ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಭೂತ ಕರ್ತವ್ಯ: ಬೇಕು ಜಾಗೃತಿ

‘ನಮ್ಮ ಜವಾಬ್ದಾರಿ ನಿರ್ವಹಿಸದೆಯೇ ಹಕ್ಕುಗಳನ್ನು ಉಳಿಸಿಕೊಳ್ಳಲು ಆಗದು’
Last Updated 3 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ದೇಶವು ನವೆಂಬರ್ 26ರಂದು ‘ಸಂವಿಧಾನ ದಿನ’ ಆಚರಿಸಿತು. ಸಂವಿಧಾನದಲ್ಲಿರುವ ‘ಮೂಲಭೂತ ಕರ್ತವ್ಯ’ಗಳಿಗೆ ಸಂಬಂಧಿಸಿದ ಅಧ್ಯಾಯದತ್ತ ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಅವರು ಜನರ ಗಮನ ಸೆಳೆದರು.

ಮಹಾತ್ಮ ಗಾಂಧಿ ಅವರನ್ನು ಉಲ್ಲೇಖಿಸಿ ಕೋವಿಂದ್, ‘ಹಕ್ಕುಗಳ ನಿಜವಾದ ಮೂಲ ಇರುವುದು ಕರ್ತವ್ಯಗಳಲ್ಲಿ. ನಾವೆಲ್ಲರೂ ಕರ್ತವ್ಯಗಳನ್ನು ನಿಭಾಯಿಸಿದರೆ ಹಕ್ಕುಗಳು ದೂರವಾಗುವುದಿಲ್ಲ. ಕರ್ತವ್ಯಗಳನ್ನು ನಿಭಾಯಿಸದೆ ಹಕ್ಕುಗಳ ಹಿಂದೆ ಓಡಿದರೆ ಅವು ಕೈಗೆ ಸಿಗುವುದಿಲ್ಲ’ ಎಂದರು. ಮೂಲಭೂತ ಕರ್ತವ್ಯಗಳು ಜನರಿಗೆ ಅವರ ನೈತಿಕ ಹೊಣೆಗಾರಿಕೆಗಳನ್ನು ನೆನಪಿಸಿಕೊಡುತ್ತವೆ. ‘ಸಂವಿಧಾನದ ಆತ್ಮವು ಅದರ ಪೀಠಿಕೆ, ಮೂಲಭೂತ ಹಕ್ಕುಗಳು, ಮೂಲಭೂತ ಕರ್ತವ್ಯಗಳು ಹಾಗೂ ನಿರ್ದೇಶನಾ ತತ್ವಗಳಲ್ಲಿದೆ ಎನ್ನಬಹುದು’ ಎಂದೂ ಕೋವಿಂದ್ ಹೇಳಿದರು.

ಮೂಲಭೂತ ಹಕ್ಕುಗಳ ಉಲ್ಲೇಖ ಇರುವ ಸಂವಿಧಾನದ ಮೂರನೆಯ ಭಾಗದ ಬಗ್ಗೆ ಕಳೆದ ಏಳು ದಶಕಗಳಲ್ಲಿ ಬಹಳಷ್ಟು ಗಮನ ನೀಡಲಾಗಿದೆ. ಅದು ಸರಿ ಕೂಡ. ನಮ್ಮ ಪ್ರಜಾತಂತ್ರ ನಿಂತಿರುವ ನೆಲೆಗಟ್ಟನ್ನು ಈ ಭಾಗವು ರೂಪಿಸಿಕೊಟ್ಟಿದೆ. ಜೀವಿಸುವ ಹಕ್ಕು, ಸಮಾನತೆಯ ಹಕ್ಕು, ಮುಕ್ತ ಅಭಿವ್ಯಕ್ತಿಯಂತಹ ಅಮೂಲ್ಯ ಹಕ್ಕು, ದೇಶದೆಲ್ಲೆಡೆ ಮುಕ್ತವಾಗಿ ಸಂಚರಿಸುವ ಹಕ್ಕು... ಹೀಗೆ ಈ ಭಾಗದಲ್ಲಿ ಬರುವ ಹಲವು ವಿಧಿಗಳು ನಮ್ಮ ಪ್ರಜಾತಂತ್ರದ ಆತ್ಮ ಮತ್ತು ತಿರುಳಿನಂತೆ. ಪ್ರಜಾತಂತ್ರ ರಾಷ್ಟ್ರ ನಿಂತುಕೊಂಡಿರುವ ಆಧಾರ ಶಿಲೆ ಇವು. ಈ ಎಲ್ಲ ಹಕ್ಕುಗಳ ರಕ್ಷಕನಂತೆ ನಿಂತಿರುವುದು ಸುಪ್ರೀಂ ಕೋರ್ಟ್‌.

ಇವೆಲ್ಲವೂ ಚೆನ್ನ. ಆದರೆ, ಸಂವಿಧಾನದ 51(ಎ) ವಿಧಿಯಲ್ಲಿ ಇರುವ ಮೂಲಭೂತ ಕರ್ತವ್ಯಗಳ ಬಗ್ಗೆ ಗಮನ ನೀಡಬೇಕಾದ ಕಾಲ ಬಂದಿದೆ. ಈ ವಿಧಿಯನ್ನು ಸಂವಿಧಾನಕ್ಕೆ ಸೇರಿಸಿದ್ದು 1976ರಲ್ಲಿ 42ನೆಯ ತಿದ್ದುಪಡಿಯ ಮೂಲಕ. ಅಂದರೆ ಕರಾಳ ತುರ್ತುಪರಿಸ್ಥಿತಿ ಇದ್ದ ಅವಧಿಯಲ್ಲಿ. ಇದೊಂದು ಒಳ್ಳೆಯ ತಿದ್ದುಪಡಿ ಆಗಿತ್ತು. ಹಾಗಾಗಿ ಇದನ್ನು ಉಳಿಸಿಕೊಳ್ಳಲಾಯಿತು.

ಪ್ರಜೆಗಳು ಸಂವಿಧಾನಕ್ಕೆ ಬದ್ಧರಾಗಿರಬೇಕು, ಅದರ ಮೌಲ್ಯಗಳನ್ನು ಮತ್ತು ಸಂಸ್ಥೆಗಳನ್ನು ಗೌರವಿಸಬೇಕು; ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗೆ ಗೌರವ ಸೂಚಿಸಬೇಕು; ಸ್ವಾತಂತ್ರ್ಯ ಹೋರಾಟದ ಉದಾತ್ತ ಆದರ್ಶಗಳನ್ನು ಅನುಸರಿಸಬೇಕು; ಧರ್ಮ, ಪ್ರದೇಶದಂತಹ ಗಡಿಗಳನ್ನು ಮೀರಿ ದೇಶವಾಸಿಗಳ ನಡುವೆ ಸೋದರತ್ವ ಹಾಗೂ ಸೌಹಾರ್ದ ಭಾವವನ್ನು ಬೆಳೆಸಬೇಕು; ಮಹಿಳೆಯರ ಘನತೆಗೆ ಕುಂದು ತರುವಂತಹ ಆಚರಣೆಗಳನ್ನು ತಿರಸ್ಕರಿಸಬೇಕು; ನಮ್ಮ ಬಹುಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಕಾಪಾಡಬೇಕು; ಅರಣ್ಯ, ನದಿ, ವನ್ಯಜೀವಿಗಳನ್ನು ರಕ್ಷಿಸಬೇಕು; ವೈಜ್ಞಾನಿಕ ಮನೋಭಾವ, ಮಾನವೀಯತೆ, ಸುಧಾರಣೆಯ ಧೋರಣೆ ಹಾಗೂ ಪ್ರಶ್ನಿಸುವ ಧೋರಣೆ ಬೆಳೆಸಿಕೊಳ್ಳಬೇಕು; ಹಿಂಸೆಯನ್ನು ತ್ಯಜಿಸಬೇಕು ಹಾಗೂ ಸಾರ್ವಜನಿಕ ಆಸ್ತಿಯನ್ನು ರಕ್ಷಿಸಬೇಕು... ಎಂಬೆಲ್ಲ ಮಾತುಗಳು ಇದರಲ್ಲಿ ಇವೆ.

ಮೂಲಭೂತ ಹಕ್ಕುಗಳು ನಮ್ಮ ಪ್ರಜಾತಂತ್ರವನ್ನು ಬಲಗೊಳಿಸುತ್ತವೆ. ಮೂಲಭೂತ ಕರ್ತವ್ಯಗಳು ನಮ್ಮ ಸಮಾಜವನ್ನು ಬಲಿಷ್ಠವಾಗಿಸುತ್ತವೆ ಎಂದು ಈ ಪಟ್ಟಿಯನ್ನು ನೋಡಿ ಹೇಳಬಹುದು. ಈ ಕರ್ತವ್ಯಗಳಿಗೆ ಬದ್ಧರಾಗಿ ನಡೆದುಕೊಂಡರೆ ನಮ್ಮಲ್ಲಿ ಸೋದರತ್ವ ಬೆಳೆಯುತ್ತದೆ, ದೇಶದ ಏಕತೆ ಗಟ್ಟಿಯಾಗುತ್ತದೆ, ಜನರ ಜೀವನಮಟ್ಟ ಸುಧಾರಿಸುತ್ತದೆ. ನಮ್ಮದು ವಿಶ್ವದ ಬಹುದೊಡ್ಡ ಪ್ರಜಾತಂತ್ರ ಮಾತ್ರವೇ ಅಲ್ಲ; ವಿಶ್ವದ ಅತ್ಯಂತ ವೈವಿಧ್ಯಮಯ ಪ್ರಜಾತಂತ್ರವೂ ಹೌದು. ಹಾಗಾಗಿ ಮೂಲಭೂತ ಹಕ್ಕುಗಳನ್ನು ನಾವು ಕಡ್ಡಾಯವಾಗಿ ತಿಳಿದುಕೊಂಡಿರಬೇಕು.

ಮೂಲಭೂತ ಹಕ್ಕುಗಳ ಬಗೆಗಿನ ಪಾಠವನ್ನು ಪಠ್ಯದಲ್ಲಿ ಸೂಕ್ತ ಹಂತದಲ್ಲಿ ಸೇರಿಸಬೇಕು, ಈ ಕರ್ತವ್ಯಗಳ ಪಟ್ಟಿಯನ್ನು ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ, ಕಚೇರಿಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಬೇಕು ಎಂದು ವೆಂಕಯ್ಯ ನಾಯ್ಡು ಅವರು ನೀಡಿರುವ ಸಲಹೆ ಈ ಕಾರಣದಿಂದಾಗಿ ಗಮನಾರ್ಹವಾಗುತ್ತದೆ.

ನವೆಂಬರ್ 26ನ್ನು ‘ಸಂವಿಧಾನ ದಿನ’ ಎಂದು ಘೋಷಿಸುವ ತೀರ್ಮಾನವನ್ನು ನಾಲ್ಕು ವರ್ಷಗಳ ಹಿಂದೆ ತೆಗೆದುಕೊಂಡ ಪ್ರಧಾನಿ ಮೋದಿ ಅವರು, ಸಂವಿಧಾನದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡುವಂತೆ ಮಾಡಿದ್ದಾರೆ. ಮೂಲಭೂತ ಕರ್ತವ್ಯಗಳ ಬಗ್ಗೆ ಎಲ್ಲರ ಗಮನ ಹರಿಯುವಂತೆ ಮಾಡಿ ಅವರು ಈ ಅಭಿಯಾನಕ್ಕೆ ಹೆಚ್ಚಿನ ಶಕ್ತಿ ನೀಡಿದ್ದಾರೆ. ಏಳು ದಶಕಗಳ ಅವಧಿಯಲ್ಲಿ ಮೂಲಭೂತ ಹಕ್ಕುಗಳ ಬಗ್ಗೆ ದೊಡ್ಡ ಮಟ್ಟದ ಆದ್ಯತೆ ನೀಡಲಾಗಿದೆ. ಈಗ ಮೂಲಭೂತ ಕರ್ತವ್ಯಗಳ ಬಗ್ಗೆಯೂ ಗಮನ ನೀಡುವ ಸಂದರ್ಭ ಬಂದಿದೆ ಎಂದು ಮೋದಿ ಅವರು ತಮ್ಮ ಭಾಷಣದಲ್ಲಿ ಹೇಳಿದರು. ‘ನಾವು ನಮ್ಮ ಜವಾಬ್ದಾರಿಯನ್ನು ನಿರ್ವಹಿಸದೆಯೇ ನಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಲು ಆಗುವುದಿಲ್ಲ’ ಎನ್ನುವುದು ಅವರ ಅಭಿಪ್ರಾಯ.

ಮೂಲಭೂತ ಕರ್ತವ್ಯಗಳ ಬಗ್ಗೆ ತಮ್ಮ ಸಂವಿಧಾನದಲ್ಲಿ ವಿಸ್ತೃತ ಉಲ್ಲೇಖವನ್ನು ಹೊಂದಿರುವ ದೇಶಗಳು ಕೆಲವು ಮಾತ್ರ. ಆದರೆ, ದೇಶದ ರಕ್ಷಣೆ ಒಂದು ರಾಷ್ಟ್ರೀಯ ಕರ್ತವ್ಯ ಎಂದು ಹಲವು ದೇಶಗಳು ಹೇಳುತ್ತವೆ. ಉದಾಹರಣೆಗೆ, ದೇಶದ ಪ್ರತೀ ಪ್ರಜೆಯೂ ದೇಶದ ರಕ್ಷಣೆಯ ಕರ್ತವ್ಯದಲ್ಲಿ ಸಮಾನ ಹೊಣೆ ಹೊಂದಿದ್ದಾನೆ ಎನ್ನುತ್ತದೆ ನಾರ್ವೆ ದೇಶದ ಸಂವಿಧಾನದ 109ನೇ ವಿಧಿ. ಈ ತತ್ವದ ಅನುಷ್ಠಾನ ಹಾಗೂ ಇದರ ಮೇಲಿನ ಮಿತಿಗಳನ್ನು ಕಾನೂನಿನ ಮೂಲಕ ನಿಗದಿ ಮಾಡಿಕೊಳ್ಳಬಹುದು ಎಂದು ಹೇಳಲಾಗಿದೆ.

ಡೆನ್ಮಾರ್ಕ್‌ ದೇಶದ ಸಂವಿಧಾನದ 81ನೇ ವಿಧಿಯ ಅನ್ವಯ, ‘ಶಸ್ತ್ರಾಸ್ತ್ರಗಳನ್ನು ಹಿಡಿಯಬಲ್ಲ ಪ್ರತೀ ಪುರುಷನೂ, ಕಾನೂನು ಹೇಳುವ ನಿಯಮಗಳಿಗೆ ಅನುಸಾರವಾಗಿ ದೇಶದ ರಕ್ಷಣೆಗೆ ಕೊಡುಗೆ ನೀಡಬೇಕು’ ಎಂದು ಹೇಳುತ್ತದೆ. ಫ್ರೆಂಚ್ ಗಣರಾಜ್ಯದ ನೆಲೆಗಟ್ಟು ಇರುವುದು ಮನುಷ್ಯನ ಹಕ್ಕುಗಳು ಹಾಗೂ ಕರ್ತವ್ಯಗಳ ಮೇಲೆ. ಸಮಾಜದ ಎಲ್ಲರೂ ತಮ್ಮ ಕರ್ತವ್ಯಗಳು ಏನು ಎಂಬುದನ್ನು ತಿಳಿದುಕೊಳ್ಳಬೇಕು, ಅವುಗಳನ್ನು ನಿರ್ವಹಿಸಬೇಕು ಎಂಬುದು ಅಲ್ಲಿನ ತತ್ವ.

ನಮ್ಮ ಸಂವಿಧಾನದ 51(ಎ) ವಿಧಿಯ ಆಶಯಗಳನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳುವ ಕೆಲಸವನ್ನು ಸುಪ್ರೀಂ ಕೋರ್ಟ್‌ ಮಾಡಿದೆ. ಉದಾಹರಣೆಗೆ; ನಾಗರಿಕರಿಗೆ ಅನ್ವಯವಾಗುವ ಮೂಲಭೂತ ಕರ್ತವ್ಯಗಳು ಪ್ರಭುತ್ವಕ್ಕೂ ಅನ್ವಯ ಆಗುತ್ತವೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. 51(ಎ)(ಜಿ) ಅನ್ವಯ, ಪರಿಸರ ಸಂರಕ್ಷಣೆ ಬಗ್ಗೆ ದೇಶದ ಎಲ್ಲ ಶಿಕ್ಷಣ ಸಂಸ್ಥೆಗಳು ವಾರಕ್ಕೆ ಕನಿಷ್ಠ ಒಂದು ಗಂಟೆ ಅವಧಿ ಪಾಠ ಮಾಡುವ ವ್ಯವಸ್ಥೆ ಕಲ್ಪಿಸುವುದು ಕೇಂದ್ರ ಸರ್ಕಾರದ ಕರ್ತವ್ಯ ಎಂದು ಕೋರ್ಟ್‌ ಹೇಳಿದೆ.

‘ಅತ್ಯುತ್ಕೃಷ್ಟ ಮಟ್ಟ ತಲುಪಲು ಯತ್ನಿಸುವುದು’ ಎಂದು ಮೂಲಭೂತ ಕರ್ತವ್ಯಗಳಲ್ಲಿ ಹೇಳಿರುವುದನ್ನು ಇನ್ನೊಂದು ಪ್ರಕರಣದಲ್ಲಿ ಉಲ್ಲೇಖಿಸಿರುವ ಕೋರ್ಟ್‌, ‘ಅತ್ಯುತ್ಕೃಷ್ಟವಾಗುವುದು ಅಂದರೆ ಪ್ರತಿಭೆ, ಪ್ರಾಮಾಣಿಕ ಕಾರ್ಯ... ಇವೆಲ್ಲವನ್ನೂ ಮೀರುವುದು’ ಎಂದು ಅರ್ಥ ಎಂದಿದೆ. ‘ಈ ಮಹಾನ್‌ ರಾಷ್ಟ್ರದ ನಾಗರಿಕರು ತಮ್ಮ ಕರ್ತವ್ಯಗಳನ್ನು ಅರೆಮನಸ್ಸಿನಿಂದ ಮಾಡುವ ಬದಲು, ಅವುಗಳನ್ನು ಅತ್ಯುತ್ಕೃಷ್ಟ ಎಂಬ ರೀತಿಯಲ್ಲಿ ಮಾಡಲಿ ಎಂದು ಸಂವಿಧಾನದ ನಿರ್ಮಾತೃಗಳು ಬಯಸಿದ್ದರು’ ಎಂದು ಕೋರ್ಟ್‌ ಹೇಳಿದೆ. ಮೂಲಭೂತ ಕರ್ತವ್ಯಗಳನ್ನು ನಿರ್ವಹಿಸುವುದು ಕೂಡ ಸಾಂವಿಧಾನಿಕ ಕಾನೂನಿನ ಅಡಿಯಲ್ಲೇ ಬರುತ್ತದೆ.

ಬಹುಕಾಲದಿಂದ ಆದ್ಯತೆ ಪಡೆದಿರದ ವಿಧಿಯೊಂದರ ಮೇಲೆ ಬೆಳಕು ಹರಿಸುವ ಸಮಯ ಈಗ ಬಂದಿದೆ. ಆ ಮೂಲಕ ನಾಗರಿಕರು ಕರ್ತವ್ಯ ಹಾಗೂ ಹಕ್ಕುಗಳ ನಡುವೆ ಸಮತೋಲನ ಸಾಧಿಸಲು ಆಗುತ್ತದೆ.

ಲೇಖಕ: ಪ್ರಸಾರ ಭಾರತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT