ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೀಮೋಲ್ಲಂಘನ ಅಂಕಣ | ಜಿ-20: ಅಧ್ಯಕ್ಷ ಗಾದಿಯಲ್ಲಿ ಗೆದ್ದ ‘ಭಾರತ’

ಜಗತ್ತಿನೆದುರು ಭಾರತೀಯರ ಪರಿಣತಿಯ ಅನಾವರಣಕ್ಕೆ ದೊರೆತ ಅವಕಾಶ...
Published 7 ಸೆಪ್ಟೆಂಬರ್ 2023, 22:23 IST
Last Updated 7 ಸೆಪ್ಟೆಂಬರ್ 2023, 22:23 IST
ಅಕ್ಷರ ಗಾತ್ರ

‘ವಸುಧೈವ ಕುಟುಂಬಕಂ’ ಎಂಬ ವಿಶಾಲ ಧ್ಯೇಯದ ಅಡಿಯಲ್ಲಿ ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ಘೋಷವಾಕ್ಯದೊಂದಿಗೆ ಜಿ-20 ರಾಷ್ಟ್ರಗಳ ಅಧ್ಯಕ್ಷ ಸ್ಥಾನವನ್ನು ಭಾರತ ಅಲಂಕರಿಸಿದಾಗ, ಜಗತ್ತು ಕೊರೊನಾದ ಹೊಡೆತದಿಂದ ಆಗಷ್ಟೇ ಚೇತರಿಸಿಕೊಳ್ಳುತ್ತಿತ್ತು. ಗಾಯದ ಮೇಲೆ ಬರೆ ಎಳೆದಂತೆ ಉಕ್ರೇನ್ ಯುದ್ಧ ಜಾಗತಿಕ ಅರ್ಥವ್ಯವಸ್ಥೆಯನ್ನು ಬಾಧಿಸಿತ್ತು. ಭಾರತ ತುಂಬು ಆತ್ಮವಿಶ್ವಾಸದಿಂದಲೇ ಹೆಜ್ಜೆಗಳನ್ನು ಇರಿಸಿತು.

ಹಾಗಾದರೆ ಜಿ-20 ರಾಷ್ಟ್ರಗಳ ಅಧ್ಯಕ್ಷ ಸ್ಥಾನದಲ್ಲಿ ಕೂತು ಭಾರತ ಸಾಧಿಸಿದ್ದೇನು? ಜಿ-20 ಪ್ರಧಾನ ಕಚೇರಿಯನ್ನು ಅಥವಾ ಶಾಶ್ವತ ಸಿಬ್ಬಂದಿಯನ್ನು ಹೊಂದಿರುವ ಸಂಸ್ಥೆಯಲ್ಲ. ಪ್ರತಿವರ್ಷ ಸದಸ್ಯ ರಾಷ್ಟ್ರಗಳ ಪೈಕಿ ಒಂದು ರಾಷ್ಟ್ರವು ನಾಯಕತ್ವ ವಹಿಸಿಕೊಳ್ಳುತ್ತದೆ ಮತ್ತು ವರ್ಷದಾದ್ಯಂತ ಚರ್ಚೆಗಳಿಗೆ ವೇದಿಕೆ ಒದಗಿಸುತ್ತದೆ. ವಿವಿಧ ಹಂತಗಳಲ್ಲಿ ಸಭೆಗಳು ನಡೆದು ಕೊನೆಗೆ ವಾರ್ಷಿಕ ಶೃಂಗಸಭೆಯಲ್ಲಿ ನಿರ್ಣಯಗಳನ್ನು ಒಮ್ಮತದಿಂದ ಅಂಗೀಕರಿಸಲಾಗುತ್ತದೆ.

ಜಗತ್ತಿನ ಒಟ್ಟಾರೆ ಜಿಡಿಪಿಯ ಶೇಕಡ 85ರಷ್ಟನ್ನು ತಮ್ಮದಾಗಿಸಿಕೊಂಡಿರುವ, ಜಾಗತಿಕ ವಾಣಿಜ್ಯ ವಹಿವಾಟಿನ ಶೇಕಡ 75ರಷ್ಟನ್ನು ನಿರ್ವಹಿಸುವ ಜಿ-20 ರಾಷ್ಟ್ರಗಳು, ಆ ಕಾರಣದಿಂದಲೇ ಮಹತ್ವ ಪಡೆದುಕೊಂಡಿವೆ. ಹಾಗಾಗಿ, ಜಗತ್ತಿನ ಯಾವುದೇ ಮೂಲೆಯಲ್ಲಿ ಏಳುವ ಆರ್ಥಿಕ ತಲ್ಲಣದ ಅಲೆಯನ್ನು ಸಂಬಾಳಿಸುವ ಜವಾಬ್ದಾರಿ ಕೂಡ ಈ ರಾಷ್ಟ್ರಗಳದ್ದೇ. 1999ರಲ್ಲಿ ಏಷ್ಯಾದ ಕೆಲವು ರಾಷ್ಟ್ರಗಳು ಆರ್ಥಿಕ ಹಿಂಜರಿಕೆಯನ್ನು ಅನುಭವಿಸಿದಾಗ, ವಿಶ್ವದ ಹತ್ತೊಂಬತ್ತು ರಾಷ್ಟ್ರಗಳ ಜೊತೆಗೆ ಐರೋಪ್ಯ ಒಕ್ಕೂಟ ಜೊತೆಯಾಗಿ ಜಿ-20 ಅಸ್ತಿತ್ವಕ್ಕೆ ಬಂತು.

ಈ ಒಕ್ಕೂಟದ ಮುಖ್ಯ ಉದ್ದೇಶ, ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಆರ್ಥಿಕ ತಲ್ಲಣಗಳ ಮುನ್ನೋಟ ಅರಿಯಲು, ಬದಲಿ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲು, ಆರ್ಥಿಕ ಸಮತೋಲನ ಸಾಧಿಸಲು ಸದಸ್ಯ ರಾಷ್ಟ್ರಗಳ ಹಣಕಾಸು ಸಚಿವರು, ಕೇಂದ್ರ ಹಣಕಾಸು ಸಂಸ್ಥೆಗಳ ಮುಖ್ಯಸ್ಥರು ಒಂದೆಡೆ ಸೇರಿ ಚರ್ಚಿಸಲು ಅನುವಾಗುವ ವೇದಿಕೆ ಸೃಷ್ಟಿಸುವುದಾಗಿತ್ತು. ನಂತರ 2008- 09ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಉಂಟಾದಾಗ ಜಿ-20 ರಾಷ್ಟ್ರಗಳ ಮುಖ್ಯಸ್ಥರು ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳುವ ಪರಿಪಾಟ ಬೆಳೆಯಿತು. ಮುಖ್ಯವಾಗಿ ಆರ್ಥಿಕತೆ ಹಾಗೂ ಹಣಕಾಸು ವಿಷಯಗಳ ಕುರಿತು ಚರ್ಚಿಸುವುದು ಜಿ-20 ರಾಷ್ಟ್ರಗಳ ಮೂಲ ಆಶಯವಾದರೂ, ಜಾಗತಿಕ ರಾಜಕೀಯ ಅಥವಾ ಭದ್ರತಾ ವಿಷಯಗಳಿಗೆ ಸಂಬಂಧಿಸಿದ ಚರ್ಚೆಗಳಿಗೂ ಈ ಹಿಂದೆ ಜಿ-20 ವೇದಿಕೆಯಾಗಿತ್ತು. ಹಾಗಾಗಿ, ಉಕ್ರೇನ್ ಯುದ್ಧದ ಕುರಿತು ತಟಸ್ಥ ನಿಲುವನ್ನು ತಳೆದ, ರಷ್ಯಾದೊಂದಿಗೆ ವಾಣಿಜ್ಯಿಕ ಸಂಬಂಧವನ್ನು ಕಾಯ್ದುಕೊಂಡ ಭಾರತ, ಜಿ-20ರ ಅಧ್ಯಕ್ಷ ಸ್ಥಾನದಲ್ಲಿ ಕೂತು ಅಮೆರಿಕ, ಐರೋಪ್ಯ ಒಕ್ಕೂಟ, ಚೀನಾ ಮತ್ತು ರಷ್ಯಾವನ್ನು ಹೇಗೆ ಸರಿದೂಗಿಸಬಹುದು ಎಂಬ ಪ್ರಶ್ನೆಯೂ ಇತ್ತು.

ಆದರೆ ಭಾರತ ಜಿ-20 ಅಧ್ಯಕ್ಷ ಸ್ಥಾನದ ಬಾಧ್ಯತೆ ಮತ್ತು ತನ್ನ ಹಿತಾಸಕ್ತಿಗಳನ್ನು ಗಮನದಲ್ಲಿ ಇರಿಸಿಕೊಂಡು ವಿವಿಧ ಹಂತಗಳ ಚರ್ಚೆಯನ್ನು ಪ್ರಭಾವಿಸಿತು. ‘ಒಂದು ಭೂಮಿ’ ಧ್ಯೇಯದ ಅಡಿಯಲ್ಲಿ ಹವಾಮಾನ ಬದಲಾವಣೆ, ಹಸಿರು ಉಪಕ್ರಮಗಳನ್ನು ಚರ್ಚೆಗೆ ಎತ್ತಿಕೊಂಡಿತು. ‘ಒಂದು ಕುಟುಂಬ’ ಧ್ಯೇಯದಡಿಯಲ್ಲಿ ಒಳಗೊಳ್ಳುವಿಕೆ ಮತ್ತು ಸಮಗ್ರ ಅಭಿವೃದ್ಧಿ ಕುರಿತು ಚರ್ಚಿಸಲಾಯಿತು. ‘ಒಂದು ಭವಿಷ್ಯ’ದ ಕಲ್ಪನೆಯಡಿ ದಕ್ಷಿಣ ಜಗತ್ತಿನ ಕಳವಳ ಮತ್ತು ಸವಾಲುಗಳಿಗೆ ಧ್ವನಿಯಾಗುವ ಪ್ರಯತ್ನವನ್ನು ಭಾರತ ಮಾಡಿತು.

ಮುಖ್ಯವಾಗಿ ಪರಿಸರ ನಾಶ ಮತ್ತು ಹವಾಮಾನ ಬದಲಾವಣೆಯನ್ನು ಅಂಕೆಯಲ್ಲಿಡುವ ಸೂತ್ರವಾಗಿ ಭಾರತದ ಪಾರಂಪರಿಕ ಜೀವನಪದ್ಧತಿಯ ಆಧಾರದಲ್ಲಿ ಪರಿಸರಸ್ನೇಹಿ ಅಭ್ಯಾಸಗಳನ್ನು ಪ್ರೋತ್ಸಾಹಿಸುವ LiFE (Lifestyle for Environment) ಆಂದೋಲನದ ಅಗತ್ಯವನ್ನು ಭಾರತ ಜಗತ್ತಿಗೆ ವಿವರಿಸಿತು. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿಯ ಅನಿವಾರ್ಯವನ್ನು ವಿವರಿಸುವಾಗ, ಆಧಾರ್, ಯುಪಿಐ, ಕೋವಿನ್, ಡಿಜಿಲಾಕರ್ ಯಶಸ್ಸಿನ ಉದಾಹರಣೆಗಳನ್ನು ಹಂಚಿಕೊಂಡಿತು. ಸೋರಿಕೆ ತಡೆಯಲು ಸಬ್ಸಿಡಿಯನ್ನು ಜನರ ಖಾತೆಗೆ ನೇರವಾಗಿ ಜಮಾ ಮಾಡುವ ವ್ಯವಸ್ಥೆಯನ್ನು ಭಾರತ ಹೇಗೆ ನಿರ್ವಹಿಸುತ್ತಿದೆ ಎನ್ನುವುದನ್ನು ವಿವರಿಸಿತು.

ಜಗತ್ತಿನಲ್ಲಿ ನಡೆಯುವ ಡಿಜಿಟಲ್ ಪಾವತಿಗಳಲ್ಲಿ ಶೇಕಡ 46ರಷ್ಟು ಭಾರತ ಒಂದರಲ್ಲೇ ನಡೆಯುತ್ತವೆ. ಬೀದಿಬದಿಯ ವ್ಯಾಪಾರಿಯಿಂದ ಹಿಡಿದು ಐಷಾರಾಮಿ ಮಾಲ್‌ವರೆಗೆ ಎಲ್ಲೆಡೆಯೂ ಮತ್ತು ಎಲ್ಲ ವರ್ಗದ ವ್ಯಾಪಾರಸ್ಥರೂ ಡಿಜಿಟಲ್ ಪಾವತಿ ವ್ಯವಸ್ಥೆಗೆ ಹೇಗೆ ತೆರೆದುಕೊಂಡಿದ್ದಾರೆ ಎನ್ನುವುದನ್ನು ಆತ್ಮವಿಶ್ವಾಸದಿಂದ ಪ್ರಚುರಪಡಿಸಿತು. ಸೈಬರ್ ಸುರಕ್ಷತೆ ಮತ್ತು ಮಾಹಿತಿ ಗೋಪ್ಯತೆಯ ಭಯದಿಂದಾಗಿ ಹಲವು ರಾಷ್ಟ್ರಗಳು ಇನ್ನೂ ಪೂರ್ಣಮಟ್ಟದಲ್ಲಿ ಡಿಜಿಟಲ್ ಜಗತ್ತಿಗೆ ತೆರೆದುಕೊಂಡಿಲ್ಲ. ಒಂದೊಮ್ಮೆ ಈ ರಾಷ್ಟ್ರಗಳು ಭಾರತದ ಪರಿಣತಿಯನ್ನು ಬಳಸಿಕೊಳ್ಳಲು ಮುಂದಾದರೆ, ಈ ಕ್ಷೇತ್ರ ಇನ್ನಷ್ಟು ಬೆಳವಣಿಗೆ ಕಾಣಬಹುದು, ಉದ್ಯೋಗ ಸೃಷ್ಟಿಯಾಗಬಹುದು.

ಮುಖ್ಯವಾಗಿ, ತನಗೆ ದೊರೆತ ಜಿ-20ರ ಅಧ್ಯಕ್ಷ ಸ್ಥಾನವನ್ನು, ವೈವಿಧ್ಯ ಮತ್ತು ವಿವಿಧ ಕ್ಷೇತ್ರಗಳಲ್ಲಿ ಭಾರತೀಯರು ಗಳಿಸಿರುವ ಪರಿಣತಿ ಹಾಗೂ ಸಾಮರ್ಥ್ಯವನ್ನು ಜಗತ್ತಿನೆದುರು ಅನಾವರಣಗೊಳಿಸಲು ದೊರೆತ ಅವಕಾಶ ಎಂದು ಭಾರತ ನೋಡಿತು. ಜಿ-20 ಸಭೆ ಆಯೋಜನೆಯಾದಲ್ಲೆಲ್ಲಾ, ಸ್ಥಳೀಯ ಕರಕುಶಲ ವಸ್ತುಗಳು, ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮತ್ತು ಸಿರಿಧಾನ್ಯಗಳಿಂದ ತಯಾರಿಸಲಾದ ರುಚಿಕರವಾದ ದೇಶಿ ಮತ್ತು ವಿದೇಶಿ ಖಾದ್ಯಗಳ ವ್ಯವಸ್ಥೆ ಮಾಡಲಾಗಿತ್ತು.

ಜಾಗತಿಕ ಪ್ರವಾಸೋದ್ಯಮದಲ್ಲಿ ಭಾರತದ ಪಾಲು ನಗಣ್ಯ ಎನ್ನುವಷ್ಟಿದೆ. ಹಾಗಾಗಿ ಬಂಡವಾಳ ಆಕರ್ಷಣೆ ಮತ್ತು ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದಲೂ ಭಾರತ ತನಗೆ ದೊರೆತ ಅವಕಾಶವನ್ನು ಬಳಸಿಕೊಂಡಿತು. ರಾಜತಾಂತ್ರಿಕ ಜಾಣ್ಮೆ ಮೆರೆದು ಕಾಶ್ಮೀರ ಮತ್ತು ಅರುಣಾಚಲ ಪ್ರದೇಶದಲ್ಲಿ ಜಿ-20 ಸಭೆಗಳನ್ನು ಯಶಸ್ವಿಯಾಗಿ ನಡೆಸಿ, ಅವು ವಿವಾದಿತ ಪ್ರದೇಶಗಳು ಎಂಬ ಚೀನಾ ಮತ್ತು ಪಾಕಿಸ್ತಾನದ ಆಕ್ಷೇಪಗಳಿಗೆ ಮಾನ್ಯತೆ ಸಿಗದಂತೆ ಮಾಡಿತು.

ಹತ್ತು ವರ್ಷಗಳ ಹಿಂದೆ ಭಾರತವು ಜಗತ್ತಿನ ಹತ್ತನೇ ದೊಡ್ಡ ಆರ್ಥಿಕತೆಯಾಗಿತ್ತು. ಇದೀಗ ಐದನೇ ಸ್ಥಾನದಲ್ಲಿದೆ ಮತ್ತು ಮೂರನೇ ಸ್ಥಾನಕ್ಕೆ ದಾಪುಗಾಲಿಡಲು ಉತ್ಸುಕವಾಗಿದೆ. ಕಡಿಮೆ ವೆಚ್ಚದಲ್ಲಿ ವೈಜ್ಞಾನಿಕ ಆವಿಷ್ಕಾರಗಳನ್ನು ಸಾಧ್ಯವಾಗಿಸಬಲ್ಲ, ವಿವಿಧ ಕ್ಷೇತ್ರಗಳಲ್ಲಿ ಮುಂದುವರಿದ ರಾಷ್ಟ್ರಗಳಿಗೆ ಪೈಪೋಟಿ ಒಡ್ಡಬಲ್ಲ ದೇಶವಾಗಿ ಭಾರತ ಇಂದು ಜಗತ್ತಿಗೆ ಪರಿಚಯವಾಗಿದೆ. ಕೊರೊನಾ ಲಸಿಕೆ ಮತ್ತು ಚಂದ್ರಯಾನ-3ರ ಯಶಸ್ಸು ಆ ದಿಸೆಯಲ್ಲಿ ಪ್ರಮುಖ ಉದಾಹರಣೆಗಳು.

ಹಾಗಂತ ಭಾರತ ತೆಗೆದುಕೊಂಡ ನಿಲುವುಗಳಿಗೆ ವಿರೋಧ ಇರಲಿಲ್ಲ ಎಂದಲ್ಲ. ‘ವಸುಧೈವ ಕುಟುಂಬಕಂ’ ಎಂಬ ಸಂಸ್ಕೃತದ ಘೋಷವಾಕ್ಯಕ್ಕೆ ಚೀನಾದ ವಿರೋಧವಿತ್ತು. ಸಿರಿಧಾನ್ಯಗಳನ್ನು ಪ್ರಚುರಪಡಿಸಲು ಭಾರತ ಹೊರಟಾಗ ಚೀನಾ ಅಡ್ಡಮಾತನಾಡಿತು. ಸಾಲದ ಸುಳಿಯಲ್ಲಿ ಸಿಲುಕಿಸಿ ಹಿತಾಸಕ್ತಿ ಸಾಧಿಸುವ ಶಕ್ತಿಗಳ ವಿರುದ್ಧ ಇತರ ದೇಶಗಳನ್ನು ಭಾರತ ಎಚ್ಚರಿಸಿದಾಗ, ಪೂರೈಕೆ ಜಾಲ ವಿಕೇಂದ್ರೀಕರಣಗೊಳ್ಳಬೇಕು ಎಂದು ಪ್ರತಿಪಾದಿಸಿದಾಗ ಚೀನಾ ತುಟಿಕಚ್ಚಿತು. ಚೀನಾದ ಮುಖ್ಯಸ್ಥ ಷಿ ಜಿನ್‌ಪಿಂಗ್, ಜಿ-20 ಸಭೆಗೆ ಬಾರದೇ ಇರುವುದಕ್ಕೆ ಕಾರಣವನ್ನು ಬಿಡಿಸಿ ಹೇಳಬೇಕಿಲ್ಲ.

ಅದೆಲ್ಲಾ ಬಿಡಿ, ಪ್ರಜಾಪ್ರಭುತ್ವದ ಉಗಮವನ್ನು ಪಶ್ಚಿಮ ಜಗತ್ತು ಗ್ರೀಸ್‌ನಲ್ಲಿ ಗುರುತಿಸುತ್ತದೆ. ಗ್ರೀಸ್ ದೇಶವನ್ನು ‘ಪ್ರಜಾಪ್ರಭುತ್ವದ ತೊಟ್ಟಿಲು’ ಎಂದೇ ನಾವು ಪಠ್ಯ ಓದಿ ಪರೀಕ್ಷೆಗಳನ್ನು ಬರೆದಿದ್ದೇವೆ. ಆದರೆ ಪ್ರಜಾಪ್ರಭುತ್ವದ ಬೇರುಗಳು ಭಾರತದಲ್ಲಿ ಬಹಳ ಹಿಂದೆಯೇ ಇದ್ದವು. ಬಸವಣ್ಣನ ಅನುಭವ ಮಂಟಪ ಅಂತಹದ್ದೊಂದು ವ್ಯವಸ್ಥೆಯ ದ್ಯೋತಕವಾಗಿತ್ತು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಹಲವು ಜಾಗತಿಕ ವೇದಿಕೆಗಳಲ್ಲಿ ಪ್ರಸ್ತಾಪಿಸಿದ್ದಾರೆ. ಜಿ-20 ಶೃಂಗಸಭೆಯಲ್ಲಿ ‘ಭಾರತ– ಪ್ರಜಾಪ್ರಭುತ್ವದ ಮಾತೆ’ ಎಂಬ ವಿಶೇಷ ಪ್ರದರ್ಶಿಕೆಯೊಂದು ಇರಲಿದೆ. ಜಿ-20ರ ಅಧ್ಯಕ್ಷತೆಯ ಈ ಅವಧಿ, ಭಾರತದ ಅಂತಃಸತ್ವವನ್ನು ಜಗತ್ತಿನೆದುರು ಅನಾವರಣಗೊಳಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT