ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮೋಲಂಘನ: ಪ್ರಜಾಪ್ರಭುತ್ವ: ಅಸ್ಮಿತೆಯ ಮಿತಿ

ಎಲ್ಲಾ ನಮ್ಮವರಿಂದ, ನಮ್ಮವರಿಗಾಗಿ, ನಮ್ಮವರಿಗೋಸ್ಕರ!
Last Updated 1 ನವೆಂಬರ್ 2022, 20:00 IST
ಅಕ್ಷರ ಗಾತ್ರ

ರಿಷಿ ಸುನಕ್ ಅವರು ಬ್ರಿಟನ್ನಿನ ಪ್ರಧಾನಿಯಾಗಿ ಆ ದೇಶದ ಉನ್ನತ ಹುದ್ದೆಗೇರಿದಾಗ ಹಲವು ಬಗೆಯ ಪ್ರತಿಕ್ರಿಯೆಗಳು ಬಂದವು. ರಿಷಿ ಸುನಕ್ ಅವರ ಪೂರ್ವಜರು ಭಾರತ ಮೂಲದವರು ಎಂಬ ಕಾರಣದಿಂದ ಒಂದು ಬಗೆಯ ಸಂಭ್ರಮ ವ್ಯಕ್ತವಾಯಿತು. ಚರ್ಚಿಲ್ ಅವರು ಭಾರತೀಯರ ಕುರಿತಾಗಿ ಹೇಳಿದ್ದ ಮಾತನ್ನು ನೆನಪಿಸಿ, ಇದೀಗ ಚರ್ಚಿಲ್ ಅವರ ಕನ್ಸರ್ವೇಟಿವ್ ಪಕ್ಷಕ್ಕೆ ನಾಯಕತ್ವ ವಹಿಸಲು ಭಾರತ ಮೂಲದ ವ್ಯಕ್ತಿಯೇ ಬೇಕಾಯಿತು ಎಂಬ ಮೂದಲಿಕೆಯೂ ಕೇಳಿಬಂತು.

ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ‘ಅಮೆರಿಕ ಮತ್ತು ಇಂಗ್ಲೆಂಡಿನ ಜನ ಬಹುಸಂಖ್ಯಾತರಲ್ಲದ ನಾಗರಿಕರನ್ನು ಸರ್ಕಾರದ ಉನ್ನತ ಹುದ್ದೆಗೆ ಆಯ್ಕೆ ಮಾಡಿದ್ದಾರೆ. ಭಾರತದಲ್ಲಿ ಬಹುಸಂಖ್ಯಾತವಾದವನ್ನು ಅನುಸರಿಸುವ ಪಕ್ಷಗಳು ಇದರಿಂದ ಪಾಠ ಕಲಿಯಬೇಕು’ ಎಂದರು. ಶಶಿ ತರೂರ್ ಅವರು ‘ಬ್ರಿಟನ್ ಜನ ಅಲ್ಪಸಂಖ್ಯಾತ ಸಮುದಾಯದ ಸದಸ್ಯನನ್ನು ಅತ್ಯಂತ ಶಕ್ತಿಶಾಲಿ ಕಚೇರಿಯಲ್ಲಿ ಇರಿಸಿದ್ದಾರೆ. ಭಾರತದಲ್ಲಿ ಇದು ಸಂಭವಿಸಲು ಸಾಧ್ಯವೇ ಎಂದು ಪ್ರಾಮಾಣಿಕವಾಗಿ ಪ್ರಶ್ನಿಸಿಕೊಳ್ಳಬೇಕಿದೆ’ ಎಂದು ಟ್ವೀಟ್ ಮಾಡಿದರು. ಚಿದಂಬರಂ ಮತ್ತು ತರೂರ್ ಅವರ ಮಾತು ಚರ್ಚೆಗೆ ಗ್ರಾಸ ಒದಗಿಸಿತು. ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ನರೇಂದ್ರ ಮೋದಿ ಅವರ ಹೆಸರು ಪ್ರಶ್ನೆ, ಪ್ರತಿಪ್ರಶ್ನೆ, ಸಮರ್ಥನೆಗಳಲ್ಲಿ ಬಳಕೆಯಾಯಿತು.

ಹಾಗಾದರೆ ನಿಜಕ್ಕೂ ಅಮೆರಿಕ ಮತ್ತು ಇಂಗ್ಲೆಂಡಿನ ಪ್ರಜಾಪ್ರಭುತ್ವ ವ್ಯವಸ್ಥೆ ಪ್ರಬುದ್ಧ ಸ್ಥಿತಿಗೆ ತಲುಪಿದೆಯೇ? ಯಾವುದೇ ವ್ಯಕ್ತಿ ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಲು ಅಡ್ಡಿಯಾಗಬಲ್ಲ ವ್ಯಕ್ತ ಅಥವಾ ಅವ್ಯಕ್ತ ಚಾವಣಿಗಳು ಅಲ್ಲಿ ಇಲ್ಲವೇ? ಬಹುಸಂಖ್ಯಾತವಾದ ಭಾರತಕ್ಕೆ ಸೀಮಿತವೇ?

ರಿಷಿ ಅವರು ಇಂಗ್ಲೆಂಡಿನ ಪ್ರಧಾನಿಯಾಗಿರುವ ಈ ಸಂದರ್ಭದಲ್ಲಿ ಕೆಲವು ವಿಷಯಗಳನ್ನು ನಾವು ನೆನಪು ಮಾಡಿಕೊಳ್ಳಬೇಕು. ಮೊದಲನೆಯದು, ಸಾರ್ವತ್ರಿಕ ಚುನಾವಣೆಯ ಮೂಲಕ ರಿಷಿ ಪ್ರಧಾನಿ ಆಗಿ ಆಯ್ಕೆಯಾಗಿದ್ದಲ್ಲ ಎನ್ನುವುದು. ಎರಡನೆಯದು, ಏಳು ವಾರಗಳ ಹಿಂದೆ ಪಕ್ಷದ ನಾಯಕತ್ವಕ್ಕೆ ನಡೆದ ಚುನಾವಣೆಯಲ್ಲಿ ಅವರು ಸೋತಿದ್ದರು ಎನ್ನುವುದು. ಮೂರನೆಯದು, ಈ ಬಾರಿಯ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯೇ ಇಲ್ಲದ್ದರಿಂದ ಚುನಾವಣಾ ಪ್ರಕ್ರಿಯೆಯು ಪಕ್ಷದ ಸಾಮಾನ್ಯ ಸದಸ್ಯರು ಮತ ಚಲಾಯಿಸುವ ಹಂತಕ್ಕೆ ಹೋಗಲಿಲ್ಲ ಎನ್ನುವುದು.

ಕನ್ಸರ್ವೇಟಿವ್ ಪಕ್ಷ ತನ್ನ ನಾಯಕನನ್ನು ಆರಿಸುವ ಪ್ರಕ್ರಿಯೆ ಮೂರ್ನಾಲ್ಕು ಹಂತಗಳನ್ನು ಒಳಗೊಂಡಿರುತ್ತದೆ. ಮೊದಲು ಆಕಾಂಕ್ಷಿಗಳು ಕನಿಷ್ಠ 100 ಸಂಸದರ ಬೆಂಬಲ ಗಳಿಸಿಕೊಂಡು ಸ್ಪರ್ಧೆಗೆ ಇಳಿಯಬೇಕಾಗುತ್ತದೆ. ಹಾಗೆ ಕಣದಲ್ಲಿರುವ ವ್ಯಕ್ತಿಗಳನ್ನು ಮತ್ತೊಮ್ಮೆ ತುಲನೆ ಮಾಡಿ ಸಂಸದರು ಬೆಂಬಲ ಸೂಚಿಸುತ್ತಾರೆ. ಕನಿಷ್ಠ ಮತ ಪಡೆದ ಅಭ್ಯರ್ಥಿ ಸ್ಪರ್ಧೆಯಿಂದ ಹೊರಬೀಳುತ್ತಾರೆ. ಈ ಪ್ರಕ್ರಿಯೆ, ಇಬ್ಬರು ಅಭ್ಯರ್ಥಿಗಳು ಕಣದಲ್ಲಿ ಉಳಿಯುವವರೆಗೂ ನಡೆಯುತ್ತದೆ. ಕೊನೆಯದಾಗಿ ಪಕ್ಷದ ಸಾಮಾನ್ಯ ಸದಸ್ಯರು ಮತ ಚಲಾಯಿಸುತ್ತಾರೆ. ಹೆಚ್ಚು ಮತ ಪಡೆದವರು ನಾಯಕರಾಗಿ ಹೊರಹೊಮ್ಮುತ್ತಾರೆ.

ಬೋರಿಸ್ ಜಾನ್ಸನ್ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಇತ್ತಾಗ ಈ ಪ್ರಕ್ರಿಯೆ ಪೂರ್ಣವಾಗಿ ನಡೆದಿತ್ತು. ಆಗ ರಿಷಿ ಸುನಕ್ ಅವರು ಲಿಜ್‌ ಟ್ರಸ್ ಎದುರು ಸೋತಿದ್ದರು. ಕನ್ಸರ್ವೇಟಿವ್ ಪಕ್ಷದ ಸದಸ್ಯರ ಪೈಕಿ ಸಂಪ್ರದಾಯವಾದಿ ಬಿಳಿಯರು ಹೆಚ್ಚಿರುವುದರಿಂದ ರಿಷಿ ಅವರು ಹೆಚ್ಚಿನ ಮತ ಪಡೆಯಲು ಸಾಧ್ಯವಾಗಲಿಲ್ಲ ಎಂಬ ವಿಶ್ಲೇಷಣೆ ಬಂದಿತ್ತು. ಟ್ರಸ್ ತಮ್ಮ ಅಲ್ಪ ಅವಧಿಯಲ್ಲಿ ಅರ್ಥವ್ಯವಸ್ಥೆಯನ್ನು ಮತ್ತಷ್ಟು ಹದಗೆಡಿಸಿದ್ದರಿಂದ, ತಳ ಒಡೆದ ದೋಣಿಗೆ ಅಂಬಿಗನಾಗಲು ಯಾರೂ ಸಿದ್ಧರಿರಲಿಲ್ಲ
ವಾದ ಕಾರಣ ಈ ಬಾರಿ ನಾಯಕನ ಆಯ್ಕೆ ಮೊದಲ ಹಂತಕ್ಕಷ್ಟೇ ಸೀಮಿತವಾಯಿತು. ರಿಷಿ ಅವಿರೋಧವಾಗಿ ಆಯ್ಕೆಯಾದರು. ಈ ವಿಷಮ ಸಂದರ್ಭದಲ್ಲಿ ಸಾರ್ವತ್ರಿಕ ಚುನಾವಣೆಗೆ ಹೋಗಲು ಕನ್ಸರ್ವೇಟಿವ್ ಪಕ್ಷ ಸಿದ್ಧವಿರಲಿಲ್ಲ ಎಂಬುದು ರಿಷಿ ಆಯ್ಕೆಗೆ ಮತ್ತೊಂದು ಕಾರಣ.

ಹಾಗಾದರೆ ರಿಷಿ ಅವರು ಬ್ರಿಟನ್‌ ಪ್ರಧಾನಿಯಾದದ್ದನ್ನು ಸಂಭ್ರಮಿಸಲು ಕಾರಣಗಳಿಲ್ಲವೇ? ರಿಷಿ ಇಂಗ್ಲೆಂಡಿನಲ್ಲಿ ಹುಟ್ಟಿ ಬೆಳೆದವರು. ಅವರ ಅಜ್ಜ ಅವಿಭಜಿತ ಭಾರತ ಮೂಲದವರು ಎಂದು ನಾವು ಖುಷಿಪಡುವುದಕ್ಕಿಂತ ಅವರು ಎನ್.ಆರ್.ನಾರಾಯಣಮೂರ್ತಿ ಅವರ ಅಳಿಯ ಎಂದು ಸಂತಸಪಡುವುದಲ್ಲಿ ಹೆಚ್ಚು ಅರ್ಥವಿದೆ. ಜೊತೆಗೆ ಬಿಳಿಯರು ಮತ್ತು ಚರ್ಚ್ ಹೆಚ್ಚಿನ ಹಿಡಿತ ಹೊಂದಿರುವ ರಾಜಕೀಯ ವ್ಯವಸ್ಥೆಯಲ್ಲಿ, ಬಿಳಿಯರು ಇತರ ಜನಾಂಗಗಳಿಗಿಂತ ಶ್ರೇಷ್ಠರು ಎಂಬ ಭಾವನೆ ಬೇರೂರಿದ್ದ ದೇಶದಲ್ಲಿ ಬಿಳಿಯ ಜನಾಂಗಕ್ಕೆ ಸೇರದ, ಹಿಂದೂ ಆಚರಣೆಗಳೊಂದಿಗೆ ಗುರುತಿಸಿಕೊಂಡ ರಿಷಿ ಪ್ರಧಾನಿಯಾಗಿದ್ದಾರೆ ಎನ್ನುವುದನ್ನು ಪ್ರಶಂಸಿಸಲೇಬೇಕು.

ಒಂದೊಮ್ಮೆ ಆರ್ಥಿಕವಾಗಿ ಕುಗ್ಗಿರುವ ಬ್ರಿಟನ್‌ ಅನ್ನು ರಿಷಿ ಅವರು ಹಿಡಿದು ನಿಲ್ಲಿಸಲು ಸಾಧ್ಯವಾದರೆ, ಆ ಮೂಲಕ ಜನಮನ್ನಣೆಯನ್ನು ಗಳಿಸಿಕೊಂಡು, ಪಕ್ಷದೊಳಗೆ ಒಗ್ಗಟ್ಟನ್ನು ಕಾಯ್ದುಕೊಂಡು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷದ ನಾಯಕನಾಗಿ ಹೊರಹೊಮ್ಮಿ ಚುನಾವಣೆ ಗೆದ್ದು ಪ್ರಧಾನಿಯಾದರೆ, ಆಗ ಬ್ರಿಟನ್ ಪ್ರಜಾಪ್ರಭುತ್ವ ಪ್ರಬುದ್ಧತೆಯನ್ನು ಸಾಧಿಸಿದೆ ಎನ್ನಬಹುದು.

ಅಮೆರಿಕದ ವಿಷಯ ನೋಡುವುದಾದರೆ, ಅಲ್ಲೂ ಅಭ್ಯರ್ಥಿಯ ವರ್ಣ, ಲಿಂಗ ಮತ್ತು ಧಾರ್ಮಿಕ ಶ್ರದ್ಧೆಯು ಚುನಾವಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜನ್ಮತಃ ಅಮೆರಿಕದ ಪ್ರಜೆಯಾದವರು ಮಾತ್ರ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ನಿಬಂಧನೆ ಆ ಹುದ್ದೆಗಿದೆ. ಪ್ರಾಟೆಸ್ಟಂಟ್ ಕ್ರಿಶ್ಚಿಯನ್ನರು ಹೆಚ್ಚಿರುವ ಅಮೆರಿಕದಲ್ಲಿ 46 ಅಧ್ಯಕ್ಷರ ಪೈಕಿ ಇಬ್ಬರು ಮಾತ್ರ ಕ್ಯಾಥೊಲಿಕ್ ಕ್ರಿಶ್ಚಿಯನ್ ಪಂಗಡಕ್ಕೆ ಸೇರಿದವರು. ಕ್ರಿಶ್ಚಿಯನ್ ಅಲ್ಲದವರು ಕನಸಿನಲ್ಲಷ್ಟೇ ಅಧ್ಯಕ್ಷರಾಗಬಹುದು ಎಂಬ ಪರಿಸ್ಥಿತಿಯಿದೆ. 1961ರ ಅಧ್ಯಕ್ಷೀಯ ಚುನಾವಣೆಯಲ್ಲಿ ಜಾನ್ ಎಫ್ ಕೆನಡಿ ಗೆದ್ದಾಗ, ಪ್ರಥಮ ಕ್ಯಾಥೊಲಿಕ್ ಅಧ್ಯಕ್ಷ ಎನಿಸಿಕೊಂಡರು. 2008ರ ಅಧ್ಯಕ್ಷೀಯ ಚುನಾವಣೆಯಲ್ಲಿ ಆಫ್ರಿಕನ್ ಅಮೆರಿಕನ್ ಸಮುದಾಯದ ಬರಾಕ್ ಒಬಾಮ ಗೆದ್ದಾಗ ಅದು ಮತ್ತೊಂದು ಮೊದಲಾಯಿತು. 2016ರ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಅವರು ಗೆದ್ದಿದ್ದರೆ, ಮಹಿಳೆಯೊಬ್ಬರು ಅಧ್ಯಕ್ಷರಾಗುವ ಮೂಲಕ ಮತ್ತೊಮ್ಮೆ ಅಗೋಚರ ಚಾವಣಿ (ಗ್ಲಾಸ್ ಸೀಲಿಂಗ್) ಪುಡಿಯಾಗುತ್ತಿತ್ತು. ಆದರೆ ಹಾಗಾಗಲಿಲ್ಲ.

ಈಗ ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾಗಿದ್ದಾರೆ. ನಿಜ. ಅದು ಸಾಧ್ಯವಾಗಿದ್ದು ಬೈಡನ್ ಅವರು ತಮ್ಮ ಸಹಸ್ಪರ್ಧಿಯಾಗಿ ಕಮಲಾ ಅವರನ್ನು ಆಯ್ಕೆ ಮಾಡಿಕೊಂಡಿದ್ದರಿಂದ. ಮುಂದಿನ ಚುನಾವಣೆಯಲ್ಲಿ ಕಮಲಾ ಅವರೇ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಗೆದ್ದು ಶ್ವೇತಭವನ ಹೊಕ್ಕರೆ ಅಮೆರಿಕದ ಪ್ರಜಾಪ್ರಭುತ್ವದ ಪಕ್ವತೆಗೆ ಶಹಬಾಸ್ ಎನ್ನಬಹುದು.

ಭಾರತದ ವಿಷಯ ನೋಡುವುದಾದರೆ, ಭಾರತದ ಸಾಮಾಜಿಕ ಸಂರಚನೆಯು ಬ್ರಿಟನ್‌ ಮತ್ತು ಅಮೆರಿಕಕ್ಕಿಂತ ಭಿನ್ನವಾಗಿದೆ. ಹಲವು ಮತ, ಭಾಷೆ, ಸಂಸ್ಕೃತಿ, ಜಾತಿ, ಉಪಜಾತಿಗಳು ಭಾರತದ ಒಡಲು ತುಂಬಿವೆ. ಈ ವೈವಿಧ್ಯವು ನಮಗೆ ಭಿನ್ನ ಗುರುತುಗಳನ್ನು ನೀಡಿದೆ. ಮನುಷ್ಯ ಸ್ವಭಾವತಃ ತನ್ನ ಗುರುತಿನೊಂದಿಗೆ ಬೆಸೆದುಕೊಳ್ಳುತ್ತಾನೆ, ಆಕರ್ಷಿತನಾಗುತ್ತಾನೆ. ಹಾಗಾಗಿ ಈ ಗುರುತುಗಳು ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಎಲ್ಲ ರಾಜಕೀಯ ಪಕ್ಷಗಳೂ ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡೇ ಗೆಲುವಿಗೆ ತಂತ್ರ ರೂಪಿಸುತ್ತವೆ. ಆ ಮೂಲಕ ಬಹುಸಂಖ್ಯಾತವಾದವನ್ನು ಪೋಷಿಸುತ್ತವೆ. ಹಾಗಾಗಿಯೇ ಸಿಖ್ ಸಮುದಾಯದ ಮನಮೋಹನ್ ಸಿಂಗ್ ಅವರು ರಾಜ್ಯಸಭೆಯ ಮೂಲಕ ಒಳಬಂದು ಪ್ರಧಾನಿಯಾಗಬೇಕಾಯಿತು. ಯಾವ ಪಕ್ಷಕ್ಕೂ ಬಹುಮತವಿಲ್ಲದ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದರಿಂದಷ್ಟೇ ಕನ್ನಡಿಗ ದೇವೇಗೌಡರು ಅಂದು ಪ್ರಧಾನಿಯಾಗಲು ಸಾಧ್ಯವಾಯಿತು. ಹಿಂದಿ ಭಾಷಿಕ ಪ್ರಾಂತ್ಯಗಳು ದಕ್ಷಿಣದ ಹಿಂದಿಯೇತರ ಮುಂದಾಳುವನ್ನು ನಾಯಕನನ್ನಾಗಿ ಒಪ್ಪುವ ಸ್ಥಿತಿ ಇಂದಿಗೂ ಇಲ್ಲ. ದೆಹಲಿಯ ವಿಷಯ ಬಿಡಿ, ಒಂದು ಜಾತಿಯ ಉಪ ಪಂಗಡದವರು ಹೆಚ್ಚಿರುವ ಗ್ರಾಮದಲ್ಲಿ ಅದೇ ಜಾತಿಯ ಮತ್ತೊಂದು ಪಂಗಡದ ವ್ಯಕ್ತಿ ಚುನಾಯಿತನಾಗುವುದು ನಮ್ಮಲ್ಲಿ ಸುಲಭವಿಲ್ಲ.

ಲಿಂಕನ್ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎಂದು ವ್ಯಾಖ್ಯಾನಿಸಿದ್ದರು. ಯಾರು ಬೇಕಾದರೂ ಯಾವುದೇ ಉನ್ನತ ಹುದ್ದೆಯನ್ನು ಅಲಂಕರಿಸಬಹುದಾದ ಮುಕ್ತ ವ್ಯವಸ್ಥೆ ಎಂದು ಕರೆದಿದ್ದರು. ಆದರೆ ಅದು ನಮ್ಮವರಿಂದ, ನಮ್ಮವರಿಗಾಗಿ, ನಮ್ಮವರಿಗೋಸ್ಕರ ಎನ್ನುವಷ್ಟು ಬದಲಾಗಿದೆ. ಅಸ್ಮಿತೆಯ ಸುಳಿಯೊಳಗೆ ಬಂದಿಯಾಗಿರುವ ನಾವು ಪ್ರಜಾಪ್ರಭುತ್ವದ ಆಶಯ ಮತ್ತು ಆದರ್ಶಗಳಿಂದ ಬಹಳ ದೂರ ಇದ್ದೇವೆ. ಅಮೆರಿಕ ಮತ್ತು ಬ್ರಿಟನ್ನಿನ ಜನ ನಮಗಿಂತ ಒಂದೆರಡು ಹೆಜ್ಜೆ ಮುಂದಿರಬಹುದು ಅಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT