ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ ಖಾತೆ ಡಿಲೀಟ್‌ ಮಾಡುವ ಮುನ್ನ...

Last Updated 27 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಅತ್ಯಂತ ದೊಡ್ಡ ಸಾಮಾಜಿಕ ಜಾಲತಾಣ ಫೇಸ್‌ಬುಕ್‌, ತನ್ನ ಬಳಕೆದಾರರ ವೈಯಕ್ತಿಕ ಮಾಹಿತಿಗೆ ಕನ್ನ ಹಾಕಿದೆ ಎಂಬ ಹಗರಣದ ಹಿನ್ನೆಲೆಯಲ್ಲಿ ಬಳಕೆದಾರರು ಈ ಜಾಲತಾಣವನ್ನು ಬಿಡುವ ಚಳವಳಿ ಆರಂಭವಾಗಿದೆ. ಈ ಚಳವಳಿಗೆ ಹಲವು ಬಳಕೆದಾರರಿಂದ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ.

ಇನ್ನೊಂದು ಸಾಮಾಜಿಕ ಜಾಲತಾಣ, ಫೇಸ್‌ಬುಕ್‌ ಸ್ವಾಮ್ಯದಲ್ಲಿದ್ದು ಅದಕ್ಕೇ ಸ್ಪರ್ಧೆ ಒಡ್ಡಿರುವ ವಾಟ್ಸ್‌ಆ್ಯಪ್‌ನ ಸಹ ಸಂಸ್ಥಾಪಕ ಬ್ರಿಯಾನ್ ಆಕ್ಟನ್‌ ಕೂಡ ಟ್ವೀಟ್‌ವೊಂದರಲ್ಲಿ, ‘ಇದು ಸೂಕ್ತ ಸಮಯ. #ಡಿಲೀಟ್‌ಫೇಸ್‌ಬುಕ್‌. ಡಿಲೀಟ್‌ ಮಾಡಿ ಮತ್ತು ಮರೆತುಬಿಡಿ. ಇದು ಖಾಸಗಿತನದ ಕುರಿತು ಕಾಳಜಿ ವಹಿಸುವ ಸಮಯ’ ಎಂದಿದ್ದಾರೆ.

ಇಂಗ್ಲೆಂಡ್‌ನ ರಾಜಕೀಯ ಸಮಾಲೋಚನಾ ಸಂಸ್ಥೆಯೊಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಬಳಕೆದಾರರ ವೈಯಕ್ತಕ ಮಾಹಿತಿ ಕಲೆ ಹಾಕಿತ್ತು ಎಂಬ ಆರೋಪದ ನಂತರ ಇಷ್ಟೆಲ್ಲ ಬೆಳವಣಿಗೆಗಳು ನಡೆದಿವೆ.

ಫೇಸ್‌ಬುಕ್‌ನಿಂದ ಹೊರಬರುವುದು ಹೇಗೆ ಎಂದು ಹಲವು ವೆಬ್‌ಸೈಟ್‌ಗಳು ತಿಳಿಸಿಕೊಡುತ್ತಿವೆ. ಆದರೆ, ಹೊರಬರುವ ಪ್ರಕ್ರಿಯೆ ಅವು ತಿಳಿಸಿದಷ್ಟು ಸುಲಭವಾಗಿಲ್ಲ.

ತಾತ್ಕಾಲಿಕವಾಗಿ ಹೊರಗುಳಿದು, ನಂತರ ಮತ್ತೆ ಮರಳಲು ಬಯಸುವ ಬಳಕೆದಾರರ ಅನುಕೂಲಕ್ಕೆ, ತಮ್ಮ ಖಾತೆಯನ್ನು ಡಿ–ಆ್ಯಕ್ಟಿವೇಟ್ ಮಾಡುವ ಆಯ್ಕೆಯನ್ನು ಫೇಸ್‌ಬುಕ್‌ ಮೊದಲಿನಿಂದಲೂ ಒದಗಿಸಿದೆ. ಇದರ ಜತೆ ತಮ್ಮ ಖಾತೆ ಡಿಲೀಟ್‌ ಮಾಡುವ ಆಯ್ಕೆಯೂ ಇದ್ದೇ ಇದೆ. ಸ್ನೇಹಿತರ ಟೈಮ್‌ಲೈನ್‌ಗೆ ಮಾಡಿದ ಪೋಸ್ಟ್‌ಗಳು ಖಾತೆ ಡಿಲೀಟ್‌ ಮಾಡಿದ ನಂತರವೂ ಉಳಿದುಕೊಂಡಿರುತ್ತವೆ ಎಂದು ಫೇಸ್‌ಬುಕ್‌ ತಿಳಿಸಿದೆ.

ಇತರ ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳಿಗೆ ಲಾಗ್‌ಇನ್‌ ಆಗಲು, ಅಧಿಕೃತತೆ ಸಾಬೀತುಪಡಿಸಲು ಫೇಸ್‌ಬುಕ್‌ ಬಳಕೆದಾರರು ಸುದೀರ್ಘ ಸಮಯದಿಂದ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ.

‘ದಿ ವರ್ಜ್‌’ ವೆಬ್‌ಸೈಟ್‌ ಫೇಸ್‌ಬುಕ್‌ ಖಾತೆ ಡಿಲೀಟ್‌ ಮಾಡುವ ಕುರಿತು ಮಾರ್ಗದರ್ಶಿ ಪ್ರಕಟಿಸಿದ್ದು, ಡಿಲೀಟ್‌ ಮಾಡುವ ಮುನ್ನ ನಿಮ್ಮ ಪೋಸ್ಟ್‌ಗಳು, ವಿಡಿಯೊಗಳು, ಫೋಟೊಗಳನ್ನು ಒಳಗೊಂಡ ವೈಯಕ್ತಿಕ ಮಾಹಿತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಿ ಎಂದು ಸಲಹೆ ನೀಡಿದೆ. ಖಾತೆ ಡಿಲೀಟ್‌ ಮಾಡಲು 90 ದಿನಗಳವರೆಗೂ ಬೇಕಾಗಬಹುದು ಮತ್ತು ಆ ಅವಧಿಯಲ್ಲಿ ನಿಮ್ಮ ಮಾಹಿತಿ ಪಡೆಯಲು ಆಗುವುದಿಲ್ಲ ಎಂದು ಅದು ವಿವರಿಸಿದೆ.

ಫೇಸ್‌ಬುಕ್‌ ಸ್ವಾಮ್ಯದಲ್ಲಿ ಇರುವ ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್‌ ಮತ್ತು ಮೆಸೆಂಜರ್ ಖಾತೆಗಳನ್ನು ಏನು ಮಾಡುವುದು ಎಂಬ ಪ್ರಶ್ನೆಯೂ ಹಲವು ಬಳಕೆದಾರರಲ್ಲಿ ಉದ್ಭವಿಸಿದೆ. 200 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್‌, ಈಗ ಎಷ್ಟು ಬಳಕೆದಾರರನ್ನು ಕಳೆದುಕೊಳ್ಳಲಿದೆ ಎಂದು ಇನ್ನೂ ತಿಳಿದಿಲ್ಲ.

‘ಫೇಸ್‌ಬುಕ್‌ ತನ್ನ ಬಳಕೆದಾರರ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಖಾಸಗಿತನದ ಹಕ್ಕು ಮತ್ತು ವೈಯಕ್ತಿಕ ಮಾಹಿತಿ ಬಗೆಗಿನ ಗೌರವ ಮೊಟಕುಗೊಳಿಸಿದೆ’ ಎಂದು  ಆರಂಭದ ದಿನಗಳಲ್ಲಿ ಫೇಸ್‌ಬುಕ್‌ ಮೇಲೆ ಬಂಡವಾಳ ಹೂಡಿದ್ದ ರೋಜರ್‌ ಮೆಕ್‌ನಮೀ ಅಭಿಪ್ರಾಯಪಟ್ಟಿದ್ದಾರೆ.

‘ಏನು ನಡೆಯುತ್ತಿದೆ ಎಂದು ನನಗೆ ಖಚಿತವಾಗಿ ತಿಳಿಯುತ್ತಿಲ್ಲ. ಫೇಸ್‌ಬುಕ್‌ನ ಅಲ್ಗಾರಿಥಂ ಮತ್ತು ವಾಣಿಜ್ಯ ಮಾದರಿಯಲ್ಲಿ ಸಮಸ್ಯೆ ಇರಬಹುದು. ಇದರಿಂದ ಕೆಲವರು ಅಮಾಯಕ ಬಳಕೆದಾರರಿಗೆ ತೊಂದರೆ ಉಂಟು ಮಾಡುತ್ತಿರಬಹುದು’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT