ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಖನ: ಮೋದಿ ನಾಯಕತ್ವದ ಪಯಣ

ಈ ಒಂಬತ್ತು ವರ್ಷಗಳ ಅವಧಿಯಲ್ಲಿ ಭಾರತವು ಆತ್ಮನಿರ್ಭರವಾಗಿದೆ
Published 5 ಜೂನ್ 2023, 0:49 IST
Last Updated 5 ಜೂನ್ 2023, 0:49 IST
ಅಕ್ಷರ ಗಾತ್ರ

ಅಮೆರಿಕದ ಅಧ್ಯಕ್ಷ ಜೋ ಬೈಡನ್, ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಆಲ್ಬನೀಸ್ ಮತ್ತು ಪಪುವಾ ನ್ಯೂ ಗಿನಿ ಪ್ರಧಾನಿ ಜೇಮ್ಸ್ ಮರಪೆ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಈಚೆಗೆ ಗೌರವಿಸಿದ ಬಗೆ ಹಾಗೂ ಮೋದಿ ಅವರಿಗೆ ಸಿಡ್ನಿ ಕ್ರೀಡಾಂಗಣದಲ್ಲಿದೊರೆತ ಭಾರಿ ಸ್ವಾಗತವು ಬಹಳ ಸೂಕ್ತವಾದ ಸಂದರ್ಭದಲ್ಲಿ ಬಂದೊದಗಿವೆ. ಮೋದಿ ಅವರು ಪ್ರಧಾನಿಯಾಗಿ ಈಗಷ್ಟೇ ಒಂಬತ್ತು ವರ್ಷ ಪೂರ್ಣಗೊಳಿಸಿದ್ದಾರೆ. ಅವರಿಗೆ ಸಿಕ್ಕಿರುವ ಪ್ರಶಂಸೆಯ ಮಾತುಗಳು, ರಾಷ್ಟ್ರನಾಯಕ ಆಗಿದ್ದ ಅವರು ವಿಶ್ವನಾಯಕ ಆಗಿ ಪರಿವರ್ತನೆ ಕಂಡಿದ್ದನ್ನು ಸೂಚಿಸುತ್ತಿವೆ.

ಹಿರೊಶಿಮಾದಲ್ಲಿ ನಡೆದ ಜಿ–7 ಗುಂಪಿನ ಸಭೆಯ ಸಂದರ್ಭದಲ್ಲಿ ಮೋದಿ ಮತ್ತು ಬೈಡನ್ ಭೇಟಿಯಾದರು. ಜೂನ್‌ನಲ್ಲಿ ಮೋದಿ ಅವರಿಗೆ ತಾವು ಆಯೋಜಿಸಿರುವ ವಿಶೇಷ ಔತಣಕೂಟದಲ್ಲಿ ಪಾಲ್ಗೊಳ್ಳಲು ಬಹಳ ಜನ ಬಯಕೆ ವ್ಯಕ್ತಪಡಿಸುತ್ತಿದ್ದಾರೆ, ಅವರನ್ನೆಲ್ಲ ಆಹ್ವಾನಿಸಲು ತಮ್ಮಿಂದ ಆಗುತ್ತಿಲ್ಲ ಎಂದು ಬೈಡನ್ ಹೇಳಿದರು. ಮೋದಿ ಅವರ ಜನಪ್ರಿಯತೆ ಎಷ್ಟಿದೆಯೆಂದರೆ, ತಮಗೆ ಮೋದಿ ಅವರ ಹಸ್ತಾಕ್ಷರ ಕೇಳಬೇಕು ಅನ್ನಿಸುತ್ತಿದೆ ಎಂದು ಕೂಡ ಬೈಡನ್ ಚಟಾಕಿ ಹಾರಿಸಿದರು. ಸಿಡ್ನಿ ಕ್ರೀಡಾಂಗಣದಲ್ಲಿ ಆಲ್ಬನೀಸ್ ಅವರೂ ಇದೇ ಬಗೆಯಲ್ಲಿ ಮಾತನಾಡಿದರು. ಅಮೆರಿಕದ ಗಾಯಕ ಬ್ರೂಸ್ ಸ್ಪ್ರಿಂಗ್‌ಸ್ಟೀನ್‌ ಅವರಿಗೂ ಸಿಡ್ನಿ ಕ್ರೀಡಾಂಗಣದಲ್ಲಿ ಮೋದಿ ಅವರಿಗೆ ಸಿಕ್ಕಂತಹ ಸ್ವಾಗತ ದೊರೆತಿರಲಿಲ್ಲ ಎಂದು ಆಲ್ಬನೀಸ್ ಹೇಳಿದರು. ಕ್ರೀಡಾಂಗಣದಲ್ಲಿ ಸೇರಿದ್ದ 20 ಸಾವಿರ ಜನರ ಎದುರು ಆಲ್ಬನೀಸ್ ಅವರು ಮೋದಿ ಅವರನ್ನು ‘ದಿ ಬಾಸ್’ ಎಂದು ಕರೆದರು. ಆಸ್ಟ್ರೇಲಿಯಾದ ಪ್ರಜಾತಂತ್ರ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಿದ್ದಕ್ಕೆ ಹಾಗೂ ಹೆಚ್ಚು ಒಳಗೊಳ್ಳುವ ವ್ಯವಸ್ಥೆಯನ್ನಾಗಿಸಿದ್ದಕ್ಕೆ ಅವರು ಮೋದಿ ಅವರಿಗೆ ಧನ್ಯವಾದ ಸಮರ್ಪಿಸಿದರು.

ಇವರಿಬ್ಬರ ಮಾತುಗಳಿಗಿಂತ ಹೆಚ್ಚು ಆಶ್ಚರ್ಯ ಉಂಟುಮಾಡಿದ್ದು ಮರಪೆ ಅವರ ನಡೆ. ಅವರು ಮೋದಿ ಅವರ ಕಾಲು ಮುಟ್ಟಿ ಗೌರವ ಸಮರ್ಪಿಸಿದರು. ಈ ನಡೆಯು ಭಾರತೀಯರನ್ನು ಬೆರಗಾಗಿಸಿತು. ಏಕೆಂದರೆ ಭಾರತದ ಪ್ರಧಾನಿಗೆ ಬೇರೆ ದೇಶಗಳ ನಾಯಕರು ಯಾವತ್ತೂ ಈ ರೀತಿಯಲ್ಲಿ ಗೌರವ ಸಮರ್ಪಿಸಿದ್ದನ್ನು ಕಂಡಿರಲಿಲ್ಲ. ಭಾರತದ ಹಿಂದಿನ ಯಾವ ಪ್ರಧಾನಿಯ ಬಗ್ಗೆಯೂ ಜಾಗತಿಕ ನಾಯಕರು ಈ ರೀತಿಯಲ್ಲಿ ಪ್ರಶಂಸೆಯ ಮಾತುಗಳನ್ನು ಆಡಿದ ನಿದರ್ಶನವಿಲ್ಲ. ಭಾರತದ ವಿದೇಶಾಂಗ ನೀತಿಗೆ ಸ್ಪಷ್ಟ ದಿಕ್ಕು ತೋರಿಸಿದ್ದಕ್ಕೆ ಹಾಗೂ ಜಾಗತಿಕ ವೇದಿಕೆಗಳಲ್ಲಿ ತಾವು ನಡೆದುಕೊಂಡ ಬಗೆಗೆ ಮೋದಿ ಅವರಿಗೆ ಶ್ರೇಯಸ್ಸು ಸಲ್ಲಬೇಕು.

ನ್ಯೂಯಾರ್ಕ್‌, ಟೆಕ್ಸಾಸ್‌, ಸಿಡ್ನಿ... ಹೀಗೆ ಬೇರೆ ದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರು ಹಾಗೂ ಭಾರತ ಮೂಲದವರು ಭಾರತದ ಯಾವ ಪ್ರಧಾನಿಯನ್ನೂ ಇಷ್ಟೊಂದು ಉತ್ಸಾಹದಿಂದ ಸ್ವಾಗತಿಸಿದ ಉದಾಹರಣೆ ಇಲ್ಲ. ಈಗ ಆಗುತ್ತಿರುವುದು ನಿಜಕ್ಕೂ ಅಭೂತಪೂರ್ವ.

ಆರು ವರ್ಷಗಳ ಹಿಂದೆ ಅಮೆರಿಕದ ಕಾಂಗ್ರೆಸ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲು ಹೋಗಿದ್ದಾಗ ಮೋದಿ ಅವರನ್ನು ಅಲ್ಲಿನ ಸದಸ್ಯರು ಎದ್ದು ನಿಂತು ಆರು ನಿಮಿಷಗಳ ಕಾಲ ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದರು.

ಮೋದಿ ಅವರಿಗೆ ಸಿಕ್ಕ ಗೌರವವನ್ನು ನೋಡಿಯೇ ನಂಬಬೇಕಿತ್ತು. ಇವೆಲ್ಲವುಗಳ ಅರ್ಥವೇನು? ಕಳೆದ ಒಂಬತ್ತು ವರ್ಷಗಳಲ್ಲಿ ಮೋದಿ ಅವರು ಜನಪ್ರಿಯತೆಯ ಏಣಿಯನ್ನು ನಿಧಾನವಾಗಿ ಹಾಗೂ ದೃಢವಾಗಿ ಏರಿದ್ದಾರೆ.

ಮೋದಿ ಅವರು ಭಾರತದ ವಿದೇಶಾಂಗ ನೀತಿಯನ್ನು ‘ಭಾರತಕ್ಕೆ ಹೆಚ್ಚು ಸೂಕ್ತವಾಗುವ’ ರೀತಿಯಲ್ಲಿ ಬದಲಾಯಿಸಿರುವುದು; ರಷ್ಯಾ ಮತ್ತು ಅಮೆರಿಕದ ಜೊತೆ ಭಾರತದ ಸಂಬಂಧವನ್ನು ತೂಗಿಸಿಕೊಂಡು ಹೋಗುತ್ತಿರುವುದು; ಚೀನಾವನ್ನು ಅವರು ನಿಭಾಯಿಸುತ್ತಿರುವ ಬಗೆ; ಇಂಡೊ–ಪೆಸಿಫಿಕ್ ಪ್ರದೇಶದಲ್ಲಿ ಭಾರತದ ಹಿತಾಸಕ್ತಿಯನ್ನು ಕಾಯುವ ಉದ್ದೇಶದಿಂದ ಕ್ವಾಡ್ ಒಕ್ಕೂಟಕ್ಕೆ ತೋರಿರುವ ಬದ್ಧತೆ, ದೇಶದ ಮಿಲಿಟರಿ ಶಕ್ತಿಯನ್ನು ಹೆಚ್ಚಿಸಲು ಆದ್ಯತೆ ಹಾಗೂ ರಕ್ಷಣಾ ಉಪಕರಣಗಳ ತಯಾರಿಕೆಯು ಭಾರತದಲ್ಲಿಯೇ ಆಗಬೇಕು ಎಂಬ ಗುರಿ... ಇವೆಲ್ಲ ನಿಜಕ್ಕೂ ಅಸಾಮಾನ್ಯ ಹಾಗೂ ಅಭೂತಪೂರ್ವ. ರಕ್ಷಣಾ ವಲಯದಲ್ಲಿ ‘ಭಾರತದಲ್ಲಿಯೇ ತಯಾರಿಸಿ’ ಕಾರ್ಯಕ್ರಮವು ಈ ಹಿಂದೆ ಇಷ್ಟೊಂದು ಆದ್ಯತೆಯನ್ನು ಪಡೆದಿರಲೇ ಇಲ್ಲ.

ಉಕ್ರೇನ್‌ ಬಿಕ್ಕಟ್ಟನ್ನು ಮೋದಿ ಅವರು ನಿಭಾಯಿಸಿದ ರೀತಿಯು ನಿಜಕ್ಕೂ ಗುರುತಿಸಬೇಕಾದಂಥದ್ದು. ಅಮೆರಿಕವು ರಷ್ಯಾ ವಿರುದ್ಧ ಆರ್ಥಿಕ ನಿರ್ಬಂಧಗಳನ್ನು ಹೇರುತ್ತಿದ್ದರೂ, ರಷ್ಯಾದ ಜೊತೆಗಿನ ಸ್ನೇಹವನ್ನು ಕಾಪಾಡಿಕೊಂಡು, ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಯು ಸ್ಥಿರವಾಗಿ ಇರುವಂತೆ ಮೋದಿ ನೋಡಿಕೊಂಡಿದ್ದಾರೆ. ಇದು ತಂತಿಯ ಮೇಲಿನ ನಡಿಗೆಯೇ ಸೈ. ಅಲ್ಲದೆ, ಮೋದಿ ಅವರು ಉಕ್ರೇನ್‌ಗೆ ಮಾನವೀಯ ನೆರವು ಒದಗಿಸುವ ವಿಚಾರದಲ್ಲಿ ಬದ್ಧತೆ ತೋರಿದ್ದಾರೆ. ನೆರವಿನ ಹಸ್ತಕ್ಕೆ ಪ್ರತಿಕ್ರಿಯೆ ನೀಡಿರುವ ಉಕ್ರೇನ್‌ನ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ.

ನೆಹರೂ ಚಿಂತನೆಗಳ ನೆಲೆಯಲ್ಲಿ ದಶಕಗಳಿಂದ ಬೆಳೆದುಬಂದಿರುವ ಭಾರತೀಯ ವಿದೇಶಾಂಗ ಸೇವೆಯಲ್ಲಿನ ಆಲೋಚನಾ ಕ್ರಮವನ್ನು ಕೂಡ ಮೋದಿ ಅವರು ಬದಲಾಯಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರ ಮಾತು ಹಾಗೂ ಅವರ ನಡೆಯಲ್ಲಿ ಈ ಹೊಸ ಆಲೋಚನಾ ಕ್ರಮವು ಸ್ಪಷ್ಟವಾಗಿ ಕಾಣಿಸುತ್ತಿದೆ. ಜೈಶಂಕರ್ ಅವರು ಪಾಕಿಸ್ತಾನ ಹಾಗೂ ಚೀನಾದ ಸ್ವೀಕಾರಾರ್ಹವಲ್ಲದ ನಡೆಗಳ ಬಗ್ಗೆ ಹಲವು ವೇದಿಕೆಗಳಲ್ಲಿ, ಹಲವು ಸಂದರ್ಭಗಳಲ್ಲಿ ಟೀಕೆ ವ್ಯಕ್ತಪಡಿಸಿದ್ದಾರೆ.

ಉದಾಹರಣೆಗೆ, ಅಂತರರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಸಮಾವೇಶದಲ್ಲಿ ಭಾರತವು ಮೊದಲ ಬಾರಿಗೆ ಹಿಂದೂಫೋಬಿಯಾ ಕುರಿತು ಪ್ರಸ್ತಾಪಿಸಿದೆ. ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂಪ್ರತಿನಿಧಿಯಾಗಿರುವ ಟಿ.ಎಸ್. ತಿರುಮೂರ್ತಿ ಅವರು ಈ ವಿಚಾರವಾಗಿ ಹಲವು ದೇಶಗಳು ಇರಿಸಿರುವ ಹೆಜ್ಜೆಯನ್ನು ಪ್ರಶ್ನಿಸಿದ್ದಾರೆ. ಭಾರತವು ಇಷ್ಟು ಬಲಿಷ್ಠವಾಗಿ ತನ್ನ ವಿದೇಶಾಂಗ ಮತ್ತು ರಕ್ಷಣಾ ನೀತಿಗಳನ್ನು ಅಳವಡಿಸಿಕೊಂಡಿರಲಿಲ್ಲ. ಅಲ್ಲದೆ, ಇಷ್ಟು ಸ್ಪಷ್ಟವಾಗಿ ವಿಶ್ವ ಸಮುದಾಯಕ್ಕೆ ಸಂದೇಶವೊಂದನ್ನು ರವಾನಿಸಿರಲಿಲ್ಲ.

ಆದರೆ ಮೋದಿ ಅವರನ್ನು ವಿರೋಧಿಸುವವರ ಮನಃಸ್ಥಿತಿ ಅದೆಷ್ಟು ಕೆಟ್ಟದ್ದಾಗಿ ಇದೆಯೆಂದರೆ, ವಿದೇಶಾಂಗ ವ್ಯವಹಾರಗಳ ಮಾಜಿ ಸಚಿವ ಯಶವಂತ ಸಿನ್ಹಾ ಅವರು ತಾವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಪುವಾ ನ್ಯೂ ಗಿನಿಯಿಂದ ಬಿಜೆಪಿ ಟಿಕೆಟ್ ಕೇಳುವುದಾಗಿ ವ್ಯಂಗ್ಯವಾಡಿದ್ದಾರೆ. ಮೋದಿ ಅವರು ಪ್ರಧಾನಿಯಾದ ಹೊತ್ತಿನಿಂದ ವಿರೋಧ ಪಕ್ಷಗಳ ಟೀಕೆಗಳಲ್ಲಿ ನಕಾರಾತ್ಮಕತೆ ತುಂಬಿಕೊಂಡಿದೆ. 2014ರಲ್ಲಿ ಮೋದಿ ಅವರು ಮ್ಯಾನ್ಮಾರ್‌ಗೆ ಭೇಟಿ ನೀಡಿ, ಅಲ್ಲಿ 20 ಸಾವಿರ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದಾಗ ವಿರೋಧ ಪಕ್ಷದ ನಾಯಕರೊಬ್ಬರು, ‘ಮೋದಿ ಅವರು ಚಪ್ಪಾಳೆ ತಟ್ಟಲು ಭಾರತದಿಂದ ಜನರನ್ನು ಕರೆದೊಯ್ದಿದ್ದಾರೆ’ ಎಂದು ಹೇಳಿದ್ದರು. ಕೈಗೆಟುಕದ ದ್ರಾಕ್ಷಿ ಹುಳಿ ಎಂಬುದು ನಮಗೆಲ್ಲರಿಗೂ ಗೊತ್ತಿದೆ.

ಮೋದಿ ಅವರ ಅವಧಿಯಲ್ಲಿನ ಭಾರತವು ಆತ್ಮನಿರ್ಭರವಾಗಿದೆ. ಅದು ತನ್ನ ಅನಿಸಿಕೆಗಳನ್ನು ಮುಕ್ತವಾಗಿ ಹೇಳುತ್ತದೆ. ಉತ್ತರವನ್ನು ಬಯಸುತ್ತದೆ. ಈಗಿನ ಭಾರತವು ಇಬ್ಬಂದಿತನವನ್ನು ಸಹಿಸುವುದಿಲ್ಲ. ಇದು ಒಂದು ಬಗೆಯಲ್ಲಿ ವಿಶ್ವದ ಹೊಸ ವ್ಯವಸ್ಥೆಗೆ ಮೋದಿ ಅವರ ಕೊಡುಗೆ. ಅಂದರೆ ಇಲ್ಲಿ ಕೆಟ್ಟದ್ದನ್ನು ಕೆಟ್ಟದ್ದು ಎಂದೇ ಹೇಳಲಾಗುತ್ತದೆ, ಇಲ್ಲಿ ಇಬ್ಬಗೆಯ ಮಾತುಗಳಿಗೆ ಅವಕಾಶ ಇಲ್ಲ. ಹಿಂದೆ ಎತ್ತದಿದ್ದ ಪ್ರಶ್ನೆಗಳನ್ನು ಈಗ ಎತ್ತಲಾಗುತ್ತದೆ. ಇದು ನರೇಂದ್ರ ಮೋದಿ ಅವರ ‘ನವ ಭಾರತ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT