲ. ಕೇವಲ ತನ್ನದಲ್ಲದ ಜಾತಿಯ ಹೆಣ್ಣುಮಕ್ಕಳಿಗೆ ಮಾತ್ರ ಈ ನಿಲುವು.

ಹುಡುಗನು ಅನಿವಾರ್ಯ ಸಂದರ್ಭದಲ್ಲಿ ಯಾವ ಜಾತಿಯ ಹುಡುಗಿಯನ್ನಾದರೂ ಮದುವೆಯಾಗಬಹುದು. ಆತ ಅಗ್ನಿಯಂತೆ. ಅವನ ಸಂಸರ್ಗಕ್ಕೆ ಬಂದ ಹುಡುಗಿ ಆ ಅಗ್ನಿಯಲ್ಲಿ ಬೆಂದು ಶುದ್ಧಳಾಗಿ ಬಿಡುತ್ತಾಳೆ ಎಂದು ನಂಬಿಸಲಾಗಿದೆ. ಅದೇ ಮೇಲ್ಜಾತಿ ಎಂದು ಭಾವಿಸಲಾದ ಜಾತಿಯ ಹುಡುಗಿ ಮಾತ್ರ ಬೇರೆ ಜಾತಿಯ ಹುಡುಗರನ್ನು ಮದುವೆಯಾಗಬಾರದು ಎಂದು ನಿರ್ಬಂಧಿಸಲಾಗುತ್ತದೆ. ಆಗ ಆಕೆ ಕೆಳಗಿನ ಮೆಟ್ಟಿಲಿಗೆ ಇಳಿದಂತೆ ಎಂದೇ ಭಾವಿಸಲಾಗುತ್ತದೆ. ಈ ನಿರ್ಬಂಧವು ಹುಡುಗಿಯರ ಕೊರತೆ ಇದ್ದಾಗ ಮಾತ್ರವಲ್ಲ, ಅವರಿಗೆ ಜಾತಿಯಲ್ಲಿ ಗಂಡು ಸಿಗದಿದ್ದಾಗಲೂ ಇತ್ತು. ಇದರ ಹಿಂದಿರುವುದು ಜಾತಿ ಶ್ರೇಷ್ಠತೆಯ ಮನಃಸ್ಥಿತಿ. ಮಠಾಧೀಶರೊಬ್ಬರ ಹೇಳಿಕೆಯ ಹಿಂದೆ ವಧುಗಳ ಕೊರತೆಯೇ ನಿಜವಾದ ಕಾರಣ ಎಂದಾದರೆ, ಅದಕ್ಕೆ ಅತಿ ಸರಳ ಪರಿಹಾರವಿದೆ. ಅದೆಂದರೆ, ಜಾತಿಗೂ ಮದುವೆಗೂ ಇರುವ ಕೃತಕ ಸಂಬಂಧವನ್ನು ಕಿತ್ತು ಹಾಕುವುದು. ಆಗ ಹುಡುಗನಿಗೆ ಹುಡುಗಿ ಸಿಗದ, ಹುಡುಗಿಗೆ ಹುಡುಗ ಸಿಗದ ಎಲ್ಲರ ಸಮಸ್ಯೆಗೂ ಒಂದು ಹಂತದ ಪರಿಹಾರವಂತೂ ಸಿಕ್ಕೇ ಸಿಗುತ್ತದೆ.

ಗಂಡಿಗೊಂದು, ಹೆಣ್ಣಿಗೊಂದು ನೀತಿ ಮಾಡಿ ಅದನ್ನೇ ಸ್ಥಾಪಿಸುವ ಹಿಂಪಯಣಕ್ಕಿಂತ, ಈ ಮುಂಪಯಣದ ದಿಟ್ಟ ಹೆಜ್ಜೆಯನ್ನು ನಿರೀಕ್ಷಿಸಬಹುದೇ? ನಿರೀಕ್ಷೆ ಅಸಾಧ್ಯ. ಕೇವಲ ಪ್ರತಿಕ್ರಿಯೆ ಅಪ್ರಯೋಜಕ. ಸುಧಾರಣಾವಾದ ಮತ್ತೊಮ್ಮೆ ಮುನ್ನೆಲೆಗೆ ಬಂದು ಲಿಂಗಭೇದ ಹಾಗೂ ಜಾತಿ ಶ್ರೇಣೀಕರಣದ ವಂಚನೆಗಳ ಬಗೆಗೆ ಸದಾ ಜಾಗೃತಿ ಮೂಡಿಸುವುದೊಂದೇ ಉಳಿದಿರುವ ದಾರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು