ಗುರುವಾರ , ಮಾರ್ಚ್ 4, 2021
18 °C
ಸಮಾಜವನ್ನು ಜಾಗೃತವಾಗಿಡಲು ವಿವೇಕಾನಂದರನ್ನು ನಾವು ಪದೇ ಪದೇ ನೆನೆಯುತ್ತಲೇ ಇರಬೇಕು

ಪ್ರತೀ ಯುವ ಮನದಲ್ಲಿ ಮೂಡಲಿ ‘ವಿವೇಕ’

ಸುಧೀಂದ್ರ ಬುಧ್ಯ Updated:

ಅಕ್ಷರ ಗಾತ್ರ : | |

Deccan Herald

ಇನ್ನು ನಾಲ್ಕು ದಿನ ಕಳೆದರೆ ಆ ಐತಿಹಾಸಿಕ ಘಟನೆಗೆ 125 ವರ್ಷ ತುಂಬುತ್ತದೆ. ಷಿಕಾಗೊ ನಗರದ ವಿಶ್ವಧರ್ಮ ಸಮ್ಮೇಳನದ ಆ ವೇದಿಕೆ ಕೇವಲ ಭಾರತದ ಓರ್ವ ತರುಣ ಸನ್ಯಾಸಿಯನ್ನು ಜಗತ್ತಿಗೆ ಪರಿಚಯಿಸಿದ್ದಷ್ಟೇ ಅಲ್ಲ, ಭಾರತದ ಬಗ್ಗೆ ಅದುವರೆಗೆ ಪಾಶ್ಚಿಮಾತ್ಯರಲ್ಲಿ ಬೇರೂರಿದ್ದ ಪೂರ್ವಗ್ರಹ, ಕಹಿ ಭಾವನೆಗಳನ್ನು ತಕ್ಕಮಟ್ಟಿಗೆ ನಿವಾರಿಸುವ ಕೆಲಸ ಮಾಡಿತು.

ವಿವೇಕಾನಂದರ ವಾಕ್ಚಾತುರ್ಯ, ವೇದಾಂತ ಕುರಿತ ವಿಷಯ ಜ್ಞಾನ ಆ ವೇದಿಕೆಯ ಮೂಲಕ ಅನಾವರಣಗೊಂಡಿತು. 1893ರ ಸೆಪ್ಟೆಂಬರ್ 11ರ ಬಳಿಕ ವಿವೇಕಾನಂದ ಹೊಸದಾಗಿ ಕಂಡರು. ಪಾಶ್ಚಿಮಾತ್ಯರನ್ನು ತಮ್ಮತ್ತ ಆಕರ್ಷಿಸಿದರು. ಅದುವರೆಗೂ ಆಲಸ್ಯ, ಮೂಢನಂಬಿಕೆಗಳಲ್ಲಿ ಕಳೆದುಹೋಗಿದ್ದ, ಗುಲಾಮಗಿರಿಗೆ ಒಗ್ಗಿಹೋಗಿದ್ದ ದೊಡ್ಡ ಸಂಖ್ಯೆಯ ಭಾರತೀಯ ತರುಣರಲ್ಲಿ ನವಚೈತನ್ಯ ತುಂಬಿದರು.

ಹಾಗಂತ ವಿವೇಕಾನಂದರು ಕಲ್ಕತ್ತಾದಿಂದ ಷಿಕಾಗೊವರೆಗೆ ಕ್ರಮಿಸಿದ ಹಾದಿ ಸುಲಭದ್ದೇನೂ ಆಗಿರಲಿಲ್ಲ. ಗುರು ರಾಮಕೃಷ್ಣರ ಆದೇಶ, ಬದಲಾವಣೆ ತರಬೇಕೆಂಬ ಆಶಯ ಅವರ ಕನಸುಗಳನ್ನು ಪೊರೆಯುತ್ತಿತ್ತು. ಭಾರತೀಯ ತತ್ವಶಾಸ್ತ್ರ, ವೇದಾಂತದ ಜೊತೆಗೆ ಜಗತ್ತಿನ ಇತರ ಮತಪಂಥ ಕುರಿತ ಶಿಕ್ಷಣಕ್ಕಾಗಿ ಸಂಸ್ಥೆಯೊಂದನ್ನು ಸ್ಥಾಪಿಸಬೇಕು, ದುರ್ಬಲರಿಗೆ ಹೆಗಲು ಕೊಡುವ ತರುಣ ಪಡೆಯೊಂದನ್ನು ಕಟ್ಟಬೇಕು.

ಧರ್ಮದ ಚೌಕಟ್ಟು ಉಳಿಸಿಕೊಂಡೇ ಅನಿಷ್ಟ ಪದ್ಧತಿಗಳನ್ನು ನಿವಾರಿಸಿ ಸುಧಾರಣೆ ತರಬೇಕು ಎಂಬುದು ವಿವೇಕಾನಂದರ ಕನಸಾಗಿತ್ತು. ವಿಶ್ವಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮವನ್ನು ಪ್ರತಿನಿಧಿಸುವುದರ ಜೊತೆ ತಮ್ಮ ಯೋಜನೆಗಳಿಗೆ ಅಗತ್ಯವಿದ್ದ ಸಂಪನ್ಮೂಲ ಕ್ರೋಡೀಕರಣವನ್ನು ಧ್ಯೇಯವಾಗಿಸಿಕೊಂಡು ವಿವೇಕಾನಂದ ಅಮೆರಿಕದ ಹಾದಿ ಹಿಡಿದರು.

ಆದರೆ ಅಮೆರಿಕದಲ್ಲಿ ಅನೇಕ ಕಹಿ ಅನುಭವಗಳಾದವು. ಆ ಬಗ್ಗೆ 1893ರ ಆಗಸ್ಟ್ 20ರಂದು ಮೆಸಾಚುಸೆಟ್ಸ್‌ನಿಂದ ತಮ್ಮ ಒಡನಾಡಿ ಅಳಸಿಂಗ ಪೆರುಮಾಳರಿಗೆ ಪತ್ರ ಬರೆದಿದ್ದರು. ‘ಇಲ್ಲಿ ನನ್ನ ಖರ್ಚು ವಿಪರೀತ, ನೀನು ನೂರ ಎಪ್ಪತ್ತು ಪೌಂಡ್ ನೋಟುಗಳು ಮತ್ತು ಒಂಬತ್ತು ಪೌಂಡ್ ನಾಣ್ಯಗಳನ್ನು ಹೊಂದಿಸಿಕೊಟ್ಟಿದ್ದು ನಿನಗೆ ನೆನಪಿರಬಹುದು. ಈಗ ಅದು ನೂರಮೂವತ್ತು ಪೌಂಡಿಗೆ ಇಳಿದಿದೆ. ನಾನು ಇಂಡಿಯಾದಿಂದ ಹೊರಡುವುದಕ್ಕೆ ಮುಂಚೆ ಕಟ್ಟಿದ್ದ ಸವಿಗನಸುಗಳೆಲ್ಲಾ ಈಗ ಮಾಯವಾಗಿವೆ. ಈ ದೇಶಬಿಟ್ಟು ಭಾರತಕ್ಕೆ ಮರಳಬೇಕೆಂದು ನೂರು ಸಲ ಮನಸ್ಸು ಮಾಡಿದೆ.

ಈಗ ಹೋಗುವುದಿಲ್ಲ ಎಂದು ಶಪಥ ಮಾಡಿರುವೆನು. ಇಲ್ಲಿನ ಚಳಿಯಿಂದ ಪಾರಾಗಲು ಬೆಚ್ಚಗಿನ ಬಟ್ಟೆಯ ಅವಶ್ಯಕತೆ ಇದೆ. ಅದಕ್ಕೆ ಸ್ವಲ್ಪ ಹಣದ ವ್ಯವಸ್ಥೆ ಮಾಡಲು ಸಾಧ್ಯವೇ’ ಎಂದು ವಿವೇಕಾನಂದ ವಿನಂತಿಸಿಕೊಂಡಿದ್ದರು.

ಜನಾಂಗೀಯ ನೆಲೆಯ ದ್ವೇಷ, ಅಪಹಾಸ್ಯ ಅಮೆರಿಕದಲ್ಲಿ ದಟ್ಟವಾಗಿದ್ದ ಕಾಲಘಟ್ಟ ಅದು. ಭಾರತೀಯ ಉಡುಗೆಯ ಸಂತನೊಬ್ಬ ಅನೇಕ ರೀತಿಯ ಅಪಮಾನಗಳನ್ನು ಎದುರಿಸಬೇಕಿತ್ತು. ವಿವೇಕಾನಂದರ ಪೋಷಾಕನ್ನು ನೋಡಿ ಜನ ನಗುತ್ತಿದ್ದರು. ಈ ಅನುಭವಗಳನ್ನು ಪತ್ರದ ಮೂಲಕ ಭಾರತದ ಸ್ನೇಹಿತರೊಂದಿಗೆ ವಿವೇಕಾನಂದ ಹಂಚಿಕೊಳ್ಳುತ್ತಿದ್ದರು. ಈ ನಡುವೆ ವರದಾಚಾರ್ ಮೂಲಕ ಪ್ರೊಫೆಸರ್ ಜಾನ್ ಹೆನ್ರಿ ರೈಟ್ ಅವರ ಪರಿಚಯ ಆದದ್ದು ಅವರನ್ನು ಷಿಕಾಗೊ ವಿಶ್ವಧರ್ಮ ಸಮ್ಮೇಳನದ ತನಕ ಕರೆದೊಯ್ದಿತು.

ವಿಶ್ವಧರ್ಮ ಸಮ್ಮೇಳನ ಕುರಿತ ಅನುಭವವನ್ನು ವಿವೇಕಾನಂದರು ತಮ್ಮ ಭಾರತದ ಒಡನಾಡಿಗಳೊಂದಿಗೆ ಹಂಚಿಕೊಂಡಿದ್ದರು. 1893ರ ನವೆಂಬರ್ 2ರಂದು ಪೆರುಮಾಳರಿಗೆ ಬರೆದ ಪತ್ರದಲ್ಲಿ ‘ಸಮ್ಮೇಳನದ ಆರಂಭಕ್ಕೂ ಮುನ್ನ ನಮ್ಮನ್ನು ಒಂದು ದೊಡ್ಡ ಮೆರವಣಿಗೆಯಲ್ಲಿ ಕರೆತಂದರು. ಬ್ರಹ್ಮಸಮಾಜದ ಮಜುಂದಾರ್, ಬೊಂಬಾಯಿಯಿಂದ ಬಂದ ನಗರ್ಕರ್, ಥಿಯಾಸಫಿ ಪ್ರತಿನಿಧಿಯಾಗಿ ಅನಿಬೆಸೆಂಟ್ ಮತ್ತು ಚಕ್ರವರ್ತಿ ಇದ್ದರು. ಹುಟ್ಟಿದಾರಭ್ಯ ಬಹಿರಂಗ ಸಭೆಗಳಲ್ಲಿ ಮಾತನಾಡದ ನಾನು ಈ ವಿದ್ವತ್ ಮಂಡಳಿಯ ಎದುರಿಗೆ ಉಪನ್ಯಾಸ ಕೊಡುವುದು ಎಂದರೇನು! ನನ್ನ ಎದೆ ಕಂಪಿಸುತ್ತಿತ್ತು. ನಾಲಿಗೆ ಒಣಗಿತು.

ಬೆಳಿಗ್ಗೆ ಮಾತನಾಡಲು ಧೈರ್ಯ ಬರಲಿಲ್ಲ. ಮಜುಂದಾರರು ಸೊಗಸಾಗಿ ಮಾತನಾಡಿದರು. ಚಕ್ರವರ್ತಿಯವರದ್ದು ಅದಕ್ಕಿಂತ ಸೊಗಸಾಗಿತ್ತು. ಅವರೆಲ್ಲ ಭಾಷಣದೊಂದಿಗೆ ಸಿದ್ಧವಾಗಿ ಬಂದಿದ್ದರು. ನನ್ನ ಹತ್ತಿರ ಏನೂ ಇರಲಿಲ್ಲ. ಸರಸ್ವತಿಗೆ ನಮಿಸಿ ಮುಂದೆ ಹೋದೆ. ಮಾರನೆಯ ದಿನ ಎಲ್ಲ ವೃತ್ತಪತ್ರಿಕೆಗಳೂನನ್ನ ಭಾಷಣವೇ ಎಲ್ಲಕ್ಕಿಂತ ಉತ್ತಮವಾದುದೆಂದು ಕೊಂಡಾಡಿದವು. ‘ಮೂಕಂ ಕರೋತಿ ವಾಚಾಲಂ’ ಎಂಬ ಮಾತು ಸತ್ಯ’ ಎಂಬುದಾಗಿ ವಿವೇಕಾನಂದ ವಿವರಿಸಿದ್ದರು.

ಷಿಕಾಗೊ ಸಮ್ಮೇಳನಕ್ಕೆ ವಿವೇಕಾನಂದರನ್ನು ಎತ್ತಿ ಹಿಡಿಯಬೇಕೆಂಬ ಆಶಯ ಇರಲಿಲ್ಲ. 1895ರ ಜ. 11ರಂದು ಷಿಕಾಗೊನಿಂದ ಬಿ.ಜಿ. ನರಸಿಂಹ ಆಚಾರ್ ಅವರಿಗೆ ಬರೆದ ಪತ್ರದಲ್ಲಿ ‘ವಿಶ್ವಧರ್ಮ ಸಮ್ಮೇಳನವನ್ನು ಏರ್ಪಡಿಸಿದ್ದು ಕ್ರೈಸ್ತ ಧರ್ಮವು ಉಳಿದ ಎಲ್ಲಾ ಧರ್ಮಗಳಿಗಿಂತಲೂ ಶ್ರೇಷ್ಠ ಎಂಬುದನ್ನು ಜಗತ್ತಿಗೆ ತೋರಿಸುವುದಕ್ಕಾಗಿ. ಆದರೂ ತಾತ್ವಿಕ ನೆಲೆಗಟ್ಟನ್ನುಳ್ಳ ಹಿಂದೂ ಧರ್ಮ ತನ್ನ ಸ್ಥಾನ ಕಾಪಾಡಿಕೊಂಡಿತು. ಬಾಸ್ಟನ್ ನಗರವನ್ನು ಅಮೆರಿಕದ ಮೆದುಳು ಎಂತಲೂ ನ್ಯೂಯಾರ್ಕ್ ಅನ್ನು ಈ ದೇಶದ ಹಣದ ಥೈಲಿಯಂತಲೂ ಕರೆಯಬಹುದು. ಷಿಕಾಗೊ ಬಳಿಕ ಈ ಎರಡೂ ನಗರಗಳಲ್ಲೂ ನನ್ನ ಜಯ ಸಾಧಾರಣಕ್ಕಿಂತ ಮೇಲಾಗಿದೆ. ಕೆಲಸದ ಆರಂಭದಲ್ಲಿ ಒಂದು ಗದ್ದಲ ಅವಶ್ಯವಿತ್ತು. ಅದನ್ನು ನಮಗೆ ಬೇಕಾದುದಕ್ಕಿಂತ ಹೆಚ್ಚು ಪಡೆದದ್ದಾಯಿತು’ ಎಂದು ಬರೆದಿದ್ದರು.

ಹೀಗೆ ವಿವೇಕರು ತಮ್ಮ ಮಾತಿನ ಮೂಲಕ ಉಂಟು ಮಾಡಿದ ಸಂಚಲನ, ಅವರನ್ನು ಪ್ರಸಿದ್ಧಿಯ ಶಿಖರಕ್ಕೊಯ್ದಿತು. ವೇದಾಂತ ಕುರಿತ ಅವರ ಭಾಷಣ, ಉಪನ್ಯಾಸಗಳಿಗೆ ಜನ ತೆರೆದುಕೊಂಡರು. ಸಾಕಷ್ಟು ಕಾಣಿಕೆ ಬರತೊಡಗಿತು. ಈ ಬಗ್ಗೆ ಅಳಸಿಂಗರಿಗೆ ಪತ್ರ ಬರೆದ ವಿವೇಕಾನಂದ ‘ನನಗೆ ಈಗ ಯಾವ ಕೊರತೆಯೂ ಇಲ್ಲ. ಇಲ್ಲಿ ಎಲ್ಲವೂ ಸಿಕ್ಕುತ್ತದೆ. ಯುರೋಪ್ ದೇಶಕ್ಕೆ ಹೋಗಲು ಬೇಕಾದ ದುಡ್ಡು ಇಲ್ಲೇ ಸಿಕ್ಕುತ್ತದೆ’ ಎಂದಿದ್ದರು.

ಬಹುಶಃ ವಿವೇಕಾನಂದರು ಅಮೆರಿಕನ್ನರಿಗೆ ಹೆಚ್ಚು ಇಷ್ಟವಾಗಿದ್ದೇ ಪಾಂಡಿತ್ಯದೊಂದಿಗೆ ಅವರಲ್ಲಿದ್ದ ಸರಳತೆ ಮತ್ತು ಎಲ್ಲರೊಂದಿಗೂ ಹೊಂದಿಕೊಂಡು ಹೋಗುವ ಗುಣ ಸ್ವಭಾವದಿಂದ. ವಿವೇಕಾನಂದರಿಗೆ ಷಿಕಾಗೊದಲ್ಲಿ ಆಶ್ರಯ ನೀಡಿದ್ದ ಜಾನ್ ಲಿಯಾನ್ಸ್ ಅವರ ಮೊಮ್ಮಗಳು ಕಾರ್ನೇಲಿಯ ‘ಆಗ ನನಗಿನ್ನೂ 6 ವರ್ಷ, ಸ್ವಾಮೀಜಿ ನನ್ನನ್ನು ತಮ್ಮ ತೊಡೆಯ ಮೇಲೆ ಕೂರಿಸಿಕೊಂಡು ಕತೆ ಹೇಳುತ್ತಿದ್ದರು. ಪ್ರವಚನ ಮುಗಿಸಿ ಬಂದ ಮೇಲೆ ಅಲ್ಲಿ ನೀಡಿದ್ದ ಹಣವನ್ನು ನನ್ನ ಅಜ್ಜಿಯ ಮುಂದೆ ಹರವಿ ಪುಟ್ಟ ಮಗುವಿನಂತೆ ಎಣಿಸುತ್ತಿದ್ದರು. ಸಂಗ್ರಹವಾದ ಹಣವನ್ನು ಭಾರತದಲ್ಲಿ ಅವರು ಕೈಗೊಳ್ಳಬೇಕಿದ್ದ ಯೋಜನೆಗಳಿಗೆ ಕೂಡಿಡುತ್ತಿದ್ದರು’ ಎಂಬುದಾಗಿ ದಾಖಲಿಸಿದ್ದಾರೆ.

ವಿವೇಕಾನಂದರು ಅಮೆರಿಕದಿಂದ ಮರಳುವ ಹೊತ್ತಿಗೆ ಅಮೆರಿಕದ ಮಹಿಳೆಯರ ಬಗ್ಗೆ ಅವರಲ್ಲಿದ್ದ ಕೆಲವು ತಪ್ಪು ಭಾವನೆಗಳು ಕರಗಿದ್ದವು. ‘ಅಮೆರಿಕದ ಮಹಿಳೆಯರು ಸ್ವೇಚ್ಛೆಯಿಂದ ವರ್ತಿಸುವವರು, ಗಾಂಭೀರ್ಯ ತ್ಯಜಿಸಿ ಕೌಟುಂಬಿಕ ಶಾಂತಿ, ಸೌಹಾರ್ದ ಹಾಳು ಮಾಡಿಕೊಂಡವರು ಎಂಬ ಭಾವನೆ ಇತ್ತು. ಆದರೆ ಈ ಅಪರಿಚಿತನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಸ್ವಂತ ಮಗನಂತೆ, ಸಹೋದರನಂತೆ ನೋಡಿಕೊಂಡರು. ಅವರ ಪಾದ್ರಿಗಳು ‘ಇವನೊಬ್ಬ ಅಪಾಯಕರ ಕ್ರೈಸ್ತಬಾಹಿರ, ಇವನನ್ನು ತ್ಯಜಿಸಿ’ ಎಂದರೂ ಆ ಮಹಿಳೆಯರು ಕೇಳಲಿಲ್ಲ. ಅವರಿಗೆ ನನ್ನ ಕೃತಜ್ಞತೆಯನ್ನು ತೋರಲು ನೂರು ಜನ್ಮ ಸಾಲವು’ ಎಂದು ಅಳಸಿಂಗರಿಗೆ ಬರೆದ ಪತ್ರದಲ್ಲಿ ವಿವೇಕಾನಂದ ಹೇಳಿಕೊಂಡಿದ್ದರು.

ಹೀಗೆ ತಮ್ಮ ಅಮೆರಿಕ ವಾಸದ ಸುಖ, ದುಃಖ, ಅಪಮಾನ, ಅಳುಕು ಎಲ್ಲವನ್ನೂ ಮುಚ್ಚುಮರೆ ಇಲ್ಲದೇ ಒಡನಾಡಿಗಳಿಗೆ ತಿಳಿಸುತ್ತಿದ್ದ ವಿವೇಕಾನಂದ, ಭಾರತಕ್ಕೆ ಮರಳಿದ ನಂತರ ತಮ್ಮ ನೇರ, ನಿಷ್ಠುರ ನುಡಿಯನ್ನು ಮುಂದುವರೆಸಿದರು. ಅದಾಗಲೇ ಲೋಕಮಾನ್ಯ ತಿಲಕರ ಪ್ರಭಾವ ವಿವೇಕಾನಂದರ ಮೇಲೆ ಆಗಿತ್ತು. ವಿವೇಕರ ಬಲೋಪಾಸನೆ ಹಾಗೂ ಗುಲಾಮಗಿರಿಯಿಂದ ಹೊರಬಾರದೇ ವಿಕಾಸ ಅಸಾಧ್ಯ ಎಂಬ ಚಿಂತನೆ ಭಾರತೀಯ ತರುಣರನ್ನು ಎಬ್ಬಿಸಿತ್ತು.

ವಿವೇಕಾನಂದರು ಸಾಮಾಜಿಕ ಪಿಡುಗುಗಳ ಕುರಿತು ಗಟ್ಟಿದನಿಯಲ್ಲಿ ಮಾತನಾಡಿದರು. 1895ರಲ್ಲಿ ಬ್ರಹ್ಮಾನಂದರಿಗೆ ಬರೆದ ಪತ್ರದಲ್ಲಿ ‘ಇದೀಗ ಹಿಂದೂಧರ್ಮ ಎನಿಸಿರುವುದು ಜ್ಞಾನಮಾರ್ಗವೂ ಅಲ್ಲ, ಭಕ್ತಿಮಾರ್ಗವೂ ಅಲ್ಲ. ‘ಅಸ್ಪೃಶ್ಯತೆ’ಯೇ ಧರ್ಮವೆನಿಸಿಬಿಟ್ಟಿದೆ. ಇನ್ನೊಬ್ಬರ ಉಸಿರಿನ ಸೋಂಕಿನಿಂದಲೇ ಪಾಪಿಗಳಾಗುವವರು ಇತರರನ್ನು ಹೇಗೆ ಶುದ್ಧ ಮಾಡಿಯಾರು? ನಮ್ಮ ಧರ್ಮವಿರುವುದು ಎಲ್ಲಿ? ‘ಮುಟ್ಟಬೇಡ’ ಎಂಬ ಪದದಲ್ಲಿ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ಶ್ರೀಮಂತರಿಗೆ ಸಲಾಮು ಸಲ್ಲಿಸುತ್ತ ಅವರ ಬೆಂಬಲವನ್ನು ಆಶ್ರಯಿಸಿದ್ದರಿಂದ ನಮ್ಮ ದೇಶದ ಎಷ್ಟೋ ಧರ್ಮಪೀಠಗಳೂ ವಿರಕ್ತಪಂಥಗಳೂ ತೇಜೋಹೀನವಾಗಿವೆ ಎಂಬುದು ವಿವೇಕರ ಅಭಿಪ್ರಾಯವಾಗಿತ್ತು.

ಯಜ್ಞೇಶ್ವರ ಭಟ್ಟಾಚಾರ್ಯರಿಗೆ ಬರೆದ ಪತ್ರದಲ್ಲಿ ‘ನನ್ನ ಮಕ್ಕಳೇ, ನಿಮಗೆ ಯಾವ ಧರ್ಮವೂ ಬೇಡ. ಶುದ್ಧ ಚಾರಿತ್ರ್ಯ, ಧೈರ್ಯ ಇವೆರಡೇ ಸಾಕು. ಹೇಡಿತನ ಬೇಡ, ಪಾಪ ಬೇಡ, ದುಷ್ಕೃತ್ಯ ಬೇಡ, ದೌರ್ಬಲ್ಯ ಬೇಡ. ಈ ಹೀನಗುಣಗಳಿಲ್ಲದೆ ಇದ್ದರೆ ಉಳಿದ ಶೀಲಗಳೆಲ್ಲವೂ ಬರುವುವು’ ಎಂದು ಸೂಚಿಸಿದ್ದರು.

ಆದರೆ ಸಮಾಜ ಸುಧಾರಣೆ ಎಂಬುದು ಧರ್ಮವನ್ನೇ ನಾಶಗೊಳಿಸುವ ಪ್ರಕ್ರಿಯೆಯಾಗಬಾರದು ಎಂಬ ಸ್ಪಷ್ಟತೆ ಅವರಲ್ಲಿತ್ತು. ‘ಭರತವರ್ಷದಲ್ಲಿ ಪುರೋಹಿತರ ದಬ್ಬಾಳಿಕೆಗೂ, ದೇಶದ ಹೀನಸ್ಥಿತಿಗೂ ಧರ್ಮವೇ ಕಾರಣವೆಂದು ಸಮಾಜ ಸುಧಾರಕರು ತಪ್ಪು ತಿಳಿದು ಧರ್ಮದ ತಳಹದಿಯನ್ನೇ ಕೀಳಲು ಪ್ರಯತ್ನಪಟ್ಟರು. ಇದರ ಫಲಿತಾಂಶವೇನಾಯಿತು? ಉದ್ದೇಶದ ಅಪಜಯ! ಇಂದಿನ ಹೀನ ಸ್ಥಿತಿಯನ್ನು ನಾವು ಹೋಗಲಾಡಿಸಬೇಕು. ಧರ್ಮವನ್ನು ನಾಶ ಮಾಡುವುದರಿಂದ ಅಲ್ಲ, ಹಿಂದೂ ಧರ್ಮದ ಉದಾತ್ತ ಉಪದೇಶಗಳನ್ನು ಅನುಷ್ಠಾನಕ್ಕೆ ತರುವುದರಿಂದ ಮತ್ತು ಹಿಂದೂ ಧರ್ಮದ ವೈಚಾರಿಕ ಬೆಳವಣಿಗೆಯಾದ ಬೌದ್ಧಧರ್ಮದ ಅದ್ಭುತ ಸಹಾನುಭೂತಿಯನ್ನು ಜೊತೆಗೆ ಬೆರೆಸುವುದರಿಂದ’ ಎಂಬುದು ವಿವೇಕಾನಂದರ ನಿಲುವಾಗಿತ್ತು.

ವ್ಯಕ್ತಿಯ ಸರ್ವಾಂಗೀಣ ವಿಕಾಸಕ್ಕೆ ಪೂರಕವಾಗದ್ದು ಶಿಕ್ಷಣವೇ ಅಲ್ಲ ಎಂದು ವಿವೇಕಾನಂದ ವಾದಿಸುತ್ತಿದ್ದರು.

‘ಒಬ್ಬ ವ್ಯಕ್ತಿ ಯಾವುದೋ ಪರೀಕ್ಷೆ ಮುಗಿಸಿದ್ದಾನೆ ಮತ್ತು ಚೆನ್ನಾಗಿ ಭಾಷಣ ಮಾಡಬಲ್ಲ ಎಂಬಷ್ಟರಿಂದ ಆತನನ್ನು ಸುಶಿಕ್ಷಿತನೆಂದು ನೀವು ಪರಿಗಣಿಸಿದ್ದೀರಿ. ಆದರೆ ಯಾವ ಕಲಿಕೆ ಒಬ್ಬ ಸಾಮಾನ್ಯ ಮನುಷ್ಯನನ್ನು ಜೀವನದ ದೈನಂದಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಜ್ಜುಗೊಳಿಸುವುದಿಲ್ಲವೋ, ಒಳ್ಳೆಯ ಚಾರಿತ್ರ್ಯವನ್ನು ಬೆಳೆಸಲಾರದೋ, ಉದಾರತೆಯನ್ನು ಅಭ್ಯಾಸ ಮಾಡಿಸಲಾರದೋ, ಧೈರ್ಯಶಾಲಿಯಾಗಿಸಲಾರದೋ ಅಂತಹ ಕಲಿಕೆಯಿಂದ ಪ್ರಯೋಜನವಾದರೂ ಏನು’ ಎಂದು ವಿವೇಕಾನಂದ ಪ್ರಶ್ನಿಸಿದ್ದರು. ಆಧ್ಯಾತ್ಮಿಕತೆಯ ಹೆಸರಿನಲ್ಲಿ ನಿಷ್ಕ್ರಿಯತೆಗೆ ಒಳಗಾಗುವ ಪ್ರವೃತ್ತಿಯ ಬಗ್ಗೆ ವಿವೇಕಾನಂದ ಎಚ್ಚರಿಸಿದ್ದರು.

‘ಬಹಳ ಕಾಲದಿಂದ ಗೋಳಾಡಿದ್ದು ಆಗಿದೆ. ಇನ್ನಾದರೂ ‘ಮನುಷ್ಯ’ರಾಗಿ ನಿಮ್ಮ ಕಾಲ ಮೇಲೆ ನೀವು ನಿಲ್ಲಿರಿ’ ಎಂಬುದು ಅವರ ಸಂದೇಶವಾಗಿತ್ತು. ‘ಈಶ್ವರನಲ್ಲಿ ವಿಶ್ವಾಸ ಇರಿಸದವನು ನಾಸ್ತಿಕ ಎಂಬುದು ಹಿಂದಿನವರ ಪರಾಮರ್ಶೆಯಾಗಿತ್ತು. ಆದರೆ ಇಂದಿನ ಧರ್ಮ ಹೇಳುವುದು ಯಾರು ತನ್ನಲ್ಲಿಯೇ ವಿಶ್ವಾಸವನ್ನು ಕಳೆದುಕೊಂಡಿದ್ದಾನೋ ಅವನು ನಾಸ್ತಿಕ’ ಎಂದು ಜನಮಾನಸದಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ವಿವೇಕಾನಂದ ಮಾಡಿದರು.

ಕೆ.ಎಂ. ಮುನ್ಶಿಯವರು ವಿವೇಕಾನಂದರ ಕುರಿತು ‘ಆಧ್ಯಾತ್ಮಿಕ ಹಿತ, ಜಗತ್ತಿನ ಹಿತ, ರಾಷ್ಟ್ರದ ಹಿತ- ಈ ಮೂರೂ ಆಧಾರಭೂತ ಲಕ್ಷ್ಯಗಳನ್ನು ಸಾಧಿಸಿ ತೋರಿದವರು ವಿವೇಕಾನಂದ’ ಎಂದಿದ್ದರು. ಮುಖ್ಯವಾಗಿ, ಪರಕೀಯರ ಆಕ್ರಮಣದಿಂದ ಆತ್ಮಸ್ಥೈರ್ಯ ಕಳೆದುಕೊಂಡ ಭಾರತಕ್ಕೆ ತಲೆಯೆತ್ತಿ ನಿಲ್ಲಬೇಕೆಂಬ ಪಾಠವನ್ನು ವಿವೇಕಾನಂದ ಹೇಳಿದರು.

‘ಹೇ ದೇವ, ಮಾನವನು ಮತ್ತೊಬ್ಬ ಮಾನವನಿಗೆ ಎಂದು ಸಹೋದರನಾಗುತ್ತಾನೆ?’ ಎಂಬುದು ಕೊನೆಯವರೆಗೂ ವಿವೇಕಾನಂದರ ನಿಟ್ಟುಸಿರಿನ ಉದ್ಗಾರವಾಗಿತ್ತು. ಕನಸಿನ ಭಾರತ ಕಟ್ಟಲು ಉಕ್ಕಿನ ತೋಳಿನ ತುಂಬು ಉತ್ಸಾಹದ ಯುವಕರನ್ನು ವಿವೇಕಾನಂದ ಅಪೇಕ್ಷಿಸಿದ್ದರು. ಇದೀಗ ಜಗತ್ತಿನಲ್ಲೇ ಹೆಚ್ಚಿನ ಸಂಖ್ಯೆಯ ಯುವಕರು ನಮ್ಮ ದೇಶದಲ್ಲಿದ್ದಾರೆ ಎಂದು ಹೆಮ್ಮೆಪಟ್ಟುಕೊಳ್ಳುವ ಕಾಲಘಟ್ಟದಲ್ಲಿ ನಾವಿದ್ದೇವೆ. ಆದರೆ ವಿವೇಕಾನಂದ ಬಯಸಿದ್ದ ಯುವಕರು ಎಷ್ಟಿದ್ದಾರು? ಒಟ್ಟಿನಲ್ಲಿ, ಸಮಾಜವನ್ನು ಜಾಗೃತವಾಗಿಡಲು, ಓರೆಕೋರೆ ತಿದ್ದಲು, ಆಲಸ್ಯಕ್ಕೆ ಸೋಲದಿರಲು, ಮನೋಸ್ಥೈರ್ಯ ವೃದ್ಧಿಸಿಕೊಳ್ಳಲು ವಿವೇಕಾನಂದರನ್ನು ನಾವು ಪದೇ ಪದೇ ನೆನೆಯುತ್ತಲೇ ಇರಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.