ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮೋಲ್ಲಂಘನ | ಗಾಂಧಿ ಗ್ರಹಿಕೆಗೆ ಧರ್ಮಪಾಲ್ ದೊಂದಿ

Last Updated 16 ಫೆಬ್ರುವರಿ 2022, 21:17 IST
ಅಕ್ಷರ ಗಾತ್ರ

ಗಾಂಧೀಜಿಯ ಬದುಕನ್ನು ಹೇಗೆ ಬಣ್ಣಿಸಬಹುದು? ಗಾಂಧೀಜಿ ಜಗತ್ತನ್ನು ಕಂಡ ರೀತಿಯಿಂದಲೇ, ದೇಶವಾಸಿಗಳನ್ನು ಪರಿಭಾವಿಸಿದ ದೃಷ್ಟಿಯಿಂದಲೇ, ಅವರು ಮಂಡಿಸಿದ ಚಿಂತನೆ, ಅನುಷ್ಠಾನಕ್ಕೆ ಬರುವಂತೆ ರೂಪಿಸಿದ ಕಾರ್ಯಕ್ರಮ ಮತ್ತು ಸಂಸ್ಥೆಗಳಿಂದಲೇ? ಗಾಂಧೀಜಿಯ ಬದುಕನ್ನು ಇಡಿಯಾಗಿ ನೋಡುವಾಗ ಕೆಲವು ಆಕ್ಷೇಪಗಳು, ಅನುಮಾನಗಳು ಮೂಡುತ್ತವೆ. ಗಾಂಧೀಜಿಯ ರಾಜಕೀಯ ಮತ್ತು ಆರ್ಥಿಕ ಚಿಂತನೆ ಗಳನ್ನು ಅಪ್ರಾಯೋಗಿಕ ಎಂದು ಪರಿಗಣಿಸಲಾಗುತ್ತದೆ. ಅವರದು ಅತಿ ಆದರ್ಶದ ಚಿಂತನೆ ಎನ್ನಲಾಗುತ್ತದೆ.

ಗಾಂಧೀಜಿ ಬದುಕಿದ್ದ ಅವಧಿಯಲ್ಲೂ ಅವರ ಕುರಿತು ಆಕ್ಷೇಪಗಳು ಇದ್ದವು. ಗಾಂಧೀಜಿ ದೇಶವಾಸಿ
ಗಳೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳಲು ಪ್ರಯತ್ನಿಸಿ ದರು. ದಣಿವರಿಯದೇ ಬರೆದರು. ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುವ, ಪೂರಕ ಮಾಹಿತಿ ನೀಡುವ ಕೆಲಸ ಮಾಡಿದರು. ಆದರೂ ಕೆಲವು ವಿಚಾರಗಳ ಕುರಿತು ಅಸ್ಪಷ್ಟತೆ ಉಳಿಯಿತು.

ಸ್ವಾತಂತ್ರ್ಯಾನಂತರ ಗಾಂಧಿ ಚಿಂತನೆಯನ್ನು ನಿಕಷಕ್ಕೆ ಒಡ್ಡುವ, ಅವು ಪ್ರಾಯೋಗಿಕವೇ ಎಂದು ಪರಿಶೀಲಿಸುವ ಕೆಲಸ ದೊಡ್ಡಮಟ್ಟದಲ್ಲಿ ನಡೆಯಲಿಲ್ಲ. ಸರ್ಕಾರ ತನ್ನದೇ ಆದ ಕಾರ್ಯಒತ್ತಡದಲ್ಲಿ ಮುಳುಗಿತು ಅಥವಾ ಗಾಂಧಿ ಚಿಂತನೆಗಳನ್ನು ಸರಳೀಕರಿಸಿ ನೈರ್ಮಲ್ಯ, ಖಾದಿ ದಿರಿಸು ಮತ್ತು ಗಾಂಧಿ ಭಜನೆಗಳಿಗೆ ಸೀಮಿತಗೊಳಿಸಿತು. ಆದರೆ ಬೆರಳೆಣಿಕೆಯಷ್ಟು ಚಿಂತಕರು ಗಾಂಧೀಜಿ ತೋರಿದ ದಿಕ್ಕಿನಲ್ಲಿ ನಾಲ್ಕು ಹೆಜ್ಜೆ ಮುಂದಿಟ್ಟು ಅವರ ವಿಚಾರಗಳಿಗೆ ಬೆಳಕು ಹಿಡಿಯುವ ಪ್ರಯತ್ನ ಮಾಡಿದರು. ಅವರಲ್ಲಿ ಧರ್ಮಪಾಲ್ ಅಗ್ರಗಣ್ಯರು.

1922ರ ಫೆಬ್ರುವರಿ 19ರಂದು ಜನಿಸಿದ ಧರ್ಮಪಾಲ್, ಗಾಂಧೀಜಿ ಪ್ರಸ್ತಾಪಿಸಿದ್ದ ಕೆಲವು ಸಂಗತಿಗಳ ಕುರಿತು ಹೆಚ್ಚಿನ ಅಧ್ಯಯನ ನಡೆಸಿದರು. ವಸಾಹತುಪೂರ್ವ ಭಾರತದ ಸಾಮಾಜಿಕ ವ್ಯವಸ್ಥೆ, ಶಿಕ್ಷಣ, ವೈಜ್ಞಾನಿಕ ಮತ್ತು ತಾಂತ್ರಿಕ ಸಾಧನೆಗಳ ಕುರಿತು ಗಾಂಧೀಜಿ ಅಂತಃಸ್ಫೂರ್ತಿಯಿಂದ ಹೇಳಿದ್ದಕ್ಕೆ ಪುರಾವೆಗಳು ಸಿಗಬಹುದೇ ಎಂಬ ಸಂಶೋಧನೆ ಕೈಗೊಂಡರು. ಪ್ರಮಾಣಗಳ ಸಹಿತ ಆ ಕುರಿತು ಬರೆದರು. ಗಾಂಧೀಜಿಯನ್ನು ಸಾಮೂಹಿಕ ಸತ್ಯಾಗ್ರಹದ ಕಲ್ಪನೆಕೊಟ್ಟ ಮಹಾಪುರುಷ, ರಾಷ್ಟ್ರಪಿತ ಎಂದು ನೋಡಿದರೆ ಸಾಕೇ ಎಂಬ ಪ್ರಶ್ನೆ ಧರ್ಮಪಾಲ್ ಅವರನ್ನು ಕಾಡಿತ್ತು.

ಮಾನವ ಇತಿಹಾಸಕ್ಕೆ ಸಂಬಂಧಿಸಿದಂತೆ ಗಾಂಧಿಯನ್ನು ಪ್ಲೇಟೊ, ಬುದ್ಧ, ಜೀಸಸ್ ಅಥವಾ ಲಾವೊತ್ಸೆಗೆ ಸಮನಾಗಿ ನೋಡಬೇಕಿದೆ. ಕನಿಷ್ಠಪಕ್ಷ ಯುರೋಪಿನ ಮಧ್ಯಕಾಲೀನ ಚರ್ಚುಗಳ ಪಾದ್ರಿಗಳಿಗೆ, ಮಾರ್ಟಿನ್ ಲೂಥರ್, ಫ್ರಾನ್ಸಿಸ್ ಬೇಕನ್, ಹೆಗೆಲ್ ಅಥವಾ ಕಾರ್ಲ್‌ಮಾರ್ಕ್ಸ್ ಅವರುಗಳಿಗೆ ಕೊಟ್ಟಷ್ಟು ಪ್ರಾಶಸ್ತ್ಯವನ್ನು ಗಾಂಧಿ ಬದುಕು ಮತ್ತು ಚಿಂತನೆಗಳಿಗೆ ನೀಡಬೇಕಿದೆ ಎಂಬುದು ಧರ್ಮಪಾಲ್ ಅವರ ಆಗ್ರಹವಾಗಿತ್ತು.

‘ಗಾಂಧಿ ಸಮಗ್ರ’ವನ್ನು ಸಂಕಲನ ಮಾಡಿ ಪ್ರಕಟಿಸಿ ದ್ದೇನೋ ಸರಿ. ಆದರೆ ಆ ಸಂಪುಟಗಳು ಅವರ ಮತ್ತೊಂದು ಸಮಾಧಿಯಾದವೇ? ಮುದ್ರಿತ ಕಾಗದ ದಿಂದ ಅದನ್ನು ಕಟ್ಟಲಾಯಿತೇ? ಗಾಂಧೀಜಿಯ ವಾಚು, ಚಪ್ಪಲಿಗಳಂತೆ ಗಾಂಧಿ ಸಮಗ್ರದಲ್ಲಿ ಅಡಗಿರುವ ಅವರ ವಿಚಾರಗಳನ್ನು ಬೀಗ ಜಡಿದು ರಕ್ಷಿಸಬೇಕು ಎಂಬ ನಿಲುವನ್ನು ನಾವು ತಳೆದಿದ್ದೇವೆಯೇ ಎಂದು ಧರ್ಮಪಾಲ್ ತೀಕ್ಷ್ಣವಾಗಿ ಪ್ರಶ್ನಿಸಿದ್ದರು. ‘ಗಾಂಧಿ ಸಮಗ್ರ’ ಕುರಿತ ಅಧ್ಯಯನ, ಸಂಶೋಧನೆಗಳು ನಡೆದಿದ್ದರೆ ಇಂದು ಗಾಂಧೀಜಿಯ ಕುರಿತು ಇರುವ ಅನೇಕ ಆಕ್ಷೇಪಗಳು, ಮೂದಲಿಕೆಗಳು ಇಲ್ಲವಾಗುತ್ತಿದ್ದವು, ಹಲವು ವಿಷಯ ಗಳಲ್ಲಿ ಹೆಚ್ಚಿನ ಸ್ಪಷ್ಟತೆ ಸಿಗುತ್ತಿತ್ತು, ಅವರ ಚಿಂತನೆ ಅಪ್ರಾಯೋಗಿಕ ಎನ್ನುವ ಪೂರ್ವಗ್ರಹ ಕರಗುತ್ತಿತ್ತು ಎನ್ನುವುದು ಧರ್ಮಪಾಲ್ ಅವರ ಅಭಿಪ್ರಾಯವಾಗಿತ್ತು.

ಗಾಂಧೀಜಿ ಅವರ ಪ್ರಯೋಗಗಳ ಪೈಕಿ ಹೆಚ್ಚು ಅಪಾರ್ಥಕ್ಕೆ ಈಡಾಗಿದ್ದು ಬ್ರಹ್ಮಚರ್ಯಕ್ಕೆ ಸಂಬಂಧಿಸಿದ ಪ್ರಯೋಗಗಳು. 1936ರಿಂದ 1947ರವರೆಗಿನ ಅವಧಿ ಯಲ್ಲಿ ಬ್ರಹ್ಮಚರ್ಯಕ್ಕೆ ಸಂಬಂಧಿಸಿದಂತೆ ಗಾಂಧೀಜಿ ಹೆಚ್ಚಿನ ಪ್ರಯೋಗ ಕೈಗೊಂಡರು. ಇದನ್ನು ತಪ್ಪಾಗಿ ಅರ್ಥೈಸಲಾಯಿತು. 1938ರ ಜೂನ್ ತಿಂಗಳಿನಲ್ಲಿ ಗಾಂಧಿ ಈ ಪ್ರಯೋಗಗಳ ಕುರಿತು ಬರೆದ ಲೇಖನವನ್ನು ಗಾಂಧೀಜಿಯ ಸುತ್ತಲಿದ್ದ ಅವರ ಹಿತೈಷಿಗಳು ತಮ್ಮ ಪ್ರೀತಿಯ ಒತ್ತಡ ಬಳಸಿ ಪ್ರಕಟಗೊಳ್ಳದಂತೆ ತಡೆಯದಿದ್ದರೆ, ಆ ಪ್ರಯೋಗಗಳನ್ನು ಅರ್ಥಮಾಡಿ
ಕೊಳ್ಳಲು ಜನಸಾಮಾನ್ಯರಿಗೆ ಸಾಧ್ಯವಾಗುತ್ತಿತ್ತು.

ಗೋಹತ್ಯೆ ವಿರುದ್ಧದ ಆಂದೋಲನ 1880ಕ್ಕೂ ಹಿಂದೆ ಆರಂಭವಾದ ಮಹತ್ವದ ಚಳವಳಿ
ಯಾಗಿತ್ತು. ಗೋಹತ್ಯೆ ವಿರುದ್ಧದ ಆಂದೋಲನವನ್ನು ರಾಣಿ ವಿಕ್ಟೋರಿಯಾ ವಾಸ್ತವವಾಗಿ ಬ್ರಿಟಿಷರ ವಿರುದ್ಧದ ಮತ್ತು ಮುಸ್ಲಿಮರ ವಿರುದ್ಧವಲ್ಲದ ಆಂದೋಲನವಾಗಿ ಕಂಡಿದ್ದರು ಎನ್ನುವುದನ್ನು ಗಾಂಧೀಜಿ ಒತ್ತಿ ಹೇಳಿದರು. ಆದರೆ ಈ ಬಗ್ಗೆ ಹೆಚ್ಚು ಚರ್ಚೆ ನಡೆಯಲಿಲ್ಲ. ಗೋಹತ್ಯೆ ಎನ್ನುವುದು ಹಿಂದೂ ಮುಸಲ್ಮಾನರ ನಡುವಿನ ಕಂದರವಾಗಿ ಮಾರ್ಪಟ್ಟಿತು.

ಅಹಿಂಸೆಯ ವ್ಯಾಖ್ಯಾನ ಕೂಡ ಬದಲಾಯಿತು. ಗಾಂಧೀಜಿ ಚಂಪಾರಣ್ ಮತ್ತು ಖೇಡಾದಲ್ಲಿ ನಡೆಸಿದ ಪ್ರಯೋಗಗಳಿಂದ ‘ಬಹುಪಾಲು ಭಾರತೀಯರನ್ನು ದೈಹಿಕವಾಗಿ, ನೈತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ
ದುರ್ಬಲಗೊಳಿಸಲಾಗಿದೆ’ ಎಂಬುದನ್ನು ಕಂಡು ಕೊಂಡಿದ್ದರು. ಈಗಾಗಲೇ ದುರ್ಬಲಗೊಂಡಿರುವ ಭಾರತೀಯರಿಗೆ ಅಹಿಂಸೆಯ ಗುಣವನ್ನು ಬೋಧಿ ಸುವ ಮೊದಲು, ಅವರು ಕಳೆದುಕೊಂಡಿರುವ ಆಯುಧ ಅವರಿಗೆ ಮರಳುವಂತೆ ಮಾಡಬೇಕು ಅರ್ಥಾತ್ ಕಳೆದು ಕೊಂಡಿರುವ ‘ಪೌರುಷ’ ಅವರಲ್ಲಿ ಜಾಗೃತವಾಗು ವಂತೆ ಮಾಡಬೇಕು ಎಂಬ ನಿರ್ಧಾರಕ್ಕೆ ಗಾಂಧೀಜಿ ಬಂದಿದ್ದರು. ಈ ಬಗ್ಗೆ 1918ರ ಜುಲೈನಲ್ಲಿ ಬರೆದ ಲೇಖನದಲ್ಲಿ ‘ಮನುಷ್ಯನಲ್ಲಿ ಪೂರ್ಣ ಚೈತನ್ಯವಿದ್ದಾಗ ಮತ್ತು ತನ್ನ ಎದುರಾಳಿಯ ಮುಖವನ್ನು ನೇರವಾಗಿ ನೋಡಲು ಸಾಧ್ಯವಿದ್ದಾಗ ಮಾತ್ರ, ಅಂತಹ ಮನುಷ್ಯನಿಗೆ ಅಹಿಂಸೆಯನ್ನು ಬೋಧಿಸಲಾಗುತ್ತಿತ್ತು’ ಎಂದಿದ್ದರು.

ತಂತ್ರಜ್ಞಾನ ಎನ್ನುವುದು ಸಮಾಜದ ಅವಶ್ಯಕತೆಗಳಿಗೆ ತಕ್ಕಂತೆ ಅಭಿವೃದ್ಧಿಗೊಳ್ಳಬೇಕು ಎಂಬುದು ಗಾಂಧೀಜಿಯ ನಿಲುವಾಗಿತ್ತು. ವೇಗ ಮತ್ತು ಪ್ರಗತಿಯ ಗೀಳಿಗೆ ಬಿದ್ದ, ಪ್ರಕೃತಿಯನ್ನು ಒತ್ತಡಕ್ಕೆ ಒಳಪಡಿಸುವ ವಿನ್ಯಾಸದ ಸಮಾಜವನ್ನು ಗಾಂಧೀಜಿ ಕಲ್ಪಿಸಿಕೊಂಡಿರಲಿಲ್ಲ. ಈ ಸಂಗತಿಗಳ ಕುರಿತು ಧರ್ಮಪಾಲ್ ಒತ್ತುಕೊಟ್ಟು ಹೇಳಿದರು.

1931ರಲ್ಲಿ ಸಾಂವಿಧಾನಿಕ ಸುಧಾರಣೆಗಳ ಕುರಿತು ಚರ್ಚಿಸಲು ಬ್ರಿಟನ್ನಿಗೆ ತೆರಳಿದಾಗ, ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ಭಾರತ ಹೇಗೆ ವ್ಯಾಪಕವಾಗಿ ಹಾನಿಗೊಳಗಾಯಿತು ಎಂಬ ಬಗ್ಗೆ ಮಾತನಾಡಲು ಆ ಸಂದರ್ಭವನ್ನು ಗಾಂಧೀಜಿ ಬಳಸಿಕೊಂಡಿದ್ದರು. ಬ್ರಿಟಿಷ್ ಆಳ್ವಿಕೆಗೂ ಮೊದಲು ಭಾರತದಲ್ಲಿ ಸಾಕ್ಷರತೆಯ ಪ್ರಮಾಣ ಹೆಚ್ಚಿತ್ತು ಎಂದು ಗಾಂಧೀಜಿ ನುಡಿದಿದ್ದರು. ಈ ಮಾತು ಧರ್ಮಪಾಲ್ ಅವರನ್ನು ಸಂಶೋಧನೆಯ ಹೊಸ ಹಾದಿಯಲ್ಲಿ ನಿಲ್ಲಿಸಿತ್ತು.

ಭಾರತೀಯ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯ ಕುರಿತು ನಡೆದಿದ್ದ ಅಧ್ಯಯನಗಳನ್ನು, ಸಮೀಕ್ಷೆಗಳ ಮೂಲಕ ಸಂಗ್ರಹಿಸಿದ್ದ ಅಂಕಿ-ಅಂಶಗಳನ್ನು ಹೆಕ್ಕಿತೆಗೆದು ಅಂದಿನ ಶಿಕ್ಷಣ ವ್ಯವಸ್ಥೆಯು ತಳ ಸಮುದಾಯ ಮತ್ತು ಮಹಿಳೆಯರು ಸೇರಿದಂತೆ ಹೇಗೆ ಎಲ್ಲ ವರ್ಗದವರನ್ನೂ ಒಳಗೊಂಡಿತ್ತು, ಪಠ್ಯಕ್ರಮ ಹಾಗೂ ಬೋಧನಾ ವಿಧಾನ ಹೇಗಿತ್ತು ಎಂಬ ಸಂಗತಿಗಳ ಕುರಿತು ಧರ್ಮಪಾಲ್ ವಿಸ್ತೃತವಾಗಿ 1983ರಲ್ಲಿ ಬರೆದರು. ಭಾರತದ ಪ್ರಾಚೀನ ಶಿಕ್ಷಣ ವ್ಯವಸ್ಥೆಯನ್ನು ಗಾಂಧೀಜಿ ‘ಎ ಬ್ಯೂಟಿಫುಲ್ ಟ್ರೀ’ ಎಂದು ಕರೆಯುತ್ತಿದ್ದ ಕಾರಣ, ಆ ಹೆಸರನ್ನೇ ತಮ್ಮ ಕೃತಿಗೆ ಉಳಿಸಿಕೊಂಡರು. ವಸಾಹತುಪೂರ್ವ ಶಿಕ್ಷಣ ವ್ಯವಸ್ಥೆಯ ಬಗೆಗೆ ಇದ್ದ ಮಿಥ್ಯೆಗಳನ್ನು ಈ ಕೃತಿಯ ಮೂಲಕ ಧರ್ಮಪಾಲ್ ಹೊಡೆದುಹಾಕಿದರು.

ಗಾಂಧೀಜಿ ಹೇಳಿಕೆಗಳ ಬೆನ್ನುಹತ್ತಿ ಪುರಾವೆ ಹುಡು ಕುವ ಪ್ರಯತ್ನದ ಜೊತೆಗೆ ಗಾಂಧೀ ಚಿಂತನೆಗಳು ವಾಸ್ತವದ ನೆಲೆಗಟ್ಟಿಗೆ ಹೊಂದುತ್ತವೆಯೇ ಎಂದು ತರ್ಕಿಸುವ ಕೆಲಸವನ್ನು ಮಾಡಿದ ಧರ್ಮಪಾಲ್, ಗಾಂಧೀಜಿಯನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ಸೋತಿದ್ದು ಹೇಗೆ ಎಂಬುದನ್ನೂ ವಿವರಿಸಿದರು. ಸಾಮಾ ಜಿಕ ಮಾಧ್ಯಮಗಳ ಭರಾಟೆಯ ಈ ಕಾಲಘಟ್ಟದಲ್ಲಿ ಅಪಾರ್ಥಗಳಿಗೆ, ತೆಗಳಿಕೆಗೆ, ಕಲ್ಪಿತ ಕತೆಗಳಿಗೆ ವಸ್ತುವಾಗುತ್ತಿರುವ ಗಾಂಧೀಜಿಯನ್ನು ಸಮಗ್ರವಾಗಿ ಗ್ರಹಿಸಲು ಧರ್ಮಪಾಲ್ ಅವರ ಬರಹಗಳು ನೆರವಾಗಬಲ್ಲವು.

ಧರ್ಮಪಾಲ್ ಅವರ ಜನ್ಮಶತಾಬ್ದಿಯ ನೆಪದಲ್ಲಾ ದರೂ ಅವರನ್ನು ಓದುವ ಮೂಲಕ ಗಾಂಧೀಜಿಯನ್ನು, ತನ್ಮೂಲಕ ವಸಾಹತುಪೂರ್ವ ಭಾರತವನ್ನು ಅರ್ಥ
ಮಾಡಿಕೊಳ್ಳಲು ನಾವು ಪ್ರಯತ್ನಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT