ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮೋಲ್ಲಂಘನ | ಚೀನಾ ಗುಟ್ಟು, ಬಿಕ್ಕಟ್ಟಿನ ಕಮಟು

ಗಡಿ ತಕರಾರನ್ನು ಕ್ರೀಡೆಗೂ ವಿಸ್ತರಿಸಿ ಚೀನಾ ಖ್ಯಾತೆ ತೆಗೆದದ್ದು ಏಕೆ?
Published 26 ಸೆಪ್ಟೆಂಬರ್ 2023, 0:30 IST
Last Updated 26 ಸೆಪ್ಟೆಂಬರ್ 2023, 0:30 IST
ಅಕ್ಷರ ಗಾತ್ರ

ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಘೋಷವಾಕ್ಯ ‘Heart to Heart, @future’ ಎಂಬುದಾಗಿದೆ. ಎರಡನೇ ವಿಶ್ವ ಸಮರದ ಬಳಿಕ, ಏಷ್ಯಾದ ರಾಷ್ಟ್ರಗಳ ಏಕತೆ ಮತ್ತು ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸುವ ಉದ್ದೇಶದಿಂದ ಕ್ರೀಡಾಕೂಟವನ್ನು ಆಯೋಜಿಸುವ ಆಲೋಚನೆಯು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯಲ್ಲಿ ಭಾರತದ ಪ್ರತಿನಿಧಿಯಾಗಿದ್ದ ಗುರುದತ್ ಸೋಂಧಿ ಅವರಲ್ಲಿ ಟಿಸಿಲೊಡೆದಿತ್ತು. 1951ರಲ್ಲಿ ಭಾರತ ಮೊದಲ ಏಷ್ಯನ್ ಗೇಮ್ಸ್ ಆಯೋಜಿಸಿತು. ನಂತರ ವಿವಿಧ ದೇಶಗಳು ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಿದವು. ಒಲಿಂಪಿಕ್ಸ್ ನಂತರದ ದೊಡ್ಡ ಕ್ರೀಡಾಕೂಟ ಎಂಬ ಹೆಗ್ಗಳಿಕೆಯನ್ನು ಏಷ್ಯನ್ ಗೇಮ್ಸ್ ಪಡೆಯಿತು.

ಗಡಿ, ಸಂಸ್ಕೃತಿ ಮತ್ತು ಧರ್ಮಗಳ ಆಚೆಗೆ ಜನರನ್ನು ಒಟ್ಟುಗೂಡಿಸುವ, ಶಾಂತಿ ಮತ್ತು ಸಹಿಷ್ಣುತೆಯನ್ನು ಉತ್ತೇಜಿಸುವ ಗುಣ ಕ್ರೀಡೆಗೆ ಇರುತ್ತದೆ. ಆದರೆ ಈ ಬಾರಿ ಏಷ್ಯನ್ ಗೇಮ್ಸ್ ಆಯೋಜಿಸಿರುವ ಚೀನಾ ಮಾತ್ರ ಭಾರತದೊಂದಿಗಿನ ಗಡಿ ತಕರಾರನ್ನು ಕ್ರೀಡೆಗೂ ವಿಸ್ತರಿಸಿ ಖ್ಯಾತೆ ತೆಗೆದ ಪ್ರಸಂಗ ನಡೆದಿದೆ. ಅರುಣಾಚಲ ಪ್ರದೇಶದ ಕ್ರೀಡಾಪಟುಗಳನ್ನು ಭಾರತದ ಉಳಿದ ಕ್ರೀಡಾಪಟುಗಳಿಂದ ಪ್ರತ್ಯೇಕಿಸಿ ಅವರಿಗೆ ಬೇರೆಯದೇ ಬಗೆಯ ವೀಸಾ (ಸ್ಟೇಪಲ್ಡ್ ವೀಸಾ) ನೀಡುತ್ತೇವೆ ಎಂದು ಚೀನಾ ವರಾತ ತೆಗೆಯಿತು. ಅಂತಹ ವೀಸಾವನ್ನು ನಾವು ಒಪ್ಪುವುದಿಲ್ಲ ಎಂದು ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತು. ಭಾರತದ ಕ್ರೀಡಾ ಮಂತ್ರಿ ಅನುರಾಗ್‌ ಠಾಕೂರ್‌ ಅವರು ಏಷ್ಯನ್ ಗೇಮ್ಸ್ ಉದ್ಘಾಟನಾ ಸಮಾರಂಭಕ್ಕೆ ಗೈರುಹಾಜರಾದರು.

ಹಾಗಂತ ಇಂತಹ ನಡವಳಿಕೆ ಚೀನಾದಿಂದ ಅನಪೇಕ್ಷಿತವಾಗಿರಲಿಲ್ಲ. ಈ ಒಂದು ವರ್ಷದಲ್ಲಿ ನಡೆದ ವಿದ್ಯಮಾನಗಳನ್ನೇ ಗಮನಿಸಿ, ಭಾರತ ಜಿ-20 ಸಭೆಗಳನ್ನು ದೇಶದಾದ್ಯಂತ ವಿವಿಧ ನಗರಗಳಲ್ಲಿ ಆಯೋಜಿಸಿತು. ಅಂತೆಯೇ ಕಾಶ್ಮೀರ ಮತ್ತು ಅರುಣಾಚಲ ಪ್ರದೇಶದಲ್ಲಿ ಸಭೆಗಳು ನಡೆದವು. ಇದರಿಂದ ಸಿಟ್ಟಾದ ಚೀನಾ, ಆ ಸಭೆಗಳಿಗೆ ಹಾಜರಾಗಲಿಲ್ಲ.

ನಂತರ ಅರುಣಾಚಲ ಪ್ರದೇಶದ ಕೆಲವು ಗ್ರಾಮ, ನದಿ, ಪರ್ವತಗಳಿಗೆ ಮರುನಾಮಕರಣ ಮಾಡಿ, ತನ್ನ ಹಕ್ಕು ಚಲಾಯಿಸುವ ನಡೆ ಪ್ರದರ್ಶಿಸಿತು. ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ವೇಳೆ ಪ್ರಧಾನಿ ಮೋದಿ ಮತ್ತು ಚೀನಾ ವರಿಷ್ಠ ಷಿ ಜಿನ್‌ಪಿಂಗ್ ಅವರು ಅನೌಪಚಾರಿಕ ಮಾತುಕತೆ ನಡೆಸಿದರು. ಭಾರತದ ಕೋರಿಕೆಯ ಮೇರೆಗೆ ಈ ಮಾತುಕತೆ ನಡೆಯಿತು ಎಂದು ಚೀನಾ ಹೇಳಿಕೊಂಡಿತು. ಅದನ್ನು ತಿರಸ್ಕರಿಸಿದ ಭಾರತದ ವಿದೇಶಾಂಗ ಸಚಿವಾಲಯವು ಮಾತುಕತೆಗೆ ಚೀನಾ ಅಪೇಕ್ಷಿಸಿದ್ದ ಕಾರಣ, ಇಬ್ಬರು ನಾಯಕರ ನಡುವೆ ಮಾತುಕತೆ ನಡೆದಿದೆ ಎಂದು ಸ್ಪಷ್ಟಪಡಿಸಿತು. ಚೀನಾಕ್ಕೆ ಕಸಿವಿಸಿಯಾಯಿತು.

ಆ ಕಸಿವಿಸಿಯು ಚೀನಾ ಪ್ರಕಟಿಸಿದ ಭೂಪಟದಲ್ಲಿ ಎದ್ದುಕಂಡಿತು. ತಾವು ಚೀನಾದ ಮುಖ್ಯಸ್ಥನಾದ ದಿನದಿಂದ ಯಾವುದೇ ಜಿ-20 ಶೃಂಗಸಭೆಗೆ ಬರುವುದನ್ನು ತಪ್ಪಿಸಿಕೊಳ್ಳದ ಷಿ ಜಿನ್‌ಪಿಂಗ್, ದೆಹಲಿಯಲ್ಲಿ ನಡೆದ ಜಿ-20 ರಾಷ್ಟ್ರಗಳ ಶೃಂಗಸಭೆಗೆ ಹಾಜರಾಗಲಿಲ್ಲ!

ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿರುವ ಚೀನಾ, ಮಹತ್ವದ ಜಿ-20 ಶೃಂಗಸಭೆಗೆ ಗೈರುಹಾಜರಾಗಲು ಕಾರಣವೇನು ಎಂಬ ಪ್ರಶ್ನೆ ಎದ್ದಿತು. ಭಾರತ-ಚೀನಾ ನಡುವಿನ ಗಡಿ ಬಿಕ್ಕಟ್ಟು ಕಾರಣವಿರಬಹುದು, ಅಮೆರಿಕದ ಅಧ್ಯಕ್ಷ ಬೈಡೆನ್ ಜೊತೆಗಿನ ಮುಖಾಮುಖಿ ತಪ್ಪಿಸಲು ಷಿ ಜಿನ್‌ಪಿಂಗ್ ಗೈರುಹಾಜರಾಗಿರಬಹುದು, ಷಿ ಅವರ ಅನಾರೋಗ್ಯ, ಉಕ್ರೇನ್ ಯುದ್ಧದ ವಿಷಯ ಅವರನ್ನು ದೆಹಲಿಗೆ ಬಾರದಂತೆ ಮಾಡಿರಬಹುದು ಎಂಬ ಕಾರಣಗಳು ಚರ್ಚೆಗೆ ಒಳಪಟ್ಟವು. ಆದರೆ ಇದೆಲ್ಲಕ್ಕಿಂತ ಮುಖ್ಯವಾದ ಕಾರಣವೊಂದಿತ್ತು. ಅದು ಚೀನಾದ ಆಂತರಿಕ ಬಿಕ್ಕಟ್ಟು.

ಚೀನಾದಂತಹ ನಿರಂಕುಶ ಪ್ರಭುತ್ವವಿರುವ ದೇಶ ತನ್ನ ಒಳಗಿನ ಸುದ್ದಿಯನ್ನು ಸುಲಭಕ್ಕೆ ಬಿಟ್ಟುಕೊಡುವುದಿಲ್ಲ. ಆದರೆ ಆಂತರಿಕ ಬಿಕ್ಕಟ್ಟಿನ ಕಮಟು ಹೆಚ್ಚುದಿನ ಗುಟ್ಟಾಗಿ ಉಳಿಯುವುದಿಲ್ಲ. ಕೊರೊನಾದ ವಿಷಯದಲ್ಲಿ ಮೊದಲಿಗೆ ಚೀನಾ ಜಗತ್ತಿನ ನಂಬಿಕೆಯನ್ನು ಕಳೆದುಕೊಂಡಿತು. ಅದು ಅನುಸರಿಸಿದ ಶೂನ್ಯ ಕೋವಿಡ್ ಧೋರಣೆ ತಿರುಗುಬಾಣವಾಯಿತು. ಕೊರೊನಾದ ಬಳಿಕ ನಿರುದ್ಯೋಗ ಸಮಸ್ಯೆ ತಾರಕಕ್ಕೇರಿತು.
ಇದಾಗುವ ಹೊತ್ತಿಗೆ ಚೀನಾದ ವಿದೇಶಾಂಗ ಸಚಿವ ಕ್ವಿನ್ ಗಾಂಗ್ ಅವರನ್ನು ವಜಾ ಮಾಡಲಾಯಿತು. ವಜಾಕ್ಕೆ ಅವರ ಜೀವನಕ್ರಮ ಕಾರಣ ಎನ್ನಲಾಯಿತು. ಇದೀಗ ಅಮೆರಿಕದ ವಾಲ್‌ಸ್ಟ್ರೀಟ್ ಜರ್ನಲ್ ಪತ್ರಿಕೆ, ಅಮೆರಿಕದ ರಾಯಭಾರಿಯಾಗಿದ್ದ ಅವಧಿಯಲ್ಲಿ ಕ್ವಿನ್ ಗಾಂಗ್ ಅವರು ಅಮೆರಿಕದಲ್ಲಿ ಮಗುವೊಂದಕ್ಕೆ ತಂದೆಯಾಗಿದ್ದರು ಮತ್ತು ಈ ವಿಷಯವನ್ನು ಗೋಪ್ಯವಾಗಿ ಇಡಲಾಗಿತ್ತು ಎಂಬ ಸುದ್ದಿ ಪ್ರಕಟಿಸಿದೆ.
ಇದೀಗ ಚೀನಾದ ರಕ್ಷಣಾ ಸಚಿವ ಲೀ ಶಾಂಗ್ಫು ಅವರ ಕುರಿತು ಪುಕಾರು ಹಬ್ಬಿದೆ. ರಕ್ಷಣಾ ಸಚಿವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಹಲವು ದಿನಗಳೇ ಆಗಿವೆ. ಹಾಗಾಗಿ ಲೀ ಅವರನ್ನು ಆ ಹುದ್ದೆಯಿಂದ ವಜಾ ಮಾಡಲಾಗಿದೆಯೇ, ಗೃಹಬಂಧನದಲ್ಲಿ ಇಡಲಾಗಿದೆಯೇ, ಮತ್ತೇನಾದರೂ ಅವಘಡ ಸಂಭವಿಸಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ.

ಚೀನಾದಂತಹ ದೇಶದಲ್ಲಿ ಪ್ರತಿಭಟನಕಾರರು, ಉದ್ಯಮಿ, ಅಧಿಕಾರಿ ಅಥವಾ ಸಚಿವರ ಅಚಾನಕ್ ಕಣ್ಮರೆ ಮತ್ತು ಗೃಹಬಂಧನ ಅಪರೂಪವೇನಲ್ಲ. ಉದ್ಯಮಿ ಜಾಕ್ ಮಾ ಒಂದಿಷ್ಟು ದಿನ ಕಣ್ಮರೆಯಾಗಿದ್ದರು. ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡರೂ ಮೌನಕ್ಕೆ ಜಾರಿದ ಪ್ರಸಂಗ ಚೀನಾದಲ್ಲಿ ನಡೆದಿದೆ.

ಆದರೆ ಈಗಿನ ವಿದ್ಯಮಾನಗಳು ಬೇರೆಯದೇ ಕತೆ ಹೇಳುತ್ತಿವೆ. ಮುಖ್ಯವಾಗಿ ಭ್ರಷ್ಟಾಚಾರವು ಚೀನಾದ ಬಹುದೊಡ್ಡ ಸಮಸ್ಯೆಯಾಗಿದೆ. ಅದರ ವ್ಯಾಪ್ತಿ ಎಷ್ಟು ದೊಡ್ಡದು ಎಂದು ಹೇಳುವುದು ಕಷ್ಟ. ತಿಂಗಳ ಹಿಂದೆ ಚೀನಾದ ರಾಕೆಟ್ ಪೋರ್ಸ್‌ನ ಹಿರಿಯ ಸೇನಾಧಿಕಾರಿಗಳನ್ನು ಷಿ ಜಿನ್‌ಪಿಂಗ್ ವಜಾ ಮಾಡಿದ್ದರು. 2022ರ ಅಕ್ಟೋಬರ್‌ನಲ್ಲಿ ನಡೆದ ಚೀನಾದ ಕಮ್ಯುನಿಷ್ಟ್ ಪಕ್ಷದ ರಾಷ್ಟ್ರೀಯ ಅಧಿವೇಶನದ ಬಳಿಕ ಸೇನೆಯ 39 ಹಿರಿಯ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಚೀನಾದ ಆಂತರಿಕ ಕಾವಲುಗಾರ ಸಂಸ್ಥೆ ಸಿಸಿಡಿಐ ತನ್ನ ವರದಿಯಲ್ಲಿ ಹೇಳಿರುವುದನ್ನು ಅಮೆರಿಕದ ಪತ್ರಿಕೆಗಳು ವರದಿ ಮಾಡಿವೆ.

ಷಿ ಜಿನ್‌ಪಿಂಗ್ ಅವರಿಂದ ನೇರವಾಗಿ ನೇಮಕಾತಿಯಾದವರ ಹೆಸರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಕೇಳಿಬರುತ್ತಿರುವುದರಿಂದ, ಜಿನ್‌ಪಿಂಗ್ ಅವರ ಜನಪ್ರಿಯತೆ ಕುಗ್ಗುತ್ತಿದೆ ಮತ್ತು ಆಡಳಿತದ ಮೇಲಿನ ಅವರ ಹಿಡಿತ ಸಡಿಲಾಗುತ್ತಿದೆ ಎಂಬ ಸುದ್ದಿಯೂ ಇದೆ.

ಮತ್ತೊಂದೆಡೆ, ಚೀನಾದ ರಿಯಲ್ ಎಸ್ಟೇಟ್ ವಲಯ ಪಾತಾಳ ಕಂಡಿದೆ. ಅರ್ಥವ್ಯವಸ್ಥೆ ಚೇತರಿಸಿಕೊಳ್ಳಲು ತಿಣುಕಾಡುತ್ತಿದೆ. ಚೀನಾದ ಜನ ಹಣವನ್ನು ಕೂಡಿಡುವತ್ತ ಗಮನ ಹರಿಸುತ್ತಿದ್ದಾರೆ ಮತ್ತು ಉಳಿತಾಯ ಖಾತೆಗಳಿಗೆ ಜಮಾ ಆಗುತ್ತಿರುವ ಹಣದ ಪ್ರಮಾಣ ಹೆಚ್ಚಿದೆ. ಆಡಳಿತದ ಮೇಲೆ ಜನ ನಂಬಿಕೆ ಕಳೆದುಕೊಂಡಾಗ ಇಂತಹ ವರ್ತನೆಯನ್ನು ಸಮಾಜ ತೋರುತ್ತದೆ ಎಂಬ ವ್ಯಾಖ್ಯಾನ ಕೇಳಿಬರುತ್ತಿದೆ.

ಆಂತರಿಕ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟು ಉಲ್ಬಣಿಸಿರುವುದರಿಂದಲೇ ಷಿ ಜಿನ್‌ಪಿಂಗ್ ಕೆಲ ದಿನಗಳ ಮಟ್ಟಿಗೂ ದೇಶ ತೊರೆಯುವ ಸಾಹಸ ಮಾಡುತ್ತಿಲ್ಲ ಎಂಬ ಸುದ್ದಿ ದಟ್ಟವಾಗಿದೆ. ಒಳಗಿನ ವಿಪ್ಲವ ಮರೆಮಾಚಲು, ಚೀನಾದ ಜನರ ಮತ್ತು ಜಗತ್ತಿನ ಗಮನ ಬೇರೆಡೆ ಸೆಳೆಯಲು, ಭಾರತದೊಂದಿಗೆ ಗಡಿಯಲ್ಲಿ ಚಕಮಕಿಗೆ ಚೀನಾ ಇಳಿದರೆ ಅಥವಾ ತೈವಾನ್ ಮೇಲೆರಗುವ ಸಾಹಸ ಮಾಡಿದರೆ ಅಚ್ಚರಿಯಿಲ್ಲ.
ಮುಖ್ಯವಾಗಿ ಕ್ರೀಡಾಪಟುಗಳ ವೀಸಾಕ್ಕೆ ಸಂಬಂಧಿಸಿದಂತೆ ಚೀನಾ ತಳೆದಿರುವ ಧೋರಣೆ ಗಂಭೀರವಾದದ್ದು. 2008 ಮತ್ತು 2009ರಲ್ಲೂ ಅರುಣಾಚಲ ಪ್ರದೇಶ, ಜಮ್ಮು ಕಾಶ್ಮೀರ ಮತ್ತು ಲಡಾಕ್ ನಾಗರಿಕರಿಗೆ ‘ಸ್ಟೇಪಲ್ಡ್ ವೀಸಾ’ ನೀಡುವ ಕೆಲಸವನ್ನು ಚೀನಾ ಮಾಡಿತ್ತು. ಆಗಲೂ ಚೀನಾದ ಧೋರಣೆಯನ್ನು ಭಾರತ ವಿರೋಧಿಸಿತ್ತು. ಆದರೆ ಚೀನಾದ ಉದ್ಧಟತನಕ್ಕೆ, ಅಷ್ಟು ಸಾಲದೆನಿಸುತ್ತದೆ. ಟಿಬೆಟ್, ತೈವಾನ್ ಮತ್ತು ಒಂದು ಚೀನಾ ನೀತಿಗೆ ಸಂಬಂಧಿಸಿದ ತನ್ನ ಸ್ಥಾಪಿತ ನಿಲುವಿನ ಕುರಿತು ಮರುಯೋಚಿಸಲು ಭಾರತ ಅಳುಕಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT