1941, ಡಿಸೆಂಬರ್ 7, ರವಿವಾರ. ಅಂದು ನೇಸರ ನಭಕ್ಕೆ ಏರುತ್ತಿದ್ದಾಗಲೇ, ಜಪಾನಿನ ಯುದ್ಧ ಹಕ್ಕಿಗಳು ಹವಾಯ್ ದ್ವೀಪದ ಅಂಬರದ ತುಂಬಾ ಮಿಂಚಿನ ವೇಗದಲ್ಲಿ ಸಂಚರಿಸುತ್ತಾ ಸಿಡಿಗುಂಡುಗಳನ್ನು ಸುರಿಯುತ್ತಿದ್ದವು. ನಿಮಿಷಗಳು ಉರುಳಿದ ಹಾಗೆ, ದೈತ್ಯ ಹಡಗುಗಳು ಮುಳುಗಿದವು, ಸೈನಿಕರು ನೀರುಪಾಲಾದರು. ನೌಕಾದಳದ ಟ್ಯಾಂಕರ್‌ಗಳು, ಯುದ್ಧ ವಿಮಾನಗಳು ಭಸ್ಮವಾದವು. ಅದರ ಶಾಖ ಶ್ವೇತಭವನಕ್ಕೆ ತಟ್ಟಲು ಹೆಚ್ಚು ಸಮಯ ಹಿಡಿಯಲಿಲ್ಲ.

‘ಅಮೆರಿಕದ ಮೇಲೆ ಜಪಾನ್ ದಾಳಿ ಮಾಡಿದೆ’ ಎಂಬ ಆತಂಕದ ಕರೆ ‘ಟ್ರಿನ್ ಟ್ರಿನ್’ ಸದ್ದು ಮಾಡಿದಾಗ, ಅಮೆರಿಕದ ಅಧ್ಯಕ್ಷ ಫ್ರಾಂಕ್ಲಿನ್ ರೂಸ್ವೆಲ್ಟ್ ಶ್ವೇತಭವನದ ಎರಡನೇ ಮಹಡಿಯಲ್ಲಿ ತಮ್ಮ ಅಂಚೆ ಚೀಟಿ ಸಂಗ್ರಹದಿಂದ ಒಂದೊಂದೇ ಅಂಚೆ ಚೀಟಿ ಹೆಕ್ಕಿ ಪುಸ್ತಕವೊಂದಕ್ಕೆ ಅಂಟಿಸುತ್ತಿದ್ದರು. ಆನಂತರದ ಇಪ್ಪತ್ನಾಲ್ಕು ಗಂಟೆ, ಇಪ್ಪತ್ತನೆಯ ಶತಮಾನದ ಇತಿಹಾಸದಲ್ಲಿ ಮಹತ್ವದ ಅಧ್ಯಾಯವಾಯಿತು. ಭವಿಷ್ಯದ ಕರಾಳ ಘಟನೆಗಳಿಗೆ ಕಪ್ಪುಶಾಯಿಯಲ್ಲಿ ಮುನ್ನುಡಿ ಬರೆಯಿತು.

ಇನ್ನು ನಾಲ್ಕು ದಿನ ಕಳೆದರೆ, ಪರ್ಲ್ ಹಾರ್ಬರ್ ಮೇಲೆ ಜಪಾನ್ ದಾಳಿ ನಡೆಸಿ 75 ವರ್ಷ ತುಂಬುತ್ತದೆ. ಆ ದಾಳಿ ಅಮೆರಿಕದ ನೌಕಾದಳದ ನಿರ್ಲಕ್ಷ್ಯದಿಂದ ಘಟಿಸಿದ್ದೇ? ಗುಪ್ತಚರ ಇಲಾಖೆಯ ವೈಫಲ್ಯವೇ? ಎರಡನೇ ವಿಶ್ವಯುದ್ಧಕ್ಕೆ ಧುಮುಕಲು ರೂಸ್ವೆಲ್ಟ್ ಆಡಳಿತ ಇಂತಹದ್ದೊಂದು ದಾಳಿಯಾಗಲಿ ಎಂದು ಕಾದು ಕುಳಿತಿತ್ತೇ? ಅಮೆರಿಕದ ಪ್ರಚೋದನೆಯಿಂದಲೇ ಜಪಾನ್ ದಾಳಿ ಮಾಡಿತೆ? ಜಪಾನಿನ ವಿಸ್ತರಣಾ ದಾಹ, ಕೊನೆಗೆ ಅದರ ಒಡಲನ್ನೇ ಸುಟ್ಟಿತೆ ಎಂಬ ಪ್ರಶ್ನೆಗಳು ಹಾಗೆಯೇ ಉಳಿದುಬಿಟ್ಟಿವೆ. ಪರ್ಲ್ ಹಾರ್ಬರ್ ದಾಳಿಗೆ ನಾಟಕೀಯ ಮುಖವೂ ಇದೆ.

‘ABCD’ ನಮ್ಮ ವೈರಿಗಳು ಎಂಬುದು ಜಪಾನ್ ತಲೆ ಹೊಕ್ಕಿ ಹಲವು ವರ್ಷಗಳೇ ಆಗಿದ್ದವು. ಒಂದೊಮ್ಮೆ ಇಂಗ್ಲಿಷ್, ಜಪಾನ್‌ನ ಒಳಹೊಕ್ಕಿದ್ದರೆ A for Americans, B for British, C for Chinese, D for Dutch and E for Enemies ಎಂದು ಅಲ್ಲಿನ ಮಕ್ಕಳು ಆಂಗ್ಲ ವರ್ಣಮಾಲೆಯನ್ನು ಬಾಯಿಪಾಠ ಮಾಡುತ್ತಿದ್ದರೇನೊ. ಅದು ಸರ್ವಾಧಿಕಾರ, ಆಕ್ರಮಣಕಾರಿ ಮನಸ್ಥಿತಿ ಜಗತ್ತಿನ ವಿವಿದೆಢೆ ಗಟ್ಟಿಗೊಳ್ಳುತ್ತಿದ್ದ ಕಾಲ. ಹಿಟ್ಲರ್ ಸೇನೆ ಅದಾಗಲೇ ಯುರೋಪಿನ ಹಲವು ಭಾಗಗಳನ್ನು ತನ್ನದಾಗಿಸಿಕೊಳ್ಳಲು ಮುಂದಡಿ ಇಟ್ಟಿತ್ತು. ದ್ವೀಪ ರಾಷ್ಟ್ರ ಜಪಾನಿಗೆ, ಚೀನಾದೊಂದಿಗೆ ಮೈತಾಗಿಸಿಕೊಂಡು ಹಿರಿದಾಗುವ ಆಸೆ.

ಏಷ್ಯಾದಲ್ಲಿನ ಬ್ರಿಟಿಷ್ ಮತ್ತು ಡಚ್ ವಸಾಹತುಗಳ ಮೇಲೆ ದಾಳಿ ಮಾಡುವಾಗ, ಸ್ಥಳೀಯರಿಗೆ ‘ನಿಮ್ಮನ್ನು ಸ್ವತಂತ್ರಗೊಳಿಸುತ್ತೇವೆ’ ಎಂಬ ಕನಸು ತುಂಬುತ್ತಿತ್ತು. ಸಾಮಾನ್ಯವಾಗಿ, 1939ರ ಸೆಪ್ಟೆಂಬರ್ 1ರಂದು ಜರ್ಮನಿ, ಪೋಲೆಂಡ್ ಮೇಲೆ ದಂಡೆತ್ತಿ ಹೋದದ್ದನ್ನು ಎರಡನೇ ವಿಶ್ವಯುದ್ಧದ ಆರಂಭ ಎಂದು ಗುರುತಿಸಲಾಗುತ್ತದೆ. ಆದರೆ 1937ರ ಹೊತ್ತಿಗೇ ಜಪಾನ್ ಏಷ್ಯಾದ ಬಲಾಢ್ಯ ರಾಷ್ಟ್ರವಾಗಿ ಹೊರಹೊಮ್ಮಬೇಕು ಎಂಬ ಲೆಕ್ಕಾಚಾರ ಇಟ್ಟುಕೊಂಡು ನೆರೆರಾಷ್ಟ್ರಗಳೊಂದಿಗೆ ತಂಟೆ ತೆಗೆದಿತ್ತು.

ಜಪಾನ್ ಸೆಣಸಾಟ ಕೇವಲ ಚೀನಾದೊಟ್ಟಿಗೆ ಇದ್ದಿದ್ದರೆ, ಅಮೆರಿಕ ಮೂಗು ತೂರಿಸುವ ಪ್ರಮೇಯ ಇರುತ್ತಿರಲಿಲ್ಲ. ಆದರೆ 1940ರಲ್ಲಿ ಜಪಾನ್, ಜರ್ಮನಿ, ಇಟಲಿ ಟ್ರೈಪಾರ್ಟೈಟ್ ಒಪ್ಪಂದ (Tripartite Pact) ಮಾಡಿಕೊಂಡವು. ಈ ಒಪ್ಪಂದ ಆಗುತ್ತಿದ್ದಂತೆಯೇ ಅಮೆರಿಕ ತುಟಿಕಚ್ಚಿತು. 1939-41ರ ಅವಧಿಯಲ್ಲಿ ಜರ್ಮನಿ ಯುರೋಪಿನ ಬಹುಭಾಗವನ್ನು ಆಕ್ರಮಿಸಿಕೊಂಡು, ಆ ದೇಶಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿತ್ತು. ಜರ್ಮನಿಯ ವಿಸ್ತರಣಾ ದಾಹಕ್ಕೆ ತಡೆಯೊಡ್ಡಲು ನಿಂತಿದ್ದ ನೆದರ್ಲೆಂಡ್, ಇಂಗ್ಲೆಂಡ್ ಜೊತೆ ಅಮೆರಿಕ ರಹಸ್ಯ ಒಪ್ಪಂದ ಮಾಡಿಕೊಂಡಿತು. ಆದರೆ ಎರಡನೇ ವಿಶ್ವಯುದ್ಧಕ್ಕೆ ಧುಮುಕುವ ಬಗ್ಗೆ ಅಮೆರಿಕನ್ನರು ವಿರೋಧ ವ್ಯಕ್ತಪಡಿಸಿದ್ದರು.

ಯುದ್ಧದಿಂದ ದೂರ ನಿಲ್ಲೋಣ ಎಂಬ ಧ್ಯೇಯದೊಂದಿಗೆ ‘ಅಮೆರಿಕನ್ ಫಸ್ಟ್’ ಆಂದೋಲನ ಆರಂಭವಾಗಿತ್ತು. ಹಾಗಾಗಿ ಚೀನಾ ಯುದ್ಧ ಸಂಬಂಧ ಜಪಾನ್ ಜೊತೆ ಅಮೆರಿಕ ಮಾತುಕತೆಗೆ ಮುಂದಾಯಿತು. ಅಮೆರಿಕವನ್ನು ಓಲೈಸಲು ಜಪಾನ್ ಹಲವು ಸೂತ್ರಗಳನ್ನು ಮುಂದಿಟ್ಟಿತು. ಆದರೆ ಅಮೆರಿಕ ಒಪ್ಪಿಕೊಳ್ಳಲಿಲ್ಲ. ಜೊತೆಗೆ ಅಮೆರಿಕದ ಅಧ್ಯಕ್ಷ ರೂಸ್ವೆಲ್ಟ್, ‘ತನ್ನ ನೆರೆ ರಾಷ್ಟ್ರಗಳ ಮೇಲೆ ದಾಳಿ ಮಾಡಿದರೆ ಪರಿಣಾಮ ನೆಟ್ಟಗಾಗದು’ ಎಂದು ಜಪಾನಿಗೆ ಎಚ್ಚರಿಸಿದ್ದರು. ಜಪಾನ್ ಯುದ್ಧದಾಹವನ್ನು ತಡೆಯಲು ಆರ್ಥಿಕ, ವಾಣಿಜ್ಯಿಕ ನಿರ್ಬಂಧದ ಅಸ್ತ್ರ ಬಳಸಿದರು. ಮುಖ್ಯವಾಗಿ ಜಪಾನಿಗೆ ಸರಬರಾಜಾಗುತ್ತಿದ್ದ ಯುದ್ಧ ಸಾಮಗ್ರಿ, ಇಂಧನ ನಿಂತಿತು.

ಈ ಕ್ರಮದ ಬೆನ್ನಲ್ಲೇ ಅಮೆರಿಕದ ಗುಪ್ತಚರ ಇಲಾಖೆ, ಅಮೆರಿಕದ ಮೇಲೆ ಜಪಾನ್ ದಾಳಿ ನಡೆಸಬಹುದು ಎಂಬ ಸೂಚನೆ ನೀಡಿತು. ಆದರೆ ಅಮೆರಿಕದ ಸೇನಾ ಅಧಿಕಾರಿಗಳು ‘ಏಷ್ಯನ್ನರು ಯುದ್ಧ ಕೌಶಲದಲ್ಲಿ ಪಶ್ಚಿಮದ ಶ್ವೇತ ವರ್ಣೀಯರಿಗೆ ಸಮವಲ್ಲ’ ಎಂಬ ಪೂರ್ವಗ್ರಹ ಹೊಂದಿದ್ದರು. ಇದರ ಬೆನ್ನಲ್ಲೇ ರೂಸ್ವೆಲ್ಟ್, ಅಮೆರಿಕದ ಸಶಕ್ತ ಪೆಸಿಫಿಕ್ ನೌಕಾದಳವನ್ನು, ಸ್ಯಾನ್ ಡಿಯಾಗೊದಿಂದ ಎಬ್ಬಿಸಿ, ಪರ್ಲ್ ಹಾರ್ಬರ್‌ನಲ್ಲಿ ನೆಲೆಗೊಳ್ಳುವಂತೆ ಮಾಡಿದರು. ‘ನಾವು ಯುದ್ಧಕ್ಕೆ ಸನ್ನದ್ಧ’ ಎಂದು ಜಪಾನಿಗೆ ಬೆದರಿಕೆ ಒಡ್ಡುವ ತಂತ್ರ ಅದಾಗಿತ್ತು. ರೂಸ್ವೆಲ್ಟ್ ಜಪಾನನ್ನು ಪ್ರಚೋದಿಸಲು ಮುಂದಾದರೇ ಎಂಬ ಪ್ರಶ್ನೆ ಮೊಳೆತದ್ದು ಆಗಲೆ. ಅಮೆರಿಕದ ಈ ನಡೆಯಿಂದ ಜಪಾನ್ ಕಳವಳಗೊಂಡಿತು. ಪ್ರತಿದಾಳಿಗೆ ತಂಡ ರಚಿಸಿತು. ಅದರ ಹೊಣೆಯನ್ನು ಯುದ್ಧತಂತ್ರಗಳಲ್ಲಿ ನೈಪುಣ್ಯ ಸಾಧಿಸಿದ್ದ, ಅಮೆರಿಕವನ್ನು ಚೆನ್ನಾಗಿ ಅರಿತಿದ್ದ ಜಪಾನ್ ನೌಕಾದಳದ ಮುಖ್ಯಸ್ಥ ಐಸರೋಕೊ ಯಮಮೋಟೊ ಹೆಗಲಿಗೆ ಹಾಕಿತು.

ಆದರೆ ಅಮೆರಿಕವನ್ನು ಕೆಣಕಿದರೆ ಅಪಾಯ ಎಂಬುದು ಯಮಮೋಟೊ ಅವರಿಗೆ ತಿಳಿದಿತ್ತು. ಆ ಮೊದಲೂ ಯಮಮೋಟೊ, ‘ನಾಜಿ ಜರ್ಮನಿಯೊಂದಿಗೆ ಕೈ ಜೋಡಿಸಿ ಅಮೆರಿಕದ ಕೆಂಗಣ್ಣಿಗೆ ಗುರಿಯಾಗುವುದು ಬೇಡ’ ಎಂಬ ಸಲಹೆಯನ್ನು ಜಪಾನ್ ಪ್ರಭುತ್ವಕ್ಕೆ ನೀಡಿದ್ದರು. ಆದರೆ ಅವರನ್ನು ಅಮೆರಿಕ ಮತ್ತು ಬ್ರಿಟನ್ ದೇಶದ ಬಾಲಬಡುಕ ನಾಯಿ ಎಂದು ಹೀಯಾಳಿಸಲಾಗಿತ್ತು. ಹತ್ಯೆ ಮಾಡುವ ಬೆದರಿಕೆ ಒಡ್ಡಲಾಗಿತ್ತು.

‘ಅಮೆರಿಕದೊಂದಿಗೆ ಯುದ್ಧ ಕೂಡದು ಎಂದು ವಾದಿಸುತ್ತಿದ್ದವನು ನಾನು, ವಿಪರ್ಯಾಸವೆಂದರೆ ಇದೀಗ ಯುದ್ಧದ ರೂಪುರೇಷೆ ತಯಾರಿಸುವ ಹೊಣೆ ನನ್ನ ಹೆಗಲ ಮೇಲಿದೆ’ ಎಂದು ಯಮಮೋಟೊ ತಮ್ಮ ಸ್ನೇಹಿತನಿಗೆ ಪತ್ರ ಬರೆದಿದ್ದರು. ‘ಆಗ್ನೇಯ ಏಷ್ಯಾದಲ್ಲಿನ ಬ್ರಿಟಿಷ್ ವಸಾಹತುಗಳ ಮೇಲೆ ದಾಳಿ ಮಾಡಿದರೆ, ಅಮೆರಿಕ ಯುದ್ಧರಂಗಕ್ಕೆ ಬರುವುದು ಖಚಿತ. ಹಾಗಾಗಿ, ಮೊದಲು ಅಮೆರಿಕದ ಮೇಲೆ ನಾವೇ ಏಕಾಏಕಿ ಶಕ್ತಿಯುತ ದಾಳಿ ನಡೆಸಿದರೆ ಅಮೆರಿಕದ ಆತ್ಮವಿಶ್ವಾಸ ಕುಗ್ಗುತ್ತದೆ. ಚೇತರಿಸಿಕೊಂಡು ಪ್ರತಿದಾಳಿ ನಡೆಸಲು ಸಮಯ ತಗಲುತ್ತದೆ’ ಎಂಬ ಲೆಕ್ಕಾಚಾರದೊಂದಿಗೆ ಯಮಮೋಟೊ ದಾಳಿಯ ಯೋಜನೆ ಸಿದ್ಧಪಡಿಸಿದರು.

ಜಪಾನ್ ಸಮರ ನೀತಿಯ ಪ್ರಕಾರ ಶತ್ರು ಮಲಗಿದ್ದರೂ ಆತನನ್ನು ಎಬ್ಬಿಸಿ ಹತ್ಯೆ ಮಾಡಬೇಕು. ಹಾಗಾಗಿ ಯಮಮೋಟೊ ಅಮೆರಿಕಕ್ಕೆ ಎಚ್ಚರಿಕೆ ನೀಡಿ, 30 ನಿಮಿಷಗಳ ನಂತರ ದಾಳಿ ಮಾಡುವ ಯೋಜನೆ ರೂಪಿಸಿದರು. ‘ಸಂಧಾನದ ಮೂಲಕ ಪೂರ್ವ ಏಷ್ಯಾದಲ್ಲಿ ಸ್ಥಿರತೆ ಸ್ಥಾಪಿಸಲು ಸಾಧ್ಯವಿಲ್ಲ, ಮುಂದೆ ಯಾವುದೇ ಅನಾಹುತ ನಡೆದರೂ ಅದಕ್ಕೆ ಅಮೆರಿಕವೇ ಹೊಣೆ’ ಎಂಬ ಜಪಾನ್ ಸಂದೇಶ ಹೊತ್ತು, ಜಪಾನ್ ರಾಯಭಾರಿ ವಾಷಿಂಗ್ಟನ್ನಿಗೆ ಬಂದರು. ಆದರೆ ಆ ಸಂದೇಶ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಾರ್ಡೆಲ್ ಹಲ್ ಅವರನ್ನು ತಲುವುದು ತಡವಾಯಿತು. ಪರ್ಲ್ ಹಾರ್ಬರ್‌ನತ್ತ ಹೊರಟ ಜಪಾನ್ ಯುದ್ಧ ವಿಮಾನಗಳು ‘Tora, Tora, Tora’ ಎನ್ನುತ್ತಾ ಸಿಡಿಗುಂಡುಗಳನ್ನು ತೂರಿದವು. ಯುದ್ಧ ಘೋಷಿಸದೇ ದಾಳಿ ನಡೆಸಿದ್ದರಿಂದ, ‘ಮೋಸದ ದಾಳಿ’ ನಡೆಸಿದ ಅಪಖ್ಯಾತಿ ಜಪಾನ್ ಚಹರೆಗೆ ಅಂಟಿಕೊಂಡಿತು.

ಜಪಾನ್ 350 ವಿಮಾನಗಳ ಮೂಲಕ ತನ್ನ ಸಂಪೂರ್ಣ ಸಾಮರ್ಥ್ಯ ಬಳಸಿ ದಾಳಿ ಮಾಡಿದ್ದರಿಂದ ಅಮೆರಿಕದ 2,335 ಸೈನಿಕರು ಹತರಾದರು. ನೂರಾರು ನಾಗರಿಕರು ಮೃತಪಟ್ಟರು. 21 ಹಡಗುಗಳು, 8 ಯುದ್ಧನೌಕೆಗಳು ಜಲಸಮಾಧಿಯಾದವು. ನೌಕಾ ಮತ್ತು ವಾಯುದಳದ 188 ವಿಮಾನಗಳು ನಾಶವಾದವು. ಹವಾಯ್ ದ್ವೀಪ ಹೊತ್ತಿ ಉರಿಯಿತು. ಆರಿಜೋನಾ, ಕ್ಯಾಲಿಫೋರ್ನಿಯ, ನೆವಾಡದ ಕಡಲ ತಡಿಯಲ್ಲಿ ಉಬ್ಬರ ಉಂಟಾಯಿತು. ಇಡೀ ಅಮೆರಿಕವೇ ಅದುರಿ ಹೋಯಿತು. ಪಶ್ಚಿಮ ಕರಾವಳಿಯ ಮೇಲೂ ದಾಳಿ ಮಾಡಬಹುದೇ, ಚಿಕಾಗೊ ವಶಪಡಿಸಿಕೊಳ್ಳಬಹುದೇ ಎಂಬ ಆತಂಕ ಮೂಡಿತು.

ದಾಳಿಯ ಸುದ್ದಿ ಶ್ವೇತಭವನ ತಲುಪಿದಾಗ ರೂಸ್ವೆಲ್ಟ್ ಕಂಗಾಲಾದರು. ಫ್ರಾಂಕ್ಲಿನ್ ರೂಸ್ವೆಲ್ಟ್ ಅವರ ಪತ್ನಿ ಎಲೆನಾರ್ ರೂಸ್ವೆಲ್ಟ್ ಆ ಘಟನೆಯ ಕುರಿತು ಬರೆಯುತ್ತಾ ‘ವೈದ್ಯರು 1921ರಲ್ಲಿ, ‘ಪೋಲಿಯೊ ನಿಮ್ಮ ಕಾಲುಗಳ ಚೈತನ್ಯ ಕಸಿದಿದೆ. ನೀವಿನ್ನು ನಡೆಯಲಾರಿರಿ’ ಎಂದಾಗ ರೂಸ್ವೆಲ್ಟ್ ದಿಗ್ಭ್ರಾಂತರಾಗಿದ್ದರು. ಆನಂತರ ಅವರು ಕಳೆಗುಂದಿದ್ದು ಪರ್ಲ್ ಹಾರ್ಬರ್ ದಾಳಿಯ ಸುದ್ದಿ ತಿಳಿದಾಗ’ ಎಂಬುದನ್ನು ಉಲ್ಲೇಖಿಸಿದ್ದಾರೆ. ದಾಳಿಯ ಸುದ್ದಿ ತಿಳಿದೊಡನೆ, ಜಪಾನ್ ಏಕಾಂಗಿಯಾಗಿ ದಾಳಿ ಮಾಡಿತೇ ಅಥವಾ ತನ್ನ ಮಿತ್ರ ರಾಷ್ಟ್ರಗಳೊಟ್ಟಿಗೆ ಅಖಾಡಕ್ಕೆ ಧುಮುಕಿದೆಯೇ ಎಂಬ ಮಾಹಿತಿಗಾಗಿ ರೂಸ್ವೆಲ್ಟ್ ಕಾದರು. ಜಪಾನ್ ದಾಳಿ ನಡೆಸಿದ್ದರೂ ರೂಸ್ವೆಲ್ಟ್ ಗಮನವಿದ್ದದ್ದು ಜರ್ಮನಿಯೆಡೆಗೆ.

ಯುರೋಪನ್ನು ಜರ್ಮನಿಯಿಂದ ಬಿಡುಗಡೆಗೊಳಿಸಿ, ನಂತರವಷ್ಟೇ ಜಪಾನ್ ಮೇಲೆ ದಾಳಿ ನಡೆಸಬೇಕು ಎಂಬುದು ರೂಸ್ವೆಲ್ಟ್ ಅವರ ಪ್ರತಿದಾಳಿ ತಂತ್ರವಾಗಿತ್ತು. ಆದರೆ ಒಂದು ಸಂದಿಗ್ಧ ಎದುರಾಯಿತು. ಕೇವಲ ಜಪಾನ್ ತನ್ನ ಮೇಲೆರಗಿದ್ದರಿಂದ, ಅಮೆರಿಕ ಜರ್ಮನಿಯ ವಿರುದ್ಧ ಯುದ್ಧ ಘೋಷಿಸುವಂತಿರಲಿಲ್ಲ. ‘ದಾಳಿಯ ಹಿಂದೆ ಜರ್ಮನಿಯ ಬೆಂಬಲವಿದೆಯೇ ಪರಿಶೀಲಿಸಿ’ ಎಂದು ರೂಸ್ವೆಲ್ಟ್ ಪದೇಪದೇ ಅಧಿಕಾರಿಗಳನ್ನು ಕೇಳಿದರು. ದಾಳಿ ನಡೆಸಿದ ಪೈಕಿ, ಎರಡು ವಿಮಾನಗಳು ‘ಸ್ವಸ್ತಿಕ್’ ಮುದ್ರೆ ಹೊತ್ತು ಅಮೆರಿಕದ ಗಡಿ ಪ್ರವೇಶಿಸಿದ್ದವು. ರೂಸ್ವೆಲ್ಟ್ ಅವರಿಗೆ ಅಷ್ಟು ಪುರಾವೆ ಸಾಕಾಗಿತ್ತು.

ಅತ್ತ, ರಾತ್ರಿ ಭೋಜನ ಸೇವಿಸುತ್ತಾ ರೇಡಿಯೊ ಆಲಿಸುತ್ತಿದ್ದ ಬ್ರಿಟನ್ ಪ್ರಧಾನಿ ಚರ್ಚಿಲ್, ‘ಅಮೆರಿಕದ ಮೇಲೆ ಜಪಾನ್ ದಾಳಿ ಮಾಡಿದೆ’ ಎಂಬ ಸುದ್ದಿ ಕಿವಿಗೆ ಬಿದ್ದೊಡನೆ ಊಟದಿಂದ ಎದ್ದು, ‘ಇದೀಗಲೇ ಜರ್ಮನಿ ಮೇಲೆ ಯುದ್ಧ ಸಾರುತ್ತೇನೆ’ ಎಂದು ಓಡುತ್ತಾ ಕೆಳಗೆ ಬಂದಿದ್ದರು. ಆದರೆ ಅಧಿಕಾರಿಗಳು ‘ಕೇವಲ ರೇಡಿಯೊ ವಾರ್ತೆ ಕೇಳಿ ಯುದ್ಧ ಘೋಷಿಸಲು ಬರುವುದಿಲ್ಲ’ ಎಂದು ತಿಳಿ ಹೇಳಿದ್ದರು. ನಂತರ ಚರ್ಚಿಲ್, ರೂಸ್ವೆಲ್ಟ್ ಅವರಿಗೆ ಕರೆ ಮಾಡಿದರು. ‘We are all in the same boat now’ ಎಂಬ ಮಾತನ್ನು ಅವರು ಹೇಳಿದಾಗ ಚರ್ಚಿಲ್ ನಿರಾಳರಾದರು.

39ನೇ ವಯಸ್ಸಿನಲ್ಲಿ ಕಾಲು ನಿತ್ರಾಣವಾದರೂ, ರೂಸ್ವೆಲ್ಟ್ ದೈಹಿಕ ನ್ಯೂನತೆಯನ್ನು ಜನರೆದುರು ತೋರಿಸಿಕೊಂಡವರಲ್ಲ, ಅನುಕಂಪ ಗಿಟ್ಟಿಸಿಕೊಳ್ಳಲು ಬಳಸಿಕೊಂಡವರಲ್ಲ. ವಿಷಮ ಸನ್ನಿವೇಶಗಳಲ್ಲಿ ದಿಟ್ಟ ನಿರ್ಧಾರ, ಆತ್ಮವಿಶ್ವಾಸದ ಸಂಕಲ್ಪಗಳಿಂದಲೇ ಹೆಸರಾದವರು. ಯುದ್ಧ ಘೋಷಿಸಲು ಕಾಂಗ್ರೆಸ್ ಅನುಮತಿ ಪಡೆಯಲು ಮುಂದಾದರು. ಮಹತ್ವದ ಭಾಷಣವೊಂದನ್ನು ಮಾಡಿದರು.

‘Yesterday, December 7, 1941—a date which will live in infamy’ ಎಂದು ಆರಂಭಗೊಂಡ, 6.30 ನಿಮಿಷಗಳ ಭಾಷಣ ‘Infamy Speech’ ಎಂದು ಚರಿತ್ರೆಯಲ್ಲಿ ದಾಖಲಾಯಿತು. ಆದರೆ ದಾಳಿಯ ಬಳಿಕ ಜಪಾನ್ ಮೂಲದ ಜನರನ್ನು, ಕೊರಿಯಾ, ತೈವಾನ್, ಜರ್ಮನಿ, ಇಟಲಿ ಮೂಲದ ನಾಗರಿಕರನ್ನು ಸ್ಥಳಾಂತರಿಸಿ, ನಿರ್ಬಂಧಿತ ಪ್ರದೇಶದಲ್ಲಿ ಕಣ್ಗಾವಲಿನಲ್ಲಿ ಇಟ್ಟ ಕ್ರಮ ರೂಸ್ವೆಲ್ಟ್ ಅಧ್ಯಕ್ಷ ಅವಧಿಯ ಕಪ್ಪುಚುಕ್ಕೆಯಾಗಿ ಉಳಿಯಿತು.

ಒಟ್ಟಿನಲ್ಲಿ ಪರ್ಲ್ ಹಾರ್ಬರ್ ದಾಳಿ, ಅಮೆರಿಕ ಎರಡನೇ ವಿಶ್ವಯುದ್ಧಕ್ಕೆ ಧುಮುಕಲು ನೆಪವಾಯಿತು. ಹಿಟ್ಲರ್ ಪತನಕ್ಕೆ ಕಾರಣವಾಯಿತು. ಹಿರೋಶಿಮ, ನಾಗಸಾಕಿ ಬೂದಿಯಾಗುವ ತನಕ ಮುಂದುವರೆಯಿತು. ಬಹುಶಃ ಆಗ ಜಪಾನ್ ಸೇನಾಧಿಕಾರಿಗಳಿಗೆ, ‘ಅಮೆರಿಕದೊಂದಿಗೆ ಯುದ್ಧ ಬೇಡ’ ಎಂದಿದ್ದ ಯಮಮೋಟೊ ಮಾತು ನೆನಪಾಗಿರಬೇಕು. 1991ರಲ್ಲಿ ಪರ್ಲ್ ಹಾರ್ಬರ್ ಘಟನೆಗೆ 50 ವರ್ಷ ತುಂಬಿದಾಗ, ಜಪಾನ್ ವಿರುದ್ಧ ಯುದ್ಧದಲ್ಲಿ ಪಾಲ್ಗೊಂಡಿದ್ದ ಜಾರ್ಜ್ ಬುಷ್ ಸೀನಿಯರ್ ಅಮೆರಿಕದ ಅಧ್ಯಕ್ಷರಾಗಿದ್ದರು. ಅಂದು ಅವರು ಮಾತನಾಡುತ್ತಾ ‘ಪರ್ಲ್ ಹಾರ್ಬರ್ ಘಟನೆ, ಯುದ್ಧ ಎಂದಿಗೂ ನಮ್ಮ ಆಯ್ಕೆಯಾಗಬಾರದು ಎಂಬುದನ್ನು ನೆನಪಿಸುತ್ತದೆ’ ಎಂದಿದ್ದರು. ಆದರೆ ಅಮೆರಿಕ ಶಸ್ತ್ರತ್ಯಾಗವನ್ನೇನೂ ಮಾಡಲಿಲ್ಲ.

editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.