ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಧೀಂದ್ರ ಬುಧ್ಯ ಲೇಖನ | ರಷ್ಯಾ – ಉಕ್ರೇನ್ಃ ಒಮ್ಮತ ಸಾಧ್ಯವೇ?

ಈ ಎರಡೂ ದೇಶಗಳ ವಿಷಯದಲ್ಲಿ ಗೆಲುವಿನ ಸೂತ್ರ ಇನ್ನೂ ಅಗೋಚರವಾಗಿಯೇ ಇದೆ
Published : 7 ಆಗಸ್ಟ್ 2023, 23:40 IST
Last Updated : 7 ಆಗಸ್ಟ್ 2023, 23:40 IST
ಫಾಲೋ ಮಾಡಿ
Comments

ಇದೀಗ ಉಕ್ರೇನ್ ರಾಜತಾಂತ್ರಿಕವಾಗಿ ಮತ್ತೊಂದು ದಿಕ್ಕಿನಲ್ಲಿ ಹೆಜ್ಜೆ ಇರಿಸಿದೆ. ರಷ್ಯಾ ಜೊತೆಗಿನ ಯುದ್ಧದ ವಿಷಯದಲ್ಲಿ ಬರೀ ಪಶ್ಚಿಮ ರಾಷ್ಟ್ರಗಳ ಬೆಂಬಲವನ್ನಷ್ಟೇ ಗಳಿಸಿಕೊಂಡರೆ ಸಾಲದು, ಪಶ್ಚಿಮ ರಾಷ್ಟ್ರಗಳು ಶಸ್ತ್ರಾಸ್ತ್ರಗಳನ್ನು ಪೂರೈಸಬಹುದು, ಆರ್ಥಿಕ ಸಹಾಯ ಒದಗಿಸಬಹುದು, ಆದರೆ ರಷ್ಯಾದ ಮೇಲೆ ಒತ್ತಡ ಹೇರಬೇಕಾದರೆ, ಮಾತುಕತೆಯ ವೇದಿಕೆಗೆ ರಷ್ಯಾವನ್ನು ಎಳೆದು ತರಬೇಕಾದರೆ ಬೇರೆಯದೇ ಹಾದಿಯನ್ನು ಕ್ರಮಿಸಬೇಕು ಎಂಬುದನ್ನು ಉಕ್ರೇನ್ ಅರಿತುಕೊಂಡಂತೆ ಕಾಣುತ್ತಿದೆ.

ಹಾಗಾಗಿಯೇ, ಯುದ್ಧದ ವಿಷಯದಲ್ಲಿ ತಟಸ್ಥ ನೀತಿ ಅನುಸರಿಸುತ್ತಿರುವ ದಕ್ಷಿಣ ಜಗತ್ತಿನ ರಾಷ್ಟ್ರಗಳನ್ನು ತಲುಪಲು ಉಕ್ರೇನ್ ಯೋಜನೆ ರೂಪಿಸಿದೆ. ಮುಖ್ಯವಾಗಿ ಭಾರತ, ಚೀನಾ, ಬ್ರೆಜಿಲ್ ಮತ್ತು ಆಫ್ರಿಕಾದ ರಾಷ್ಟ್ರಗಳಿಗೆ ತನ್ನ ಪರಿಸ್ಥಿತಿಯನ್ನು ವಿವರಿಸಿ, ಸಹಾನುಭೂತಿ ಗಳಿಸುವ ದಿಸೆಯಲ್ಲಿ ಉಕ್ರೇನ್ ಕಾರ್ಯೋನ್ಮುಖವಾಗಿದೆ.

ಈ ಯೋಜನೆಯ ಭಾಗವಾಗಿಯೇ ಸೌದಿ ಅರೇಬಿಯಾದಲ್ಲಿ ಆಗಸ್ಟ್ 5 ಮತ್ತು 6ರಂದು ಉಕ್ರೇನ್ ಮುಂದಿರಿಸಿರುವ ಶಾಂತಿ ಪ್ರಸ್ತಾವದ ಕುರಿತು ಚರ್ಚಿಸಲು ಬಹುರಾಷ್ಟ್ರೀಯ ಸಭೆಯೊಂದನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಅಮೆರಿಕ, ಐರೋಪ್ಯ ರಾಷ್ಟ್ರಗಳು, ಚೀನಾ, ಬ್ರೆಜಿಲ್, ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಭದ್ರತಾ ಸಲಹೆಗಾರರು ಭಾಗವಹಿಸಿದ್ದರು. ಭಾರತದ ಪರವಾಗಿ ಅಜಿತ್ ಧೋವಲ್ ಈ ಸಭೆಯಲ್ಲಿ ಪಾಲ್ಗೊಂಡರು. ರಷ್ಯಾವನ್ನು ಈ ಸಭೆಗೆ ಆಹ್ವಾನಿಸಿರಲಿಲ್ಲ!

ಹಾಗೆ ನೋಡಿದರೆ, ಉಕ್ರೇನ್ ಯುದ್ಧ ಆರಂಭವಾದ ಬಳಿಕ ಹಲವು ಹಂತಗಳಲ್ಲಿ ಶಾಂತಿ ಮಾತುಕತೆಗಳು ನಡೆದಿವೆ. ಮೊದಲಿಗೆ, ಯುದ್ಧ ಸಂತ್ರಸ್ತ ಜನರಿಗೆ ಸ್ಥಳಾಂತರಗೊಳ್ಳಲು ಅವಕಾಶ ಕಲ್ಪಿಸುವ ಸುರಕ್ಷಿತ ಮಾರ್ಗಗಳನ್ನು ಗುರುತಿಸಲು ಮಾತುಕತೆಗಳು ನಡೆದವು. ನಂತರ ಯುದ್ಧಕ್ಕೆ ಅಂತ್ಯ ಹಾಡುವ ಕುರಿತು ಗಂಭೀರ ಮಾತುಕತೆ ಟರ್ಕಿಯ ಮಧ್ಯಸ್ಥಿಕೆಯಲ್ಲಿ ನಡೆಯಿತು. ಆದರೆ ಒಮ್ಮತ ಸಾಧ್ಯವಾಗದೇ ಮಾತುಕತೆ ಮುರಿದುಬಿತ್ತು.

ನಂತರ ರಷ್ಯಾವು ಜನವಸತಿಗಳ ಮೇಲೆ ದಾಳಿ ನಡೆಸುತ್ತಿದೆ ಎಂಬ ಕಾರಣದಿಂದ ಉಕ್ರೇನ್ ಕೆಲಕಾಲ ಮಾತುಕತೆಗಳಿಂದ ದೂರ ಉಳಿಯಿತು. ಟರ್ಕಿಯ ಎರ್ಡೋಗನ್ ಉಭಯ ರಾಷ್ಟ್ರಗಳನ್ನು ಮಾತುಕತೆಯ ಮೇಜಿಗೆ ತರುವ ಪ್ರಯತ್ನ ಮುಂದುವರಿಸಿದರು. ಆದರೆ ಉಕ್ರೇನ್ ರಷ್ಯಾದ ನಿಲುವನ್ನು ಅನುಮಾನಿಸಿತು. ಆಕ್ರಮಣಕಾರಿ ಮನಃಸ್ಥಿತಿಯ ರಷ್ಯಾ, ತನಗೆ ಆದ ಹಿನ್ನಡೆಯನ್ನು ಸರಿಪಡಿಸಿಕೊಳ್ಳಲು, ಸೇನೆಯನ್ನು ಸಂಘಟಿಸಿಕೊಂಡು ಹೆಚ್ಚಿನ ಸಾಮರ್ಥ್ಯದಿಂದ ದಾಳಿ ಮಾಡಲು ಸಮಯಾವಕಾಶಕ್ಕಾಗಿ ಶಾಂತಿ ಮಾತುಕತೆಯ ನೆಪ ಹುಡುಕುತ್ತಿದೆ ಎಂಬುದು ಉಕ್ರೇನ್ ಅನುಮಾನವಾಗಿತ್ತು. ಮಾತುಕತೆಗೆ ವಿರಾಮ ಬಿತ್ತು.

ನಂತರ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ವಿವಿಧ ಜಾಗತಿಕ ವೇದಿಕೆಗಳಲ್ಲಿ ಮಾತನಾಡಿ, 10 ಅಂಶಗಳ ಶಾಂತಿ ಪ್ರಸ್ತಾವವನ್ನು ಮುಂದಿಟ್ಟರು. ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರ ಉಕ್ರೇನಿನಲ್ಲಿದೆ, ಹಾಗಾಗಿ ವಿಕಿರಣ ಮತ್ತು ಪರಮಾಣು ಸುರಕ್ಷತೆ ಮೊದಲ ಆದ್ಯತೆ. ಉಕ್ರೇನಿನ ದವಸ ಧಾನ್ಯಗಳು ಜಗತ್ತಿನ ಇತರ ರಾಷ್ಟ್ರಗಳಿಗೆ ರಫ್ತಾಗುವುದು ಮುಂದುವರಿಯಬೇಕು. ಯುದ್ಧಕೈದಿಗಳನ್ನು ಬಿಡುಗಡೆಗೊಳಿಸಬೇಕು. ಉಕ್ರೇನಿನ ಆಕ್ರಮಿತ ಪ್ರದೇಶಗಳಿಂದ ರಷ್ಯಾ ಹಿಂದೆ ಸರಿಯಬೇಕು. ಪ್ರಾದೇಶಿಕ ಸಮಗ್ರತೆಯನ್ನು ಮರುಸ್ಥಾಪಿಸಬೇಕು. ಗಡಿಯಿಂದ ಸೇನೆಯನ್ನು ಹಿಂಪಡೆಯಬೇಕು. ವಿಶೇಷ ನ್ಯಾಯಮಂಡಳಿಯ ಮೂಲಕ ರಷ್ಯಾದ ಯುದ್ಧ ಅಪರಾಧಗಳನ್ನು ವಿಚಾರಣೆಗೆ ಒಳಪಡಿಸಬೇಕು. ಮುಂದೆ ಇಂತಹದೇ ಪರಿಸ್ಥಿತಿ ಎದುರಾಗದಂತೆ ತಡೆಯಲು ಇತರ ದೇಶಗಳು ಉಕ್ರೇನಿಗೆ ಭದ್ರತೆಯ ಅಭಯ ನೀಡಬೇಕು. ಯುದ್ಧದ ಅಂತ್ಯ ಲಿಖಿತ ರೂಪದಲ್ಲಿ ಕರಾರಿಗೆ ಪರಸ್ಪರ ಸಹಿ ಮಾಡುವ ಮೂಲಕ ಆಗಬೇಕು ಎಂದು ಝೆಲೆನ್‌ಸ್ಕಿ ತಮ್ಮ ಪ್ರಸ್ತಾವವನ್ನು ಮುಂದಿಟ್ಟರು.

ಝೆಲೆನ್‌ಸ್ಕಿ ಮಂಡಿಸಿದ ಈ ಶಾಂತಿ ಪ್ರಸ್ತಾವದಲ್ಲಿ ರಷ್ಯಾ ಒಪ್ಪಬಹುದಾದ ಕೆಲವು ಅಂಶಗಳಿದ್ದವು. ಧಾನ್ಯಗಳ ರಫ್ತು, ಯುದ್ಧ ಕೈದಿಗಳ ಹಸ್ತಾಂತರ, ವಿಕಿರಣ ಮತ್ತು ಪರಮಾಣು ಸುರಕ್ಷತೆ ಹಾಗೂ ಸೇನಾ ಹಿಂತೆಗೆತದ ವಿಷಯದಲ್ಲಿ ರಷ್ಯಾ ಒಲ್ಲೆ ಎನ್ನಲು ಕಾರಣಗಳಿರಲಿಲ್ಲ. ಆದರೆ ರಷ್ಯಾ ಒಪ್ಪಲು ಸಾಧ್ಯವಾಗದ ಅಂಶಗಳೂ ಆ ಪ್ರಸ್ತಾವದಲ್ಲಿದ್ದವು. 1991ರ ಗಡಿರೇಖೆಗೆ ರಷ್ಯಾ ಬದ್ಧವಾಗಬೇಕು ಎನ್ನುವುದು ಕ್ರಿಮಿಯಾವನ್ನು ರಷ್ಯಾ ತೊರೆಯಬೇಕು ಎನ್ನುವುದರ ಬದಲಿ ಹೇಳಿಕೆಯಾಗಿತ್ತು. ಉಕ್ರೇನಿಗೆ ಇತರ ದೇಶಗಳು ಭದ್ರತೆಯ ಅಭಯ ನೀಡಬೇಕು ಎನ್ನುವುದು ಅಮೆರಿಕ ನೇತೃತ್ವದ ಮಿಲಿಟರಿ ಒಕ್ಕೂಟಕ್ಕೆ (ನ್ಯಾಟೊ) ಉಕ್ರೇನನ್ನು ಸೇರಿಸಿಕೊಳ್ಳಬೇಕು ಎನ್ನುವುದರ ಮತ್ತೊಂದು ರೂಪವಾಗಿತ್ತು. ಹಾಗಾಗಿ ಶಾಂತಿ ಪ್ರಸ್ತಾವವನ್ನು ರಷ್ಯಾ ತಿರಸ್ಕರಿಸಿತು.

ನಂತರ ಇಂಡೊನೇಷ್ಯಾ ಕಡೆಯಿಂದ ಮತ್ತೊಂದು ಪ್ರಸ್ತಾವ ಬಂತು. ಪ್ರಸ್ತುತ ಯಾವ ಪ್ರದೇಶಗಳು ಯಾರ ಹಿಡಿತದಲ್ಲಿವೆಯೋ ಅಷ್ಟಕ್ಕೇ ಗಡಿ ಸೀಮಿತವಾಗಬೇಕು. ವೀಕ್ಷಕರ ಸಮ್ಮುಖದಲ್ಲಿ ಎರಡು ದೇಶಗಳ ನಡುವೆ ಸೇನಾರಹಿತ ವಲಯವನ್ನು ಗುರುತಿಸಬೇಕು. ವಿವಾದಿತ ಪ್ರದೇಶಗಳ ಜನರ ಅಭಿಪ್ರಾಯ ಸಂಗ್ರಹಿಸಿ, ಆ ಪ್ರದೇಶದ ಒಡೆತನ ನಿರ್ಧರಿಸುವ ಕೆಲಸವನ್ನು ವಿಶ್ವಸಂಸ್ಥೆಗೆ ಬಿಡಬೇಕು ಎಂದು ತನ್ನ ಅಭಿಪ್ರಾಯವನ್ನು ಇಂಡೊನೇಷ್ಯಾ ಹೇಳಿತು. ಇದನ್ನು ರಷ್ಯಾಪರ ಇರುವ ಪ್ರಸ್ತಾವ ಎಂದು ಉಕ್ರೇನ್ ತಿರಸ್ಕರಿಸಿತು.

ತನ್ನ ಬಗೆಗಿನ ಟೀಕೆಗಳಿಗೆ ಉತ್ತರದ ರೂಪದಲ್ಲಿ ಚೀನಾ ಪ್ರಕಟಿಸಿದ ಹನ್ನೆರಡು ಅಂಶಗಳ ಪ್ರಸ್ತಾವ, ಅಡ್ಡಗೋಡೆಯ ಮೇಲೆ ದೀಪ ಇಡುವ ಕೆಲಸ ಮಾಡಿತೋ ಶಿವಾಯ್ ಬಿಕ್ಕಟ್ಟಿನ ಪರಿಹಾರಕ್ಕೆ ಸಹಕಾರಿಯಾಗಲಿಲ್ಲ. ಇಸ್ರೇಲ್, ಬ್ರೆಜಿಲ್, ಸೌದಿ ಅರೇಬಿಯಾ ಬಿಕ್ಕಟ್ಟು ಇತ್ಯರ್ಥಕ್ಕೆ ಮಧ್ಯವರ್ತಿಯಾಗುವ ಉತ್ಸಾಹ ತೋರಿದವು. ಈ ನಡುವೆ ಉಕ್ರೇನ್ ಮತ್ತು ರಷ್ಯಾದ ನಾಯಕರು ಮಾತುಕತೆಗೆ ಸಿದ್ಧ ಎಂದು ಹಲವು ಬಾರಿ ಹೇಳಿದರಾದರೂ, ದಾಳಿ, ಪ್ರತಿದಾಳಿ ಮಾತ್ರ ನಿಲ್ಲಲಿಲ್ಲ!

ಹಾಗಂತ ಇದುವರೆಗೆ ಚರ್ಚೆಗೆ ಬಂದ ಶಾಂತಿ ಪ್ರಸ್ತಾವಗಳು ಗಂಭೀರ ಸ್ವರೂಪದವೇ ಎಂದು ನೋಡಿದರೆ ಹಾಗನಿಸುವುದಿಲ್ಲ. ಜಾಗತಿಕವಾಗಿ ಮಹತ್ವದ ಸ್ಥಾನ ನಿರ್ವಹಿಸುವ ಉಮೇದಿನಿಂದ ಉಕ್ರೇನ್ ಬಿಕ್ಕಟ್ಟಿಗೆ ಪರಿಹಾರ ಸೂತ್ರ ಹೊಸೆಯುವ ಪ್ರಯತ್ನಗಳೂ ನಡೆದವು. ಆದರೆ ಪಕ್ಷಪಾತಿಯಲ್ಲದ, ಎರಡೂ ರಾಷ್ಟ್ರಗಳು ಒಪ್ಪಬಹುದಾದ ಪರಿಹಾರ ಸೂತ್ರ ಮಾತ್ರ ಗೋಚರಿಸಲಿಲ್ಲ. ಅದನ್ನೇ ಅಜಿತ್ ಧೋವಲ್ ಅವರು ಸೌದಿ ಅರೇಬಿಯಾದಲ್ಲಿ ನಡೆದ ಸಭೆಯಲ್ಲಿ ಹೇಳಿದ್ದಾರೆ. ಜೊತೆಗೆ ನ್ಯಾಯಯುತ ಮತ್ತು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ನಡೆಯುವ ಶಾಂತಿ ಮಾತುಕತೆಗಳು, ಈ ಬಿಕ್ಕಟ್ಟಿನ ಭಾಗವಾಗಿರುವ ಎಲ್ಲ ಪಾಲುದಾರರನ್ನೂ ಒಳಗೊಂಡು ನಡೆಯಬೇಕು ಎಂಬ ಭಾರತದ ನಿಲುವನ್ನು ಅವರು ಅಭಿವ್ಯಕ್ತಿಸಿದ್ದಾರೆ. ಹಾಗಾಗಿ, ರಷ್ಯಾವನ್ನು ಹೊರಗಿಟ್ಟು ನಡೆದ ಸೌದಿ ಸಭೆಯ ಕುರಿತು ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ.

ಸದ್ಯದ ಮಟ್ಟಿಗಂತೂ, ಉಕ್ರೇನ್ ಮತ್ತು ರಷ್ಯಾ ನಡುವೆ ನೇರ ಮಾತುಕತೆ ಸಾಧ್ಯ ಎನ್ನುವ ಪರಿಸ್ಥಿತಿ ಇಲ್ಲ. ರಷ್ಯಾ ತನ್ನ ಸಾಮರ್ಥ್ಯಕ್ಕೆ ತಕ್ಕ ಆಕ್ರಮಣಕಾರಿ ನಿಲುವನ್ನು ಇದುವರೆಗೆ ತೋರ್ಪಡಿಸಿಲ್ಲವಾದರೂ, ಯುದ್ಧವನ್ನು ಕೊನೆಗೊಳಿಸುವ ಯಾವ ಸೂಚನೆಯನ್ನೂ ತೋರುತ್ತಿಲ್ಲ. ಆಕ್ರಮಿಸಿಕೊಂಡಿರುವ ಪ್ರದೇಶಗಳನ್ನು ರಷ್ಯಾ ಬಿಟ್ಟುಕೊಡಬೇಕಾಗುತ್ತದೆ ಎಂಬ ಸನ್ನಿವೇಶ ಕೂಡ ಸೃಷ್ಟಿಯಾಗಿಲ್ಲ.

ಇತ್ತ ಉಕ್ರೇನ್ ಪ್ರತಿದಾಳಿಯ ಮೂಲಕ ತನ್ನ ಭೂಪ್ರದೇಶವನ್ನು ಮರುವಶ ಮಾಡಿಕೊಳ್ಳುವ ಉಮೇದನ್ನು ಉಳಿಸಿಕೊಂಡಿದೆ. ನ್ಯಾಟೊ ರಾಷ್ಟ್ರಗಳಿಂದ ಸಕಾರಾತ್ಮಕ ಸಂದೇಶ ಬಾರದಿದ್ದರೂ, ನ್ಯಾಟೊ ಸೇರುವ ಬಯಕೆಯನ್ನು ಅದು ಪೂರ್ತಿಯಾಗಿ ಬಿಟ್ಟುಕೊಟ್ಟಿಲ್ಲ. ಉಕ್ರೇನ್ ಸಹಜವಾಗಿಯೇ ಈ ಯುದ್ಧವನ್ನು ತನ್ನ ಅಳಿವು ಮತ್ತು ಉಳಿವಿನ ಪ್ರಶ್ನೆಯಾಗಿ ನೋಡುತ್ತಿದೆ.

ಯಾವುದೇ ಯುದ್ಧದಲ್ಲಿ, ಕಾದಾಡುತ್ತಿರುವ ಎರಡೂ ದೇಶಗಳಿಗೆ ತಾನು ವಿಜಯ ಸಾಧಿಸಬಲ್ಲೆ ಎಂಬ ವಿಶ್ವಾಸ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಆ ದೇಶಗಳು ಶಾಂತಿ ಮಾತುಕತೆಯತ್ತ ನಿರ್ಲಕ್ಷ್ಯದ ನೋಟವನ್ನೇ ಬೀರುತ್ತವೆ. ಎರಡೂ ರಾಷ್ಟ್ರಗಳಿಗೆ ತಾನು ಗೆದ್ದೆ (ವಿನ್-ವಿನ್) ಎಂದು ಅನ್ನಿಸಬಹುದಾದಂತಹ ಮತ್ತು ಮುಖ ಉಳಿಸಿಕೊಳ್ಳುವ ಸೂತ್ರ ದೊರೆತಾಗ ಮಾತ್ರ ಅವು ಮಾತುಕತೆಗೆ ಒಲವು ತೋರುತ್ತವೆ. ಉಕ್ರೇನ್ ಮತ್ತು ರಷ್ಯಾದ ವಿಷಯದಲ್ಲಿ ಅಂತಹ ಸೂತ್ರ ಇನ್ನೂ ಅಗೋಚರವಾಗಿಯೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT