ಶಾಸ್ತ್ರಿ ಸಾವು: ಗೋಪ್ಯ ಕಡತಗಳು ಹಡೆದ ಸಂಚಿನ ಕತೆ

7
ಸಾವಿನ ಕುರಿತ ಹಲವು ಪ್ರಶ್ನೆಗಳು, ಪಿತೂರಿಯ ಕತೆಗಳು ಇಂದಿಗೂ ಜೀವಂತವಾಗಿವೆ

ಶಾಸ್ತ್ರಿ ಸಾವು: ಗೋಪ್ಯ ಕಡತಗಳು ಹಡೆದ ಸಂಚಿನ ಕತೆ

ಸುಧೀಂದ್ರ ಬುಧ್ಯ
Published:
Updated:
Deccan Herald

ಮೊನ್ನೆ ಸೆಪ್ಟೆಂಬರ್ 26ರಂದು ಪ್ರಧಾನ ಮಂತ್ರಿಗಳ ಕಚೇರಿ, ಗೃಹ ಮತ್ತು ವಿದೇಶಾಂಗ ಸಚಿವಾಲಯದ ಅಧಿಕಾರಿಗಳಿಗೆ ಕೇಂದ್ರ ಮಾಹಿತಿ ಆಯೋಗವು ನಿರ್ದೇಶನವೊಂದನ್ನು ನೀಡಿದೆ. ‘ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಾವಿಗೆ ಸಂಬಂಧಿಸಿದಂತೆ ಇರುವ ರಹಸ್ಯ ವರ್ಗದ ಪತ್ರಗಳನ್ನು ಕೂಡಲೇ ಪ್ರಧಾನಿ ಮತ್ತು ಗೃಹ ಸಚಿವರ ಮುಂದಿರಿಸಬೇಕು. ಅವರು ಈ ಪತ್ರಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿರಿಸಬಹುದು ಎಂದು ಅಭಿಪ್ರಾಯಪಟ್ಟರೆಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಆಯೋಗ ಸೂಚಿಸಿದೆ. ‘ಸಂಸತ್ತಿನಲ್ಲಿ ಆಡಲಾಗುವ ಪ್ರತಿ ಪದವನ್ನೂ ದಾಖಲಿಸುವ ವ್ಯವಸ್ಥೆ ಇರುವಾಗ, ಶಾಸ್ತ್ರಿ ಅವರ ನಿಗೂಢ ಸಾವಿನ ಬಗ್ಗೆ ರಾಜನಾರಾಯಣ್ ಸಮಿತಿ ನೀಡಿದ್ದ ತನಿಖಾ ವರದಿಯ ಕಡತ ರಾಜ್ಯ ಸಭೆಯಲ್ಲಿಲ್ಲ ಎನ್ನುವುದು ಆಶ್ಚರ್ಯಕರ ಸಂಗತಿ’ ಎಂದೂ ಆಯೋಗ ಹೇಳಿದೆ.

ಸಾಮಾನ್ಯವಾಗಿ ಯಾವುದೇ ವಿಷಯವನ್ನು ಸರ್ಕಾರ ಗೋಪ್ಯವಾಗಿರಿಸಲು ಯತ್ನಿಸುತ್ತಿದೆ ಎಂದಾಗ ಅನುಮಾನ ಶುರುವಾಗುತ್ತದೆ. ಸಂಚು, ಸಂಶಯದ ಕತೆಗಳು ಜನ್ಮ ತಳೆಯುತ್ತವೆ. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಾವಿನ ವಿಷಯದಲ್ಲಿ ಆರಂಭದಿಂದ ಆದದ್ದೂ ಅದೇ. ಅವರ ಸಾವಿನ ಕುರಿತ ಹಲವು ಪ್ರಶ್ನೆಗಳು, ಪಿತೂರಿಯ ಕತೆಗಳು ಇಂದಿಗೂ ಜೀವಂತವಾಗಿವೆ. ಇಂದಿರಾ ಗಾಂಧಿ, ಸೋವಿಯತ್ ಒಕ್ಕೂಟ ಹಾಗೂ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಸುತ್ತ ಹಬ್ಬಿ ಬೆಳೆದಿವೆ. ಸ್ವತಃ ಶಾಸ್ತ್ರಿ ಅವರ ಕುಟುಂಬವೇ ವಿಷ ಪ್ರಾಶನದ ಬಗ್ಗೆ, ನಂಜಿನ ಚುಚ್ಚುಮದ್ದು ನೀಡಿರಬಹುದೇ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಿದೆ. ಸಂಶಯಕ್ಕೆ ಎಡೆ ಮಾಡಿಕೊಡುವ ಕೆಲವು ಘಟನೆಗಳೂ ಇತಿಹಾಸದಲ್ಲಿ ದಾಖಲಾಗಿವೆ.

ಹಾಗೆ ನೋಡಿದರೆ, ಶಾಸ್ತ್ರಿ ಅವರು ಪ್ರಧಾನಿಯಾದದ್ದು ಒಂದು ವಿಷಮ ಸನ್ನಿವೇಶದಲ್ಲಿ. 1964ರ ಮೇ 27ರಂದು ಶೌಚಾಲಯಕ್ಕೆಂದು ತೆರಳಿದ್ದ ನೆಹರೂ ಅಲ್ಲೇಕುಸಿದು ಬಿದ್ದಿದ್ದರು. ಸುಮಾರು ಒಂದು ಗಂಟೆ ಕಾಲ, ಅವರನ್ನು ಯಾರೂ ಗಮನಿಸಿರಲಿಲ್ಲ. ಅವರು ಬಿದ್ದಿರುವುದು ಗೊತ್ತಾಗುವ ವೇಳೆಗೆ ಅವರು ಸತ್ತಿದ್ದರು. ಕುಟುಂಬ ವೈದ್ಯ ಕೆ.ಎಲ್. ವಿಗ್ ‘ನೆಹರೂ ಒಂಟಿಯಾಗಿ ನಡೆದಾಡುವುದು ಬೇಡ’ ಎಂದು ಇಂದಿರಾ ಗಾಂಧಿ ಅವರಿಗೆ ಸೂಚನೆ ನೀಡಿದ್ದರೂ ಅಚಾತುರ್ಯ ಘಟಿಸಿತ್ತು. ನೆಹರೂ ಆಪ್ತ ವಲಯದಲ್ಲಿದ್ದ ಗುಲ್ಜಾರಿಲಾಲ್ ನಂದಾ ಮೂಢನಂಬಿಕೆಗಳ ಮೊರೆಹೋದವರು. ನೆಹರೂ ಹಾಸಿಗೆ ಹಿಡಿದಾಗ ಸಾವನ್ನುಗೆಲ್ಲುವ ಮಂತ್ರ ಪಠಣದ ಯಜ್ಞವೊಂದನ್ನು ನಂದಾ ಆಯೋಜಿಸಿದ್ದರು. ‘ಒಬ್ಬ ವ್ಯಕ್ತಿಯನ್ನು ಸಂಪುಟಕ್ಕೆ ತೆಗೆದುಕೊಳ್ಳದೇ ಹೋಗಿದ್ದರೆ ನೆಹರೂ ಆಯಸ್ಸು ವೃದ್ಧಿಸುತ್ತಿತ್ತು ಎಂದು ಜ್ಯೋತಿಷಿಯೊಬ್ಬರು ಹೇಳಿದ್ದಾರೆ’ ಎಂದು ನಂದಾ ಹಲವರ ಬಳಿ ಹೇಳುತ್ತಿದ್ದರು. ಆ ‘ಒಬ್ಬ ವ್ಯಕ್ತಿ’ ಲಾಲ್ ಬಹದ್ದೂರ್ ಶಾಸ್ತ್ರಿ ಆಗಿದ್ದರು.

ತಮ್ಮ ಆರೋಗ್ಯ ತೀರಾ ಹದಗೆಟ್ಟಾಗ ಶಾಸ್ತ್ರಿ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ನೆಹರೂ ನಿರ್ಧರಿಸಿದ್ದರು. ಆ ಮೂಲಕ ‘ನನ್ನ ಉತ್ತರಾಧಿಕಾರಿ ಲಾಲ್ ಬಹದ್ದೂರ್ ಶಾಸ್ತ್ರಿ’ ಎಂದು ನೆಹರೂ ಹೇಳಬಯಸಿದಂತಿತ್ತು. ನೆಹರೂ ಅವರ ಅಂತ್ಯಸಂಸ್ಕಾರ ಜರಗುವ ಮುನ್ನವೇ ಪ್ರಧಾನಿ ಹುದ್ದೆಗೆ ಯಾರು ಎಂಬ ಪ್ರಶ್ನೆ ಎದ್ದಿತು. ಕಾಂಗ್ರೆಸ್ ಹಿರಿಯರ ‘ಸಿಂಡಿಕೇಟ್’ ಶಾಸ್ತ್ರಿ ಅವರತ್ತ ನೋಡಿತು. ಆದರೆ ನೆಹರೂ ಸಂಪುಟದಲ್ಲಿ ವಿತ್ತ ಮಂತ್ರಿಯಾಗಿದ್ದ ಮೊರಾರ್ಜಿ ಮನೆಯಲ್ಲಿ ಚಟುವಟಿಕೆಗಳು ಆರಂಭವಾಗಿದ್ದವು. ಒಂದೊಮ್ಮೆ ಚುನಾವಣೆ ಏರ್ಪಟ್ಟರೆ ಸ್ಪರ್ಧಿಸಿಯೇ ಸಿದ್ಧ ಎಂಬ ಮನಸ್ಥಿತಿಯಲ್ಲಿ ಮೊರಾರ್ಜಿ ಇದ್ದರು.

ಆದರೆ, ಚುನಾವಣೆಯಿಂದ ಪಕ್ಷ ಇಬ್ಭಾಗವಾಗಬಹುದು. ಹಾಗಾಗಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂಬ ನಿರ್ಧಾರವನ್ನು ಸಿಂಡಿಕೇಟ್ ತಳೆದಿತ್ತು. ನೆಹರೂ ಅಂತ್ಯಸಂಸ್ಕಾರಕ್ಕೂ ಮುನ್ನವೇ ಚುನಾವಣೆಗಾಗಿ ಮೊರಾರ್ಜಿ ಪಟ್ಟು ಹಿಡಿದದ್ದು ಅವರಿಗೆ ತಿರುಗುಬಾಣವಾಯಿತು. ಕಾಂಗ್ರೆಸ್ ಅಧ್ಯಕ್ಷ ಕಾಮರಾಜ್, ಚುನಾಯಿತ ಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಣೆಗೆ ಇಳಿದಾಗ ಶಾಸ್ತ್ರಿ ಅವರೇ ಹೆಚ್ಚು ಜನರ ಬೆಂಬಲ ಗಳಿಸಿ ಪ್ರಧಾನಿ ಹುದ್ದೆಗೆ ಆಯ್ಕೆಯಾದರು. ಆದರೆ ಶಾಸ್ತ್ರಿ ಆಯ್ಕೆಯನ್ನು ಮೊರಾರ್ಜಿ ಬಣ ಮನಃಪೂರ್ವಕವಾಗಿ ಒಪ್ಪಿಕೊಳ್ಳಲಿಲ್ಲ. ಇಂದಿರಾ ಬಣ ಅಸಮ್ಮತಿಯನ್ನು ಬಹಿರಂಗಪಡಿಸಲಿಲ್ಲ.

ಪ್ರಧಾನಿಯಾದ ಕೆಲವೇ ದಿನಗಳಲ್ಲಿ ಶಾಸ್ತ್ರಿ ಅವರಿಗೆ ಎರಡನೆಯ ಬಾರಿಗೆ ಲಘು ಹೃದಯಾಘಾತವಾಗಿತ್ತು. ಅಧಿಕಾರದ ಪಡಸಾಲೆಯಲ್ಲಿ ಅನಾರೋಗ್ಯದ ಸುದ್ದಿಗೂ, ಮರಣದ ಸುದ್ದಿಗೂ ಹೆಚ್ಚು ಅಂತರ ಇರುವುದಿಲ್ಲ. ನಂತರ ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಬಗ್ಗೆ ಪತ್ರಕರ್ತ ಕುಲದೀಪ್ ನಯ್ಯರ್, ಶಾಸ್ತ್ರಿ ಅವರನ್ನು ಪ್ರಶ್ನಿಸಿದಾಗ ‘ನಾನು ಒಂದೆರಡು ವರ್ಷಗಳಲ್ಲಿ ಸತ್ತರೆ ಇಂದಿರಾ ಪ್ರಧಾನಿಯಾಗುತ್ತಾರೆ. ನಾಲ್ಕೈದು ವರ್ಷ ಬದುಕಿದರೆ ವೈ.ಬಿ. ಚವಾಣ್ ಪ್ರಧಾನಿಯಾಗುತ್ತಾರೆ’ ಎಂದಿದ್ದನ್ನು ನಯ್ಯರ್ ತಮ್ಮ ಕೃತಿ ‘ಬಿಯಾಂಡ್ ದಿ ಲೈನ್ಸ್’ನಲ್ಲಿ ಉಲ್ಲೇಖಿಸಿದ್ದಾರೆ. ಇಂದಿರಾ ಅವರಿಗೆ ಶೀಘ್ರ ಪ್ರಧಾನಿಯಾಗುವ ಬಯಕೆ ಇದೆ ಎಂಬುದು ಶಾಸ್ತ್ರಿ ಅವರಿಗೆ ಗೊತ್ತಿತ್ತು. ಅವರಿಗೆ ಹೆಚ್ಚು ಮಹತ್ವ ನೀಡಬಾರದು ಎಂಬ ಕಾರಣಕ್ಕಾಗಿಯೇ ವಿದೇಶಾಂಗ ಖಾತೆಯನ್ನು ತಾವೇ ಇಟ್ಟುಕೊಂಡು, ವಾರ್ತಾ ಮತ್ತು ಪ್ರಸಾರ ಖಾತೆಯನ್ನು ಇಂದಿರಾಗೆ ನೀಡಿದ್ದರು.

ನೆಹರೂ ಅವರಂತೆಯೇ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವ ಬಗ್ಗೆ ಶಾಸ್ತ್ರಿ ಆಸಕ್ತಿ ಹೊಂದಿದ್ದರು. ಅಮೆರಿಕದೊಂದಿಗೆ ಬಾಂಧವ್ಯ ವೃದ್ಧಿಸಿಕೊಳ್ಳುವ ಹಂಬಲ ಅವರಿಗಿತ್ತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಭಾರತದೊಂದಿಗೆ ಸ್ನೇಹ ಮುಂದುವರೆಸಿಯೂ ಪಾಕಿಸ್ತಾನದೊಂದಿಗೆ ಬಾಂಧವ್ಯವನ್ನು ಯಥಾಸ್ಥಿತಿಗೆ ತರಲು ಸೋವಿಯತ್ ಯತ್ನಿಸುತ್ತಿತ್ತು. ಇದೇ ವೇಳೆಗೆ, ನುಸುಳುಕೋರರ ಮೂಲಕ ಕಾಶ್ಮೀರದಲ್ಲಿ ಅರಾಜಕತೆ ಸೃಷ್ಟಿಸುವ, ಅತಿಕ್ರಮಣದ ಮೂಲಕ ತಂಟೆ ತೆಗೆಯುವ ಕೆಲಸಕ್ಕೆ ಪಾಕಿಸ್ತಾನ ಕೈ ಹಾಕಿತು. 1965ರ ಆಗಸ್ಟ್ 8 ರಂದು ಕದನವಿರಾಮ ರೇಖೆಯುದ್ದಕ್ಕೂ ಪಾಕಿಸ್ತಾನ ಗುಂಡಿನ ದಾಳಿ ನಡೆಸಿತು. ಭಾರತ ತಕ್ಕ ಪ್ರತ್ಯುತ್ತರ ನೀಡಿತು.

ಭಾರತದೊಂದಿಗೆ ಅಂತರ ಕಾಯ್ದುಕೊಳ್ಳಲು ನೋಡುತ್ತಿದ್ದ ಸೋವಿಯತ್ ಒಕ್ಕೂಟದ ಪ್ರಧಾನಿ ಅಲೆಕ್ಸಿ ಕೊಸಿಗಿನ್, ಶಾಸ್ತ್ರಿಯವರಿಗೆ ಪತ್ರ ಬರೆದು, ಕೂಡಲೇ ಮಿಲಿಟರಿ ಕಾರ್ಯಾಚರಣೆ ನಿಲ್ಲಿಸುವಂತೆ ತಾಕೀತು ಮಾಡಿದರು. ತನಗೆ ಪಾಕಿಸ್ತಾನ ಮತ್ತು ಭಾರತ ಒಂದೇ ಎನ್ನುವ ಧಾಟಿಯಲ್ಲಿ ಪತ್ರ ಬರೆಯಲಾಗಿತ್ತು. ಆದರೆ ಜನರಲ್ ಚೌಧರಿ, ಲೆಫ್ಟಿನೆಂಟ್ ಜನರಲ್ ಹರಭಕ್ಷ್ ಸಿಂಗ್, ಏರ್ ಮಾರ್ಷಲ್ ಅರ್ಜುನ್ ಸಿಂಗ್ ರೂಪಿಸಿದ್ದ ರಣತಂತ್ರದಿಂದ, ಭಾರತ ಯುದ್ಧದಲ್ಲಿ ಮೇಲುಗೈ ಸಾಧಿಸಿತು.

ದೈಹಿಕವಾಗಿ ಎತ್ತರವಿರದ ಶಾಸ್ತ್ರಿಯವರು ತಮ್ಮ ನಿರ್ಧಾರಗಳ ಮೂಲಕ ಎತ್ತರದ ವ್ಯಕ್ತಿ ಎನ್ನಿಸಿಕೊಳ್ಳಬೇಕು ಎಂಬ ಆಸೆ ಹೊಂದಿದ್ದರು. ಪಾಕಿಸ್ತಾನದೊಂದಿಗಿನ ಘರ್ಷಣೆ ಪೂರಕವಾಗಿ ಒದಗಿಬಂತು. ಅಣ್ವಸ್ತ್ರ ಹೊಂದುವ ಬಗ್ಗೆ ಅವರಲ್ಲಿ ನಿಖರತೆ ಇತ್ತು. 65ರ ಪಾಕ್ ಯುದ್ಧದ ನಂತರ ಅವರ ವರ್ಚಸ್ಸು ಅತಿ ಎತ್ತರಕ್ಕೆ ಏರಿತು. ಕದನ ವಿರಾಮದ ಬಳಿಕ, ದ್ವಿಪಕ್ಷೀಯ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸೋವಿಯತ್ ಒತ್ತಡ ಹೇರಿತು. ಕೊಸಿಗಿನ್ ಅವರು ತಾಷ್ಕೆಂಟ್‌ನಲ್ಲಿ ಶೃಂಗಸಭೆ ಏರ್ಪಡಿಸಿದರು. ಮೊದಲಿಗೆ ಸೋವಿಯತ್ ಆಹ್ವಾನವನ್ನು ಭಾರತ ಸರ್ಕಾರ ತಿರಸ್ಕರಿಸಿ, ಅಲ್ಲಿನ ತನ್ನ ರಾಯಭಾರಿ ಟಿ.ಎನ್. ಕೌಲ್ ಅವರಿಗೆ ಪತ್ರ ಬರೆಯಿತು. ಆದರೆ ಆ ಪತ್ರವನ್ನು ಸೋವಿಯತ್ ನಾಯಕರಿಗೆ ತಲುಪಿಸದೇ, ಭಾರತ ಸರ್ಕಾರವನ್ನು ಮನವೊಲಿಸುವ ಪ್ರಯತ್ನ ಮಾಡಿದರು ಕೌಲ್!

ಈ ನಡುವೆ ದೇಶದೊಳಗೆ ಕೆಲ ಬೆಳವಣಿಗೆಗಳು ನಡೆದಿದ್ದವು. ತಮ್ಮ ಬೆನ್ನ ಹಿಂದೆ ಅಪಹಾಸ್ಯ ಮಾಡುತ್ತಿದ್ದ ಸಚಿವ ಟಿ.ಟಿ. ಕೃಷ್ಣಮಾಚಾರಿ ರಾಜೀನಾಮೆಗೆ ಶಾಸ್ತ್ರಿ ಸೂಚಿಸಿದ್ದರು. ಟಿ.ಟಿ.ಕೆ. ಮತ್ತು ಇಂದಿರಾ ತಮ್ಮ ವಿರುದ್ಧ ಗುಂಪು ಕಟ್ಟುತ್ತಿದ್ದಾರೆ ಎಂಬ ಮಾಹಿತಿ ಶಾಸ್ತ್ರಿ ಅವರಲ್ಲಿತ್ತು. ಟಿ.ಟಿ.ಕೆ. ರಾಜೀನಾಮೆ ಬಳಿಕ, ಇಂದಿರಾ ಅಧೀರರಾಗಿದ್ದರು. ಎಷ್ಟರಮಟ್ಟಿಗೆ ಎಂದರೆ ಇಂಗ್ಲೆಂಡಿಗೆ ತೆರಳಿ, ನೆಹರೂರ ಕೃತಿಗಳಿಂದ ಬರುವ ರಾಯಧನದಿಂದ ಮುಂದಿನಜೀವನ ನಡೆಸುವ ಬಗ್ಗೆ ಯೋಚಿಸಿದ್ದರು. ಈ ಬಗ್ಗೆ ತಮ್ಮ ‘ಸ್ಕೂಪ್’ ಕೃತಿಯಲ್ಲಿ ನಯ್ಯರ್ ಉಲ್ಲೇಖಿಸಿದ್ದಾರೆ. ‘ಜೈ ಜವಾನ್, ಜೈ ಕಿಸಾನ್’ ಘೋಷಣೆ, ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ಸಾಧಿಸಿದ ಮೇಲುಗೈ ಶಾಸ್ತ್ರಿಯವರ ಜನಪ್ರಿಯತೆಯನ್ನು ಹೆಚ್ಚಿಸಿತ್ತು. ತಮ್ಮ ರಾಜಕೀಯ ಮಹತ್ವಾಕಾಂಕ್ಷೆ ಇನ್ನು ಈಡೇರದು ಎಂಬ ಭಾವ ಇಂದಿರಾರಲ್ಲಿತ್ತು.

ತಾಷ್ಕೆಂಟ್ ಮಾತುಕತೆ ಅಂದುಕೊಂಡಂತೆ ಜರುಗಲಿಲ್ಲ. ಮಾತುಕತೆಯ ವೇಳೆ ಕೊಸಿಗಿನ್ ಪಾಕಿಸ್ತಾನದ ಪರ ಹೆಚ್ಚು ವಾಲುತ್ತಿದ್ದದ್ದು ಶಾಸ್ತ್ರಿಯವರ ಅಸಮಾಧಾನಕ್ಕೆ ಕಾರಣವಾಗಿತ್ತು. ಒಂದು ಹಂತದಲ್ಲಿ ‘ನೀವು ಭಾರತದ ಬೇರೆ ಯಾರಾದರೂ ಪ್ರಧಾನಿ ಜೊತೆ ಮಾತನಾಡುವುದು ಒಳಿತು’ ಎಂದು ಕೊಸಿಗಿನ್ ಅವರಿಗೆ ಶಾಸ್ತ್ರಿ ಸಿಟ್ಟಿನಲ್ಲಿ ಹೇಳಿದ್ದರು. ಅಂತಿಮವಾಗಿ ಕೊಡು- ಕೊಳ್ಳುವ ಸೂತ್ರಕ್ಕೆ ಅಯೂಬ್ ಖಾನ್ ಮತ್ತು ಶಾಸ್ತ್ರಿ ಬದ್ಧರಾದರು. ವಶಪಡಿಸಿಕೊಂಡಿದ್ದ ಹಾಜಿ ಪೀರ್ ಮತ್ತು ತಿತ್ವಾಲದಿಂದ ಸೇನೆಯನ್ನು ವಾಪಸು ಕರೆಸಿಕೊಳ್ಳುವ ಬಗ್ಗೆ ಶಾಸ್ತ್ರಿ ಸಮ್ಮತಿ ಸೂಚಿಸಿದರು.

ಅದೇ ರಾತ್ರಿ ಸೋವಿಯತ್ ಒಕ್ಕೂಟ ಆಯೋಜಿಸಿದ್ದ ಸಂಭ್ರಮ ಕೂಟದಲ್ಲಿ ಪಾಲ್ಗೊಂಡು, ತಮ್ಮ ರೂಮಿಗೆ ಬಂದ ಶಾಸ್ತ್ರಿ, ಭಾರತದ ರಾಯಭಾರಿ ಟಿ.ಎನ್. ಕೌಲ್ ಅವರ ಮನೆಯಿಂದ, ಬಾಣಸಿಗ ಜಾನ್ ಮೊಹಮದ್ ಸಿದ್ಧಪಡಿಸಿ ತಂದಿದ್ದ ಊಟ ಮಾಡಿದ್ದರು. ತಡರಾತ್ರಿಯ ಹೊತ್ತಿನಲ್ಲಿ ಏನೋ ಕಸಿವಿಸಿಯಾಗಿ, ಸಹಾಯಕ್ಕಾಗಿ ಪರಿಚಾರಕರ ರೂಮಿಗೆ ಧಾವಿಸಿದ್ದರು. ಆದರೆ ಸಮಯ ಮೀರಿತ್ತು. ಶಾಸ್ತ್ರಿ ತೀರಿಕೊಂಡ ಸುದ್ದಿ ಕೆಲಹೊತ್ತಿನಲ್ಲೇ ಹೊರಬಿತ್ತು. ಪಾರ್ಥಿವ ಶರೀರವನ್ನು ಭಾರತಕ್ಕೆ ತರಲಾಯಿತು. ದೇಹ ತಿಳಿನೀಲಿ ಬಣ್ಣಕ್ಕೆ ತಿರುಗಿರುವುದನ್ನು ಗಮನಿಸಿದ ಶಾಸ್ತ್ರಿ ಅವರ ತಾಯಿ ‘ವಿಷ ಉಣಿಸಲಾಗಿದೆ’ ಎಂದು ಭಾವೋದ್ವೇಗದಲ್ಲಿ ಪ್ರತಿಕ್ರಿಯಿಸಿದ್ದರು. ಅದು ಸಂಶಯದ ಮೊದಲ ಕೂಗಾಗಿ ಮಾರ್ಪಟ್ಟಿತು. ಮರಣೋತ್ತರ ಪರೀಕ್ಷೆಯನ್ನು ತಾಷ್ಕೆಂಟ್‌ನಲ್ಲಿಯಾಗಲೀ, ಭಾರತಕ್ಕೆ ಪಾರ್ಥಿವವನ್ನು ತಂದ ನಂತರವಾಗಲೀ ಏಕೆ ನಡೆಸಲಿಲ್ಲ ಎಂಬುದು ದೊಡ್ಡ ಪ್ರಶ್ನೆಯಾಗಿ ಉಳಿಯಿತು.

ಸಾಮಾನ್ಯವಾಗಿ ಯಾವುದೇ ಕೊಲೆ ಪ್ರಕರಣವನ್ನು ಭೇದಿಸುವಾಗ, ಉದ್ದೇಶ, ಸಾಮರ್ಥ್ಯ ಮತ್ತು ಅವಕಾಶ ಯಾರಿಗಿತ್ತು ಎಂಬುದನ್ನು ಪರಿಶೀಲಿಸಲಾಗುತ್ತದೆ. ತನ್ನ ದೇಶದಲ್ಲಿರುವ ಓರ್ವ ವ್ಯಕ್ತಿಯನ್ನು ಕೊನೆಗಾಣಿಸುವ ಸಾಮರ್ಥ್ಯ ಮತ್ತು ಅವಕಾಶ ಸೋವಿಯತ್ ಸರ್ಕಾರಕ್ಕಿತ್ತು. ಆದರೆ ಕಾರಣ ಹುಡುಕಿದರೆ ಮಹತ್ವದ್ದೇನೂ ಸಿಗುವುದಿಲ್ಲ. ಇಂದಿರಾರ ದೃಷ್ಟಿಯಲ್ಲಿ ರಾಜಕೀಯ ಮಹತ್ವಾಕಾಂಕ್ಷೆ ಉದ್ದೇಶದಂತೆ ಕಂಡರೂ, ಇನ್ನೆರಡು ಅಂಶಗಳಲ್ಲಿ ಅವರ ಸಹಭಾಗಿತ್ವವನ್ನು ಪುಷ್ಟೀಕರಿಸುವ ಸಾಕ್ಷ್ಯಗಳು ಇರಲಿಲ್ಲ. ಹಾಗಾಗಿ ಈ ಇಬ್ಬರೂ ಕೈ ಜೋಡಿಸಿದ್ದರೆ ಎಂಬ ಮತ್ತೊಂದು ಪ್ರಶ್ನೆ ಉದ್ಭವವಾಯಿತು.

ಕೆಲ ವರ್ಷಗಳ ಬಳಿಕ, ಅಮೆರಿಕದ ಗುಪ್ತಚರ ಸಂಸ್ಥೆಯ ಅಧಿಕಾರಿಯಾಗಿದ್ದ ರಾಬರ್ಟ್ ಕ್ರಾಲೀ, ಪತ್ರಕರ್ತ ಗ್ರೇಗೋಲಿ ಡಾಗ್ಲಸ್ ಅವರಿಗೆ ನೀಡಿದ ಸಂದರ್ಶನದಲ್ಲಿ ‘ಭಾರತದ ಭೌತವಿಜ್ಞಾನಿ ಹೋಮಿ ಭಾಭಾ ಮತ್ತು ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಾವಿನ ಹಿಂದೆ ಸಿಐಎ ಪಾತ್ರವಿತ್ತು’ ಎಂದಿದ್ದರು. ‘ಅಣ್ವಸ್ತ್ರ ಕುರಿತಂತೆ ಭಾರತದ ಅಚಲ ನಿಲುವು ಸಿಐಎಗೆ ಸಮ್ಮತವಾಗಿರಲಿಲ್ಲ. ಸೋವಿಯತ್ ಮತ್ತು ಭಾರತ ಜಂಟಿಯಾಗಿ ಏಷ್ಯಾದ ಮಟ್ಟಿಗೆ ಪ್ರಭಾವಲಯ ವಿಸ್ತರಿಸಿಕೊಳ್ಳಬಹುದು ಎಂಬ ಅನುಮಾನ ಸಿಐಎಗೆ ಇತ್ತು’ ಎಂಬ ಸಂಗತಿಯನ್ನು ಬಿಚ್ಚಿಟ್ಟಿದ್ದರು. ಹಾಗಾಗಿ ಸಂಶಯ ಸಿಐಎನತ್ತ ಗಾಢವಾಯಿತು.

ಹೀಗೆ ಸಂಶಯ ಹುತ್ತಗಟ್ಟುತ್ತಿರುವಾಗಲೇ, ಶಾಸ್ತ್ರಿ ಅವರ ಆರೋಗ್ಯ ಗಮನಿಸುತ್ತಿದ್ದ ಮತ್ತು ತಾಷ್ಕೆಂಟ್‌ನಲ್ಲಿ ಅವರೊಂದಿಗಿದ್ದ ವೈದ್ಯ ಆರ್.ಎನ್. ಛಗ್ ಅಪಘಾತದಲ್ಲಿ ತೀರಿಕೊಂಡರು. ಆ ರಾತ್ರಿ ನಡೆದದ್ದೇನು ಎಂಬುದನ್ನು ಸಂಸದೀಯ ಸಮಿತಿಯ ಮುಂದೆ ವಿವರಿಸಲು ಬರುತ್ತಿದ್ದಾಗ ಟ್ರಕ್ ಒಂದು ಅವರ ಕಾರಿಗೆ ಅಪ್ಪಳಿಸಿತ್ತು. ಮತ್ತೊಬ್ಬ ಪ್ರತ್ಯಕ್ಷದರ್ಶಿ ಶಾಸ್ತ್ರಿ ಅವರ ಖಾಸಗಿ ಸಹಾಯಕ ರಾಮನಾಥ್, ತನಿಖಾ ಸಮಿತಿಯ ಮುಂದೆ ಸ್ಪಷ್ಟವಾಗಿ ಏನನ್ನೂ ಹೇಳಲು ಸಾಧ್ಯವಾಗಲಿಲ್ಲ. ತನಿಖಾ ಆಯೋಗದ ಮುಂದೆ ಹಾಜರಾಗುವ ಮುನ್ನ ರಸ್ತೆ ಅಪಘಾತಕ್ಕೆ ಈಡಾಗಿ ರಾಮನಾಥ್ ಕಾಲನ್ನು ಕಳೆದುಕೊಂಡರು. ಮುಖ್ಯವಾಗಿ ಅವರ ತಲೆಗೆ ಪೆಟ್ಟುಬಿದ್ದು ನೆನಪಿನ ಶಕ್ತಿಯೇ ಹೊರಟುಹೋಗಿತ್ತು!

ಒಟ್ಟಿನಲ್ಲಿ, ಸಂಶಯಕ್ಕೆ ನೀರೆರೆದ ಸಾಲು ಘಟನೆಗಳ ನಡುವೆ, ಶಾಸ್ತ್ರಿ ಎರಡು ಬಾರಿ ಲಘು ಹೃದಯಾಘಾತಕ್ಕೆ ಒಳಗಾಗಿದ್ದರು ಎಂಬ ಸಂಗತಿ ಗೌಣವಾಯಿತು. ಮುಂದೆ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದು ಇಂದಿರಾ ಪ್ರಧಾನಿಯಾದರು. ಗೋಪ್ಯ ಕಡತಗಳು ಹಡೆದ ಸಂಚಿನ ಕತೆಗಳು ರೆಕ್ಕೆ ಬಿಚ್ಚಿದವು.

ಬರಹ ಇಷ್ಟವಾಯಿತೆ?

 • 26

  Happy
 • 0

  Amused
 • 0

  Sad
 • 3

  Frustrated
 • 2

  Angry

Comments:

0 comments

Write the first review for this !